ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆರ್ಥಿಕ ಮೂಲಮಂತ್ರ ಎಂದು ಬರಿದೇ ಗೊಣಗುವುದಕ್ಕೆ ಮೊದಲು...

Mainashree
Updated On : 13 Mar 2013, 12:28 pm

ಪಿ. ಚಿದಂಬರಂ ಬಹಳ ಬುದ್ಧಿವಂತ ರಾಜಕಾರಣಿ. ಅತಿ ಹೆಚ್ಚಿನ ಕೇಂದ್ರ ಬಜೆಟ್‌ಗಳನ್ನು ಮಂಡಿಸಿರುವವರಲ್ಲಿ ಎರಡನೆಯವರಾಗಿ ನಿಲ್ಲುತ್ತಾರವರು. ಇತರ ಪ್ರಮುಖ ಖಾತೆಗಳನ್ನೂ ನಿಭಾಯಿಸಿದ ಅನುಭವ ಇರುವಂತಹ ಚಿದು, ನಿಶ್ಚಯವಾಗಿಯೂ ಯುಪಿಎದ ಪ್ರಮುಖ ಆಧಾರ ಸ್ತಂಭ. ಹೀಗಾಗಿಯೇ ಚಿದಂಬರಂ ಅವರ ಬಜೆಟ್ ಭಾಷಣವನ್ನು ಕೇಳುವಾಗ ನಾನು ಕೇವಲ ಆದಾಯ ಮತ್ತು ಖರ್ಚುಗಳ ಅಂಕಿಅಂಶಗಳ ಮೇಲೆ ಗಮನ ಕೇಂದ್ರೀಕರಿಸದೇ ಅದರಾಚೆ ಯಾವುದಾದರೂ ಬಲವಾದ ತತ್ವವೊಂದು ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಬಜೆಟ್ ನಿರ್ಮಿತಿ ಪ್ರಕ್ರಿಯೆಯಲ್ಲಿ ನಿರ್ದೇಶಿಸಿರುವುದೇ ಎಂದು ಗಮನಿಸುತ್ತಿದ್ದೆ. ಅಲ್ಲಿ ನನಗೆ ಕಂಡಿದ್ದು ಕೇವಲ ಬಾಯ್ಮಾತಿನ ಹೆಚ್ಚುಗಾರಿಕೆ ಮಾತ್ರ.

ಬಜೆಟ್ ಭಾಷಣದ ಪ್ರಾರಂಭದಲ್ಲೇ ಹಣಕಾಸು ಸಚಿವ ಪಿ. ಚಿದಂಬರಂ ಅವರು ತಮ್ಮ ಸರ್ಕಾರ ಯಾವತ್ತೂ ಉಪಯೋಗಿಸುವ ಗೊಂದಲಮಯ ಪದಕೋಶಗಳನ್ನು ಪುನರುಚ್ಚರಿಸಿದರು. 'ನಮ್ಮ ಗುರಿ ಎಲ್ಲವನ್ನೂ ಒಳಗೊಂಡ ಹಾಗೂ ಸ್ಥಿರ ಅಭಿವೃದ್ಧಿಗೆ ಕೊಂಡೊಯ್ಯುವ ಉನ್ನತ ಬೆಳವಣಿಗೆ ದರವಾಗಿದೆ. ಅದುವೇ ಮೂಲಮಂತ್ರ. ಬೆಳವಣಿಗೆ ಎಂಬುದು ಅಗತ್ಯ ಸ್ಥಿತಿ. ಬೆಳವಣಿಗೆಯೇ ನಮ್ಮ ಪರಮೋಚ್ಛ ಗುರಿ ಎಂದು ನಾವು ಯಾವುದೇ ಹೇವರಿಕೆ ಇಲ್ಲದೇ ಒಪ್ಪಿಕೊಳ್ಳಬೇಕು. ಬೆಳವಣಿಗೆಯೇ ಎಲ್ಲವನ್ನೂ ಒಳಗೊಂಡಂಥ ಅಭಿವೃದ್ಧಿಗೆ ಚಾಲನೆ ಒದಗಿಸುತ್ತದೆ. ಬೆಳವಣಿಗೆ ಇಲ್ಲದಿದ್ದರೆ ಅಲ್ಲಿ ಅಭಿವೃದ್ಧಿಯೂ ಇಲ್ಲ, ಒಳಗೊಳ್ಳುವಿಕೆಯೂ ಇಲ್ಲ..' ಹೀಗೆಂದು ಅವರು ಮಾತನಾಡಿದರು.

