ನ್ಯಾಯಾಂಗದ ನೇಮಕಗಳಿಗೆ ಬೇಕಿದೆ ಪಾರದರ್ಶಕತೆ
ಭಾರತವೀಗ ಸ್ವತಂತ್ರಗೊಂಡು 65 ವರ್ಷಗಳೇ ಆದವು. ಈ ಆರೂವರೆ ದಶಕಗಳಲ್ಲಿ ದೇಶದ ಅತಿದೊಡ್ಡ ಸಾಧನೆ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ ನಾನು ಸ್ವಲ್ಪವೂ ತಡವರಿಸದೇ ಹೇಳುತ್ತೇನೆ: ಪ್ರಜಾಪ್ರಭುತ್ವ.
ಬಡತನ, ಅನಕ್ಷರತೆ ಹಾಗೂ ಅಪೌಷ್ಟಿಕತೆಗಳ ಸಮಸ್ಯೆಯಿಂದ ಮೇಲೆ ಬರುವುದು ನಮಗಿನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಪಾಶ್ಚಿಮಾತ್ಯ ವಿದ್ವಾಂಸರ ಟೀಕೆಗಳು ಏನೇ ಇದ್ದಿರಲಿ, ವಸಾಹತುಶಾಹಿ ಆಡಳಿತದಿಂದ ಹೊರಬಂದ ಎಲ್ಲ ರಾಷ್ಟ್ರಗಳ ಪೈಕಿ ಬಹುಪಕ್ಷಗಳ ಬಹಳ ಪ್ರಜ್ವಲಿತ ಪ್ರಜಾಪ್ರಬುತ್ವವಾಗಿ ಉಳಿದುಕೊಂಡಿರುವ ಹೆಗ್ಗಳಿಕೆ ಭಾರತದ್ದಾಗಿದೆ. 1975-77ರ ನಡುವಿನ ತುರ್ತುಪರಿಸ್ಥಿತಿಯ ಎರಡು ವರ್ಷಗಳು ಇದಕ್ಕೆ ಅಪವಾದವಾಗಿದ್ದಿರಬಹುದು. ಆ ಸಮಯದಲ್ಲಿ ಪ್ರಜಾಪ್ರಭುತ್ವದ ಅಡಿ ನೀಡಲಾದ ಕಾಯ್ದೆಯ ಪಾರಮ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳೆಲ್ಲ ಗ್ರಹಣ ಹಿಡಿಸಿಕೊಂಡು ಕುಳಿತಿದ್ದವು.
ಚುನಾವಣಾ ಅಕ್ರಮಗಳನ್ನು ಗಣನೆಗೆ ತೆಗೆದುಕೊಂಡು 1975ರಲ್ಲಿ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಆಯ್ಕೆ ಅಸಿಂಧು ಎಂದು ಸಾರಿದ್ದಲ್ಲದೇ ಅವರನ್ನು ಆರು ವರ್ಷಗಳ ಕಾಲ ಸ್ಪರ್ಧಿಸದಂತೆ ನಿಷೇಧ ಹೇರಿದಾಗ, ಅಧಿಕಾರದಲ್ಲಿದ್ದವರು ರಚಿಸಿದ ವ್ಯೂಹವು ಸಂವಿಧಾನ ನಿರ್ಮಾತೃರ ಪ್ರಜಾಪ್ರಭುತ್ವದ ಆಶಯಗಳನ್ನೆಲ್ಲ ಬದಿಗೆ ಸರಿಸಿತ್ತು.
