ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗುರುಗಳಿಗೆ ಓದುಗರ ಪ್ರೀತಿ ಗಿಟ್ಟುತ್ತಿಲ್ಲವೆಂದು ಅಳುತ್ತಿದ್ದೀರಾ ಅರವಿಂದ್?

Mainashree
Updated On : 11 Mar 2013, 10:45 am

ಅರವಿಂದ್ ಅಡಿಗ ಎಂಬ ಲೇಖಕ ಇತ್ತೀಚೆಗೆ ಔಟ್‌ಲುಕ್ ಮ್ಯಾಗಜೀನ್‌ಗೆ ಬರೆದ ಲೇಖನದಲ್ಲಿ ಶ್ರೇಷ್ಠ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಮೇಲೆ ದಾಳಿ ಮಾಡಿದ್ದಾರೆ. ಈ ವಿಷಯ ಎಲ್ಲೆಡೆಯೂ ಚರ್ಚೆಯಾಗುತ್ತಿದೆ.  ಆದರೆ ಅರವಿಂದ್ ಅಡಿಗರಂತಹ ಲೇಖಕರನ್ನು ನಾವು ಅಷ್ಟೊಂದು ಗಂಭೀರವಾಗಿ ಪರಿಗಣಿಸಬೇಕೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರ, ಹೌದು ಮತ್ತು ಇಲ್ಲ. ಏಕೆ ಹೌದೆಂದರೆ, ಅಪ್ರಾಮಾಣಿಕ ಬರವಣಿಗೆಯ ಮೂಲಕ ಪಾಶ್ಚಿಮಾತ್ಯ ಪ್ರಶಸ್ತಿ ಮತ್ತು ಐಶ್ವರ್ಯದಿಂದ ಅನುದಾನಿತರಾದ ಭಾರತೀಯ 'ಸಾಹಿತ್ಯ ವಂಚಕರ' ಗುಂಪಿಗೆ ಅವರು ಹೊಸ ಪ್ರತಿನಿಧಿಯಾಗಿದ್ದಾರೆ ಎನ್ನುವ ಕಾರಣಕ್ಕೆ. ದಯನೀಯ ಸಂಗತಿಯೆಂದರೆ, ಇಂತಹ ಸಾಹಿತ್ಯಿಕ ಸಿಪಾಯಿಗಳ ಗುಣಮಟ್ಟ ಕಳೆದ ಕೆಲವು ವರ್ಷಗಳಿಂದ ತೀವ್ರವಾಗಿ ಕುಸಿಯುತ್ತಿರುವುದು.  'ಬುಕರ್‌' ಗೆದ್ದಿರದಿದ್ದರೆ, ಭೈರಪ್ಪನವರಂತಹ ಶ್ರೇಷ್ಠ ಸಾಹಿತಿಗಳ ವಿರುದ್ಧ ಹೀಗೆ ಅಜ್ಞಾನದಿಂದ ಹರಿಹಾಯುವುದಕ್ಕೆ ಅರವಿಂದ್ ಅವರಿಗೆ ಯಾವ ಪತ್ರಿಕೆ ಅಥವಾ ನಿಯತಕಾಲಿಕಗಳೂ ಜಾಗ ಕೊಡುತ್ತಿರಲಿಲ್ಲ.
