ಅಂಕಣಗಳು

ಇಂದಿನ ತುರ್ತು ಅಗತ್ಯ: ಪ್ರಬುದ್ಧ ರಾಜಕಾರಣ

ರಾಜ್ಯದ ಪೇಟೆ- ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮುನ್ನ ಪ್ರಮುಖ ಪಕ್ಷಗಳ ನಾಯಕರು ಕೊಚ್ಚಿಕೊಂಡಿದಕ್ಕೂ, ಫಲಿತಾಂಶ ಪ್ರಕಟವಾದ ತತ್‌ಕ್ಷಣ ಆತುರದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸ ಬಹು ದೊಡ್ಡದು.
ಈ ಚುನಾವಣೆಗಳಿಂದ ರಾಜ್ಯದ ರಾಜಕಾರಣದ ಸಮತೋಲನದಲ್ಲಿ ವ್ಯತ್ಯಾಸವಾಗಲಿಲ್ಲ. ಕಳೆದ ಸುಮಾರು ಐವತ್ತು ತಿಂಗಳಲ್ಲಿ ನಿಧಾನವಾಗಿ, ಆದರೆ ನಿಖರವಾಗಿ ಬದಲಾಗಿರುವ ರಾಜಕೀಯ ಪರಿಸ್ಥಿತಿಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಫಲಿತಾಂಶ ಪ್ರತಿಬಿಂಬಿಸಿದೆ, ಅಷ್ಟೇ. ರಾಜ್ಯದಲ್ಲಿ ಅಧಿಕಾರದ ಸೂತ್ರಗಳನ್ನು ಹಿಡಿದಿದ್ದ ಕಾರಣಕ್ಕೇ ಭಾರತೀಯ ಜನತಾ ಪಾರ್ಟಿ ನಂಬರ್ ಒನ್ ಸ್ಥಾನದಲ್ಲಿತ್ತು. ಈಗ ಅದು ಜಾತ್ಯತೀತ ಜನತಾ ದಳದ ಜತೆ ನಂಬರ್ ಟೂ ಸ್ಥಾನಕ್ಕೆ ಸ್ಪರ್ಧೆ ನಡೆಸಬೇಕಾದ ಸ್ಥಿತಿಯನ್ನು ತಲುಪಿದೆ.
ನಿಜ. ಇದು ಪೇಟೆ- ಪಟ್ಟಣಗಳ ಪ್ರಕಟಿತ ಜನಾಭಿಪ್ರಾಯದ ಆಧಾರದ ಮಾತು. ಆದರೆ ಬಿಜೆಪಿಯ ಪಾಲಿಗೆ ಈ ಚುನಾವಣೆಯ ಫಲಿತಾಂಶ ಇನ್ನಷ್ಟು ಕಹಿಯಾಗಿರುವುದೂ ಹೌದು. ಹೇಳಿ ಕೇಳಿ ಬಿಜೆಪಿ ಪೇಟೆ- ಪಟ್ಟಣಗಳ ಕಲಿತ, ಮಧ್ಯಮ ವರ್ಗಗಳ ಜನ ಸಮುದಾಯದ ಪಕ್ಷ. ಆ ಸಮುದಾಯದ ಪ್ರಭಾವ ದಟ್ಟವಾಗಿರುವ ಕಡೆಗಳಲ್ಲೇ ಪಕ್ಷದ ಜನಪ್ರಿಯತೆ ಕುಗ್ಗಿರುವುದೂ ಈಗ ಸ್ಪಷ್ಟ.
ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ, ಕಳೆದ 50 ತಿಂಗಳ ಅಧಿಕಾರ ಚಲಾಯಿಸಿ, ರೈತರಿಗೆ, ಬಡವರಿಗೆ, ಮಠ ಮಾನ್ಯಗಳಿಗೆ ಸಾಕಷ್ಟು ನೆರವು ನೀಡುವಂತಹ ಯೋಜನೆಗಳನ್ನು ರೂಪಿಸಿ, ಸಾಧ್ಯವಿರುವಷ್ಟೂ ಪ್ರಚಾರ ಪಡೆದರೂ, ಬಿಜೆಪಿ ಹಳ್ಳಿಗಳಲ್ಲಿ ಇನ್ನೂ ಬೇರು ಬಿಟ್ಟಿಲ್ಲ, ಎನ್ನುವ ಸ್ಥಿತಿ ಇದೆ. ಇಲ್ಲಿ ನಿಜವಾಗಲೂ ಜನ ಕಲ್ಯಾಣ ಕೆಲಸ ನಡೆದಿದ್ದರೆ, ಭಾಗ್ಯಲಕ್ಷ್ಮಿ ಬಡವರ ಮನೆಯ ಬಾಗಿಲಿಗೆ ಬಂದಿದ್ದರೆ, ಅದರ ಲಾಭ ಬಿಜೆಪಿಗೆ ಆಗಿಲ್ಲ ಎಂದಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಭಗವಾಝಂಡ ಇನ್ನೂ ವ್ಯಾಪಕವಾಗಿ ಕಂಡುಬಂದಿಲ್ಲ. ಆ ವೈಫಲ್ಯವನ್ನು ಯಾರ ತಲೆಗೆ ಕಟ್ಟಬೇಕು?
ಇನ್ನು ಕೆಲವೇ ವಾರಗಳಲ್ಲಿ (ಪ್ರಾಯಶಃ ಏಳೆಂಟು) ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಗಮನಾರ್ಹವಾದ ರೀತಿಯಲ್ಲಿ ಜಾತಿ ಆಧರಿತ ಮತದಾನ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಅಲ್ಲಿ ಬಿಜೆಪಿಯ ಅಭ್ಯರ್ಥಿಗಳು ಯಾರೇ ಆಗಿರಲಿ, ಆ ಪಕ್ಷದ ಹಿನ್ನೆಲೆಯ ಬೆಳಕಿನಲ್ಲಿ ಪಕ್ಷ ಪ್ರತಿಕೂಲ ಪರಿಸ್ಥಿತಿಯನ್ನೇ ಎದುರಿಸಬೇಕು.
ಈಗಲೂ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿಗಳಲ್ಲಿ ಕೆಲವರು ಯಡಿಯೂರಪ್ಪ ನಿಷ್ಠರಿದ್ದಾರೆ. ಈ ನಾಟಕವನ್ನು ತತ್‌ಕ್ಷಣದಲ್ಲೇ ಬಂದ್ ಮಾಡಿ, ಆ ಮಂತ್ರಿಗಳು, ಅವರ ಹಿಂದಿರುವ ಶಾಸಕರು ಈಗಲೂ ತಮ್ಮ ಆಯ್ಕೆಯ ರಾಜಕೀಯ ನೆಲೆಗೆ ಹೋಗದೇ ಇದ್ದರೆ, ಅಂತಹವರಿಗೆ ರಾಜಕೀಯದಲ್ಲಿ ಒಂದು ಹೊಸ ಪದವೇ ಸೃಷ್ಟಿಯಾಗಬೇಕು. ಗಂಭೀರವಾದ ಪದ ಬಳಸಬಹುದಾದರೆ ಅದನ್ನು ಅಪ್ರಬುದ್ಧ ಎನ್ನಬಹುದು. ಅದು ಸಾಲದು.
