ಅಂಕಣಗಳು

ಸೌದಿಗೂ ಬಂತೇ ಕ್ರಾಂತಿಸಮಯ?

ಸೌದಿ ಅರೇಬಿಯಾದ ಶೇಕಡ 70ರಷ್ಟು ಜನಸಂಖ್ಯೆ 30ರ ಒಳಗಿನ ವಯೋವಾನದವರದ್ದು. ಆ ಪೈಕಿ ಶೇಕಡ 40ರಷ್ಟು ಯುವಜನ ನಿರುದ್ಯೋಗಿಗಳಾಗಿದ್ದಾರೆ. ರಾಜಾಡಳಿತದ ಆ ದೇಶ ನೀಡುವ ಅಂಕಿಅಂಶಗಳನ್ನೇ ಆಧಾರವಾಗಿ ಇಟ್ಟುಕೊಂಡರೂ ಕಾಲೇಜು ಡಿಗ್ರಿಯನ್ನು ಹೊಂದಿರುವುದು ನಿರುದ್ಯೋಗದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಅಂಶ ಬಹಿರಂಗವಾಗುತ್ತದೆ.
ಪರಿಣಾಮ? ರಾಜಾಡಳಿತದ ಈ ದೇಶದಲ್ಲಿ ಸರ್ಕಾರದ ವಿರುದ್ಧದ ಯಾವುದೇ ಟೀಕೆಗಳನ್ನು ದುರಹಂಕಾರಿ ಎಂದೇ ಪರಿಗಣಿಸಲಾಗುತ್ತದೆ ಹಾಗೂ ಬಂಡಾಯವನ್ನು ಶಿಕ್ಷಿಸಲಾಗುತ್ತದೆ. ಇವೆಲ್ಲದರ ನಡುವೆಯೂ ಸೌದಿ ಅರೇಬಿಯಾದ ಯುವಜನರ ಹತಾಶ ಮನೋಭಾವವು ಪ್ರತಿಭಟನೆಗಳಿಗೆ ಕಾವು ಕೊಡುತ್ತಿದೆ.
ಕಳೆದ ವಾರ ಸುಮಾರು ಸಾವಿರ ವಿದ್ಯಾರ್ಥಿನಿಯರು ಕಿಂಗ್ ಖಾಲಿದ್ ವಿಶ್ವವಿದ್ಯಾಲಯದ ಅಧ್ಯಕ್ಷನ ವಿರುದ್ಧ ಪ್ರತಿಭಟನೆ ಮಾಡಿದರು. ವಿವಿಯು ಸ್ವಚ್ಛತಾ ಕಾರ್ಯಗಳನ್ನೆಲ್ಲ ಮೊಟಕುಗೊಳಿಸಿ ತ್ಯಾಜ್ಯಗಳೆಲ್ಲ ಅಲ್ಲಲ್ಲೇ ಬಿದ್ದು ನಾರುವ ಪರಿಸ್ಥಿತಿ ಎದುರಾಗಿದ್ದೇ ಪ್ರತಿಭಟನೆಗೆ ಕಾರಣ. ಆ ಪ್ರತಿಭಟನೆಯನ್ನು ಲಾಠಿ ಮತ್ತು ಜಲಫಿರಂಗಿಗಳನ್ನು ಉಪಯೋಗಿಸಿ ಚದುರಿಸಲಾಯಿತು. ಈ ಸಂಘರ್ಷದಲ್ಲಿ 50 ಮಂದಿ ಮಹಿಳೆಯರಿಗೆ ಗಂಭೀರ ಸ್ವರೂಪದ ಗಾಯಗಳಾದವು. ಅದರ ಬೆನ್ನಲ್ಲೇ ಬೀದಿಗಿಳಿದ ಸುಮಾರು 500 ವಿದ್ಯಾರ್ಥಿಗಳ ಸಮೂಹವು ವಿಶ್ವವಿದ್ಯಾಲಯದ ಅಧ್ಯಕ್ಷ ಅಬ್ದುಲ್ಲಾ ಅಲ್ ರಶೀದ್ ಅವರ ರಾಜಿನಾಮೆಗೆ ಒತ್ತಾಯಿಸಿದವು.
