ಇಷ್ಟಕ್ಕೂ ಈ ಶಿಕ್ಷೆ ಕಡಿಮೆಯೇ!
ದೊಡ್ಡ ಪರದೆಯ ಮೇಲೆ ಸಂಜಯ್ ದತ್‌ನ ನಟನೆ ನೋಡಿ ನಾವು ಶಿಳ್ಳೆ ಹಾಕಿದ್ದೇವೆ. 'ಮುನ್ನಾ ಭಾಯ್' ಆಗುವ ಮೂಲಕ ಸಂಜಯ್, ಬಹಳಷ್ಟು ಮಂದಿಗೆ ಆಪ್ತವಾಗಿದ್ದಾನೆ. ಆದರೆ ಈಗ 1993ರ ಮುಂಬೈ ಸ್ಫೋಟದ ವಿಚಾರವಾಗಿ ಮತ್ತೆ ಜೈಲಿನ ಹಾದಿ ಹಿಡಿದಿದ್ದಾನೆ. ಇದೇನೇ ಇರಲಿ. ಈಗ ಗೊಂದಲ ಹುಟ್ಟಿಸುತ್ತಿರುವ ಸಂಗತಿಯೆಂದರೆ ಸಂಜಯ್‌ಗೆ ಕ್ಷಮೆ ನೀಡಬೇಕೆಂಬ ಕೋಲಾಹಲವೇಕೆ? 'ಸಂಜಯ್ ಒಳ್ಳೆಯ ಮನುಷ್ಯ' ಎಂದು ಲೊಚಗುಟ್ಟಿ, ಆತನನ್ನು ಬಿಟ್ಟುಬಿಡಬೇಕು ಎಂಬ ವಾದಿಸುತ್ತಿರುವುದೇಕೆ?
ದತ್ ಪರ ವಾದಿಸುವವರ ತರ್ಕ ಸರಳವಾಗಿದೆ: ' ದತ್ ತಪ್ಪು ಮಾಡಿದ್ದಾನೆ ಎನ್ನುವುದೇನೋ ನಿಜ. ಆದರೆ ಆತ ಅಮಾಯಕ. ಒಳ್ಳೆಯ ಕುಟುಂಬದಿಂದ ಬಂದವ. ಅದಾಗಲೇ ಆತ 20 ವರ್ಷಗಳಿಂದ ಹಿಂಸೆ ಅನುಭವಿಸುತ್ತಲೇ ಇದ್ದಾನೆ. ಏನೋ ತನ್ನ ಮತ್ತು ತನ್ನ ಕುಟಂಬದ ರಕ್ಷಣೆಗಾಗಿ ರೈಫಲ್ ಇಟ್ಟುಕೊಂಡಿದ್ದನಷ್ಟೆ. ಅದಾಗಲೇ ಹಳೆಯ ವಿಷಯವಾಯಿತು. ಈಗಷ್ಟೇ ಆತ ಮದುವೆಯಾಗಿ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದ್ದಾನೆ. ಪಾಪ, ಮನೆಯಲ್ಲಿ ಮಕ್ಕಳೂ ಇವೆ'!
ಈಗ ಸತ್ಯಾಸತ್ಯತೆಯತ್ತ ಒಮ್ಮೆ ಗಮನ ಹರಿಸೋಣ: ಸಂಜಯ್ ದತ್, ಮುಂಬೈ ಸ್ಫೋಟದ ಪ್ರಮುಖ ರೂವಾರಿಯಾದ ಅನೀಸ್ ಇಬ್ರಾಹಿಮ್‌ನೊಂದಿಗೆ(ದಾವೂದ್ ಇಬ್ರಾಹಿಂನ ಸಹೋದರ) ಸಂಪರ್ಕದಲ್ಲಿದ್ದ. ಮೊದಲೇ ಆತನ ಬಳಿ ಪರವಾನಗಿ ಇರುವ ಮೂರು ಗನ್ನುಗಳಿದ್ದರೂ, ಆತ್ಮ ರಕ್ಷಣೆಗಾಗಿ ಎ.ಕೆ.56 ರೈಫಲ್ ಇಟ್ಟುಕೊಳ್ಳುವ ಅವಶ್ಯಕತೆಯೇನಿತ್ತು? ಮುಂಬೈ ಸ್ಫೋಟ ಪ್ರಕರಣದ ತನಿಖೆ ನಡೆಸಿದ ಜಂಟಿ ಪೊಲೀಸ್ ಆಯುಕ್ತ ಎಮ್‌ಎನ್ ಸಿಂಗ್ ಅವರು ಈ ಬಗ್ಗೆ ಹೇಳುವುದು ಹೀಗೆ- 'ಈ ವಾದಕ್ಕೆ ಅರ್ಥವೇ ಇಲ್ಲ. ಆತ್ಮರಕ್ಷಣೆಗಾಗಿ ಯಾರಾದರೂ ಗ್ಯಾಂಗ್‌ಸ್ಟರ್‌ಗಳ ಮೊರೆಹೋಗುತ್ತಾರಾ? ಅವರಿಗೆ ಸಹಾಯಕ್ಕೆ ಸರ್ಕಾರಿ ಏಜೆನ್ಸಿಗಳಿವೆ. ಸಂಜಯ್ ದತ್ ಸುಲಭವಾಗಿ ಪೊಲೀಸ್ ರಕ್ಷಣೆ ಪಡೆಯಬಹುದಿತ್ತು.'
