ಕೃಷ್ಣೆಯ ಕಣ್ಣೀರಿನಲ್ಲಿ ಬರೀ ರಾಜಕೀಯದ ಕೆಸರು
ಬಾಗಲಕೋಟೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಇನ್ನಿತರ ಅಂದರೆ ಸದಾ ಬರಗಾಲ ಎದುರಿಸುತ್ತಿರುವ ಜಿಲ್ಲೆಗಳನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು. ಆ ಮೂಲಕ ರಾಷ್ಟ್ರೀಯ ಸಂಪತ್ತನ್ನು ಹೆಚ್ಚಿಸಬೇಕು ಎನ್ನುವ ಸದುದ್ದೇಶದಿಂದ ಆಲಮಟ್ಟಿ ಬಳಿ ಕೃಷ್ಣೆಗೆ ಅಣೆ ನಿರ್ಮಿಸಿ ದಶಕಗಳೇ ಉರುಳಿದ್ದರೂ ನಿಗದಿತ ಗುರಿ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲು ತುಂಬ ನೋವು ಆಗುತ್ತದೆ. ನಿಜಕ್ಕೂ ಇದು ನಮ್ಮನ್ನಾಳುವವರ ರಾಜಕೀಯ ಇಚ್ಛಾಶಕ್ತಿ ಮತ್ತು ಜನಪರ ಕಳಕಳಿಗೆ ಹಿಡಿದ ದರ್ಪಣ.
ಅಣೆಕಟ್ಟೆಯಲ್ಲಿ ನೀರು ನಿಲ್ಲುತ್ತದೆ. ಅದರಿಂದ ಬರಿದಾದ ಭೂಮಿಯಲ್ಲಿ ಕನಸಿನ ಹಸಿರು ಚಿಗುರುತ್ತದೆ. ರಾಜ್ಯದ ಇತರ ಭಾಗದ ರೈತರಂತೆ ನಾವೂ ಹೆಮ್ಮೆಯಿಂದ ಬಾಳುತ್ತೇವೆ ಎನ್ನುವ ಭರವಸೆಯೊಂದಿಗೆ ಹಸಿರು ಕ್ರಾಂತಿಗಾಗಿ ಎದುರು ನೋಡುತ್ತ ಅದೆಷ್ಟೋ ರೈತರು, ರೈತ ಮುಖಂಡರು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಚಿಂತಿಸಿದವರು ಮಣ್ಣು ಸೇರಿದರೇ ವಿನಹ ಅವರ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟುವ, ಆ ಕನಸುಗಳನ್ನು ಸಾಕಾರಗೊಳಿಸಿ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಿದ ನಿದರ್ಶನಗಳೇ ಇಲ್ಲ.
ಇನ್ನೊಂದು ದುರಂತ ಎಂದರೆ ಈ ಕೃಷ್ಣೆಯ ಹೆಸರು ಹೇಳಿ, ಹಿನ್ನೀರಿನ ಮುಳುಗಡೆ ಸಮಸ್ಯೆ ಮುಂದೆ ಮಾಡಿ ಹಲವರು ರಾಜಕೀಯ ಭವಿಷ್ಯ ಕಂಡುಕೊಂಡಿದ್ದರೆ, ಕೃಷ್ಣೆಯನ್ನೇ ನಂಬಿದವರು ಮತ್ತು ಹಿನ್ನೀರಿನ ಸಂತ್ರಸ್ತರು ಮಾತ್ರ ಹಾಗೆಯೇ ಉಳಿದಿದ್ದಾರೆ. ಅಣೆಯಲ್ಲಿ ನೀರು ಹಿಡಿದಿದ್ದೇ ಆಯಿತು. ಜನತೆಯನ್ನು ಒಕ್ಕಲೆಬ್ಬಿಸಿದ್ದೇ ಸಾಧನೆ ಎಂಬಂತೆ ವರ್ತಿಸುತ್ತಿರುವ ಸರ್ಕಾರಗಳಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪುರುಸೊತ್ತು ಇಲ್ಲದಾಗಿದೆ. ಈ ಸಮಸ್ಯೆ ನೀಗಿದರೆ ಹೇಳಿಕೊಳ್ಳಲು, ಹೋರಾಟಕ್ಕೆ ವಿಷಯವೇ ಇಲ್ಲದಾಗುತ್ತದೆ ಎನ್ನುವ ದೂರಾ (ದುರಾ)ಲೋಚನೆಯೂ ಇದರಲ್ಲಿ ಅಡಗಿದಂತಿದೆ. ಹಾಗಾಗಿ ಸಂತ್ರಸ್ತರು ಮತ್ತು ರೈತರ ಎದುರು ಕಳಕಳಿ ವ್ಯಕ್ತಪಡಿಸುವ ರಾಜಕಾರಣಿಗಳ ನಡವಳಿಕೆ ಮೊಸಳೆ ಕಣ್ಣೀರು ಎನ್ನದೇ ವಿಧಿಯಿಲ್ಲ.
