ಅಂಕಣಗಳು

ಬಲಿ ಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ

23 ಮಾರ್ಚ್, ಸ್ವಾತಂತ್ರ್ಯದ ಹೋರಾಟದ ಬಲಿಪರಂಪರೆಯನ್ನು ನೆನಪಿಸುವ ಅನೇಕ ದಿನಗಳಲ್ಲಿ ಒಂದು. ಇಂದಿಗೆ ಸರಿಯಾಗಿ 82 ವರ್ಷಗಳ ಹಿಂದೆ ಅಂದರೆ ಮಾರ್ಚ್ 1931ರಂದು ಲಾಹೋರಿನಲ್ಲಿ ಭಾರತದ ಕ್ರಾಂತಿವೀರರಾದ ಭಗತ್‌ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಲಾಯ್ತು. ಅಂದಿನ ರಣಹೇಡಿ ಬ್ರಿಟಿಷ್ ಸರ್ಕಾರ, ರಾತ್ರೋರಾತ್ರಿ ಸ್ವಾತಂತ್ರ್ಯ ವೀರರನ್ನು ಸುಟ್ಟು ಅವರ ಬೂದಿಯನ್ನು ಸಟ್ಲೇಜ್ ನದಿಯಲ್ಲಿ ಎಸೆದರು. ಅದು ಅವರ ಅಂತ್ಯವೆಂದೇ ಬ್ರಿಟಿಷರು ಭಾವಿಸಿದರು. ಆದರೆ ನಿಜವಾಗಿಯೂ ಅದು ಅವರ ಅಂತ್ಯವಲ್ಲ. ರಾಷ್ಟ್ರಕವಿ, ರಸಋಷಿ ಕುವೆಂಪು ಅವರು 1984ರಲ್ಲಿ 'ಬಲಿದಾನ' ಎಂಬ ಅವಿಸ್ಮರಣೀಯವಾದ ನಾಟಕವನ್ನು ರಚಿಸಿದ್ದಾರೆ. ಕುವೆಂಪು ಅವರ ಈ ನಾಟಕ ಕನ್ನಡಿಗರ ಮನಸ್ಸಿನಲ್ಲಿ ಎಷ್ಟು ವ್ಯಾಪಕವಾಗಿ ಮೂಡಬೇಕಾಗಿತ್ತೋ ಅಷ್ಟು ಮೂಡಿಲ್ಲವೆಂಬುದು ವಿಷಾದನೀಯ ಸಂಗತಿ. ಕುವೆಂಪು ಅವರ ಈ ಕೃತಿಯನ್ನು ಕುರಿತು ವಿಮರ್ಶೆ ವಲಯದಲ್ಲಾಗಲೀ, ರಂಗಭೂಮಿಯ ರಂಗಕರ್ಮಿಗಳ ವಲಯದಲ್ಲಾಗಲೀ ಗಂಭೀರ ಸ್ವೀಕೃತಿ, ಚರ್ಚೆ, ಸಂವಹನ ಪ್ರಚಾರಗಳು ಕಂಡು ಬರುವುದಿಲ್ಲ. ಇದು ಕುವೆಂಪು ಅವರಿಗಾದ ನಷ್ಟವಲ್ಲ ಕನ್ನಡಿಗರಿಗಾದ ನಷ್ಟ. ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿಯಾದವರ ಚರಿತ್ರೆಯನ್ನು ಆ ಬಲಿದಾನದ ಹಿಂದಿನ ಪ್ರಖರ ರಾಷ್ಟ್ರೀಯತೆಯನ್ನು ಕಳೆದುಕೊಂಡಂತಾದವರು ನಾವು. ಅದು ಕಳೆಯದಂತೆ ಉಳಿಸಿ ಹೋದವರು ಕುವೆಂಪು. "ಬಲಿದಾನ" ನಾಟಕ ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಳ್ಳಬೇಕಾದ ಅಗತ್ಯವಿದೆ.
