ಅಂಕಣಗಳು

ಬಾಂಗ್ಲಾದ ಒಡಲಿನಲ್ಲಿ ಏನದು ಸಂಘರ್ಷ?

ಬಾಂಗ್ಲಾದೇಶ ವಿಮೋಚನೆ ಹೋರಾಟದ ಸಂದರ್ಭದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ರಝಾಕಾರರಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಬಾಂಗ್ಲಾದೇಶದ ಶಹಬಾಗ್ ಪ್ರಾಂತ್ಯದಲ್ಲಿ ತಿಂಗಳಿನಿಂದ ಜನಸಾಮಾನ್ಯರ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಎಲ್ಲ ವರ್ಗಗಳ ಜನರೂ ಪಾಲ್ಗೊಂಡಿರುವುದು ವಿಶೇಷ. ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್ಸುಗಳಲ್ಲಿ 1971ರ ಯುದ್ಧದ ವೇಳೆ ನಡೆದ ಅನಾಚಾರಗಳನ್ನು ಬಿಂಬಿಸುವ ಪೋಸ್ಟರುಗಳನ್ನು ಹಿಡಿದಿರುವ ಯುವ ಸಮೂಹದಲ್ಲಿ ಕ್ರಾಂತಿಯ ಉತ್ಕರ್ಷ. ಟಿವಿಯಲ್ಲಿ ಪ್ರತಿಭಟನೆ ವೀಕ್ಷಿಸಿದ ಜನ, ದೂರದ ರಂಗ್ಪುರ್‌ನಂಥ ಹಳ್ಳಿಗಳಿಂದಲೂ ಗುಂಪಾಗಿ ಶಹಬಾಗ್ ಪ್ರಾಂತ್ಯಕ್ಕೆ ಬಂದು ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಜಮಾತೆ ಇಸ್ಲಾಮಿ ಹಾಗೂ ಇಸ್ಲಾಮಿ ವಿದ್ಯಾರ್ಥಿ ಸಂಘಟನೆಯ ಹಿಂಸಾಪ್ರಿಯರ ಗುಂಪು ಹಾಗೂ ಪೊಲೀಸರ ನಡುವೆ ಢಾಕಾದ ಕೆಲಭಾಗಗಳಲ್ಲಿ ಚಿಕ್ಕ ಕದನವೇ ನಡೆಯುತ್ತಿದೆ. ಜಮಾತ್ ಶಿಬಿರ ಹಾಗೂ ಬಾಂಗ್ಲಾದೇಶದ ಪ್ರತಿಪಕ್ಷವಾದ ಖಲೀದ್ ಜಿಯಾ ನೇತೃತ್ವದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ಹರತಾಳ ಮತ್ತು ಬಂದ್ ಕರೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನೊಂದು ತುದಿಯಲ್ಲಿ ನಿಂತಿರುವವರು ಶಹಬಾಗ್‌ನ ಕಾರ್ಯಕರ್ತರು ಮತ್ತು ಆಡಳಿತಾರೂಢ ಆವಾಮಿ ಲೀಗ್.

