ಜೈವಿಕ ತಂತ್ರಜ್ಞಾನ ನಿಯಂತ್ರಣಪ್ರಾಧಿಕಾರ, ಯಾವ ಪುರುಷಾರ್ಥಕ್ಕೆ?
ಇದು 2010ರ ಮಾತು. ಆಗ ಕೇಂದ್ರದಲ್ಲಿ ಅರಣ್ಯ ಮತ್ತು ಪರಿಸರ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದ ಜೈರಾಮ್ ರಮೇಶ್, ಕುಲಾಂತರಿ ಬದನೆಗೆ ಅನಿರ್ದಿಷ್ಟ ಅವಧಿಯವರೆಗೆ ನಿಷೇಧ ಹೇರಿ ಬಿಟ್ಟರು. ಈ ಸಂದರ್ಭದಲ್ಲಿ ಸಚಿವರ ನಿರ್ಧಾರ ಹಾಗೂ ನಡವಳಿಕೆ ಕುರಿತಂತೆ ಸಾಕಷ್ಟು ಚರ್ಚೆಗಳಾದವು. ಆದರೆ ಅವರ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. 2008ರಲ್ಲಿ ಯುಪಿಎ ಸರ್ಕಾರವೇ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನಿಯಂತ್ರಣ ಮಸೂದೆಯನ್ನು ಜಾರಿಗೆ ತಂದಿತ್ತು. ಅದಾಗಿ ಎರಡೇ ವರ್ಷಗಳಲ್ಲಿ ಕುಲಾಂತರಿ ಬದನೆಗೆ ತಾತ್ಕಾಲಿಕ ಅವಧಿಯವರೆಗೆ ನಿಷೇಧ ಹೇರಲಾಗಿದೆಯೆಂದು ಅದೇ ಸರ್ಕಾರದ ಸಚಿವರು ಘೋಷಿಸಿದ್ದರು.
ಮುಂದೆ 2011ರಲ್ಲಿ ಜನಲೋಕಪಾಲ ಮಸೂದೆ ಜಾರಿಗೆ ತರುವಂತೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಹೋರಾಟ ಆರಂಭಿಸಿದರಲ್ಲ: ಅದೇ ಸಂದರ್ಭದಲ್ಲಿ, ತಳಿ ತಂತ್ರಜ್ಞಾನ ಅನುಮೋದನಾ ಸಮಿತಿಯನ್ನೂ ಉಪೇಕ್ಷಿಸಿ, ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ವಿಫಲ ಯತ್ನ ನಡೆಸಿತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಚರ್ಚೆ ಆರಂಭವಾದದ್ದು 2012ರಲ್ಲಿ. ಆಗ -ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿ ಚಿಕ್ಕದು. ಅದರಿಂದ ಜೀವವೈವಿಧ್ಯದ ಸೂಕ್ಷ್ಮತೆಯನ್ನು ಕಾಪಾಡಲು ಸಾಧ್ಯವಿಲ್ಲ. ಹಾಗಾಗಿ, ಜೀವ ವೈವಿಧ್ಯ ಸುರಕ್ಷಾ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವುದು ಲೇಸು ಎಂದು ಸಂಸದೀಯ ಸ್ಥಾಯಿ ಸಮಿತಿಯೇ ಶಿಫಾರಸು ಮಾಡಿತ್ತು. ಒಂದೊಮ್ಮೆ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ, ಅದರಿಂದ ಪರಿಸರ ಸಂರಕ್ಷಣೆ, ಜಾನುವಾರು ಸುರಕ್ಷೆ, ಜನ ಆರೋಗ್ಯ ಸುಧಾರಣೆಯಂಥ ವಿಷಯಗಳಲ್ಲಿ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದೂ ಸಮಿತಿಯು ಅಭಿಪ್ರಾಯಪಟ್ಟಿತ್ತು.
ತಮ್ಮ ರಾಜ್ಯಗಳ ಜಮೀನುಗಳಲ್ಲಿ ಕುಲಾಂತರಿ ತಳಿಯನ್ನು ಬೆಳೆಯದಂತೆ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಓಡಿಶಾ, ಚತ್ತೀಸ್ಗಡ, ಬಿಹಾರ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳು ಈ ಹಿಂದೆಯೇ ಆದೇಶ ಹೊರಡಿಸಿವೆ. ಈ ರಾಜ್ಯಗಳ ಇಂಥ ನಿರ್ಧಾರದಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಹೂಡಿಕೆದಾರರು ಕಂಗಾಲಾಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗಲೇ, ಒಂದರ ಹಿಂದೊಂದು ಹಗರಣಗಳ ಸುಳಿಗೆ ಸಿಕ್ಕಿ ಬಿದ್ದು ತತ್ತರಿಸುತ್ತಿದ್ದ ಯುಪಿಎ ಸರ್ಕಾರ, ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ.
ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿರುವುದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ಅರಣ್ಯ ಮತ್ತು ತಂತ್ರಜ್ಞಾನ ಸಚಿವಾಲಯದಿಂದಲೇ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿ ಮತ್ತು ವಿಸ್ತಾರಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಯಾಗುತ್ತವೆ. ವಿಪರ್ಯಾಸವೆಂದರೆ, ಒಂದು ಕಡೆಯಲ್ಲಿ ಇದೇ ಅರಣ್ಯ ಮತ್ತು ತಂತ್ರಜ್ಞಾನ ಸಚಿವಾಲಯವೇ ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನು ಪ್ರೋತ್ಸಾಹಿಸಬೇಕೆಂಬ ಮಾತುಗಳನ್ನಾಡುತ್ತದೆ. ಆದರೆ ಈಗ ಏಕಕಾಲಕ್ಕೆ ತೊಟ್ಟಿಲು ತೂಗುವ ಹಾಗೂ ಕುತ್ತಿಗೆ ಹಿಸುಕುವ ಕೆಲಸಗಳನ್ನು ಅರಣ್ಯ ಮತ್ತು ತಂತ್ರಜ್ಞಾನ ಸಚಿವಾಲಯ ಮಾಡುತ್ತಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಪರಿಸರ ಹಾಗೂ ಆರೋಗ್ಯ ಸಚಿವಾಲಯಗಳು ಎಲ್ಲ ರಗಳೆಗಳಿಂದಲೂ ದೂರವೇ ಉಳಿದು ಬಿಟ್ಟಿವೆ.
2004ರಲ್ಲಿ, ಭಾರತಕ್ಕೆ ಕುಲಾಂತರಿ ಬದನೆ ಕಾಲಿಟ್ಟಿತಲ್ಲ; ಆಗ ಕೃಷಿ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಎಂ.ಎಸ್. ಸ್ವಾಮಿನಾಥನ್-'ಕುಲಾಂತರಿ ಬೆಳೆಯಿಂದ ರೈತರಿಗೆ ಆಗಲಿರುವ ಅನುಕೂಲ ಹಾಗೂ ಅನಾನುಕೂಲಗಳನ್ನು ಖಚಿತವಾಗಿ, ಸ್ಪಷ್ಟವಾಗಿ ತಿಳಿಸಬೇಕು. ಕುಲಾಂತರಿ ಬೆಳೆಯಿಂದ ಕೃಷಿ ಭೂಮಿಯ ಫಲವತ್ತತೆಗೆ ಧಕ್ಕೆಯುಂಟಾಗುವುದೇ ಹೇಗೆ ಎಂಬುದನ್ನು ಮುಚ್ಚುಮರೆಯಿಲ್ಲದೆ ತಿಳಿಸಬೇಕು. ಒಟ್ಟಾರೆಯಾಗಿ ಕುಲಾಂತರಿ ಬೆಳೆಗಳಿಂದ ಖಾಸಗಿ ವಲಯಕ್ಕೇ ರೈತರಿಗೆ ಆಗುವ ಲಾಭ-ನಷ್ಟದ ವಿವರಣೆಗಳನ್ನೆಲ್ಲ ತಪ್ಪದೇ ತಿಳಿಸಬೇಕು. ಎಲ್ಲವೂ ಪಾರದರ್ಶಕವಾಗಿರಬೇಕು' ಎಂದು ಶಿಫಾರಸು ಮಾಡಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ಜನರಿಗೆ ತಂದಿರುವ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ವಿಷಯವಾಗಿ ಎಲ್ಲವೂ 'ಗುಪ್ತ್ ಗುಪ್ತ್' ಎಂಬಂತೆ ನಡೆದುಹೋಗುತ್ತದೆ. ಯಾವುದೇ ಮಾಹಿತಿಯೂ ಲಭ್ಯವಾಗುತ್ತಿಲ್ಲ. ಈ ಸಂಬಂಧವಾಗಿ ವಿವರಣೆ ಪಡೆಯಲು ಬಯಸಿದರೆ -ಇದು ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ. ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬ ಸಿದ್ಧ ಉತ್ತರ ದೊರೆಯುತ್ತದೆ.
