ಬಿಜೆಪಿಗೆ ಬೇಕಲ್ಲವೆ ಬಿಎಸ್ವೈ?
ಎಲ್ಲಾ ರಾಜಕೀಯ ಪಕ್ಷಗಳೂ ಈಗ ಮುಂಬರುವ ಚುನಾವಣೆಯತ್ತ ದೃಷ್ಟಿ ನೆಟ್ಟಿವೆ. ಹಾಗಾಗೇ ಮುಂದಿನ ದಿನಗಳಲ್ಲಿ ಭಾರತದ ರಾಜಕೀಯ ಚಿತ್ರಣದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಕೇಂದ್ರ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಜಾರಿ ಮಾಡಲು ಮೇರೆ ಮೀರಿ ಪ್ರಯತ್ನಿಸುತ್ತಿದೆ. ಅಲ್ಲದೆ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ(ಎಐಸಿಸಿ)ಸೇರಿದಂತೆ, ಕೆಲವು 'ರಾಜ್ಯ ಕಾಂಗ್ರೆಸ್ ಸಮಿತಿ'ಗಳನ್ನು ಪರಿಷ್ಕರಿಸುವ ಕೆಲಸಕ್ಕೂ ಅದು ಮನಸ್ಸು ಮಾಡಿದೆ. ಇನ್ನೊಂದೆಡೆ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿಯವರನ್ನು ತನ್ನ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದೆ. ರಾಜಕೀಯವಾಗಿ ಮಹತ್ವ ಪಡೆದಿರುವ ಉತ್ತರಪ್ರದೇಶದ ಉಸ್ತುವಾರಿಯನ್ನು ನರೇಂದ್ರ ಮೋದಿಯವರ ಆಪ್ತ, ಅಮಿತ್ ಶಾ ಅವರಿಗೆ ಕೊಡಲಾಗಿದೆ. ಇನ್ನು ತನ್ನ ಬಹುಕಾಲದ ಮಿತ್ರ ಬಿಜೆಪಿಯಿಂದ ಹೊರ ಬಂದಿರುವ ಜೆಡಿ(ಯು), ಈಗ ಮುಸ್ಲಿಂ ಮತಗಳನ್ನು ಸೆಳೆಯುವತ್ತ ತನ್ನ ಚಿತ್ತವನ್ನು ಕೇಂದ್ರೀಕರಿಸಿದೆ.
ಮೇಲ್ನೋಟಕ್ಕೆ ಕೇಂದ್ರ ಕಾಂಗ್ರೆಸ್ ಹಲವಾರು ಹಗರಣಗಳಿಂದಾಗಿ ಮತ್ತು ಭ್ರಷ್ಟಾಚಾರಗಳಿಂದಾಗಿ ಹೈರಾಣಾಗಿ ಸೊರಗಿರುವಂತೆ ಕಾಣುತ್ತಿದ್ದರೂ, ಅದನ್ನು ದುರ್ಬಲವಾಗಿದೆ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅದು ಇಂದಿಗೂ ಪ್ರಬಲ ಶಕ್ತಿಯೇ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಇಂದು ಕಾಂಗ್ರೆಸ್ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಬಲವಾಗಿ ನೆಲೆಯೂರಿರುವ ಪಕ್ಷ. ಬಿಜೆಪಿ ಗಟ್ಟಿಯಾಗಿರುವುದು ಕೆಲವು ನಿರ್ದಿಷ್ಟ ರಾಜ್ಯಗಳಲ್ಲಷ್ಟೇ. ಆದ್ದರಿಂದ ಅದು ಮುಂಬರುವ ಚುನಾವಣೆಗಳಲ್ಲಿ ಅತ್ಯಧಿಕ ಲಾಭ ಪಡೆಯಲು ಆ ಪ್ರದೇಶಗಳತ್ತಲೇ ತನ್ನ ಧ್ಯಾನವನ್ನು ಕೇಂದ್ರೀಕರಿಸುವುದು ಒಳಿತು. ಇನ್ನು ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಬಲವಾಗಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ ಮಾತ್ರ. ಒಂದು ವೇಳೆ ನರೇಂದ್ರ ಮೋದಿ ಮತ್ತವರ ತಂಡ 2014ರ ಚುನಾವಣೆಗಳಲ್ಲಿ 200ಕ್ಕಿಂತಲೂ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕು ಎಂದು ಆಶಿಸುತ್ತಿದೆಯೆಂದರೆ, ಕರ್ನಾಟಕದಲ್ಲಿ 15ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲದೆ ಅವರಿಗೆ ಅಂದುಕೊಂಡದ್ದನ್ನು ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇಂಥ ಪ್ರಶ್ನೆ ಎದ್ದಾಗಲೇ ಯಡಿಯೂರಪ್ಪನವರ ಅವಶ್ಯಕತೆ ಪ್ರಬಲವಾಗಿ ಕಾಣಿಸಿಕೊಳ್ಳುತ್ತದೆ. ಏಕೆ ಬಿಜೆಪಿ ಯಡಿಯೂರಪ್ಪನವರನ್ನು ಮತ್ತೆ ತನ್ನೊಳಗೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಕೆಲವೊಂದು ಕಾರಣಗಳನ್ನು ನಾನಿಲ್ಲಿ ಕೊಡುತ್ತಿದ್ದೇನೆ.