ನಾಡಿಗೆ ಒಳ್ಳೆಯದಾಗಲೆಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತ್ಯಾಗ ಜೀವಿಗಳಿವರು ಸಂತ್ರಸ್ತರು. ಇಂಥ ತ್ಯಾಗಿಗಳಿಗೆ ಸರ್ಕಾರದಿಂದ ಇನ್ನೂ ಪರಿಹಾರ, ಸೌಲಭ್ಯಗಳು ದೊರಕಬೇಕಾಗಿದೆ. ಅಲ್ಲದೆ ನಿರಾಶ್ರಿತರಾದವರಿಗೆ ದುಡಿಮೆ ಬೇಕು. ಬೇಕೆಂದ ಮಾತ್ರಕ್ಕೆ ಸರಿದೂಗದ ಕಾರ್ಖಾನೆಗಳು ಬೇಕಿಲ್ಲ. ಸ್ಥಾನಿಕವಾಗಿ ಸರಿಹೋಗುವ ದೊಡ್ಡ ಕೈಗಾರಿಕೆ, ಫ್ಯಾಕ್ಟರಿಗಳನ್ನು ಸರ್ಕಾರವೇ ಮುಂದೆ ನಿಂತು ಪ್ರಾರಂಭಿಸಿದರೆ ಮಾತ್ರ ಜನರಿಗೆ ಉದ್ಯೋಗಾವಕಾಶ ಕಲ್ಪಿಸದಂತಾಗುತ್ತದೆ. ನಿರಾಶ್ರಿತರು ನೆಮ್ಮದಿ ಉಸಿರು ಬಿಡುವಂತಾಗುತ್ತದೆ.
ಸರ್ಕಾರ ಸಂತ್ರಸ್ತರಿಗೆ ಬರೀ ಸಮಾಧಾನ ಹೇಳುವ ಕೆಲಸ ಮಾಡಿದೆ. ಕೆಲವರಿಗೆ ಪರಿಹಾರಧನ ಕೊಟ್ಟರೆ ಅವರಿಗೆ ಭೂಮಿ ಕೊಟ್ಟಿಲ್ಲ. ಕೆಲವರಿಗೆ ಭೂಮಿ ಕೊಟ್ಟರೆ ಪರಿಹಾರ ಧನ ನೀಡಿಲ್ಲ. ನೊಂದವರು ಸರ್ಕಾರದ ಬಾಗಿಲು ತಟ್ಟಿ ತಟ್ಟಿ ಕಣ್ಣೀರಿಡುತ್ತಿದ್ದಾರೆ. ಇನ್ನಾದರು ಇಂಥವರಿಗೆ ಸರಿಯಾದ ಪರಿಹಾರ ಒದಗಿಸಿ ಅವರಿಗೊಂದು ಒಳ್ಳೆಯ ಸೂರು ಕೊಡಬೇಕಿದೆ.
ಈ ಮೊದಲು ಬಾಗಲಕೋಟೆ ನಗರ ಉತ್ತರ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಯ ವ್ಯಾಪಾರಿ ಕೇಂದ್ರ ಬಿಂದುವಾಗಿತ್ತು. ಮುಳುಗಡೆಯಿಂದಾಗಿ ಈಗ ವ್ಯಾಪಾರದಲ್ಲಿ ಅತಿ ಹಿಂದೆ ಬಿದ್ದಿದೆ. ಹೊಸ ಪುನರ್ವಸತಿ ಕೇಂದ್ರವಾಗಿರುವ ನವನಗರದಲ್ಲಿ ಸೂಕ್ತ ವ್ಯಾಪಾರ ಕೇಂದ್ರವಿಲ್ಲ. ಅಲ್ಲಿ ಮುಖ್ಯ ವ್ಯಾಪರ ಕೇಂದ್ರವಾದರೆ ಮತ್ತೆ ಮೊದಲಿನಂತೆ ವ್ಯಾಪಾರ ಕೇಂದ್ರವಾಗಲು ಸಾಧ್ಯವಿದೆ.
