ಸಾಲಮನ್ನಾ ಹಗರಣದ ತನಿಖೆ ಅತ್ಯಗತ್ಯ
ದಾಖಲೆಗಳನ್ನು ತಿದ್ದುವುದು, ನಕಲು ಮಾಡುವುದು ಮತ್ತು ಬದಲಾಯಿಸುವುದು
ಇದನ್ನು ಅಪರಾಧ ದಂಡ ಸಂಹಿತೆಯಡಿ ಗಂಭೀರವಾಗಿ ಪರಿಗಣಿಸಬೇಕು
ಯುಪಿಎ ಸರ್ಕಾರದ ಮತ್ತೊಂದು ಭಾರಿ ಅವ್ಯವಹಾರದ ಹಗರಣ ಬಯಲಾಗಿದೆ. ಸುಮಾರು 34 ಲಕ್ಷ ಅರ್ಹ ರೈತರು ಸಾಲಮನ್ನಾ ಹಕ್ಕಿನಿಂದ ವಂಚಿತರಾಗಿದ್ದಾರೆ. ಸುಮಾರು 24 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಈ ಭಾರೀ ಹಗರಣದಲ್ಲಿ ಅನುಕೂಲ ಪಡೆದಿದ್ದಾರೆ. ಈ ಹಗರಣದ ಆಳ ಯಾರಿಗೂ ಅರ್ಥವಾಗುತ್ತಿಲ್ಲ. ಸಾಲಮನ್ನಾ ಯೋಜನೆಗೆ ರೈತರ ಸೇರ್ಪಡೆ ಮತ್ತು ಹೊರಗಿಟ್ಟಿರುವ ರೈತರ ಶೇಕಡವಾರು ಗಮನಿಸಿದರೆ ಈ ಸಾಲಮನ್ನಾ ಹಗರಣ ಸುಮಾರು 10 ಸಾವಿರ ಕೋಟಿಯದ್ದು ಎಂದು ಯಾರಾದರೂ ಅಂದಾಜಿಸಬಹುದು.
ಗಮನಿಸಲೇಬೇಕಾದ ಮತ್ತೊಂದು ಅಂಶ ಎಂದರೆ, ಸಿಎಜಿ 3.5 ಕೋಟಿ ಖಾತೆಗಳ ಪೈಕಿ ಕೇವಲ 90 ಸಾವಿರ ಖಾತೆಗಳನ್ನು ಮಾತ್ರ ಪರಿಶೋಧಿಸಿರುವುದು. ಈ ಸಣ್ಣ ಶೋಧನೆಯಲ್ಲೇ ಸಿಎಜಿ- 'ಶೇಕಡ 13ರಷ್ಟು ಅರ್ಹ ರೈತರನ್ನು ಸಾಲಮನ್ನಾ ಯೋಜನೆಗೆ ಪಟ್ಟಿ ಮಾಡುವಾಗ ಪರಿಗಣಿಸಿಯೇ ಇಲ್ಲ. ಅಲ್ಲದೆ ಶೇಕಡ 8.5ರಷ್ಟು ಅನರ್ಹ ರೈತರು ಈ ಹಗರಣದಲ್ಲಿ ಲಾಭ ಮಾಡಿಕೊಂಡಿದ್ದಾರೆ' ಎಂಬ ಅಂಶ ಹೊರಹಾಕಿದೆ.