ಹೊಸದೆಹಲಿಯಿಂದ ಪ್ರಕಟವಾಗುತ್ತಿದ್ದ ಪಂಡಿತ್ ನೆಹರು ಅವರ ಸಂಸ್ಥಾಪಕತ್ವದ 'ನ್ಯಾಷನಲ್ ಹೆರಾಲ್ಡ್'ನಲ್ಲಿ ಆಫ್ರಿಕಾದ ತಾಂಜೇನಿಯಾದಂಥ ರಾಷ್ಟ್ರಗಳನ್ನು ಉದಾಹರಿಸುತ್ತ ದೇಶಕ್ಕೆ ಏಕಪಕ್ಷ ಆಡಳಿತವೇ ಸೂಕ್ತ ಎಂದು ಸಂಪಾದಕೀಯವನ್ನು ಬರೆಯಲಾಯಿತು. ಅದು ಹೀಗಿತ್ತು-
'ವೆಸ್ಟ್ಮಿನಿಸ್ಟರ್ ಮಾದರಿಯೇ ಅತ್ಯುತ್ತಮವಾದದ್ದು ಎಂದೇನೂ ಇಲ್ಲ. ಪ್ರಜಾಪ್ರಭುತ್ವದ ಹೊರಮಾದರಿ ಹೇಗೆಯೇ ಇದ್ದರೂ ಜನರ ಧ್ವನಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದನ್ನು ಆಫ್ರಿಕಾದ ದೇಶಗಳು ತೋರಿಸಿಕೊಟ್ಟಿವೆ. ಬಲಿಷ್ಠ ಕೇಂದ್ರವಿರಬೇಕು ಎನ್ನುವುದರ ಮೂಲಕ ಪ್ರಧಾನಿಯವರು ಭಾರತೀಯ ಪ್ರಜಾಪ್ರಭುತ್ವದ ಬಲವನ್ನು ತೋರಿಸಿದ್ದಾರೆ. ಕೇಂದ್ರವು ದುರ್ಬಲವಾಗಿದ್ದರೆ ದೇಶದ ಏಕತೆ, ಸಮಗ್ರತೆ ಹಾಗೂ ಸ್ವಾತಂತ್ರ್ಯದ ಅಸ್ತಿತ್ವವೇ ಮುಸುಕಾಗುತ್ತದೆ. ಇಂದಿರಾ ಅವರು ಬಹಳ ಮುಖ್ಯ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಮುಂದುವರಿಯದಿದ್ದರೆ ಪ್ರಜಾಪ್ರಭುತ್ವ ಮುಂದುವರಿಯಬಲ್ಲುದೇ?'
ತುರ್ತು ಪರಿಸ್ಥಿತಿಯಲ್ಲಿ ಆದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಎರಡು ಶತಮಾನಗಳ ಬ್ರಿಟಿಷ್ ಆಳ್ವಿಕೆಯಲ್ಲೂ ಆಗಿರಲಿಲ್ಲ. 1,10,806 ಮಂದಿ ಜೈಲು ಪಾಲಾದರು. ಆ ಪೈಕಿ 253 ಮಂದಿ ಪತ್ರಕರ್ತರಿದ್ದರು. ಇವೆಲ್ಲದರ ನಡುವೆಯೂ ಪ್ರಜಾಪ್ರಭುತ್ವ ಉಳಿದುಕೊಂಡಿದ್ದಕ್ಕೆ ನಾನು ಎರಡು ಅಂಶಗಳಿಗೆ ಶ್ರೇಯಸ್ಸು ನೀಡುತ್ತೇನೆ: ನ್ಯಾಯಾಂಗ ಹಾಗೂ 1977ರಲ್ಲಿ ಇನ್ನೆಂದೂ ತುರ್ತು ಪರಿಸ್ಥಿತಿ ಹೇರುವ ಬಗ್ಗೆ ಯೋಚಿಸದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿದ ಮತದಾರ ವರ್ಗ.
ಮೆಂಟೆನನ್ಸ್ ಆಫ್ ಇಂಟರ್ನಲ್ ಸೆಕ್ಯುರಿಟಿ ಆ್ಯಕ್ಟ್ ಎಂಬ ಕಾಯಿದೆ ಅಡಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ಪ್ರಮುಖ ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು. ಹೀಗೆ ಬಂಧಿತರಾದವರ ಪಟ್ಟಿಯಲ್ಲಿ ಜಯಪ್ರಕಾಶ ನಾರಾಯಣ, ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ವಾಜಪೇಯಿ ಇದ್ದರು. ಒಟ್ಟಿನಲ್ಲಿ ಈ ಮೀಸಾ ಕಾಯ್ದೆ ಅಡಿ ಬಂಧಿತರಾಗಿದ್ದವರ ಸಂಖ್ಯೆ 34, 988. ಮೀಸಾದಲ್ಲಿ ಬಂಧನವಾದವರ ಬಿಡುಗಡೆಗೆ ಮತ್ಯಾವ ಆಯಾಮವನ್ನೂ ಪರಿಗಣಿಸಬಾರದು ಎಂದು ನಿಯಮ ಹೇಳುತ್ತಿತ್ತು. ಮೀಸಾದ ಅಡಿ ಬಂಧಿತರಾದವರೆಲ್ಲರೂ ತಮ್ಮ ತಮ್ಮ ರಾಜ್ಯಗಳ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅಲ್ಲೆಲ್ಲ ಸರ್ಕಾರ ಪ್ರತಿಪಾದಿಸಿದ್ದು ಒಂದೇ ಅಂಶ- ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನೆಲ್ಲ ರದ್ದುಗೊಳಿಸಲಾಗಿರುತ್ತದೆಯಾದ್ದರಿಂದ ಹೇಬಿಯಸ್ ಕಾರ್ಪಸ್ ಅರ್ಜಿ ಪರಿಗಣಿಸುವಂತೆಯೇ ಇಲ್ಲ ಎಂದು. ಆದರೆ ಹೆಚ್ಚಿನ ಎಲ್ಲ ಹೈಕೋರ್ಟ್ಗಳು ಸರ್ಕಾರದ ಈ ಆಕ್ಷೇಪವನ್ನು ಬದಿಗೆ ಒತ್ತಿ ಅರ್ಜಿದಾರರ ಪರವಾಗಿಯೇ ತೀರ್ಪಿತ್ತವು. ಇದರ ವಿರುದ್ಧ ಸರ್ಕಾರ ಸುಪ್ರೀಂಕೋರ್ಟ್ಗೆ ಹೋಗಿದ್ದಷ್ಟೇ ಅಲ್ಲ, ಈ ತೀರ್ಪು ನೀಡಿದ ನ್ಯಾಯಾಧೀಶರನ್ನೆಲ್ಲ ಶಿಕ್ಷಿಸಿತು. ನಾನು ಜೈಲಿನಲ್ಲಿ ಇದ್ದಾಗ ಬರೆಯುತ್ತಿದ್ದ ಟಿಪ್ಪಣಿಯನ್ನು ತಿರುವಿದರೆ ಅದರಲ್ಲಿ ಸರ್ಕಾರದ ವಿರುದ್ಧ ತೀರ್ಪಿತ್ತ ಕಾರಣಕ್ಕೆ ವರ್ಗಾವಣೆ ಶಿಕ್ಷೆಗೆ ಒಳಗಾದ 19 ನ್ಯಾಯಾಧೀಶರ ಪಟ್ಟಿ ಇದೆ.
ಡಿಸೆಂಬರ್ 16, 1975ರ ದಿನಾಂಕದಲ್ಲಿ ನನ್ನ ದಿನಚರಿ ಇಂಥದೊಂದು ಟಿಪ್ಪಣಿಯನ್ನೂ ಮಾಡಿದೆ: 'ಮೀಸಾ ಕೈದಿಗಳ ಪರವಾಗಿ ನಿರ್ಣಯ ಮಾಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರದ ಆಕ್ಷೇಪಣೆಯ ಅರ್ಜಿಯನ್ನು ಸುಪ್ರೀಂಕೋರ್ಟ್ ಆಲಿಸುತ್ತಿದೆ. ಇದರಲ್ಲಿ ನಮ್ಮ ಪ್ರಕರಣವೂ ಇದೆ. (ಬೆಂಗಳೂರಿನಲ್ಲಿ ಸಂಸದೀಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗಿದ್ದ ನಾವು ನಾಲ್ವರು ಸಂಸದರು ಬಂಧಿತರಾಗಿದ್ದೆವು). ಅಟಾರ್ನಿ ಜನರಲ್ ನಿರೇನ್ ಡೇ ಅವರಿಗೆ ಜಸ್ಟೀಸ್ ಖನ್ನಾ ಪ್ರಶ್ನಿಸಿದ್ದರು: ಸಂವಿಧಾನದ 21ನೇ ವಿಧಿ ವೈಯಕ್ತಿಕ ಸ್ವಾತಂತ್ರ್ಯದ ಕುರಿತಾಗಿ ಮಾತ್ರವಲ್ಲ, ಬದುಕುವ ಹಕ್ಕನ್ನೂ ಹೇಳುತ್ತದೆ. ಹಾಗಾದರೆ ಮೂಲಭೂತ ಹಕ್ಕುಗಳು ಮೊಟಕಾಗಿರುವುದರಿಂದ ಒಬ್ಬ ವ್ಯಕ್ತಿ ಸಾಯುವ ಸ್ಥಿತಿಯಲ್ಲಿದ್ದರೂ ಆತ ಪರಿಹಾರ ಬಯಸಬಾರದು ಎಂಬುದು ಅಟಾರ್ನಿ ಜನರಲ್ ಅವರ ನಿಲುವೇ? ಅದಕ್ಕೆ ನರೇನ್ ಅವರ ಉತ್ತರ: ನನ್ನ ಪ್ರಜ್ಞೆಯಲ್ಲಿ ಆ ತಕ್ಕಡಿ ಇದೆ. ಆದರೆ ಕಾನೂನು ಹೇಳುವುದು ಹೀಗೆ..'