ಅಂದಹಾಗೆ, ಮುಂದಾಲೋಚನೆಯಿಲ್ಲದೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆ ಏನೆನ್ನುತ್ತದೆ ಗೊತ್ತೆ? ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದಲೇ ಕೇಂದ್ರವು ಈ ಮಸೂದೆಯನ್ನು ಜಾರಿಗೆ ತಂದಿದೆ. ಇವರಂತೆ ಉತ್ಪನ್ನಗಳು, ಅಪರೂಪದ ಜೀವಿಗಳು ಹಾಗೂ ಜೈವಿಕ ತಂತ್ರಜ್ಞಾನ ರಂಗದ ಯಾವುದೇ ಕೆಲಸ ಆರಂಭಿಸುವ ಪರಮಾಧಿಕಾರ ಹೊಂದಿದೆ. ಹೀಗೆ ಹೇಳುವ ಸಂದರ್ಭದಲ್ಲಿ ಯಾವುದೇ ಕೆಲಸ ಮಾಡುವ ಮುನ್ನ ಆಯಾ ರಾಜ್ಯಗಳೊಂದಿಗೆ, ಅಲ್ಲಿನ ಜನ ಹಾಗೂ ಸಂಘಟನೆಗಳೊಂದಿಗೆ ಚರ್ಚಿಸುತ್ತೇವೆ ಎಂದು ಹೇಳುವುದೇ ಇಲ್ಲ. ಅಂದರೆ, ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರವು ಪ್ರತಿ ಸಂದರ್ಭದಲ್ಲೂ ತನಗೆ ಇಷ್ಟ ಬಂದಂತೆ ಅಧಿಕಾರ ಚಲಾಯಿಸುತ್ತದೆ ಎಂದಾಯಿತು.
ಕುಲಾಂತರಿ ತಳಿಯ ಉತ್ಪಾದನೆ ಮತ್ತು ಮಾರುಕಟ್ಟೆಗೆ ಅವಕಾಶ ನೀಡಬೇಕೆಂದು 2009ರಲ್ಲಿ ಜೈವಿಕ ತಂತ್ರಜ್ಞಾನ ಅನುಮೋದನಾ ಸಮಿತಿಯ 31 ಸದಸ್ಯರೂ ಕೇಂದ್ರ ಸರ್ಕಾರದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಆದರೆ ಈಗ ಅಸ್ತಿತ್ವದಲ್ಲಿರುವ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು ಗೊತ್ತೆ? ಕೇವಲ 3. ಆ ಪೈಕಿ ಇಬ್ಬರು ಸದಸ್ಯರು, ಕೇಂದ್ರ ಸರ್ಕಾರ ಹೇಳಿದ್ದಕ್ಕೆಲ್ಲ ಗೋಣಾಡಿಸುತ್ತಾ ಕೂತು ಬಿಟ್ಟಿದ್ದಾರೆ. ಸಮಿತಿಯಲ್ಲಿ ಇರುವವರೇ ಮೂರು ಜನ ಅಂದ ಮೇಲೆ, ಯಾವುದೇ ಒಂದು ಆಹಾರ ಪದಾರ್ಥ ಬೆಳೆಯುವ ವಿಷಯವಾಗಿ, ಒಂದು ಪ್ರಮುಖ ನಿರ್ಧಾರವನ್ನು ಅವರಿಬ್ಬರು ಒಪ್ಪಿದರೂ ಸಾಕು: ನಂತರದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಆದೇಶದನ್ವಯ ಎಂಬ ತಲೆಬರಹ ಹೊಂದಿದ ಆದೇಶವೊಂದು ದೇಶದ ಮೂಲೆ ಮೂಲೆಯನ್ನೂ ತಲುಪುತ್ತದೆ. ಒಂದು ಹವಾನಿಯಂತ್ರಿತ ರೂಮಿನಲ್ಲಿ ಕುಳಿತು, ಇಂಥ ಪ್ರದೇಶದ ಜನರು ಈ ಬಾರಿ ಇಂಥದೇ ಉತ್ಪನ್ನವನ್ನು ಬೆಳೆಯತಕ್ಕದ್ದು ಎಂದು ಅಧಿಕಾರಿಗಳು ಆದೇಶ ಹೊರಡಿಸಿದರೆ, ಅದಕ್ಕೆ ಪ್ರತ್ಯುತ್ತರ ಹೇಳಲಾಗದೆ ಕೂಲಿಗಳಂತೆ ಕೆಲಸ ಮಾಡಬೇಕಾಗುತ್ತದೆ.
ಇಂಥ ನಿರಂಕುಶ ಅಧಿಕಾರದ, ರೈತರ ಪಾಲಿಗೆ ಮಾರಕವೆನ್ನಿಸುವ ಪ್ರಾಧಿಕಾರದ ರಚನೆಯಿಂದ ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಬಿಲ್ಕುಲ್ ಸಾಧ್ಯವಿಲ್ಲ. ದೇಶದ ಪ್ರತಿಭಾಗದ ಕೃಷಿ ಭೂಮಿಯೂ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಬೆಳೆ ತೆಗೆಯಲು ಅನುಕೂಲವಾಗುವದಂಥ ಪರಿಸರವಿದೆ. ಈ ವರ್ಷ ಇಂಥದೇ ಬೆಳೆ ತೆಗೆಯಬೇಕು ಎಂದು ಆದೇಶ ಹೊರಡಿಸುವ ಹೊಣೆ ಹೊತ್ತವರಿಗೆ ಮುಖ್ಯವಾಗಿ ದೇಶದ ಎಲ್ಲ ಭೂ ಭಾಗಗಳ, ಅಲ್ಲಿನ ಕೃಷಿಯ, ಬೆಳೆಯೊಂದಿಗೆ ರೈತರು ಹೊಂದಿರುವ ಭಾವನಾತ್ಮಕ ಸಂಬಂಧದ ಪರಿಚಯವಿರಬೇಕು.
ಆದರೆ, ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರದ ಸದಸ್ಯರಿಗೆ ಅಂಥ ತಿಳಿವಳಿಕೆ ಖಂಡಿತ ಇಲ್ಲ. ಹೀಗಿದ್ದರೂ, ಮುಂಬರುವ ದಿನಗಳಲ್ಲಿ ಎದುರಾಗುವ ಗಂಡಾಂತರಗಳ ಬಗ್ಗೆ ಯೋಚಿಸದೆ, ಜೈವಿಕ ತಂತ್ರಜ್ಞಾನ ಕ್ಷೇತ್ರದ ಕೆಲವೇ ಪ್ರಮುಖರನ್ನು ಮೆಚ್ಚಿಸುವ ಉದ್ದೇಶದಿಂದ ಯುಪಿಎ ಸರ್ಕಾರವು ಜೈವಿಕ ತಂತ್ರಜ್ಞಾನ ನಿಯಂತ್ರಣಾ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದೇ ಬಿಟ್ಟಿದೆ. ಅವರ ಶಿಫಾರಸುಗಳನ್ನು ರಾಜ್ಯಗಳ ಮೇಲೆ, ರೈತರ ಮೇಲೆ ಹೇರಲು ಹೊರಟಿದೆ.
ಯಾವುದೇ ಹೊಸ ಯೋಜನೆ ಆರಂಭಿಸುವ ಮೊದಲು ಪರಿಸರ, ಜಾನುವಾರು ಹಾಗೂ ಆರೋಗ್ಯಕ್ಕೆ ಹಾನಿಕರವಲ್ಲದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ತಜ್ಞ ಡಾ. ಸ್ವಾಮಿನಾಥನ್ ಸಮಿತಿ, 2004ರಲ್ಲಿಯೇ ಸ್ಪಷ್ಟವಾಗಿ ಹೇಳಿದೆ. ಇದೆಲ್ಲ ಗೊತ್ತಿದ್ದರೂ ಏಕಕಾಲಕ್ಕೆ ರಾಜ್ಯ ಸರ್ಕಾರಗಳು ಹಾಗೂ ರೈತಾಪಿ ಜನರ ಮೇಲೆ ಸವಾರಿ ಮಾಡುವ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರುವ ಅವಸರದಲ್ಲಿದೆ.
ಈ ಹುಚ್ಚಿಗೆ ಏನೆನ್ನಬೇಕು!
- ಜೈ ಮಜುಂದಾರ್
ಅಂಕಣಕಾರರು