ಸದ್ಯ ನವನಗರವನ್ನು ವಾಣಿಜ್ಯ ಕೇಂದ್ರವನ್ನಾಗಿಸಲು ವಿಪುಲ ಅವಕಾಶಗಳಿದ್ದು ರಾಜ್ಯ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ. ಬಾಗಲಕೋಟೆ, ನವನಗರ ನಗರವನ್ನು ಕರ ಮುಕ್ತ ನಗರವನ್ನಾಗಿ ಘೋಷಿಸಿದರೆ ಇದು ರಾಜ್ಯದಲ್ಲಿ ಉತ್ತಮ ವ್ಯಾಪಾರ ಕೇಂದ್ರವನ್ನಾಗಿ ಮಾಡಬಹುದು. ನವನಗರದಲ್ಲಿ ಮುಳುಗಡೆ ಸಂತ್ರಸ್ತರಿಗೆ ನಿವೇಶನ ನೀಡಿ ಕೈತೊಳೆದುಕೊಂಡಿರುವ ಸರ್ಕಾರಗಳು ಅವರಿಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕಿದೆ.
ಸುಪ್ರೀಂಕೋರ್ಟ್ ಆಲಮಟ್ಟಿ ಆಣೆಯನ್ನು 524 ಮೀಟರಿಗೆ ಎತ್ತರಿಸುವಂತೆ ಹಸಿರು ನಿಶಾನೆ ತೋರಿಸಿದ್ದು ಇದರಿಂದ ಜಿಲ್ಲೆಯ ಮತ್ತಷ್ಟು ಹಳ್ಳಿಗಳು ಮುಳುಗಡೆಯಾಗಲಿದ್ದು ಜೊತೆಗೆ ಮತ್ತೆ ಇನ್ನರ್ಧ ಬಾಗಲಕೋಟೆ ನಗರ ಮುಳುಗಡೆಯಾಗಲಿದೆ. ಆಣೆಯನ್ನು ಎತ್ತರಿಸಿದಾಗ ಬಾಗಲಕೋಟೆಯಲ್ಲಿ 527 ಮೀಟರ್ ವರೆಗೆ ನೀರು ಸಂಗ್ರಹವಾಗುತ್ತೆ. ಇದರಿಂದ ಬಾಗಲಕೋಟೆ ವ್ಯಾಣಿಜ್ಯ ವ್ಯಾಪಾರ ಸಂಪೂರ್ಣವಾಗಿ ತಟಸ್ಥವಾಗಲಿದೆ. ಇದರಿಂದ ಮತ್ತೆ ಬಾಗಲಕೋಟೆ ಮುಳುಗಡೆಯಿಂದ ತತ್ತರಿಸುವುದಲ್ಲದೆ ವ್ಯಾಪಾರ ವಹಿವಾಟು ನೆಲಕಚ್ಚಲಿದೆ.
ನವನಗರದಲ್ಲಿ ವಾಣಿಜ್ಯ ವಹಿವಾಟನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಸಾಕಷ್ಟು ಮುತವರ್ಜಿ ವಹಿಸಿಬೇಕು. ಕೈಗಾರಿಕೆಗಳಿಗೆ ನವನಗರದಲ್ಲಿ ಮೀಸಲಿಟ್ಟಿದ್ದ ಜಾಗೆಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ.್ಲ ಬೇಕಾಬಿಟ್ಟಿಯಾಗಿ ಅಲ್ಲಿಯ ಬೆಲೆಬಾಳುವ ಜಾಗೆಯನ್ನು ಹಂಚಿಕೆ ಮಾಡಲಾಗಿದೆ. ಕಳೆದ 8 ವರ್ಷಗಳಿಂದ ಜಿಲ್ಲೆಯವರೇ ಆದ ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿ ರಾಜ್ಯದಲ್ಲಿ ಎರಡು ಬಾರಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದರು. ರಾಜ್ಯಕ್ಕೆ ಈ ಸಮಾವೇಶದಿಂದ ಲಾಭ ಆಗಿದೆ. ಆದರೆ ಜಿಲ್ಲೆಗೆ ಮಾತ್ರ ಶೂನ್ಯ. ಜಿಲ್ಲೆಗೆ ಯಾವುದೇ ತೆರನಾದ ಲಾಭವಾಗಿಲ್ಲ, ಬರೀ ರಾಜಕೀಯ ಮಾಡುತ್ತಾ ಕಾಲ ಕಳೆದರೇ ವಿನಹ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರಿಲಿಲ್ಲ. ಮುಳುಗಡೆ ಮಾತ್ರ ನಿಂತಿಲ್ಲ.
ನವನಗರದ ಕೈಗಾರಿಕೆ ಪ್ರದೇಶದಲ್ಲಿ ಇರುವ ಕೈಗಾರಿಕೆ ಭೂಮಿಯನ್ನು ಯುವ ಉದ್ದಿಮೆಗಳಿಗೆ ನೀಡಿ ಅಲ್ಲಿ ಕೈಗಾರಿಕೆ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ನವನಗರ ಉತ್ತರ ಕರ್ನಾಟಕದಲ್ಲಿ ಒಂದು ಬೃಹತ್ ವಾಣಿಜ್ಯ ನಗರವನ್ನಾಗಿ ಕಾಣಬಹುದು. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಕೂಡಾ ಅಷ್ಟೆ ಮುಖ್ಯ. ಕಳೆದ ಸಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಾಂಗ್ರೆಸ್ ಎಸ್.ಎಂ. ಕೃಷ್ಣ ಅವರು ನವನಗರದ ಅಭಿವೃದ್ಧಿಗೆ 630 ಕೋಟಿ ಬಿಡುಗಡೆಮಾಡಿದ್ದರು. ಆ ಹಣ ನವನಗರದ ಅಭಿವೃದ್ಧಿಗೆ ಬಳಕೆಯಾಗಲು ಬಿಜೆಪಿ ಶಾಸಕರು ಬರಬೇಕಾಯಿತು. ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಬಾಗಲಕೋಟೆ ಸಮಸ್ಯೆ ನಿವಾರಣೆಗೆ ಸ್ವಲ್ಪಮಟ್ಟಿಗಾದರೂ ಶ್ರಮಿಸಬೇಕು. ಆದರೆ ರಾಜಕೀಯ ನಾಯಕರಲ್ಲಿ ಇಚ್ಛಾಶಕ್ತಿ ಕೊರತೆಯಿಂದಾಗಿ ಇಲ್ಲಿಯ ಸಮಸ್ಯೆ ಸಮಸ್ಯೆಯಾಗಿ ಉಳಿದಿದೆ.
ಕಾಂಗ್ರೆಸ್ ನಡಿಗೆ ಕೃಷ್ಣೆಯೆಡೆಗೆ ಹೊರಟು ನಿಂತಾಗ ಕಾಂಗ್ರೆಸ್ ಮುಖಂಡರು ಪ್ರತಿವರ್ಷ 10 ಸಾವಿರ ಕೋಟಿಯಂತೆ ಐದು ವರ್ಷದಲ್ಲಿ 50 ಸಾವಿರ ಕೋಟಿ ವ್ಯಯಿಸಿ ಕೃಷ್ಣಾ ಕೊಳ್ಳದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದನ್ನು ನಂಬಿ ಕೃಷ್ಣೆಯ ಮಕ್ಕಳು ಕಾಂಗ್ರೆಸ್ಸಿಗೆ ಮತ ನೀಡಿ ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿದ್ದಾರೆ. ಹಿಂದೆ ಇಂಥ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ. ಹಿಂದಿನ ಎಲ್ಲರೂ ನೀಡಿದ ಭಾಷೆಯನ್ನು ಮರೆತವರೇ! ಇವರಾದರೂ (ಸಿದ್ದರಾಮಯ್ಯ) ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ ಎನ್ನುವುದು ಈ ಭಾಗದ ಜನತೆಯ ನಿರೀಕ್ಷೆಯಾಗಿದೆ. ಕಾಂಗ್ರೆಸ್ ಕೈ ಈಗಲಾದರೂ ಕೃಷ್ಣೆಯ ಮಕ್ಕಳ ಕಣ್ಣೀರು ಒರೆಸೀತೇ?
ರಾಜ್ಯದಲ್ಲಿ ಕಳೆದ ತಿಂಗಳು ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಿದೆ. ಅದಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ 6 ಕಾಂಗ್ರೆಸ್ ಶಾಸಕರು ಪ್ರಮುಖ ಕಾರಣರಾಗಿದ್ದು, ಆರರಲ್ಲಿ ಇಬ್ಬರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದು ಇಬ್ಬರು ಸಚಿವರ ಜೊತೆ ಇನ್ನುಳಿದ 4 ಮಂದಿ ಶಾಸಕರು ಕೈಜೋಡಿಸಿ ಬಾಗಲಕೋಟೆ ನವನಗರದ ಸಮಸ್ಯೆಯನ್ನು ಪರಿಹರಿಸಬೇಕಿದೆ.
-ಚಂದ್ರಶೇಖರ ಜಿಗಜಿನ್ನಿ, ಸಂಪಾದಕರು
ಶ್ರಾವಣ ಕನ್ನಡ ದಿನಪತ್ರಿಕೆ