"ವೇದಗಳ ಹೆತ್ತವಳ್! ಯೋಗಿಗಳ ಪಡೆದವಳ್!
ಲೋಕಕ್ಕೆ ವೀರರನು ಕೊಟ್ಟವಳ್!
ಮಾನವಗೆ ಬುದ್ಧಿನೀಡಿದ ತಾಯಿ,
ನಾನ್ ಭಾರತಾಂಬೆ!"
ಎಂದು ಪರಿಚಯಿಸಿಕೊಳ್ಳುವ ತಾಯಿ ಭಾರತಿಯು ಮಗ 'ಭರತಸುತ'ನಿಗೆ
"ಕಂಪಿಸದೆ ಧರಿಸಬಲ್ಲೆಯ ಸೆರೆಯ ಸಂಕೋಲೆಯನ್?
ಸಿಡಿಗುಂಡಿನೆದುರಿನಲಿ ಎದೆಯೊಡ್ಡಿ ನಿಲ್ವೆಯೇನ್?"
ಎಂದು ಪ್ರಶ್ನಿಸುತ್ತಾ "ಯಜ್ಞಗೈವೆಯ ನನಗೆ ನೀನ್ನ ದೇಹಮನ್?" ಎಂದು ಕೇಳುತ್ತಾಳೆ. ರಾಷ್ಟ್ರಪುತ್ರ ಭರತಸುತನು ಕೆಚ್ಚಿನಿಂದ "ಜೀವವ ತೆತ್ತು ಬಂಧನವ ಬಿಡಿಸುವೆನ್‌" ಎಂದು ತಾಯಿ 'ಭಾರತಾಂಬೆ'ಯ ಬಿಡುಗಡೆಯ ಯಜ್ಞಕುಂಡಕ್ಕೆ ಅರ್ಪಿಸಿಕೊಳ್ಳುತ್ತಾನೆ. ಭಾರತದ ಬಿಡುಗಡೆಗೆ ಕಾರಣನಾಗುತ್ತಾನೆ. ಆ ಬಿಡುಗಡೆಯ ಕದನದ ನಡುವೆ
"ಅಳಿವೆ ನಾನ್, ಅಳಿವೆ ನೀನ್/ನಮ್ಮೆಲುಬುಗಳ ಮೇಲೆ/
ಮೂಡುವುದು ನೋಡು ಅದೊ/ನವಭಾರತದ ಲೀಲೆ!/ಆತ್ಮ ಅಚ್ಯುತವೆಂದು/ಮೃತ್ಯುನಶ್ವರವೆಂದು/ ಭಾರತಿಗೆ ಜಯ ಎಂದು
ನಡೆ ಮುಂದೆ! ನಡೆ ಮುಂದೆ!/ ನುಗ್ಗಿ ನಡೆ ಮುಂದೆ!..."
ಎಂದು ಹಾಡಿದ್ದಾರೆ. ಹಾಡುತ್ತಾ, ಹೋರಾಡುತ್ತಾ ನೇಣುಗಂಭಗಳಿಗೆ ತಮ್ಮ ಕೊರಳನ್ನು ಒಡ್ಡಿದ್ದಾರೆ. ಕ್ರಿ.ಶ. 1919ರ ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡ, 1922ರ ಚೌರಾಚೌರಿ ಘಟನೆಗಳಿಂದ ಹಿಡಿದು 1942ರ "ಮಾಡು ಇಲ್ಲ ಮಡಿ" ಹೋರಾಟವನ್ನು ಒಳಗೊಂಡಂತೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು 1947 ಆಗಸ್ಟ್ 14ರ ಮಧ್ಯ ರಾತ್ರಿಯ ಸ್ವಾತಂತ್ರ್ಯ ಹೋರಾಟದ ರೋಮಾಂಚಕಾರಿ ಹೋರಾಟದ ಕಥೆ ಜಗತ್ತಿನ ಜನರಿಗೂ ಒಂದು ಅತ್ಯುತ್ತಮ ಪಾಠದಂತೆ ಮೈದಾಳಿದೆ.