ಅರವಿಂದ್ ಅವರು ತಮ್ಮ ಗುರುಗಳಾದ ಅನಂತಮೂರ್ತಿಯವರ ಪುಸ್ತಕಗಳ ಬಗ್ಗೆ ಹುರುಳಿಲ್ಲದ ಹೊಗಳಿಕೆ ಯನ್ನೇ ಹರಿಸಿರುವುದು (ಸಂಸ್ಕಾರದ...ಶಾಬ್ದಿಕ ಕಲಾತ್ಮಕತೆ ಇತ್ಯಾದಿ) ಮತ್ತು ಭೈರಪ್ಪನವರ ಕೃತಿಗಳ ಬಗ್ಗೆ ಮಾಡಿರುವ ವಿಮರ್ಶೆಯಲ್ಲಿ ತಮ್ಮ ಎಡಪಂಥೀಯ ತೀವ್ರವಾದಿ ಸಾಹಿತ್ಯ ಸಿದ್ಧಾಂತವನ್ನು ಹರಿಬಿಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಭೈರಪ್ಪನವರ ಕಾದಂಬರಿಗಳ ಬಗೆಗಿನ ಆರೋಪಗಳು 'ಸ್ಥಿರ ಸತ್ಯ' ಎಂಬಂತೆ ಬಣ್ಣಿಸುತ್ತಾರೆ ಅಡಿಗ. ಆದರೆ ಇಂತಹ ಆರೋಪಗಳನ್ನು ಹುಟ್ಟುಹಾಕಿದ್ದೇ ಯು.ಆರ್.ಅನಂತಮೂರ್ತಿಯವರು ಎನ್ನುವುದನ್ನು ಅವರು ಮುಚ್ಚಿಡುತ್ತಾರೆ. 'ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಗಿಂತಲೂ ಮುಂಚಿತವಾಗಿ 'ವಂಶವೃಕ್ಷ' ಕಾದಂಬರಿ ತಂದ ಭೈರಪ್ಪ 'ಅನಂತಮೂರ್ತಿ ವಿರೋಧಿ', ಹಿಂದೂ ಧರ್ಮದ ಮೇಲ್ಜಾತಿಯನ್ನು ಪ್ರತಿಪಾದಿಸುವ ಸಂಪ್ರದಾಯವಾದಿ ಎಂಬ ಟೀಕೆಗೂ ಗುರಿಯಾದರು. ಇದೊಂದು ಒರಟು ಆರೋಪವಾಗಿತ್ತು.' ಎಂದು ಅಡಿಗ ಹೇಳಿದ್ದಾರೆ. ಅದು ಒರಟು ದಾಳಿಯಾಗಿತ್ತು ಎಂಬುದನ್ನು ಒಪ್ಪೋಣ, ಹಾಗಿದ್ದರೆ ಆ ಆರೋಪ ಎಲ್ಲಿಂದ, ಹೇಗೆ ಉದ್ಭವವಾಯಿತು ಎಂಬುದನ್ನು ಅದೇಕೆ ಅವರು ಹೇಳುವುದಿಲ್ಲ?
ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕಾದರೆ ನಾವು 20ನೇ ಶತಮಾನದ ಕನ್ನಡ ಸಾಹಿತ್ಯ ಇತಿಹಾಸದತ್ತ ಕಣ್ಣುಹಾಯಿಸಬೇಕು. ಅದರ ಆರಂಭಿಕ ಮತ್ತು ವ್ಯಾಖ್ಯಾನಾರ್ಹ ಯುಗವೆಂದರೆ 'ನವೋದಯ'. ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಶಿವರಾಮ್ ಕಾರಂತ್ ಇನ್ನಿತರರು ನವೋದಯದ ಕಟ್ಟಾಳುಗಳಾದರು. ಇವರಲ್ಲಿ ಬಹುತೇಕರು, ಭಾರತದ ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯದ ಮೇಲೆ ಹಿಡಿತ ಸಾಧಿಸಿದ್ದಷ್ಟೇ ಅಲ್ಲದೆ ಪಾಶ್ಚಿಮಾತ್ಯ ಸಾಹಿತಿಗಳಿಗೆ ಸಡ್ಡು ಹೊಡೆಯುವಂತಹ ಪಾಂಡಿತ್ಯ ಶಕ್ತಿಯನ್ನೂ ಪಡೆದಿದ್ದರು. ನವೋದಯದ ನಂತರ ಉದಯವಾಗಿದ್ದು, 'ನವ್ಯ'. ಗೋಪಾಲಕೃಷ್ಣ ಅಡಿಗರ ಮುಂದಾಳತ್ವದಲ್ಲಿ ಹಾದಿ ಕಂಡುಕೊಂಡ ಈ ಪ್ರಕಾರದಲ್ಲಿ ಯು.ಆರ್. ಅನಂತಮೂರ್ತಿ, ಲಂಕೇಶ್, ಕಾರ್ನಾಡ್, ಗೋಕಾಕ್, ಯಶವಂತ ಚಿತ್ತಾಲ, ರಾಮಚಂದ್ರ ಶರ್ಮ ಮತ್ತು ಶಾಂತಿನಾಥ ದೇಸಾಯಿಯಂತಹ ಲೇಖಕರು ದೊಡ್ಡ ಪಟ್ಟಿಯೇ ಕಾಣುತ್ತದೆ.