ಪ್ರತಿಭಟನಾ ನಿರತರು ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಪ್ರಕಾರ ಅವರ ಉದ್ದೇಶ ರಾಜಕೀಯವಾದುದ್ದಲ್ಲ. ರಾಜ ಅಬ್ದುಲ್ಲಾ ಆಡಳಿತದಲ್ಲಿಯೇ ಅವರು ವಿಶ್ವಾಸ ಇರಿಸಿದ್ದಾರೆ. ಆದರೆ ಅವ್ಯವಸ್ಥೆಗಳು ಸರಿ ಹೋಗಬೇಕು ಎಂಬುದಷ್ಟೇ ಅವರ ಒತ್ತಾಯ. ಆದರೆ ಸ್ಥಳೀಯ ಗವರ್ನರ್ ಆಗಿರುವ ಪ್ರಿನ್ಸ್ ಫೈಸಲ್ ಬಿನ್ ಖಾಲೀದ್ದು ಮಾತ್ರ ಪ್ರತಿಭಟನೆಗೆ ಖಂಡತುಂಡ ವಿರೋಧ. 'ನಾವು ಯಾರನ್ನೂ ಮೃದು ಧೋರಣೆಯಿಂದ ನೋಡುವುದಿಲ್ಲ. ಇವರು ಯಾರೇ ಆಗಿದ್ದರೂ ದೇಶದ ಭದ್ರತೆಯೊಂದಿಗೆ ಆಟ ಆಡುತ್ತಿದ್ದಾರೆ' ಎಂಬ ಖಡಕ್ ನಿಲುವು.
ಮಾರ್ಚ್ 11ರ 'ಡೇ ಆಫ್ ರೇಜ್'ನಲ್ಲಿ ಪಾಲ್ಗೊಳ್ಳುವುದಕ್ಕೆ ಯೋಜಿಸಿದ್ದ ಕನಿಷ್ಠ ಆರು ಯುವಕರನ್ನು ಸೌದಿ ಆಡಳಿತವು ಇನ್ನೂ ಬಂಧನದಲ್ಲಿಯೇ ಇಟ್ಟುಕೊಂಡಿದೆ ಎಂದು 'ಆಮ್ನೆಸ್ಟಿ ಇಂಟರ್ನ್ಯಾಷನಲ್' ಸಂಸ್ಥೆಯ ವರದಿ ಸಾರುತ್ತದೆ. ಅವರಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವೇ ಎಲ್ಲರೆದುರು ಪ್ರದರ್ಶಿಸಿದ್ದು, ದೀರ್ಘ ಅವಧಿಗೆ ಇಂಥ ಬಂಧನ ಆಗುವಿಕೆ ಅವಿವೇಕದ ಕ್ರಮ ಎಂದು ಆಮ್ನೆಸ್ಟಿಯ ಮಧ್ಯಪ್ರಾಚ್ಯ ನಿರ್ದೇಶಕ ಫಿಲಿಪ್ ಲುಥೆರ್ ಹೇಳುತ್ತಾರೆ. ಪ್ರತಿಭಟನೆಗೆ ಮುಂದಾಗಿದ್ದರು ಎಂಬ ಒಂದೇ ಕಾರಣಕ್ಕೆ ವ್ಯಕ್ತಿಗಳನ್ನು ಸೆರೆಯಲ್ಲಿ ಇಡುವುದು ಎಷ್ಟರಮಟ್ಟಿಗೆ ಸರಿ ಎಂಬುದು ಅವರ ಪ್ರಶ್ನೆ.
2011ರಲ್ಲಿ ನಡೆದ 'ಅರಬ್ ಸ್ಪ್ರಿಂಗ್' ವಿದ್ಯಮಾನವು ತನ್ನ ನೆಲಕ್ಕೆ ಕಾಲಿಡದಂತೆ ನೋಡಿಕೊಳ್ಳುವಲ್ಲಿ ಸೌದಿ ಅರೇಬಿಯಾ ಯಶಸ್ವಿಯಾಗಿತ್ತು. ಅಲ್ಲಿನ ರಾಜಾಡಳಿತವು ಅರಬ್ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕೆ ಎಲ್ಲಿ ಬಲ ಪ್ರಯೋಗಿಸಬೇಕೋ ಅಲ್ಲಿ ಆ ದಾರಿಯನ್ನು ಅನುಸರಿಸಿ, ಉಳಿದೆಡೆ ಸಬ್ಸಿಡಿಗಳನ್ನು ವಿತರಿಸಿ ಜನರ ಆಕ್ರೋಶಗಳನ್ನೆಲ್ಲ ತಣ್ಣಗಾಗಿಸುವಲ್ಲಿ ಯಶಸ್ವಿಯಾಯಿತು.
