ಮತ್ತೆ ಪಿಯು ಶಿಕ್ಷಕರ ಮುಷ್ಕರ, ಎಲ್ಲಿದೆ ಉತ್ತರ?
2013ನೇ ಸಾಲಿನ ದ್ವಿತೀಯ ಪಿ. ಯು. ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ನಿರೀಕ್ಷೆಯಂತೆ ಪಿ. ಯು. ಉಪನ್ಯಾಸಕರು ತಮ್ಮ ಸುಮಾರು ಒಂದು ದಶಕದ ರಿವಾಜಿನನ್ವಯ ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಈ ವರ್ಷ ಕೂಡ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಸಾರ್ವಜನಿಕರಿಗೆ ಕೂಡ ಇದು ನಿರೀಕ್ಷಿತ. ಬಹಿಷ್ಕಾರದಷ್ಟೇ ನಿರೀಕ್ಷಿತ ಇದರ ಅಂತ್ಯ. ಶಿಕ್ಷಕರಲ್ಲಿ ಅನೇಕರಿಗೆ ನಮಗಿಂತ ಚೆನ್ನಾಗಿ ಒಂದು ವಿಷಯ ಗೊತ್ತು. ಅದೆಂದರೆ ಕಳೆದ ಹತ್ತಾರು ವರ್ಷಗಳ ಪ್ರಯತ್ನಗಳ ಜೊತೆಗೆ ಇದು ಮತ್ತೊಂದು ಪ್ರಯತ್ನವಾಗುವುದೇ ವಿನಃ ಇದರ ಪ್ರತಿಫಲ ಶೂನ್ಯ ಸಂಪಾದನೆ ಎಂದು! ಮತ್ತೊಂದೆಡೆ ಸರ್ಕಾರ ಒಳಗೊಳಗೇ ಮುಸಿಮುಸಿ ನಗುತ್ತಿದೆ. 'ಈ ವರ್ಷದ್ದೇನು ಮಹಾ? ಮೌಲ್ಯಮಾಪನದೊಳಗೆ ವಿಧಾನ ಸಭಾ ಚುನಾವಣೆಗಳ ನೀತಿ ಸಂಹಿತೆ ಜಾರಿಯಾಗಿರುತ್ತದೆ. ಆಶ್ವಾಸನೆ ಕೊಡುವಂತಿಲ್ಲ. ಅದಿಲ್ಲದಿದ್ದರೂ ಮೌಲ್ಯಮಾಪನ ಬಹಿಷ್ಕಾರದಿಂದ ವಿದ್ಯಾರ್ಥಿಗಳಿಗಾಗುವ ತೊಂದರೆ ಮತ್ತು ಪಾಲಕರಿಗಾಗುವ ಆತಂಕಗಳನ್ನು ಅತಿರಂಜಿಸಿ, ಶಿಕ್ಷಕರ ನೈತಿಕ ಹೊಣೆಗಾರಿಕೆಯ ಬಗ್ಗೆ ಪ್ರವಚನ ನೀಡಿ, ಅಥವ ವೇತನ ತಾರತಮ್ಯದ ಬಗ್ಗೆ ಮೂರು ವರ್ಷಗಳ ಹಿಂದೆಯೇ ಶಿಕ್ಷಣ ಕಾರ್ಯದರ್ಶಿಯವರ ನೇತೃತ್ವದ ಸಮಿತಿ ಕೊಟ್ಟ ಶಿಫಾರಸಿನ ಅಧ್ಯಯನಕ್ಕೆ ರಿವೀವ್ ಕಮಿಟಿಯ ವರದಿ ಪರಿಶೀಲನೆಯಲ್ಲಿದೆ ಎಂದು ಹೇಳಿ, ಇಲ್ಲವೆ 'ಎಸ್ಮಾ' ಎಂಬ ಗುಮ್ಮ ಪ್ರಯೋಗದ ಧಮಕಿ ಹಾಕಿ ನಿಭಾಯಿಸಬಹುದು' ಎಂದು ಸರ್ಕಾರ ನಿಶ್ಚಿಂತೆಯಿಂದಿದೆ. ಹತ್ತಾರು ಅಸ್ತ್ರಗಳಂತೂ ಅದರ ಬತ್ತಳಿಕೆಯಲ್ಲಿವೆ. ಸಮಯ ನೋಡಿ ಯಾವುದನ್ನು ಬಳಸಬೇಕೆಂಬುದನ್ನು ನಿಶ್ಚಯಿಸುತ್ತದೆ.