ರಾಜಕೀಯವಾಗಿ ಜಗದೀಶ ಶೆಟ್ಟರ್ ಸರ್ಕಾರ ವಿಧಾನ ಸಭೆಯಲ್ಲಿ ಬಹುಮತವನ್ನು ಎಂದೋ ಕಳೆದುಕೊಂಡಿದೆ. ಸ್ಪೀಕರ್ ಬೋಪಯ್ಯ, ಇಬ್ಬರು ಶಾಸಕರ ರಾಜಿನಾಮೆಯನ್ನು ತಡೆದು ನಿಲ್ಲಿಸದೇ ಹೋಗಿದ್ರೆ ಈ ವೇಳೆಗೆ ಮಂತ್ರಿಗಳೆಲ್ಲರೂ ಮಾಜಿಗಳಾಗುತ್ತಿದ್ದರು. ಆದರೂ ಈ ವಿಚಾರದಲ್ಲಿ ಇದುವರೆಗೆ ಯಾರೂ ರಾಜ್ಯಪಾಲ ಹಂಸರಾಜ ಭಾರದ್ವಾಜರ ಬಳಿಗೆ ಹೋಗಿಲ್ಲ. ಯಾವ ಪಕ್ಷವೂ ಪತ್ರ ಬರೆದಿಲ್ಲ. ಯಾಕೆ? ಸಾಧ್ಯವಿರುವಷ್ಟು ದಿನವೂ ಶಾಸಕರ- ಮಂತ್ರಿಗಳ ಸ್ಥಾನಮಾನ ಒದಗಿಸುವ ಐಹಿಕ ಸೌಲಭ್ಯಗಳನ್ನು ಅನುಭವಿಸುವ ಬಯಕೆಯಲ್ಲದೇ ಇನ್ನೇನು ಕಾರಣ ಅಲ್ಲ. ಇದು ತತ್ವನಿಷ್ಠ, ಪ್ರಬುದ್ಧ ರಾಜಕೀಯದ ಲಕ್ಷಣವಲ್ಲ.
ಪಕ್ಷಗಳ ಮಾತು: ರಾಜ್ಯದಲ್ಲೀಗ ಮುಖ್ಯಮಂತ್ರಿ ಶೆಟ್ಟರ್ ಅವರೇ ಏಕೈಕ ಬಿಜೆಪಿ ನಾಯಕ. ಅವರ ಪ್ರಕಾರ ಪಕ್ಷ ಹೀನಾಯವಾಗಿ ಸೋತಿಲ್ಲ. ಆ ಮಾತನ್ನು ಒಪ್ಪಬೇಕಾದರೆ 2007ರ ಚುನಾವಣೆ ಫಲಿತಾಂಶದ ವಿಶ್ಲೇಷಣೆಗೆ ಹೋಗಬೇಕು.
ಈಗಿನ ಬಿಜೆಪಿ ಒಂದು ಕಡೆ ಯಡಿಯೂರಪ್ಪ, ಇನ್ನೊಂದು ಕಡೆ ಬಳ್ಳಾರಿಯ ಶ್ರೀರಾಮುಲು ಅವರ ಬಂಡಾಯದಿಂದ ತತ್ತರಿಸಿದೆ. ಆದರೆ ಎರಡು ಬಂಡಾಯಗಾರ ಗುಂಪುಗಳೂ ತಮ್ಮ ತಮ್ಮ ಶಕ್ತಿ ವಲಯಗಳಲ್ಲಿ ಸಾಧಿಸಿರುವುದು ಶೂನ್ಯಕ್ಕಿಂತ ಸ್ವಲ್ಪ ಹೆಚ್ಚಿನ ಯಶಸ್ಸು ಅಷ್ಟೇ.
ಯಡಿಯೂರಪ್ಪ ಅವರು ಹಿಂದೆ ಬಹಿರಂಗವಾಗಿ ಹೇಳದೇ ಇದ್ದ ತಮ್ಮ ಪಕ್ಷದ ನಿಜವಾದ ಗುರಿಯನ್ನು ಈಗ ಪ್ರಕಟಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸುವುದೇ ಅವರ ಗುರಿಯಾಗಿತ್ತು. ಅದನ್ನು ಅವರು ಸಾಧಿಸಿರುವುದಾಗಿ ಭಾವಿಸಿ ಬೀಗುತ್ತಿದ್ದಾರೆ. ಮುಂದಿನ ದೃಷ್ಟಿ ವಿಧಾನ ಸೌಧವಂತೆ. ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಎಂದರೆ, ಬಿಜೆಪಿಯನ್ನು ಸೋಲಿಸಿದ್ದರಿಂದ ಯಡಿಯೂರಪ್ಪ, ಶ್ರೀರಾಮುಲು ಅವರಿಗೆ ಬಂದ ಲಾಭವೇನು? ಎನ್ನುವುದು. ಅದರಿಂದ ಲಾಭವಾಗಿರುವುದು ಕಾಂಗ್ರೆಸ್ಸಿಗೆ. ಬಳ್ಳಾರಿಯಲ್ಲೂ ಕಾಂಗ್ರೆಸ್ ಬಾವುಟ ಹಾರಾಡಿದೆ.
