ತೃತೀಯ ರಂಗ ಯಾರಿಗೆ ಅನಿವಾರ್ಯ?
'ತೃತೀಯ ರಂಗ' ಎನ್ನುವುದು ತೀರ ಹೊಸ ಪದಪುಂಜವೇನಲ್ಲ. ಕೆಲವು ಅತೃಪ್ತ ರಾಜಕೀಯ ಧುರೀಣರುಗಳ ಅಧಿಕಾರದ ಗದ್ದುಗೆ ಏರುವ ಹಂಬಲ ತೀರ ಕ್ಷೀಣವಾದಾಗ ತಮ್ಮದೇ ಜಾಯಮಾನದ ಕೆಲವು ರಾಜಕೀಯ ಪಕ್ಷಗಳನ್ನು ಒಟ್ಟುಗೂಡಿಸಿ ತಮ್ಮ ಪ್ರಯತ್ನ ಮುಂದುವರಿಸುವ ಅಥವಾ ಜೀವಂತವಾಗಿರಿಸುವ ಒಂದು ಪ್ರಯತ್ನದ ಪರಿಣಾಮವೇ ಈ ತೃತೀಯರಂಗ. ಬೇರೆ ಬೇರೆ ತತ್ವ-ಸಿದ್ಧಾಂತ, ವಿಚಾರಧಾರೆಗಳಿರುವವರು ಒಟ್ಟುಗೂಡುವುದೆಂದರೆ ತಿಳಿದಷ್ಟು ಸುಲಭದ ಮಾತಲ್ಲ. ಅಷ್ಟಾಗಿಯೂ ಹೇಗಾದರೂ ಮಾಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ತವಕ ಈ ಅತೃಪ್ತರಲ್ಲಿ ಎದ್ದು ಕಾಣುತ್ತದೆ. ಯಾವ ದಿನ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ನೇಮಕವಾದರೊ ಅಂದಿನಿಂದ ಈ ತೃತೀಯ ರಂಗವೆಂಬ ಬೀಜ ಮತ್ತೆ ಮೊಳಕೆಯೊಡೆಯಲು ಪ್ರಾರಂಭಿಸಿತು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅದರ ನಾಯಕತ್ವ ವಹಿಸುತ್ತಿದ್ದಾರೆಂದರೂ ತಪ್ಪಲ್ಲ. ತಾನೂ ಒಂದು ಹಿಂದುಳಿದ ರಾಜ್ಯದ ಮುಖ್ಯಮಂತ್ರಿಯಾಗಿ, ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವಾಗ, ಮೋದಿಗೊಬ್ಬರಿಗ್ಯಾಕೆ ಈ ರೀತಿಯ ವಿಶೇಷ ಮನ್ನಣೆ ಎಂಬುದೇ ಅವರ ವಾದವಿರಬಹುದು. ಮೋದಿಯ ಪ್ರಶಂಸೆ, ರಾಜಕೀಯದಲ್ಲಿ ಅವರಿಗೆ ಸಿಗುತ್ತಿರುವ ಸ್ಥಾನ-ಮಾನ, ನಿತೀಶ್ ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗೇ ಬಿಟ್ಟರೆ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳನ್ನೂ ಮನಗಂಡ ನಿತೀಶ್ಕುಮಾರ್ ಯುಪಿಎ ಅಂಗಪಕ್ಷಗಳಲ್ಲೂ ಗುರುತಿಸಿಕೊಳ್ಳುತ್ತಿರುವ ಕೆಲ ಅತೃಪ್ತ ರಾಜಕೀಯ ಪಕ್ಷಗಳ ಧುರೀಣರನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಂಡು ಎನ್ಡಿಎ - ಯುಪಿಎ ಹೊರತಾದ ಇನ್ನೊಂದು ರಂಗದ ಬಗ್ಗೆ ಮಾತನಾಡಲು ತೊಡಗಿದ್ದಾರೆ.