ಇತ್ತೀಚಿನವರೆಗೂ ನಾನು ಈ ವಾರ್ಷಿಕ ಹರಕೆ ನಾಟಕದ ಪ್ರೇಕ್ಷಕನಾಗಿದ್ದುದರಿಂದ ಇದರ ರಂಗದ ಮೇಲಿನ ಮತ್ತು ನೇಪಥ್ಯದ ಒಳಗಿನ ಚಟುವಟಿಕೆಗಳೆಲ್ಲ ಅಷ್ಟಿಷ್ಟು ಗೊತ್ತು. ಶಿಕ್ಷಕರ ವೇತನ ತಾರತಮ್ಯ ಕುರಿತ ಹೋರಾಟಕ್ಕೆ ಒಂದು ದೀರ್ಘ ಚರಿತ್ರೆಯೇ ಇದೆ. ಈ ಸಮಸ್ಯೆಯ ಹುಟ್ಟಿಗೆ ಪ್ರಮುಖವಾಗಿ ಎರಡು ಕಾರಣಗಳಿವೆ. ಮೊದಲನೆಯದು, 1990ರ ವರೆಗೂ ಉಪನ್ಯಾಸಕರ ವೇತನ ಶ್ರೇಣಿಯಲ್ಲಿದ್ದ ಕೆಲವು ಸರ್ಕಾರಿ ಅಧಿಕಾರಿಗಳಿಗೆ 1990ರ ವೇತನ ಪರಿಷ್ಕರಣೆಯಲ್ಲಿ ಉನ್ನತ ವೇತನ ಶ್ರೇಣಿ ನೀಡಿ ಉಪನ್ಯಾಸಕರನ್ನು ಕಡೆಗಣಿಸಿದ್ದು. ಎರಡನೆಯದು, ಪಿಯು ಶಿಕ್ಷಕರ ವೇತನ ಶ್ರೇಣಿಯನ್ನೇ ಪಡೆಯುತ್ತಿದ್ದ ಡಿಗ್ರಿ ಕಾಲೇಜಿನ ಉಪನ್ಯಾಸಕರಿಗೆ ಯುಜಿಸಿ ವೇತನ ಶ್ರೇಣಿ ಎಂಬ ನಂಬಲಾಗದ ಇ್ಟಟಿಛಟಿಣಛ ನೀಡಿದ್ದು. ಅವರಷ್ಟೇ ವೇತನ ಪಡೆಯುತ್ತಿದ್ದವರು ಕೆಲಸ ಮತ್ತು ಜವಾಬ್ದಾರಿ ಯಾವುದೂ ಹೆಚ್ಚಾಗದೆ ಏಕಾಏಕಿ ಅವರ ದುಪ್ಪಟ್ಟು ವೇತನ ಪಡೆಯಲು ಪ್ರಾರಂಭಿಸಿದರು. ಇದರಿಂದ ಆರ್ಥಿಕ ಹಿನ್ನಡೆಯಷ್ಟೇ ಅಲ್ಲ, ಮಾನಸಿಕ ಖಿನ್ನತೆ ಸಹ ಪಿಯುಸಿ ಶಿಕ್ಷಕರಲ್ಲಿ ಉಂಟಾಯಿತು. ಆದರೆ ಇದರ ಬಗ್ಗೆ ಕೊರಗಾಗಲೀ, ಅಸೂಯೆಯಾಗಲೀ ತರವಲ್ಲ. ಡಿಗ್ರಿ ಕಾಲೇಜಿನ ಉಪನ್ಯಾಸಕರ ಕೆಲಸಕ್ಕೆ ಈಗ ಕೊಡುವ ವೇತನವೂ ಕಮ್ಮಿಯೇ ಇರಬಹುದು. ಇಲ್ಲಿ ಗಮನಿಸಬೇಕಾದದ್ದು ಪಿಯು ಶಿಕ್ಷಕರ ಸಮಸ್ಯೆಯ ಬಗ್ಗೆ ಸರ್ಕಾರ ತೋರುತ್ತಿರುವ ಅಸಡ್ಡೆ. ಪ್ರಜಾಪ್ರಭುತ್ವದಲ್ಲಿ ಬೇಡಿಕೆಗಳಿಗಾಗಿ ಹೋರಾಟ ಸಹಜ. ಪಿಯು ಶಿಕ್ಷಕರು ಹತ್ತಾರು ವರ್ಷಗಳಿಂದ ಅದನ್ನೇ ಮಾಡುತ್ತಿದ್ದಾರೆ. ಇಲ್ಲಿ ಸರ್ಕಾರಕ್ಕೆ ಇರುವ ಆಯ್ಕೆಗಳು ಎರಡೇ ಎರಡು. ಒಂದು, ಈ ಬೇಡಿಕೆ ನ್ಯಾಯ ಸಮ್ಮತವಲ್ಲ ಅಂತಾದರೆ ಅದನ್ನು ಸ್ಪಷ್ಟವಾಗಿ ಹೇಳುವುದು. ಇದು ಸರ್ಕಾರದ ಕರ್ತವ್ಯ. ಎರಡನೆಯದು, ಬೇಡಿಕೆಯಲ್ಲಿ ಹುರುಳಿದೆ ಅಂತಾದರೆ ಅದನ್ನು ಒಂದು ಕಾಲಮಿತಿಯಲ್ಲಿ ಪೂರೈಸುವುದು. ವಿಚಿತ್ರವೆಂದರೆ, ಸರ್ಕಾರ ವೇತನ ತಾರತಮ್ಯವಾಗಿದೆ ಅಂತ ಒಪ್ಪಿ ಅದರ ಅಧ್ಯಯನಕ್ಕಾಗಿ ಸಮಿತಿ ನೇಮಿಸಿ ಸಮಿತಿಯ ವರದಿಯನ್ನು ಶೈತ್ಯಾಗಾರದಲ್ಲಿಟ್ಟಿದೆ. ಬೇಡಿಕೆ ಸರಿ. ಆದರೆ ಅದನ್ನು ಮನ್ನಿಸುವುದಿಲ್ಲ ಅಂದರೆ ಹೇಗೆ? ಪ್ರತಿ ವರ್ಷ ಏನೋ ಸಬೂಬು ಹೇಳಿ ಬೀಸುವ ದೊಣ್ಣೆಯಿಂದ ಪಾರಾಗುವುದು ಸರಿಯೇ? ಇದರಿಂದಾಗಿಯೇ ಶಿಕ್ಷಕರಿಗೆ ಸರಕಾರದ ಮೇಲೆ ವಿಶ್ವಾಸವಿಲ್ಲ. ಸರ್ಕಾರ, ಶಿಕ್ಷಕರು ಬಹಿಷ್ಕಾರ ಪ್ರಿಯರು ಎಂದು ಅವರಿಗೆ ಬಹಿಷ್ಕಾರ ಹಾಕಿದಂತಿದೆ.
