ಜೊತೆಗಿರಲಿ ಜಪಾನ್ ಮತ್ತು ರಶಿಯಾ, ಬೇಡ ಇನ್ನುಳಿದವರ ವಿಷಯ
ಭಾರತದ ಮೂರು ಪ್ರಮುಖ ಮಿತ್ರ ರಾಷ್ಟ್ರಗಳ ಪಟ್ಟಿಯನ್ನು ನೀವು ತಯಾರಿಸಿದರೆ, ನಿಸ್ಸಂಶಯವಾಗಿಯೂ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಅಥವಾ ಜರ್ಮನಿ ಆ ಪಟ್ಟಿಯಲ್ಲಿ ಸ್ಥಾನ ಪಡೆಯುವುದಿಲ್ಲ. ಅದಾಗ್ಯೂ ಈ ಎಲ್ಲಾ ರಾಷ್ಟ್ರಗಳೂ ಭಾರತದೊಂದಿಗೆ ಈಗ ಉತ್ತಮ ಸಂಬಂಧ ಹೊಂದಿವೆ ಎನ್ನುವುದೂ ನಿಜವೇ.
ನೀವು ಇದೇ ಪ್ರಶ್ನೆಯನ್ನು ನನಗೆ ಕೇಳಿದರೆ, ನಾನು ಕೇವಲ ಎರಡು ರಾಷ್ಟ್ರಗಳ ಹೆಸರನ್ನು ಮಾತ್ರ ಹೇಳಬಲ್ಲೆ; ಕೇವಲ ಎರಡೇ ರಾಷ್ಟ್ರಗಳ ಹೆಸರನ್ನು...ಜಪಾನ್ ಮತ್ತು ರಷ್ಯ! ಇವೆರಡೂ ರಾಷ್ಟ್ರಗಳು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರೆ ಮೂರನೇ ಸ್ಥಾನಕ್ಕಾಗಿ ಬಹುಶಃ ಅಮೆರಿಕ ಅಥವಾ ಇಸ್ರೇಲ್ ಸೆಣಸಬಹುದೇನೋ? ಆದರೆ ಈ ರಾಷ್ಟ್ರಗಳಿಗೆ ಭಾರತದೊಂದಿಗೆ ತಾಳೆಯಾಗದಂತಹ ಅವುಗಳದ್ದೇ ಆದ ಅಜೆಂಡಾಗಳಿವೆ. ಪ್ಯಾಲಸ್ತೀನ್, ಸಿರಿಯಾ ಮತ್ತು ಇರಾನ್ನ ಬಗ್ಗೆ ಇಸ್ರೇಲ್ ತಲೆಕೆಡಿಸಿಕೊಂಡಿದ್ದರೆ, ಅಮೆರಿಕಕ್ಕೆ ಚೀನಾ, ಪಾಕಿಸ್ತಾನವಷ್ಟೇ ಅಲ್ಲದೆ ಇನ್ನೂ ಅನೇಕ ವಿದ್ಯಮಾನಗಳತ್ತ ಚಿತ್ತವಿದೆ.
ನನ್ನ ಪಟ್ಟಿಯಲ್ಲಿ ಅಮೆರಿಕ ಭಾರತದ ಪ್ರಮುಖ ಮಿತ್ರರಾಷ್ಟ್ರಗಳಲ್ಲಿ ಮೂರನೆಯ ಸ್ಥಾನ ಪಡೆಯುತ್ತದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಅಮೆರಿಕ ಪ್ರಪಂಚದ ಏಕೈಕ ಸೂಪರ್ಪವರ್ ಆಗಿದ್ದು ಮುಂದಿನ ಕೆಲವು ದಶಕಗಳವರೆಗೆ ಅದಕ್ಕೆ ಸವಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲವಲ್ಲ, ಅದಕ್ಕೆ! ಆದರೆ ಅಮೆರಿಕದೊಂದಿಗಿನ ಸ್ನೇಹ, ಸ್ಪೂನ್ನಲ್ಲಿ ನಿಂಬೆ ಹಣ್ಣಿಟ್ಟುಕೊಂಡು ಓಡುವ ಆಟದಂತೆ. ಈ ಆಟವನ್ನು ಪ್ರೇಕ್ಷಕರು ಖುರ್ಚಿ ತುದಿಯಲ್ಲಿ ಕುಳಿತು ಕಾತರದಿಂದ ನೋಡುತ್ತಾರೆ, ಅಲ್ಲದೆ ಫಲಿತಾಂಶದ ಬಗ್ಗೆಯೂ ನಿಶ್ಚಿತವಾಗಿ ಹೇಳಲು ಬರುವುದಿಲ್ಲ.
