ಇಂಥ ಮರೆವು ಎಂಥ ಆತಂಕದ ಮುನ್ನುಡಿ?
ಭಾರತವು ಒಂದು ವಿಶಿಷ್ಟವಾದ ಸಂಸ್ಕೃತಿ, ಪರಂಪರೆ, ಅಪಾರವಾದ ಸಂಪತ್ತು, ನೂರಾರು ಜಾತಿ, ಮತಗಳು ಮತ್ತು ಸುಂದರವಾದ ಪ್ರಕೃತಿ ರಾಶಿಯನ್ನು ಹೊಂದಿದ ದೇಶ. ಹೀಗಿರುವಾಗ ಉಳಿದ ನೆರೆ ದೇಶಗಳಿಗೆ ನಮ್ಮ ಸುಂದರ ಭಾರತವನ್ನು ನೋಡಿದಾಗ ಕಣ್ಣು ಕುಕ್ಕುವುದು ಸಹಜ.
ಭಾರತವು ಸುಮಾರು 15,200 ಕಿ.ಮೀ. ಭೂ ಗಡಿ ಪ್ರದೇಶ ಮತ್ತು 7,516.5 ಕಿ.ಮೀ. ಜಲಗಡಿ ಪ್ರದೇಶವನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು. ಚೀನಾ, ಪಾಕಿಸ್ತಾನ, ಭೂತಾನ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್.. ಹೀಗೆ ಅನೇಕ ರಾಷ್ಟ್ರಗಳೊಂದಿಗೆ ಗಡಿ ಸಂಬಂಧವಿದೆ ಎಂಬುದು ಸರ್ವವಿಧಿತ. ನಾವು ಶಾಂತಿಪ್ರಿಯರಾಗಿರುವುದನ್ನು ಚೀನಾ ಮತ್ತು ಪಾಕಿಸ್ತಾನಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ದೇಶದ ರಕ್ಷಣಾ ಪಡೆಗಳ ಪಾತ್ರ ಮುಖ್ಯವಾಗಿದೆ. ಇಡೀ ಜಗತ್ತಿನಲ್ಲಿ ಅತ್ಯಂತ ಸಾಮರ್ಥ್ಯ, ಶಿಸ್ತು ಜೊತೆಗೆ ವೀರ ಯೋಧರನ್ನು ಹೊಂದಿದ ನಮ್ಮ ಸೇನಾ ಪಡೆ ಬೇರೆ ಬೇರೆ ಗಡಿ ಯುದ್ಧಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಬಂದಿದೆ. ಪ್ರಪಂಚದ 2 ಮಹಾ ಯುದ್ಧಗಳಿಂದ ಹಿಡಿದು ಕಳೆದ ಕಾರ್ಗಿಲ್ ಯುದ್ಧದವರೆಗೂ ನಮ್ಮ ಸೇನಾ ಪಡೆಗಳು ತಾಯಿನಾಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬುದನ್ನು ತೋರಿಸಿಕೊಟ್ಟಿವೆ. ಇದಲ್ಲದೇ ಪ್ರಾದೇಶಿಕ ಸೇನೆ, ಗಡಿ ಭದ್ರತಾದಳ, ಕರಾವಳಿ ಪಹರೆ, ಸಹಾಯಕ ವಾಯು ಸೇನೆ, ಎನ್.ಸಿ.ಸಿ, ಗೃಹ ರಕ್ಷಕ ದಳ ಎಂದು ಸೇನೆಗೆ ಪೂರಕವಾದ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ ಕೂಡಾ ನಮ್ಮಲ್ಲಿ ಇದೆ ಎಂಬುದನ್ನು ಮರೆಯುವಂತಿಲ್ಲ.
ನಮ್ಮ ಸೇನಾಪಡೆ ಕೇವಲ ಯುದ್ಧದ ಸಮಯದಲ್ಲಿ ಅಲ್ಲದೇ ಬೇರೆ ಬೇರೆ ಸಂದರ್ಭಗಳಲ್ಲೂ ದೇಶಕ್ಕಾಗಿ ದುಡಿಯುತ್ತಿದೆ. ಪ್ರವಾಹ, ಬರಗಾಲ, ಭೂಕಂಪ, ಭೂ ಕುಸಿತ, ಬಿರುಗಾಳಿ ಮುಂತಾದ ಅವಘಡಗಳು ಸಂಭವಿಸಿದಾಗಲೂ ಅಪಾಯದಲ್ಲಿರುವವರಿಗೆ ನೆರವಿನ ಹಸ್ತ ನೀಡುತ್ತಿರುವುದು ಉಲ್ಲೇಖಾರ್ಹ.
ಇಂತಹ ವಿಶಿಷ್ಟವಾದ ಸೇನೆಯನ್ನು ಹೊಂದಿದ ನಮ್ಮ ಭಾರತ ಗ್ರೇಟ್ ಅಲ್ಲವೇ? ನಿಜ, ಸೇನೆಯಲ್ಲಿ ಪ್ರತಿಯೊಬ್ಬ ಸೈನಿಕನ ಪಾತ್ರ ಮಹತ್ವದ್ದು. ನೆನಪಿಡಿ, ಒಬ್ಬ ಸೈನಿಕ ತನ್ನ ತಾಯನಾಡಿನ ರಕ್ಷಣೆಗಾಗಿ ಸ್ವಂತದವರಾದ ಮನೆಯವರನ್ನು ಅಂದರೆ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ವರ್ಷಗಟ್ಟಲೆ ದುಸ್ತರ ಬದುಕಿನೊಂದಿಗೆ ಗಡಿ ಕಾಯುತ್ತಾನೆ. ಯುದ್ಧಗಳಾದಾಗ ವೈರಿಗಳೊಂದಿಗೆ ಧೈರ್ಯದಿಂದ ಹೋರಾಡುತ್ತಾನೆ. ಕೆಲವೊಂದು ಸಂದರ್ಭಗಳಲ್ಲಿ ಆತ ವೀರ ಮರಣವನ್ನೂ ಹೊಂದಬಹುದು. ಆದರೆ ನಮಗಾಗಿ ಇಷ್ಟೆಲ್ಲಾ ತ್ಯಾಗ ಮಾಡುವ ಸೈನಿಕನಿಗೆ ನಾವು ಕನಿಷ್ಠ ಗೌರವವನ್ನಾದರೂ ಸಲ್ಲಿಸುತ್ತಿದ್ದೇವೆಯೋ.. ಎಂಬುದನ್ನು ಕೇಳಿಕೊಳ್ಳಬೇಕಾಗಿದೆ.
ಹೀಗೆ ಹೇಳುವುದಕ್ಕೆ ಕಾರಣ ಶ್ರೀನಗರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಹುತಾತ್ಮರಾದ ಐವರು ಯೋಧರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಮರೆತು ಹೋದದ್ದು.
ರಾಷ್ಟ್ರವನ್ನಾಳುವ ಪ್ರಧಾನಿಯನ್ನೂ ಸೇರಿದಂತೆ ಆಡಳಿತ ಪಕ್ಷ-ವಿಪಕ್ಷಕ್ಕೆ ಈ ಸಂಗತಿ ಮರೆತೇ ಹೋಗಿತ್ತು. ಇದನ್ನು ಸ್ವತಂತ್ರ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಎಚ್ಚರಿಸಬೇಕಾಯಿತು. ನಂತರವಷ್ಟೇ ನಮ್ಮ ನಾಯಕರಿಗೆ ಈ ಬಗ್ಗೆ ಜ್ಞಾನೋದಯವಾಯಿತು. ಇದು ನಿಜಕ್ಕೂ ದುರಂತವಲ್ಲವೇ? ಈ ನಡುವೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರಂಭದಲ್ಲಿ ಮೃತ ಯೋಧರ ಅಂತಿಮ ದರ್ಶನಕ್ಕೂ ತೆರಳುವ ಸೌಜನ್ಯ ತೋರದಿರುವುದು ದುರಹಂಕಾರದ ಪರಮಾವಧಿ. ಕೊನೆಗೆ ಯೋಧರ ಪ್ರತಿಭಟನೆಗೆ ಮಣಿದು ತೆರಳಿದ್ದು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸಂಗತಿ.
ಸತ್ತಮೇಲಾದರೂ ಗೌರವಿಸುವ ಪ್ರಜ್ಞೆ ಯಾಕಿಲ್ಲ? ಇಂದು ರಾಜ್ಯಸಭೆ-ಲೋಕ ಸಭೆಗಳಲ್ಲಿ ಕುಳಿತು ಕಾರುಬಾರು ಮಾಡಲು ಸಾಧ್ಯವಾಗಿದ್ದು ಅದು ಯೋಧರಿಂದ ಅಂತ ಯಾಕೆ ಮರೆತಿದ್ದಾರೆ? ರಾಜೀವ್‌ರಂತೆ ಯೋಚಿಸುವವರ ಸಂತತಿ ಹೆಚ್ಚಾಗಿ ಯೋಧರನ್ನು ಗೌರವಿಸುವ ದಿನಗಳು ಹತ್ತಿರ ಬರಲಿ.
-ಉದಯ ವಿಟ್ಲ