"ಬಲಿ ಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ ಪಿಡಿಯೆ ಬಲಿದಾನಂ; ಪಡೆದುದಂ ಪಿಡಿಯೆ ಬಲಿದಾನಂ: ಪಿಡಿದುದಂ ನಡೆಯೆ ಬಲಿದಾನಂ!ಬಲಿದಾನಕುಂಟೆ ಕೊನೆ?/ಬಲಿ ಪರಂಪರೆಯಲ್ತೇ ಸ್ವಾತಂತ್ರ್ಯ ಜೀವನಂ!"
ಎನ್ನುತ್ತಾರೆ ಕುವೆಂಪು. ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಬಲಿದಾನ. ಪಡೆದುದನ್ನು ಉಳಿಸಿಕೊಳ್ಳುವುದಕ್ಕಾಗಿ ಬಲಿದಾನ. ಉಳಿದುದನ್ನು ಬೆಳೆಸಿಕೊಂಡು, ಮುಂದುವರೆಸಿಕೊಂಡು ಹೋಗುವುದಕ್ಕಾಗಿ ಬಲಿದಾನ. ಬಲಿದಾನಕ್ಕೆ ಕೊನೆಯಿಲ್ಲ. ಸ್ವಾತಂತ್ರ್ಯ ಜೀವನಂ ಎಂದರೆ ಬಲಿಪರಂಪರೆ! 1857ರಂದು ಸಿಡಿದೆದ್ದ ಯೋಧ ಮಂಗಳಪಾಂಡೆಯಿಂದ ಹಿಡಿದು ಇತ್ತೀಚೆಗೆ ಮಂಡ್ಯದ ಬಳಿಯ ಹಳ್ಳಿಯ ಯೋಧ ಸತೀಶ ಉಗ್ರಗಾಮಿಗಳಿಗೆ ಬಲಿಯಾದ ಘಟನೆಗಳವರೆಗೆ ಅದೆಷ್ಟು ಜನ 'ಭರತಸುತರು' ಬಲಿಯಾಗಿದ್ದಾರೆ. 1931 ಮಾರ್ಚ್ 23ರಂದು ಸಂಜೆ 7.30ಕ್ಕೆ ನೇಣಿಗೇರಿ ಬಲಿಯಾದ ಭಗತ್‌ಸಿಂಗ್, ರಾಜಗುರು, ಸುಖದೇವರು ಚಂದ್ರಶೇಖರ ಆಜಾದ್, ಬಟುಕೇಶ್ವರದತ್ತ, ಜತೀನ್‌ದಾಸ್, ಮಹಾವೀರಸಿಂಹ, ರಾಮಪ್ರಸಾದ ಬಿಸ್ಮಿಲ್ಲಾ, ಅಶ್ಫಾಕ್ ಉಲ್ಲಾಖಾನ್, ಠಾಕೂರ್ ರೋಶನ್‌ಸಿಂಹ, ರಾಜೇಂದ್ರ ಲಾಹಿರಿ ಮೊದಲಾದ ಕ್ರಾಂತಿಕಾರಿ ತರುಣರೊಡನೆ ಸಂಘಟನೆಗೊಂಡು 1921ರಿಂದ 