"ಸಂಗೀತ ಮನುಷ್ಯ ಜಗತ್ತಿನ ಸಾರ್ವಕಾಲಿಕ ಭಾಷೆ" ಎನ್ನುವ ಮಾತಿದೆ. ಜಾತಿ ಮತ, ಕಾಲ, ದೇಶಗಳನ್ನು ಮೀರಿದ ಶಕ್ತಿ ಸಂಗೀತಕ್ಕಿದೆ. ಚಿತ್ರಗೀತೆ-ಭಾವಗೀತೆ ಯಾವುದಕ್ಕೇ ಆಗಲಿ, ರಾಗಗಳ ಬುನಾದಿ ಅತ್ಯಗತ್ಯ. ಅನೇಕ ರಾಗಗಳಿಂದ ಹಾಡುಗಳ ಮಾಧುರ್ಯ ಇಮ್ಮಡಿಯಾಗುತ್ತವೆ. ಜೂನ್ 21 ವಿಶ್ವ ಸಂಗೀತ ದಿನ. ಈ ಸಂದರ್ಭದಲ್ಲಿ 100 ವರ್ಷ ಪೂರೈಸಿರುವ ಹಿಂದಿ ಚಿತ್ರರಂಗ ಹಾಗೂ 80ರ ಹೊಸ್ತಿಲಲ್ಲಿರುವ ಕನ್ನಡ ಚಿತ್ರರಂಗದ ರಾಗಗಳನ್ನು ಆಧರಿಸಿದ ಅದ್ಭುತ ಗೀತೆಗಳತ್ತ ಕಣ್ಣುಹಾಯಿಸಿದಾಗ...
ಹಿಂದಿ ಚಿತ್ರರಂಗದಲ್ಲಿ ಶಂಕರ್ -ಜೈಕಿಷನ್ ಜೋಡಿ ಅನೇಕ ಗೀತೆಗಳಿಗೆ ಭೈರವಿ ರಾಗದಿಂದಲೇ ಮೋಡಿ ಮಾಡಿದ್ದಾರೆ. "ರಾಮಯ್ಯ ವಸ್ತಾವಯ್ಯ", "ದೋಸ್ತ್ ದೋಸ್ತ್ನ ರಹಾ", "ಜೀನಾಯಹ ಮರನ್ನಾಯಹಾ", "ಮೇರಾ ಜೂತಾಹೈ ಜಪಾನಿ" ಇವೆಲ್ಲ ಭೈರವಿ ಸಂಜಾತ ಗೀತೆಗಳೇ. ಜೈಕಿಷನ್ಗೆ ಭೈರವಿ ರಾಗದ ಮೋಹ ಎಷ್ಟಿತ್ತೆಂದರೆ, ತಮ್ಮ ಮಗಳಿಗೂ ಅವರು ಭೈರವಿ ಎಂದೇ ಹೆಸರಿಟ್ಟರು. ಬೇರೆ ಸಂಗೀತ ನಿರ್ದೇಶಕರೂ, ಭೈರವಿ ರಾಗಾಧಾರಿತ ಗೀತೆಗಳನ್ನು ಸಂಯೋಜಿಸಿದ್ದಾರೆ. ಆರ್.ಡಿ. ಬರ್ಮನ್ರ "ಹಮೇತುಂಸೆ ಪ್ಯಾರ್ ಕಿತ್ನಾ", "ಚಿಂಗಾರಿ ಕೋಯಿ ಭಡಕೆ", ಶಿವ್-ಹರಿ ಅವರ "ಜಿಯಾಜಲೆ ಜಾನ್ ಜಲೆ" ಭೈರವಿ ರಾಗದ ಯಶಸ್ವೀ ಗೀತೆಗಳು. ಕನ್ನಡದಲ್ಲಿ ಎಂ. ರಂಗರಾವ್ ಭೀಮ್ಪಲಾಸ್ ರಾಗದ ಆರಾಧಕರು. ಅವರ ಸಂಯೋಜನೆಯ "ಹೂವು ಚೆಲುವೆಲ್ಲ ನಂದೆಂದಿತು", "ವಿರಹಾ ನೂರು ನೂರು ತರಹ", "ಬಣ್ಣಾ ನನ್ನ ಒಲವಿನ ಬಣ್ಣಾ" ಈ ಹಾಡುಗಳೆಲ್ಲ ಭೀಮಾಪಲಾಸ್ ರಾಗದಲ್ಲೇ ಮೂಡಿರುವುದು. ಆದರೆ ರಂಗರಾವ್ "ತೆರೆದಿದೆ ಮನೆ ಓ ಬಾ ಅತಿಥಿ" ಮತ್ತು "ಬಾನಿನ ಅಂಚಿಂದ ಬಂದೆ" ಹಾಡುಗಳಲ್ಲಿ ಕ್ರಮವಾಗಿ ಶಂಕರಾಭರಣಂ ಹಾಗೂ ಹಿಂದೋಳವನ್ನು ಚೆನ್ನಾಗಿ ರೂಪಿಸಿದ್ದಾರೆ.
