ಪರೀಕ್ಷೆಗೆ ಹೆದರದಿರಿ, ಧೈರ್ಯವಾಗಿ ಎದುರಿಸಿರಿ
ನನ್ನ ದೃಷ್ಟಿಯಲ್ಲಿ ಜೀವನವೇ ಒಂದು ಪರೀಕ್ಷೆ. ಅದು ನಿರಂತರವಾದ ಪರೀಕ್ಷೆ. ಕೊಠಡಿಯಲ್ಲಿ ಕುಳಿತುಕೊಂಡು ಪ್ರಶ್ನೆಪತ್ರಿಕೆಗೆ ಉತ್ತರಿಸುವುದೇ ಪರೀಕ್ಷೆಯಲ್ಲ. ಬದುಕಿನಲ್ಲಿ ಬರೆಯಲಾರದ ಎಷ್ಟೋ ಪರೀಕ್ಷೆಗಳು ಎದುರಾಗುತ್ತವೆ. ಸಣ್ಣ ಸಮಸ್ಯೆಯೊಂದು ಪರೀಕ್ಷೆಗೆ ಸಮಾನ. ಪರೀಕ್ಷೆ ಎಂದರೆ ಎದುರಿಸುವುದು. ಅನೇಕರು ಅದಕ್ಕೆ ಹೆದರುತ್ತಾರೆ. ಯಾವುದೇ ಪರೀಕ್ಷೆಗೂ ಅಂಜಬಾರದು. ಹೇಳಿ ಕೇಳಿ ಇದು ಪರೀಕ್ಷಾ ಸಮಯ. ಯಾವ ವಿದ್ಯಾರ್ಥಿ ಪರೀಕ್ಷೆಯನ್ನು ಹತ್ತಿರವಿದ್ದಾಗ ಗಂಭೀರವಾಗಿ ತೆಗೆದುಕೊಳ್ಳುತ್ತಾನೋ ಅಂತಹವನು ಎಲ್ಲಿಲ್ಲದ ಆತಂಕವನ್ನು ಎದುರಿಸಬೇಕಾಗುತ್ತದೆ. ಪರೀಕ್ಷೆ ದೂರ ಇದ್ದಾಗ ಚಿನ್ನಾಟ, ಹತ್ತಿರ ಬಂದಾಗ ಪೇಚಾಟ. ವರ್ಷವಿಡೀ ಶಾಲಾ ಕಾಲೇಜಿನ ಖುಷಿಯನ್ನು ಅನುಭವಿಸುತ್ತ ಪರೀಕ್ಷೆ ಸಮೀಪಿಸಿದಾಗ ತುಂಬಾ ಸೀರಿಯಸ್ ಆಗುವವರ ಸಂಖ್ಯೆ ಅಧಿಕ. ಸತತ ಅಧ್ಯಯನದ ಆಸಕ್ತಿಗೆ ಒಳಗಾದಲ್ಲಿ ಅಂತಹ ವಿದ್ಯಾರ್ಥಿ ಪರೀಕ್ಷೆ ಯಾವಾಗ ಬಂದೀತೋ ಎಂದು ಎದುರು ನೋಡುತ್ತಿರುತ್ತಾನೆ/ಳೆ. ಸತತ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಾರದ ವಿದ್ಯಾರ್ಥಿಯಲ್ಲಿ ಪರೀಕ್ಷೆ ಏಕಾದರೂ ಬರುತ್ತದೋ ಎಂಬ ಆತಂಕ. ಕೆಲವರು ಪರೀಕ್ಷೆ ಸಮೀಪಿಸಿದ ಸಂದರ್ಭದಲ್ಲಿ ಓದಲು ಕೂಡುತ್ತಾರೆ. ಕಷ್ಟಪಟ್ಟು ಓದುತ್ತಾರೆ. ರಾತ್ರಿಯೆಲ್ಲ ಅವರ ಕೊಠಡಿಯಲ್ಲಿ ಲೈಟ್ ಉರಿಯುತ್ತಿರುತ್ತದೆ. ಮುಂಜಾನೆ ಅವರನ್ನು ನೋಡಿದಾಗ ಕಂಗಳು ಕೆಂಪಾಗಿರುತ್ತವೆ. ಅದಕ್ಕೆ ನಿದ್ರಾಹೀನತೆಯೇ ಕಾರಣ. ಮೆದುಳಿಗೆ ತನ್ನದೇ ಆದ ಮಿತಿಗಳಿವೆ. ಅದರ ಮೇಲೆ ಅತಿಯಾದ ಒತ್ತಡ ವಿಧಿಸಿದಾಗ, ತನ್ನ ಸ್ಥೀಮಿತವನ್ನು ಕಳೆದುಕೊಳ್ಳುತ್ತದೆ. ಹೀಗೆ ಶಾರೀರಕ ಮತ್ತು ಬೌದ್ಧಿಕ ಏರಿಳಿತದಿಂದಾಗಿ ಜ್ವರ ಬಾಧೆ ಉಂಟಾಗುತ್ತದೆ. ಇದನ್ನು ಎಕ್ಸಾಮ್ ಫಿವರ್ ಎಂದು ಕರೆಯಲಾಗುತ್ತದೆ. ಪರೀಕ್ಷೆ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಿ, ಅದನ್ನು ಸಹಜವಾಗಿ ಸ್ವೀಕರಿಸಬೇಕು. ಪರೀಕ್ಷಾ ಸಮಯದಲ್ಲಿ ಜ್ವರದ ಬಾಧೆಗೆ ಒಳಗಾಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿ ಮುಂಬರುವ ಪರೀಕ್ಷೆಯ ಮೇಲೆ ನಕರಾತ್ಮಕ ಪ್ರಭಾವ ಬೀರುತ್ತದೆ.