1931ರವರೆಗೆ ಒಂದು ದಶಕಗಳ ಕಾಲ ಬ್ರಿಟಿಷರ ಜಂಘಾಬಲವನ್ನು ಅಲ್ಲಾಡಿಸಿದರು. ಸಿಂಹಸ್ವಪ್ನವಾಗಿದ್ದರು. "ಹಿಂದೂಸ್ತಾನ್ ಸಮಾಜವಾದಿ ಪ್ರಜಾತಂತ್ರ ಸೇನಾ" ದ ಹೆಸರಿನಲ್ಲಿ ಗಾಂಧೀಯುಗದ ಜೊತೆ ಜೊತೆಗೆ ಒಂದು 'ಕ್ರಾಂತಿಯುಗ'ದ ಇತಿಹಾಸಕ್ಕೂ ಕಾರಣರಾದರು. ಸಂಘದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಭಾರತದ ಅಸೆಂಬ್ಲಿ ಮೇಲೆ ಬಾಂಬ್ ಎಸೆದು ಬ್ರಿಟಿಷರ ಸಾಮ್ರಾಜ್ಯ ವಾದವನ್ನು ನಾಶಪಡಿಸುವ, ಕ್ರಾಂತಿಯನ್ನು ಚಿರಾಯುವಾಗಿಸುವ, ಭಾರತಾಂಬೆಯನ್ನು ಸ್ವತಂತ್ರಗೊಳಿಸುವ ಮಹಾಕನಸಿನ ಮಹಾನಿರ್ಣಯವನ್ನು ಕೈಗೊಂಡರು. ಬಾಂಬ್ ಎಸೆದು ಅಲ್ಲಿಯೇ ನಿಲ್ಲಬೇಕೆಂದೂ ಓಡಿ ಹೋಗಬಾರದೆಂದೂ ವಾದಿಸಿದ ಭಗತ್‌ಸಿಂಗ್‌ರ ವಾದಕ್ಕೆ ಒಪ್ಪಿಗೆ ದೊರೆಯಿತು. ಭಗತ್‌ಸಿಂಗ್, ಬಟುಕೇಶ್ವರದತ್ತ 1929 ಏಪ್ರಿಲ್ 8ರಂದು ವೈಸ್‌ರಾಯ್‌ರ ಘೋಷಣೆಯಾಗಬೇಕಾಗಿದ್ದ ದಿನದಂದೇ "ಅಸೆಂಬ್ಲಿ"ಯಲ್ಲಿ ಬಾಂಬ್ ಎಸೆದು ದೊಡ್ಡ ಸದ್ದು ಮಾಡಿದರು. ಯಾರ ಪ್ರಾಣವನ್ನೂ ತೆಗೆಯಲಿಲ್ಲ. ಪ್ರಾಣ ತೆಗೆಯುವುದೂ ಅವರ ಉದ್ದೇಶವಾಗಿರಲಿಲ್ಲ. ತಮ್ಮ ಬಳಿ ಇದ್ದ ಕರಪತ್ರಗಳನ್ನೆಸುದು "ಇಂಕಲಾಬ್ ಜಿಂದಾಬಾದ್‌" "ಸಾಮ್ರಾಜ್ಯವಾದ ನಾಶವಾಗಲಿ" ಎಂಬ ಘೋಷಣೆಗಳನ್ನು ಕೂಗುತ್ತಾ ಹಾಗೇ ನಿಂತಿದ್ದರು.
