ಅಂಕಣಗಳು

ಕಚೇರಿ ನಮಗೆ ಎರಡನೆ ಮನೆಯೇ ಅಲ್ಲವೇ?

ಶಾಲಿನಿ: ನಮ್ಮ ದೇಶದ ಸಂಯುಕ್ತ ವ್ಯವಸ್ಥೆಯ ಮುಖ್ಯ ಅಂಶವೆಂದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ,  ಆಡಳಿತದ ವಿಷಯಗಳಲ್ಲಿ ಅಧಿಕಾರದ ವಿಂಗಡಣೆ ಆಗಿರುವುದು. ಅಂತಾರಾಜ್ಯ ಹಾಗೂ ಹೊರ ದೇಶಗಳ ಜೊತೆಗೆ ಮಾಡಬೇಕಾದ ವ್ಯವಹಾರವನ್ನು ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಲಕ ನಿರ್ವಹಿಸಲಾಗುತ್ತದೆ. ಅಲ್ಲದೆ ಇಡೀ ದೇಶದ ಬೆಳವಣಿಗೆಯಲ್ಲಿ ಸಮತೋಲನ ಸಾಧಿಸಲು ಕೆಲವು ನೀತಿ ಮತ್ತು ಯೋಜನೆಗಳನ್ನು ರೂಪಿಸಲಾಗುತ್ತದೆ. ರಾಜ್ಯಗಳ ಮೂಲಕ ಅವುಗಳ ಅನುಷ್ಠಾನ ಮಾಡಬೇಕಾಗುತ್ತದೆ.  2001ನೇ ಇಸವಿಯಲ್ಲಿ ನಾನು ಭಾರತ ಸರ್ಕಾರದ ಕೃಷಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇರಿಕೊಂಡೆ. ಕೃಷಿ ಇಲಾಖೆ ಬಹಳ ಹಳೆಯ ಇಲಾಖೆ. ಇದನ್ನು ಮಾತೃ ಇಲಾಖೆಯೆಂದು ಕರೆಯಲಾಗುತ್ತಿತ್ತು. ಏಕೆಂದರೆ, ನಮ್ಮ ದೇಶ ಕೃಷಿ ಆಧರಿತ ದೇಶ. 60-70 ಪ್ರತಿಶತ ಜನ ಇದರ ಮೇಲೆ ಅವಲಂಬಿತವಾಗಿದ್ದಾರೆ. ಮುಂದಿನ ದಿವಸಗಳಲ್ಲಿ ಹೊಸ ತಂತ್ರಜ್ಞಾನದ ಬೆಳವಣಿಗೆಯಿಂದ ಬೇರೆ ಬೇರೆ ಉಪಜೀವನಗಳನ್ನು ಪ್ರೋತ್ಸಾಹಿಸಲು ಈ ಇಲಾಖೆಯನ್ನು ಹಲವಾರು ಭಾಗಗಳಾಗಿ ವಿಂಗಡಿಸಿ ಪಶು ಸಂಗೋಪನೆ, ಮೀನುಗಾರಿಕೆ, ಸಹಕಾರ, ಆಹಾರ ಮತ್ತು ಗ್ರಾಹಕರ ವ್ಯವಹಾರಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಂತಹ ಇಲಾಖೆಗಳನ್ನು ಮಾಡಲಾಯಿತು. ಕೃಷಿ ಇಲಾಖೆಯ ಸಮಸ್ತ ಆಡಳಿತ ನಿರ್ವಹಣೆಯನ್ನು ನಾನು ನೋಡಿಕೊಳ್ಳುತ್ತಿದ್ದೆ. ನನ್ನ ಮುಖ್ಯ ಕೆಲಸ ಬೇರೆ ಇಲಾಖೆಗಳ ಜೊತೆಯಲ್ಲಿ ವ್ಯವಹರಿಸಿ ಉತ್ತಮ ರೀತಿಯಲ್ಲಿ ಕೆಲಸ ಸಾಗುವಂತೆ ನೋಡಿಕೊಳ್ಳುವುದಾಗಿತ್ತು. ಇಲಾಖೆಯ ಜಂಟಿ ಕಾರ್ಯದರ್ಶಿಗಳು ಬಹಳ ಸಹಕಾರ ನೀಡುತ್ತಿದ್ದರು. ನನ್ನ ಹತ್ತಿರ ಇನ್ನೂ ಎರಡು ಜವಾಬ್ದಾರಿಗಳಿದ್ದವು. ಅವುಗಳು ದ್ವಿದಳ ಧಾನ್ಯಗಳ ಮಂಡಳಿ ಮತ್ತು ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ. ಸಾಧಾರಣವಾಗಿ ನಾವು  ಮಾಡುವ ಕೆಲಸವೇ ನಮಗೆ ಆರಾಧನೆ ಎಂದು ಹೇಳುತ್ತೇವೆ. 'ಸರ್ಕಾರದ ಕೆಲಸ ದೇವರ ಕೆಲಸ' ಎಂದು ಹೇಳಿದಾಗ ಸರ್ಕಾರಿ ಕಚೇರಿಗಳು ದೇವಾಲಯಗಳಂತಿರಬೇಕು. ಆದರೆ ಕೃಷಿ ಭವನ ಎಂದು ಕರೆಯಲಾದ ನಮ್ಮ ಸರ್ಕಾರಿ ಕಚೇರಿಯ ಕಟ್ಟಡ ಬಹಳ ಹೊಲಸಾಗಿತ್ತು. ಎಲ್ಲಿ ನೋಡಿದರಲ್ಲಿ ಕಸ ಇತ್ತು.  ಗೋಡೆಗಳ ಮೇಲೆ ಪಾನ್‌ಬೀಡಾ ಉಗುಳಿ, ಬಣ್ಣ ಹಾಳಾಗಿತ್ತು. ಜೇಡರ ಬಲೆಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದವು. ಹಳೆಯ ಪೀಠೋಪಕರಣ, ಹಳೆಯ ಕಾಗದಗಳು ಕಂಡಕಂಡಲ್ಲಿ ರಾಶಿಯಾಗಿ ಬಿದ್ದಿದ್ದವು.  ಶಾಖೆಗಳಲ್ಲಿ ಸಿಬ್ಬಂದಿಗಳು ಯಾವ ರೀತಿ ಕುಳಿತುಕೊಳ್ಳುತ್ತಿದ್ದಾರೆಂದು ನೋಡಿದರೆ ಅಸಮಾಧಾನವಾಗುತ್ತಿತ್ತು. ಸಿಬ್ಬಂದಿ ಇರುವ ಕಡೆ ಪೀಠೋಪಕರಣಗಳಿಲ್ಲ, ಪೀಠೋಪಕರಣಗಳು ಇರುವ ಕಡೆ ಸಿಬ್ಬಂದಿಗಳಿಲ್ಲ. ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಹಾಗೂ ನಿರ್ವಹಣೆ ಸರಿಯಾಗಿ ಇರಲಿಲ್ಲ. ಹೆಣ್ಣು ಮಕ್ಕಳಿಗೆ ತುಂಬಾ ಕಷ್ಟವಾಗುತ್ತಿತ್ತು. ಅಲ್ಲದೇ ಟೀ ಕಾಫೀ ನೆಪದಲ್ಲಿ ಸಿಬ್ಬಂದಿಗಳು ಯಾವಾಗಲೂ ತಮ್ಮ ಆಸನ ಬಿಟ್ಟು ಬೇರೆ ಕಡೆ ತಿರುಗಾಡುತ್ತಿದ್ದರು. ಸರ್ಕಾರಿ ನೌಕರರು ತಮ್ಮ ಜೀವನದ ಮೂರನೇ ಒಂದು ಭಾಗ ಕಚೇರಿಯಲ್ಲಿ ಕಳೆಯುತ್ತಿರುವಾಗ ಕಚೇರಿ ನಮಗೆ ಎರಡನೆ ಮನೆಯೇ ಆಗುತ್ತದೆ ಅಲ್ಲವೇ? ಅದರೆ ನಾವು ವಾಸಿಸುವ ಮನೆಯನ್ನು ಸ್ವಚ್ಛವಾಗಿಡುವಾಗ ಕಚೇರಿ ಎಂಬ ಮನೆಯ ಬಗ್ಗೆ ಮಲತಾಯಿ ಧೋರಣೆ ಯಾಕೆ? ಕೃಷಿ ಭವನದಲ್ಲಿ ಜನರಿಗೆ ಮಾರ್ಗದರ್ಶನ ಮಾಡುವ ವ್ಯವಸ್ಥೆ ಇರಲಿಲ್ಲ. ಯಾವ ಇಲಾಖೆಯ ಕೊಠಡಿ ಎಲ್ಲಿದೆ ಎಂದು ಸೂಚಿಸುವ ಯಾವುದೇ ಮಾರ್ಗಸೂಚಿ ಫಲಕಗಳೂ ಇರಲಿಲ್ಲ. ಸಾರ್ವಜನಿಕರು ಇಡೀ ಭವನದಲ್ಲಿ ಸುತ್ತುತ್ತಾ ಸುಸ್ತಾಗುತ್ತಿದ್ದರು. ಹೊಲಸನ್ನು ನೋಡಿ ಬೇಜಾರಾಗುತ್ತಿದ್ದುದು ಮಾತ್ರವಲ್ಲ ಅವರೂ ಸಹ ಈ ಹೊಲಸಿಗೆ ತಮ್ಮ ಕೊಡುಗೆಯನ್ನು ನೀಡುತ್ತಾ ಹೋಗುತ್ತಿದ್ದರು. ಇಂತಹ ದುಃಸ್ಥಿತಿಯನ್ನು ನೋಡಿ ಸಹೋದ್ಯೋಗಿಗಳೊಂದಿಗೆ ಇದನ್ನು ಸುಧಾರಿಸುವ ಬಗ್ಗೆ ಚರ್ಚಿಸಿ, ನಾನು 'ಸರ್ಕಾರದಲ್ಲಿ ಸದಭಿರುಚಿ' ಎಂಬ ಒಂದು ಲೇಖನವನ್ನು ಬರೆದು ಸರ್ಕಾರಕ್ಕೆ ಕಳುಹಿಸಿದೆ. 'ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ' ಆ ಲೇಖನವನ್ನು ಪ್ರಕಟಿಸಿತು. ಅದರಂತೆ ಕಟ್ಟಡವನ್ನು ನವೀಕರಿಸಲು ಹಣವನ್ನು ಸಹ ಮಂಜೂರು ಮಾಡಿತು.
 ಈ ಯೋಜನೆಯಂತೆ ಮೊಟ್ಟಮೊದಲನೆಯದಾಗಿ ನಾನು ನಮ್ಮ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೃಷಿ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ಕಾರ್ಯದರ್ಶಿಗಳ ಸಮನ್ವಯ ಸಭೆಯನ್ನು ಕರೆದೆ. ಆ ಸಭೆಯಲ್ಲಿ ನಾವು ಒಂದು ಒಪ್ಪಂದವನ್ನು ಮಾಡಿಕೊಂಡೆವು. ಭವನದಲ್ಲಿ ಎಲ್ಲಾ ಇಲಾಖೆಗಳಿಗೆ ಒಂದು ವ್ಯವಸ್ಥಿತ ಜಾಗವನ್ನು ಅವರ ಅವಶ್ಯಕ್ಕನುಸಾರ ನೀಡಲಾಗುವುದು. ಅದರಂತೆ ಕೆಲವು ಅಧಿಕಾರಿಗಳು ತಮ್ಮ ಕೊಠಡಿಯನ್ನು ಬದಲಾಯಿಸಬೇಕಾಗುತ್ತದೆ, ಅಲ್ಲದೇ ಇಡೀ ಭವನಕ್ಕಾಗಿ ಒಬ್ಬ  ಭದ್ರತಾಧಿಕಾರಿ ಹಾಗೂ ಮಾರ್ಗಸೂಚಿ ಫಲಕಗಳ ವ್ಯವಸ್ಥೆಮಾಡುವುದು. ಅದರ ಮೇಲ್ವಿಚಾರಣೆಯನ್ನು ನಾನು ಮಾಡಬೇಕಿದ್ದು ಯಾವುದೇ ಸಮಸ್ಯೆಯಿದ್ದರೆ ಎಲ್ಲರೂ ನನಗೆ ಇ-ಮೇಲ್ ಮೂಲಕ ತಿಳಿಸಬೇಕು ಎಂದು ತೀರ್ಮಾನಿಸಿದೆವು. ಕಟ್ಟಡದ ಒಳಗೆ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಪೋಸ್ಟರ್‌ಗಳನ್ನು ಹಾಕಿದೆವು. ಅಲ್ಲದೇ ಈ ಬಗ್ಗೆ ನಮ್ಮ ಸಿಬ್ಬಂದಿಗೆ ತರಬೇತಿಯನ್ನು ನೀಡಿ ಸ್ವಚ್ಛತಾ ನಿಯಮಗಳನ್ನು ಪಾಲಿಸಲು ಕಟ್ಟುನಿಟ್ಟಿನ ಸೂಚನೆ ಸಹ ನೀಡಲಾಯಿತು. ಈ ಅವಧಿಯಲ್ಲಿ ನಾನು, ಸಾರ್ವಜನಿಕರಿಗೆ ಎಲ್ಲಾ ಇಲಾಖೆಗಳ ಮಾಹಿತಿಯೂ ಸುಲಭವಾಗಿ ನೀಡಲು ಪ್ರವೇಶದ್ವಾರದಲ್ಲಿ ಟಚ್ ಸ್ಕ್ರೀನ್ ಆಧಾರಿತ ಒಂದು ಕಂಪ್ಯೂಟರ್ ಮತ್ತು ಸಾರ್ವಜನಿಕ ದೂರವಾಣಿಯ ಒಂದು ಸಣ್ಣ ಗುಡಾರದ ಮೂಲಕ ಸಿಗುವಂತೆ ಮಾಡಿ ಸಾರ್ವಜನಿಕ ಸೌಲಭ್ಯಗಳನ್ನು ಉತ್ತಮ ಪಡಿಸುವತ್ತ ಗಮನ ಹರಿಸಿದೆ. ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದೆವು. ಸರ್ಕಾರಿ ನೌಕರರು ಹೆಚ್ಚು ಗಂಭೀರವಾಗಿ, ಸಂತೋಷದಿಂದ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಯಿತು. ಪರಿಸರ ಉತ್ತಮವಾಗಿದ್ದರೆ ಕೆಲಸ ಮಾಡುವ ಶಕ್ತಿ ದುಪ್ಪಟ್ಟು ಆಗುತ್ತದೆ ಎಂಬುದನ್ನು ನಾವು ಕಣ್ಣಾರೆ ನೋಡಿದೆವು. 1998ನೇ ಇಸವಿಯಲ್ಲಿ ಉತ್ತಮ ಕೆಲಸಗಾರರಿಗೆ ಒಂದು ಪ್ರಶಸ್ತಿಯನ್ನು ಕೊಡಬೇಕೆಂದು ನಿರ್ಧಾರ ಮಾಡಲಾಗಿತ್ತು. ಆದರೆ 2001ರ ವರೆಗೂ ಕೊಟ್ಟಿರಲಿಲ್ಲ. ಆ ಪ್ರಶಸ್ತಿಯನ್ನು ನನ್ನ ಅಧಿಕಾರಾವಧಿಯಲ್ಲಿ ಕೊಡುವಂತೆ ಮಾಡುವ ಸೌಭಾಗ್ಯ ನನ್ನದಾಯಿತು.