ಸರ್ಕಾರ ಮತ್ತು ಪಿಯು ಶಿಕ್ಷಕರ ನಡುವಿನ ಷಷ್ಟಾಷ್ಟಕಕ್ಕೆ ಸರ್ಕಾರದ ವಿಶ್ವಾಸ ದ್ರೋಹವೇ ಕಾರಣ. ವೇತನ ತಾರತಮ್ಯ ನಿವಾರಣೆಯ ಕಥೆ ಹಾಗಿರಲಿ. ಇದಕ್ಕಿಂತಲೂ ಸಣ್ಣ ಸಣ್ಣ ವಿಚಾರಗಳಲ್ಲಿ ಕೂಡ ಇಲಾಖೆ ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ ಅದುಕ್ಕೆ ಗೌರವ ತರುವಂಥದ್ದಲ್ಲ. ಪ್ರತಿ ಮೂರು ವರ್ಷಗಳಿಗೊಮ್ಮೆ ದ್ವಿತೀಯ ಪಿಯು ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಗೌರವಧನಗಳು ಪರಿಷ್ಕರಣೆಯಾಗಬೇಕು. ಇದೊಂದು ಒಪ್ಪಂದ. ಆದರೆ ಇದನ್ನು ಹೋರಾಡದೇ ಇಲಾಖೆ ದಯಪಾಲಿಸುವುದು ತೀರ ವಿರಳ. ಇದಕ್ಕೂ ಒಂದೆರಡು ದಿನ ಮೌಲ್ಯಮಾಪನ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿ ಶಿಕ್ಷಕ ವೃಂದದ ಬಗ್ಗೆ ಸಮಾಜದಲ್ಲಿ ತಿರಸ್ಕಾರ ಹುಟ್ಟುವಂತೆ ಮಾಡಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ನಾನು ಇಂಗ್ಲಿಷ್ ವಿಷಯದ ಮುಖ್ಯ ಪರೀಕ್ಷಕನಾಗಿದ್ದಾಗ ನಡೆದ ಒಂದು ಘಟನೆಯನ್ನು ನೋಡಿ- ಮೌಲ್ಯಮಾಪನದ ಗೌರವಧನ ಪರಿಷ್ಕರಣೆಗೆ ಆಗ ಮುಷ್ಕರ ನಡೆದಿತ್ತು. ಅಂದಿನ ಪಿಯು ಇಲಾಖೆಯ ಜಂಟಿ ನಿರ್ದೇಶಕರು ಬಂದು 'ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ನನ್ನ ಮೇಲೆ ವಿಶ್ವಾಸವಿಟ್ಟು ಮೌಲ್ಯಮಾಪನ ಶುರುಮಾಡಿ. ಈ ಮೌಲ್ಯಮಾಪನದಿಂದಲೇ ಗೌರವಧನ ಪರಿಷ್ಕರಣೆ ಆಗುತ್ತದೆ. ನೀವು ಜೂನ್ ಒಂದಕ್ಕೆ ಕಾಲೇಜಿಗೆ ಹೋದಾಗ ಗೌರವಧನ ವ್ಯತ್ಯಾಸದ ಚೆಕ್ ಕಾಲೇಜಿನಲ್ಲಿರುತ್ತದೆ. ಪ್ಲೀಸ್, ಪ್ಲೀಸ್..' ಎಂದು ನಾಟಕ ಮಾಡಿದ್ದೇ ಮಾಡಿದ್ದು. ಆದರೆ ಇದೆಲ್ಲ ಬಾಯ್ಪಾಟಾಗಿದ್ದ ಉಪನ್ಯಾಸಕರು ಕ್ಯಾರೇ ಅನ್ನಲಿಲ್ಲ. ನಂತರ ನಾನು ಮತ್ತೆ ಕೆಲವು ಹಿರಿಯ ಉಪನ್ಯಾಸಕರು ಮನವಿ ಮಾಡಿಕೊಂಡೆವು. ಮೌಲ್ಯಮಾಪನ ಶುರುವಾಯ್ತು, ಮುಕ್ತಾಯವಾಯ್ತು. ವ್ಯತ್ಯಾಸದ ಆ ಚೆಕ್ಕು ಎಲ್ಲಿ ವ್ಯತ್ಯಯವಾಯ್ತೋ, ಅಂಚೆಯಲ್ಲಿ ಕಳೆಯಿತೋ ಗೊತ್ತಿಲ್ಲ. ಅಂತೂ ಬರಲಿಲ್ಲ. ನಾನು ಕೋಡಂಗಿಯಾದದ್ದೇ ಬಂತು. ನಮ್ಮ ಇಲಾಖೆಗೆ ಪರೀಕ್ಷಾ ಕರ್ತವ್ಯಗಳಿಗೆ ಒಮ್ಮೊಮ್ಮೆ ಹೊರ ಜಿಲ್ಲೆಗಳಿಗೆ ಕೂಡ ಹೋಗುವ ಉಪನ್ಯಾಸಕರಿಗೆ ಸಕಾಲದಲ್ಲಿ ಗೌರವಧನ ಕೊಟ್ಟೇ ಗೊತ್ತಿಲ್ಲ. 2011ರಲ್ಲಿ ನಾನು ಶಿವಮೊಗ್ಗಕ್ಕೆ ಸಿ.ಇ.ಟಿ ಪರೀಕ್ಷೆಯ ಪ್ರಶ್ನೆ ಪತ್ರಿಕಾ ಪಾಲಕನಾಗಿ ಹೋಗಿದ್ದೆ. ಆ ಹಣ ಇನ್ನೂ ಬಂದಿಲ್ಲ. ಇದು ಚಿಕ್ಕ ವಿಷಯವೇ ಇರಬಹುದು. ಆದರೆ ಸರ್ಕಾರಕ್ಕೆ ಒಂದು ನಿಯತ್ತು ಬೇಡವೇ? ಕನಸಿನ ಕನವರಿಕೆಯಲ್ಲಿ ಕೂಡ ಶಿಸ್ತುಕ್ರಮ, ಹೊಣೆಗಾರಿಕೆ, ನೈತಿಕತೆ ಇತ್ಯಾದಿ ಬಡಬಡಿಸುವವರು ವಿಶ್ವಾಸಕ್ಕೆ ಅರ್ಹರಾಗಿ ನಡೆದುಕೊಳ್ಳಬೇಡವೇ? ಇಲಾಖೆ ಮತ್ತು ಶಿಕ್ಷಕರು ಪರಸ್ಪರ ನಂಬಿಕೆಯಿಂದ ಏಕಮುಖವಾಗಿ ಎಳೆದರೆ ಮಾತ್ರ ಶಿಕ್ಷಣದ ತೇರು ನೆಲೆ ತಲುಪುತ್ತದೆಂಬ ಅರಿವು ಇಬ್ಬರಲ್ಲೂ ಅಗತ್ಯ. ತತ್ಕ್ಷಣಕ್ಕೆ ತೋಚಿದ ಪೊಳ್ಳು ಭರವಸೆಯನ್ನೋ, ಸುಳ್ಳು ಆಶ್ವಾಸನೆಯನ್ನೋ ಕೊಟ್ಟು ನುಸುಳಿಕೊಂಡರಾಯಿತು ಎಂಬ ಭಾವನೆ ಇಲಾಖೆಯದು. ನಂತರ ಭೂಪಕೇಳೆಂದಾ. . .!
ಮೌಲ್ಯಮಾಪನ ಬಹಿಷ್ಕಾರದ ಸಂದರ್ಭಗಳಲ್ಲೆಲ್ಲ ಕೇಳಿಬರುವ ಒಂದು ಆಕ್ಷೇಪ, 'ಈ ಮಾಸ್ತರರಿಗೆ ಮುಷ್ಕರಕ್ಕೆ ಈ ಸಂದರ್ಭವೇ ಆಗಬೇಕೇ? ಮಕ್ಕಳಿಗೆ ತೊಂದ್ರೆ ಆಗೋದು ಇವರಿಗೆ ತಿಳಿಯೂದಿಲ್ವೇ?' ಎಂಬುದು. ಹೌದು, ಮೌಲ್ಯಮಾಪನದಲ್ಲಿ ಮುಷ್ಕರ ಮಾಡಿದರೆ ಮಕ್ಕಳ ಮತ್ತು ಪಾಲಕರ ಎದೆಬಡಿತ ಹೆಚ್ಚಾಗುತ್ತದೆ. ಅವರು ಇದನ್ನು ಪ್ರಶ್ನಿಸುವುದು ಸಹಜ. ಆದರೆ ಸರ್ಕಾರ ಕೂಡ ಈ ನೆಲೆಯಲ್ಲಿ ಇದನ್ನು ಪ್ರಶ್ನಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಎಲ್ಲಾ ಕಾಲೇಜುಗಳಲ್ಲಿ ವಿಷಯ ಬೋಧಕರನ್ನು ಸಕಾಲದಲ್ಲಿ ನಿಯೋಜಿಸಲಾಗದ ಸರ್ಕಾರ, ಮೂಲಭೂತ ಸೌಲಭ್ಯ ಒದಗಿಸಲಾಗದ ಸರ್ಕಾರ, ಹೋಗಲಿ, ಪರೀಕ್ಷೆಯ ಹಂಗಾಮಿನಲ್ಲಿ ವಿದ್ಯುತ್ ಪೂರೈಸಲಾಗದ ಸರ್ಕಾರ ವಿದ್ಯಾರ್ಥಿಗಳಿಗಾಗುವ ತೊಂದರೆ ಬಗ್ಗೆ ಹೇಳುವುದೇನಿದೆ? ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ಮುಷ್ಕರಕ್ಕೆ ಅದರದ್ದೇ ಆದ ಒಂದು ಪರಂಪರೆ ಮತ್ತು ತರ್ಕ ಇರುತ್ತದೆ. ಯಾವುದೇ ಮುಷ್ಕರಕ್ಕೆ ಆಯ್ದುಕೊಳ್ಳುವ ಕಾಲ ಕೂಡ ಮಹತ್ವದ್ದಾಗಿರುತ್ತದೆ. ಇದೊಂದು ವ್ಯಾವಹಾರಿಕ ಜ್ಞಾನ. ಲೌಕಿಕಕ್ಕೆ ವಿಮುಖರಾದ ಆಶ್ರಮವಾಸಿಗಳಲ್ಲದ ಶಿಕ್ಷಕರೂ ಇದನ್ನು ಅನುಸರಿಸುತ್ತಿದ್ದಾರೆ ಅಷ್ಟೇ. ವರ್ಷದ ಪ್ರಾರಂಭದಲ್ಲಿ ಕಾಲೇಜು ಪ್ರವೇಶ ಪ್ರಕ್ರಿಯೆಯನ್ನು ಬಹಿಷ್ಕರಿಸುವುದು, ಬೋಧನೆ ಬಹಿಷ್ಕಾರ ಇತ್ಯಾದಿ ಯಾವುದೂ ಕಾರ್ಯಸಾಧುವಾಗುವುದಿಲ್ಲ ಎಂಬುದನ್ನು ಶಿಕ್ಷಕರು ಮನಗಂಡಿದ್ದಾರೆ. ಮುಷ್ಕರ ಸಂಘಟನೆ ಹಾಗೂ ಪರಿಣಾಮವನ್ನು ಮುಷ್ಕರ ನಡೆಸುವವರು ನೋಡಿಯೇ ನೋಡುತ್ತಾರಲ್ಲ. ಹಾಗೆ ನೋಡಿದರೆ, ಯಾವ ಮುಷ್ಕರವೂ ಜನ ಸ್ನೇಹಿಯಲ್ಲ. ಯಾವ ಮುಷ್ಕರಕ್ಕೂ ಜನರಿಗೆ ತೊಂದರೆಯೇ ಆಗದಂಥ ಕಾಲವೊಂದಿಲ್ಲ. ತೊಂದರೆಯ ಪ್ರಮಾಣದಲ್ಲಿ ತೊಂದರೆಗೊಳಗಾಗುವ ಜನವರ್ಗದಲ್ಲಿ ವ್ಯತ್ಯಾಸ ಅಷ್ಟೇ.