ಆದರೆ, ಹೊಸ ಸಾಹಿತ್ಯ ಪರಂಪರೆಯಾಗಬೇಕಿದ್ದ ನವ್ಯ ಸಾಹಿತ್ಯಕ್ಕೆ ಅದರ ಪ್ರತಿಪಾದಕರು ಆಂದೋಲನದ ರೂಪ ಕೊಟ್ಟುಬಿಟ್ಟರು. ಬಹುಶಃ 'ನವ್ಯ ಸಾಹಿತ್ಯ' ಎಂಬ ನುಡಿಗಟ್ಟನ್ನು ಹುಟ್ಟುಹಾಕಿದ ವಿ.ಕೃ.ಗೋಕಾಕ್ ಅವರಿಗೆ ಮುಂದೆ ಅದು ಯಾವ ರೂಪ ಪಡೆಯಲಿದೆ ಎನ್ನುವುದು ಗೊತ್ತಿರಲಿಲ್ಲವೇನೋ!  
ನವ್ಯ ಚಳವಳಿಯ ಬಹುತೇಕ ಲೇಖಕರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ (ಹೆಚ್ಚಾಗಿ ಇಂಗ್ಲೆಂಡ್‌ನಲ್ಲಿ) ಓದಿಕೊಂಡು ಬಂದವರು. ಆಗಂತೂ ಆ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ವಾತಾವರಣ ಎಡಪಂಥೀಯವೇ ಆಗಿತ್ತು. ಅಲ್ಲಿನ ಸಿದ್ಧಾಂತಗಳನ್ನೆಲ್ಲ ತಂದು ಇವರುಗಳು ನಮ್ಮ ದೇಶದಲ್ಲೂ ಹರಡಿಬಿಟ್ಟರು. ಆ ಸಮಯದಲ್ಲಿ ರಾಜಕೀಯದಲ್ಲೂ ಮಾರ್ಕ್ಸಿಸಮ್‌ನ ಪ್ರಾಬಲ್ಯವಿದ್ದುದರಿಂದ ಈ ಕೆಲಸ ಸುಸೂತ್ರವಾಗಿ ನಡೆಯಿತು. ಆಗ ಇವರುಗಳೆಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತಹ ಸಮಸ್ಯೆಯನ್ನು ಭಾರತದಲ್ಲಿ ಹುಡಕತೊಡಗಿದರು. ಇಲ್ಲಿ ಆ ಸಮಸ್ಯೆಗಳು ಗೋಚರವಾಗದಿದ್ದಾಗ, ತಾವೇ ಅಂತಹ ಸಮಸ್ಯೆಗಳನ್ನು ಹುಟ್ಟುಹಾಕಿದರು. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಅನಂತಮೂರ್ತಿಯವರ 'ಭಾರತೀಪುರ' ಕಾದಂಬರಿ. ಇನ್ನು ಅರವಿಂದ್ ಅಡಿಗ ಹೊಗಳಿ ಅಟ್ಟಕ್ಕೇರಿಸಿದ ಇಂಥದ್ದೇ ಇನ್ನೊಂದು ಕಾದಂಬರಿ- 'ಸಂಸ್ಕಾರ'. ಈ ಪುಸ್ತಕವಂತೂ ಮಾರ್ಕ್ಸಿಸ್ಟ್ ಸಿದ್ಧಾಂತದ ಬಲಿಪೀಠದ ಮೇಲೆ ಪ್ರಾಮಾಣಿಕತೆಯನ್ನೇ ಬಲಿಕೊಟ್ಟಿದೆ. 'ಸಂಸ್ಕಾರದ ಮುಖ್ಯ ಪಾತ್ರ ಸನಾತನ ಧರ್ಮದ ಪ್ರತಿನಿಧಿಯೆಂದು ಚಿತ್ರಿತವಾಗಿರುವ ಪ್ರಾಣೇಶಾಚಾರ್ಯರದ್ದು. ಈ ಪಾತ್ರ ಭಾರತೀಯವಲ್ಲ, ಭಾರತೀಯ ಧರ್ಮಶಾಸ್ತ್ರವನ್ನೂ ಇದು ಪ್ರತಿನಿಧಿಸುವುದಿಲ್ಲ. ಬಾಧೆ ಪಡುವ ಮೂಲಕ ಆಧ್ಯಾತ್ಮಿಕ ಪರಿಪಕ್ವತೆಯನ್ನು ಸಾಧಿಸುವ ಕ್ರಿಶ್ಚಿಯನ್ ತತ್ವವನ್ನು ಇದು ಪ್ರತಿಬಿಂಬಿಸುತ್ತದೆ.' ಎಂದು ಭೈರಪ್ಪನವರು 'ಭಿತ್ತಿ'ಯಲ್ಲಿ ಬರೆಯುತ್ತಾರೆ.
'ಸಂಸ್ಕಾರ', ನಮ್ಮ ದೇಶ ಮತ್ತು ಸಂಸ್ಕೃತಿಗೆ ಅಪರಿಚಿತವಾಗಿರುವ ಪಾಶ್ಚಿಮಾತ್ಯರ ಅಸ್ತಿತ್ವವಾದ ಮತ್ತು ಮಾರ್ಕ್ಸ್‌ವಾದಿ ಧೋರಣೆಯ ಹಾದಿ ತಪ್ಪಿಸುವ ಬೆರಕೆಯಾಗಿದೆ. ಈ ತಂತ್ರ ಭಾರತೀಯ ಇತಿಹಾಸವನ್ನು ವಿರೂಪಗೊಳಿಸಿದ ಮಾರ್ಕ್ಸಿಸ್ಟ್ ಸಿದ್ಧಾಂತಕ್ಕೆ ಸರಿಯಾಗಿ ಹೊಂದುತ್ತದೆ.
ಇದೇ ರೀತಿಯಲ್ಲಿ 'ನವ್ಯ ಸಾಹಿತ್ಯ' ಕನ್ನಡ ಸಾಹಿತ್ಯದಲ್ಲಿ ರಾಜಕೀಯದ ಬೆರಕೆ ಮಾಡಿಬಿಟ್ಟಿತು. ಈ ಗುಣಗಳಿಗೆ ಹೊಂದಿಕೆಯಾಗುವಂತೆ ರಚನೆಯಾದ ಕೃತಿಗಳು ಮಾತ್ರ ಪ್ರಕಟವಾಗುವ ಭಾಗ್ಯ ಕಂಡವು. ಹೊಂದಿಕೆಯಾಗದ ಕೃತಿಗಳು ಕಸದ ಬುಟ್ಟಿ ಸೇರಿದವು! ಅನಂತಮೂರ್ತಿಯನ್ನು ಅಟ್ಟಕ್ಕೇರಿಸುವ ಅರವಿಂದ್, ಅಕ್ಷರ ಪ್ರಕಾಶನದಿಂದ ಪ್ರಕಟವಾಗುತ್ತಿದ್ದ 'ಸಾಕ್ಷಿ' ಜರ್ನಲ್‌ನ ಬಗ್ಗೆ ಹೇಳುವುದನ್ನೇ ಮರೆತುಬಿಟ್ಟಿದ್ದಾರೆ. ಸಾಕ್ಷಿ ಪತ್ರಿಕೆಯನ್ನು ಪರೋಕ್ಷವಾಗಿ ನಿರ್ವಹಿಸುತ್ತಿದ್ದುದು ಗೋಪಾಲಕೃಷ್ಣ ಅಡಿಗ ಮತ್ತು ಅನಂತಮೂರ್ತಿಯವರು. ಅಡಿಗ-ಅನಂತಮೂರ್ತಿ ಜೋಡಿ ಕನ್ನಡ ಸಾಹಿತ್ಯಕ್ಕೆ ಮಾಡಿದ ಹಾನಿಯನ್ನು ಲೆಕ್ಕಹಾಕುವುದಕ್ಕೆ ಸಾಧ್ಯವೇ ಇಲ್ಲ.
ಈ ಕುರಿತು ತಮ್ಮ ಆತ್ಮಕತೆಯಲ್ಲಿ ಭೈರಪ್ಪ ಹೀಗೆ ಹೇಳುತ್ತಾರೆ: 'ಆ ಸಮಯದಲ್ಲಿ ಎಮ್.ಎ ಓದುತ್ತಿದ್ದ ಬಹುತೇಕ ವಿದ್ಯಾರ್ಥಿಗಳ ಕೈಯಲ್ಲಿ 'ಸಾಕ್ಷಿ' ಪತ್ರಿಕೆಯ ಪ್ರತಿಯೊಂದಿರುತ್ತಿತ್ತು....ಅದರಲ್ಲಿ ತಮ್ಮ ಲೇಖನಗಳು ಪ್ರಕಟವಾಗಬೇಕಾದರೆ ಅನಂತಮೂರ್ತಿ ಅಥವಾ ಅಡಿಗರನ್ನು ಹೊಗಳಬೇಕು ಎನ್ನುವ ಅರಿವು ಆ ವಿದ್ಯಾರ್ಥಿಗಳಿಗಿತ್ತು...'