ಬ್ರಿಟಿಷರಿಗೆ ಸೆರೆಯಾದರು. ಭಗತ್‌ಸಿಂಗ್, ಸುಖದೇವ, ರಾಜಗುರುಗೆ ಗಲ್ಲು ಶಿಕ್ಷೆ. ಕಮಲನಾಥ ತಿವಾರಿ, ವಿಜಯಕುಮಾರ ಸಿನ್ಹಾ, ಜಯದೇವ ಕಪೂರ್, ಶಿವವರ್ಮಾ, ಗಯಾಪ್ರಸಾದ್, ಕಿಶೋರಿಲಾಲ್ ಮತ್ತು ಮಹಾವೀರಸಿಂಹರಿಗೆ ಆಜನ್ಮ ಕರೀನೀರಿನ ಶಿಕ್ಷೆಯಾಯ್ತು. ಅವರು ಕರೀ ನೀರಿನ ಶಿಕ್ಷೆಯಲ್ಲಿ ಉಗ್ರ ಉಪವಾಸ ಸತ್ಯಾಗ್ರಹ ಮಾಡಿ 9ನೆಯ ದಿನ ದೇಹ ತ್ಯಾಗ ಮಾಡಿದರು. ಕುಂದನಲಾಲನಿಗೆ ಏಳು ವರ್ಷ, ಪ್ರೇಮದತ್ತನಿಗೆ ಮೂರು ವರ್ಷ ಶಿಕ್ಷೆಗಳಾದವು. ಇಂಥ ಅದೆಷ್ಟು ಜನರಿಗೆ ಅದೆಷ್ಟು ಶಿಕ್ಷೆಗಳಾಗಿವೆ ಅದೆಷ್ಟು ಜನರ ಬಲಿದಾನಗಳಾಗಿವೆ ಎಂಬುದನ್ನು ತಿಳಿಯಬೇಕಾದರೆ ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಂದು ಹಳ್ಳಿಯ ಇತಿಹಾಸವನ್ನು ಹೃದಯವಿಟ್ಟು ಓದಬೇಕು. ಬರೆಯಬೇಕು. ಕರ್ನಾಟಕದ ಅಂಕೋಲಾವು ಕರ್ನಾಟಕದ ಬಾರ್ಡೋಲಿಯಾ ಎಂದೇ ಹೆಸರಾಗಿದೆ. ಶಿಕಾರಿಪುರ ತಾಲ್ಲೂಕಿನ ಈಸೂರಿನ 5 ಜನರ ಬಲಿದಾನ "ಏಸೂರು ಕೊಟ್ಟರೂ ಈಸೂರ ಕೊಡೆವು" ಎಂಬ ಘೋಷಣೆಗೆ ಕಾರಣವಾಗಿದೆ. ಇಂಥ ಸಾವಿರಾರು ಘಟನೆಗಳು ಬಲಿಪರಂಪರೆಯ ಸ್ವಾತಂತ್ರ್ಯಜೀವನದ ಕಥೆಯನ್ನು ಹೇಳುತ್ತವೆ. ಅವು ಕೇವಲ ಕಥೆಗಳಲ್ಲ. ನಮ್ಮ ಪೂರ್ವಜರ ವ್ಯಥೆಗಳೂ ಹೌದು. ನಮಗೆ ಹಾಗೂ ನಮ್ಮ ಮುಂದಿನವರಿಗೆ ಎಚ್ಚರದ, ವಿವೇಕದ, ಸ್ವತಂತ್ರ ಪಥಗಳೂ ಹೌದು. ಇಂಥ ಪಥದಲ್ಲಿ ನಡೆಯುವುದಕ್ಕೆ ಭಗತ್‌ಸಿಂಗ್ ತನ್ನ ಕಾಲೇಜು ದಿನಗಳಲ್ಲೇ ತಾನೇ ತೀರ್ಮಾನಿಸಿದ್ದ. 1907 ಸೆಪ್ಟೆಂಬರ್ 28ರಂದು ಪಂಜಾಬಿನ ಲಾಯಲಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಕಿಶನ್‌ಸಿಂಹ ಹಾಗೂ ವಿದ್ಯಾವತಿ ದಂಪತಿಗಳ ಮಗನಾದ ಭಗತ್‌ಸಿಂಗ್ ಬಾಲ್ಯದಲ್ಲೇ 'ಬಾಂಬುಗಳನ್ನು