ಈ ವಾದದಲ್ಲಿ ಗಂಭೀರವಾದ ಪರಿಕಲ್ಪನೆಯ ದೋಷವಿದೆ. ಬಹಳ ಆಪ್ತವೆಂಬಂತೆ ಕಿವಿಗೆ ಬೀಳುವ ಶಬ್ದಗಳ ಹಿಂದೆ ಅವಿತಿಟ್ಟುಕೊಳ್ಳುವ ಪ್ರಯತ್ನ ಮಾಡಿದರು ಚಿದಂಬರಂ. ಅವರು ಹೇಳಿದ್ದರಲ್ಲಿ ಹೆಚ್ಚಿನವು ಜೋಸೆಫ್ ಸ್ಟಿಗ್ಲಿಟ್ಜ್ ಎಂಬ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞನ ದಾರಿಹೋಕ ಹೇಳಿಕೆಗಳನ್ನೇ ಆಧರಿಸಿತ್ತು. ಇಲ್ಲಿನ ಪ್ರಮಾದ ಹೀಗಿದೆ: ಭಾರತವು ಆರ್ಥಿಕ ಬೆಳವಣಿಗೆಯನ್ನೇ ಅದರ ಪರಮೋಚ್ಛ ಗುರಿಯನ್ನಾಗಿಸಿಕೊಳ್ಳಬೇಕೇ? ಕಾಂಗ್ರೆಸ್ ಇದನ್ನು ನಂಬುವುದೇ ಹೌದಾದರೆ ಅದು ಸಂಸತ್ತಿನ ಬಳಿ ಇರುವ ಮಹಾತ್ಮಾ ಗಾಂಧಿ ಪುತ್ಥಳಿಯನ್ನೇ ಸ್ಥಳಾಂತರಿಸುವಂತೆ ಆದೇಶಿಸಬೇಕಾಗುತ್ತದೆ. ಏಕೆಂದರೆ ಆರ್ಥಿಕ ಅಭಿವೃದ್ಧಿಯ ದರ ಏರಿಕೆಯೇ ರಾಷ್ಟ್ರದ ಅತ್ಯುನ್ನತ ಗುರಿ ಎನ್ನುವುದಾದರೆ ಅದು ಮಹಾತ್ಮ ಗಾಂಧಿ ತತ್ವವನ್ನು ಬದಿಗೆ ಸರಿಸುವುದಷ್ಟೇ ಅಲ್ಲದೇ ಭಾರತದ ನಾಗರಿಕತೆಯ ಮೌಲ್ಯಗಳನ್ನೂ ಎಲ್ಲ ಮತಗಳ ಮೂಲಭೂತ ಉಪದೇಶವನ್ನೂ ಅವಗಣನೆ ಮಾಡಿದಂತಾಗುತ್ತದೆ.  

ದೊಡ್ಡ ಗುರಿಯೊಂದನ್ನು ಸಾಧಿಸುವುದಕ್ಕೆ ಆರ್ಥಿಕ ಬೆಳವಣಿಗೆ ಖಂಡಿತ ಅಗತ್ಯ ಅಂಶವೇ ಹೌದು. ಆದರೆ ಅದೇ ಗುರಿಯಾಗುವುದಿಲ್ಲ, ಪರಮೋಚ್ಛ ಗುರಿಯಾಗುವುದು ಆಮೇಲಿನ ಮಾತು! ಹಾಗೆಯೇ, 'ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರ ಅಭಿವೃದ್ಧಿ' ಎಂಬುದು ಇವರ ಆರ್ಥಿಕ ವ್ಯಾಖ್ಯಾನದ ಉಪೋತ್ಪನ್ನಗಳಿಂದ ಬರುವಂಥದ್ದಲ್ಲ. ಉದಾರೀಕರಣದ ನಂತರದ ದಿನಗಳಲ್ಲಿ ಭಾರತ ಹಾಗೂ ಇನ್ನೂ ಅನೇಕ ರಾಷ್ಟ್ರಗಳ ಅನುಭವಗಳು ಚಿದಂಬರಂ ನಂಬುವ 'ಆರ್ಥಿಕ ಬೆಳವಣಿಗೆಯಿಂದ ಮಾತ್ರವೇ ಸುಸ್ಥಿರ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ' ಎಂಬ ಪರಿಕಲ್ಪನೆಗೆ ವಿರುದ್ಧವಾಗಿವೆ.