ಎ.ಕೆ. ರಾಮಾನುಜನ್ ಅನಂತಮೂರ್ತಿಯವರ 'ಸಂಸ್ಕಾರವನ್ನು' ಇಂಗ್ಲಿಷ್‌ಗೆ ಭಾಷಾಂತರಿಸಿ ಬೆನ್ನು ತಟ್ಟಿಸಿಕೊಂಡರೆ, ಅನಂತಮೂರ್ತಿ ರಾಮಚಂದ್ರ ಶರ್ಮ ಅವರ ಕೃತಿಗಳನ್ನು ಹೊಗಳುತ್ತಿದ್ದರು, ಇದರ ನಡುವೆ ಅನಂತಮೂರ್ತಿ, ಅಡಿಗ ಮತ್ತು ಲಂಕೇಶ್ ಅವರು ರಾಮ ಮನೋಹರ ಲೋಹಿಯಾರ್ ಸಮಾಜವಾದದ ಬ್ರ್ಯಾಂಡ್‌ನ ಕಾರ್ಡ್‌ಗಳನ್ನು ಎದೆಗವುಚಿಕೊಂಡು ಓಡಾಡುತ್ತಿದ್ದರು. ಅಡಿಗರು ಲೋಹಿಯಾರ ಚಿಂತನೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಒಟ್ಟಿನಲ್ಲಿ ಇಂಥವರೆಲ್ಲರೂ ಸೇರಿ, ಕನ್ನಡ ಸಾಹಿತ್ಯವನ್ನು ರಾಜಕೀಯಗೊಳಿಸಿದ್ದಷ್ಟೇ ಅಲ್ಲದೆ, ತಮ್ಮ ವಿಕ್ಷಿಪ್ತ ಸಿದ್ಧಾಂತದ ಬಲಿಪೀಠದಲ್ಲಿ ಸಾಹಿತ್ಯವನ್ನು ಬಲಿಕೊಟ್ಟರು. ಹಾಗಾಗೇ ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ಸಾಹಿತ್ಯದತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿದಾಗ, ಅವುಗಳಲ್ಲೆಲ್ಲ ಈ 'ನವ್ಯ' ಜೀವಿಗಳ ರಾಜಕೀಯ ಬೆರಳಚ್ಚುಗಳೇ ಕಾಣಿಸುತ್ತವೆ.
ಆದರೆ ಯಾವ 'ಇಸಂ'ಗಳಿಗೂ ಅಂಟಿಕೊಳ್ಳದೆ, ಸಿದ್ಧಾಂತಕ್ಕೆ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳದೆ, ಲಕ್ಷಾಂತರ ಓದುಗರನ್ನು ಸಂಪಾದಿಸಿದ ಏಕೈಕ ಲೇಖಕರೆಂದರೆ ಎಸ್.ಎಲ್.ಭೈರಪ್ಪ ಅವರು. ಮೊದಲಿಗೆ ಅವರು ದೂರದ ಗುಜರಾತ್ ಮತ್ತು ದೆಹಲಿಯಲ್ಲಿ ಕುಳಿತು ಪುಸ್ತಕ ಬರೆದರು. ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಅವುಗಳು ಭರ್ಜರಿಯಾಗಿ ಮಾರಾಟವಾಗತೊಡಗಿದವು. 50 ವರ್ಷದಿಂದ ಭೈರಪ್ಪನವರನ್ನು ಈ ವಿಷಯದಲ್ಲಿ ಹಿಂದೆ ಹಾಕಿದವರು ಯಾರೂ ಇಲ್ಲ. ಈ ವಿಷಯವೇ ಅನಂತಮೂರ್ತಿಯಂಥವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಒಂದೆಡೆ ಯಾವ ಸಿದ್ಧಾಂತಕ್ಕೂ ಗಂಟು ಬೀಳದೆ, ಯಾವ ಆಟವನ್ನೂ ಆಡದೆ, ಲಕ್ಷಾಂತರ ನಿಷ್ಠ ಓದುಗರ ಪ್ರೀತಿಗೆ, ಗೌರವಾದರಕ್ಕೆ ಪಾತ್ರವಾದ ಭೈರಪ್ಪ ಇದ್ದರೆ, ಇನ್ನೊಂದೆಡೆ ತಮ್ಮ ಚೇಲಾ ಸೈನ್ಯದ ಮೂಲಕ ಸಾಹಿತ್ಯ ವಲಯವನ್ನೆಲ್ಲ ತಮ್ಮ ಬೆರಳ ಮೇಲೆ ಕುಣಿಸುತ್ತಿದ್ದ ಅನಂತಮೂರ್ತಿಗಳಿದ್ದಾರೆ. ಈ ಪ್ರಭಾವದಿಂದಲೇ ಅವರು ಸರ್ಕಾರದ ಅನೇಕ ಪ್ರಭಾವಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಸಫಲರಾದರು. ಆದರೆ ಕ್ಷುಲ್ಲಕ ರಾಜಕೀಯಕ್ಕಿಳಿಯದೆ, ಕೇವಲ ಪ್ರತಿಭೆಯನ್ನೇ ನೆಚ್ಚಿಕೊಂಡಿರುವ ಭೈರಪ್ಪನವರಿಗೆ ಇಂಥ ಸ್ಥಾನಗಳು ಅದ್ಹೇಗೆ ತಾನೆ ಸಿಕ್ಕಾವು?!