ಆದರೆ ಒಂದಂತೂ ಸತ್ಯ. ಅಮೆರಿಕದೊಂದಿಗಿನ ಸಂಬಂಧದಲ್ಲಿ ಅಪಾಯವೊಂದಿದೆ. ಯಾವಾಗ ನಾವು ಅದರ ಗೌರವಯುತ ಜೊತೆಗಾರರಾಗಿರುತ್ತೇವೋ, ಯಾವಾಗ ಅದು ನಮ್ಮನ್ನು 'ಹೊರೆ' ರಾಷ್ಟ್ರದಂತೆ ನೋಡುತ್ತದೋ ಒಂದೂ ತಿಳಿಯುವುದಿಲ್ಲ. ಅಮೆರಿಕ-ಪಾಕಿಸ್ತಾನದ ಸ್ನೇಹ ಇದಕ್ಕೊಂದು ಉತ್ತಮ ಉದಾಹರಣೆಯಾಗಬಲ್ಲದು. ಅಮೆರಿಕದ ಒಳ್ಳೆಯ ತನದ ಬಗ್ಗೆ ಮಾತನಾಡುವ ನಾವು ಇವೆರಡರ ಬಾಂಧವ್ಯವನ್ನು ನೋಡಿ ಪಾಠ ಕಲಿಯಬೇಕಿದೆ.
ತಮ್ಮ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಬಂದಾಗ ಅಮೆರಿಕನ್ನರು ಅತ್ಯಂತ ತ್ವರಿತವಾಗಿ ಗೆಳೆಯರನ್ನು ಸಂಪಾದಿಸುತ್ತಾ ಹೋಗುತ್ತಾರೆ. ಇನ್ನು ಅದೇ ವಿಷಯಕ್ಕಾಗಿಯೇ ಅವರು ಗೆಳತನವನ್ನೂ ಅಷ್ಟೇ ವೇಗದಲ್ಲಿ ಕಡಿದುಕೊಳ್ಳಬಲ್ಲರು.
ಉಳಿದ ಪಾಶ್ಚಿಮಾತ್ಯ ರಾಷ್ಟ್ರಗಳಂತಲ್ಲ ಅಮೆರಿಕ. ಬಿಸಿನಸ್ ಒಂದೇ ಅದರ ಏಕೈಕ ಮಂತ್ರ. ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಅದು ಪಾಕಿಸ್ತಾನಕ್ಕೆ ಮತ್ತು ಭಾರತಕ್ಕೆ ಒಂದೇ ಬಾರಿಗೆ ಪೂರೈಕೆ ಮಾಡುವುದನ್ನು ನೋಡಿದಾಗ ಈ ಮಾತಿನಲ್ಲಿ ಎಷ್ಟು ಹುರುಳಿದೆ ಎನ್ನುವುದು ತಿಳಿಯುತ್ತದೆ.
ಇಸ್ರೇಲ್ ಭಾರತದೊಂದಿಗೆ ಅತ್ಯಂತ ಸ್ಥಿರ ಮತ್ತು ಶಾಂತಿಯುತ ಸಂಬಂಧ ಹೊಂದಿದೆಯಾದರೂ ಈ ಚಿಕ್ಕ, ಆದರೆ ಬಲಿಷ್ಠ ರಾಷ್ಟ್ರ ಭಾರತದ ಪಾಲಿಗೆ ಕೆಂಡದಂತೆ. ಇರಾನ್, ಸಿರಿಯಾ, ಸೌದಿ ಅರೇಬಿಯಾ ಮತ್ತು ಲೆಬೆನಾನ್ನಂತಹ ದೇಶಗಳ ವೈರಿ ರಾಷ್ಟ್ರವಾದ ಈ ಕೆಂಡವನ್ನು ಕೈಯಲ್ಲಿ ಹಿಡಿದುಕೊಳ್ಳುವುದು ನಮ್ಮ ದೇಶದ ಯಾವುದೇ ಆಡಳಿತ ಪಕ್ಷಗಳಿಗೆ ಸುಲಭಸಾಧ್ಯವಲ್ಲ.
ನೆರೆಯ ರಾಷ್ಟ್ರಗಳ ಜೊತೆಗಿದ್ದಂತೆ ಜಪಾನ್ ಮತ್ತು ರಷ್ಯಾಗಳೊಂದಿಗೆ ಭಾರತಕ್ಕೆ ಯಾವುದೇ ರೀತಿಯ ಸೈದ್ಧಾಂತಿಕ ಅಥವಾ ಇನ್ನಿತರ ಭಿನ್ನಾಭಿಪ್ರಾಯಗಳಿಲ್ಲ. ಇದುವರೆಗೂ ಈ ರಾಷ್ಟ್ರಗಳೊಡನೆ ಜಟಾಪಟಿ ನಡೆಯದಿರುವುದಕ್ಕೆ ಮುಖ್ಯ ಕಾರಣ ಭಾರತ ಆ ರಾಷ್ಟ್ರಗಳೊಂದಿಗೆ ಗಡಿ ಹಂಚಿಕೊಂಡಿಲ್ಲದಿರುವುದು. ಆದರೂ ರಷ್ಯಾ ಮತ್ತು ಜಪಾನ್ ಭಾರತದಿಂದ ಅಷ್ಟೇನೂ ದೂರದಲ್ಲೇನೂ ಇಲ್ಲ.