ಎಣ್ಣೆ ಕಾಳುಗಳ ಉತ್ಪಾದನೆಯ ಬಗ್ಗೆ ತುರ್ತು ಜೀವಿತ ಧ್ಯೇಯವೆಂಬಂತೆ ಗಮನ ಹರಿಸಿ ವ್ಯವಸ್ಥೆಯನ್ನು ಉತ್ತಮ ಪಡಿಸಲಾಯಿತು. ಸಾಧಾರಣವಾಗಿ ಸರ್ಕಾರ ಅಭಿವೃದ್ಧಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ಆ ಹಣ ಸರಿಯಾಗಿ ಖರ್ಚಾಗಿ ಅದರ ಪ್ರತಿಫಲ ಜನರಿಗೆ ಸಿಕ್ಕಿದೆಯೇ ಇಲ್ಲವೇ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಆ ನಿಟ್ಟಿನಲ್ಲೂ ಗಮನಕೊಟ್ಟು ಕೆಲಸ ಮಾಡಿದೆವು. ಈ ಮೊದಲು ನಮ್ಮ ದೇಶದಲ್ಲಿ ಎಷ್ಟು ಎಣ್ಣೆ ಕಾಳುಗಳ ಉತ್ಪಾದನೆ ಆಗುತ್ತಿದೆ, ಜನರ ಬೇಡಿಕೆ ಎಷ್ಟಿದೆ, ಅಂತರ ಎಷ್ಟಿದೆ, ಸದ್ಯದ ಆಮದು ಪ್ರಮಾಣವೆಷ್ಟು, ನಮ್ಮ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಲು ಹಾಗೂ ಜನರ ಬೇಡಿಕೆಯನ್ನು ಪೂರೈಸಲು ಎಷ್ಟು ಹೆಚ್ಚು ಉತ್ಪಾದನೆ ಮಾಡಲು ಸಾಧ್ಯವಾಗಬಹುದು, ಯಾವ ರಾಜ್ಯಗಳಲ್ಲಿ ಇದಕ್ಕೆ ಬೇಕಾದ ಫಲವತ್ತಾದ ಭೂಮಿ ಹಾಗೂ ಇನ್ನಿತರ ವ್ಯವಸ್ಥೆ ಇದೆ, ಅದನ್ನು ಸುಧಾರಿಸಲು ರೈತರಿಗೆ ಯಾವ ರೀತಿಯ ತಂತ್ರಜ್ಞಾನದ ಅವಶ್ಯಕತೆಯಿದೆ ಅಥವಾ ಆರ್ಥಿಕ ಸಹಾಯ ಬೇಕೆ? ಮುಂತಾದ ವಿಷಯಗಳನ್ನು ವಿಶ್ಲೇಷಿಸಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳೊಂದಿಗೆ ಸಮನ್ವಯ ಮಾಡಿದ ನೆಮ್ಮದಿ ನನಗಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದೆ. ಅಲ್ಲಿ ಇ-ಆಡಳಿತವನ್ನು ಸಮರ್ಪಕವಾಗಿ ಜಾರಿಗೆ ತರಲಾಯಿತು. ಇದರಲ್ಲಿ ಅತೀ ವಿಶಿಷ್ಟವಾದ ಕೆಲಸವೆಂದರೆ 'ಮುನ್ಸೂಚನೆ ಕೊಡುವ ವ್ಯವಸ್ಥೆ' (Early Warning Systems’(EWS)).  ಕೆಲವು ಕೃಷಿ ವಿಜ್ಞಾನಿಗಳ ಹಾಗೂ ಮಾಹಿತಿ ತಂತ್ರಜ್ಞಾನಿಗಳ ಒಂದು ತಂಡ ಉಪಗ್ರಹದ ಮೂಲಕ ಲಭ್ಯವಿರುವ ಮಾಹಿತಿಯನ್ನು ವಿಶ್ಲೇಷಿಸಿ, ಹವಾಮಾನದಲ್ಲಿ ಯಾವ ರೀತಿ ಬದಲಾವಣೆಗಳು ಆಗಲಿದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ರೈತರಿಗೆ ಕೃಷಿ ಇಲಾಖೆಯ ಮೂಲಕ ತಿಳಿಸುವ ಕೆಲಸ ಇದಾಗಿತ್ತು. ಅದರಿಂದ ರೈತರು ತಮ್ಮ ಬೆಳೆಗಳ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತಿತ್ತು ಮತ್ತು ನೈಸರ್ಗಿಕ ವಿಕೋಪಗಳಿಂದ ಆಗಲಿರುವ ನಷ್ಟವನ್ನು ಸಹ ತಡೆಯಲು ಅನುಕೂಲವಾಗುತ್ತಿತ್ತು. ಈ ಮಾಹಿತಿ ಸಕಾಲದಲ್ಲಿ ಸಿಕ್ಕರೆ ಮಾತ್ರ ಅದರ ಪ್ರಯೋಜನ ರೈತರಿಗೆ ಸಿಗಬಹುದಿತ್ತು. ಮುಂದಿನ ವಾರ ಈ ಯೋಜನೆ ಸಫಲವಾಯಿತೇ ಇಲ್ಲವೇ ಮತ್ತು ನನ್ನ ಜಪಾನಿನ ಅಧ್ಯಯನ ಪ್ರವಾಸದ ಬಗ್ಗೆ ತಿಳಿಸುತ್ತೇನೆ.
(ಮುಂದುವರೆಯುವುದು)


- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!