ಉತ್ತರಾಖಂಡ ಪ್ರವಾಹದ ಒಡಲ ಗುಟ್ಟೇನು?
ಉತ್ತರಾಖಂಡದ ಭೀಕರ ಪ್ರವಾಹದ ಬಗ್ಗೆ ಒಂದೆಡೆ ಅನುಕಂಪ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಮನುಷ್ಯನ ಜೀವನಶೈಲಿಯೇ ವಿಪತ್ತನ್ನು ಆಹ್ವಾನಿಸಿತು ಎಂಬ ವಾದವೂ ಪ್ರಬಲವಾಗುತ್ತಿದೆ. ಈ ಬಗ್ಗೆ ಔಟ್ಲುಕ್ ನಿಯತಕಾಲಿಕಕ್ಕೆ ವಿಸ್ತೃತ ಲೇಖನವೊಂದನ್ನು ಬರೆದಿದ್ದಾರೆ ಆ ರಾಜ್ಯದ ಮಾಜಿ ಮುಖ್ಯಮಂತ್ರಿ, ನಿವೃತ್ತ ಮೇಜರ್ ಜನರಲ್ ಬಿ. ಸಿ. ಖಂಡೂರಿ.
-----
ನೈಸರ್ಗಿಕ ವಿಪತ್ತುಗಳು ದೇವರ ಕೃತ್ಯವೇ ಆಗಿದ್ದಿರಬಹುದು. ಆದರೆ ನಾವದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ವಿನಾಶದ ವ್ಯಾಪ್ತಿಯನ್ನು ಹೇಗೆ ಕಿರಿದುಗೊಳಿಸುತ್ತೇವೆ ಎಂಬುದು ನಮ್ಮ ಕೈಯಲ್ಲೆ ಇದೆ. ಅತಿವೃಷ್ಟಿ, ಮೇಘಸ್ಫೋಟ, ಭೂಕುಸಿತ ಇವೆಲ್ಲವುಗಳಿಂದ ಉತ್ತರಾಖಂಡದಲ್ಲಿ ಸಂಭವಿಸಿರುವ ಸಾವು- ವಿನಾಶಗಳಿಗೆ ನಮ್ಮ ದುರ್ಬಲ ಆಡಳಿತವೂ ಕಾರಣ. ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ನಡುವೆ ಸಮತೋಲನ ಸಾಧಿಸುವುದಕ್ಕೆ ನಾವು ವಿಫಲರಾಗಿರುವುದರ ಫಲವಿದು. ನೈಸರ್ಗಿಕ ವಿಪತ್ತಿನಿಂದ ಆದ ಹಾನಿಯ ಪ್ರಮಣವನ್ನು ತಗ್ಗಿಸಬಹುದಿತ್ತಲ್ಲವೆ? ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೆಲ ಕಠಿಣ ಪ್ರಶ್ನೆಗಳನ್ನು ಕೇಳಬೇಕಿದೆ.
ಇಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ಏನಿತ್ತು ಮತ್ತು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರತಿಸ್ಪಂದನ ಏನಾಗಿತ್ತು? ಪತ್ರಿಕೆಯ ವರದಿಗಳನ್ನು ಗಮನಿಸಿದಾಗ ಹವಾಮಾನ ಇಲಾಖೆ ವಾರದ ಮೊದಲೆ ಅಲ್ಲಿ ಭಾರಿ ಮಳೆಯಾಗುವ ಸೂಚನೆಯನ್ನು ಕೊಟ್ಟಿತ್ತು ಎಂಬುದು ತಿಳಿದುಬರುತ್ತದೆ. ಹಾಗಾದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾತ್ರಾರ್ಥಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಲಿಲ್ಲ ಏಕೆ? ಹೃಷಿಕೇಷ, ಹರಿದ್ವಾರ ಶ್ರೀನಗರಗಳಲ್ಲೆ ಸಂಚಾರವನ್ನು ನಿಲ್ಲಿಸುವ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ? ಮುನ್ಸೂಚನೆ ಹೊರತಾಗಿಯೂ ಬದರಿನಾಥ, ಕೇದಾರನಾಥ ಹಾಗೂ ಹೇಮಕುಂಡ್ ಸಾಹಿಬ್ಗಳಿಂದ ಯಾತ್ರಾರ್ಥಿಗಳನ್ನು ತೆರವುಗೊಳಿಸುವುದಕ್ಕೆ ಮುಂದಾಗಲಿಲ್ಲ ಏಕೆ? ಇದೇನೂ ಏಕಾಏಕಿ ಬಡಿದ ಆಘಾತ ಎಂಬಂತೆ ಅರ್ಥೈಸುವ ಅಗತ್ಯ ಇಲ್ಲ. ಹಿಮಾಲಯ ಪ್ರಾಂತ್ಯ, ಅದರಲ್ಲೂ ಉತ್ತರಾಖಂಡವು ಮುಂಗಾರಿನ ಸಂದರ್ಭದಲ್ಲಿ ಸೂಕ್ಷ್ಮವಾಗುತ್ತದೆ ಎಂಬುದು ತಿಳಿದ ಸಂಗತಿಯೇ.