ಕಳೆದೊಂದು ದಶಕದಲ್ಲಿ ಜಪಾನ್ ಭಾರತಕ್ಕೆ ಇನ್ನಷ್ಟು ಹತ್ತಿರವಾಗಿದೆ. ಇದಕ್ಕಾಗಿ ಚೀನಾಕ್ಕೆ ಥ್ಯಾಂಕ್ಸ್ ಹೇಳಲೇಬೇಕು. ನಿಜ ಹೇಳಬೇಕೆಂದರೆ, ಚೀನಾದ ಆಕ್ರಮಣಕಾರಿ ಮಿಲಿಟರಿ ಮತ್ತು ರಾಜತಾಂತ್ರಿಕತೆಯೇ ಭಾರತ ಮತ್ತು ಜಪಾನ್ನ ರಾಜಕೀಯ ಸಾಮಿಪ್ಯಕ್ಕೆ ಏಕೈಕ ಕಾರಣ ಎಂದರೆ ಉತ್ಪ್ರೇಕ್ಷೆಯಾಗದು. ಚೀನಾದ 'ಹೇರಿಕೆಯ' ರಾಜತಾಂತ್ರಿಕತೆ ಮತ್ತು ಅದು ಭಾರತ ಸುತ್ತಲೂ ಚಾಲಾಕಿತನದಿಂದ ನಿರ್ಮಿಸುತ್ತಿರುವ ಅಪಾಯದ ಸರಪಳಿಯಿಂದಾಗಿಯೇ ಭಾರತ ಜಪಾನ್ನತ್ತ ಕೈಚಾಚುತ್ತಿದೆ.
ಆದರೆ ಜಪಾನ್ ಭಾರತದ ಪ್ರಮುಖ ಮಿತ್ರ ರಾಷ್ಟ್ರವಾಗುವುದಕ್ಕೆ ಇನ್ನೊಂದು ಕಾರಣವೂ ಇದೆ. ಭಾರತದ ಅಭಿವೃದ್ಧಿ ಕ್ರಾಂತಿಯಲ್ಲಿ ಜಪಾನ್ ಮೌನವಾಗಿ ಪ್ರಮುಖ ಪಾತ್ರವಹಿಸುತ್ತಾ ಬಂದಿದೆ. ಭಾರತದ ಮೂಲಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಪ್ರಮುಖ ತಿರುವನ್ನು ಆ ದೇಶ ನೀಡಿದೆ. ಈ ರೀತಿ ಪ್ರಪಂಚದ ಯಾವುದೇ ದೇಶವೂ ಕೂಡ ಆ ದೇಶದಂತೆ ಭಾರತದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿದ ಉದಾಹರಣೆಗಳಿಲ್ಲ.
ಜಪಾನಿಯರು ಭಾರತದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ನೀಡುತ್ತಿರುವ ಆರ್ಥಿಕ ಮತ್ತು ತಾಂತ್ರಿಕ ಸಹಾಯದತ್ತ ಬೇಕಿದ್ದರೆ ಒಮ್ಮೆ ಕಣ್ಣು ಹಾಯಿಸಿನೋಡಿ- ದಶಕದ ಹಿಂದೆ ದೆಹಲಿ ಮೆಟ್ರೋ ರೇಲ್ವೆ ಯೋಜನೆ ಶುರುವಾಗಿದ್ದು ಜಪಾನಿಯರ ಆರ್ಥಿಕ ಮತ್ತು ತಾಂತ್ರಿಕ ಸಹಾಯದಿಂದಲೇ. ಈಗ ಆ ಯೋಜನೆಗೆ ಭಾರತದ ಸುಮಾರು ಮೂವತ್ತು ನಗರಗಳಿಂದ ಪೈಪೋಟಿ ಶುರುವಾಗಿದೆ.
