ಲೆವಿ ಅಕ್ಕಿ ನಂಬಿಕೊಂಡು ಯೋಜನೆ ಮಾಡಿಲ್ಲ!
ಅಗ್ಗದ ದರದಲ್ಲಿ ಅಕ್ಕಿ ಕೊಡುವ ಸರ್ಕಾರದ ಯೋಜನೆ ಸಂಬಂಧ ಹಲವು ಪ್ರಶ್ನೆಗಳು ತೂರಿಬರುತ್ತಿವೆ. ಅಂಥ ಕೆಲ ಪ್ರಶ್ನಾಸ್ತ್ರಗಳನ್ನು ಇಲ್ಲಿ ಎದುರಿಸಿದ್ದಾರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯ ಸಚಿವ ದಿನೇಶ್ ಗುಂಡೂರಾವ್. ಅಗ್ಗದ ಅಕ್ಕಿ ಯೋಜನೆ ಕೇವಲ ನಿರ್ಗತಿಕರಿಗೆ ಮಾತ್ರವಲ್ಲ, ಕೆಳ ಮಧ್ಯಮ ವರ್ಗದವರಿಗೂ ಇದರ ಪ್ರಯೋಜನವಿದೆ ಅನ್ನೋದು ಅವರ ವಾದ.
-ಅಗ್ಗದ ದರದಲ್ಲಿ ಅಕ್ಕಿ ಕೊಡುವುದು ನಿಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದರೂ, ಯಶಸ್ಸು- ಅಪಯಶಸ್ಸು ಎರಡರ ಹೊಣೆಯೂ ನಿಮ್ಮ ತಲೆಗೆ ಬರುತ್ತದೆ. ಏನು ಭಯ ಕಾಡ್ತಾ ಇದ್ಯಾ?
ಭಯ ಪಡುವಂತದ್ದು ಏನೂ ಇಲ್ಲ. ಆದರೆ ಖಂಡಿತ ಒತ್ತಡ ಇದೆ. ಇದು ನಮ್ಮ ಸರ್ಕಾರದ ಮಹತ್ವದ ಯೋಜನೆ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಯೋಜನೆ ಜಾರಿಗೊಳಿಸುವುದಕ್ಕೆ ಸರ್ಕಾರದ ಬೆಂಬಲ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾರ್ಗದರ್ಶನವಿದೆ. ಹೀಗಾಗಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇನೆ. ಅಕ್ಕಿ ಸಂಗ್ರಹಣೆ, ಹಂಚಿಕೆ ಮತ್ತು ಉಳಿತಾಯ ದೊಡ್ಡ ಸವಾಲು. ಆದರೆ ಜಾರಿಗೊಳಿಸುವುದೇನು ಕಷ್ಟವಲ್ಲ. ಇದು ಯಶಸ್ವಿಯಾದರೆ ಸರ್ಕಾರಕ್ಕೂ, ನನಗೂ ಹೆಗ್ಗಳಿಕೆ.
-ಬಡವರಿಗೇನೋ ಅಗ್ಗದ ಅಕ್ಕಿ ಕೊಡ್ತೀರಿ. ಹೊರೆ ಮಧ್ಯಮ ವರ್ಗದ ಮೇಲಾ? ಅಗತ್ಯ ವಸ್ತುಗಳು ತುಟ್ಟಿಯಾಗುವ ಭಯ ಕಾಡ್ತಾ ಇದೆ.