ಕೇಂದ್ರ ಸರ್ಕಾರದ ಯೋಜನೆ ಮತ್ತು ಪ್ರತಿಕ್ರಿಯೆ ಪದ್ಧತಿಯ ಬಗ್ಗೆ ಎರಡು ಟಿಪ್ಪಣಿ ಮಾಡಬಯಸುತ್ತೇನೆ. ಮೊದಲನೆಯದಾಗಿ ಅಂಥ ದೈತ್ಯ ಪ್ರವಾಹಗಳು ಬದ್ರಿ ಮತ್ತು ಕೇದಾರದ ಕಣಿವೆಗಳಿಗೆ ಆ ಪರಿ ಬಂದು ಧುಮುಕಿದ್ದೇಕೆ ಎಂದು ವಿಶ್ಲೇಷಿಸಿ ಅದನ್ನು ತಡೆಯುವುದಕ್ಕೆ ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿತ್ತೆ ಎಂಬ ಬಗ್ಗೆ ಯೋಚಿಸಬೇಕು. ನಾವು ಎಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಪರಾಮರ್ಶೆಗೆ ಒಳಪಡಿಸುವುದು ರಾಜಕೀಯದ ಆಟವಾಗಬಾರದು. ಕೇಂದ್ರದ ಮೇಲೆ ರಾಜ್ಯ ಸರ್ಕಾರ ದೂರುವುದು ಹಾಗೂ ರಾಜ್ಯದ ವಿರುದ್ಧ ಕೇಂದ್ರ ಕಿಡಿಕಾರುವುದಕ್ಕೆ ಈ ಪ್ರಕ್ರಿಯೆ ಸೀಮಿತವಾಗದೆ ಅರ್ಥಪೂರ್ಣ ಆಡಿಟ್ ನಡೆಯಬೇಕಿದೆ.
ನಮ್ಮ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸದೆ ಬಿಟ್ಟಿರುವುದೂ ಇಂಥ ಅವಘಡಗಳ ಸಂದರ್ಭದಲ್ಲಿ ವಿನಾಶದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮೂರು ಧಾಮಗಳಿಗೆ ಕರೆದೊಯ್ಯುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗಿವೆ ಹಾಗೂ 'ಬಾರ್ಡರ್ ರೋಡ್ ಆರ್ಗನೈಸೇಷನ್' (ಬಿಆರ್ಒ) ಎಂಬ ಸಂಸ್ಥೆ ಇವುಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ. ನನ್ನ ಅಭಿಪ್ರಾಯದಲ್ಲಿ ಇದೊಂದು ಅತ್ಯುತ್ತಮ ಅರೆ ಸರ್ಕಾರಿ ಸಂಸ್ಥೆ. ಆದರೆ ಬರಹೊತಿಯಲ್ಲಿ ನಮಗೆ ಚೀನಾದ ಜತೆ ಪ್ರಾಂತ್ಯ ವಿವಾದ ಇರುವುದರಿಂದ ಅಲ್ಲಿ ಬಿಆರ್ಒ ಪಾತ್ರ ಸ್ವಲ್ಪ ಸಮಸ್ಯಾತ್ಮಕವಾಗಿದೆ. 