ಕುಸಿಯುತ್ತಿರುವ ಕೃಷಿ ಹಾಗೂ ಸವೆಯುತ್ತಿರುವ ರೈತ
ಇಂದು ಕೃಷಿ ಕ್ಷೇತ್ರ ಬಡಕಲಾಗುತ್ತಿದ್ದು, ರೈತರ ಬಗ್ಗೆ ಕರುಣೆ ತೋರುವ ಜನರು ಹೆಚ್ಚಾಗುತ್ತಿದ್ದಾರೆ. ಅದೇ ರೀತಿ ಕೃಷಿಕರ ಹೆಸರಿನಲ್ಲಿ ಸರ್ಕಾರಿ...
ಇಂದು ಕೃಷಿ ಕ್ಷೇತ್ರ ಬಡಕಲಾಗುತ್ತಿದ್ದು, ರೈತರ ಬಗ್ಗೆ ಕರುಣೆ ತೋರುವ ಜನರು ಹೆಚ್ಚಾಗುತ್ತಿದ್ದಾರೆ. ಅದೇ ರೀತಿ ಕೃಷಿಕರ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳನ್ನು ಲೂಟಿ ಮಾಡುವ ಜನರ ಸಂಖ್ಯೆಯೇನೂ ಕಡಿಮೆಯಿಲ್ಲ. ಉದಾಹಾರಣೆಗೆ ರೈತರ ಸಾಲಮನ್ನಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ತಿದ್ದಿ ದೇಶದ ಇನ್ನೂ 34 ಲಕ್ಷ ರೈತರಿಗೆ ಸಿಗಬೇಕಾಗಿದ್ದ ಸವಲತ್ತನ್ನು ನುಂಗಿ ನೀರು ಕುಡಿದಿರುವವರ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಕಠಿಣ ಕ್ರಮ ಕೈಗೊಳ್ಳದೇ ಮೌನವಹಿಸಿದೆ. ಇದೇ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವುದಾಗಿ ಹೇಳುತ್ತಲೇ ಎರಡು ವರ್ಷ ಕಳೆಯಿತು. ಈ ಹಣವನ್ನು ಖಾತೆಗೆ ಜಮಾ ಮಾಡಿದ್ದರೆ 64 ಲಕ್ಷ ಕೋಟಿ ರು. ರೈತರಿಗೆ ಬರುತ್ತಿತ್ತು. ಇದು ಆಗದ ಪರಿಣಾಮ ರಸಗೊಬ್ಬರ ಬೆಲೆ ಮೂರು ಪಟ್ಟು ಏರಿಕೆಯಾಗಿ (ಡಿಎಪಿ 500 ರಿಂದ 1500, ಯೂರಿಯಾ, 300 ರಿಂದ 800 ರವರೆಗೆ ಏರಿಕೆಯಾಗಿ) ರೈತರು ಚಿಂತಿಸುವಂತಾಗಿದೆ.
ಕೃಷಿ ಸಾಲಕ್ಕೆ 7 ಲಕ್ಷ ಕೋಟಿಯನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ. ಆದರೆ, ಇದರಲ್ಲಿ ರೈತನಿಗೆ ನೇರ ಸಾಲಕ್ಕಾಗಿ ಸುಮಾರು 60 ಸಾವಿರ ಕೋಟಿ ರುಪಾಯಿ ಮಾತ್ರ ದೊರೆಯುತ್ತದೆ. ಉಳಿದದ್ದು ಕೃಷಿ ಹೆಸರಿನ ಕಂಪನಿಗಳಿಗೆ ಖಜಾನೆಗೆ ಹೋಗುತ್ತಿದೆ. ಇಂತಹ ಯೋಜನೆಗಳಿಂದ ರೈತರ ಅಭಿವೃದ್ಧಿ ಸಾಧ್ಯವೇ ಎಂಬುದನ್ನು ಯೋಚಿಸಬೇಕಾಗಿದೆ.
