ಅಂಕಣಗಳು

ಐದು ವರ್ಷಗಳ ಸಾರಾಂಶ ಇಷ್ಟೇ...

19 ನೇ ವಿಧಾನಸಭಾ ಚುನಾವಣೆಗೆ ದಿನ ನಿಗದಿಯಾಗಿದ್ದು ನೀತಿ ಸಂಹಿತೆಯ ಬಿಗಿ ಪಟ್ಟು ನಮ್ಮ ರಾಜಕಾರಣಿಗಳ ಚುನಾವಣಾ ಪೂರ್ವ ಸಿದ್ಧತೆಯ ಮೇಲೆ ಕಣ್ಗಾವಲನ್ನಿಟ್ಟಿದೆ. ಐದು ವರ್ಷಗಳ ಸುದೀರ್ಘ ಅವಧಿಯ ನಮ್ಮನ್ನಾಳುವ ಅಧಿಕಾರವನ್ನು ಪ್ರತಿನಿಧಿಗಳಿಗೆ ಕೊಟ್ಟು ತಮ್ಮ ಅಭ್ಯುದಯದ ಆಶಯದೊಂದಿಗೆ ಕಾತರರಾಗಿರುತ್ತಾರೆ. ಆದರೆ ನಮ್ಮನ್ನಾಳುವ ಈ ಪ್ರಭು ಸಂಕುಲಕ್ಕೆ ಚುನಾವಣೆಯ ಗೆಲುವಿಗೆ ಸನ್ನದ್ಧರಾಗಲು ಅವಶ್ಯ ಹಾಗೂ ಅತ್ಯಂತ ಪ್ರಮುಖವಾಗುವುದು ಚುನಾವಣಾ ಪೂರ್ವದ ಚಟುವಟಿಕೆಯ ಈ ಪ್ರಕ್ಷುಬ್ಧ ದಿನಗಳೇ ಎನ್ನುವುದು ನಮ್ಮ ಬಹುನಿರೀಕ್ಷಿತ ಪ್ರಜಾಪ್ರಭುತ್ವ  ವ್ಯವಸ್ಥೆಯ ಒಂದು ವ್ಯಂಗ್ಯ. ಇತ್ತೀಚೆಗೆ ನಡೆದ ನಗರ/ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾದ ಸಂದರ್ಭದಲ್ಲಿ ಸಿದ್ಧತೆಗೆ ಸಮಯಾವಕಾಶದ ಕೊರತೆಯ ಪಿಳ್ಳೆನೆವ ಹಿಡಿದುಕೊಂಡು ಚುನಾವಣೆಯನ್ನೇ ಮುಂದೂಡುವ ವ್ಯರ್ಥ ಪ್ರಯತ್ನಕ್ಕಿಳಿದರು.  
 ಸೇವೆಗೆಂದೇ ಇರುವ ಮತ್ತು ಸಮಾಜ ಸೇವೆಯ ಬಹುಮುಖ್ಯ ಉದ್ದೇಶದೊಂದಿಗೇ(?) ರಾಜಕೀಯಕ್ಕಿಳಿದಿರುವ ಇವರುಗಳು ತಯಾರಿಗಾಗಿಯೇ ಅವಧಿಯ ಅಗತ್ಯ ಇದೆ ಎಂದು ಬೊಬ್ಬಿರಿಯುತ್ತಾರೆ ಎಂದರೆ ಅವರ ಮಾತುಗಳ ಒಳಾರ್ಥ ಆಮಿಷ, ವ್ಯರ್ಥಆಶ್ವಾಸನೆ, ಜಾತಿಬಲ ಮತ್ತು ಸತ್ವ ರಹಿತ ಪ್ರಚಾರಗಳ ಕೀಳು ಮಟ್ಟದ ತಂತ್ರಗಾರಿಕೆ ಬಳಸಿ ಪ್ರಜೆಗಳನ್ನು ಯಾಮಾರಿಸುವುದರೊಂದಿಗೆ ಚುನಾವಣಾ ಅಖಾಡಕ್ಕೆ ಅಕ್ರಮದ ಮಸಿ ಬಳಿಯುವ ಹುನ್ನಾರವಲ್ಲದೆ ಮತ್ತೇನು ಅಲ್ಲ!  
