ಕೃಷಿಕ್ಷೇತ್ರದ ಕಾಳಜಿಗೆ ನನ್ನ ಕಣ್ಣೆದುರಿನ ಒಂದು ಉದಾಹರಣೆ
ಕಳೆದ ವಾರ ನಿಮಗೆ ಮೊದಲೇ ಮುನ್ಸೂಚನೆ ಕೊಡುವ ವ್ಯವಸ್ಥೆ ಎನ್ನುವ ತಂತ್ರಜ್ಞಾನವನ್ನು ಅಳವಡಿಸಿ ಸರಿಯಾದ ಸಮಯಕ್ಕೆ ...
ಕಳೆದ ವಾರ ನಿಮಗೆ ಮೊದಲೇ ಮುನ್ಸೂಚನೆ ಕೊಡುವ ವ್ಯವಸ್ಥೆ ಎನ್ನುವ ತಂತ್ರಜ್ಞಾನವನ್ನು ಅಳವಡಿಸಿ ಸರಿಯಾದ ಸಮಯಕ್ಕೆ ರೈತರಿಗೆ ಮಾಹಿತಿ ಕೊಡಲು ಒಂದು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರ ಬಗ್ಗೆ ಹೇಳುತ್ತಿದ್ದೆ. ಕೋಟ್ಯಂತರ ರುಪಾಯಿಗಳ ಕರಾರನ್ನು ಮಾಡಿಕೊಂಡು ಗುತ್ತಿಗೆಯನ್ನು ಪಡೆದಿದ್ದ ಆ ಸಂಸ್ಥೆ ಸಕಾಲಕ್ಕೆ ಮಾಹಿತಿ ನೀಡಲು ವಿಫಲವಾಗುತ್ತಿತ್ತು. ಅಲ್ಲದೆ ಬಿಲ್ಲುಗಳ ಪಾವತಿಯನ್ನು ಮಾತ್ರ ಸಕಾಲಕ್ಕೆ ನೀಡುತ್ತಿತ್ತು. ಸುಮಾರು ಸಲ ಅವರಿಗೆ ಎಚ್ಚರಿಕೆಯನ್ನು ನೀಡಿದರೂ ಸಹ ಅವರು ಸುಧಾರಿಸಲು ಕ್ರಮ ಜರುಗಿಸುತ್ತಿರಲಿಲ್ಲ. ಆಗ ನಾನು ಅವರ ಕರಾರನ್ನು ಸಮಾಪ್ತಿಗೊಳಿಸುವ ಪತ್ರವನ್ನು ತಯಾರಿಸಿ ಹೊರಡಿಸಲು ಹೋದಾಗ ಅವರು ಓಡಿ ಓಡಿ ಬಂದು ಸರಿಪಡಿಸಲು ಒಂದು ಅವಕಾಶ ಕೊಡಿ ಎಂದರು. ಸರ್ಕಾರ-ಖಾಸಗಿ ಸಹಭಾಗಿತ್ವವಾದಾಗ ಕೆಲವು ಕೆಟ್ಟ ಅನುಭವಗಳಲ್ಲಿ ಇದೂ ಒಂದು. ಆದರೆ ಕೆಲಸ ಆಗಬೇಕೆನ್ನುವುದು ಮುಖ್ಯವಾದಾಗ, ಸರ್ಕಾರಿ ಸಂಸ್ಥೆಯಲ್ಲಿ ಸಾಮರ್ಥ್ಯ ಇಲ್ಲದಿದ್ದಾಗ ಮಾತ್ರ ಖಾಸಗಿ ಸಂಸ್ಥೆಗಳ ಕಡೆ ಹೋಗಬೇಕಾಗುತ್ತದೆ.
