ಸುಮಾರು ದಿನಗಳಿಂದ ಪತ್ರಿಕೆಗಳಲ್ಲಿ ಶಿಕ್ಷಕರುಗಳ ವಿರುದ್ಧ ಅದೆಷ್ಟೋ ಬರಹಗಳನ್ನು ಓದಿದ್ದೇನೆ. ಅದರಲ್ಲೂ ಖಾಸಗೀ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರುಗಳ ಕುರಿತು ತುಸು ಹೆಚ್ಚಾಗಿಯೇ ಬರಹಗಳಿವೆ. ಈ ತರಹದ ಬರಹಗಳಿಂದ ಸ್ವತಃ ಶಿಕ್ಷಕಿಯಾದ ನನಗೆ ಶಾಲೆಯಲ್ಲಿ ಪಾಠ ಮಾಡುವುದು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಎಲ್ಲರಿಗೂ ಹೆದರಿಕೊಂಡು ಪಾಠ ಮಾಡುವ ಪರಿಸ್ಥಿತಿ ಬಂದೊದಗಿದೆ. ಒಂದು ಕಡೆ ಆಡಳಿತ ಮಂಡಳಿಯವರಿಂದ, ಮತ್ತೊಂದೆಡೆ ಪಾಲಕರಿಂದ. ಇನ್ನೊಂದೆಡೆ ಮುದ್ರಣ ಅಥವಾ ದೃಶ್ಯ ಮಾಧ್ಯಮಗಳಿಂದ. ಹೀಗೆ ಹಿಂದಿಲ್ಲೊಂದು ಕಡೆಯಿಂದ ಶಿಕ್ಷಕರ ಮೇಲೆ ಅತಿಯಾದ ಒತ್ತಡಗಳು ಬರುತ್ತಿವೆ. ಹೀಗಿರುವಾಗ ನಾವು ತಾನೆ ಹೇಗೆ ಪಾಠ ಮಾಡಲು ಸಾಧ್ಯ? ಇದರಿಂದ ಶೈಕ್ಷಣಿಕ ಮೌಲ್ಯ ಕುಸಿಯುತ್ತಿದೆ ಎಂದೆನಿಸುವುದಿಲ್ಲವೇ? ಈಗಿನ ಮಕ್ಕಳಿಗೆ ಯಾವ ತರಹದ ದಂಡನೆಯೂ ಕೊಡುವ ಹಾಗಿಲ್ಲ. ಹೀಗಿದ್ದಾಗ ಅವರಿಗೆ ಶಿಕ್ಷಣದ ಮಹತ್ವ ಹೇಗೆ ಗೊತ್ತಾಗಬೇಕು. ಅವರುಗಳಿಗೆ ಗುರುಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಹಾಗಿದೆ.
ನಾವುಗಳೆಲ್ಲ ಮಕ್ಕಳಾಗಿದ್ದಾಗ, ನಮ್ಮ ಗುರುಗಳಿಂದ ಶಿಕ್ಷೆಗೆ ಒಳಗಾಗಿಯೇ ಶಿಕ್ಷಣವನ್ನು ಪಡೆದುಕೊಂಡಿದ್ದೇವೆ. ಹಾಗಂತಲೇ ಈಗಲೂ ಕೂಡ ನಮಗೆ ನಮ್ಮ ಗುರುಗಳ ಮೇಲೆ ಅತಿಯಾದ ಗೌರವವಿದೆ. ಆದರೆ ಈಗಿನ ಮಕ್ಕಳನ್ನು ಮುಟ್ಟಲೂ ಹೆದರಿಕೊಳ್ಳುತ್ತೇವೆ. ಅವರನ್ನು ಬೈಯ್ಯುವ ಹಾಗಿಲ್ಲ. ಈಗಿನ ಮಕ್ಕಳು ತರಗತಿಯಲ್ಲಿ
ನಡೆದದ್ದಕ್ಕೆ ಇನ್ನೂ ನಾಲ್ಕು ಹೆಚ್ಚಿನ ವಾಕ್ಯಗಳನ್ನು ಸೇರಿಸಿ, ಬಣ್ಣಗಳನ್ನು ಹಚ್ಚಿ ಪೋಷಕರಿಗೆ ಹೇಳುತ್ತಾರೆ. ಪೋಷಕರು ಹಿಂದೆ ಮುಂದೆ ವಿಚಾರ ಮಾಡದೆ ಶಿಕ್ಷಕರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಾರೆ. ಹೀಗೆಲ್ಲಾ ಆದರೆ ಶಿಕ್ಷಕರಾದ ನಾವು ನಿಜವಾದ ಅರ್ಥದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಸಾಧ್ಯವೇ? ಅವರನ್ನು ಉತ್ತಮ ಪ್ರಜೆಗಳಾಗಬೇಕೆಂಬ ನಮ್ಮ ಆಸೆ ಕೈಗೂಡುತ್ತದೆಯೇ? ಹಾಗಿದ್ದರೆ ಇದಕ್ಕೆಲ್ಲ ಯಾರು ಕಾರಣರು?