ಅರವಿಂದ್ ಅಡಿಗ ಅವರ ಸಾಹಿತ್ಯ ದಾಳಿ ಈ ತೆರನಾಗಿದ್ದರೆ, ಇನ್ನು ಅವರ ರಾಜಕೀಯ ದಾಳಿಯಲ್ಲಿನ ಮುಖ್ಯ ತಂತ್ರ  'ಹಿಂದುತ್ವ' ಟ್ಯಾಗ್ ಹಚ್ಚುವುದು! ಅವರು ಬರೆಯುತ್ತಾರೆ- 'ಎಸ್.ಎಲ್. ಭೈರಪ್ಪನವರು ಹಿಂದುತ್ವವಾದಿ ಎಂಬ ಒಂದೇ ಕಾರಣಕ್ಕೆ ಅವರ ಉಳಿದೆಲ್ಲಾ ಸಾಧನೆಗಳು ಮೂಲೆಗುಂಪಾಗಿವೆ. ಮತಾಂತರ ಹಾಗೂ ಗೋಹತ್ಯೆಯನ್ನು ಅವರು ವಿರೋಧಿಸುತ್ತಾರೆ. ಟಿಪ್ಪು ಮಹಾಪುರುಷ ಎನ್ನುವುದಕ್ಕಿಂತ ಧರ್ಮಾಂಧನಂತೆಯೇ ಅವರಿಗೆ ಹೆಚ್ಚಾಗಿ ಕಂಡಿದ್ದಾನೆ. ಅವರ ಅಭಿಮಾನಿಗಳಿಗೂ ಕೂಡ ಈ ವಿಷಯಗಳು ಮುಜುಗರ ತರುವಂತಹವು. ಇದು ಕಟ್ಟಾ ಜಾತ್ಯತೀತರಾದ ಅನಂತಮೂರ್ತಿ ಅವರನ್ನು ಆರಾಧಿಸುವುದನ್ನು ಸುಲಭಗೊಳಿಸಿ ಭೈರಪ್ಪನವರ ಅಸ್ತಿತ್ವವನ್ನೇ ಮರೆಯುವುದಕ್ಕೆ ಕಾರಣವಾಗಿರಬಹುದು' ಎನ್ನುತ್ತಾರೆ. ಆದರೆ  ಮತಾಂತರವನ್ನು ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಭೈರಪ್ಪ ಬರೆದಿರುವುದರಲ್ಲಿ ಹುರುಳಿಲ್ಲ ಎನ್ನುವುದನ್ನು ಅಡಿಗ ಸಾಬೀತುಪಡಿಸಬಲ್ಲರೇ? ಇನ್ನು 'ಆವರಣ' ಪುಸ್ತಕದ ಬಗ್ಗೆ ಬರೆಯುತ್ತಾ ಅರವಿಂದ್, 'ಈ ಪುಸ್ತಕ ಹಿಂದೂಗಳ ಮತ್ತು ಅವರ ಸಂಸ್ಕೃತಿಯ ಮೇಲೆ ಮುಸಲ್ಮಾನರು ನಡೆಸಿದ ಪಾಪಕೃತ್ಯಗಳ ಪಟ್ಟಿಯಷ್ಟೆ. ಅದನ್ನು ಅನಂತಮೂರ್ತಿ ಬಹಿರಂಗವಾಗಿ ಟೀಕಿಸಿದರು. ಭೈರಪ್ಪನವರು ಅನಂತಮೂರ್ತಿ ಅವರೊಂದಿಗೆ ಬಹಿರಂಗ ಚರ್ಚೆಗೆ ಮುಂದಾದರು....ಆವರಣ ಬಲಪಂಥೀಯ ಅಭಿಮಾನಿಗಳ ಪಂಥವನ್ನೇ ಕಟ್ಟಿಕೊಟ್ಟಿತು....ಇದರಿಂದಾಗಿ ಜ್ಞಾನಪೀಠದಂತಹ ಪುರಸ್ಕಾರವು ಅವರಿಗೆ ದೊರೆಯದಂತಾಯಿತು. ದುರ್ಬಲ ಕಾದಂಬರಿಯೊಂದು ಲೇಖಕನನ್ನೇ ನುಂಗಿದೆ...' ಎಂದಿದ್ದಾರೆ.