ಹಣಕಾಸು ಸಚಿವ ಪಿ. ಚಿದಂಬರಂ ಅವರು ಸದನದಲ್ಲಿ ಒಪ್ಪಿಕೊಂಡಿರುವಂತೆ ಇದರಲ್ಲಿ ದೊಡ್ಡ ಹಗರಣವೇನು ನಡೆದಿಲ್ಲ; ಆದರೆ ಸಣ್ಣ ಅವ್ಯವಹಾರ ನಡೆದಿರಬಹುದು ಎಂದು ಹೇಳಿದ್ದಾರೆ. ಆದರೆ ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಮೇಲ್ನೋಟಕ್ಕೆ ದಾಖಲೆಗಳನ್ನು ತಿದ್ದಿರುವುದು, ನಕಲು ಮಾಡಿರುವುದು ಬದಲಾಯಿಸಿರುವುದು ಕಂಡುಬಂದಿದೆ. ಹಾಗಾಗಿ ಚಿದಂಬರಂ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ತಿದ್ದಿರುವುದು ಮತ್ತು ನಕಲು ಮಾಡಿರುವುದು ಹಗರಣಕ್ಕೆ ಕಾರಣವಾಗಿದೆ. ಅದು ಅಪರಾಧಿಕ ಪಿತೂರಿ ಮತ್ತು ಬೊಕ್ಕಸಕ್ಕೆ ಮಾಡಿದ ವಂಚನೆ. ಹಾಗಾಗಿ ಸಿಬಿಐ ತನಿಖೆ ಆಗಲೇ ಬೇಕಾದ ಅಗತ್ಯವಿದೆ. ಕೆಲವರು ಕೇಳಬಹುದು ಸಿಬಿಐ ಎಂದರೆ ಬಿಜೆಪಿಗೆ ನಂಬಿಕೆಯಿಲ್ಲ, ಆದರೂ ಏಕೆ ಸಿಬಿಐ ತನಿಖೆ ಅಗತ್ಯವಿದೆ ಎಂದು ಹೇಳುತ್ತಿದ್ದೀರಾ ಎಂದು. ದುರದೃಷ್ಟವೆಂದರೆ ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರ ವಿರೋಧಿ ತನಿಖಾ ಸಂಸ್ಥೆ ಎಂದು ಇರುವುದು ಸಿಬಿಐ ಒಂದೇ. ಹಾಗಾಗಿ ಬಿಜೆಪಿ ಯಾವಾಗಲೂ ನ್ಯಾಯಾಲಯದ ನಿಗಾದ ಅಡಿಯಲ್ಲಿ ಸಿಬಿಐ ತನಿಖೆ ಅಗತ್ಯವಿದೆ ಎಂದು ಹೇಳುವುದು.
ಮತ್ತೊಂದೆಡೆ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು 2013ರ ಮಾರ್ಚ್ 6 ರಂದು ಮೊದಲು ಈ ಹಗರಣದ ಬಗ್ಗೆ ಪಿಎಸಿ(ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ) ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ. ಹಗರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಉದ್ದೇಶವಲ್ಲದೆ ಬೇರೇನು ಅಲ್ಲ. ಮೊದಲಿಗೆ ಪಿಎಸಿ ತನಿಖಾ ಸಂಸ್ಥೆಯೇ ಅಲ್ಲ. ಹಾಗಾಗಿ ಅದು ಹೇಗೆ ವ್ಯವಸ್ಥಿತ ಭ್ರಷ್ಟಾಚಾರ ನಡೆದಿರುವ ಸಾಲಮನ್ನಾ ಹಗರಣದ ಬಗ್ಗೆ ಹೇಗೆ ತನಿಖೆ ನಡೆಸಲು ಸಾಧ್ಯ? ಇದಲ್ಲದೆ 2ಜಿ ತರಂಗಾಂತರ ಹಗರಣದ ಬಗ್ಗೆ ಪಿಎಸಿ ನೀಡಿದ್ದ ವರದಿಯನ್ನು ಸರ್ಕಾರ ಹೇಗೆ ಮುಚ್ಚಿಹಾಕಿತು ಎಂಬುದು ಎಲ್ಲರಿಗೂ ತಿಳಿದಿದೆ.
ದೂರವಾಣಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣ, ಹೆಲಿಕಾಪ್ಟರ್ ಹಗರಣದಂತೆ ಸಾಲಮನ್ನಾ ಹಗರಣ ಕೂಡ ಕೇವಲ ದೇಶದ ಆರ್ಥಿಕ ಸ್ಥಿತಿಗತಿ ಮೇಲೆ ಮಾತ್ರ ಪರಿಣಾಮ ಬೀರದೇ ಭಾರತದ ಸಾಮಾಜಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರದ ಜನಪ್ರಿಯ ಯೋಜನೆಗಳ ಪ್ರಯೋಜನ ಬೇರೆ ಯಾರಿಗೂ ಅಲ್ಲ ತನಗೆ ತಾನೆ ಮಾಡಿಕೊಳ್ಳುತ್ತಿದೆ ಎಂಬುದನ್ನು ದೃಢೀಕರಿಸುತ್ತದೆ.
ಇನ್ನೊಂದು ಅಚ್ಚರಿ ಮೂಡಿಸುವ ವಿಷಯ ಎಂದರೆ, ಅರ್ಹವಲ್ಲದ ಕೆಲವು ಸಣ್ಣ ಹಣಕಾಸು ಸಂಸ್ಥೆಗಳು ಪ್ರಯೋಜನ ಪಡೆದಿರುವುದು. ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಸಾಲಮನ್ನಾದ ಬಗ್ಗೆ ಯಾರಾದರೂ ಯೋಚನೆ ಮಾಡಿದರೆ ಇದರಲ್ಲಿ ಸುಮಾರು 50 ಸಾವಿರದಿಂದ 1 ಲಕ್ಷದವರೆಗೆ ರೈತರು ಪ್ರಯೋಜನ ಪಡೆದಿರಬಹುದು ಎಂಬ ಭಾವನೆ ಹೊಂದುತ್ತಾರೆ. ಆದರೆ ಅದನ್ನು ನಂಬಲು ಸಾಧ್ಯವೇ? ಕೆಲವು ವ್ಯಕ್ತಿಗಳ 5 ಲಕ್ಷದ ವರೆಗಿನ ಸಾಲ ಕೂಡ ಮನ್ನಾ ಮಾಡಲಾಗಿದೆ. ಸಾಲಮನ್ನಾ ಯೋಜನೆಯಲ್ಲಿ 5 ಲಕ್ಷಕ್ಕಿಂತ ಹೆಚ್ಚು ಸಾಲ ಹೊಂದಿದ್ದು, ನಂತರ ಪ್ರಯೋಜನ ಪಡೆದವರ ಪಟ್ಟಿಯನ್ನು ಸರ್ಕಾರ ಬಹಿರಂಗಗೊಳಿಸಬೇಕು. ಇದು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಹೊರಹಾಕುತ್ತದೆ.
ಕೃಷಿ ಸಾಲಮನ್ನಾ ಮತ್ತು ಸಾಲ ಪರಿಹಾರ ಯೋಜನೆ ಮೇ 2008ರಲ್ಲಿ ಆರಂಭಿಸಲಾಯಿತು. ಆ ಪ್ರಕಾರ ಏಪ್ರಿಲ್ 1, 1997ರಿಂದ ಮಾರ್ಚ್ 31 2007ರ ನಡುವಿನ ಅವಧಿಯಲ್ಲಿ ಪಡೆದ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿದೆ. ಶೇಕಡ 60ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮವರ್ಗದ ರೈತರು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯುವುದರಿಂದ ಅವರ್ಯಾರು ಸಾಲಮನ್ನಾ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಯೋಜನೆ ಅಪ್ರಯೋಜಕ. ಇದಲ್ಲದೆ, ಶೇಕಡ 50ಕ್ಕೂ ಅಧಿಕ ಸಣ್ಣ ಹಾಗೂ ಮಧ್ಯಮವರ್ಗದ ರೈತರು ತಾಂತ್ರಿಕವಾಗಿ ಯೋಜನೆ ವ್ಯಾಪ್ತಿಗೆ ಬಂದರೂ ಅವರು ನಿಜವಾಗಿ ಯೋಜನೆಯ ಪ್ರಯೋಜನ ಪಡೆಯುವುದಿಲ್ಲ. ಕಾಕತಾಳೀಯ ಎಂದರೆ ಸಣ್ಣ ಹಾಗೂ ಮಧ್ಯಮವರ್ಗದ ರೈತರು ತಮ್ಮ ಅಗತ್ಯಗಳನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡಿರುತ್ತಾರೆ. ಆದರೆ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಅಲ್ಲದೆ ಅವರಿಗೆ ಹೊಸ ಸಾಲ ಪಡೆಯಲೂ ಸಹ ಬಡ್ಡಿದರ ಕಡಿಮೆ ಮಾಡುವುದಿಲ್ಲ. ಅವರೇನು ಪಾಪ ಮಾಡಿದ್ದಾರೆ?
ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ನೆರವಾಗದ ಇಂತಹ ಯೋಜನೆ ಪ್ರಯೋಜನವೇನು? ವಿದರ್ಭ ಪ್ರಾಂತ್ಯದಲ್ಲಿ 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಜನವರಿಯಿಂದೀಚೆಗೆ 66 ದಿನಗಳಲ್ಲಿ 65 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿಯೇ ನಾವು ಈ ಸಾಲಮನ್ನಾ ಹಗರಣದ ಬಗ್ಗೆ ನ್ಯಾಯಾಲಯ ನಿಗಾವಹಿಸುವ ಸಿಬಿಐ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸುತ್ತಿರುವುದು. ಮಾರ್ಚ್31, 2013ರ ವರೆಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಸಣ್ಣ ಹಾಗೂ ಮಧ್ಯಮವರ್ಗದ ಅರ್ಹ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತೇವೆ.