ಜಪಾನಿಯರ ಸಹಾಯದಿಂದ ಮುಂಬರುವ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿರುವ ದೆಹಲಿ ಮುಂಬೈ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್(ಡಿಎಮ್ಐಸಿ) ಮತ್ತು ದೆಹಲಿ ಮುಂಬೈ ಫ್ರೀಟ್ ಕಾರಿಡಾರ್ನಂತಹ ಬೃಹತ್ ಯೋಜನೆಗಳು ದೆಹಲಿ ಮೆಟ್ರೋದಂತಹ ಪ್ರಭಾವಿ ಯೋಜನೆಗೂ ಗ್ರಹಣ ಹಿಡಿಸಲಿವೆ ಎನ್ನುವುದರಲ್ಲಿ ಸಂದೇಹವಿಲ್ಲ! ಇನ್ನು ಇಂಡೋ-ಜಪಾನ್ ಜಾಗತಿಕ ಪಾಲುದಾರಿಕೆಯ ಬತ್ತಳಿಕೆಯಲ್ಲಿ ಚೆನ್ನೈ-ಬೆಂಗಳೂರು ಕಾರಿಡಾರ್ನಂತಹ ಮಹಾತ್ವಾಕಾಂಕ್ಷಿ ಯೋಜನೆಯೂ ಕುಳಿತಿದೆ!
ಮೂಲಭೂತ ವ್ಯವಸ್ಥೆಯ ಬೆಳವಣಿಗೆಯ ಕಥೆಯಲ್ಲಿ ಹೇಗೆ ಹಂತ ಹಂತವಾಗಿ ಪಾತ್ರವಹಿಸಿ ಭಾರತೀಯರ ಮನ ಗೆಲ್ಲಬಹುದು ಎನ್ನುವುದನ್ನು ಜಪಾನ್ ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. ಹಾಗಾಗೇ ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಯಂಥ ಬಲಿಷ್ಠ ರಾಷ್ಟ್ರಗಳು ಈ ರೀತಿಯ ಪಾಲುದಾರಿಕೆಯತ್ತ ಗಮನ ಹರಿಸುವ ಸುಳುಹು ನೀಡುತ್ತಿವೆ.
ಇನ್ನೊಂದೆಡೆ ರಷ್ಯಾದೊಂದಿಗಿನ ಭಾರತದ ಸಂಬಂಧ, 'ಸ್ಟ್ರಾಟಜಿಕ್ ಪಾರ್ಟನರ್ಶಿಪ್' ಎನ್ನುವ ಪದ ಹುಟ್ಟುವುದಕ್ಕಿಂತ ಹಿಂದೆಯೇ ಬೆಳೆದಿತ್ತು. ಭಾರತದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರಗಳಲ್ಲಿ ರಷ್ಯಾ ಮುಂಚೂಣಿಯಲ್ಲಿದೆ. ಭಾರತದ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡಿರುವ ಸೂಕ್ಷ್ಮ ದೃಷ್ಟಿಯ ಈ ದೇಶ, ಪಾಕಿಸ್ತಾನಕ್ಕೆ ಎಂದಿಗೂ ಶಸ್ತ್ರಾಸ್ತ್ರ ಪೂರೈಸುವ ಕೆಲಸಕ್ಕೆ ಕೈ ಹಾಕಿಲ್ಲ. ಅದಾಗ್ಯೂ ಪಾಕಿಸ್ತಾನ ರಷ್ಯಾದ ಸ್ನೇಹ ಸಂಪಾದಿಸಲು ಕೆಲವು ವರ್ಷಗಳಿಂದ ಹೆಣಗುತ್ತಿದೆಯಾದರೂ ಅದು ಸಫಲವಾಗಿಲ್ಲ.
ವ್ಯಂಗ್ಯವೆಂದರೆ, ಭಾರತದ ಅತಿ ಆಪ್ತ ರಾಷ್ಟ್ರಗಳು ಎಂದು ಕರೆಸಿಕೊಳ್ಳುತ್ತಿರುವ ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ ಎನ್ನುವುದು. ಅವೆರಡೂ ಮೊದಲಿನಿಂದಲೂ ಪರಸ್ಪರ ಅನುಮಾನದಿಂದಲೇ ನೋಡುತ್ತ ಬಂದಿವೆ. ಈ ಎರಡೂ ದೇಶಗಳ ನಡುವಿನ ಸಂಬಂಧವನ್ನು ಬೆಸೆಯುವ ಕೆಲಸ ಮಾಡುವ ಅವಕಾಶ ಭಾರತಕ್ಕೆ ದೊರಕಿದೆ. ಅದು ಆ ಕೆಲಸಕ್ಕೆ ಮುಂದಾಗಬೇಕು. ಏಕೆಂದರೆ ಅವೆರಡೂ ಈಗ ಪುನರ್ಮೈತ್ರಿಯ ಸುಳುಹುಗಳನ್ನು ತೋರಿಸತೊಡಗಿವೆ.
- ರಾಜೀವ್ ಶರ್ಮ
anisikeprabha@gmail.com