 ನಮ್ಮ ಚುನಾವಣೆ ಪದ್ಧತಿಯಲ್ಲಿ ಗೆಲ್ಲುವ ಅವಕಾಶವಿರುವ ಅಭ್ಯರ್ಥಿಯ ಒಂದು ಸಣ್ಣ ಪಾಲಿನ ಮತಗಳನ್ನು ಕಸಿದುಕೊಂಡರೂ ಅವರನ್ನು ಸೋಲಿಸುವುದು ಸಾಧ್ಯ. ಆದರೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ, ದೊಡ್ಡ ಸಂಖ್ಯೆಯ ಮತಗಳನ್ನು ಪಡೆಯಲೇಬೇಕು. ನಿಜ. ಈ ಲೆಕ್ಕ ಶುದ್ಧ ಜನತಂತ್ರದ ಲೆಕ್ಕಾಚಾರದಲ್ಲಿ ಸರಿಯಲ್ಲ. ಆದರೆ ಸದ್ಯಕ್ಕೆ ಬೇರೆ ದಾರಿ ಇಲ್ಲ. ಅದನ್ನು ಈಗ ಜನ ಒಪ್ಪಲೇಬೇಕು. ಈ ಅಪ್ಪಟ ಅಡ್ಡ ಹಾದಿಯ ಚಿಂತನೆಯನ್ನು.
ಕಾಂಗ್ರೆಸ್ ಈಗಿನ ಚುನಾವಣೆಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ರಾಜ್ಯದ ಎಲ್ಲ ವಿಭಾಗಗಳಲ್ಲೂ ಆ ಪಕ್ಷಕ್ಕೆ ಅನುಕೂಲಕರವಾದ ವಾತಾವರಣ ಇದ್ದಿದ್ದರಿಂದ ಇದು ಸಾಧ್ಯವಾಯಿತು. ಅದಕ್ಕೆ ಕಾರಣ ಕಾಂಗ್ರೆಸ್ಸಿನ ಎದುರಾಳಿಗಳ ರಾಜಕೀಯ ದೌರ್ಬಲ್ಯವೇ. ಕಾಂಗ್ರೆಸ್ಸಿನ ಅಂತಃಶಕ್ತಿ ಅಲ್ಲ.
ಈಗಲೂ ಕಾಂಗ್ರೆಸ್ ಅನೇಕ ಸಂಸ್ಥೆಗಳಲ್ಲಿ ಅಧಿಕಾರವನ್ನು ಹಿಡಿಯಬೇಕಾದರೆ, ಅಂದರೆ ಅಧ್ಯಕ್ಷರ ಸ್ಥಾನವನ್ನು ಪಡೆಯಬೇಕಾದರೆ, ಇತರ ಪಕ್ಷಗಳ ಅಥವಾ ಯಾವ ಪಕ್ಷಕ್ಕೂ ಸೇರದೇ ಇರುವವರ ನೆರವನ್ನು ಪಡೆಯಬೇಕು. ಆಗ ಕಾಂಗ್ರೆಸ್ ಯಾರನ್ನು ಆರಿಸಿಕೊಳ್ಳುತ್ತದೆ? ಯಡಿಯೂರಪ್ಪ? ಜಾತ್ಯತೀತ ಜನತಾದಳ? ಇಲ್ಲಿ ಯಾರನ್ನು ಆರಿಸಿಕೊಂಡರೂ, ಕೆಲವೇ ದಿನಗಳಲ್ಲಿ ಮೈತ್ರಿ ಮುರಿಯುವುದು ಖಚಿತ.