ಅದೇ ಸಮಯದಲ್ಲಿ ಏಷ್ಯನ್ ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ಜಪಾನ್ ದೇಶದ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಒಂದು ಕರೆ ಬಂದಿತು. ನನ್ನ ಕಾರ್ಯದರ್ಶಿಗಳು ನನ್ನನ್ನು ಇದಕ್ಕಾಗಿ ನೇಮಿಸಿದರು. ನಾನು ಭಾರತ ದೇಶದ ಸಣ್ಣ ಮತ್ತು ಅಲ್ಪ ಪ್ರಮಾಣದ ರೈತರುಗಳ ಸ್ಥಿತಿಗತಿಗಳ ಬಗ್ಗೆ ಒಂದು ಪ್ರಬಂಧವನ್ನು ಮಂಡಿಸಿದೆ. ಜಪಾನ್ ದೇಶಕ್ಕೆ ಹೋಗಿ ಅವರ ಹಳ್ಳಿಗಳನ್ನು ನೋಡಿದರೆ ಅವುಗಳು ಹಳ್ಳಿಯ ಹಾಗೆಯೇ ಇರಲಿಲ್ಲ. ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ ಅವರ ಪ್ರತಿಯೊಬ್ಬ ರೈತರೂ ಲಕ್ಷಾಧಿಪತಿಗಳಾಗಿದ್ದಾರೆ. ಎಲ್ಲರೂ ಕೋಮಲ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆ (ಗ್ರೀನ್ ಹೌಸ್)ಯಲ್ಲಿ ಒಕ್ಕಲುತನ ಮಾಡಿಕೊಂಡು ಭಾರತೀಯರ ಉತ್ಪತ್ತಿಗಿಂತ ಹತ್ತು ಪಟ್ಟು ಹೆಚ್ಚಿನ ಉತ್ಪತ್ತಿ ಗಳಿಸುತ್ತಿದ್ದರು. ಮಾತ್ರವಲ್ಲ ಒಂದು ಹಳ್ಳಿಯ ಎಲ್ಲಾ ರೈತರೂ ಒಂದು ಒಕ್ಕೂಟವನ್ನು ಕಟ್ಟಿ, ತಮ್ಮದೇ ಆದಂತಹ ಮಾರುಕಟ್ಟೆ, ವಿಂಗಡನಾ ವಿಭಾಗ, ಸಂಸ್ಕರಣಾ ವಿಭಾಗ, ಉತ್ತಮ ಪ್ಯಾಕೇಜಿಂಗ್ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಆಧಾರದ ಮೇಲೆ ದಿನನಿತ್ಯದ ಬೆಲೆಗಳು ಮತ್ತು ಮಾರುಕಟ್ಟೆಯ ಬೇಡಿಕೆಗಳನ್ನು ಕಂಪ್ಯೂಟರನ್ನು ನೋಡಿ ಮಾಡುತ್ತಿದ್ದರು. ಒಂದು ಹಳ್ಳಿಯಲ್ಲಿ ಕೇವಲ ಟೊಮ್ಯಾಟೋ, ಇನ್ನೊಂದು ಹಳ್ಳಿಯಲ್ಲಿ ಸಣ್ಣ ಸೌತೇಕಾಯಿ, ಇಂಥಹ ಬೆಳೆಗಳನ್ನೇ ಬೆಳೆಯುತ್ತಿದ್ದರು. ಈ ಸಣ್ಣ ಸೌತೇಕಾಯಿ ನಮ್ಮ ಧಾರವಾಡದ ಕಡೆ ಹೆಚ್ಚೆಚ್ಚು ಉತ್ಪಾದನೆ ಆಗುತ್ತದೆ ಆದರೆ ನಮ್ಮ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸಾಧಾರಣ ಸೌತೇಕಾಯಿಗಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂಬುದು ತಿಳಿದಿಲ್ಲ. ನಮ್ಮ ರೈತರೂ ಸಹ ತಮ್ಮದೇ ಆದ ಸಂಘಟನೆಯನ್ನು ಗಟ್ಟಿಗೊಳಿಸಿ ರೈತ ಸಂಪರ್ಕ ಕೇಂದ್ರಗಳನ್ನು ಬಳಸಿ, ತಂತ್ರಜ್ಞಾನದ ಮೂಲಕ ಉಪಯೋಗ ಪಡೆದು, ಒಗ್ಗಟ್ಟಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ತಮ್ಮ ಉತ್ಪಾದನೆಯ ಬೆಲೆಯನ್ನು ನಿರ್ಧರಿಸಿದರೆ, ಒಬ್ಬ ಕೃಷಿಕನೂ ಸಹ ಬಡತನದ ರೇಖೆಗಿಂತ ಕೆಳಗೆ ಉಳಿಯುವುದಿಲ್ಲ ಎನ್ನುವುದು ನನ್ನ ಭಾವನೆ ಹಾಗೂ ಕನಸು.