2009ರ ಫೆಬ್ರವರಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಉತ್ತರಾಖಂಡಕ್ಕೆ ಹೆಚ್ಚುವರಿ ಮುಖ್ಯ ಎಂಜಿನಿಯರ್ ಎಂಬ ಹುದ್ದೆಯೊಂದನ್ನು ಸೃಷ್ಟಿಸಿದ್ದೆವು. ಕುಮಾಂವ್ ಪ್ರಾಂತ್ಯಕ್ಕೂ ಅಂಥದೆ ಹುದ್ದೆಯೊಂದನ್ನು ರೂಪಿಸಲಾಯಿತು. ಆದರೆ ನಂತರದ ವರ್ಷಗಳಲ್ಲಿ ರಸ್ತೆಗಳ ಉಸ್ತುವಾರಿಯಲ್ಲಿ ತೊಡಗಿದ್ದ ಬಿಆರ್ಒಗೆ ಕೇಂದ್ರದಿಂದ ಬರುತ್ತಿದ್ದ ಹಣಕಾಸು ಅತಿಯಾಗಿ ಕಡಿತಗೊಂಡಿತು. ಈ ಪ್ರದೇಶದ ಅರಿವೇ ಇಲ್ಲದಿರುವ ಖಾಸಗಿ ಗುತ್ತಿಗೆದಾರರಿಗೆ ಲಾಭವಾಗುವಂತೆ ಈ ಕ್ರಮವಿದೆ ಎಂದು ಆಗ ಗುಲ್ಲೆದ್ದಿತ್ತು. ರಸ್ತೆಗಳನ್ನು ಸರಿಪಡಿಸುವುದಕ್ಕೆ ಬಿಆರ್ಒ ಹಣವಿಲ್ಲದೆ ಒದ್ದಾಡಿತು. 2010-11ರಲ್ಲಿ ಪ್ರೊಜೆಕ್ಟ್ ಶಿವಾಲಿಕ್ಗೆ 700 ಕೋಟಿ ರುಪಾಯಿಗಳ ಅಗತ್ಯವಿದ್ದಾಗ ಸಿಕ್ಕಿದ್ದು 50 ಕೋಟಿ ರುಪಾಯಿಗಳಿಗಿಂತ ಕಡಿಮೆ. ಈ ಯೋಜನೆ ಗರ್ವಾಲ್ ಪ್ರಾಂತ್ಯದ ಹೆದ್ದಾರಿಗಳ ಸುಧಾರಣೆಗೆಂದು ರೂಪುಗೊಂಡಿತ್ತು. 2011-12ನೇ ಸಾಲಿನಲ್ಲಿ 400 ಕೋಟಿ ರುಪಾಯಿಗಳ ಡಿಮ್ಯಾಂಡ್ ಇದ್ದಾಗ ದೊರೆತಿದ್ದು 100 ಕೋಟಿ ರುಪಾಯಿಗಳಿಗಿಂತ ಕಡಿಮೆ ಹಣ. 2012-13ರಲ್ಲಿ 200 ಕೋಟಿ ರುಪಾಯಿಗಳ ಬೇಡಿಕೆಗೆ ಪ್ರತಿಯಾಗಿ ದೊರೆತಿದ್ದು ಕೇವಲ 25 ಕೋಟಿ ರುಪಾಯಿಗಳು. ಅತಿಮುಖ್ಯ ರಸ್ತೆಗಳ ಉಸ್ತುವಾರಿಯಲ್ಲಿ ತೊಡಗಿಕೊಂಡಿರುವ ಬಿಆರ್ಒಗೆ ಇಷ್ಟರಮಟ್ಟಿಗೆ ಹಣಕಾಸು ಕೊರತೆ ಆಗಿದ್ದೇಕೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ.
ನೈಸರ್ಗಿಕ ವಿಪತ್ತುಗಳು ಮಾನವನ ಶಿಸ್ತುಬದ್ಧ ಯೋಜನೆಯನ್ನೂ ಅಲ್ಲಾಡಿಸುತ್ತವೆ. ಆತ ನಿರ್ಮಿಸಿದ ಅತ್ಯುತ್ತಮ ರಸ್ತೆಗಳನ್ನು ಇಲ್ಲವಾಗಿಸುತ್ತವೆ. ಆದರೆ ಹೀಗೆಲ್ಲ ನಿಟ್ಟುಸಿರಿಟ್ಟು ಕೈಕಟ್ಟಿ ಕುಳಿತುಕೊಳ್ಳುವುದು, ರಸ್ತೆಗಳನ್ನು ಹದಗೆಡುವುದಕ್ಕೆ ಬಿಟ್ಟುಬಿಡುವುದು ಸಮರ್ಥನೆ ಆಗುವುದಿಲ್ಲ. ರಸ್ತೆ ನಿರ್ಮಾಣ ಮತ್ತು ಅವುಗಳನ್ನು ಸುಸ್ಥಿತಿಯಲ್ಲಿ ಇಡುವ ಕಾರ್ಯ ನೆರವೇರಿದ್ದರೆ ಅಗಾಧ ಹಾನಿಯ ಹೊರತಾಗಿಯೂ ಒಂದಿಷ್ಟು