ನರ್ಗಿಸ್ ದತ್ ಮತ್ತು ಕಾಂಗ್ರೆಸ್ ಎಂಪಿಯಾಗಿದ್ದ ಸುನಿಲ್ ದತ್‌ರ ಮಗನಿಗೆ ಸರ್ಕಾರ ರಕ್ಷಣೆ ಕೊಡದೇ ಇರುತ್ತಿತ್ತೆ? ಆತ್ಮರಕ್ಷಣೆಗಾಗಿ ಎ.ಕೆ.56 ರೈಫಲ್ ಇಟ್ಟುಕೊಂಡಿದ್ದ ಎನ್ನುವ ವಾದವನ್ನು ಒಪ್ಪಿದರೂ, ಆತನ ಬಳಿ ಹ್ಯಾಂಡ್ ಗ್ರೇನೇಡ್‌ಗಳು ಏಕಿದ್ದವು ಎನ್ನುವ ಪ್ರಶ್ನೆಗೆ ಯಾವ ಉತ್ತರ ಸಿಕ್ಕೀತು? ಇದನ್ನು ಕೇವಲ 'ಆತ್ಮರಕ್ಷಣೆ' ಎಂಬ ಕ್ಲೀಷೆಯ ಪದ ಬಳಸಿ ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ.
---
ಅಂದು ಶಸ್ತ್ರಾಸ್ತ್ರಗಳ ಆಗಮನಕ್ಕಾಗಿ ಸಂಜಯ್ ದತ್ ತಮ್ಮ ಪಾಲಿ ಹಿಲ್‌ನ ಮನೆಯಲ್ಲಿ ಕಾಯುತ್ತಾ ಕುಳಿತಿದ್ದರು. ಕಾರೊಂದು ಅವರ ಮನೆ ಮುಂದೆ ಬಂದು ನಿಂತಿತು. ಆಗ ಸಂಜಯ್, ಸೆಕ್ಯುರಿಟಿಯವನನ್ನು ಕರೆದು, ಕಾರು ಕಣ್ಣಿಗೆ ಬೀಳದಷ್ಟು ದೂರದಲ್ಲಿ ಹೋಗಿ ನಿಲ್ಲುವಂತೆ ಹೇಳಿ ಕಳಿಸಿದ. ಶಸ್ತ್ರಗಳನ್ನೆಲ್ಲ ಕಾರಿನ ಚೌಕಟ್ಟಿನಲ್ಲಿ ಅಡಗಿಸಿಡಲಾಗಿತ್ತು. ಆಗ ಸಂಜಯ್ ತಮ್ಮ ಮನೆಯ ಸಲಕರಣೆಗಳನ್ನು ಬಳಸಿ ಅವನ್ನೆಲ್ಲ ಹೊರಗೆ ತೆಗೆಸಿದ! ಅದಾದ ತಕ್ಷಣ ಆತ ಅನೀಸ್ ಇಬ್ರಾಹಿಂ ಜೊತೆಗೆ ಮಾತನಾಡಿರುವ ದಾಖಲೆಗಳಿವೆ, ಅಲ್ಲದೆ ಖುದ್ದು ಸಂಜಯ್ ದತ್ ನ್ಯಾಯಾಲಯದಲ್ಲಿ ಈ ವಿಷಯವನ್ನು ಒಪ್ಪಿಕೊಂಡಿದ್ದಾನೆ.
ಸಂಜಯ್‌ಗೆ ಶಸ್ತ್ರಾಸ್ತ್ರ ತಲುಪಿಸಲು ಬಾಬಾ ಮುಸ್ಸಾ ಚೌಹಾಣ್ ಮತ್ತು ಮ್ಯಾಗ್ನಂ ವೀಡಿಯೋ ಮಾಲೀಕ ಸಮೀರ್ ಹಿಂಗೋರ ಸೇರಿದಂತೆ ಇನ್ನೂ ಕೆಲವರು ತೆರಳಿದ್ದರು. ಅಲ್ಲದೆ ಕೆಲ ದಿನಗಳ ನಂತರ ಆತನ ಮನೆಯಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಾಪಸ್ ಒಯ್ಯಲಾಯಿತು. ಆ ಕೆಲಸಕ್ಕೆ ಮಂಜೂರ್ ಅಹಮದ್‌ನ ಕಾರನ್ನು ಬಳಸಲಾಯಿತು. ಜೈಬುನ್ನೀಸಾ ಕಾಜಿ ಎಂಬ ಮಹಿಳೆ ಕೆಲವು ದಿನಗಳ ವರೆಗೆ ಆ ಮಾಲನ್ನೆಲ್ಲ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಳು! ಇದೇ ಕಾರಣದಿಂದಾಗಿಯೇ ಈ ನಾಲ್ಕೂ ಜನರಿಗೆ, ಅಂದರೆ- ಚೌಹಾಣ್, ಹಿಂಗೋರಾ, ಅಹಮದ್ ಮತ್ತು ಕಾಜಿಗೆ ಟಾಡಾ ಕಾನೂನಿನಡಿ ಶಿಕ್ಷೆ ವಿಧಿಸಲಾಯಿತು.