 ಇಲ್ಲಿ ಸ್ಥಳೀಯ ನಾಯಕರೆಂದರೆ ಯಾರು?:  ಆಯಾ ಪ್ರದೇಶದಲ್ಲಿರುವ ಬಹುಸಂಖ್ಯಾತರ ಅಥವಾ ಹೆಚ್ಚು ಸಂಖ್ಯೆಯಲ್ಲಿರುವ ಜಾತಿಯ ನಾಯಕರು ಎನ್ನುವುದಾದರೆ, ಅನೇಕ ಕ್ಷೇತ್ರಗಳಲ್ಲಿ ಆ ನಂಬಿಕೆ ಎಕ್ಕಾ ಹುಟ್ಟಿಹೋಗಿದೆ. ಚುನಾವಣೆಯಲ್ಲಿ ಜಾತಿ ಕೆಲಸ ಮಾಡಿಲ್ಲ ಎಂದೇನೂ ಅಲ್ಲ. ಆದರೆ ಈಗ ಯಾವ ಜಾತಿಯೂ ಒಬ್ಬನೇ ನಾಯಕನನ್ನು ನಂಬಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದು ಎಲ್ಲ ಜಾತಿಗಳ ಮಾತು.
 ಮಾತನಾಡಿದರೆ ಜಾತಿ ಪ್ರಾತಿನಿಧ್ಯ, ಸ್ಥಳೀಯ ಪ್ರಾತಿನಿಧ್ಯವೆಂದು ಮಾತನಾಡುವ, ಯಾರನ್ನೋ ಸಿಂಹಾಸನದಲ್ಲಿ ಕೂಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವ, ಕಾಂಗ್ರೆಸ್- ಬಿಜೆಪಿಗಳು, ಬೇರು ಮಟ್ಟದ ರಾಜಕೀಯದ ನಿಜವನ್ನು ಈಗಲೂ ತಿಳಿದುಕೊಳ್ಳದೇ ಹೋದರೆ, ಆ ಪಕ್ಷಗಳು ರಾಜಕೀಯ ಪ್ರಾಬಲ್ಯವನ್ನು ಬೇರೆಯವರಿಗೆ ಬಿಟ್ಟು ಬಿಡಬೇಕಾಗಬಹುದು.
 ಈಗ ಸಮುದಾಯಗಳ ಮತ ಬ್ಯಾಂಕ್‌ಗಳಿಗೆ ಯಾರೂ ವಾರಸುದಾರರಿಲ್ಲ. ಬಿಜೆಪಿಯ ಮುಂದಿರುವ ದೊಡ್ಡ ಪ್ರಶ್ನೆ ಪಕ್ಷದ ಮುಂದಿನ ನಾಯಕರು ಯಾರು ಎನ್ನುವುದೇ. ವಿಧಾನ ಸಭೆ ಚುನಾವಣೆಯನ್ನು ಜಗದೀಶ ಶೆಟ್ಟರ್ ಅವರ ನಾಯಕತ್ವದಲ್ಲೇ ಎದುರಿಸುವ ನಿರ್ಧಾರವನ್ನು ದೆಹಲಿ ನಾಯಕರು ಪ್ರಕಟಿಸಿದ್ದರು. ಈಗಲೂ ಅದಕ್ಕೆ ಅವರು ಬದ್ಧರೇನು? ಶೆಟ್ಟರ್ ನಾಯಕರಾಗಿ ಮುಂದುವರಿದರೆ ಪ್ರದೇಶ ಬಿಜೆಪಿ ಪಕ್ಷದ ಅಧ್ಯಕ್ಷತೆಗೆ ಈಶ್ವರಪ್ಪ ನೀಡಿರುವ ರಾಜಿನಾಮೆಯನ್ನು ಒಪ್ಪದೇ ಬೇರೆ ಮಾರ್ಗವೇ ಇಲ್ಲವೇನು? ಮಂಗಳೂರಿನ ನಳಿನಕುಮಾರ ಕಟೀಲು ಅಥವಾ ಸದಾನಂದಗೌಡರಲ್ಲಿ ಒಬ್ಬರು ಅಧ್ಯಕ್ಷರಾಗಬಹುದು ಎನ್ನುವ ಮಾತು ದೆಹಲಿಯಲ್ಲಿ ಈಗಲೂ ಇದೆಯೇನು?  ಸದ್ಯಕ್ಕೆ ಬಿಜೆಪಿಯಲ್ಲಿ ದೊಡ್ಡ ಬದಲಾವಣೆಗಳಾಗುವ ಸಂಭವವಿಲ್ಲ. ಅದಕ್ಕೆ ಸಮಯವಿಲ್ಲ.