ಪಾಲಕರು ಈಗ ತಮ್ಮ ಮಕ್ಕಳನ್ನು ಬೆಳೆಸುತ್ತಿರುವ ರೀತಿ ಈಗಿನ ಪರಿಸ್ಥಿತಿಗೆ ಕಾರಣವಿರಬಹುದು. ಮಕ್ಕಳನ್ನು ಅತಿ ಮುದ್ದಿನಿಂದ ಸಾಕುವುದು, ಅವರಿಗೆ ಕಷ್ಟವೆಂದರೇನು ಎಂಬುದು ಗೊತ್ತು ಮಾಡಿಕೊಡದೇ ಇರುವುದು, ಯಾವಾಗಲೂ ತಾನು ಗೆಲ್ಲುತ್ತಲೇ ಇರಬೇಕೆಂಬ ಭಾವನೆಯನ್ನು ಮಕ್ಕಳಲ್ಲಿ ತುಂಬಿಸುವುದು, ಸೋಲನ್ನು ಒಪ್ಪಿಕೊಳ್ಳದಿರುವುದು, ಮಕ್ಕಳ ಮುಂದೆಯೇ ಶಿಕ್ಷಕರನ್ನು ಬೈಯ್ಯುವುದು ಹೀಗೆಯೇ ಪಟ್ಟಿ ಇನ್ನೂ ಉದ್ದವಾಗಿ ಸಾಗುತ್ತದೆ.
ಯಾರೋ ಒಬ್ಬಿಬ್ಬರು ಶಿಕ್ಷಕರು ಮಾಡಿದ ತಪ್ಪಿಗೆ ಎಲ್ಲರೂ ಇಡೀ ಶಿಕ್ಷಕ ವೃಂದವನ್ನೇ ಅನುಮಾನಾಸ್ಪದವಾಗಿ ನೋಡುವ ಹಾಗಾಗಿದೆ. ಹಾಗಾಗಬಾರದು. ಈ ದೇಶದಲ್ಲಿ ಯಾವಾಗಲು ಗುರುವಿಗೆ ಅತ್ಯಂತ ಉಚ್ಛ ಸ್ಥಾನವನ್ನು ನೀಡಲಾಗಿದೆ. ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತಾರೆ. ಪ್ರತಿಯೊಬ್ಬ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರುಗಳು ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ಕೆಲವೊಮ್ಮೆ ಶಿಕ್ಷೆ ವಿಧಿಸಬೇಕಾಗುತ್ತದೆ. ಅದು ಕೇವಲ ಸಾಂದರ್ಭಿಕ. ಅವುಗಳಿಗೆ ಹೆಚ್ಚಿನ ಪ್ರಾಧಾನ್ಯ ಕೊಡಬಾರದು. ಒಂದು ಘಟನೆಯನ್ನೇ ಪದೇ ಪದೆ ಅನಾವಶ್ಯಕವಾಗಿ ಪ್ರಚಾರ ಮಾಡುವುದು ತರವಲ್ಲ. ಹಾಗೆಂದು ಶಿಕ್ಷಕರಿಗೆ, ಮಕ್ಕಳಿಗೆ ಶಿಕ್ಷೆ ಕೊಡುವುದೇ ಒಂದು ಮೂಲಮಂತ್ರವಾಗಬಾರದು.
ಒಂದು ಆರೋಗ್ಯವಂತ ಸಮಾಜ ಸೃಷ್ಟಿಯಾಗಬೇಕಾದರೆ ಶಿಕ್ಷಕರ ಅಗತ್ಯವಿದೆ. ಹಾಗೆಯೇ ಶಿಕ್ಷಕರಿಗೂ ಈ ಸಮಾಜದಲ್ಲಿ ಗೌರವ ಕೊಡಬೇಕಾದ ಅವಶ್ಯಕತೆಯಿದೆ. ಹಾಗಿದ್ದಾಗ ಮಾತ್ರ ನಮ್ಮಂತಹ ಶಿಕ್ಷಕರು ಮಕ್ಕಳಿಗೆ ಯಾವ ಅಡೆತಡೆಯಿಲ್ಲದೇ, ನಿಸ್ಸಂಕೋಚವಾಗಿ ಉತ್ತಮವಾದ ಶಿಕ್ಷಣವನ್ನು ಕೊಡಲು ಸಾಧ್ಯ?
- ಅಶ್ವಿನಿ ಆರ್., ಬೆಂಗಳೂರು