ಇದಕ್ಕೆ ಬದಲಾಗಿ ಸಮಾನವಾದ ಹಾಗೂ ಪರಿಸರದ ದೃಷ್ಟಿಯಲ್ಲಿ ಸುಸ್ಥಿರವಾದ ಅಭಿವೃದ್ಧಿ ಎಂಬುದೇ ನಮ್ಮ ರಾಷ್ಟ್ರೀಯ ಗುರಿಯಾಗಬೇಕಿದೆ. ಈ ವಿಷಯದಲ್ಲೂ ಭಾರತದ ಗುರಿಯನ್ನು ಅರ್ಥ ಮಾಡಿಕೊಳ್ಳುವ ನಮ್ಮ ಆಲೋಚನಾ ಪರಿಧಿ ಬಹಳ ಸೀಮಿತವಾಗಿದೆ. ಇದು ತಿರುಚುವಿಕೆಗೂ ಕಾರಣವಾಗುತ್ತದೆ. ಚಿದಂಬರಂ ಭಾಷಣದಲ್ಲಿ ಅಭಿವ್ಯಕ್ತಗೊಂಡ ಮೂರು ಮುಖ್ಯ ಪರಿಕಲ್ಪನೆಗಳನ್ನು ಅವುಗಳ ಸರಿಯಾದ ವ್ಯಾಖ್ಯಾನದಲ್ಲಿ ಅರ್ಥ ಮಾಡಿಕೊಳ್ಳದ ಹೊರತು ಗುರಿಯ ಸ್ಪಷ್ಟತೆ ಸಿಗುವುದೇ ಇಲ್ಲ. 'ನ್ಯಾಯ', 'ಸೌಹಾರ್ದ', 'ಒಳಗೊಳ್ಳುವಿಕೆಯ ಅಭಿವೃದ್ಧಿ' ಇವುಗಳನ್ನು ಯಾವ ರೀತಿ ಅರ್ಥೈಸಲಾಗುತ್ತದೆ ಎಂಬುದು ಮುಖ್ಯ. ಇಲ್ಲಿ ಹೇಳಿರುವ ಪರಿಕಲ್ಪನೆಗಳು ಭಾರತೀಯ ರಾಜಕಾರಣಿಗಳ ಮಾತುಗಳಲ್ಲೆಲ್ಲ ಸ್ಥಾನ ಪಡೆದುಕೊಂಡಿವೆ. ಪಕ್ಷ ಯಾವುದೇ ಆಗಿದ್ದರೂ ಈ ಮೇಲಿನ ಪದಪುಂಜಗಳನ್ನು ಎಲ್ಲರೂ ಬಳಸುತ್ತಾರೆ. ಜಾಗತಿಕವಾಗಿ ಅಭಿವೃದ್ಧಿಯ ಸಂವಾದದಲ್ಲಿ ತೊಡಗಿಕೊಂಡಿರುವ ಚಿಂತಕರೆಲ್ಲ ನ್ಯಾಯಸಮ್ಮತ, ಮುಕ್ತ ಹಾಗೂ ಸೌಹಾರ್ದಯುತ ಎಂಬ ಕಲ್ಪನೆಗಳನ್ನು ಕಟ್ಟಿಕೊಡುವ ಧಾವಂತದಲ್ಲಿದ್ದಾರೆ. ಸಾಂಸ್ಕೃತಿಕ, ಬೌದ್ಧಿಕ, ಕಲಾತ್ಮಕ ಹಾಗೂ ಆಧ್ಯಾತ್ಮಿಕ ನೆಲೆಗಳನ್ನು ಹೊಂದಿರುವ ವ್ಯಕ್ತಿಗಳು, ಸಮುದಾಯಗಳು ಹಾಗೂ ರಾಷ್ಟ್ರವು ನಿಸರ್ಗದೊಂದಿಗೆ ಶಾಂತಿಯುತ ಅನುಸಂಧಾನದಲ್ಲಿ ಬದುಕುವುದು ಕೇವಲ ಕಲ್ಪನೆಗೆ ಸೀಮಿತವಾದ ವಿಚಾರವಲ್ಲ. ಇದೊಂದು ಪ್ರಾಯೋಗಿಕ ಆದರ್ಶ. ಈ ಆದರ್ಶವನ್ನು ಸಾಧಿಸುವ ನಿಟ್ಟಿನಲ್ಲಿ ಆರ್ಥಿಕ ಪ್ರಗತಿಯನ್ನು ಅಳತೆಗೋಲನ್ನಾಗಿ ಬಳಸಬೇಕು.

