ಅನಾರೋಗ್ಯಕ್ಕೆ ಹಾದಿಯಾಗಿರುವ ಹುಸಿ ಆರೋಗ್ಯ ಶಿಬಿರಗಳು
ಕಳೆದ ವಾರ ಕನ್ನಡ ವಾರ್ತಾ ಪತ್ರಿಕೆಯ ಜೊತೆಗೆ ಕರಪತ್ರವೊಂದನ್ನು ಇಡಲಾಗಿತ್ತು. ಅದನ್ನು ಓದಿದ ನನಗೆ ಕುತೂಹಲ ಕೆರಳಿತು. ಉಚಿತ ಆರೋಗ್ಯದ ಕುರಿತಾದ ಕರಪತ್ರವದು. ನನ್ನ ಗಮನ ಸೆಳೆದದ್ದು ಅದರಲ್ಲಿ ಮುದ್ರಿತವಾದ 'ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದೀರಾ? ಬನ್ನಿ, ಸುಪ್ತ ಮನಸ್ಸನ್ನು ಜಾಗೃತಗೊಳಿಸುವ ಹೊಸ ಪದ್ಧತಿಯಿಂದ, ವಿನೂತನ ಔಷಧಗಳಿಂದ ಪರಿಹಾರ ಖಂಡಿತ. ಮೊದಲು ನೊಂದಾಯಿಸಿದ ನೂರು ಮಂದಿಗೆ ಮಾತ್ರ ಪ್ರವೇಶ. ಈ ಸದವಕಾಶವನ್ನು ಕಳೆದುಕೊಳ್ಳಬೇಡಿ' ಎಂದಿತ್ತು. ಆಗ ನನಗೆ ಹಿಂದಿನ ನೆನಪುಗಳು ಮರುಕಳಿಸಿದವು.
1970ನೇ ಇಸವಿ. ಆಗತಾನೇ ನಾನು ವೈದ್ಯಕೀಯ ಶಿಕ್ಷಣ ಮುಗಿಸಿ ನನ್ನ ಊರಾದ ಸಾಗರಕ್ಕೆ ಬಂದಿದ್ದೆ. ಒಂದು ದಿನ ಪೇಟೆಗೆ ಹೋದಾಗ ಆಸ್ಪತ್ರೆ ಹತ್ತಿರ ನೂರಾರು ಜನ ಸೇರಿದ್ದು ಕಾಣಿಸಿತು. ಅಲ್ಲಿ ಕೆಲವರು ಸ್ವಯಂಸೇವಕರು ಅತ್ತಿಂದಿತ್ತ ಓಡಾಡುವುದನ್ನು ಕಂಡೆ. ಏನೆಂದು ಕೇಳಿದಾಗ ಅದು ಡಾ. ಎಂ.ಸಿ.ಮೋದಿಯವರ ಕಣ್ಣಿನ ಆರೋಗ್ಯ ಶಿಬಿರ ಎಂದು ತಿಳಿಯಿತು. ಕನ್ನಡಕ ಧರಿಸಿದ್ದ ಒಬ್ಬ ವ್ಯಕ್ತಿ ಅಲ್ಲಿನ ರೋಗಿಗಳ ಕಣ್ಣುಗಳ ಪರೀಕ್ಷೆ ಮಾಡುತ್ತಿದ್ದರು. ಅವರೇ ಎಂ.ಸಿ. ಮೋದಿ ಎಂಬುದು ತಿಳಿಯಿತು. ಡಾ. ಎಂ.ಸಿ.ಮೋದಿಯವರ ಕುರಿತು ಓದುಗರಿಗೆ ತಿಳಿಸಲೇ ಬೇಕು.