ವ್ಯಂಗ್ಯವೆಂದರೆ, ದತ್‌ನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ದೋಷಿಯೆಂದು ಪರಿಗಣಿಸಲಾಗಿರುವುದು. ಯಾಕೆ ಯಾರೂ ಕೂಡ ಜೈಬುನ್ನೀಸಾಳ ಮನೆಯವರ ಬಗ್ಗೆ ಮಾತನಾಡುತ್ತಿಲ್ಲ? ಆಕೆ ಶಸ್ತ್ರಾಸ್ತ್ರಗಳನ್ನು ತನ್ನ ಬಳಿ ಇಟ್ಟುಕೊಂಡದ್ದೇನೋ ನಿಜ, ಆದರೆ ಅವು ಆಕೆಯ ಉಪಯೋಗಕ್ಕಾಗಿ ಇರಲಿಲ್ಲವಲ್ಲ ಎನ್ನುವುದನ್ನೇಕೆ ಯಾರೂ ಹೇಳುತ್ತಿಲ್ಲ. ದತ್ 1993ರ ಮುಂಬೈ ಸ್ಫೋಟದ ನಂತರವೂ ಎ.ಕೆ.56 ರೈಫಲ್ಲನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದನಲ್ಲವೇ?
2006ರಲ್ಲಿ ಸಂಜಯ್ ದತ್‌ಗೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಯಾದಾಗ, ಆತನ ಲಾಯರ್‌ನನ್ನು ಭೇಟಿಯಾಗಿದ್ದೆ. ನಾನು ಜೈಬುನ್ನೀಸಾಳ ಮಗಳೆಂದು ಆತನನ್ನು ನಂಬಿಸಿ ಮಾತಿಗಿಳಿದು, 'ನ್ಯಾಯಾಲಯ ಈ ಅಸಮಾನತೆಯನ್ನೇಕೆ ತೋರಿಸುತ್ತಿದೆ?' ಎಂದು ಕೇಳಿದೆ. ಅದಕ್ಕವರು, 'ಸಂಜಯ್ ದತ್‌ನನ್ನು ಟಾಡಾದಡಿ ದೋಷಿಯೆಂದು ಪರಿಗಣಿಸದಿದ್ದರೆ, ಉಳಿದವರ ವಿಷಯದಲ್ಲೂ ಅದೇ ನೀತಿ ಅನ್ವಯವಾಗಬೇಕು. ಎಲ್ಲರೂ ಒಂದೇ ಸಾಲಿನಲ್ಲಿದ್ದಾರೆ' ಎಂದು ಉತ್ತರಿಸಿದ್ದರು!
ದತ್ ನಿಜಕ್ಕೂ ಅದೃಷ್ಟವಂತ. ಭಯೋತ್ಪಾದನಾ ಕಾನೂನಿನಡಿಯಲ್ಲಿ ಸಿಕ್ಕಿಬೀಳದೇ ಬಚಾವಾಗಿದ್ದಾನೆ. ಕಳಂಕದಿಂದ ತಪ್ಪಿಸಿಕೊಂಡಿದ್ದಾನೆ. ಇನ್ನು ಆತ ಉಗ್ರವಾದಿಯಲ್ಲ ಎಂದು ಟಾಡಾ ನ್ಯಾಯಾಲಯದ ನ್ಯಾಯಾಧೀಶರೇ ಹೇಳಿದ್ದಾರೆ. ಸಂಜಯ್‌ಗಾಗಿ ಅಳುವವರು ಒಂದು ವಿಷಯವನ್ನು ಮೊದಲು ಅರಿತುಕೊಳ್ಳಲಿ, ಆತನಿಗೇನು ಜೀವಾವಧಿ ಶಿಕ್ಷೆ ಆಗಿಲ್ಲ. ಇನ್ನೊಂದು ಮೂರು ವರ್ಷ ಜೈಲಿನಲ್ಲಿದ್ದು ಬಂದರೆ ಆಯಿತು, ಮತ್ತೆ ಆತ ಹೊಸ ಜೀವನವನ್ನು ಆರಂಭಿಸಬಹುದು.
-ಹರಿಂದರ್ ಬವೇಜಾ, ಅಂಕಣಕಾರರು