ವಿರೋಧ ಪಕ್ಷದವರು ಇದೇ ರೀತಿ ಹೇಳ್ತಾರೆ. ಅಗ್ಗದ ಅಕ್ಕಿ ಹೊರೆ ಮಧ್ಯಮ ವರ್ಗದ ಮೇಲೆ ಬೀಳುತ್ತದೆ ಎಂಬುದು ಕೇವಲ ಊಹಾಪೋಹ. ನಮ್ಮ ಉದ್ದೇಶ ಒಬ್ಬರಿಗೆ ಅನುಕೂಲ ಕಲ್ಪಿಸಿ ಇನ್ನೊಬ್ಬರಿಗೆ ಕಷ್ಟ ಕೊಡುವುದಲ್ಲ. ಈ ಯೋಜನೆಗಾಗಿ ನಾವು ನಮ್ಮದೇ ಮೂಲದಿಂದ ಸಂಪನ್ಮೂಲ ಕ್ರೋಢಿಕರಿಸುತ್ತೇವೆ. ಕೇಂದ್ರದ ನೆರವೂ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕರ ಹೆಚ್ಚಳ ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ. ಅದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಬಜೆಟ್ನಲ್ಲಿ ಘೋಷಣೆ ಮಾಡುತ್ತಾರೆ. ನನ್ನ ಬಳಿ ಅಂತೂ ಇದುವರೆಗೆ ಚರ್ಚೆ ನಡೆಸಿಲ್ಲ.
-ನಿಮ್ಮ ರಾಜಕೀಯ ಯೋಜನೆಗಾಗಿ ಪಾಪದ ಗಿರಣಿ ಮಾಲೀಕರ ಮೇಲೆ ಬರೆ ಏಕೆ? ಲೆವಿ ಸಂಗ್ರಹ ಹೆಚ್ಚಳ ಉದ್ದೇಶವಿದೆಯಂತೆ?
ನಾವು ಲೆವಿ ಅಕ್ಕಿ ನಂಬಿಕೊಂಡು ಈ ಯೋಜನೆ ಜಾರಿಗೆ ತರುತ್ತಿಲ್ಲ. ಅದರಿಂದ ಸಂಗ್ರಹವಾಗುವ ಅಕ್ಕಿಯನ್ನು ಅಬ್ಬಬ್ಬಾ ಎಂದರೆ ಒಂದು ತಿಂಗಳು ಹಂಚಿಕೆ ಮಾಡುವುದಕ್ಕೆ ಸಾಕು. ಹೀಗಿರುವಾಗ ಗಿರಣಿ ಮಾಲೀಕರಿಗೆ ಬರೆ ಹಾಕುವ ಪ್ರಶ್ನೆ ಎಲ್ಲಿದೆ ? ಆದರೆ ಒಂದು ವಿಚಾರ ನೆನಪಿನಲ್ಲಿಡಿ. ಲೆವಿ ಸಂಗ್ರಹ ಸಮರ್ಪಕವಾಗಿ ನಡೆದಿಲ್ಲ ಎಂದರೆ, ಆ ಸರ್ಕಾರ ಆಡಳಿತ ಲೋಪ ಎಸಗಿದೆ ಎಂದೇ ಅರ್ಥ. ನಾನು ಈ ಬಾರಿ ನಿಗದಿಪಡಿಸಿದ ಲೆವಿಯನ್ನು ಗಿರಣಿ ಮಾಲೀಕರು ಹಾಗೂ ವರ್ತಕರಿಂದ ನೂರಕ್ಕೆ ನೂರರಷ್ಟು ವಸೂಲಿ ಮಾಡಿಸುತ್ತೇನೆ. ಇದರಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಕಳೆದ ವರ್ಷ 3.5 ಲಕ್ಷ ಟನ್ ಲೆವಿ ಸಂಗ್ರಹ ಮಾಡಬೇಕಿತ್ತು. ಆದರೆ ಹಿಂದಿನ ಸರ್ಕಾರ 1.5 ಲಕ್ಷ ಟನ್ ನಿಗದಿಗೊಳಿಸಿತು. ಆದರೆ ಸಂಗ್ರಹವಾಗಿದ್ದು 59 ಸಾವಿರ ಟನ್ ಮಾತ್ರ. ಹೀಗಾಗಿ ಹಳೆ ಬಾಕಿ ಕೊಡಿ ಎಂದು ಗಿರಣಿ ಮಾಲೀಕರು ಹಾಗೂ ವರ್ತಕರ ಬಳಿ ಕೇಳಿದ್ದೇನೆ. ಅವರು ಸಂಗ್ರಹವಿಲ್ಲ ಎನ್ನುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮತ್ತೆ ಲೆವಿ ನಿಗದಿ ಮಾಡುತ್ತೇವೆ.