ವಿಷಾದದ ವಿಷಯವೆಂದರೆ ಯುಪಿಎ ಸರ್ಕಾರದ ಪ್ರಮುಖ ಚಿಂತಕರು ಹಾಗೂ ನೀತಿ ನಿರೂಪಕರು ಸಾಬೀತುಪಡಿಸಿರುವಂತೆ ಬೆಳವಣಿಗೆಯೇ ಅಂತಿಮ ಗುರಿ ಎನ್ನುತ್ತಿದ್ದಾರೆ. ಅದಕ್ಕೆ ಮಾಧ್ಯಮ ಹಾಗೂ ಕೆಲ ಹುರಿದುಂಬಿಗಳ ಬೆಂಬಲವೂ ಇದೆ. ಆರ್ಥಿಕ ಬೆಳವಣಿಗೆ ಕುರಿತ ಇವರ ಅತಿ ಹಂಬಲವನ್ನು ಪ್ರಶ್ನಿಸುವ ಪ್ರಕ್ರಿಯೆ ಯಾವಾಗ ಶುರುವಾಯಿತೋ, ಇವರ ಮಾದರಿಯ ಆಡಳಿತವು ಭಾರತದಲ್ಲಿ ಬಹಳ ಅಸಮಾನತೆಯನ್ನು ಹುಟ್ಟುಹಾಕುತ್ತಿರುವುದನ್ನು ಬೊಟ್ಟು ಮಾಡಿ ತೋರಿಸುವವರು ಮುಂದೆ ಬಂದರೋ ಆಗ ಸರ್ಕಾರವು ರಾಜಕೀಯ ಉದ್ದೇಶವನ್ನು ಹೊತ್ತ 'ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ' ಎಂಬ ಮಾತನ್ನು ಹುಟ್ಟುಹಾಕಿತು. ಯುಪಿಎ ಸರ್ಕಾರವು ಒಂಬತ್ತು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದ ನಂತರದಲ್ಲೂ ಕಾಂಗ್ರೆಸ್ಸಿಗೆ ಸಾಂಸ್ಕೃತಿಕ ಬೇರನ್ನು ಹೊಂದಿರುವ ಭಾರತದ ಅಭಿವೃದ್ಧಿಯ ಪರಿಕಲ್ಪನೆಯೊಂದನ್ನು ಕಟ್ಟಿಕೊಡುವುದಕ್ಕೆ ಆಗುತ್ತಿಲ್ಲ.

ಹಣಕಾಸು ಸಚಿವರ ಮಾತಿನಲ್ಲಿ ಪ್ರಸ್ತಾವವಾಗದೇ ಉಳಿದ ಇನ್ನೊಂದು ಬಹುಮುಖ್ಯ ಅಂಶ ಎಂದರೆ ಆರ್ಥಿಕ ಬೆಳವಣಿಗೆಯು ತನ್ನ ಉದ್ದೇಶವಾದ ಮಾನವಾಭಿವೃದ್ಧಿ ಹಾಗೂ ರಾಷ್ಟ್ರೀಯ ಪ್ರಗತಿಯನ್ನು ಸಾಧಿಸಬೇಕಾದರೆ ಅದು ನೈತಿಕ ತಳಹದಿಯನ್ನು ಹೊಂದಿರುವುದು ಬಹಳ ಮುಖ್ಯ. ಭಾರತದ ಆರ್ಥಿಕ ವಲಯದಲ್ಲಿ ಹಾಗೂ ರಾಜಕೀಯ ಮಾರ್ಗದಲ್ಲಿ ನೈತಿಕತೆ ಹಾಗೂ ಸಾಚಾತನಗಳೇ ಕಾಣೆಯಾಗುತ್ತಿರುವುದೇ ನಮ್ಮ ರಾಷ್ಟ್ರ ಜೀವನದ ದೊಡ್ಡ ದುರಂತ. ನಮ್ಮಲ್ಲಿ 1 ಕೋಟಿ ರುಪಾಯಿಗಳ ವಾರ್ಷಿಕ ಆದಾಯದ ತೆರಿಗೆ ವ್ಯಾಪ್ತಿಗೆ ಬರುವವರು ಕೇವಲ 42800 ಮಂದಿಯಿದ್ದಾರೆ ಎಂಬ ಮಾಹಿತಿಯನ್ನು ನಾವು ಜಗತ್ತಿನ ಕಡು ಭ್ರಷ್ಟ, ಕ್ರೂರ ತೆರಿಗೆ ವಸೂಲುದಾರ ರಾಷ್ಟ್ರ ಎಂಬ ಸತ್ಯದೊಂದಿಗೆ ಹೋಲಿಸಿ ನೋಡಿದರೆ ಏನನ್ನಿಸುವುದು? ಇದನ್ನು ಪರಿಹರಿಸುವಲ್ಲಿ ಚಿಕ್ಕ ಎಚ್ಚರಿಕೆ ಸಂದೇಶವನ್ನೂ ನಮ್ಮ ಹಣಕಾಸು ಸಚಿವರು ರವಾನಿಸಲಿಲ್ಲ.