ಮೂಲಸೌಕರ್ಯಗಳು ಉಳಿದು ಎಷ್ಟೊಂದು ಪ್ರಾಣಗಳನ್ನು ಮತ್ತು ಆಸ್ತಿಯನ್ನು ರಕ್ಷಿಸುವುದಕ್ಕೆ ಅನುವಾಗುತ್ತಿತ್ತು. ಅದಿರಲಿ, ಇದೀಗ ಬಿಆರ್ಒ ಅನ್ನು ಸಂಪೂರ್ಣ ಖಾಸಗಿಕರಣಗೊಳಿಸಿ ಖಾಸಗಿ ಗುತ್ತಿಗೆದಾರರಿಗೆ ಎಲ್ಲವನ್ನೂ ಒಪ್ಪಿಸುವ ಮಾತನಾಡುತ್ತಿರುವ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಸೂಚನೆ ನೀಡುತ್ತಿದೆ. ನಾನಂತೂ ಈ ವಿಚಾರಕ್ಕೆ ಸಂಪೂರ್ಣ ವಿರೋಧ ಹೊಂದಿದ್ದೇನೆ. ಪ್ರಮುಖ ಹುದ್ದೆಗಳಲ್ಲಿ ನಿವೃತ್ತ ಸೇನಾಧಿಕಾರಿಗಳನ್ನೆ ಹೊಂದಿರುವ ಬಿಆರ್ಒ ನಿಜಕ್ಕೂ ಶಿಸ್ತುಬದ್ಧ ಸಂಸ್ಥೆ. ಇದನ್ನು ಬಲಪಡಿಸುವುದು ಹಾಗೂ ಹೆಚ್ಚಿನ ಹಣಕಾಸು ನೆರವು ಸಿಗುವಂತೆ ನೋಡಿಕೊಳ್ಳುವುದು ರಾಷ್ಟ್ರೀಯ ಭದ್ರತೆ ಮತ್ತು ರಸ್ತೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
ಇನ್ನು ಅಣೆಕಟ್ಟುಗಳ ಬಗ್ಗೆ, ವಿಶೇಷವಾಗಿ ತೆಹ್ರಿಯಲ್ಲಿರುವ ಅಣೆಕಟ್ಟಿನ ಬಗ್ಗೆ ನೈಸರ್ಗಿಕ ವಿಪತ್ತುಗಳಾದ ಎಲ್ಲ ಸಂದರ್ಭಗಳೂ ಪ್ರಶ್ನೆಗಳೆದ್ದಿವೆ. 1991ರಲ್ಲಿ ನಾನು ರಾಜಕೀಯ ವೃತ್ತಿ ಪ್ರಾರಂಭಿಸಿದಾಗಲೆ ತಾಳಿದ್ದ ಧೋರಣೆ ಎಂದರೆ ಈ ಬೃಹತ್ ಅಣೆಕಟ್ಟುಗಳು ಸುರಕ್ಷಿತವೂ ಅಲ್ಲ, ಕಾರ್ಯಸಾಧುವೂ ಅಲ್ಲ ಎಂಬುದು. ಯುದ್ಧದ ಸಂದರ್ಭದಲ್ಲೂ ವೈರಿ ಇದನ್ನು ಗುರಿಮಾಡುವ ಆತಂಕ ಇದೆ. 25 ಮೆಗಾವ್ಯಾಟ್ ಉತ್ಪಾದನೆಯವರೆಗಿನ ಸಣ್ಣ ಸಣ್ಣ ಯೋಜನೆಗಳು ಬೇಕು ಎಂಬುದು ನನ್ನ ಯೋಚನೆ. ಇಂಥ ಡ್ಯಾಮ್ಗಳು ವಿದ್ಯುತ್ ಮತ್ತು ಉದ್ಯೋಗ ಎರಡನ್ನೂ ನೀಡುತ್ತವೆ. ಬೃಹತ್ ಆಣೆಕಟ್ಟುಗಳಿಂದ ಎದುರಾಗುವ ಹಲವು ಅಪಾಯಗಳನ್ನು ಇವು ನಿವಾರಿಸುತ್ತವೆ. 2008ರಲ್ಲೆ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ನೀತಿಯನ್ನು ನನ್ನ ಸರ್ಕಾರ ರೂಪಿಸಿತ್ತು. ಅದನ್ನು ಅನುಷ್ಠಾನಕ್ಕೆ ತರಬೇಕಷ್ಟೆ.