ಅವ್ಯಾವುವೆಂದರೆ....
1) ಕರ್ನಾಟಕ ಬಿಜೆಪಿಯ ಪ್ರಸಕ್ತ ನಾಯಕತ್ವದಲ್ಲಿ ಸಾಮರಸ್ಯದ ಕೊರತೆ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿದೆ. ರಾಜ್ಯ ಬಿಜೆಪಿಗೆ ಇಂದು ಪ್ರಬಲ ನಾಯಕನ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ನಾಯಕರನ್ನೆಲ್ಲ ಒಟ್ಟಾಗಿ ಸೇರಿಸುವ ಅಥವಾ ಈ ನಾಯಕರಿಲ್ಲದೆಯೂ ಪಕ್ಷಕ್ಕೆ ಮತಗಳನ್ನು ಗಳಿಸಿಕೊಡಬಲ್ಲ ವ್ಯಕ್ತಿ ಅದಕ್ಕೀಗ ಬೇಕಾಗಿದೆ.
2) ಯಡಿಯೂರಪ್ಪನವರು ಬಿಜೆಪಿ ತೊರೆದ ಮೇಲೆ ರಾಜ್ಯದ ಬಿಜೆಪಿ ನಾಯಕತ್ವ, ಬೇರುಮಟ್ಟದಿಂದ ಪಕ್ಷವನ್ನು ಭದ್ರಪಡಿಸುವ ಕೆಲಸದಲ್ಲಿ ವಿಫಲವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿನ ವೈಫಲ್ಯಗಳು ಇವರ ದೌರ್ಬಲ್ಯವನ್ನು ಸ್ಪಷ್ಟವಾಗಿ ಬಹಿರಂಗಮಾಡಿದವು.
3) ಬಿಜೆಪಿ ಕರ್ನಾಟಕದಲ್ಲಿ ಯಶಸ್ವಿಯಾಗಬೇಕಾದರೆ ಅದಕ್ಕೆ ಪ್ರಬಲ ನಾಯಕನೊಬ್ಬನ ಅವಶ್ಯಕತೆಯಿದೆ. ಅದೂ ಪ್ರಬಲ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯದ್ದು. ಹಾಗೆ ನೋಡಿದರೆ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಡಿ.ವಿ. ಸದಾನಂದಗೌಡ ಅವರು ಶಕ್ತಿಯುತ ಸಮುದಾಯಗಳಿಂದಲೇ ಬಂದವರಾದರೂ, ತಮ್ಮ ಜಾತಿಯ ಮತಗಳನ್ನು ಬಿಜೆಪಿಯ ಜೋಳಿಗೆಗೆ ತಂದು ತುಂಬಲು ಅವರು ವಿಫಲರಾದರು. ಇನ್ನೊಂದೆಡೆ ಯಡಿಯೂರಪ್ಪನವರು, ಲಿಂಗಾಯತರು ಬಹುಸಂಖ್ಯಾತರಾಗಿರುವ ಚಾಮರಾಜನಗರದಂಥ ಜಿಲ್ಲೆಯಲ್ಲಿ ಕಾಂಗ್ರೆಸ್ನೊಂದಿಗೆ ಉತ್ತಮ ಹೋರಾಟ ನಡೆಸಿದರು.
4) ಪ್ರಸಕ್ತ ಬಿಜೆಪಿಯಲ್ಲಿರುವ ಯಾವೊಬ್ಬ ನಾಯಕನಿಗೂ ಯಡಿಯೂರಪ್ಪನವರಿಗಿದ್ದಂಥ ವರ್ಚಸ್ಸಿಲ್ಲ ಅಥವಾ ಅವರುಗಳಿಗೆ ರಾಜ್ಯವ್ಯಾಪಿ ಬೆಂಬಲಿಗರೂ ಇಲ್ಲ. ಇತ್ತ ಯಡಿಯೂರಪ್ಪನವರು ಚುನಾವಣಾ ಪ್ರಚಾರದ ಸಮಯದಲ್ಲಿ ಬೀದರ್ನಿಂದ ಹಿಡಿದು ಚಾಮರಾಜನಗರದವರೆಗೆ ಬೃಹತ್ ಜನಸಮೂಹವನ್ನು ಸೆಳೆಯುತ್ತಾ ಹೋಗುವಲ್ಲಿ ಸಫಲರಾದದ್ದನ್ನು ನೋಡಿಯೇ ಇದ್ದೇವೆ.
5) ಬಿಎಸ್ವೈ ಅವರನ್ನು 'ಚುನಾವಣಾ ನಿರ್ವಹಣಾ ಕಲೆಯ ಮಾಸ್ಟರ್' ಎಂದೇ ಕರೆಯಬಹುದು. ಹೆಚ್ಚು ವೈಭವದಿಂದ ಅಖಾಡಕ್ಕೆ ಇಳಿಯುವ ಅವರು ಎದುರಾಳಿ ಪಕ್ಷಗಳ ಜಂಘಾಬಲವೇ ಉಡುಗಿಹೋಗುವಂತೆ ಮಾಡಿಬಿಡುತ್ತಾರೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಬಹುತೇಕ ಅಭ್ಯರ್ಥಿಗಳು, ತಮ್ಮ ಸೋಲಿಗೆ ಹಣದ ಕೊರತೆಯೇ ಮುಖ್ಯಕಾರಣ ಎಂದು ಗೋಳಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ಹೇಗೆ ಫಂಡ್ ಕಲೆಹಾಕಬೇಕು ಎನ್ನುವ ಕಲೆ ಗೊತ್ತಿದೆ. ಅವರು ಚುನಾವಣೆಗಳಿಗಾಗಿ ಮತ್ತು ಪಕ್ಷದ ಸಾಂಸ್ಥಿಕ ಖರ್ಚುಗಳಿಗಾಗಿಯೂ ಹಣ ಸಂಗ್ರಹಿಸಬಲ್ಲರು.
6) ಕೊನೆಯದಾಗಿ, 'ಮೋದಿ'ಯವರ ಪಾಪುಲಾರಿಟಿಯ ಲಾಭ ಮಾಡಿಕೊಂಡು ತಾವು ಚುನಾವಣೆ ಎದುರಿಸುತ್ತೇವೆ ಎಂದು ಹೊರಟಿರುವ ಬಿಜೆಪಿಯ ನಡೆ ನಿಜಕ್ಕೂ ಮೂರ್ಖತನದ್ದು ಎಂದೇ ಹೇಳಬೇಕು. ಏಕೆಂದರೆ ಮೋದಿಯವರ ಪ್ರಖ್ಯಾತಿ 'ಮತಗಳಾಗಿ' ಪರಿವರ್ತನೆಯಾಗಬೇಕಾದರೆ ದೊಡ್ಡ ಮಟ್ಟದಲ್ಲಿ ರಾಜ್ಯಗಳ ಬಲಿಷ್ಠ ನಾಯಕರ ಮತ್ತು ಪಕ್ಷದ ಬೆಂಬಲ ಅವರಿಗೆ ಬೇಕಾಗುತ್ತದೆ.
ಒಂದು ವೇಳೆ ದಕ್ಷಿಣ ಭಾರತದಿಂದ 10ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸುತ್ತಿದ್ದರೆ, ಅದು ಯಡಿಯೂರಪ್ಪನವರನ್ನು ಮರಳಿ ಮನೆಗೆ ಕರೆತರಲೇಬೇಕು.
- ಆಮೋದ್ ಹೆಗಡೆ