ಕೊನೆಯದಾಗಿ, ಮಕ್ಕಳಿಗೆ ಮಾದರಿಯಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುವ ಶಿಕ್ಷಕರು ಮುಷ್ಕರ ಮಾಡುವುದೆಂದರೇನು ಎಂಬ ಪ್ರಶ್ನೆ. ಇದಕ್ಕೆ ಸಾಮಾನ್ಯ ಉತ್ತರವೆಂದರೆ, ಕೇವಲ ಶಿಕ್ಷಕರದ್ದು ಅಂತಲ್ಲ, ಯಾರದೇ ನ್ಯಾಯಯುತ ಬೇಡಿಕೆ ಕೂಡ ಮುಷ್ಕರದ ವಿನಾ ಈಡೇರದ ಸನ್ನಿವೇಶದಲ್ಲಿ ಇಂದು ನಾವಿರುವುದು ದುರದೃಷ್ಟಕರ. ಜೊತೆಗೆ ಸಂಬಂಧಿಸಿದ ಸಚಿವರಿಗೆ ದಿಲ್ಖುಷ್ ಮಾಡಿದರೆ ಬೇಕು- ಬೇಕಷ್ಟು ಔದಾರ್ಯ ಕೂಡ ಸಿಗುತ್ತದೆ. ಇನ್ನು ಶಿಕ್ಷಕರು ಮುಷ್ಕರದಲ್ಲಿ ಭಾಗವಹಿಸುವ ನೈತಿಕ ಪ್ರಶ್ನೆ. ಇಂದು ನೈತಿಕತೆಯ ಬಗ್ಗೆ ಮಾತಾಡುವುದೇ ಕಷ್ಟ. ಅಷ್ಟೇ ಅಲ್ಲ, ವಿವಾದಾತ್ಮಕ ಕೂಡ. ಸೋಜಿಗವೆಂದರೆ, ಈ ರೀತಿ ಮಾತಾಡುವವರು ನೈತಿಕತೆ/ಸಂಸ್ಕೃತಿ ಇತ್ಯಾದಿಗಳನ್ನು...ಹೋಲ್ಸೇಲ್ ಆಗಿ ಶಿಕ್ಷಕರಿಗೆ ವಹಿಸಿ ನಿಶ್ಚಿಂತೆಯಿಂದ ಇರುವಂತೆ ಕಾಣುತ್ತದೆ. Teachers are in their schools/ And all is right with the world ಎಂಬ ತೃಪ್ತ ಭಾವವೇ ತಮಾಷೆಯೆನ್ನಿಸುತ್ತದೆ. ಅವರು ಶಿಕ್ಷಕರ ಮೇಲಿಟ್ಟ ವಿಶ್ವಾಸಕ್ಕೆ ಕೃತಜ್ಞತೆ ಅರ್ಪಿಸುತ್ತಲೇ, ಶಿಕ್ಷಕರೂ ನೈತಿಕತೆಯ ರಕ್ಷಣೆಯಲ್ಲೋ ಪುನರುತ್ಥಾನದಲ್ಲೋ ಯಶಸ್ವಿಯಾಗಲೆಂದು ಹಾರೈಸೋಣ. ಆದರೆ ಶಿಕ್ಷಕರನ್ನು ಒಳಗೊಂಡು ನಾವೆಲ್ಲ ಸೇರಿ ಈಗಾಗಲೇ ನೀತಿಯೆಂಬ ಮರದ ಬುಡಕ್ಕೇ ಯಥಾಶಕ್ತಿ ಕೊಡಲಿ ಬೀಸಿ ಅದನ್ನು ಬುಡಮೇಲು ಮಾಡಿದ್ದೇವೆ. ಈಗ ಆ ಮರದ ಯಾವುದೋ ಒಂದು ಟೊಂಗೆ ಹಸಿರಾಗಿದ್ದು ಇಡೀ ಮರಕ್ಕೆ ಜೀವ ತುಂಬಲಿ ಅಂದರೆ ಹೇಗೆ? ಶಿಕ್ಷಕ ಕೂಡ ಸಮಾಜದ ಒಂದು ಅಂಗ, ಉತ್ಪನ್ನ. ಶಾಲೆಯ ಕಿಟಕಿಗಳಿಂದ ಸಮಾಜದ ಗಾಳಿ ಕೂಡ ಒಳಬರುತ್ತಿಲ್ಲ. ಆದರೂ ಇಲ್ಲಿಯವರೆಗೆ ಶಿಕ್ಷಕರು ಮುಷ್ಕರ ವಾಪಸು ಪಡೆದದ್ದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿಗಳಿಗಾಗುವ ಅನಾನುಕೂಲ ಮತ್ತು ಸರ್ಕಾರದ ಪೊಳ್ಳು ಭರವಸೆ ಎಂಬುದನ್ನು ಗಮನಿಸಬೇಕು.
-ಡಾ.ವಿ.ಎನ್.ಹೆಗಡೆ, ಧಾರವಾಡ