ಅಡಿಗ ಈ ರೀತಿ ದಾಳಿ ಮಾಡಿರುವುದು 'ಆವರಣ' ದುರ್ಬಲ ಕಾದಂಬರಿಯೆಂಬ ಕಾರಣಕ್ಕಲ್ಲ. ಬದಲಾಗಿ ಅದು ಅವರ ಗುರುಗಳಾದ ಯು.ಆರ್. ಅನಂತಮೂರ್ತಿಯಂಥವರಿಗೆ ಸರಿಯಾದ ಉತ್ತರ ಕೊಟ್ಟಿದೆ ಎಂಬ ಕಾರಣಕ್ಕೆ. ಅಲ್ಲದೆ ಹೇಗೆ ಅನರ್ಹರು ಇಂದು ಸಾಹಿತ್ಯ, ಸಿನೆಮಾ, ನಾಟಕ ಮತ್ತು ಸರ್ಕಾರದ ಪ್ರಮುಖ ವಲಯಗಳ ಪ್ರಬಲ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನೆಲ್ಲ ಆ ಕಾದಂಬರಿ ಬೆತ್ತಲುಗೊಳಿಸಿದೆ ಎನ್ನುವ ಕಾರಣಕ್ಕೆ. ಇನ್ನು ಅದರಲ್ಲಿ ಬರುವ ಪ್ರೊ. ಶಾಸ್ತ್ರಿಯವರ ಪಾತ್ರ ಅನಂತಮೂರ್ತಿಯವರನ್ನೇ ಹೋಲುತ್ತದೆ ಎನ್ನುವ ವಿಷಯ ಅರವಿಂದ್ ಅಡಿಗ ಅವರಿಗೆ ಅರಗಿಸಿಕೊಳ್ಳಲೂ ಆಗುತ್ತಿಲ್ಲವೇನೋ? ಇನ್ನು ಭೈರಪ್ಪ ಆವರಣ ಬಿಡುಗಡೆಯಾದ ನಂತರ ಅನಂತಮೂರ್ತಿಯವರೊಂದಿಗೆ ಬಹಿರಂಗ ಚರ್ಚೆಗೆ ಮುಂದಾದರು ಎಂದು ಅಡಿಗ ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ಭೈರಪ್ಪ 'ಆವರಣ' ಕಾದಂಬರಿಯ ಬಗ್ಗೆ ಇದುವರೆಗೂ ಯಾರ ಜೊತೆಯೂ ಬಹಿರಂಗ ಚರ್ಚೆ ಮಾಡಿಲ್ಲ. ಅಲ್ಲದೆ ಅವರದನ್ನು ಸಮರ್ಥಿಸಿಕೊಳ್ಳಲೂ ಇಲ್ಲ. ಅದರ ಪರ ವಕಾಲತ್ತು ವಹಿಸಲೂ ಇಲ್ಲ! ಇನ್ನು ಜ್ಞಾನಪೀಠದ ವಿಷಯಕ್ಕೆ ಬಂದರೆ, ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿಯವರಿಗೆ ಹೇಗೆ ಆ ಪ್ರಶಸ್ತಿ ಸಿಕ್ಕಿತು ಎನ್ನುವುದು ಕನ್ನಡಿಗರಿಗೆ ಗೊತ್ತೇ ಇದೆ.