2001-2002 ನೇ ಇಸವಿಯಲ್ಲಿ ಭಾರತ ಸರ್ಕಾರದಲ್ಲಿ ಹೊಸದಾಗಿ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದರಲ್ಲಿ ಮೊದಲ ಬಾರಿಗೆ ಶ್ರೀಪಾದ ನಾಯಕ್ ಅವರು ಕೃಷಿ ಇಲಾಖೆಯ ರಾಜ್ಯ ಮಂತ್ರಿಯಾಗಿ ಆಧಿಕಾರ ಸ್ವೀಕರಿಸಿದ್ದರು. ನಾನು ಆಗ ಕೃಷಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೆ. ನನ್ನ ಕಾರ್ಯದರ್ಶಿಯವರು ನನ್ನನ್ನು ಕರೆದು ಮಾನ್ಯ ಮಂತ್ರಿಯವರು ತಮ್ಮದೇ ಸಿಬ್ಬಂದಿ ವರ್ಗವನ್ನು ನೇಮಕ ಮಾಡಿಕೊಳ್ಳುವವರೆಗೆ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಹೇಳಿದರು. ನನ್ನ ಅಧಿಕಾರಾವಧಿಯಲ್ಲಿ ಇದೇ ಮೊದಲ ಬಾರಿಗೆ ನಾನು ಒಬ್ಬ ರಾಜಕಾರಣಿಯ ಆಪ್ತ ವಲಯದಲ್ಲಿ ಕೆಲಸ ಮಾಡಿದುದಾಗಿತ್ತು. ನನ್ನ ಒಂದು ವರ್ಷದ ಕೃಷಿ ಇಲಾಖೆಯ ಅನುಭವದ ಸಾರಾಂಶವನ್ನು ಮಂತ್ರಿಯವರಿಗೆ ತಿಳಿಸಿಕೊಟ್ಟೆ. ಮಾನ್ಯ ಮಂತ್ರಿಯವರಿಗೆ ಕೃಷಿ ಇಲಾಖೆಯ ಬಗ್ಗೆ ಮತ್ತು ಭಾರತ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಗಳ ಬಗ್ಗೆ ಇದ್ದ ಆಸಕ್ತಿಯನ್ನು ಗಮನಿಸಿ ಕೃಷಿ ಇಲಾಖೆಗೆ ಸಂಬಂಧ ಪಟ್ಟಂತೆ ವಿವಿಧ ಸಭೆಗಳ್ನು ಏರ್ಪಡಿಸಿದೆ.