 ಇದೀಗ ಇನ್ನೊಂದು ಮಹಾಸಮರಕ್ಕೆ ದಿನಗಣನೆ ಆರಂಭವಾಗಿದ್ದು, ಅದರ ಜೊತೆಜೊತೆಗೆ ಬಿರುಸಿನ ಚಟುವಟಿಕೆಗಳೂ ಕೂಡಾ ಗರಿಗೆದರಲಾರಂಭಿಸಿವೆ. ಅನುಭವಿಸಿದ ಅಧಿಕಾರದ 5 ವರ್ಷಗಳ ಅವಧಿಯನ್ನು ಪೂರಕವಾಗಿ ಬಳಸಿಕೊಳ್ಳಬಹುದಾದಂತಹ ಯಾವುದೇ ಘನಕಾರ್ಯವನ್ನು ಇವರುಗಳು ಮಾಡದೇ ಇರುವುದರಿಂದಲೇ ಕೊನೆ ದಿನಗಳ ಸಿದ್ಧತೆಯೇ ಚುನಾವಣಾ ದಿಕ್ಸೂಚಿ ಎಂಬ ಭ್ರಮೆ ನಮ್ಮ ರಾಜಕಾರಣಿಗಳಲ್ಲಿ ಉಳಿದುಬಿಟ್ಟಿದೆ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳ ಚುನಾವಣಾ ಪ್ರಕ್ರಿಯೆಗಳು ಮತ್ತು ಅಧ್ಯಕ್ಷರಾಗಬಯಸುವ ಅಭ್ಯರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಚಾರ ತಂತ್ರಗಳು ಚುನಾವಣೆಯನ್ನು ಅರ್ಥಪೂರ್ಣಗೊಳಿಸುತ್ತವೆ. ಆದರೆ ನಮ್ಮಲ್ಲಿನ ಚುನಾವಣಾ ಪೂರ್ವ ಕಸರತ್ತುಗಳು ಭ್ರಮನಿರಸನಗೊಳಿಸುವ ನಕಾರಾತ್ಮಕ ತಂತ್ರಗಳಾಗಿವೆ. ಏನೇ ಆದರೂ ನಾವು ನಮ್ಮ ಪ್ರಭುಗಳನ್ನು ಆಯ್ಕೆಮಾಡುವ ಬಹುಮುಖ್ಯ ಪ್ರಕ್ರಿಯೆಯೊಂದರ ಭಾಗವಾಗುವತ್ತ ಸನ್ನದ್ಧರಾಗುತ್ತಿದ್ದೇವೆ.
ದಿನಾಂಕ 30.5.2008ರ ಶುಕ್ರವಾರದಂದು ಹಸಿರು ಶಾಲನ್ನು ಹೊದ್ದು ಪ್ರಮಾಣವಚನ ಸ್ವೀಕಾರ ಮಾಡಿದ್ದರಿಂದ ಇಂದಿನವರೆಗಿನ ಊಹಿಸಲಸಾಧ್ಯವಾದ, ಯಾರೂ ಕಲ್ಪನೆಯೇ ಮಾಡಿಕೊಳ್ಳದ ರಾಜಕೀಯ ಘಟನಾವಳಿಗಳು ನಾಗರಿಕರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿವೆ. ಅಸಹಾಯಕತೆಯ ನೀರವತೆಯಲ್ಲಿ ಕಂಗೆಟ್ಟು ಹೋಗುವಂತೆ ಮಾಡಿವೆ. ಇವುಗಳನ್ನೆಲ್ಲ ನೋಡಿಯೂ ಕೈಕೈ ಹಿಸುಕಿಕೊಂಡು ಕೋಪವನ್ನು ಅರಗಿಸಿಕೊಂಡೆವೇ ಹೊರತು ಮತ್ತೇನು ಮಾಡಲು ನಮ್ಮಿಂದ  ಸಾಧ್ಯವಾಗಲಿಲ್ಲ. ನಾವು ಎಲ್ಲದಕ್ಕೂ ಮೂಕಪ್ರೇಕ್ಷಕರಾಗಿ ಉಳಿದುಕೊಂಡೆವು. ನಮ್ಮ ಎದೆಯ ಮೇಲೆಯೇ ಹತ್ತಿ ಕುಳಿತು ನಮ್ಮ ಗೋರಿ ತೋಡ ಹೊರಟವರ ಮುಂದೆ ನಾವು ನಿರ್ಭಾವುಕರಾಗಿ ಕಳೆದುಹೋಗಬೇಕಾಯಿತಲ್ಲ, ಅದೆಲ್ಲ 5 ವರ್ಷಗಳ ಹಿಂದೆ ನಾವು ಮಾಡಿದ ತಪ್ಪು ಆಯ್ಕೆಯ ಪ್ರಾಯಶ್ಚಿತ್ತವಲ್ಲದೆ ಬೇರೇನೂ ಅಲ್ಲ!