ಕೆಲವರು ವಾದಿಸಿಯಾರು. ಬಜೆಟ್‌ನಲ್ಲಿ ನೈತಿಕತೆ ಬಗ್ಗೆ ಪಾಠ ಮಾಡುತ್ತ ಕುಳಿತುಕೊಳ್ಳಲಾಗದು ಎಂದು. ಬಜೆಟ್ ಭಾಷಣವನ್ನು ಮುಖ್ಯ ಹಣಕಾಸು ಅಧಿಕಾರಿಯೊಬ್ಬನ ಭಾಷಣ ಎಂಬಂತೆ ನೋಡಿದಾಗ ಮಾತ್ರ ಈ ಸಮಸ್ಯೆ ಎದುರಾಗುತ್ತದೆ. ಆರ್ಥಿಕ ಬೆಳವಣಿಗೆ ಬಗ್ಗೆ ಅತ್ಯಂತ ಉತ್ಪ್ರೇಕ್ಷಿತ ಮಾತುಗಳನ್ನು ಹಣಕಾಸು ಸಚಿವರು ಹೇಳುತ್ತಿರುವ ಸಂದರ್ಭದಲ್ಲಿ ಹೀಗೊಂದು ಫಿಲಾಸಫಿಯ ಸ್ಪರ್ಶವನ್ನು ಕೊಡುವುದು ಅನಿವಾರ್ಯವೇ ಆಗುತ್ತದೆ.  
ಭಾರತದ ಫಿಲಾಸಫಿಯಲ್ಲಿ ಮಂತ್ರ ಎಂದರೆ ವಿಚಾರಶಕ್ತಿಯನ್ನು ಹೊಂದಿರುವ ಪದಗಳ ಸಮೂಹ. ಅದನ್ನು ಸರಿಯಾದ ರೀತಿಯಲ್ಲಿ ಉಚ್ಚರಿಸಿದರೆ ಪರಿವರ್ತನಾತ್ಮಕ ಪರಿಣಾಮ ಸಿದ್ಧ. ಅದಕ್ಕೆ ಸೂಕ್ತ ಮಾನಸಿಕ ಸಿದ್ಧತೆಯೂ ಅವಶ್ಯ. ಹಾಗಿರುವಾಗ ಮೂಲಮಂತ್ರ ಎಂಬ ಶಬ್ದವನ್ನು ಬೇಕಾಬಿಟ್ಟಿ ಬಳಸುವುದು ಥರವೇ? ಅದರಲ್ಲೂ ಭ್ರಷ್ಟ ಸರ್ಕಾರವೊಂದು ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಇಂಥ ಮಾತುಗಳ ಮೊರೆ ಹೋಗುವಾಗ, ಮಾನವ ಅಭಿವೃದ್ಧಿಯ ಮೂಲಭೂತ ಪರಿಕಲ್ಪನೆಗಳನ್ನು ಬಿಚ್ಚಿಡಲೇಬೇಕಾಗುತ್ತದೆ. ಹಾದಿ ಮತ್ತು ಗುರಿಗಳ ಅಪವ್ಯಾಖ್ಯಾನವೇ ಭಾರತದ ಇಂದಿನ ಸ್ಥಿತಿಗೆ ಕಾರಣ ಎಂಬುದನ್ನೂ ಮನಗಾಣಬೇಕಾಗುತ್ತದೆ.

- ಸುಧೀಂದ್ರ ಕುಲಕರ್ಣಿ
ಖ್ಯಾತ ಅಂಕಣಕಾರ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement