ಇಟಲಿ ಆರೋಪಿಗಳ ವಿಷಯದಲ್ಲಿ ಸರ್ಕಾರವೇಕೆ ಔದಾರ್ಯ ತೋರಿತು?
15 ಫೆಬ್ರವರಿ 2012ರಂದು ಇಟಲಿಯ ಹಡಗು 'ಎನ್ರಿಕಾ ಲೆಕ್ಸಿ'ಯಿಂದ ಇಟಲಿಯ ನಾವಿಕರಿಬ್ಬರು ಭಾರತದ ಇಬ್ಬರು ಮೀನುಗಾರರನ್ನು ಗುಂಡಿಟ್ಟು ಕೊಂದುಹಾಕಿದರು. 19 ಫೆಬ್ರವರಿ 2012ಕ್ಕೆ ಕೇರಳ ಪೊಲೀಸ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತು. 105 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿಟ್ಟ ನಂತರ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತಾದರೂ ಕೇಸ್ ಮಾತ್ರ ಹಾಗೇ ಮುಂದುವರಿಯಿತು. ಕಡೆಗೆ 21ಡಿಸೆಂಬರ್ 2012ಕ್ಕೆ ಕೇರಳದ ಉಚ್ಚ ನ್ಯಾಯಾಲಯ ಕ್ರಿಸ್ಮಸ್ ಹಬ್ಬವಾಚರಿಸುವ ಸಲುವಾಗಿ ಇಟಲಿಗೆ ತೆರಳಲು ಇಬ್ಬರಿಗೂ ಅನುಮತಿ ಕೊಟ್ಟಿತು.
ಕ್ರಿಸ್ಮಸ್ ಮುಗಿಸಿಕೊಂಡು 4 ಜನವರಿ 2013ರಂದು ಅವರು ಕೊಚ್ಚಿಗೆ ಮರಳಿದರು. 18 ಜನವರಿ 2013 ರಂದು ಸರ್ವೊಚ್ಚ ನ್ಯಾಯಾಲಯ, ಸಾಗರ ಕ್ಷೇತ್ರೀಯ ನ್ಯಾಯಾಲಯವನ್ನು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಹೇಳಿತು. ನಂತರ ಆ ಮೊಕದ್ದಮೆಯನ್ನು ದೆಹಲಿಗೆ ಸ್ಥಾನಾಂತರಿಸಲಾಯಿತು. ಇದರೊಟ್ಟಿಗೆ ಸರ್ವೊಚ್ಚ ನ್ಯಾಯಾಲಯ ದೆಹಲಿಯಲ್ಲಿರುವ ಇಟಲಿ ರಾಯಭಾರಿಯಿಂದ ಬಂದ ಶಪಥ ಪತ್ರ(ನಾವಿಕರನ್ನು ಮತ್ತೆ ವಾಪಸ್ ಕಳುಹಿಸುವ ಗ್ಯಾರಂಟಿ)ದ ಆಧಾರದ ಮೇಲೆ ಇಟಲಿಯಲ್ಲಿ ನಡೆಯುತ್ತಿರುವ ಚುನಾವಣೆಗೆ ತೆರಳಲು ನಾವಿಕರಿಗೆ ಅವಕಾಶ ನೀಡಿತು. ಈ ಘಟನೆ ಅಂತಾರಾಷ್ಟ್ರೀಯ ಸಾಗರ ಕ್ಷೇತ್ರದಲ್ಲಿ ನಡೆದಿರುವುದರಿಂದ ತನ್ನ ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವುದಿಲ್ಲ, ಏನಿದ್ದರೂ ವಿಚಾರಣೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿಯೇ ನಡೆಯಲಿದೆ ಎಂದು 11 ಮಾರ್ಚ್ 2013ರಂದು ಇಟಲಿ ಸರ್ಕಾರ ಹೇಳಿತು!
ಇಟಲಿ, ಭಾರತದ ಕಾನೂನನ್ನು ಕಡೆಗಣಿಸಿ ಹತ್ಯೆಯ ಆರೋಪಿಗಳನ್ನು ರಕ್ಷಿಸುತ್ತಿರುವುದನ್ನು ನೋಡಿದರೆ, ಆ ದೇಶದಲ್ಲಿ ಲೋಕತಂತ್ರವಲ್ಲ, ಬದಲಾಗಿ ಗೂಂಡಾಗಿರಿ ಮತ್ತು ಕಾನೂನು ಮುರಿಯುವುದನ್ನೇ ನಿಯಮ ಮಾಡಿಕೊಂಡಿರುವ ಕುಖ್ಯಾತ ಮಾಫಿಯಾ ಗ್ಯಾಂಗ್ ಸರ್ಕಾರ ನಡೆಸುತ್ತಿದೆಯೇನೋ ಅನ್ನಿಸದೇ ಇರದು. ಆದರೆ ಈ ಪ್ರಕರಣದಿಂದಾಗಿ ಇಟಲಿಯ ಬದಲಾಗಿ ಭಾರತ ಸರ್ಕಾರವೇ ಕಟಕಟೆಗೆ ಬಂದು ನಿಂತಿದೆ. ಭಾರತೀಯ ನಾಗರಿಕರ ಹತ್ಯೆ ಮಾಡಿದವರಿಗೆ ಕ್ರಿಸ್ಮಸ್ ಹಬ್ಬ ಆಚರಿಸಲು ಅನುವು ಮಾಡಿಕೊಟ್ಟದ್ದು ಯಾವ ಆಧಾರದ ಮೇಲೆ ಎನ್ನುವ ಪ್ರಶ್ನೆ ಏಳುತ್ತಿದೆ. ಘೋರ ಅಪರಾಧಿಗಳಿಗೆ ಹೀಗೆ ಹಬ್ಬ ಆಚರಿಸಲು ಅವಕಾಶ ಕೊಡುವುದಾದರೆ, ದೇಶದಲ್ಲಿರುವ ಲಕ್ಷಾಂತರ ಸಾಮಾನ್ಯ ಕೈದಿಗಳಿಗೆ ದೀಪಾವಳಿ, ಈದ್, ಕ್ರಿಸ್ಮಸ್ನಂದು ಮನೆಗೆ ಹೋಗಲು ಏಕೆ ಅವಕಾಶ ಕೊಡುವುದಿಲ್ಲ? ಈ ಇಬ್ಬರು ಅಪರಾಧಿ ನಾವಿಕರ ಮೇಲೆ ಮೊಕದ್ದಮೆ ನಡೆಯುತ್ತಿರುವಾಗ ಅವರನ್ನು ಭೇಟಿಯಾಗಲು ಇಟಲಿಯ ಅನೇಕ ಮಂತ್ರಿಗಳು ಬಂದು ಹೋದರು. ಅಲ್ಲದೆ ಇಟಲಿಯ ರಾಯಭಾರಿ ಕೂಡ ಅವರನ್ನು ಭೇಟಿಯಾದರು. ಈ ಬಂಧನವನ್ನು ವಿರೋಧಿಸಿದ್ದ ಇಟಲಿ ಸರ್ಕಾರ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳುವ ಬೆದರಿಕೆಯನ್ನೂ ಒಡ್ಡಿತ್ತು. ಇನ್ನು ಇಟಲಿಯ ಪ್ರಧಾನಿಗಳಂತೂ, 'ಈ ಬಂಧನವೇ ಅಕ್ರಮವಾಗಿದ್ದು, ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕು' ಎಂದು ಹೇಳಿದ್ದರು. ಇಟಲಿ ಸರ್ಕಾರ ಈ ಇಡೀ ಪ್ರಕರಣಕ್ಕೆ ರಾಜಕೀಯ ಬಣ್ಣ ಸವರಲು ಪ್ರಯತ್ನಿಸುತ್ತಿದೆ ಎನ್ನುವುದು ಭಾರತಕ್ಕೆ ಆಗಲೇ ತಿಳಿದುಹೋಯಿತು. ಹಾಗಿದ್ದರೆ, ಕ್ರಿಸ್ಮಸ್ಗೆಂದು ಮೊದಲ ಬಾರಿ ಮತ್ತು ಮತ ನೀಡಲುಎರಡನೇ ಬಾರಿ ಅಪರಾಧಿಗಳನ್ನು ಇಟಲಿಗೆ ಕಳುಹಿಸುವ ಅಸಾಧಾರಣ ಮತ್ತು ಅಭೂತಪೂರ್ವ ಹೆಜ್ಜೆಯಿಡಲು ಸರ್ಕಾರವೇಕೆ ಮುಂದಾಯಿತು?
ಇಟಲಿಯ ನಾಗರಿಕರು ವಿದೇಶದಲ್ಲಿದ್ದಾಗಲೂ ಅಲ್ಲಿಂದಲೇ ಮತದಾನ ಮಾಡಬಹುದು ಎನ್ನುವ ಸತ್ಯ, ನಮ್ಮ ಸರ್ಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಈ ಅಪರಾಧಿಗಳಿಗೆ ಮತ ನೀಡುವ ಮನಸ್ಸಿದ್ದರೆ, ಭಾರತದಲ್ಲಿದ್ದುಕೊಂಡೇ ಮತ ನೀಡಬಹುದಿತ್ತು. ಮತದಾನಕ್ಕಾಗಿ ಅವರನ್ನು ಒಂದು ತಿಂಗಳವರೆಗೆ ತಮ್ಮ ದೇಶಕ್ಕೆ ಕಳುಹಿಸಿ ಕೊಟ್ಟದ್ದೇಕೆ? ಇಟಲಿ ಸರ್ಕಾರದ ಯಾವುದೋ ಗುಪ್ತ ಒಪ್ಪಂದ ಅಥವಾ ಷಡ್ಯಂತ್ರವಿಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ? ಜನರ ಒತ್ತಡದಿಂದಾಗಿ ಈ ಅಪರಾಧಿಗಳನ್ನು ಕ್ಷಮಿಸಲು ಅಥವಾ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಭಾರತೀಯ ಸರ್ಕಾರಕ್ಕೆ ಗೊತ್ತಿತ್ತು. ಇಟಲಿಯ ಪರವಾಗಿ ಅತೀವ ಆಸಕ್ತಿ ಮತ್ತು ಪರಾಜಯದ ಭಾವ ಹೊಂದಿದಂತೆ ಕಾಣಿಸುವ ಭಾರತ, ಸದ್ದಿಲ್ಲದೇ ಆ ಷಡ್ಯಂತ್ರದಲ್ಲಿ ಭಾಗವಾಗಿ ಹೋಯಿತು. ಇದಕ್ಕಿಂತ ದೌರ್ಭಾಗ್ಯಪೂರ್ಣ ಸಂಗತಿ ಮತ್ತೊಂದಿದೆಯೇ?
ಈ ರೀತಿ ನಡೆದಿರುವುದು ಮೊದಲ ಸಲವೇನೂ ಅಲ್ಲ. ಭೋಪಾಲ್ ಅನಿಲ ದುರಂತದ ಮುಖ್ಯ ಆರೋಪಿ ವಾರೆನ್ ಆ್ಯಂಡರ್ಸನ್ಗೆ ಭಾರತದಿಂದ ಪರಾರಿಯಾಗಲು ಕಾಂಗ್ರೆಸ್ನ ವರಿಷ್ಠ ರಾಜಕಾರಣಿಗಳು ಹೇಗೆ ಸಹಾಯ ಮಾಡಿದರು ಎನ್ನುವುದಂತೂ ಈಗ ಜಗಜ್ಜಾಹೀರಾಗಿದೆ. ಇದಾದ ನಂತರ ಸಿಬಿಐ ಮತ್ತು ಇಂಟರ್ಪೋಲ್ ತಮ್ಮ ಸರ್ಕಾರಗಳ ತಾಳಕ್ಕೆ ತಕ್ಕಂತೆ ಕುಣಿದು, ಕ್ವಟ್ರೋಕಿಯನ್ನು ಬಿಡುಗಡೆಗೊಳಿಸಿದವು. ಅಷ್ಟೇ ಅಲ್ಲ ಬ್ಲಾಕ್ ಮಾಡಲಾಗಿದ್ದ ಆತನ ಬ್ಯಾಂಕ್ ಖಾತೆಯನ್ನೂ ಡೀಫ್ರೀಜ್ ಮಾಡಲಾಯಿತು!
ಇದುವರೆಗೂ ಇಟಲಿ ಭಾರತದೊಂದಿಗೆ ಯಾವ ಮೈತ್ರಿಪೂರ್ಣ ವ್ಯವಹಾರವನ್ನೂ ಮಾಡಿಲ್ಲ. ಇಟಲಿಯ ನಾವಿಕರು ಭಾರತೀಯ ಕ್ಷೇತ್ರದಲ್ಲೇ ಇದ್ದರು, ಅವರಿಗೆ ಗುಂಡು ಹಾರಿಸುವ ಅಧಿಕಾರವೂ ಇರಲಿಲ್ಲ ಎಂದು ಸಾಕ್ಷಿಗಳು ಸಾದರಪಡಿಸುತ್ತವೆ. ಒಂದು ವೇಳೆ ಅನುಮಾನದ ಅಧಾರದ ಮೇಲೆ ಅಪಾಯದ ಅರಿವಾಯಿತೆಂದರೆ ಎಲ್ಲದಕ್ಕಿಂತ ಮೊದಲು ವಾಟರ್ ಕೆನನ್ ಬಳಸಬೇಕು ಮತ್ತು ದುಬೈಯಲ್ಲಿರುವ ಯುಕೆಮೆರಿಟೈಮ್ ಟ್ರೇಡ್ ಆಫೀಸಿಗೆ ಸಂಭಾವ್ಯ ಅಪಾಯದ ಸಂದೇಶ ಕಳುಹಿಸಬೇಕು ಎಂಬ ನಿಯಮವಿದೆ. ತಮ್ಮತ್ತ ಯಾರಾದರೂ ಗುಂಡು ಹಾರಿಸುವವರಿಗೆ ಅವರತ್ತ ಫೈರಿಂಗ್ ಮಾಡುವ ಅಧಿಕಾರ ಇಟಲಿಯ ನಾವಿಕರಿಗಿರಲಿಲ್ಲ.
ಅವರು ಅನಧಿಕಾರ ಪೂರ್ವಕವಾಗಿ ಗುಂಡು ಹಾರಿಸಿದ್ದಷ್ಟೇ ಅಲ್ಲದೆ, ಮೃತರ ಕುಟುಂಬಕ್ಕೆ ಹಣ ಕೊಟ್ಟು ವಿಷಯವನ್ನು ಇತ್ಯರ್ಥಗೊಳಿಸುವ ಪ್ರಯತ್ನವನ್ನೂ ಮಾಡಿದರು. ಇದಾದ ನಂತರ ಇಟಲಿ ತನ್ನ ರಾಯಭಾರಿಯ ಮೂಲಕ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೂ ಮೋಸ ಮಾಡಿತು.
ಮೃತಪಟ್ಟ ನಾವಿಕರ (48 ವರ್ಷದ ವೆಲೆಂಟೈನ್ ಉರ್ಫ್ ಜೆಲೆಸ್ಟೀನ್ ಮತ್ತು 25 ವರ್ಷದ ಅಜೇಶ್ ವಿನ್ಕಾ) ಕುಟುಂಬವಂತೂ ಈಗ ಛಿದ್ರವಾಗಿ ಹೋಗಿದೆ. ನ್ಯಾಯ ದೊರಕುತ್ತದೆಂಬ ಯಾವ ಆಸೆಯೂ ಅವರಲ್ಲೀಗ ಉಳಿದಿಲ್ಲ. ಇನ್ನು ಈ ಕುಟುಂಬಗಳಿಗೆ ತಲಾ ಒಂದು ಕೋಟಿ ರುಪಾಯಿಯಂತೆ ಪರಿಹಾರ ಕೊಡುವ ಇಟಲಿಯ ಪ್ರಯತ್ನವನ್ನು ಕಾನೂನು ಬಾಹಿರ ಕೆಲಸ ಎಂದು ತಡೆದಿರುವ ಸರ್ವೊಚ್ಚ ನ್ಯಾಯಾಲಯ, ಈ ರೀತಿ ಮಾಡುವುದು ಭಾರತದ ಕಾನೂನು ಪ್ರಕ್ರಿಯೆಗೆ ಅವಮಾನ ಮಾಡಿದಂತೆ ಎಂದು ಹೇಳಿದೆ. ದುರಂತ ವ್ಯಂಗ್ಯವೆಂದರೆ, ಇಟಲಿ ಮತ್ತು ಮೃತಪಟ್ಟವರ ಕುಟುಂಬದ ನಡುವೆ ಮಾತುಕತೆ ಕುದುರಿಸಲು ಕೇರಳದ ಚರ್ಚ್ ಕೂಡ ಶಾಮೀಲಾಗಿತ್ತು ಮತ್ತು ಅದರ ಆರ್ಚ್ಬಿಷಪ್ 'ಕಾರ್ಡಿನಲ್ ಮಾರ್ ಏಲಂಎನ್ಚೇರಿ' ಈ ಒಪ್ಪಂದದ ಬಗ್ಗೆ ಮಾತನಾಡಿದರಾದರೂ ತೀವ್ರ ಜನ ವಿರೋಧದಿಂದಾಗಿ ಸುಮ್ಮನಾಗಿಬಿಟ್ಟರು ಎಂಬುದು.
ಇಟಲಿ ಸರ್ಕಾರ ಹೆಲಿಕಾಪ್ಟರ್ ಡೀಲ್ ವಿಷಯದಲ್ಲಿ ಭಾರತಕ್ಕೆ ಸಹಯೋಗ ನೀಡಲಿಲ್ಲ. ಈಗ ಅದು ತನ್ನ ಅಪರಾಧಿ ನಾಗರಿಕರನ್ನು ಉಳಿಸಿಕೊಳ್ಳಲು ಭಾರತದ ಕಾನೂನನ್ನು ನೆಲಕ್ಕೆ ಹಾಕಿ ತುಳಿಯುತ್ತಿದೆ. ಇಂತಹ ರಾಷ್ಟ್ರದ ರಾಯಭಾರಿಗೆ ರಾಜತಾಂತ್ರಿಕ ವಿನಾಯಿತಿಗಳನ್ನು ಪಡೆಯುವ ಯಾವ ಅಧಿಕಾರವೂ ಇಲ್ಲ. ನಾವಿಕರು ಮತದಾನದ ನಂತರ ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಅವರು ಶಪಥ ಪತ್ರದಲ್ಲಿ ಹೇಳಿದ್ದರು. ಈಗ ಮಾತು ಬದಲಿಸಿದ್ದಾರೆ. ಇಂಥ ರಾಯಭಾರಿಗೆ ಕೊಡಲಾಗಿರುವ ಸೌಲಭ್ಯಗಳನ್ನೆಲ್ಲ ಹಿಂಪಡೆದು ಅವರನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದೇ ಸರಿಯಾದ ಮಾರ್ಗ. ಇಟಲಿಯಂತಹ ಪುಟ್ಟ ದೇಶಕ್ಕೆ ಭಾರತವನ್ನು ಗೊಳುಹೊಯ್ದುಕೊಳ್ಳುವಷ್ಟು ಶಕ್ತಿ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಕಾಡುತ್ತಿದೆ. ಇನ್ನು ಭಾರತ ಸರ್ಕಾರ ಅದಕ್ಕೆ ಹೆದರಿ ತಲೆತಗ್ಗಿಸಿನಿಂತಂತೆ ಏಕೆ ವರ್ತಿಸುತ್ತಿದೆ? ಅಥವಾ ಈ ಪ್ರಕರಣದ ಆಳದಲ್ಲಿ ಏನಾದರೂ ಪ್ರಮುಖ ವಿಷಯ ಅಡಗಿರಬಹುದೇ?!
- ತರುಣ್ ವಿಜಯ್
anisikeprabha@gmail.com