ಬಾಂಗ್ಲಾದೇಶದ ಕಾಲೇಜು ಕ್ಯಾಂಪಸ್‌ಗಳಲ್ಲಿ, ಉದ್ಯಮದ ಪಡಸಾಲೆಗಳಲ್ಲಿ, ಪೇಟೆ ಮತ್ತು ಹಳ್ಳಿಗಳಲ್ಲಿ ಎರಡು ನೆಲೆಗಳ ಧ್ರುವೀಕರಣ ಢಾಳಾಗಿದೆ. ಮುಂಬರಲಿರುವ ಚುನಾವಣೆಗಳ ಬಗ್ಗೆ ಮಾತನಾಡುತ್ತ, ಚುನಾವಣೆ ಗಳಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಎಲ್ಲ ಬೆಳವಣಿಗೆಗಳು ಆಗುತ್ತಿವೆ ಎಂಬ ಮಾತನ್ನೂ ಹೇಳಲಾಗುತ್ತಿದೆ. ಆದರೆ ಇನ್ನುಳಿದವರ ಅಭಿಪ್ರಾಯವೆಂದರೆ- ಇದಕ್ಕೂ ಚುನಾವಣೆಗಳಿಗೂ ಸಂಬಂಧವಿಲ್ಲ; 1971ರ ಯುದ್ಧಾಪರಾಧಗಳ ಕುರಿತ ನ್ಯಾಯಮಂಡಳಿ ತನ್ನ ಪ್ರಕ್ರಿಯೆಯನ್ನು ಅಂತಿಮಗೊಳಿಸಿರುವುದರಿಂದ ಈ ಹಂತದಲ್ಲಿ ಇದು ನಿರೀಕ್ಷಿತವೇ ಎನ್ನುತ್ತಾರವರು. ಶಹಬಾಗ್ ಚಳವಳಿ ಮತ್ತು ಜಮಾತೆ ಶಿಬಿರಗಳ ವಿಷಯವನ್ನು ಕ್ರಮೇಣ ರಾಜಕೀಯಗೊಳಿಸಲಾಯಿತು ಹಾಗೂ ಇದರ ಹೊಣೆಯನ್ನು ಆಡಳಿತಾರೂಢ ಆವಾಮಿ ಲೀಗ್ ಹೊರಬೇಕು ಎಂಬ ಅಭಿಮತ ಹೊಂದಿರುವವರೂ ಇದ್ದಾರೆ. ಅಂತೂ ಈ ದೇಶವು ನಾಗರಿಕ ಸಂಘರ್ಷದಂಥ ಪರಿಸ್ಥಿತಿಯ ಹೊಸ್ತಿಲಿನಲ್ಲಿದೆ. ಪ್ರಗತಿ ಹೊಂದುತ್ತಿರುವ ಪ್ರಜಾಪ್ರಭುತ್ವ ಹಾಗೂ ಅರ್ಥವ್ಯವಸ್ಥೆಗೆ ಇದು ಒಳ್ಳೆಯ ಸುದ್ದಿಯೇನೂ ಅಲ್ಲ. ಬಾಂಗ್ಲಾದೇಶದ ಮಿಲಿಟರಿ ಇವನ್ನೆಲ್ಲ ಗಂಭೀರವಾಗಿ ಗಮನಿಸುತ್ತಿದ್ದು, ಅಗತ್ಯ ಬಿದ್ದರೆ ತಾನೇ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.
ಮುಂಬರಲಿರುವ ಚುನಾವಣೆಗಳು ನಡೆಯದೆಯೂ ಉಳಿದುಬಿಡಬಹುದು. ಜಮಾತ್ ಶಿಬಿರವು ಬುದ್ಧಿವಂತ ಪಕ್ಷವಾಗಿದ್ದು, ಬಾಂಗ್ಲಾದೇಶದ ಹಲವೆಡೆ ಬೇರು ಬಿಟ್ಟಿದೆ. ಹೀಗಾಗಿ ಇದನ್ನು ಯಾವುದೇ ಕಾರಣ ನೀಡಿ ಸುಲಭದಲ್ಲಿ ಬ್ಯಾನ್ ಮಾಡುವುದಕ್ಕಾಗುವುದಿಲ್ಲ. ಚಿತ್ತಗಾಂಗ್‌ನ ದಕ್ಷಿಣದ ಕಾಕ್ಸ್ ಬಜಾರ್ ಪ್ರದೇಶವು ಜಮಾತೆ ಶಿಬಿರದ ಭದ್ರಕೋಟೆ. ಅಲ್ಲಿನ ಸ್ಥಳೀಯ ಶಹೀದ್ ಮಿನಾರ್‌ನಲ್ಲೇ ಶಹಬಾಗ್ ಪ್ರತಿಭಟನೆಯ ಸಮರ್ಥಕರ ಧರಣಿ ಶುರುವಾಗಿ ಭಾರೀ ಆತಂಕಮಯ ಪರಿಸ್ಥಿತಿಗೆ ಕಾರಣವಾಗಿದೆ.

ಕಾಕ್ಸ್ ಬಜಾರಿನಲ್ಲಿರುವ ಬಾಂಗ್ಲಾದೇಶದ ರಖೈನ್ ಸಮುದಾಯದವರ ಜನಸಂಖ್ಯೆ ಸುಮಾರು 20 ಸಾವಿರ. ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ಗಳ ನಡುವೆ ಗಡಿ ವ್ಯಾಪಾರದಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ರಖೈನ್ ಸಮುದಾಯದವರಿಗೆ ಬದಲಾಗುತ್ತಿರುವ ರಾಜಕೀಯ ಸ್ಥಿತಿ ಬಗ್ಗೆ ಕಳವಳ ಇದೆಯಾದರೂ ಇವರಿಗೆ ನಿರ್ದಿಷ್ಟ ಬೆದರಿಕೆಗಳೇನೂ ಎದುರಾಗಿಲ್ಲ. ಇವರು ನಿರರ್ಗಳವಾಗಿ ಬಂಗಾಳಿ ಮಾತನಾಡುತ್ತಾರೆ. ಭಾರತದ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಯುವ ಜನತೆಗೆ ಹಿಂದಿಯೂ ಗೊತ್ತು. ಆದರೆ ಮ್ಯಾನ್ಮಾರ್‌ನ ಗಡಿ ಮುಕ್ತಗೊಂಡ ಮೇಲೂ ಹೆಚ್ಚಿನವರು ಆ ದೇಶಕ್ಕೆ ಭೇಟಿ ಕೊಟ್ಟಿಲ್ಲ. ವ್ಯಾಪಾರ ಮಾಡುವುದಕ್ಕೆ ಹಾಗೂ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಮ್ಯಾನ್ಮಾರ್‌ಗೆ ಹೋಗಲು ಬಾಂಗ್ಲಾದೇಶವು ತಾತ್ಕಾಲಿಕ ಪಾಸ್‌ಗಳನ್ನು ಕೊಡುತ್ತದೆ. ಆದರೂ ಮ್ಯಾನ್ಮಾರ್ ಅನ್ನು ನಿಯಮಿತವಾಗಿ ಸಂದರ್ಶಿಸುವ ವ್ಯಾಪಾರಿಗಳ ಸಂಖ್ಯೆ ತುಂಬ ಚಿಕ್ಕದು.
ಜಮಾತೆ ಶಿಬಿರದ ಕಾರ್ಯಕರ್ತರು ಹಿಂದುಗಳ ಹಳ್ಳಿಗಳ ಮೇಲೆ ಧಾಳಿ ಮಾಡಿದ್ದರ ಬಗ್ಗೆ ವರದಿಗಳು ಬಂದಿವೆ.ಆದರೆ ರಖೈನ್ ಬೌದ್ಧ ಸಮುದಾಯದ ಮೇಲೆ ಅಂಥ ಧಾಳಿಗಳೇನೂ ಆಗಿಲ್ಲ. 1971ರ ಯುದ್ಧಾಪರಾಧ ಪ್ರಕರಣಗಳಿಗೆ ಹಿಂದುಗಳೇ ಪ್ರಮುಖ ಸಾಕ್ಷ್ಯಗಳಾಗಿರುವುದರಿಂದ ಅವರ ಮೇಲೆಯೇ ಜಮಾತೆ ಶಿಬಿರದಿಂದ ಹೆಚ್ಚಿನ ಧಾಳಿಗಳು ಆಗುತ್ತಿವೆ. ಹೀಗಾಗಿ ಬೇರೆ ಬೇರೆ ಧಾರ್ಮಿಕ ಅಲ್ಪಸಂಖ್ಯಾತರ ಗುಂಪುಗಳೆಲ್ಲ ಹೇಗೆ ಒಗ್ಗಟ್ಟಾಗುತ್ತವೆ ಎಂಬುದರ ಮೇಲೆಯೇ ಬಾಂಗ್ಲಾದೇಶ ಕ್ರಾಂತಿಯ ಯಶಸ್ಸು ನಿರ್ಧರಿತವಾಗುತ್ತದೆ.