ಮೋಹನ ರಾಗದಲ್ಲಿ ರಾಜನ್ ನಾಗೇಂದ್ರ ಸಂಯೋಜಿಸಿದ್ದ "ಬಾನಲ್ಲೂ ನೀನೇ ಭುವಿಯಲ್ಲೂ ನೀನೇ" ಹಾಡನ್ನು ಎಸ್. ಜಾನಕಿ ಸೊಗಸಾಗಿ ಹಾಡಿದ್ದರು. ಈ ರಾಗದ ಮನೋಹರತೆಗೆ ಸೋತ ಎಸ್.ಪಿ.ಬಿ. ರಾಜನ್-ನಾಗೇಂದ್ರ ಅವರನ್ನು ಕೇಳಿ ಇದೇ ಮೋಹನ ರಾಗವನ್ನು ಆಧರಿಸಿದ 'ಸಿರಿಮಲ್ಲೆಪೂವಾ'ವನ್ನು ತೆಲುಗಿನಲ್ಲಿ ಹಾಡಿದರು. ಎಸ್. ಜಾನಕಿಯವರಷ್ಟು ಸೊಗಸಾಗಿ ತನ್ನಿಂದ ಹಾಡಲಾಗಿಲ್ಲವೆಂದು ಜಾನಕಿಯವರನ್ನು ಎಸ್.ಪಿ.ಬಿ.ಯವರೇ ಶ್ಲಾಘಿಸಿದ್ದು ಇಬ್ಬರ ಶ್ರೇಷ್ಠತೆಗೆ ಸಾಕ್ಷಿ. "ನಾವಾಡುವ ನುಡಿಯೇ ಕನ್ನಡ ನುಡಿ", "ಮಳ್ಳಿ ಮಳ್ಳಿ ಮಿಂಚುಳ್ಳಿ...", "ಈ ಹಸಿರು ಸಿರಿಯಲಿ..." ಇವೆಲ್ಲ ಮೋಹನ ರಾಗದ ಗೀತೆಗಳೇ.
ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸಮೃದ್ಧವಾಗಿ ಮತ್ತು ಸಮಗ್ರವಾಗಿ ಅಳವಡಿಸಲ್ಪಟ್ಟಿರುವ ರಾಗ ಶಿವರಂಜನಿ. "ನೀನಿಲ್ಲದೆ ನನಗೇನಿದೆ", "ಅಂತರಂಗದಾ ಮೃದಂಗ" ಎಂಬ ಭಾವಗೀತೆಗಳೂ ಸೇರಿದಂತೆ ಸ್ವಪ್ನ ಗಾನ (ಸಂಗೀತ ಜಿ.ಕೆ. ವೆಂಕಟೇಶ್) "ನಲಿವಾ ಗುಲಾಬಿ ಹೂವೇ" (ರಾಜನ್ -ನಾಗೇಂದ್ರ) "ನೀ ಮೀಟಿದ ನೆನಪೆಲ್ಲವೂ" (ವಿಜಯಾನಂದ) "ಶಿಲೆಗಳು ಸಂಗೀತವಾ" (ಉಪೇಂದ್ರಕುಮಾರ್) ಇವೆಲ್ಲವೂ ಶಿವರಂಜನಿ ರಾಗದಲ್ಲಿವೆ. ತೇರೆ ಮೇರೇ ಬೀಚ್ಮೆ, ಬಹಾರೋ ಫೂಲ್ ಬರ್ಸಾವೋ, ದಿಲ್ಕೆ ಝರೋಕೆ ಮೆ, ತುಝಕೋ ಬಿಠಾಕರ್, ಎಲ್ಲವೂ ಶಿವರಂಜನಿ ರಾಗದಲ್ಲೇ ಇದೆ.