ಕೇವಲ ಉತ್ತರಾಖಂಡಕ್ಕಷ್ಟೆ ಅಲ್ಲ ಒಟ್ಟಾರೆ ಹಿಮಾಲಯ ಪ್ರಾಂತ್ಯವೇ ತಾರತಮ್ಯವನ್ನು ಎದುರಿಸುತ್ತಿದೆ. ಈ ರಾಜ್ಯಗಳಲ್ಲಿ ಅಭಿವೃದ್ಧಿ ಮತ್ತು ಪರಿಸರದ ಕಾಳಜಿಗಳನ್ನು ಸರಿತೂಗಿಸುವ ದೀರ್ಘಾವಧಿ ಯೋಚನೆಗಳಿಲ್ಲ. ಕೆಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕೆಲ ವಿರೋಧಾಭಾಸಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಒಂದೆಡೆ ಪರಿಸರದ ಹೆಸರಿನ ಲಾಬಿ ಇದೆ. ಇನ್ನೊಂದೆಡೆ ಪರಿಸರವನ್ನು ಯಾವತ್ತೂ ಬೆಂಬಲಿಸಿಕೊಂಡು ಬಂದ ಸ್ಥಳೀಯರು ಈಗ ಅಭಿವೃದ್ಧಿಯನ್ನೂ ಬಯಸುತ್ತಿದ್ದಾರೆ. ಹಳ್ಳಿಗಳಲ್ಲಿರುವ ಜನ ವಿದ್ಯುತ್ ಹಾಗೂ ಬಸ್ಗಳನ್ನೇ ನೋಡಿಲ್ಲ. ಅವರಿಗೆ ಅಭಿವೃದ್ಧಿ ಕಾಣಬೇಕೆಂಬ ತೀವ್ರ ತುಡಿತ ಇದೆ. ಈ ಬಗ್ಗೆ ಆಡಳಿತ ಗಮನ ಹರಿಸುತ್ತಿಲ್ಲವಾದ್ದರಿಂದ ಈ ಮೊದಲು ಪರಿಸರದೊಂದಿಗೆ ಸಹಬಾಳ್ವೆ ನಡೆಸುತ್ತಿದ್ದವರೆ ಈಗ ಅದರ ರಕ್ಷಣೆ ಹೆಸರೆತ್ತಿದರೆ ಇದು ತಮ್ಮ ಅಭಿವೃದ್ಧಿ ನಿರಾಕರಣೆಗೆ ಒಡ್ಡುತ್ತಿರುವ ನೆಪ ಎಂದು ಪ್ರತಿಭಟಿಸುವ ಹಾಗಾಗಿದೆ. ಈ ಹತಾಶೆ ದೀರ್ಘಾವಧಿಗೆ ಮುಂದುವರಿದರೆ ಪರಿಸರ ರಕ್ಷಣೆಯ ಪರಿಕಲ್ಪನೆಗೇ ಕೊಡಲಿ ಏಟು ಬಿದ್ದೀತು.
ತುರ್ತಾಗಿ ಆಗಬೇಕಿರುವ ಸಂಗತಿ ಎಂದರೆ 'ಹಿಮಾಲಯ ಡೆವಲಪ್ಮೆಂಟ್ ಏಜೆನ್ಸಿ' ಅನ್ನುವ ಪರಿಣತರ ಗುಂಪನ್ನೊಳಗೊಂಡ ತಂಡ ರಚನೆಯಾಗಬೇಕು. ಇದು ಪ್ರಧಾನಿಯವರ ನೇರ ನಿಯಂತ್ರಣದಲ್ಲಿದ್ದು, ಪರಿಸರಕ್ಕೆ ಅತಿಯಾದ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಗಳ ನಕಾಶೆ ಸಿದ್ಧಪಡಿಸಬೇಕು. ಪರಿಸರ ರಕ್ಷಣೆಗೂ ನಿರ್ದಿಷ್ಟ ಮತ್ತು ನಿಖರ ಸೂತ್ರಗಳಿರಲಿ. ಇದೇಕೆ ಕೇಂದ್ರದ ಅಧೀನದಲ್ಲೆ ಇರಬೇಕೆಂದರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ತತ್ಕ್ಷಣಕ್ಕೆ ಮತ ಸೆಳೆಯುವ ಯೋಜನೆಗಳನ್ನು ತರುವುದು ನಿಲ್ಲುತ್ತದೆ. ಅಂಥ ಯೋಜನೆಗಳೆ ಪರಿಸರವನ್ನು ಹಾಳು ಮಾಡುತ್ತಿವೆ.
- ಬಿ.ಸಿ. ಖಂಡೂರಿ
ಮಾಜಿ ಮುಖ್ಯಮಂತ್ರಿ