ಕೃಷಿ ಇಲಾಖೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಮಾಹಿತಿಗಳನ್ನು ಸಂಗ್ರಹಿಸುತ್ತಾ, ಅವುಗಳ ಮುಖಾಂತರ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚುಗೊಳಿಸುತ್ತಾ ಹೋದೆ. ನನ್ನ ತಿಳುವಳಿಕೆಗೆ ಸರಿ ಅನಿಸುದುದನ್ನು ನಾನು ಮುಕ್ತವಾಗಿ ಮಾನ್ಯ ಮಂತ್ರಿಗಳೊಂದಿಗೆ ದಿನ ನಿತ್ಯ ಚರ್ಚಿಸುತ್ತಾ ಹೋದೆ. ರಾಜಕಾರಣಿಗಳ ಲೋಕಜ್ಞಾನ ಮತ್ತು ವ್ಯವಹಾರಜ್ಞಾನವನ್ನು ಕಂಡು ಅಚ್ಚರಿಗೊಂಡೆ. ಆಗ ಅನಿಸಿತು. ರಾಜಕಾರಣಿಗಳ ಲೋಕಜ್ಞಾನದ ಜೊತೆಗೆ ಇಲಾಖೆಯ ತಂತ್ರಜ್ಞರ ಪರಿಣಿತಿಯನ್ನು ಮಿಳಿತಗೊಳಿಸಿದರೆ ಉತ್ತಮ ಕಾರ್ಯ ಸಾಧನೆ ಸಾಧ್ಯ ಎಂದು. ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಅತ್ಯಂತ ಮುಗ್ಧವಾಗಿ ಮಾನ್ಯ ಮಂತ್ರಿಗಳು ಕೇಳುತ್ತಿದ್ದರು. ಹಲವಾರು ಬಾರಿ ಅವುಗಳಿಂದ ಉತ್ತಮ ಪರಿಣಾಮ ಉಂಟಾಗುತ್ತಿತ್ತು. ಉದಾಹರಣೆಗೆ, ಅಧಿಕಾರದಲ್ಲಿದ್ದ ನೇತಾರರು ಉದ್ದೇಶಿತ ಕಾರ್ಯಗಳ ಬಗ್ಗೆ ಘೋಷ ವಾಕ್ಯಗಳನ್ನು ಮಾಡುತ್ತಿದ್ದರು. ಅವುಗಳು ಸಾರ್ವಜನಿಕರಿಗೆ ಕೇಳಲು ಅತ್ಯಂತ ಪ್ರಿಯವಾಗಿರುತ್ತಿದ್ದವು. ಆದರೆ ಅವುಗಳು ಇಲಾಖೆಯ ಮಟ್ಟದಲ್ಲಿ ಕಾರ್ಯರೂಪಕ್ಕೆ ಇಳಿದಾಗ ಎಲ್ಲ ಯೋಜನೆಗಳೂ ಇಲಾಖೆಗೆ ಸಿಗುವ ಅನುದಾನ(ಬಜೆಟ್)ನ ಮೇಲೆ ಅವಲಂಬಿಸಿರುತ್ತಿತ್ತು. ಅವುಗಳ ಆಧಾರದ ಮೇಲೆ ಯಾವ ಮಟ್ಟದಲ್ಲಿ ಕೆಲಸ ನಡೆಯಬೇಕು ಎಂಬುದು ಸರ್ಕಾರದ ಇಲಾಖೆಗಳಲ್ಲಿ ನಿರ್ಧಾರವಾಗುತ್ತಿತ್ತು. ಹಾಗಾಗಿ ಅಂದುಕೊಂಡದ್ದು ಒಂದು, ನಡೆಯುವುದು ಮತ್ತೊಂದು ಎಂಬಂತೆ ಆಗುತ್ತಿತ್ತು. ಇವುಗಳ ಬಗ್ಗೆ ಮಾನ್ಯ ಮಂತ್ರಿಗಳು ಪ್ರಶ್ನೆ ಮಾಡುತ್ತಿದ್ದರು.