ಶಾಸ್ತ್ರೀಯ ಸಂಗೀತವನ್ನೇ ಕಲಿಯದೆ ಸಾಕಷ್ಟು ಸುಶ್ರಾವ್ಯ ಗೀತೆಗಳನ್ನು ಹಾಡಿದವರಲ್ಲಿ ಕಿಶೋರ್ಕುಮಾರ್ ಸಹಾ ಒಬ್ಬರು. ಮೇರೆ ಸಪ್ನೋಂಕಿ ರಾಣಿ ಕಬ್, ರೂಪ್ತೇರಾ ಮಸ್ತಾನಾ...ದಂಥ ಹುಡುಗಾಟದ ಹಾಡುಗಳಿಗಷ್ಟೇ ಈತ ಲಾಯಕ್ಕು ಎಂದು ಕಿಶೋರ್ ಪ್ರತಿಭೆಯನ್ನು ಕಡೆಗಣಿಸಿದವರೂ ಇದ್ದರು. ಈ ಸಂದರ್ಭದಲ್ಲಿ ಆರ್.ಡಿ. ಬರ್ಮನ್ರ ಈ ಹಾಡನ್ನು ಕಿಶೋರ್ ಮೊದಲಿಗೆ ಹಾಡಲು ನಿರಾಕರಿಸಿ ನೀನು ಲತಾರಿಂದ ಇದನ್ನು ಹಾಡಿಸು ಎಂದರು. ಲತಾಮಂಗೇಶ್ಕರ್ ಹಾಡಿದ ಮೇಲೆ ಅದರ ರಾಗದ ಶಕ್ತಿಗೆ ಬೆರಗಾದ ಕಿಶೋರ್ ನಾನೂ ಈ ಹಾಡು ಹಾಡುತ್ತೇನೆ ಎಂದು ಸತತ ಒಂದು ವಾರ ಅಭ್ಯಾಸ ಮಾಡಿ ತಮ್ಮ ಶ್ರದ್ಧೆಯನ್ನೆಲ್ಲ ಧಾರೆಯೆರೆದು ಹಾಡಿ "ಮೇರೆ ನೈನಾ ಸಾವನ್ ಭಾದೋ" ಗೀತೆಯನ್ನು ಉತ್ತುಂಗಕ್ಕೇರಿಸಿ ಬಿಟ್ಟರು.
ಹಕ್ಕಿಗಳ ಇಂಚರದಲ್ಲಿ, ಸಾಹಿತ್ಯದಲ್ಲಿ ಸಂಗೀತವಿದೆ. ಎದೆಬಡಿತದ ಮಿಡಿತದಲ್ಲಿ ಸಂಗೀತದ ಸ್ಪರ್ಶವಿದೆ. ಸಂಗೀತವೇ ಸೌಂದರ್ಯ, ಸೌಂದರ್ಯವೇ ಸಂಗೀತ ಎನ್ನುವಂತೆ ಅದರ ವ್ಯಾಪ್ತಿ ಪ್ರದೇಶ ಅನಂತ ವಿಸ್ತೀರ್ಣ ಹೊಂದಿದೆ. ಸಾಹಿತ್ಯಕ್ಕೆ ಜೀವವಾಗಿ, ಎಲ್ಲರ ಬದುಕಿನ ಸಾಕ್ಷಿ ಪ್ರಜೆಯಾಗಿ ಬದುಕಿನ ಭಾವಗಳನ್ನು ಸ್ವಚ್ಛಂದಗೊಳಿಸುವ ಸಂಗೀತ ಎಂದೆಂದಿಗೂ ಅಮರ ಮತ್ತು ಮಧುರವಾದದ್ದು ಜೂನ್ 21 ವಿಶ್ವಸಂಗೀತ ದಿನ. ಸಂಗೀತದ ಮೌಲ್ಯ ಸದಾ ವರ್ಧಿಸಲಿ.
- ಡಿ.ಎಸ್. ಶ್ರೀನಿವಾಸಪ್ರಸಾದ್