ಡಾ. ಮುರಿಗೆಪ್ಪ ಚೆನ್ನವೀರಪ್ಪ ಮೋದಿ ಎಂಬ ಪೂರ್ಣ ಹೆಸರನ್ನು ತಿಳಿಯದವರು ವಿರಳ ಎಂದು ಹೇಳಬಹುದು. ಎಂ.ಸಿ. ಮೋದಿ ಎಂದೇ ಖ್ಯಾತರಾಗಿದ್ದ ಅವರು ಕಣ್ಣಿನ ಕ್ಷೇತ್ರದಲ್ಲಿ ಮೇರು ಸಾಧನೆಗೈದು ಪದ್ಮವಿಭೂಷಣ ಪ್ರಶಸ್ತಿ ಗಳಿಸಿದವರು. ಶಸ್ತ್ರಚಿಕಿತ್ಸೆಯ ಮೂಲಕ ಐದು ಲಕ್ಷಕ್ಕೂ ಹೆಚ್ಚು ಮಂದಿಯ (595019) ಪೊರೆಯನ್ನು ತೆಗೆದು ಅವರಿಗೆ ಬೆಳಕು ನೀಡಿದ ದೃಷ್ಟಿದಾತ. ಸರಳ, ಸಜ್ಜನಿಕೆಯ ಡಾ. ಮೋದಿಯವರನ್ನು ಹಳ್ಳಿಯ ಜನರು 'ಕಣ್ಣು ಕೊಟ್ಟ ಅಣ್ಣ' ಎಂದೇ ಕರೆಯುತ್ತಿದ್ದರು. ಮಿದುಳಿನ ಕಾಯಿಲೆಯಿಂದ ದೃಷ್ಟಿ ಕುರುಡಾಗಿ ಕಿವಿಗಳೂ ಕೇಳಿಸದೇ ಕಿವುಡಾಗಿದ್ದರೂ ಮೇರು ಸಾಧನೆಗೈದ ಹೆಲೆನ್ ಕೆಲ್ಲರ್ ಡಾ. ಮೋದಿಯವರನ್ನು 'ಕತ್ತಲೆಯನ್ನು ಸೀಳಿ ಬೆಳಕು ಕೊಡುವ ನಿಸ್ವಾರ್ಥ ಸೇವಕ' ಎಂದು ಕರೆದಿದ್ದರು. ಡಾ. ಮೋದಿಯವರು ಕೈಗೊಂಡ ಕಣ್ಣಿನ ಪೊರೆಗಳ ಶಸ್ತ್ರಚಿಕಿತ್ಸೆಯು 'ಅಸೆಂಬ್ಲಿ ಲೈನ್ ಸರ್ಜರಿ' ಎಂದು ಖ್ಯಾತಿ ಪಡೆದಿತ್ತು.
1872ರಲ್ಲಿ 'ಭಾರತದಿಂದ ತೊಲಗಿ' ಎಂಬ ಚಳವಳಿಯನ್ನು ಹಮ್ಮಿಕೊಂಡಿದ್ದ ಗಾಂಧೀಜಿಯವರು ಬಿಜಾಪುರದ ಹತ್ತಿರವಿದ್ದ ಬೀಳಗಿ ಎಂಬ ಹಳ್ಳಿಯಲ್ಲಿ ಉಪನ್ಯಾಸ ಮಾಡುತ್ತಿದ್ದರು. ವೈದ್ಯ ವಿದ್ಯಾರ್ಥಿಯಾಗಿದ್ದ ಮೋದಿಯವರು ಆ ಉಪನ್ಯಾಸ ಕೇಳಲು ಹೋಗಿದ್ದರು. ಗಾಂಧೀಜಿಯವರ ಭಾಷಣದಿಂದ ಸ್ಫೂರ್ತಿಗೊಂಡು ತಾನೂ ವೈದ್ಯನಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದರು. ಆಯುರ್ವೇದ ವೈದ್ಯ ಪದವಿ ಪಡೆದ ನಂತರ ಕೆ.ಬಿ.ಹೆಚ್.