ಹಾಗಿದ್ದರೆ ಈ ತೃತಿಯ ರಂಗ ಯಾರಿಗೆ ಅನಿವಾರ್ಯ? ದೇಶದ ಮತದಾರನಿಗೋ ಅಥವಾ ಕೆಲವು ರಾಜಕೀಯ ಪಕ್ಷಗಳಿಗೊ? ಸದ್ಯದ ರಾಜಕೀಯದಲ್ಲಿ ಮೈತ್ರಿ ಸರಕಾರದ್ದೇ ಕಾರುಬಾರು. ಯಾವೊಂದು ಪಕ್ಷವೂ ತನ್ನ ಸ್ವಂತ ಬಲದಿಂದ ಸರಕಾರ ನಡೆಸುವ ತಾಕತ್ತು ಹೊಂದಿಲ್ಲ. ಬೇರೊಬ್ಬರನ್ನು ಅವಲಂಬಿಸುವುದು ಕಡ್ಡಾಯ. ಹೀಗಿರುವಾಗ, ಅಂಗಪಕ್ಷಗಳು ತಮ್ಮ ಸ್ವಂತಿಕೆ ಮೆರೆಯಲು ಉತ್ಸುಕರಾಗಿದ್ದಾರೆ. ಅವರಲ್ಲಿ ಯಾರೊಬ್ಬರೂ ಸರಕಾರ ರಚಿಸುವ ಸ್ಥಿತಿಯೂ ಇಲ್ಲ. ಸದ್ಯದ ಯುಪಿ ಸರಕಾರದ ಕೆಲವು ಮಸೂದೆಗಳು ಅದರ ಅಂಗಪಕ್ಷಗಳಿಗೂ ಒಪ್ಪಿಗೆಯಿಲ್ಲ. ಈಗಷ್ಟೇ ಮಂಡನೆಯಾದ ಆಹಾರ ಭದ್ರತೆ ಮಸೂದೆಯೂ ಒಂದು. ಹೀಗಾಗಿ ಎನ್ಡಿಎದಿಂದ ಕೆಲವು, ಯುಪಿಎಯಿಂದ ಕೆಲವು ಸೇರಿ ತೃತೀಯ ರಂಗದ ರಚನೆಯ ಕಸರತ್ತಿನಲ್ಲಿ ತೊಡಗಿದ್ದಾರೆ. ಒಂದೊಮ್ಮೆ ಈ ಹೊಸ ಪಕ್ಷ ರಚನೆಯಾದರೂ ಅವರೊಳಗಿನ ಭಿನ್ನ ಭಿನ್ನ ಪಕ್ಷ ಸಿದ್ಧಾಂತಗಳು, ನಿಲುವು, ಎಲ್ಲಕ್ಕೂ ಹೆಚ್ಚಾಗಿ ಸ್ವ-ಪ್ರತಿಷ್ಠೆಯ ಹಂಬಲ ಬಯಸಿದ್ದನ್ನು ಸಾಧಿಸಲು ಸಾಧ್ಯವೇ? ಮತದಾರ ಇನ್ನೂ ಹೆಚ್ಚಿನ ಗಂಡಾಂತರ ಎದುರಿಸಲು ಸಿದ್ಧನಿದ್ದಾನೆಯೆ? ಈಗಾಗಲೇ ಮೋದಿ ಬೇಡ, ದೀದಿ ಇರಲಿ ಎಂದರೆ, ನಿತೀಶ್ಕುಮಾರ್, ಮುಲಾಯಂ ಸಿಂಗ್, ಶರದ್ ಯಾದವ್, ಸೀತಾರಾಂ ಯಚೂರಿ ತಾವೂ ಉನ್ನತ ಅಧಿಕಾರದ ಆಕಾಂಕ್ಷಿಗಳು ಎಂಬುದನ್ನು ಬಿಂಬಿಸುತ್ತಿದ್ದಾರೆ.ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೂ ತೃತೀಯ ರಂಗ ಅನಿವಾರ್ಯ ಅಂದಿದ್ದಾರೆ.
ಹಗರಣಗಳಿಂದ ಹೈರಾಣಾದ ಕಾಂಗ್ರೆಸ್ ಒಂದೆಡೆಯಾದರೆ ಆಡ್ವಾಣಿಯವರ ರಾಜಿನಾಮೆ ಅಧ್ಯಾಯ ಬಿಜೆಪಿಯೊಳಗಿನ ಬಿರುಕನ್ನು ಬಹಿರಂಗ ಮಾಡಿದ್ದೂ ಆಯಿತು. ಈ ರೀತಿಯ ಘಟನೆಗಳು ಸಣ್ಣ-ಪುಟ್ಟ ಪಕ್ಷಗಳಲ್ಲೂ ಸ್ಫೂರ್ತಿ ತುಂಬಿರುವುದೂ ಸತ್ಯ. ಸ್ವ-ಕೇಂದ್ರಿತ ರಾಜಕಾರಣಿಗಳೇ ತುಂಬಿರುವಾಗ ರಾಜಕೀಯ ಇನ್ನೂ ಹದಗೆಡುವುದರಲ್ಲಿ ಸಂಶಯವೇ ಇಲ್ಲ.
- ಶಂಕರನಾರಾಯಣ ಭಟ್
ಹೊನ್ನಾವರ