ಮತ್ತೊಂದು ವಾಸ್ತವ ವಿಷಯವೇನೆಂದರೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವ ಕಾರಣ ಅವರು ಸಾಲದ ಸುಳಿಯಲ್ಲೇ ಮುಂದುವರಿಯುತ್ತಿದ್ದಾರೆ. ಈ ಕುರಿತ ಸುದೀರ್ಘ ಚರ್ಚೆಯನ್ನು ಕಾಂಗ್ರೆಸ್ ಸರ್ಕಾರ ಸತತವಾಗಿ ನಿರಾಕರಿಸುತ್ತಲೇ ಬಂದಿದೆ. ಸಿಎಸಿಪಿ(ಕೃಷಿ ಉತ್ಪಾದನಾ ವೆಚ್ಚ ಮತ್ತು ಬೆಲೆ ಆಯೋಗ)ಯ ಲೆಕ್ಕಾಚಾರದ ಪ್ರಕಾರ ಗೋಧಿ ಮತ್ತು ಭತ್ತ ಉತ್ಪಾದನಾ ವೆಚ್ಚ ಅದರ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಾಗಿದೆ. 2010-11ರಲ್ಲಿ ಒಂದು ಕ್ವಿಂಟಾಲ್ ಭತ್ತದ ಉತ್ಪಾದನಾ ವೆಚ್ಚ 742 ರುಪಾಯಿ ಇದ್ದರೆ ಕನಿಷ್ಠ ಬೆಂಬಲ ಬೆಲೆ ಒಂದು ಸಾವಿರ ರುಪಾಯಿ ಇತ್ತು. ಹಾಗಾಗಿ ಶೇಕಡ 34.77ರಷ್ಟು ಲಾಭ ರೈತರಿಗೆ ಸಿಗುತ್ತಿತ್ತು. ಆದರೆ 2011-12ರಲ್ಲಿ ಉತ್ಪಾದನಾ ವೆಚ್ಚ 888 ರುಪಾಯಿಗಳಿಗೆ ಏರಿದೆ. ಕನಿಷ್ಠ ಬೆಂಬಲ ಬೆಲೆ ಮಾತ್ರ 1080 ರುಪಾಯಿಗಳಲ್ಲಿದೆ. ಇದರಿಂದಾಗಿ ಲಾಭದ ಪ್ರಮಾಣ ಶೇಕಡ 21.62ಕ್ಕೆ ಕುಸಿದಿದೆ. 2012-13ನೇ ಸಾಲಿನಲ್ಲಿ ಉತ್ಪಾದನಾ ವೆಚ್ಚ 1152ಕ್ಕೆ ಏರಿದ್ದರೆ ಬೆಂಬಲ ಬೆಲೆ 1250 ರುಪಾಯಿ ಇದೆ. ಹೀಗಾಗಿ ಲಾಭದ ಪ್ರಮಾಣ ಶೇಕಡ 8.5ಕ್ಕೆ ಗಣನೀಯವಾಗಿ ಕುಸಿದಿದೆ. ಅದೇ ರೀತಿ ಗೋಧಿ ಉತ್ಪಾದನೆಯಲ್ಲಿ ಲಾಭದ ಪ್ರಮಾಣ 2010-11ರಲ್ಲಿ ಶೇಕಡ 33.17ರಷ್ಟು ಇದ್ದದ್ದು ಶೇಕಡ 13.91ಕ್ಕೆ ಕುಸಿದಿದೆ. 2011-12ರಲ್ಲಿ ಲಾಭದ ಪ್ರಮಾಣ ಶೇಕಡ 20.81ರಷ್ಟಿತ್ತು.
ಇದೇ ಕಾರಣಕ್ಕೆ ಸ್ವಾಮಿನಾಥನ್ ಸಮಿತಿ ಸೂಚಿಸಿರುವಂತೆ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಬೆಂಬಲ ಬೆಲೆ ಶೇಕಡ 50ರಷ್ಟು ಹೆಚ್ಚಾಗಿರಬೇಕು ಎಂಬ ಸೂತ್ರವನ್ನು ಪಾಲಿಸಬೇಕು. ಈ ಸೂತ್ರವನ್ನು ಅನುಸರಿಸುವುದರಿಂದ ರೈತರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಇದನ್ನು ಮಾಡದಿದ್ದರೆ ರೈತರು ಸಾಲದ ಸುಳಿಯಲ್ಲೇ ಮುಂದುವರಿಯುತ್ತಾರೆ. ಸಾಲಮನ್ನಾ ಮಾಡಿ ಎಂಬ ಬೇಡಿಕೆ ಇದ್ದೇ ಇರುತ್ತದೆ. ಮತ್ತು ಅದು ಇನ್ನೊಂದು ಹಗರಣಕ್ಕೆ ದಾರಿ ಮಾಡಿಕೊಡುತ್ತದೆ.
- ಪ್ರಕಾಶ ಜಾವಡೇಕರ್
ಬಿಜೆಪಿ ರಾಷ್ಟ್ರೀಯ ವಕ್ತಾರರು