ಬಿ. ಎಂಬ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಶುರುಮಾಡಿದರು. ಅವರಲ್ಲಿಗೆ ಬರುವ ರೋಗಿಗಳು ಅತಿ ಬಡವರಾಗಿದ್ದರು. ಕೆಲವರಂತೂ ತಮ್ಮ ಒಡವೆ, ಜಾನುವಾರು, ಮನೆಗಳನ್ನು ಮಾರಿ ಹಣ ಹೊಂದಿಸಿಕೊಂಡು ಬರುವುದನ್ನು ಕಂಡ ಮೋದಿಯವರಿಗೆ ಕರುಳು ಕಿತ್ತು ಬಂತು. ಅಂದೇ ತಮ್ಮ ಜೀವನವನ್ನು ಉಚಿತ ನೇತ್ರ ಚಿಕಿತ್ಸೆಗಾಗಿ ಮುಡಿಪಾಗಿಡಲು ನಿರ್ಧರಿಸಿದರು. ಆಗಲೇ ಅವರಿಗೆ ಹೊಳೆದದ್ದು 'ಸಂಚಾರೀ ಕಣ್ಣಿನ ಆಸ್ಪತ್ರೆ'. ಅವರ ಮೊದಲನೇ ಉಚಿತ ಕಣ್ಣಿನ ಶಿಬಿರ ನಡೆದದ್ದು ಗುಜರಾತಿನ ಪಟಾನ್ ಎಂಬ ಹಳ್ಳಿಯಲ್ಲಿ. ಅದು ಗಾಂಧೀಜಿಯವರ ಹುಟ್ಟೂರ ಹತ್ತಿರವಿತ್ತು.
ಮೊದಲ ಶಿಬಿರದ ನಂತರ ಕಣ್ಣು ಪೊರೆಗಳನ್ನು ತೆಗೆದು ದೃಷ್ಟಿ ನೀಡುವ ಪರಿ ಮೋದಿಯವರ ಒಂದು ಜೀವನ ಶೈಲಿಯಾಯಿತು ಎಂದರೆ ಅತಿಶಯೋಕ್ತಿಯಲ್ಲ. ದೇಶದೆಲ್ಲೆಡೆ ಅವರ ಆರೋಗ್ಯ ಶಿಬಿರದ ಹೆಸರು ಮನೆ ಮಾತಾಯಿತು. ಇದಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು, ಅಲ್ಲಿನ ವೈದ್ಯರು ಸಹಾಯ ಮಾಡುತ್ತಿದ್ದರು. ಮೋದಿಯವರು ಶಿಬಿರ ಹಮ್ಮಿಕೊಳ್ಳುವುದನ್ನು ತಿಳಿದು ಸ್ಥಳೀಯ ಸಮುದಾಯ ಭವನಗಳು, ಶಾಲೆಗಳು, ಕಲ್ಯಾಣ ಮಂಟಪಗಳು ಸ್ವಯಂ ಇಚ್ಛೆಯಿಂದ ಜಾಗ ಕೊಡಲು ಮುಂದಾಗುತ್ತಿದ್ದವು. ಅವರ ಶಸ್ತ್ರಚಿಕಿತ್ಸೆಯ ವೇಗವಂತೂ ಕಲ್ಪನೆಗೂ ಮೀರುವಂಥದ್ದಾಗಿತ್ತು. ಶಿಬಿರದಲ್ಲಿ ಕಣ್ಣುಗಳ ಪೊರೆ ತೆಗೆಯಲು ಎಂಟು ಮಂಚಗಳಿರುತ್ತಿದ್ದವು. ಎಂಟು ಮಂಚಗಳ ಮೇಲೆ ಒಂದೇ ಬಾರಿಗೆ ರೋಗಿಗಳು ಮಲಗಿರಬೇಕು. ಮೊದಲ ರೋಗಿಗೆ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿ ಎಂಟನೇ ಮಂಚಕ್ಕೆ ಬಂದು ಆ ರೋಗಿಯ ಪೊರೆ ತೆಗೆದಾಕ್ಷಣ ಪುನಃ ಮೊದಲನೇ ಮಂಚದಲ್ಲಿ ಮತ್ತೊಬ್ಬ ರೋಗಿ ಮಲಗಿರಬೇಕು! 1970ರ ಆಸುಪಾಸಿನಲ್ಲಿ ತಿರುಪತಿಯಲ್ಲಿ ಹಮ್ಮಿಕೊಂಡ ಕಣ್ಣಿನ ಶಿಬಿರದಲ್ಲಿ ಅವರು ಒಂದು ದಿನದಲ್ಲಿ 833 ಶಸ್ತ್ರಚಿಕಿತ್ಸೆ ಮಾಡಿ ಗಿನ್ನೀಸ್ ಪುಸ್ತಕದಲ್ಲಿ ದಾಖಲಿಸಿದರು.