ರಾಜ್ಯ ಸರ್ಕಾರವು ಕೃಷಿಗೆ ಬೇಕಾದ ಅಗತ್ಯ ನೀತಿಗಳನ್ನು ಜಾರಿಗೆ ತರುತ್ತಿಲ್ಲ. ಕೇವಲ ಆಕರ್ಷಣೀಯ ಮತಬ್ಯಾಂಕಿನ ಯೋಜನೆಗಳಿಗೆ ಮಾತ್ರ ಒತ್ತು ನೀಡುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡುವ ಯೋಜನೆಗೆ ನೂರಾರು ಕೋಟಿ ವಿನಿಯೋಗಿಸುತ್ತಿದೆ. ಇದೇ ಸರ್ಕಾರ ಕೃಷಿ ವಿವಿಗಳ ಮೂಲಕ ಆಧುನಿಕ ಕೃಷಿ ಅಭಿವೃದ್ಧಿ, ಬಿಟಿ ತಂತ್ರಜ್ಞಾನದಂತಹ ಕೃಷಿಯನ್ನು ಉತ್ತೇಜಿಸಲು ಯೋಜನೆಗಳನ್ನು ಜಾರಿಗೆ ತರುತ್ತದೆ. ಇಂತಹ ದ್ವಿಮುಖ ನೀತಿಯನ್ನು ಸರ್ಕಾರಗಳೇ ಜಾರಿಗೆ ತರುವುದಾದರೆ ಮುಗ್ಧ ಅನಕ್ಷರಸ್ಥ ರೈತ ಯಾವ ನೀತಿಯನ್ನು ಒಪ್ಪಿಕೊಳ್ಳಬೇಕು ರೈತನಿಗೆ ಬೇಕಿರುವುದು ಸಕಾಲಕ್ಕೆ ಗೊಬ್ಬರ, ಬೀಜ, ವಿದ್ಯುತ್, ಉತ್ತಮ ಮಾರುಕಟ್ಟೆ, ನ್ಯಾಯಯುತ ಬೆಲೆ. ರೈತನಿಗೆ ಇದಾವುದು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಳಸಂತೆಯಲ್ಲಿ ಸಿಕ್ಕರೂ ಪರಿಶುದ್ದವಾದ, ಗುಣಮಟ್ಟದ ವಸ್ತುಗಳಾಗಿರುವುದಿಲ್ಲ. ಇದರಿಂದಲೂ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುತ್ತದೆ. ವಿಧಿಯಿಲ್ಲದೆ ಸಾಲದ ಬಲೆಗೆ ಸಿಲುಕಿರುವ ರೈತ ನಷ್ಟವಾದರೂ ಮಾರಾಟ ಮಾಡಿ ಸಂಕಷ್ಟದಲ್ಲಿಯೇ ನರಳುತ್ತಿದ್ದಾನೆ. ಇನ್ನು ವಿದ್ಯುತ್ ಸಮಸ್ಯೆ ಕೃಷಿ ಕ್ಷೇತ್ರಕ್ಕೆ ನುಂಗಲಾರದ ತುತ್ತಾಗಿದೆ. ಒಂದೆರೆಡು ಗಂಟೆಗಳು ಮಾತ್ರ ವಿದ್ಯುತ್ ಸಿಕ್ಕಲೂ ಬೆಳೆ ಉಳಿಸಿಕೊಳ್ಳಲು ಅವಿರತ ಶ್ರಮ ವಿನಿಯೋಗಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ಮಳೆ ಬಾರದೆ ಭೀಕರ ಬರಗಾಲ ಎದುರಾದ ಕಾರಣ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕ್ಷೀಣಗೊಂಡಿದೆ. ಕೃಷಿ ಉತ್ಪಾದನೆ, ಇಳುವರಿ ಕಡಿಮೆಯಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ರೈತರ ಆತ್ಮಹತ್ಯೆ ಸರಣಿಗಳು ಹೆಚ್ಚುವ ಸಾಧ್ಯತೆಯಿದೆ.
ನಮ್ಮದು ಸಂಪತ್ಭರಿತ ದೇಶವಾಗಿದೆ. ಸಂಪತ್ತನ್ನು ಬಂಡವಾಳ ಶಾಹಿಗಳು, ಕೈಗಾರಿಕೋದ್ಯಮಿಗಳು ಬೇರೆ ಬೇರೆ ಮಾರ್ಗಗಳಿಂದ ಲೂಟಿ ಮಾಡುತ್ತಿದ್ದಾರೆ. ಆಡಳಿತ ನಡೆಸುವ ಪ್ರತಿನಿಧಿಗಳು ಈ ಲೂಟಿ ಕೋರರನ್ನು ಅಂಕೆಯಲ್ಲಿಡದೆ, ಕೆಲಸಕ್ಕೆ ಬಾರದ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.
ಚೀನಾ ದೇಶ 15 ವರ್ಷಗಳ ಹಿಂದೆ ಜನಸಂಖ್ಯೆ ಹೆಚ್ಚಳದಿಂದ ತತ್ತರಿಸುತ್ತಿತ್ತು. ಆದರೆ, ಇಂದು ಅಲ್ಲಿನ ಆಡಳಿತ ವ್ಯವಸ್ಥೆ, ಕಠಿಣ ನೀತಿಗಳ ಜಾರಿಯಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅಭಿವೃದ್ಧಿಗಾಗಿಯೇ ರೂಪಿಸಿದ ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಬ್ಬ ಪ್ರಜೆಯು ಪ್ರತಿನಿತ್ಯ 8 ಗಂಟೆಗಳ ದುಡಿಮೆಯನ್ನು ಕಡ್ಡಾಯಗೊಳಿಸಿ, ಮಾನವ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ. ಇಂತಹ ನೀತಿಗಳು ನಮ್ಮ ದೇಶಕ್ಕೆ ಜರೂರಾಗಿದೆ.
- ಕುರುಬೂರು ಶಾಂತಕುಮಾರ್
ಸಂಪಾದಕರು
ರೈತಧ್ವನಿ