-ಹೇಗಾದರೂ ಯೋಜನೆ ಜಾರಿ ಮಾಡಿ ತೊಂದರೆ ಇಲ್ಲ. ಆದರೆ ಇದು ಸಿದ್ದರಾಮಯ್ಯನವರ ಕಾರ್ಯಕ್ರಮವೋ, ಕಾಂಗ್ರೆಸ್ ಕಾರ್ಯಕ್ರಮವೋ?
ನೋಡಿ ನಮ್ಮ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲೇ 1ಕ್ಕೆ 1 ಕೆ.ಜಿಯಂತೆ ಬಡ ಕುಟುಂಬಗಳಿಗೆ 30 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಅದನ್ನು ಜಾರಿಗೆ ತರುತ್ತಿದ್ದೇವೆ. ಹೀಗಾಗಿ ಇದು ನಮ್ಮ ಪಕ್ಷದ ಹಾಗೂ ಸರ್ಕಾರದ ಕಾರ್ಯಕ್ರಮ. ಸಿದ್ದರಾಮಯ್ಯನವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿರುವುದರಿಂದ ಈ ಯೋಜನೆಯ ಶ್ರೇಯಸ್ಸು ಖಂಡಿತವಾಗಿಯೂ ಅವರಿಗೆ ಸಲ್ಲುತ್ತದೆ.
-ಬಡತನ ನಿರ್ಮೂಲನೆ ಎಲ್ಲ ಸರ್ಕಾರದ ಗುರಿ. ಆದರೆ ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂದರೆ ಅಭಿವೃದ್ಧಿಯಾಗಿಲ್ಲವೇ? ನೀವು ಇನ್ನೆಷ್ಟು ಮಂದಿ ಬಡವರನ್ನು ಸೃಷ್ಟಿ ಮಾಡುತ್ತೀರಿ?
ನಮ್ಮ ರಾಜ್ಯದಲ್ಲಿ 99 ಲಕ್ಷ ಬಿಪಿಎಲ್ ಅಂತ್ಯೋದಯ ಕಾರ್ಡ್ದಾರರು ಇದ್ದಾರೆ. ಅನರ್ಹರು, ಬೋಗಸ್ ಕಾರ್ಡ್ ಪಡೆದುಕೊಂಡವರೂ ಇದ್ದಾರೆ. ಇದೆಲ್ಲವನ್ನೂ ನಾವು ಸರಿಪಡಿಸುತ್ತೇವೆ. ಇದಕ್ಕಾಗಿಯೇ ಪಡಿತರ ವ್ಯವಸ್ಥೆಯಲ್ಲಿ ಬಯೋವುಟ್ರಿಕ್ ಪದ್ಧತಿ ಜಾರಿಗೆ ತರುತ್ತಿದ್ದೇವೆ. ಆದರೆ ಅಗ್ಗದ ಅಕ್ಕಿ ಯೋಜನೆ ಕೇವಲ ನಿರ್ಗತಿಕರಿಗೆ ಮಾತ್ರವಲ್ಲ. ಕೆಳ ಮಧ್ಯಮ ವರ್ಗದವರಿಗೂ ಇದರ ಪ್ರಯೋಜನವಿದೆ. ಈ ಕಾರಣಕ್ಕಾಗಿಯೇ ಬಿಪಿಎಲ್ ಕಾರ್ಡ್ದಾರರಿಗೆ ಆದಾಯ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿಲ್ಲ. ಬಂಗಲೆ ಹೊಂದಿರುವವರನ್ನು ಹೊರತು ಪಡಿಸಿ, ಚಿಕ್ಕದಾದ ಸ್ವಂತ ಮನೆ, ದ್ವಿಚಕ್ರ ವಾಹನ, ಟಿವಿ, ಪ್ರಿಡ್ಜ್ ಹೊಂದಿರುವವರೂ ಬಿಪಿಎಲ್ ಕಾರ್ಡ್ ಪಡೆಯಬಹುದು. ನಾವು ಶ್ರೀಮಂತಿಕೆಯನ್ನು ಅಳೆಯುವುದಕ್ಕೆ ಮಾನದಂಡ ನಿಗದಿ ಮಾಡಿದ್ದೇವೆಯೇ ಹೊರತು ಬಡವರನ್ನು ಗುರುತಿಸುವುದಕ್ಕಲ್ಲ. ರಾಜ್ಯದ ಶೇ.70ರಷ್ಟು ಮಂದಿಯನ್ನು ಈ ಪಡಿತರ ವ್ಯವಸ್ಥೆಯ ಪರಿದಿಗೆ ತರುವುದು ನಮ್ಮ ಗುರಿ.