ಕಣ್ಣಿನ ಆರೋಗ್ಯದ ಕುರಿತು ಅವರ ಮನಸ್ಸು ಎಷ್ಟು ತುಡಿಯುತ್ತಿತ್ತೆಂದರೆ, ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡುತ್ತಿದ್ದರು.
ಡಾ. ಮೋದಿಯವರೇ ಹೇಳಿದ ಹಾಗೆ ಮೊದ ಮೊದಲು ರೋಗಿಗಳು ಇವರ ಶಿಬಿರಕ್ಕೆ ಬರಲು ಹಿಂಜರಿಯುತ್ತಿದ್ದರು. 'ಆಪರೇಷನ್' ಪದ ಕೇಳಿ ಶಿಬಿರಕ್ಕೆ ಬಂದವರಲ್ಲಿ ಕೆಲವರು ಓಡಿ ಹೋಗುತ್ತಿದ್ದರು. ಆದರೆ ಕ್ರಮೇಣ ಶಸ್ತ್ರ ಚಿಕಿತ್ಸೆಗೊಳಗಾಗಿ ದೃಷ್ಟಿಯನ್ನು ಮತ್ತೆ ಪಡೆದವರನ್ನು ಕಂಡು ಶಿಬಿರಕ್ಕೆ ಬರುವವರು ಹೆಚ್ಚಾದರು. ಅವರ ಸೇವೆಯನ್ನು ಗುರುತಿಸಿದ ಅಂದಿನ ಕರ್ನಾಟಕ ಸರ್ಕಾರ, 'ಏಕವ್ಯಕ್ತಿಯ ಯುದ್ಧ' (one man's war) ಎಂಬ ಒಂದು ಕಿರು ದೃಶ್ಯ ದಾಖಲೆಯನ್ನು ಎಂ.ಎನ್. ಸತ್ಯು ಅವರ ನಿರ್ದೇಶನದಲ್ಲಿ ತಯಾರಿಸಿತ್ತು.
ಹೀಗೆ ಲಕ್ಷಗಟ್ಟಲೆ ಕುರುಡರಿಗೆ ದೃಷ್ಟಿ ನೀಡಿದ ಆ ಮಹಾನ್ ವ್ಯಕ್ತಿ ತಮ್ಮ ತೊಂಭತ್ತನೇ ವರ್ಷದಲ್ಲಿ ಸ್ವರ್ಗಸ್ಥರಾದರು. ಅವರ ಜ್ಞಾಪಕಾರ್ಥ ದಾವಣಗೆರೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಮೋದಿ ಕಣ್ಣಿನ ಆಸ್ಪತ್ರೆಗಳಿವೆ.