ಮತ್ತೊಂದು ಉದಾಹರಣೆ ಎಂದರೆ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ(ನ್ಯಾಷನಲ್ ಕೋ-ಆಪರೇಟಿವ್ ಡೆವಲಪ್‌ಮೆಂಟ್ ಕಾರ್ಪೋರೇಷನ್) ನವರು ಹಲವಾರು ರಾಜ್ಯಗಳಲ್ಲಿ ಕೆಲಸ ಮಾಡುವ ಸಹಕಾರ ಸಂಸ್ಥೆಯ ಗುಂಪುಗಳಿಗೆ ಸಾಲವನ್ನು ಕೊಡುತ್ತಿದ್ದರು. ಯೋಜನೆಗಳು ತಯಾರಾಗುತ್ತಿದ್ದವು. ಅದರ ಮೇರೆಗೆ ಸಾಲಗಳನ್ನೂ ಕೊಡಲಾಗುತ್ತಿತ್ತು. ಆದರೆ ಒಂದು ದಿನ ಮಾನ್ಯ ಮಂತ್ರಿಗಳು ಒಂದು ಪ್ರಶ್ನೆ ಕೇಳಿದರು. ನಿಗಮದವರು ಕೊಡುವ ಸಾಲಗಳು ಸರಿಯಾಗಿ ಉಪಯೋಗವಾಗುತ್ತಿದೆಯೇ ಇಲ್ಲವೇ ಎಂದು, ಮೌಲ್ಯಮಾಪನ ಮಾಡುತ್ತಿದ್ದೇವೆಯೇ ಎಂದು. ನಿಜವಾಗಿ ಆ ಕೆಲಸ ಆಗುತ್ತಿರಲಿಲ್ಲ. ಕೇವಲ ಮಾಹಿತಿ ಸಂಗ್ರಹ, ಪರಿಷ್ಕರಣೆ, ಮುಂತಾದವುಗಳು ನಡೆಯುತ್ತಿದ್ದುವೇ ಹೊರತು ಕೆಲಸಗಳ ಗುಣಮಟ್ಟ ಅಳೆಯುವಿಕೆ, ಯೋಜನೆಗಳಿಂದ ಆಗುವ ಪ್ರಯೋಜನ ಇವುಗಳನ್ನು ಗಮನಿಸುತ್ತಲೇ ಇರಲಿಲ್ಲ. ಗ್ರಾಮೀಣ ಮಟ್ಟದಿಂದ ಕೃಷಿಯ ಹಲವಾರು ವಿಷಯಗಳ ಬಗ್ಗೆ ಮುನ್ನೆಚರಿಕೆಯ ಸೂಚನೆಗಳು ಸರ್ಕಾರದ ಇಲಾಖೆಗೆ ಘಟನೆ ಅಥವಾ ವಿದ್ಯಮಾನ ನಡೆದ ನಂತರ ತಲುಪುತ್ತಿತ್ತು. ಆದರೆ ಮಾನ್ಯ ಮಂತ್ರಿಗಳ ಉತ್ಸುಕತೆಯಿಂದಾಗಿ ಕೃಷಿ ಇಲಾಖೆಯಲ್ಲಿ ಸಾಮಾನ್ಯ ಮನುಷ್ಯನ ದೃಷ್ಟಿಕೋನದ ಒಂದು ಹೊಸ ಪರಿಚಯ ಉಂಟಾಯಿತು. ರಾಜ್ಯದ ಮಂತ್ರಿಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರವಿರುವುದಿಲ್ಲ. ಎಲ್ಲವೂ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳ ಬಳಿ ಇರುತ್ತದೆ. ಆದರೆ ಮಾನ್ಯ ಮಂತ್ರಿಗಳು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರತಿನಿತ್ಯವೂ ಹೊಸತನ್ನು ಕಲಿತುಕೊಳ್ಳುವ ಉತ್ಸಾಹವನ್ನು ಬೆಳೆಸಿಕೊಳ್ಳುತ್ತಾ ಹೋದರು. ತಮಗೆ ದೊರಕಿರುವ ಅವಕಾಶದಿಂದಾಗಿ ತಾವು ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಬಹುದು ಎಂದುಕೊಂಡರು. ಬಹಳ ನಮ್ರತೆ, ವಿನಯವನ್ನೊಳಗೊಂಡ ಜನಪರ ವ್ಯಕ್ತಿಯಾಗಿದ್ದರು. ಅಧಿಕಾರದ ಮದ ಎಂದೂ ಅವರ ತಲೆಗೆ ಹೋಗಿರಲಿಲ್ಲ. ಅದೇ ರೀತಿ ನಿತೀಶ್ ಕುಮಾರ್ ಅವರು ಆಗಿನ ಕೇಂದ್ರ ಕೃಷಿ ಸಚಿವರಾಗಿದ್ದರು. ಅವರು ಅತ್ಯಂತ ಪಾಂಡಿತ್ಯವುಳ್ಳ, ಕ್ರಿಯಾಶೀಲ, ಕರ್ತವ್ಯಪರ ದಾರ್ಶನಿಕ. ಅವರು ರಾಜ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಹೊಸ ವಿಚಾರಗಳನ್ನು ಎಲ್ಲರೊಂದಿಗೂ ಚರ್ಚಿಸಿ, ಅವುಗಳ ಯಶಸ್ವಿ ಕಾರ್ಯಾಚರಣೆಗೆ ಎಲ್ಲರನ್ನೂ ತೊಡಗಿಸಿ, ಜೊತೆಗೊಯ್ಯುತ್ತಿದ್ದರು. ಹಾಗಾಗಿ ಅವರ ಎಲ್ಲಾ ಕಾರ್ಯಗಳೂ ಜನಪರವಾಗಿವೆ, ಯಾವ ಕಾರ್ಯಗಳೂ ಅವರು ತಮ್ಮ ಸ್ವಂತ ಬೆಳವಣಿಗೆಯ ದೃಷ್ಟಿಯಿಂದ ಮಾಡುತ್ತಿಲ್ಲ ಎಂಬ ಭಾವನೆ ಎಲ್ಲಾ ಅಧಿಕಾರಿಗಳಿಗೂ ಇರುತ್ತಿತ್ತು. ನಾನು ನನ್ನ ಮಾವನವರೊಂದಿಗೆ ಆಡಳಿತದ ಕಾರ್ಯವಿಧಾನ ಎನ್ನುವ ವಿಷಯದ ಬಗ್ಗೆ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದ್ದೆ. ಆ ಪುಸ್ತಕಕ್ಕೆ ನಿತೀಶ್ ಕುಮಾರ್ ಅವರು ಮುನ್ನುಡಿಯನ್ನು ಬರೆದಿದ್ದರು.
ಮಾನ್ಯ ಕೃಷಿ ರಾಜ್ಯ ಮಂತ್ರಿಗಳ ಬಗ್ಗೆ ಒಂದು ಸ್ವಾರಸ್ಯಕರ ಸಂಗತಿ ಇಲ್ಲಿ ಹೇಳಬಯಸುತ್ತೇನೆ. ಅವರು ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಾಗಲೆಲ್ಲಾ ಅಲ್ಲಿ ಮಳೆಯಾಗುತ್ತಿತ್ತು. ಹಾಗಾಗಿ ಪ್ರತಿ ಬರ ಪೀಡಿತ ಪ್ರದೇಶಗಳಲ್ಲೂ ಮಾನ್ಯ ಮಂತ್ರಿಗಳು ಅಲ್ಲಿಗೆ ಬರಬೇಕೆಂಬ ಬೇಡಿಕೆ ಇರುತ್ತಿತ್ತು. ಒಂದು ಹಾಸ್ಯದ ಮಾತೂ ಕೂಡ ಎಲ್ಲರಿಂದ ಕೇಳಿ ಬರುತ್ತಿತ್ತು. ನಮಗೆ ಮಳೆ ಬರಿಸಿಕೊಡಿ, ದುಡ್ಡು ಬೇಡ ಎಂದು. ಸಾಮಾನ್ಯವಾಗಿ ಅವರು ಹೋದಲ್ಲೆಲ್ಲಾ ನಾನು ಅವರ ಜೊತೆಗೆ ಹೋಗುತ್ತಿದ್ದೆ. ಹಾಗಾಗಿ ಬೇರೆ ಬೇರೆ ರಾಜ್ಯದ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶ ನನಗೆ ದೊರಕುತ್ತಿತ್ತು.
(ಮುಂದುವರೆಯುವುದು)
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com