 ಹಾಗೇ ಸುಮ್ಮನೆ ಒಮ್ಮೆ ಕಳೆದೈದು ವರ್ಷಗಳ ಕಡೆಗೆ ಅವಲೋಕನಪೂರಿತ ದೃಷ್ಟಿ  ಹಾಯಿಸಿದರೆ  ಒತ್ತರಿಸಿ ಬರುವ ನೆನಪುಗಳೆಲ್ಲಾ ನಮ್ಮನ್ನು ವಿಚಲಿತರನ್ನಾಗಿಸುತ್ತವೆ. ಕಳೆದ ಅವಧಿಯಲ್ಲಿ ನಮ್ಮನ್ನು ಆಳುವವರು ನಡೆದುಕೊಂಡ ರೀತಿ ನಮ್ಮ ಪಾಲಿಗೆ ದುಃಸ್ವಪ್ನ. ಅವುಗಳೆಲ್ಲಾ ನಮ್ಮ ಮನಃಪಟಲದಲ್ಲಿ ಹಾದು ಹೋಗುತ್ತಿದ್ದಂತೆ ಅಂದು ಅದುಮಿಟ್ಟುಕೊಂಡ ಸಿಟ್ಟು, ಸೆಡವು, ಆಕ್ರೋಶಗಳೆಲ್ಲಾ ಪುಟಿದೇಳುವುದರೊಂದಿಗೆ ಮುಯ್ಯಿ ತೀರಿಸಿಕೊಳ್ಳಬೇಕೆಂಬ ಭಾವ ಪ್ರಖರವಾಗಿ ವ್ಯಕ್ತವಾಗುತ್ತದೆ. ನರೇಂದ್ರ ಮೋದಿ ಮಾದರಿಯ ಆಡಳಿತದ ಭರವಸೆ ನೀಡಿದ್ದ ಸರ್ಕಾರ ಅಸ್ತಿತ್ವವನ್ನು ಉಳಿಸಿಕೊಳ್ಳಲೋಸುಗ ಹೆಣಗಾಡಿ ಹೈರಾಣಾಗಬೇಕಾದ ಸ್ಥಿತಿ ತಲುಪಿ ಕೊನೆಗೆ ಅಭಿವೃದ್ದಿ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪಕ್ಷದ ಚಟುವಟಿಕೆಗಳಲ್ಲೇ ಕಾಲಹರಣ ಮಾಡಿತೇ ಹೊರತು ಜನರ ಆಶಯಗಳಿಗೆ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಲಿಲ್ಲ. ಇವುಗಳಲ್ಲೇ ದಿನ ಕಳೆದ ಸರ್ಕಾರದ ಕೆಲವೇ ಕೆಲವು ಘಟನೆಗಳನ್ನು ಹೆಕ್ಕಿ ತೆಗೆದರೂ ಗತಿಸಿ ಹೋದ ಆಡಳಿತದ ದಿಗ್ದರ್ಶನ ಉಂಟಾಗುತ್ತದೆ. ಅಂತಹವುಗಳ ಪೈಕಿ ಕೆಲವೇ ಕೆಲವೊಂದಷ್ಟು...