-ಆದರೆ ಹೆಚ್ಚು ಕಾರ್ಡ್ ಇರುವ ರಾಜ್ಯಕ್ಕೆ ಕಡಿಮೆ ಅಕ್ಕಿ ಕೊಡಬೇಕೆಂಬ ನಿಬಂಧನೆಯನ್ನು ನಿಮ್ಮದೇ ಕೇಂದ್ರ ಸರ್ಕಾರ ವಿಧಿಸಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಅಕ್ಕಿಯನ್ನೇ ಕೊಡಲಿಲ್ಲ. ನೀವು ಹೇಗೆ ಅಕ್ಕಿ ತರ್ತೀರಿ?
ಕೇಂದ್ರ ಸರ್ಕಾರ ನಮ್ಮ ರಾಜ್ಯದಲ್ಲಿ 32 ಲಕ್ಷ ಕುಟುಂಬಗಳಿಗೆ ಅಕ್ಕಿ ಪೂರೈಕೆ ಮಾಡುವ ಮಿತಿ ಹೊಂದಿದೆ. ಆದರೆ ನಾವು 98 ಲಕ್ಷ ಕುಟುಂಬಕ್ಕೆ ಅಕ್ಕಿ ಕೊಡುತ್ತಿದ್ದೇವೆ. ಇದು ನಮ್ಮ ಹೆಚ್ಚುವರಿ ಗುರಿ. ಇದಕ್ಕೂ ಕೇಂದ್ರ ನೆರವು ನೀಡುತ್ತದೆ. ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯಿದೆ ಎಂಬ ಮಹತ್ವದ ಯೋಜನೆಯನ್ನು ದೇಶದ ಎಲ್ಲ ಜನರ ಹಸಿವು ನೀಗಿಸುವುದಕ್ಕಾಗಿ ಜಾರಿಗೆ ತರಲು ಮುಂದಾಗಿದೆ. ಆದರೆ ಪ್ರತಿಪಕ್ಷ ಬಿಜೆಪಿ ವಿರೋಧಿಸಬೇಕೆಂಬ ಕಾರಣಕ್ಕೆ ಕಳೆದ ಎರಡು ಸಂಸತ್ ಅಧಿವೇಶನದಲ್ಲಿ ಈ ವಿಧೇಯಕ ಅಂಗೀಕಾರವಾಗುವುದಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ ಈ ಬಾರಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕವಾದರೂ ಇದನ್ನು ಜಾರಿಗೆ ತಂದೇ ತರುತ್ತದೆ. ಗ್ರಾಮೀಣ ಪ್ರದೇಶದ ಶೇ.75 ರಷ್ಟು ಹಾಗೂ ನಗರ ಪ್ರದೇಶದ ಶೇ.50ರಷ್ಟು ಜನರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಕೆ ಮಾಡುವುದು ಈ ಯೋಜನೆ ಗುರಿ. ಆದರೆ ರಾಜ್ಯದಲ್ಲಿ ನಾವು ಶೇ.75ರಷ್ಟು ಮಂದಿಯನ್ನು ಯೋಜನೆ ವ್ಯಾಪ್ತಿಯಲ್ಲಿ ತರಲು ಹೊರಟಿದ್ದೇವೆ. ಹೀಗಾಗಿ ಆಹಾರ ಭದ್ರತಾ ಕಾಯಿದೆ ಅಡಿ ರಾಜ್ಯಕ್ಕೆ ಇನ್ನಷ್ಟು ನೆರವು ಸಿಗುವುದರಲ್ಲಿ ಅನುಮಾನವಿಲ್ಲ.