ಮೇಲೆ ತಿಳಿಸಿದ ಶಿಬಿರಗಳಂತೆ, ಮಣಿಪಾಲದ ವೈದ್ಯ ಸಮೂಹವು ದೂರ ದೂರದ ಸ್ಥಳಗಳಿಗೆ ಹೋಗಿ ಕ್ಯಾನ್ಸರ್ ಶಿಬಿರ, ದಂತಾರೋಗ್ಯ ಶಿಬಿರಗಳನ್ನು ನಡೆಸುವುದನ್ನು ಕಂಡಿದ್ದೇವೆ. ಉಚಿತ ಮಾನಸಿಕ ಆರೋಗ್ಯ ಶಿಬಿರಗಳನ್ನು ಕಳೆದ ಮೂವತ್ತು ವರ್ಷಗಳಿಂದ ಶಿರಸಿ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಕುಮಟಾದ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಾನೂ ನಡೆಸಿಕೊಂಡು ಬರುತ್ತಿದ್ದೇನೆ. ಈ ವಿಧದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಕಾಯಿಲೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಶಿಬಿರಗಳನ್ನು ಎಷ್ಟೋ ಸಮಾಜಮುಖಿ ವೈದ್ಯರು ನಡೆಸುತ್ತಿದ್ದಾರೆ. ಈ ಎಲ್ಲಾ ಶಿಬಿರಗಳ ಹಿಂದೆ ಒಂದು ಘನವಾದ ಉದ್ಧೇಶವಿದೆ. ಅದು ಸಾರ್ವಜನಿಕರಿಗೆ ಆಯಾ ಕಾಯಿಲೆಗಳ ಕುರಿತಾದ ಅರಿವು ಮೂಡಿಸುವುದು, ತನಗೆ ಆ ಕಾಯಿಲೆ ಇದೆ ಎಂದು ತಿಳಿದಾಗ ತಡಮಾಡದೇ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯುವುದು, ಕಾಯಿಲೆ ಬರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು, ಹೀಗೆ ಸಾಧ್ಯವಾದಷ್ಟು ಸ್ವಸ್ಥ ಸಮಾಜಕ್ಕಾಗಿ ಶ್ರಮಿಸುವುದು ಈ ಆರೋಗ್ಯ ಶಿಬಿರಗಳ ಉದ್ದೇಶ.
ಆದರೆ ಕಾಲ ಬದಲಾಗಿದೆ. ಈಗಿನ ಕೆಲವು ಆರೋಗ್ಯ ಶಿಬಿರಗಳು ಕಾಟಾಚಾರಕ್ಕೆ ನಡೆದರೆ ಮತ್ತೆ ಕೆಲವು ಸ್ವಹಿತ ಸಾಧನೆಗೆ ನಡೆಯುವಂಥವು. ಮೊನ್ನೆ, ಇಂಥದ್ದೇ ಒಂದು ಮಧುಮೇಹ ಶಿಬಿರ ಹಮ್ಮಿಕೊಂಡ ಬಗ್ಗೆ ಕರಪತ್ರವೊಂದು ಕೈ ಸೇರಿತು. ಯಾವ ಔಷಧವೂ ಇಲ್ಲದೇ ಮನಸ್ಸನ್ನು ಬಲಿಷ್ಟಗೊಳಿಸಿ ಹಲವಾರು ಕಾಯಿಲೆಗಳನ್ನು ಹೊಡೆದೋಡಿಸುವ ಶಿಬಿರ ಅದಾಗಿತ್ತು. ಅದನ್ನು ನಡೆಸಿಕೊಡುವ ವ್ಯಕ್ತಿ ಯಾವುದ್ಯಾವುದೋ ಉದ್ಯೋಗ ಮಾಡಿ ಕೊನೆಗೆ ಸುಪ್ತ ಮನಸ್ಸನ್ನು ಜಾಗೃತಗೊಳಿಸುವುದರಲ್ಲಿ ಪರಿಣಿತಿ ಪಡೆದುಕೊಂಡವರೆಂದು ವರ್ಣಿಸಲಾಗಿತ್ತು.