 ಅಧಿಕಾರ ಹಿಡಿದ ಅಲ್ಪ ದಿನಗಳಲ್ಲೇ ಬೇಡಿಕೆ ನಿರತ ರೈತರಿಗೆ ಗುಂಡೇಟು.
 ಅಧಿಕಾರ ಹಂಚಿಕೆಯ ನಿರಂತರ ಸರ್ಕಸ್, ಪರಸ್ಪರ ಹೀನ ದೋಷಾರೋಪಗಳ ಅಸಮಾಧಾನ, ಆರ್ಭಟಗಳ ಆಡುಂಬೊಲ.
 ಪಕ್ಷಕ್ಕೆ ಆರ್ಥಿಕ ಸಹಕಾರ ನೀಡಿದ್ದ ಅಕ್ರಮಗಳಿಕೆಯ ಸರದಾರರಿಂದ ಸರ್ಕಾರವನ್ನೇ ಹೈಜಾಕ್ ಮಾಡುವ ನಡೆ.
 ಮಹಿಳಾ ಮಂತ್ರಿಯನ್ನು ಸಂಪುಟದಿಂದ ಕೈಬಿಡಬೇಕಾದಾಗ ಮುಖ್ಯಮಂತ್ರಿಗಳಿಂದ ಕಣ್ಣೀರಧಾರೆ.
 ಶಾಸಕರುಗಳ ರೆಸಾರ್ಟ್ ಯಾನ ಎಂಬ ಕೆಟ್ಟ ಸಂಪ್ರದಾಯದ ವೈಭವೀಕರಣ.
 ಅರ್ಥಹೀನ ಆಪರೇಷನ್ಗಳ ಮೂಲಕ ಅನೈತಿಕವಾಗಿ ಶಾಸಕರ ಸೆಳೆತ. ಅನಗತ್ಯ ಉಪಚುನಾವಣೆಗಳ ಹೇರಿಕೆ.
 ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳ ಕೊರಳಿಗೆ ಗಣಿ ಉರುಳು.
 ಅಕ್ರಮ ಭೂ ನೋಟಿಫಿಕೇಶನ್ ಮತ್ತು ಗಣಿ ಕಂಪೆನಿಗಳಿಂದ ಕಿಕ್ಬ್ಯಾಕ್ ವಸೂಲಿ ಪ್ರಕರಣ.
 ವಿಧಾನಸೌಧದಲ್ಲಿಯೇ ಲಂಚಸ್ವೀಕಾರ ಮತ್ತು ಲೋಕಾಯುಕ್ತ ದಾಳಿ
 ಸಚಿವದ್ವಯರಿಂದಲೇ ಲೈಂಗಿಕ ಹಗರಣ.
 ಪವಿತ್ರ ವಿಧಾನಸೌಧದಲ್ಲಿ ಕಲಾಪ ನಡೆಯುತ್ತಿರುವಾಗಲೇ ಪೋನೋಗ್ರಫಿ ವೀಕ್ಷಣೆ.
ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಇವುಗಳ ಪ್ರಭಾವದ ಮುಂದೆ ಅನುಷ್ಠಾನಕ್ಕೆ ತಂದ ಕೆಲವೇ ಕೆಲವು ಜನಪ್ರಿಯ ಯೋಜನೆಗಳು, ಅಭಿವೃದ್ದಿ ಕಾರ್ಯಗಳು ಎಂದಿಗೂ ನಗಣ್ಯ. ಇವುಗಳನ್ನೆಲ್ಲಾ ಕಂಡು ರೋಸಿಹೋಗಿರುವ ಜನತೆಯ ಮುಂದೆ ಒಂದೊಳ್ಳೆಯ ಅವಕಾಶ ಬಂದು ನಿಂತಿದೆ. ಅದುವೇ ಚುನಾವಣಾ ಪ್ರಕ್ರಿಯೆ. ಕಳೆದ ಅವಧಿಯಲ್ಲಿ ತಪ್ಪುಗಳನ್ನು ಮಾಡಿರುವ, ದುರಾಡಳಿತ ನೀಡಿರುವ, ಜನಾದೇಶವನ್ನು ಕಾಲ ಕಸದಂತೆ ನೋಡಿರುವ, ಜನರ ಒಳಿತಿಗಾಗಿ ಒಂದಿನಿತೂ ಸ್ಪಂದಿಸದ ಇದೇ ವ್ಯಕ್ತಿಗಳು ಮತ್ತೆ ನಮ್ಮೆಲ್ಲರ ಮನೆ ಬಾಗಿಲು ಬಡಿಯಲು ಸಿದ್ಧರಾಗಿದ್ದಾರೆ. ಯಾವ ಪಕ್ಷ, ಜಾತಿ, ವ್ಯಕ್ತಿ, ಆಮಿಷ, ಅಕ್ರಮಗಳಿಗೆ ಬಲಿಯಾಗದೇ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕಿಳಿದು ದ್ರೋಹ ಬಗೆದವರಿಗೆ ತಕ್ಕ ಶಾಸ್ತಿ ಮಾಡಲೇಬೇಕೆನ್ನುವ ಬದ್ಧತೆಯನ್ನು ಮತದಾರರು ಬೆಳೆಸಿಕೊಳ್ಳಬೇಕಾಗಿದೆ.
 ಆರೋಪಿಗಳೆನಿಸಿಕೊಂಡವರಿಗೂ ಈ ದೇಶದ ಸಂವಿಧಾನ ಚುನಾವಣೆಗೆ ಸ್ಪರ್ಧಿಸಲು ಅವಕಾಶಮಾಡಿಕೊಡುತ್ತದೆ. ನಮ್ಮ ಜವಾಬ್ದಾರಿಯುತ ನಾಗರಿಕರು ಅಂತಹವರನ್ನು ಆರಿಸಲಾರರು ಎಂಬ ನಂಬಿಕೆಯೇ ಸಂವಿಧಾನದಲ್ಲಿನ ಈ ಅವಕಾಶಕ್ಕೆ ಕಾರಣ. ಈ ಆಶಯಕ್ಕೆ ನಾವಿಂದು ಅರ್ಥ ತುಂಬಬೇಕಿದೆ. ಅದುಮಿಟ್ಟುಕೊಂಡ ರೋಷಕ್ಕೆ, ಒಳಿತನ್ನೇ ನಿರೀಕ್ಷಿಸುತ್ತಾ ಸಹಿಸಿಕೊಂಡ ಸೈರಣೆಗೆ, ಏನಾದರೂ ಮಾಡಲೇಬೇಕು ಎಂಬ ತಹತಹಿಕೆಗೆ, ವ್ಯವಸ್ಥೆ ಬದಲಾಗಬೇಕು ಎಂಬ ಬಯಕೆಗೆ, ಶಾಸ್ತಿ ಮಾಡಬೇಕೆಂಬ ದಿಟ್ಟತನಕ್ಕೆ ನ್ಯಾಯ ಒದಗಿಸಬೇಕಾದರೆ ನಮ್ಮ ಪ್ರಜೆಗಳು ಎಚ್ಚೆತ್ತುಕೊಳ್ಳಲೇಬೇಕು. ಪಕ್ಷಗಳ ಗ್ರಹಿಕೆಗೆ ವಿರುದ್ಧವಾಗಿ ನಮ್ಮ ಸ್ವಾಭಿಮಾನವನ್ನು ಗಣನೆಗೆ ತೆಗೆದುಕೊಂಡು ಮತದಾನ ಮಾಡಿದರೆ ರಾಜಕಾರಣಿಗಳ ನೈಜ ಜವಾಬ್ದಾರಿ ಅವರಿಗೆ ಅರಿವಾಗಬಹುದು. ಬನ್ನಿ, ಇದೀಗ ಚೆಂಡು ನಮ್ಮ ಮನೆ ಅಂಗಳದಲ್ಲಿದೆ. ನಿರ್ಧರಿಸುವವರು ನಾವು. ಪ್ರಜೆಗಳೇ ಪ್ರಭುಗಳು!

- ಸಂದೇಶ್. ಎಚ್ . ನಾಯ್ಕ್
ಕುಂದಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್