ಹೊಸ ಮೌಲ್ಯಮಾಪನದ ಹೊಸ್ತಿಲಲ್ಲಿ ತಳಮಳಗಳು
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಓರೆ-ಕೋರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸದಾ ಬದಲಾವಣೆಗೆ ಮೈಚಾಚಿಕೊಂಡಿರುವ ಶಿಕ್ಷಣ ಇಲಾಖೆಯು, ಇತ್ತೀಚೆಗೆ ಶಾಲೆಗಳಲ್ಲಿ ಸಿಸಿಇ (ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ) ಎಂಬ ವಿಭಿನ್ನ ಮೌಲ್ಯಮಾಪನ ಕ್ರಮವನ್ನು ಅಳವಡಿಸಿ, ಈ ಬಗ್ಗೆ ಶಿಕ್ಷಕರಿಗೆ ತರಬೇತಿ (ಭೀತಿ) ಯನ್ನು ನೀಡಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯವೇ ಇಲ್ಲ. ಇನ್ನು 'ಮಾಪನ' ಹೇಗೆ? ಎಂದು ಮೂಗು ಮುರಿದವರೇ ಹೆಚ್ಚು. ಆದರೆ ಸಿ.ಸಿ.ಇ. ಎಂದಾಕ್ಷಣ ಕಸಿವಿಸಿಗೊಳ್ಳುವ ಶಿಕ್ಷಕರಲ್ಲಿ ಕೆಲವು ಕಡೆ ಅಪಸ್ವರವೂ ಕೇಳಿಬರುತ್ತಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.
ಎನ್ಸಿಎಫ್-2005 (ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು) ಕೂಡ 'ರಚನಾವಾದಿ ತತ್ವ'ವನ್ನು ಪ್ರತಿಪಾದಿಸಿತು. ಮಗು ಎಷ್ಟು ಕಲಿತಿದೆ ಎನ್ನುವುದಕ್ಕಿಂತ ಹೇಗೆ ಕಲಿಯುತ್ತಿದೆ ಎನ್ನುವುದೇ ಮುಖ್ಯವೆಂದು ತಿಳಿಸುತ್ತದೆ. ಶಿಕ್ಷಣವು ನಾವು ಧರಿಸುವ ಬಟ್ಟೆಯಂತಾಗದೆ ಅದು ರಕ್ತಗತವಾಗಬೇಕು. ಶಿಕ್ಷಣವು ಮಗುವನ್ನು ಕೆರಳಿಸಬಾರದು, ನರಳಿಸಬಾರದು, ಬದಲಾಗಿ ಅರಳಿಸುವಂತಾಗಬೇಕು. ಹೂವನ್ನು ನಾವು ಅರಳಿಸಲು ಸಾಧ್ಯವಿಲ್ಲ. ಆದರೆ ಹೂವಿನ ಗಿಡಕ್ಕೆ ನೀರು, ಗೊಬ್ಬರ ನೀಡಿ ಪೋಷಿಸುವಂತೆ ವಿದ್ಯಾರ್ಥಿಗಳ ಸಹಜಕಲಿಕೆಗೆ ಅನುಕೂಲಿಸಬೇಕೆಂದು ತಿಳಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ 'ಶಿಕ್ಷಕ ಒಬ್ಬ ಸುಗಮಕಾರ (ಅನುಕೂಲಿಸುವವ)' ಎಂಬ ಮಾತು ಇದಕ್ಕೆ ಪುಷ್ಠಿ ನೀಡುತ್ತದೆ. ಹಾಗೆಯೇ ಮಗುವಿನ ವಿಭಿನ್ನ ಆಸಕ್ತಿ, ಅಭಿರುಚಿ, ಮನೋಧರ್ಮಗಳು ಹಾಗೂ ಕಲಿಕೆಯ ಪ್ರವೃತ್ತಿಗಳನ್ನು (ವ್ಯಾಪಕತೆ) ನಿರಂತರವಾಗಿ ಮೌಲ್ಯಮಾಪನ ಮಾಡಲು ಎನ್ಸಿಎಫ್-2005 ಒತ್ತಿ ಹೇಳುತ್ತದೆ.
ಐನ್ಸ್ಟೀನ್ ರವರ ಪ್ರಕಾರ: 'ಮೀನು ಮರ ಹತ್ತಲು ಸಾಧ್ಯವಿಲ್ಲ. ಹಾಗಂತ ಮೀನಿಗೆ ಕೌಶಲ್ಯವಿಲ್ಲವೆಂದರ್ಥವೇ? ಪ್ರತಿಯೊಂದು ಮಗುವು ವಿಭಿನ್ನ ಹಾಗೂ ಅದ್ವಿತೀಯ. ಮಗುವಿನ ಆಸಕ್ತಿ ಹಾಗೂ ಅಭಿರುಚಿಯ ಕ್ಷೇತ್ರವನ್ನು ಗುರುತಿಸಿ ಪೋಷಿಸಬೇಕಾಗುತ್ತದೆ' ಎಂದು ಹೇಳುತ್ತಾರೆ. ಇದೆಲ್ಲವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವ ನಿಟ್ಟಿನಲ್ಲಿ ಆರ್ಟಿಇ-2009 (ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅಧಿನಿಯಮ- 2009) ಜಾರಿಗೊಂಡಿದೆ.
ಆರ್.ಟಿ.ಇ-2009ರ ಸೆಕ್ಷನ್ 29 (ಹೆಚ್) ಮತ್ತು ಸೆಕ್ಷನ್ 30 ಸಹ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಬಗ್ಗೆ ಒತ್ತಿ ಹೇಳುತ್ತದೆ. ಇದರ ಫಲವೇ ಇಂದು ಶಾಲೆಗಳಲ್ಲಿ ಜರೂರಾಗಿ ಅಳವಡಿಕೆ ಆಗಿರುವ ಸಿ.ಸಿ.ಇ ಎಂದು ಹೇಳಬಹುದು. ದಿಢೀರನೆ ಬಂದೆರಗಿದ ಹೊಸ ಪದ್ಧತಿಯು ಅನುಷ್ಠಾನಗೊಳ್ಳಲು ಕೆಲವು ಎಡರು- ತೊಡರುಗಳಿವೆ. ತರಬೇತಿಯು ದೊರೆತದ್ದೇ ನಿಧಾನವಾಗಿ. ಜೊತೆಗೆ ಹಾಲಿ ಒತ್ತಡಗಳಲ್ಲಿ ಬಳಲುತ್ತಿರುವ ಶಿಕ್ಷಕರಿಗೆ ಸಿ.ಸಿ.ಇ. ಎಂಬುದು ದೈಹಿಕವಾಗಿ (ಬರವಣಿಗೆ) ಹಾಗೂ ಮಾನಸಿಕವಾಗಿ (ತಂತ್ರ ಮತ್ತು ಸಾಧನಗಳು) ಹೆಚ್ಚು ಹೊರೆಯಾಗುತ್ತಿರುವುದು ಅಷ್ಟೇ ಸತ್ಯ. ಬಹಳಷ್ಟು ಕಡೆ ವಿದ್ಯಾರ್ಥಿಗಳ ಕೊರತೆ ಹಾಗೂ ಶಿಕ್ಷಕರ ವರ್ಗಾವಣೆ ಕಾರಣಗಳಿಂದಾಗಿ, ಏಕೋಪಾಧ್ಯಾಯ ಇಲ್ಲವೇ ಇಬ್ಬರೇ ಶಿಕ್ಷಕರು ಕೆಲಸ ನಿರ್ವಹಿಸುವ ಸ್ಥಿತಿ ಇದೆ. ಈ ನಡುವೆ ಬಿಸಿಯೂಟ ನಿರ್ವಹಣೆ ಎಸ್ಡಿಎಂಸಿ ನಿರ್ವಹಣೆ, ಶಾಲಾ ಆಡಳಿತ, ಮಾಹಿತಿಗಳ ನೀಡುವಿಕೆ, ಶಿಕ್ಷಕರ ಸಭೆಗಳು, ತರಬೇತಿಗಳು, ಬೋಧನೆ, ಬೋಧನೆಗೆ ತಯಾರಿ, ಕಲಿಕೋಪಕರಣಗಳ ತಯಾರಿಕೆ.... ಹೀಗೆ ಕಾರ್ಯ ಒತ್ತಡ ಹೆಚ್ಚುತ್ತಲೇ ಇದೆ. ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇಷ್ಟೆಲ್ಲಾ ಒತ್ತಡಗಳನ್ನು ನಿಭಾಯಿಸುವುದು ಸ್ವಲ್ಪ ಇರುಸು- ಮುರುಸನ್ನು ಉಂಟುಮಾಡಿದೆ.
ಯಾವುದೇ ಹೊಸ ಪದ್ಧತಿಗೆ ಒಗ್ಗಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ ಒಂದರಿಂದ ಐದನೇ ತರಗತಿವರೆಗೆ ಒಬ್ಬರು- ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುವುದೂ ಅಸಹನೆಗೆ ಕಾರಣವಾಗಬಹುದು. ಪ್ರತಿ ಶಾಲೆಗೆ ಒಬ್ಬರು ಗುಮಾಸ್ತರನ್ನು ನೀಡಿದರೆ ಬರವಣಿಗೆ ಹಾಗೂ ದಾಖಲೆ ನಿರ್ವಹಣೆ ಸುಗಮವಾಗಿ ಸಿ.ಸಿ.ಇ. ಎಂಬ ಹೊಸ ಯೋಜನೆಗೂ ಪ್ರತಿರೋಧ ನಿಂತುಹೋಗುತ್ತದೆ.
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