ನನಗೆ ಕುತೂಹಲವೆನಿಸಿ ಆ ಶಿಬಿರಕ್ಕೆ ಹೋದೆ. ಅಲ್ಲಿ ಮೊದಲು ಉಪನ್ಯಾಸ. ಆ ಉಪನ್ಯಾಸದಲ್ಲಿ ಸುಪ್ತ ಮನಸ್ಸಿನ ಬಗ್ಗೆ ಹೇಳಿದುದು ಯಾರಿಗೆ ಎಷ್ಟು ಅರ್ಥವಾಯಿತೆಂಬುದು ಗೊತ್ತಿಲ್ಲ. ಮನೋ ವೈದ್ಯನಾದ ನನಗೂ ಗೊಂದಲ. ಉಪನ್ಯಾಸದ ನಂತರ ದೀಕ್ಷೆ ತೆಗೆದುಕೊಳ್ಳಬೇಕು, ಅಲ್ಲಿಗೆ ಮುಗಿಯಿತು ಎಂದುಕೊಂಡರೆ ಅದು ತಪ್ಪಾಗಿತ್ತು.
ಎಲ್ಲರಿಗೂ ಒಂದು ವಿಧದ ಔಷಧ ವಿತರಣೆ. ಆ ಔಷಧಕ್ಕೆ ಹಣ ತೆರಬೇಕು. ಅದರಿಂದ ಸುಪ್ತ ಮನಸ್ಸು ಜಾಗೃತಗೊಂಡು ಕಾಯಿಲೆಗಳನ್ನು ಎದುರಿಸಲು ಮನಸ್ಸು ಸಿದ್ಧವಾಗುತ್ತದೆ ಎಂದು ತಿಳಿಸಿದರು. ಅಲ್ಲಿ ನೆರೆದಿದ್ದ ನೂರೈವತ್ತಕ್ಕೂ ಹೆಚ್ಚು ಮಂದಿಯಲ್ಲಿ ಸುಮಾರು ನೂರು ಜನರು ಮರು ಮಾತನಾಡದೇ ಅದನ್ನು ಕೊಂಡುಕೊಂಡರು. ನಾನು 'ಇದೇಕೆ ಹೀಗೆ ಮಾಡುತ್ತೀರಿ?' ಎಂದು ಕೇಳಿದಾಗ ಅಲ್ಲಿದ್ದವರು 'ಸಾರ್ ಇವರು ಅಷ್ಟು ಕಲಿತವರು. ಈ ಔಷಧ ಒಳ್ಳೇದು ಅಂತ ಹೇಳ್ತಾರೆ, ನೀವೂ ತೆಗೆದುಕೊಳ್ಳಿ' ಎಂದರು.
ಹೀಗೆ ಇಂತಹ ಹಲವಾರು ಆರೋಗ್ಯ ಶಿಬಿರಗಳು ಕೇವಲ ಹಣಕ್ಕೋಸ್ಕರ ಇವೆಯೇ ವಿನಃ ಅದು ರೋಗಿಗಳ ಒಳಿತಿಗಾಗಲೀ ಅಥವಾ ಸಮಾಜದ ಸ್ವಾಸ್ಥ್ಯಕ್ಕಾಗಲೀ ಅಲ್ಲ ಎಂಬುದನ್ನು ಸಾರ್ವಜನಿಕರು ಅರಿಯಬೇಕು. ಹಾಗೆ ಕುರುಡು ಮನಸ್ಸಿನಿಂದ ಇಂತಹ ಶಿಬಿರಗಳಲ್ಲಿ ಕೊಡುವ ಔಷಧಗಳನ್ನು ಕೊನೇ ಪಕ್ಷ ಕುಟುಂಬ ವೈದ್ಯರ ಹತ್ತಿರ ಸಲಹೆ ಪಡೆದು ಸೇವಿಸಿದರೆ ಒಳಿತು. ಅದಿಲ್ಲದಿದ್ದಲ್ಲಿ ಅನಾಹುತಗಳಾಗಬಹುದು ಎಂಬುದನ್ನು ತಿಳಿಯಬೇಕು.
- ಡಾ.ಕೆ.ಆರ್.ಶ್ರೀಧರ್
anisikeprabha@gmail.com