ನಂತರ ಸುಪ್ರೀಂಕೋರ್ಟ್ನ ಹೆಚ್ಚಿನ ಜಡ್ಜ್ಗಳು ಆ ನಿರ್ಣಯ ತಪ್ಪು ಎಂದೇ ಹೇಳಿದರು. ಸಾರ್ವಜನಿಕವಾಗಿಯೂ ಈ ಅಭಿಪ್ರಾಯವನ್ನು ಸಾರುವುದಕ್ಕೆ ಹಿಂದೇಟು ಹಾಕಲಿಲ್ಲ. 2011ರಲ್ಲಿ ಸುಪ್ರೀಂಕೋರ್ಟ್ ಅಧಿಕೃತವಾಗಿ ಹೇಳಿತು- 1976ರ ಮ್ಯಾಜಿಸ್ಟ್ರೇಟ್ ಜಬಲ್ಪುರ್ ವರ್ಸಸ್ ಶಿವಕಾಂತ ಶುಕ್ಲಾ ಪ್ರಕರಣದಲ್ಲಿ ಸಾಂವಿಧಾನಿಕ ಬೆಂಚ್ನ ಅಭಿಮತ ತಪ್ಪಾಗಿತ್ತು ಹಾಗೂ ಆ ತೀರ್ಪು ದೇಶದ ಜನರ ಮೂಲಭೂತ ಹಕ್ಕನ್ನೇ ಉಲ್ಲಂಘಿಸಿತು. ಜಸ್ಟೀಸ್ ಖನ್ನಾ ಅವರ ಭಿನ್ನಮತದ ತೀರ್ಪೇ ಈ ನೆಲದ ಕಾನೂನಾಗಿದೆ.
ಈಗ ದೇಶದಲ್ಲಿ ಅತಿಹೆಚ್ಚು ಚರ್ಚೆಯಲ್ಲಿರುವ ಸಂಗತಿ ಎಂದರೆ ಭ್ರಷ್ಟಾಚಾರ. ಆದರೆ ಭ್ರಷ್ಟಾಚಾರದ ಎಲ್ಲ ಚರ್ಚೆಗಳೂ ಕಾರ್ಯಾಂಗ ಅಂದರೆ ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗದ ಸುತ್ತಲೇ ಇವೆ. ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರವನ್ನು, ಅದರಲ್ಲೂ ಉನ್ನತ ಹಂತದಲ್ಲಿರುವ ಭ್ರಷ್ಟಾಚಾರವನ್ನು ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ.
ಆದರೆ ಈ ನಿಟ್ಟಿನಲ್ಲೂ ಬದಲಾವಣೆಗಳು ಆಗುತ್ತಿವೆ. ಜಸ್ಟೀಸ್ ರುಮಾ ಪಾಲ್ ಅವರು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ. ನವೆಂಬರ್ 2011ರಲ್ಲಿ ಸ್ಮಾರಕ ದತ್ತಿ ಉಪನ್ಯಾಸವೊಂದನ್ನು ನೀಡುತ್ತ ಅವರು, 'ನ್ಯಾಯಾಧೀಶರ ಸಪ್ತಮಹಾಪಾತಕಗಳು' ಎಂಬ ಬಗ್ಗೆ ಮಾತನಾಡಿದರು. ಆ ಏಳು ಪಾತಕಗಳ ಪೈಕಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರವು ನ್ಯಾಯಾಂಗದ ವಿಶ್ವಾಸಾರ್ಹತೆ ಹಾಗೂ ಸ್ವತಂತ್ರ ಧೋರಣೆಯ ಕುರಿತೂ ಪ್ರಶ್ನೆಗಳನ್ನು ಎತ್ತಿದೆ ಎಂದು ಅವರು ಪ್ರಸ್ತಾಪಿಸಿದರು. ಇತ್ತೀಚೆಗಂತೂ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಗಳಾಗಬೇಕು ಎಂಬ ಮಾತು ಕೇಳಿಬರುತ್ತಿದೆ. ರುಮಾ ಪಾಲ್ ಅವರು ಮಾತನಾಡುವಾಗ, ತಾವು 'ನಿವೃತ್ತಿಯ ಸುರಕ್ಷಿತ ಸ್ವರ್ಗ'ದಲ್ಲೇ ನಿಂತು ಮಾತನಾಡುತ್ತಿರುವುದಾಗಿ ಹೇಳಿದರು. ತುರ್ತು ಪರಿಸ್ಥಿತಿಯಂಥ ಸಂದರ್ಭ ಮತ್ತೆ ಎದುರಾದರೆ ನ್ಯಾಯಾಂಗ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಈಗಲೂ ನನಗೆ ಕಾಡುತ್ತದೆ. ಸರ್ಕಾರದ ತೀರ್ಮಾನಕ್ಕೆ ವಿರುದ್ಧವಾಗಿ ನ್ಯಾಯ ನಿರ್ಣಯ ಮಾಡಿ ವರ್ಗಾವಣೆಯ ಶಿಕ್ಷೆಗೆ ಒಳಗಾದ ಆ 19 ನ್ಯಾಯಮೂರ್ತಿಗಳ ಧೈರ್ಯವನ್ನು ಈಗಿನವರು ತೋರಿಸಿಯಾರೇ? ನನಗೇಕೋ ಅನುಮಾನವಿದೆ!