-ಒಂದೆಡೆ ಸರ್ಕಾರ ಮಠ-ಮಾನ್ಯಗಳಿಗೆ ಅನುದಾನ ನೀಡುತ್ತದೆ. ಇನ್ನೊಂದೆಡೆ ನಿಮ್ಮ ಇಲಾಖೆಯಿಂದ ಅಕ್ಕಿಯನ್ನೂ ನೀಡುತ್ತಾರೆ. ಎರಡೆರಡು ಸೌಲಭ್ಯ ಅಗತ್ಯವಿದೆಯೇ?
ಮಠ-ಮಾನ್ಯಗಳು ನಡೆಸುತ್ತಿರುವ ಶಾಲೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಅಕ್ಕಿ ನೀಡಲೇಬೇಕು. ಅವು ಸಮಾಜ ಸೇವೆಗೆ ಶ್ರಮಿಸುವುದರಿಂದ ನೆರವು ನೀಡುವುದು ಕರ್ತವ್ಯ. ಆದರೆ ಅನುದಾನ ನೀಡುವುದು ಮಾತ್ರ ಅಪ್ಪಟ ರಾಜಕೀಯ ಉದ್ದೇಶದಿಂದ ಕೂಡಿರುತ್ತದೆ. ಹಿಂದಿನ ಸರ್ಕಾರ ಈ ಕೆಟ್ಟ ಪದ್ಧತಿಯನ್ನು ಜಾರಿಗೆ ತಂದಿತು. ಕೆಲವು ಮಠಗಳು ಈ ಹಣವನ್ನು ನಿರಾಕರಿಸಿ ತಮ್ಮ ಹಿರಿಮೆ ಮೆರೆದಿವೆ. ನನ್ನ ಪ್ರಕಾರ ಹಾಗೂ ಸಾರ್ವಜನಿಕರ ಪ್ರಕಾರ ಮಠ-ಮಾನ್ಯಗಳು ಸರ್ಕಾರದಿಂದ ನೆರವು ಪಡೆಯಬಾರದಿತ್ತು ಎಂಬ ಅಭಿಪ್ರಾಯವಿದೆ. ಇದರಿಂದ ಮಠ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಆದರೆ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ವಿವೇಚನೆಯಿಂದ ಕೆಲಸ ಮಾಡುತ್ತದೆ.
-ಅಕ್ಕಿ ಯೋಜನೆಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದೀರಿ, ನಿಮ್ಮ ಖಾತೆಗೆ ಇನ್ನು ಹಲವು ಜವಾಬ್ದಾರಿಗಳಿವೆ.
ಹೌದು. ಅಳತೆ ಮತ್ತು ಮಾಪನ, ಪೆಟ್ರೋಲ್ ಬಂಕ್ಗಳಲ್ಲಿ ಆಗುವ ಮೋಸ ತಡೆಯುವುದು, ಕಲಬೆರಕೆ ನಿಯಂತ್ರಣ, ವೇ ಬ್ರಿಡ್ಜ್ಗಳಲ್ಲಿ ಮೋಸ ತಡೆಯಬೇಕಿದೆ. ಹಂತಹಂತವಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ.
-ಸದ್ಯಕ್ಕೆ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ನೀವೇ ಹೈ ಪ್ರೊಫೈಲ್ ಸಚಿವ. ಏನ್ ಹೇಳ್ತೀರಿ?
ಅಕ್ಕಿ ಯೋಜನೆಯಿಂದ ನನ್ನ ಇಲಾಖೆಗೆ ಹೈ ಪ್ರೊಫೈಲ್ ಸ್ಥಾನಮಾನ ತಂದುಕೊಟ್ಟಿದೆ. ನೋಡೋಣ ಏನಾಗತ್ತೆ ಅಂತಾ. ಸರ್ಕಾರದ ಬೆಂಬಲ ಇದೆ. ಒಳ್ಳೆ ಕೆಲಸ ಮಾಡೋಕೆ ಪ್ರಯತ್ನ ಮಾಡ್ತೇನೆ.
-ರಾಘವೇಂದ್ರ ಭಟ್, ಕನ್ನಡಪ್ರಭ