ಇನ್ನು ಕೆಲವರಿಗೆ ಪ್ರಶ್ನೆ ಪತ್ರಿಕೆಯನ್ನು ನೋಡಿ ಉತ್ತರದ ಬದಲಾಗಿ, ಬೆವರು ಬರಲಾರಂಭಿಸುತ್ತದೆ. ಭೋಜನದ ಸಮಯದಲ್ಲಿ ಬರುವ ಬೆವರು, ಪರೀಕ್ಷಾ ಕೊಠಡಿಯಲ್ಲಿ ಇಳಿಯುವ ಬೆವರು ಎರಡೂ ಆರೋಗ್ಯಕರವಲ್ಲ. ಈ ಬೆವರು ಆತಂಕದ ಸಂಕೇತ. ಪರೀಕ್ಷಾ ದಿನಗಳಲ್ಲಿ ಸಮಾಧಾನದ ಸ್ಥಿತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಯಾವ ವಿದ್ಯಾರ್ಥಿ ಸಹನೆಯೊಂದಿಗೆ ಪರೀಕ್ಷಾ ಕೊಠಡಿ ಪ್ರವೇಶಿಸುತ್ತಾನೊ ಅಂತಹ ವಿದ್ಯಾರ್ಥಿಯ ಸ್ಮರಣಶಕ್ತಿ ಅದ್ವಿತೀಯವಾಗಿ ಕೆಲಸ ಮಾಡುತ್ತದೆ. ಆತಂಕವು ಶಾಂತಿಯನ್ನು ಹಾಳು ಮಾಡಿದರೆ, ತಾಳ್ಮೆಯು ಸ್ಮರಣಶಕ್ತಿಯಾಗಿ ಕ್ರಮಬದ್ಧವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಪರೀಕ್ಷಾ ಪತ್ರಿಕೆಯನ್ನು ನೋಡಿ ಗೊಂದಲ ಅಥವಾ ಗಡಿಬಿಡಿಯನ್ನು ತಂದುಕೊಳ್ಳಬಾರದು. ಯಾವ ಪ್ರಶ್ನೆಗೆ ಉತ್ತರ ಹೊಳೆಯುತ್ತದೋ ಸಮಾಧಾನಕರವಾಗಿ ಬರೆಯುತ್ತಾ ಹೋಗಬೇಕು. ಯಾವ ಪ್ರಶ್ನೆಗೆ ಉತ್ತರ ಹೊಳೆಯುವುದಿಲ್ಲವೋ ಅದನ್ನು ಕೊನೆಗೆ ಇಟ್ಟುಕೊಂಡು ಉಳಿದಿರುವ ಸಮಯದಲ್ಲಿ ಅದನ್ನು ಬಿಡಿಸಬಹುದು. ಜಾಗರೂಕತೆ ಮತ್ತು ಏಕಾಗ್ರತೆ ಎರಡನ್ನೂ ಬಳಸಿಕೊಂಡು ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಸಮಾಧಾನಕರವಾಗಿ ನಿಭಾಯಿಸಬಹುದು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಯಾವ ಒತ್ತಡವನ್ನೂ ವಿಧಿಸಬಾರದು. ಇನ್ನು, ಯಾರೂ ಕೂಡ ತಮ್ಮನ್ನು ಇನ್ನೊಬ್ಬರ ಸಂಗಡ ಹೋಲಿಸಿಕೊಳ್ಳಬಾರದು. ಅವರು ಅವರೇ, ನೀವು ನೀವೇ. ಒಂದೇ ತೆರನಾದ ಬದುಕು, ಭಾವನೆ, ಭವಿಷ್ಯವು ತದ್ರೂಪ ವ್ಯಕ್ತಿತ್ವಗಳನ್ನು ಸೃಷ್ಟಿಸುತ್ತದೆ. ಇದು ಸರಿಯಲ್ಲ. ವಿಭಿನ್ನ ಆಲೋಚನಾ ಕ್ರಮವನ್ನು ಆರಂಭಿಸಿಕೊಳ್ಳಬೇಕಾಗುತ್ತದೆ. ಅದು ವಿಭಿನ್ನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ವಿಭಿನ್ನ ವ್ಯಕ್ತಿತ್ವವೇ ವಿಶೇಷ ವ್ಯಕ್ತಿತ್ವ. ವಿಭಿನ್ನ ವ್ಯಕ್ತಿತ್ವವು ಅಸಾಧಾರಣವಾದ ಯಶಸ್ಸನ್ನು ತಂದುಕೊಡುತ್ತದೆ. ನಿಮ್ಮ ಬದುಕಿಗೆ ನೀವೇ ಅಧಿಪತಿ. ನಿಮ್ಮ ಬದುಕಿನ ನಿಮಾರ್ತೃಗಳು ನೀವೇ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವೇ ಕೈಗೊಳ್ಳುವುದರ ಮುಖಾಂತರ ನೀವು ವಿಭಿನ್ನ ಅನ್ನುವುದನ್ನು ಜಗತ್ತಿಗೆ ತೋರಿಸಿಕೊಡಿ.
- ಡಾ. ಶಿವಮೂರ್ತಿ ಮುರುಘಾ ಶರಣರು
ಶ್ರೀ ಮುರುಘಾಮಠ, ಚಿತ್ರದುರ್ಗ