ನ್ಯಾಯಾಂಗದ ನೇಮಕಗಳು ಹಾಗೂ ನ್ಯಾಯಾಧೀಶರ ವರ್ಗಾವಣೆಯ ವಿಷಯವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ತಂಡ ನಿರ್ವಹಿಸುತ್ತದೆ. ಕಲೀಜಿಯಂ ವ್ಯವಸ್ಥೆ ಎಂದು ಕರೆಯಲಾಗುವ ಇದು 1993,1994 ಹಾಗೂ1998ರ ಮೂರು ತೀರ್ಪುಗಳನ್ನು ಆಧರಿಸಿದ್ದಾಗಿದೆ. ಇದರಲ್ಲಿ ಮೊದಲನೇ ಮತ್ತು ಎರಡನೇ ತೀರ್ಪನ್ನು ನೀಡಿದವರು ಆಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಜೆ. ಎಸ್. ವರ್ಮಾ. ಆದರೆ ನಂತರ 2008ರಲ್ಲಿ ಫ್ರಂಟ್ಲೈನ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು- ತಮ್ಮ ತೀರ್ಪನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆಯೆಂದೂ, ನಿರ್ದಿಷ್ಟ ಚೌಕಟ್ಟಿಗೆ ಮಾತ್ರ ಅನ್ವಯಿಸಬಹುದಾಗಿದ್ದ ಅದನ್ನು ತಪ್ಪಾಗಿ ಬಳಕೆ ಮಾಡಿಕೊಂಡಿರುವುದರಿಂದ ಪರಾಮರ್ಶೆಗೆ ಅವಕಾಶವಿದೆ ಎಂದಿದ್ದರು. ಇದನ್ನೇ ಉಲ್ಲೇಖಿಸಿದ ಕಾನೂನು ಆಯೋಗವು ಹೀಗೆ ಹೇಳಿದೆ- 'ಭಾರತ ಸಂವಿಧಾನದ ವಿಧಿ 124(2) ಮತ್ತು 217 (1) ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್ಗಳ ನೇಮಕಕ್ಕೆ ಉತ್ತಮ ವ್ಯವಸ್ಥೆ ಒದಗಿಸಿವೆ. ಇಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಮತೋಲನ ಸಾಧಿಸಲಾಗಿದೆ. ಇದನ್ನೇ ಮರು ಅನುಷ್ಠಾನಕ್ಕೆ ತರುವುದು ಸೂಕ್ತ.'
ಪ್ರಜ್ವಲಿತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮಲ್ಲಿ ಜಡ್ಜ್ಗಳ ಆಯ್ಕೆ ಪಾರದರ್ಶಕವಾಗಿ, ಅರ್ಹತೆಯ ಆಧಾರದಲ್ಲಿ ಆಗಬೇಕು ಎಂಬ ಸಹಜ ನಿರೀಕ್ಷೆ ಇದೆ. ಆದರೆ ಜಸ್ಟೀಸ್ ರುಮಾ ಪಾಲ್ ಹೇಳುವಂತೆ, 'ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯು ಇವತ್ತಿಗೂ ರಹಸ್ಯವಾಗಿದೆ.' ಈ ಗೌಪ್ಯವು ಬಹಳಷ್ಟು ಸಾರಿ ತಪ್ಪು ನೇಮಕಗಳಿಗೆ ಹಾಗೂ ಸ್ವಜನಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.
-ಎಲ್ ಕೆ ಆಡ್ವಾಣಿ
anisikeprabha@gmail.com