ಕಿಂಗ್ ಅಬ್ದುಲ್ಲಾ ಅವರು ಜನತೆಗೆ ಸೀಮಿತ ಸಾಮಾಜಿಕ ಮತ್ತು ನ್ಯಾಯಾಂಗ ಸುಧಾರಣೆಗಳನ್ನು ಘೋಷಿಸಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಮಹಿಳೆಯರಿಗೂ ಮತದಾನದಲ್ಲಿ ಪಾಲ್ಗೊಳ್ಳುವಂಥ ಅವಕಾಶ ಕಲ್ಪಿಸಿದ್ದು ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ. ಆದರೆ ಸೌದಿ ಮಹಿಳೆಯರು ಇಂದಿಗೂ ವಾಹನ ಚಲಾಯಿಸುವಂತಿಲ್ಲ, ಉದ್ದಿಮೆ- ವ್ಯವಹಾರಗಳನ್ನು ನಡೆಸುವಂತಿಲ್ಲ. ಪ್ರಮುಖ ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ನಿರ್ಬಂಧ ಹಾಗೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖವನ್ನು ಸ್ಕಾರ್ಫ್ನಿಂದ ಮುಚ್ಚಿರಬೇಕು ಎಂಬ ನಿಯಮಗಳೆಲ್ಲ ಕಟ್ಟುನಿಟ್ಟಾಗಿ ಜಾರಿಯಲ್ಲಿವೆ.  
ಸೌದಿಯ ಸಾಂಪ್ರದಾಯಿಕ ಸಮಾಜವು ವಹಾಬಿ ಇಸ್ಲಾಮಿಕ್ ಪದ್ಧತಿಯಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇದನ್ನು ಇಸ್ಲಾಂ ಧಾರ್ಮಿಕ ನಾಯಕರ ಅಂಗವಾಗಿರುವ ಉಲೇಮಾ ನಿಯಂತ್ರಿಸುತ್ತದೆ. ಆದರೆ ಮಾರ್ಚ್ ತಿಂಗಳಲ್ಲಿ ಆಗಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ವಿದ್ಯಮಾನ ಮಾತ್ರ ಹಿಂದೆಂದೂ ಆಗಿರಲಿಲ್ಲ ಎನ್ನುತ್ತಾರೆ 'ಗ್ಲೋಬಲ್ ಪೋಸ್ಟ್'ನ ಹಿರಿಯ ಪ್ರತಿನಿಧಿ ಕಾರ್ಲೈಲ್ ಮುರ್ಫಿ. 'ಸೌದಿ ಅರೇಬಿಯಾ: ದ ರೋಡ್ ಬಿಯಾಂಡ್ 9-11' ಎಂಬ ಶೀರ್ಷಿಕೆಯಡಿ ಸರಣಿ ವರದಿಗಳನ್ನು ಮಾಡಿದವರು ಅವರು.
ಬೇಕಂತಲೇ ವಾಹನವನ್ನು ಅತಿವೇಗದಲ್ಲಿ ಚಲಾಯಿಸಿ ಎಲ್ಲಾದರೂ ಗುದ್ದುವ ಮನೋಭಾವವೊಂದು ಸೌದಿ ಅರೇಬಿಯಾದ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಅವರಲ್ಲಿ ಮಡುಗಟ್ಟುತ್ತಿರುವ ಹತಾಶೆಯ ಸ್ಫೋಟಕ್ಕೆ ಒಂದು ದಾರಿ ಎಂದು 'ಗ್ಲೋಬಲ್ ಪೋಸ್ಟ್' ಸಂಪಾದಕ ಚಾರ್ಲ್ಸ್ ಸೆನ್ನಾಟ್ ವಿವರಿಸುತ್ತಾರೆ.
ಬೋರ್ ಮತ್ತು ಆಕ್ರೋಶಕ್ಕೆ ಶರಣಾಗಿರುವ ಸೌದಿ ಯುವಕರಿಂದ ಹೆಚ್ಚುತ್ತಿರುವ ಸಂಚಾರ ವಿಪತ್ತುಗಳು ಹಾಗೂ ಮಧ್ಯಪ್ರಾಚ್ಯದ ಅತಿದೊಡ್ಡ ವಿಶ್ವವಿದ್ಯಾಲಯದಲ್ಲಿ ಕಸ ನಾರುತ್ತಿರುವುದನ್ನು ಗಮನಿಸಿದರೆ, ಸೌದಿ ಅರೇಬಿಯಾ ಸಹ ತನ್ನ ಆಕಾಂಕ್ಷೆಗಳೊಂದಿಗೆ ಎದ್ದು ನಿಲ್ಲುವ ಸಮಯಕ್ಕೆ ಹತ್ತಿರವಾಗುತ್ತಿದೆಯೇನೋ ಅನ್ನಿಸುತ್ತದೆ.
- ಗ್ಲೋಬಲ್ ಪೋಸ್ಟ್ ಪತ್ರಿಕೆ ವರದಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!