ಬೆಳೆಯುತ್ತೇನೆ' ಎಂದಿದ್ದ ಶೂರ. ತಂದೆ ಕಿಶನ್‌ಸಿಂಹ ಚಿಕ್ಕಪ್ಪ ಅಜಿತ್‌ಸಿಂಹ, ತಾತ ಅರ್ಜುನಸಿಂಹ. ಎಲ್ಲರೂ ಕ್ರಾಂತಿಯ ಮಹಾನ್ ಧ್ಯೇಯವನ್ನು ಕನವರಿಸಿದರವೇ! ಆ ವಂಶದ ಕುಡಿ, ಗುಡುಗು, ಸಿಡಿಲು, ಆರದ ಹಣತೆ ಭಗತ್‌ಸಿಂಗ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ತಂದೆಗೆ ಹೀಗೆ ಪತ್ರ ಬರೆದಿದ್ದ:
"ಪೂಜ್ಯ ತಂದೆಯವರಿಗೆ ನಮಸ್ಕಾರಗಳು,
ನನ್ನ ಜೀವನವನ್ನು ಭಾರತ ಸ್ವಾತಂತ್ರ್ಯ ಸಾಧನೆಯ ಕಾರ್ಯಕ್ಕಾಗಿ ನಾನು ಮುಡುಪಿಡಲು ಪಣ ತೊಟ್ಟಿದ್ದೇನೆ. ಆದ್ದರಿಂದ ನನ್ನ ಜೀವನದಲ್ಲಿ ವಿಶ್ರಾಂತಿಯಾಗಲೀ, ಸಾಮಾನ್ಯ ಲೌಕಿಕ ರೀತಿಯ ಸುಖ ಸಂತೋಷಗಳಾಗಲೀ ಇರುವುದಿಲ್ಲ. ಅಂತಹ ಮುಳ್ಳಿನ ಹಾದಿಯನ್ನು ಆಯ್ದುಕೊಂಡಿದ್ದೇನೆ. ನಾನು ಚಿಕ್ಕವನಾಗಿದ್ದಾಗ ಉಪನಯನ ಸಂಸ್ಕಾರದ ಸಮಯದಲ್ಲಿ ನೀವು ನನ್ನನ್ನು ದೇಶಸೇವಾ ಕಾರ್ಯಕ್ಕಾಗಿ ಸಮರ್ಪಿಸಿರುವುದಾಗಿ ಎಲ್ಲರ ಮುಂದೆ ಘೋಷಿಸಿದ್ದೀರಿ. ಈಗ ನಾನು ಪಿತೃವಾಕ್ಯ ಪರಿಪಾಲಕನಾಗಿ ನಿಮ್ಮ ಪ್ರತಿಜ್ಞೆಯನ್ನು ಈಡೇರಿಸಲು ಹೊರಡುತ್ತಿದ್ದೇನೆ. ನೀವು ನನ್ನನ್ನು ಕ್ಷಮಿಸುವಿರೆಂದು ನಂಬಿದ್ದೇನೆ.
- ತಮ್ಮ ವಿಧೇಯ
ಭಗತ್‌ಸಿಂಗ್‌"
ಆದರೆ, ಈ ಎಲ್ಲಾ ಬಲಿದಾನಗಳ ಕತೆಯ ಪಕ್ಕದಲ್ಲೇ ವಾಸ್ತವದ ವ್ಯಥೆಯಿದೆ. ಸ್ವಾತಂತ್ರ್ಯಗೊಂಡ ವಿಭಜಿತ ಭಾರತದ ಸಿಂಹಾಸನ ಏರಿದ ರಾಜಕಾರಣಿಗಳ ಸ್ವಾರ್ಥ, ಭ್ರಷ್ಟಾಚಾರ, ಅಪ್ರಮಾಣಿಕತೆಯಿಂದ ಜರ್ಜರಿತಳಾದ ಭಾರತಮಾತೆಯ ಆಕ್ರಂದನವೂ ಕೇಳಿ ಬರುತ್ತಿದೆ. ಇದಕ್ಕಾಗಿ ನಡೆಯಿತೆ ಬಲಿದಾನದ ಪರಂಪರೆ? ಎಂದೂ ಆತ್ಮಾವಲೋಕನವನ್ನು ಭಾರತ ಮಾಡಬೇಕಿದೆ.

- ಡಾ. ಬಿ.ವಿ.ವಸಂತಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್