ದಾರಿ ತಪ್ಪಿದ ಮಕ್ಕಳು: ಯಡಿಯೂರಪ್ಪ ಸರ್ಕಾರಕ್ಕೆ ಭದ್ರತೆ ನೀಡಲು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಕಾಂಗ್ರೆಸ್- ಜೆಡಿಎಸ್ ನಾಯಕರು ಈಗ ತಮ್ಮ ತವರಿಗೆ ಹಿಂತಿರುಗುವುದು ಸಾಧ್ಯವೇ?
ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ನೀಡಿದ ಸ್ವಾಗತ ಇತರ ಎಲ್ಲ ದಾರಿ ತಪ್ಪಿದ ಮಕ್ಕಳಿಗೂ ಸಿಕ್ಕೀತೇ? ಜೆಡಿಎಸ್‌ನಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಕಾಂಗ್ರೆಸ್ಸಿನಲ್ಲಿ ರಾಹುಲ್ ಗಾಂಧಿ ಮಾತು ನಡೆದರೆ, ಅವರ ಮಾತಿಗೆ ಅವರೇ ಅಂಟಿಕೊಂಡರೆ ಐದು ವರ್ಷದ ಹಿಂದೆ ದಾರಿ ತಪ್ಪಿದವರು ತಮ್ಮ ಗೂಡನ್ನು ಸೇರಿಕೊಳ್ಳಲು ಕಾಲ ಇನ್ನೂ ಪಕ್ವವಾಗಿಲ್ಲ. ಯಡಿಯೂರಪ್ಪ ಅವರು ಬಹಿರಂಗವಾಗಿ ಏನನ್ನೇ ಹೇಳಿಕೊಳ್ಳಲಿ, ಅಂತರಂಗದಲ್ಲಿ ಅವರು ನಂಬಿದ್ದ ಸಮುದಾಯಗಳು ಅವರಿಗೆ ಕೈ ಕೊಟ್ಟಿವೆ ಎನ್ನುವುದು ಗೊತ್ತಾದ ಅನಂತರ ಸ್ವಲ್ಪ ಮೆತ್ತಗಾಗಿದ್ದಾರೆ. ಅದು ಮೇಲ್ನೋಟಕ್ಕೆ ಕಂಡುಬರದೇ ಇರಬಹುದು.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ದೆಹಲಿಯಿಂದ ಹಲವು ಕಾಂಗ್ರೆಸ್ ಪ್ರತಿನಿಧಿಗಳು ರಾಜ್ಯದಲ್ಲಿ ಅಡ್ಡಾಡಿದ್ದರು. ಅವರ ಅಭಿಪ್ರಾಯದಲ್ಲಿ, ಈಗ ಕಾಂಗ್ರೆಸ್ ಗೆದ್ದಿರುವುದಕ್ಕೆ (ಅದೇನೂ ಬಹು ದೊಡ್ಡ ಗೆಲವಲ್ಲ) ಸ್ಥಳೀಯ ಕಾಂಗ್ರೆಸ್ ನಾಯಕರ ವರ್ಚಸ್ಸು, ನಾಯಕತ್ವದ ಗುಣಗಳು ಕಾರಣವಲ್ಲ. ಬಿಜೆಪಿ ಆಡಳಿತದಲ್ಲಿ ಕಂಡು ಬಂದಿದ್ದ ಭ್ರಷ್ಟಾಚಾರದ ಆರೋಪಗಳು ಹಾಗೂ ಬಿಜೆಪಿಯ ಕೆಲವು ನಾಯಕರು ಪ್ರದರ್ಶಿಸಿದ ಸರಿಸಾಟಿ ಇಲ್ಲದ ಜಾತೀಯತೆ.