ಭೈರಪ್ಪನವರ ಕೃತಿಗಳನ್ನು ಅರ್ಥ ಮಾಡಿಕೊಳ್ಳುವಂತಹ ಬೌದ್ಧಿಕ ಸಾಧನ ಇಲ್ಲದಿರುವುದರಿಂದಲೇ ಅಡಿಗ ಈ ರೀತಿ ತಪ್ಪು ವಿಮರ್ಶೆಗಿಳಿದಿದ್ದಾರೆ ಎನಿಸುತ್ತಿದೆ. ಅವರಿಗೆ ಎಲ್ಲದರಲ್ಲೂ ಸಿದ್ಧಾಂತ ಮತ್ತು ರಾಜಕೀಯವೇ ಗೊಚರಿಸುತ್ತದೆಯೇನೋ? ಇನ್ನು 'ಪ್ರತಿ ಕತೆಗೂ ಒಂದು ಕೊನೆ ಇರಬೇಕು' ಎನ್ನುವುದು ಅವರ ವಾದ. ಆದರೆ, ಒಂದು ಕತೆಗೆ ಕೊನೆಯೇ ಇರುವುದಿಲ್ಲ ಎನ್ನುತ್ತದೆ ಸಾಹಿತ್ಯ. ಕಲೆ ಜೀವನವನ್ನು ಸಂಪೂರ್ಣವಾಗಿ ಅನುಕರಿಸಬಾರದು, ಏಕೆಂದರೆ ನಿಜ ಜೀವನದಲ್ಲಿ ಸಾವೇ ನಿಜವಾದ ಕೊನೆ. ಯಾವುದೇ ಉತ್ತಮ ಸಾಹಿತ್ಯವಿರಲಿ, ಅದು ತನ್ನ ಕತೆಯ ಕೊನೆಯಲ್ಲಿ ಪೂರ್ಣ ಚಿನ್ಹೆಯನ್ನಿಡಲು ಪ್ರಯತ್ನಿಸಬಾರದು. ಈ ವಿಷಯ ಅರವಿಂದ್‌ಗೆ ತಿಳಿದಿದ್ದರೆ, ಅವರು ಭೈರಪ್ಪನವರ ಕೃತಿಗಳನ್ನು ಮೆಚ್ಚಿಕೊಳ್ಳುತ್ತಿದ್ದರೋ ಏನೋ?
ಕೊನೆಯದಾಗಿ ಭೈರಪ್ಪ ಮತ್ತು ಅನಂತಮೂರ್ತಿಯವರ ಹೋಲಿಕೆಯನ್ನು ಅವರ ಜನಪ್ರಿಯತೆಯ ಮಾನದಂಡದಿಂದಲೇ ಅಳೆಯಬೇಕು. ಅನಂತಮೂರ್ತಿಯವರನ್ನು ಓದಿಕೊಳ್ಳುವವರ್ಯಾರು ಎನ್ನುವ ಪ್ರಾಮಾಣಿಕ ಪ್ರಶ್ನೆಗೆ ಪ್ರಾಣಿಕವಾದ ಉತ್ತರ ದೊರೆಯುತ್ತದೆ: ಯಾರೂ ಇಲ್ಲ! ಅಂಧಕಾರ ತುಂಬಿದ ವಿಶ್ವವಿದ್ಯಾಲಯಗಳಲ್ಲಿನ ಕೊಳೆತು ನಾರುವ ಡಿಪಾರ್ಟ್‌ಮೆಂಟ್‌ಗಳ ಹೊರಗಿನವರ್ಯಾರೂ ಅವರ ಪುಸ್ತಗಳನ್ನು ಓದುವುದಿಲ್ಲ.
ಭೈರಪ್ಪ ಅವರ ಇತ್ತೀಚಿನ ಕಾದಂಬರಿ 'ಕವಲು' 6 ತಿಂಗಳವರೆಗೆ 'ಬೆಸ್ಟ್ ಸೆಲ್ಲರ್‌' ಆಗಿದ್ದುದು ನಮಗೆಲ್ಲಾ ಗೊತ್ತೇ ಇದೆ. ಅವರ ಪ್ರತಿ ಪುಸ್ತಕದಂತೆ ಈ ಪುಸ್ತಕದ ಬಗೆಗಿನ ಚರ್ಚೆಗಳನ್ನು ನಡೆಸಿದ್ದು ಸರ್ಕಾರೇತರ, ವಿಶ್ವವಿದ್ಯಾಲಯೇತರ ಸಂಸ್ಥೆಗಳೇ. ಭೈರಪ್ಪನವರಿಗೆ 'ಸರಸ್ವತಿ ಸಮ್ಮಾನ' ಪ್ರಾಪ್ತವಾಗಿದ್ದಕ್ಕೆ ಕಳೆದ ವರ್ಷ ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು. ಅದೂ ಎರಡು ಬಾರಿ. ಹಿಂದೂ ಧರ್ಮದಲ್ಲಿ, ಈ ರೀತಿ ಪಲ್ಲಕ್ಕಿಯಲ್ಲಿ ದೇವತೆಗಳನ್ನು ಕೂರಿಸಿ ಮೆರವಣಿಗೆ ಮಾಡುವ ಸಂಪ್ರದಾಯವಿದೆ. ಇದೇ ಅನಂತಮೂರ್ತಿ ಮತ್ತು ಎಸ್.ಎಲ್. ಭೈರಪ್ಪ ಅವರ ನಡುವಿರುವ ಬಹುದೊಡ್ಡ ವ್ಯತ್ಯಾಸ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement