ಹೊಸ ವಿಮರ್ಶೆ ಎಂದರೆ ಬರೀ ಅನುವಾದವೇ?
ಭಾರತೀಯ ಕಾವ್ಯ ಮೀಮಾಂಸೆಗೆ ಹಲವು ಶತಮಾನಗಳ ಇತಿಹಾಸವಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥ ಸಂಗತಿ. ಹಾಗೆಯೇ ಕನ್ನಡ ವಿಮರ್ಶಾ ಸಾಹಿತ್ಯದ ಹಿಂದೆ ಒಂದು ಸುದೀರ್ಘ ಚರಿತ್ರೆ ಇದೆ ಎನ್ನುವುದೂ ತಿಳಿದಿರುವ ಸಂಗತಿಯೇ. ಆಚಾರ್ಯ ತೀ.ನಂ. ಶ್ರೀ. ಅವರ ಭಾರತೀಯ ಕಾವ್ಯ ಮೀಮಾಂಸೆಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು, ಕನ್ನಡ, ಸಂಸ್ಕೃತಗಳಿಗೆ ಇದ್ದದ್ದು ಒಂದೇ ರೀತಿಯ ಸಾಹಿತ್ಯ ಪರಿಭಾಷೆ ಎನ್ನುವುದು ಸ್ಪಷ್ಟ. "ವಿಭಾವ, ಅನುಭಾವ, ವ್ಯಭಿಚಾರಿ ಸಂಯೋಗಾದ್ರಸ ನಿಷ್ಪತ್ತಿ" ಎನ್ನುವ ಸೂತ್ರ ರೂಪದ ಮಾತಿನ ಅಂತರ, ಹಲವಾರು ಶತಮಾನಗಳ ಅವಧಿಯಲ್ಲಿ ಹಲವಾರು ಕಾವ್ಯ ಮೀಮಾಂಸಕರ, ಅನೇಕ ಸಿದ್ಧಾಂತಗಳ ಮುಖಾಂತರ ಅಲಂಕಾರ, ರಸ, ಧ್ವನಿಯ ರೂಪ ತಾಳಿತು. ನಮಗೆ ಪರಿಚಯವಿದ್ದ ವಿಮರ್ಶೆಯ ಪರಿಭಾಷೆ ಎಂದರೆ ಈ ರಸ- ಔಚಿತ್ಯಗಳ ಪರಿಭಾಷೆಯೇ. ಕಾಲಾನುಕ್ರಮದಲ್ಲಿ ಗುಣ ರೀತಿ, ವಕ್ರೋಕ್ತಿ ಇತ್ಯಾದಿಗಳು ನಮ್ಮ ಪರಿಭಾಷೆಗೆ ಸೇರಿದವು. ಇದೇ ರೀತಿ ರಸ-ಧ್ವನಿ ಸಿದ್ಧಾಂತ ಭಾರತೀಯ ಆಧ್ಯಾತ್ಮ ಹಾಗೂ ವೇದಾಂತದ ಪರಿಭಾಷೆಯ ಅರ್ಥವನ್ನೂ ಒಳಗೊಂಡು 'ರಸ'ಕ್ಕೆ ಬ್ರಹ್ಮಾನಂದ ಸಹೋದರತ್ವವೂ ಪ್ರಾಪ್ತಿಯಾಯಿತು. ಈ ಪರಿಭಾಷೆಯ ಹಿಂದಿನ ಕಾವ್ಯ ಸ್ವರೂಪವೇ ಭಾರತೀಯ ಕಾವ್ಯದ ನಿಜ ಸ್ವರೂಪ ಎನ್ನುವ ದೃಷ್ಟಿಯೂ ಬೆಳೆಯಿತು.
ಇದು ಹೇಗೂ ಇರಲಿ, ಇದರ ಪರ-ವಿರೋಧ ಚರ್ಚೆ ಮಾಡುವುದು ನನ್ನ ಉದ್ದೇಶವಲ್ಲ. ಇಲ್ಲಿ ಈ ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಒಂದಿದೆ. ಅದು ಈ ಎಲ್ಲ ಕಾವ್ಯ ವಿಮರ್ಶೆಯ ಸಿದ್ಧಾಂತಗಳ ಪರಿಭಾಷೆಯೂ ಆಯಾ ಕಾಲದ ಸೃಜನಶೀಲ ಸಾಹಿತ್ಯದ ಅಡಿಯಲ್ಲೇ ಅದರ ಹಿನ್ನೆಲೆಯಲ್ಲೇ ಅಥವಾ ಅದರ ಬೆನ್ನಲ್ಲೇ ರೂಪುಗೊಂಡವು. ಅಂದಿನ ಕಾವ್ಯ ಪ್ರಪಂಚದ ಸಂದರ್ಭದ ಆಚೆ ಹೋಗಿ ವಿಮರ್ಶಕರು ಸಿದ್ಧಾಂತಗಳನ್ನು ಸೃಷ್ಟಿಸಲಿಲ್ಲ. ವಾಲ್ಮೀಕಿ, ಕಾಳಿದಾಸ, ಭವಭೂತಿ, ಭಾಸ ಮುಂತಾದವರ ಕಾವ್ಯಗಳ ಬೆಳಕಿನಲ್ಲಿ, ಅವುಗಳ ರಸ-ಧ್ವನಿ ವಿಶ್ಲೇಷಣೆಯಲ್ಲಿ ನಮ್ಮ ಸಾಹಿತ್ಯ ವಿಮರ್ಶೆಯ ಸಂಪತ್ತು ಬೆಳೆಯಿತು.
ಇಲ್ಲಿ, ಅಂದರೆ ಈ ವಿಮರ್ಶಾ ಜಗತ್ತಿನಲ್ಲಿ ಹೊರಗಡೆಯಿಂದ ಆಮದಾದ್ದೇನೂ ಇರಲಿಲ್ಲ. ಅದಕ್ಕೆ ಬೇರೆ, ಹೊರಗಿನಿಂದ ಸೇರ್ಪಡೆಯಾದದ್ದು ಎಂದರೆ ಬೇರೆ ಶಿಕ್ಷಾ ಕ್ರಮದಿಂದ, ಅಷ್ಟೆ. ಭಾರತೀಯ ಆಧ್ಯಾತ್ಮ, ತತ್ವಶಾಸ್ತ್ರಗಳು ಈ ವಿಮರ್ಶೆಯ ವ್ಯಾಪ್ತಿ, ಆಳವನ್ನು ವಿಸ್ತಾರ ಮಾಡಿದವು. ಅದೂ ಸಾಹಿತ್ಯ ವಿಮರ್ಶಕನ ಮನೋವೃತ್ತಿಯನ್ನು ಅನುಸರಿಸಿ. ಒಟ್ಟಾರೆ ಭಾರತೀಯ ಕಾವ್ಯ ಮೀಮಾಂಸೆ ರೂಪುಗೊಂಡದ್ದು ಅದು ತನಗೆ ದೊರೆತ, ಎದುರಾದ, ಮುಖಾಮುಖಿಯಾದ ಸೃಜನಶೀಲ ಕಾವ್ಯ ಸಂಪತ್ತಿನಿಂದ ಕಾವ್ಯವನ್ನು ಬದಿಗೆ ಸರಿಸಿ ಹೊರಗಿಟ್ಟು, ಇಲ್ಲಿ ಯಾವ ವಿಮರ್ಶಾ ಸಿದ್ಧಾಂತವೂ ಬೆಳೆಯಲಿಲ್ಲ. ಅದು ಮೂಲ ಕೃತಿಗೆ ನಿಷ್ಠವಾಗಿಯೇ ಇತ್ತು. ತನ್ನ ಸಾಹಿತ್ಯ ಸಂಪತ್ತಿನ ಸಂದರ್ಭದಲ್ಲಿ, ಕಾಲಕಾಲಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತ, ಶಬ್ದಾರ್ಥಗಳ ಅನೇಕ ಆಯಾಮಗಳನ್ನು ಖಚಿತವಾದ ಸಾಹಿತ್ಯಿಕ, ತಾತ್ವಿಕ ನೆಲೆಯಲ್ಲಿ ನಡೆಸಿತು.
ಈ ಅಂಶ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯ ಸಂಗತಿ. ಏಕೆಂದರೆ ಈ ಎಲ್ಲ ವಿಮರ್ಶೆ ನಿಜವಾದ ಅರ್ಥದಲ್ಲಿ ಸ್ವೋಪಜ್ಞತೆಯನ್ನು ಸಾಧಿಸಿತ್ತು. ಅದು ಬೇರೆ ಬೇರೆ ದಿಕ್ಕಿನಲ್ಲಿ ಬೆಳೆದು ಉಳಿಯುವಂತೆಯೂ ಮಾಡಿತು.
ನವೋದಯ ಕಾಲದ ವಿಮರ್ಶೆ ಒಂದು ರೀತಿಯಲ್ಲಿ ಇದಕ್ಕಿಂತ ಭಿನ್ನವಾದ ಹಾದಿಯನ್ನೇನೂ ತುಳಿಯಲಿಲ್ಲ. ಅದು ಭಿನ್ನವಾಗಿದ್ದು ಒಂದು ವಿಷಯದಲ್ಲಿ ಮಾತ್ರ. ತನ್ನ ಕಾಲದ ಹೊಸ ಸಾಹಿತ್ಯವನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ಅದನ್ನೂ ತನ್ನ ರುಚಿಯ ಒಂದು ಭಾಗವನ್ನಾಗಿಸಿಕೊಳ್ಳಲು ಅದು ಬೇರೆ ಬೇರೆ ಶಕ್ತಿ ಸ್ರೋತಗಳನ್ನು ನಿಸ್ಸಂಕೋಚವಾಗಿ ಹುಡುಕಿಕೊಂಡಿತು. ಇಂಗ್ಲೀಷ್, ಗ್ರೀಕ್, ಇಟಾಲಿಯನ್ ಸಾಹಿತಿಗಳು ಶತಶತಮಾನಗಳಿಂದ ನಮ್ಮ ವಿಮರ್ಶಾ ಪರಿಭಾಷೆಯ ಗೊಡವೆ ಇಲ್ಲದೆ ಭಿನ್ನವಾಗಿ ಬೆಳೆದವರು. ಇವರು ನೀಡಿದ ಪಂಥಾಹ್ವಾನವನ್ನು ಸ್ವೀಕರಿಸಿ, ಅವರಿಂದ ದಕ್ಕಬೇಕಾದ್ದೆಲ್ಲವನ್ನೂ ತಾನು ದಕ್ಕಿಸಿಕೊಂಡಿತು. ದಷ್ಟ ಪುಷ್ಟವಾಗಿ ಬೆಳೆಯಿತು. ಕೋಲ್ರಿಜ್, ವರ್ಡ್ಸ್ವರ್ಥ್, ಅರಿಸ್ಟಾಟಲ್, ಪ್ಲೇಟೋ, ಲಾಂಜೈನಸ್ ಅಂಥವರು ಯಾವ ದೃಷ್ಟಿಕೋನದಿಂದ ಸಾಹಿತ್ಯದ ಕೃಷಿ ಮಾಡಿದ್ದಾರೆ, ಅದರ ಕ್ರಮವನ್ನು ನಾವು ಹೇಗೆ ನಮ್ಮ ವಿಮರ್ಶಾಕ್ರಮದೊಡನೆ ಹೊಂದಿಸಿಕೊಳ್ಳಬೇಕು ಎನ್ನುವ ಬಗ್ಗೆ ಬಿ.ಎಂ.ಶ್ರೀ, ಮಾಸ್ತಿ, ಕುವೆಂಪು ಮುಂತಾದವರು ಒಂದು ತೆರೆದ ವಿಮರ್ಶಕ ಮನಸ್ಸಿನಿಂದ ಕೆಲಸ ಮಾಡಿದರು. ನಮ್ಮ ವಿಮರ್ಶೆಯ ಬೀಸು ದೊಡ್ಡದಾಯಿತು. ಅದರ ಆಯಾಮಗಳು ಅನೇಕವಾದವು, ಸಾಹಿತ್ಯಕ ಪರಿಭಾಷೆ ಹೆಚ್ಚು ಸಮೃದ್ಧವಾಯಿತು. ಮೌಲ್ಯ ಮಾಪನ ಕ್ರಮ, ತೌಲನಿಕ ವಿಧಾನಗಳು ಬೇರೆಯಾದವು. ಈ ಎಲ್ಲವೂ ಕನ್ನಡಕ್ಕೆ ಲಾಭ ತಂದುಕೊಟ್ಟ ಕೆಲಸವೇ. ನವೋದಯ ಸಾಹಿತ್ಯಕ್ಕೆ ಬಂದ ವೈವಿಧ್ಯತೆ, ಸಾಹಿತ್ಯ ಪ್ರಕಾರದ ಶ್ರೀಮಂತಿಕೆ ವಿಮರ್ಶೆಯನ್ನು ಆರೋಗ್ಯಕರ ನಿಟ್ಟಿನಲ್ಲಿ ಬೆಳೆಸಿತು. ಹೊಸ ಸಾಹಿತ್ಯದ ಜೊತೆ ಹೊಸ ವಿಮರ್ಶಾಕ್ರಮವು ನಿರ್ದಿಷ್ಟವಾಗಿ, ಆರೋಗ್ಯಕರವಾಗಿ ಬೆಳೆಸಿತು. ಈಗ ದೃಷ್ಟಿ ಸ್ವಲ್ಪ ಹೊರಳಿಸಿ, ನವೋದಯ ಹಾಗೂ ನವ್ಯದ ನಡುವೆ ಬಂದು ಹೋಗಿರುವ ಸಾಹಿತ್ಯ ಚಳವಳಿ, ಸಿದ್ಧಾಂತಗಳ ಬಗ್ಗೆ ಚರ್ಚೆ ಮಾಡದೆ ನಮ್ಮ ಕಾಲದ ಸಾಹಿತ್ಯ ವಿಮರ್ಶೆಯ ಬಗ್ಗೆ ವಿಚಾರ ಮಾಡುವುದು ಅಗತ್ಯ ಎನಿಸಿದೆ.
ನವ್ಯ ಸಾಹಿತ್ಯ ವಿಮರ್ಶೆ ಪ್ರಮುಖವಾಗಿ ಅನುವಾದ ಆಧಾರಿತ ವಿಮರ್ಶೆ. ಈ ಕ್ಷೇತ್ರದಲ್ಲಿ ಅನೇಕ ಧೀಮಂತರು ತಮ್ಮನ್ನು ತೊಡಗಿಸಿಕೊಂಡಿದ್ದರೂ ಒಂದೇ ಒಂದು ಸ್ವೋಪಜ್ಞ ಪರಿಕಲ್ಪನೆಯನ್ನು ಸೃಷ್ಟಿಸಲಿಲ್ಲ, ಕಟ್ಟಿಕೊಡಲಿಲ್ಲ. ಕೇವಲ ಅನುವಾದ ಕ್ರಿಯೆ ಅವರಿಗೆ ಹೊಸ ಹರ್ಷದ ಬಾಗಿಲು ತೆರೆದು, ತಮ್ಮ ಶಬ್ದ ಸಂಪತ್ತಿನ ಸಂಭ್ರಮದಲ್ಲಿ ತಾವೇ ಮೈ ಮರೆಯುವಂತೆ ಮಾಡಿತು ಎನ್ನುವುದು ಉತ್ಪೇಕ್ಷೆಯ ಮಾತು ಅಲ್ಲ. ಮುಂದೆ ಒದಗಿಸಿರುವ ಪರಿಭಾಷೆಯ ಯಾದಿಯನ್ನು ನೋಡಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ. ನವ್ಯ ವಿಮರ್ಶೆಯ ಕಸುಬಿನಲ್ಲಿ ತೊಡಗಿಸಿಕೊಂಡವರಿಗೆಲ್ಲಾ ಅತ್ಯಂತ ಪ್ರಿಯವಾದ ಬಹು ಬಳಕೆಯಲ್ಲಿರುವ ಪಟ್ಟಿ ಇಲ್ಲಿದೆ. ಅದರ ಜೊತೆಗೆ ಇದರ ಇಂಗ್ಲಿಷ್ ಸಂವಾದಿ ಪಟ್ಟಿಯೂ ಇದೆ.
"ಕೃತಿಯಲ್ಲಿ ಮೂಡಿ ಬರದ ಆದರ್ಶ, ಭಾಷೆಯಲ್ಲಿ ಮೈದಾಳದ ಅನುಭವ," ಎನ್ನುವ ಮಾತು ಲೀವೀಸ್ನ :Intentions are nothing except as realized in language" ದ ಅನುವಾದ. ಇದೇ ರೀತಿ "ಭಾವಾಭಿನಯ = enactment in language "ದ ಸೃಜನಶೀಲ ಅನುಭವಾನ್ವೇಷಣೆ = explorative creative use of language " ವಸ್ತು ಪ್ರತಿರೂಪ=objective Correlative/ ಅಮೂರ್ತ, ಮೂರ್ತ = abstract, concrete; ಕರ್ಷಣೆ- Tension; ಸಂವೇದನಾ ಪಲ್ಲಟ; Change in Sensibility;ವ್ಯಂಗ್ಯ - Irony; ambiguity- ಅರ್ಥ ಸಂದಿಗ್ದತೆಯ ಜೊತೆ ಒಳಾರ್ಥ ಶ್ರೀಮಂತಿಕೆ; ವೈರುಧ್ಯ = Contraiety, ಇವುಗಳ ಜೊತೆಗೆ deconstruction ವಿರಚನಾ ಕ್ರಿಯೆ; Post- Structaralism-ವಿನ್ಯಾಸೋತ್ತರ; archefype -ಆದ್ಯಪ್ರತಿ, ಮತ್ತಿಂಥವನ್ನೂ ಪುಟ ತುಂಬಿಸುವಷ್ಟು ದಾಖಲಿಸಬಹುದು.
ಸಂಕಟದ ಸಂಗತಿ ಎಂದರೆ ನವ್ಯರು ಅನುವಾದದ ಹರ್ಷದಲ್ಲಿ ತಾವೇ ಒಂದು ಸ್ವೋಪಜ್ಞ ಕಾವ್ಯ ಸಿದ್ಧಾಂತವನ್ನು ಸೃಷ್ಟಿಸಿದ್ದೇವೆಂದು ಭ್ರಮಿಸಿದ್ದು, ಪಾಶ್ಚಾತ್ಯ ಕಾವ್ಯದ ಸಂದರ್ಭದಲ್ಲಿ, ಅಲ್ಲಿನ ಸೃಷ್ಟಿಶೀಲ ಬರವಣಿಗೆಯ ಹಿನ್ನೆಲೆಯಲ್ಲಿ ಸಹಜವಾಗಿ ಬಂದ ಇಂಥ ಮಾತುಗಳನ್ನು ಅನುವಾದ ಮಾಡಿ ತಾವು ಅವುಗಳ, ಅವುಗಳ ಹಿಂದಿನ ಸಿದ್ಧಾಂತವನ್ನು ಕನ್ನಡ ಜನಕ್ಕೆ ಕಾಣಿಸಿದವರು ಎನ್ನುವ ಭ್ರಮೆಯಲ್ಲಿ ಓಲಾಡಿದ್ದು, ಇದೇ ನಮ್ಮ ಸಂಕಟದ ಕಾರಣ. ಇಂಥ ಅನುವಾದದ ಸಂಭ್ರಮ ಸಂಸ್ಕೃತ ಸಾಹಿತ್ಯ ವಿಮರ್ಶೆಯಲ್ಲಾಗಲಿ ನವೋದಯ ಕಾಲದ ವಿಮರ್ಶೆಯಲ್ಲಾಗಲಿ ಕಾಣುವುದಿಲ್ಲ. ಅದಕ್ಕೆ ಬದಲಾಗಿ ಕುವೆಂಪು, ಪುತಿನ, ಅಂಥವರ ಸಾಹಚರ್ಯದಲ್ಲಿ ಹೊಸ ವಿಮರ್ಶೆಯ ಪರಿಭಾಷೆಯನ್ನು ಸೃಷ್ಟಿಸಿತು. "ಭವ ನಿಮಜ್ಜನ ಚಾತುರ್ಯ; ಲಘಿಮಾ ಕೌಶಲ; ಭೂಮದ ಕಲ್ಪನೆ; ಭವ್ಯತೆ; ಪೂರ್ಣದೃಷ್ಟಿ" ಯಂಥ ಪರಿಕಲ್ಪನೆಗಳು ಅವರ ಕಾವ್ಯ ರಚನಾ ಸಂದರ್ಭದಲ್ಲೇ ಬಂದವು.
ನವ್ಯ ವಿಮರ್ಶೆಯ ಕಾಲದಲ್ಲಿ ಒಂದೇ ಒಂದು ಸ್ವೋಪಜ್ಞ ಪರಿಕಲ್ಪನೆಯೂ ಬರಲಿಲ್ಲ. ಅದಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಗಳ ಅನುವಾದದ ಆನಂದದಲ್ಲಿ ಅದು ಮೈ ಮರೆಯಿತು. ನಾವು ವಿಮರ್ಶೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಅನುವಾದದಲ್ಲಿ ಮುಳುಗಿ ಹೋಗಿದ್ದೇವೆ ಎನ್ನುವ ಎಚ್ಚರವೂ ಬರಲಿಲ್ಲ.
ಇದಕ್ಕೆ ನಮ್ಮ ಇಂಗ್ಲಿಷ್ ಆಶ್ರಯಿತ ವಿಮರ್ಶಕರು ಮುಖ್ಯ ಕಾರಣಕರ್ತರು. ಪ್ರತಿ ಅರ್ಧ ದಶಕ, ದಶಕಗಳಲ್ಲಿ ಪಾಶ್ಚಿಮಾತ್ಯ ಪ್ರಪಂಚದಲ್ಲಿ ಶೋಕಿಗೆಂದು ಹುಟ್ಟಿ ಬಂದ ಎಲ್ಲ ಸಿದ್ಧಾಂತಗಳನ್ನು ಇಂಗ್ಲಿಷ್ನಲ್ಲಿ ಇಡಿಯಾಗಿ ನುಂಗಿ ಕನ್ನಡದಲ್ಲಿ ಕಟ್ಟಿದ್ದರ ಪರಿಣಾಮವೇ ಈ ಭ್ರಾಂತು. ಡಾ. ಸಿ.ಎನ್. ರಾಮಚಂದ್ರನ್ ಅಂಥವರು ಮುಖ್ಯವಾಗಿ ಮಾಡಿದ್ದು ಇದೇ. ಇಂಗ್ಲಿಷ್ನಲ್ಲಿ ಕಂಡ ಸಿದ್ಧಾಂತಗಳನ್ನೆಲ್ಲ ಓದಲಾಗದ ಕನ್ನಡದಲ್ಲಿ ತಂದು ಅಮಾಯಕರಲ್ಲಿ ಒಂದು ಬಗೆಯ ಕೀಳರಿಮೆ ಹುಟ್ಟಿಸಿ ಕಡ ತಂದ ಪರಿಭಾಷೆಯನ್ನು ಚಾಲ್ತಿಗೆ ತಂದು ತಾವು ಹೊಸದೇನನ್ನೋ ಕನ್ನಡಕ್ಕೆ ಕಾಣಿಸುತ್ತಿದ್ದೇವೆ ಎಂದು ಭ್ರಮಿಸಿ ಉಳಿದವರನ್ನು ಶುಷ್ಕ ಪಾಂಡಿತ್ಯ ಪ್ರದರ್ಶನಕ್ಕೆ ತಳ್ಳಿದರು. ಒಂದು ಬಗೆಯ ಭಯಂಕರ ಕೊಳ್ಳುಬಾಕತನ ಕನ್ನಡದೊಳಕ್ಕೆ ಬಂದದ್ದು ಇಂಥ ಪಾಂಡಿತ್ಯ ಪ್ರದರ್ಶನ ಪ್ರಿಯರಿಂದ. ಇದೂ ಸಾಲದು ಎನ್ನುವಂತೆ ಈಚೆಗೆ ಆರ್ಥಿಕ ವಲಯದೊಳಗೆ ಬಂದಿರುವ ಮೈಕ್ರೋ, ಮ್ಯಾಕ್ರೋ ಸಿದ್ಧಾಂತಕ್ಕೂ ಸಾಹಿತ್ಯದಲ್ಲಿ ಸ್ವಾಗತ ಕೋರುತ್ತಿದ್ದಾರೆ. ನಮ್ಮ ಹಿಂದಿನವರು ಕೆಲಮಟ್ಟಿಗೆ ಮೈಕ್ರೋ ಬರವಣಿಗೆಯನ್ನು ಉಪೇಕ್ಷಿಸಿರಬಹುದು. ಆದರೆ ತಮ್ಮ ವಿಮರ್ಶೆಯನ್ನು ಇಡೀ ಕಾವ್ಯ ಕೇಂದ್ರಿತವನ್ನಾಗಿ ಮಾಡಿದರು. ಇದಕ್ಕೆ ಉದಾಹರಣೆ ಅಗತ್ಯವಿಲ್ಲ.
-ಡಾ. ಡಿ.ಎ. ಶಂಕರ್, ಮೈಸೂರು