ಕಾಕ್ಸ್ ಬಜಾರ್ ಪ್ರಾಂತ್ಯದಲ್ಲಿರುವ ರೊಹಿಂಗ್ಯ ಮುಸ್ಲಿಮರ ಜನಸಂಖ್ಯೆಯು ಎರಡು ವಿಧದಲ್ಲಿ ಸ್ಪಷ್ಟ ವಿಭಾಗ ಹೊಂದಿದೆ. ಮ್ಯಾನ್ಮಾರ್‌ನಿಂದ ಬಂದಿರುವ ನಿರಾಶ್ರಿತರು ಇವರು. ನೊಂದಾಯಿತ ನಿರಾಶ್ರಿತರು ಹಾಗೂ ನೊಂದಾವಣೆಯಾಗದ ಅಕ್ರಮ ವಲಸಿಗರು ಎಂದು ಇವರಲ್ಲಿ ಎರಡು ವಿಧ. ಕಾಕ್ಸ್ ಬಜಾರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 60 ಸಾವಿರದ ಸಂಖ್ಯೆಯಲ್ಲಿ ರೊಹಿಂಗ್ಯ ಅಕ್ರಮ ವಲಸಿಗ ಮುಸ್ಲಿಮರಿದ್ದಾರೆ ಎಂಬುದು ಒಂದು ಅಂದಾಜು. ಇವರಲ್ಲಿ ಹೆಚ್ಚಿನವರು ಮಾದಕ ಪದಾರ್ಥಗಳ ವ್ಯಾಪಾರವೇ ಮೊದಲಾದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮ್ಯಾನ್ಮಾರ್‌ನ ರಖೈನ್ ಪ್ರಾಬಲ್ಯದ ಪ್ರದೇಶದಲ್ಲಿ ಉಂಟಾದ ಸಂಘರ್ಷದಿಂದ ಅಲ್ಲಿನ ಹೆಚ್ಚಿನ ಸಂಖ್ಯೆಯ ರೊಹಿಂಗ್ಯ ಮುಸ್ಲಿಮರು ಗಡಿ ನುಸುಳಿ ಬಾಂಗ್ಲಾದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದ ಸ್ಥಳೀಯ ರಖೈನ್ ಸಮುದಾಯವೂ ಈ ರೊಹಿಂಗ್ಯ ಮುಸ್ಲಿಮರೊಂದಿಗೆ ಅಂತರ ಕಾಪಾಡಿಕೊಂಡಿದ್ದು ಅಲ್ಲೊಂದು ಬಿಗುವಿನ ವಾತಾವರಣ ಇದ್ದೇ ಇದೆ. ರೊಹಿಂಗ್ಯ ವಲಸಿಗರನ್ನು ಬಾಂಗ್ಲಾ ಜನಸಂಖ್ಯೆಯೊಂದಿಗೆ ಸೇರಿಸಿಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ಪ್ರಸ್ತಾಪವನ್ನು ಆ ದೇಶ ಒಪ್ಪಿಲ್ಲ. ಮತ್ತೆ ಅವರನ್ನೆಲ್ಲ ಮ್ಯಾನ್ಮಾರ್‌ನಲ್ಲಿ ಮರು ವಸತಿಗೆ ಕಳುಹಿಸುವುದು ತನ್ನ ಉದ್ದೇಶ ಎನ್ನುತ್ತದೆ ಬಾಂಗ್ಲಾದೇಶ.

ಆದರೆ ಜಮಾತೆ ಇಸ್ಲಾಮಿ ಪಂಗಡದವರು ಧರ್ಮವನ್ನು ಮುಂದಿಟ್ಟುಕೊಂಡು ಈ ರೊಹಿಂಗ್ಯ ಮುಸ್ಲಿಮರಿಗೆ ಒಳಗೊಳಗೇ ಬೆಂಬಲ ಕೊಡುತ್ತಿದ್ದಾರೆ. ಈ ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿರುವ ಕಾರಣದಂದ ಅವರನ್ನು ಬೇಕಾದಂತೆ ಬಳಸಿಕೊಳ್ಳುವುದು ಜಮಾತೆ ಇಸ್ಲಾಮಿಗೆ ಸಾಧ್ಯವಾಗಿದೆ. ಪೊಲೀಸರ ಜತೆಗಿನ ಇತ್ತೀಚಿನ ಸಂಘರ್ಷಗಳಲ್ಲಿ ರೊಹಿಂಗ್ಯ ಮುಸ್ಲಿಮರನ್ನೇ ಜಮಾತೆ ಸಂಘಟನೆ ಮುಂಚೂಣಿಯಲ್ಲಿ ಬಳಸಿಕೊಂಡಿತ್ತು ಎಂಬ ಬಗ್ಗೆ ವರದಿಗಳಿವೆ.

ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವುದು ಭಾರತದ ಈಶಾನ್ಯ ರಾಜ್ಯಗಳ ಹಿತದೃಷ್ಟಿಯಿಂದ ಹಾಗೂ ಮ್ಯಾನ್ಮಾರ್‌ನ ಹಿತಾಸಕ್ತಿಯಿಂದ ಅಗತ್ಯವೆನಿಸಿದೆ.

- ಮಿರ್ಜಾ ಜುಲ್ಫಿಕರ್ ರೆಹಮಾನ್
ಐಐಟಿ ಗುವಾಹಟಿಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್