ಇದೆಲ್ಲವೂ ವಿಧಾನ ಸಭೆ ಚುನಾವಣೆಯ ವೇಳೆಗೆ ಹಳೆಯದಾಗಿಬಿಟ್ಟಿರುತ್ತದೆ. ಎನ್ನುವ ಭಾವನೆ ಕಾಂಗ್ರೆಸ್- ಬಿಜೆಪಿಗಳೆರಡರಲ್ಲೂ ಕ್ರಮೇಣ ಮೂಡುವ ಸಂಭವವಿದೆ. ಹಿಂದೆ ಇಂತಹ ಪ್ರಕ್ರಿಯೆಗೆ ಕರ್ನಾಟಕ ಸಾಕ್ಷಿಯಾಗಿದೆ. ಯಡಿಯೂರಪ್ಪ ಬಿಜೆಪಿಯನ್ನು ಸೋಲಿಸುವ ಹಟದಲ್ಲಿ ತಮ್ಮನ್ನು ತಾವೇ ಅಪಮೌಲ್ಯ ಮಾಡಿಕೊಂಡಿದ್ದಾರೆ. ಅದನ್ನು ಅವರು ವಿಧಾನ ಸಭೆ ಚುನಾವಣೆಯ ಒಳಗಾಗಿ ಅದ್ಯಾವ ರೀತಿ ಸರಿಪಡಿಸಿಕೊಳ್ಳುತ್ತಾರೋ ಗೊತ್ತಿಲ್ಲ.
ಬಂಡಾಯಗಾರ ಬಿ. ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್‌ನ ಡಂಗುರದ ಶಬ್ದ ಸ್ಥಬ್ಧವಾಗುವುದಿಲ್ಲ. ಆದರೆ ವಿಧಾನ ಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಶ್ರೀರಾಮುಲು ಎದರಿಸಬೇಕಾದ್ದು ಬಿಜೆಪಿಯನ್ನಲ್ಲ, ಕಾಂಗ್ರೆಸ್ಸನ್ನು. ಅದು ಆ ಭಾಗದ ಚುನಾವಣೆಯ ಚಿತ್ರವನ್ನೇ ಬದಲಾಯಿಸಲೂಬಹುದು. ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ರಥಯಾತ್ರೆ ಉತ್ಸಾಹದಿಂದಲೇ ನಡೆಯುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆ ಪಕ್ಷದ ಸಾಧನೆ ದೊಡ್ಡ ಪ್ರಮಾಣದ್ದೇನೂ ಅಲ್ಲ.
ಕಿಡಿಗೇಡಿತನ- ಬಿಜೆಪಿಯ ರಾಜ್ಯ ಶಾಖೆಯ ಅಧ್ಯಕ್ಷರ ಆಯ್ಕೆಯ ಕಸರತ್ತಿನ ಮುಖ್ಯ ಅಥವಾ ಏಕೈಕ ಅಂಶ ಎಂದರೆ ಯಾರು ಅಧ್ಯಕ್ಷರಾಗಬೇಕು ಎನ್ನುವುದಲ್ಲ, ಯಾರಾಗಬಾರದು ಎನ್ನುವುದೇ ಮುಖ್ಯ.

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!