ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಂಕಲ್ ಎಂದು ವಿಷ್ ಮಾಡಿದಾಗ ನಿಮ್ಮಪ್ಪ ಕಣೇ ಎಂದು ಅಮ್ಮ ಬಿಕ್ಕಿದ್ದಳು

Mainashree
Updated On : 3 May 2013, 12:09 pm

1984ರ ಸಿಖ್ ವಿರೋಧಿ ಹಿಂಸಾಚಾರ ಮತ್ತು ಹತ್ಯಾಕಾಂಡಗಳಿಗೆ ಸಂಬಂಧಿಸಿ ನ್ಯಾಯದಾನ ವಿಳಂಬವಾಗಿರುವುದು ವ್ಯವಸ್ಥೆಯ ವಿರುದ್ಧ ಹತಾಶ ಸಿಟ್ಟೊಂದನ್ನು ನಿರ್ಮಿಸಿತ್ತು. ಇದೀಗ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದ ಪ್ರಮುಖ ಆರೋಪಿ ಕಾಂಗ್ರೆಸ್‌ನ ಸಜ್ಜನ್ ಕುಮಾರ್ ಅವರನ್ನು ನ್ಯಾಯಾಲಯವು 'ಸಂಶಯದ ಲಾಭ' ನೀಡಿ ದೋಷಮುಕ್ತ ಎಂದು ಸಾರಿರುವುದು ಸಿಖ್ ಸಮುದಾಯದ ಒಡಲಲ್ಲಿ ಆಕ್ರೋಶದ ಜ್ವಾಲಾಮುಖಿಯನ್ನೇ ಸಿಡಿಸಿದೆ. ಆಗಿನ ಕಾಂಗ್ರೆಸ್ ಗೂಂಡಾಗಳು ರೂಪಿಸಿದ ವ್ಯವಸ್ಥಿತ ಹತ್ಯಾಕಾಂಡ ಅದಾಗಿತ್ತು ಎಂಬುದು 'ದೊಡ್ಡ ಮರ ಉರುಳಿದಾಗ ಸುತ್ತಲಿನ ಭೂಮಿ ಕಂಪಿಸಲೇಬೇಕು' ಎಂಬ ರಾಜೀವ್ ಗಾಂಧಿ ಮಾತಿನಲ್ಲೇ ಸ್ಪಷ್ಟವಾಗಿದ್ದರೂ ಕಾಲತಳ್ಳಲೆಂದೇ ಕೈಗೊಂಡಂತಿದ್ದ ತನಿಖಾ ಪ್ರಕ್ರಿಯೆಗಳು ಸಾಕ್ಷ್ಯಗಳನ್ನು ಮುಸುಕಾಗಿಸುವುದಕ್ಕೆ ಸಾಕಷ್ಟು ಸಮಯ ನೀಡಿದವು. ಹಾಗೆಂದೇ ಸಿಖ್ ಸಂತ್ರಸ್ತರಿಗೆ ನ್ಯಾಯವೆಂಬುದು ಮರೀಚಿಕೆಯಾಗಿಯೇ ಉಳಿದಿದೆ. ಸಜ್ಜನ್ ಕುಮಾರ್ ನಿರ್ದೋಷಿ ಎಂದು ತೀರ್ಪು ಬಂದಾಗ ನ್ಯಾಯಾಲಯದ ಆವರಣದಲ್ಲೇ ಆಕ್ರೋಶ ಸಿಡಿಯಿತೇಕೆ? ಹಾಗಾದರೆ ನನ್ನನ್ನೇ ಗಲ್ಲಿಗೇರಿಸಿಬಿಡಿ ಎಂದು ಸಿಖ್ ಮಹಿಳೆಯೊಬ್ಬಳು ಭಾವಾವೇಶದಿಂದ ರೋದಿಸಿದಳೇಕೆ? ಆ ಒಡಲುರಿ ಅರ್ಥವಾಗಬೇಕಾದರೆ 1984ರ ಆ ಹಿಂಸಾತ್ಮಕ ದಿನಗಳ ಸ್ವಾನುಭವಗಳಿಗೆ ಕಿವಿಯಾಗಬೇಕು. 'ಇಂಡಿಯನ್ ಎಕ್ಸ್‌ಪ್ರೆಸ್‌' ಅಂಕಣಕಾರ್ತಿ ಹರ್‌ನೀತ್ ಸಿಂಗ್ ದಂಗೆಯ ದಿನಗಳ ತಮ್ಮ ಬಾಲ್ಯದ ಅನುಭವವನ್ನು 2005ರ ಅಂಕಣವೊಂದರಲ್ಲಿ ದಾಖಲಿಸಿದ್ದರು. ಆ ದಿನಗಳ ನೈಜ ಚಿತ್ರಣವನ್ನು ಕಣ್ಣೆದುರಿಗೆ ತಂದಿರಿಸುವ ಆ ಲೇಖನ ಇಲ್ಲಿ ಮತ್ತೊಮ್ಮೆ..
-----
ಆ ದಿನವೂ ಎಲ್ಲ ದಿನಗಳಂತೆಯೇ ತೆರೆದುಕೊಂಡಿತ್ತು. ಒಂದು ಗ್ಲಾಸ್ ಬೋರ್ನವಿಟಾ ಕುಡಿದು ಬರಿಗಾಲಿನಲ್ಲಿ ನಮ್ಮ ಮಾನವತಾ ನಿವಾಸದ ಹುಲ್ಲುಹಾಸಿನ ಮೇಲೆ ಓಡಿದ್ದೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ನನ್ನ ಮನೆಯ ಹೆಸರಾಗಿತ್ತದು. ನನ್ನ ಒಂದು ವರ್ಷದ ಸಹೋದರ ಅಮನ್ ಸಹ ಬೆಳಗಿನ ಆಟದಲ್ಲಿ ಸೇರಿಕೊಂಡ. ಏಕಾಏಕಿ ಎಲ್ಲಿಂದಲೋ ತೂರಿಬಂದ ಕಲ್ಲೊಂದು ಆತನ ಹಣೆಗೆ ಬಡಿಯಿತು. ಆತನ ಹಣೆಯಲ್ಲಿ ರಕ್ತ ಸೋರತೊಡಗಿತು ಹಾಗೂ ಆತ ಆಯ ತಪ್ಪಿದ. ಆಯಾ ಓಡಿ ಬಂದು ನಮ್ಮಿಬ್ಬರನ್ನೂ ಮಡಿಲಿಗೆ ಸೇರಿಸಿಕೊಂಡಳು. ನನ್ನ ತಾಯಿ ಕೂಗಿಕೊಂಡಿದ್ದು ಕೇಳಿಸಿತು. ಟೆರೇಸ್‌ನ ಮೇಲಿದ್ದ ನನ್ನ ಚಾಚಾ ಸೆಕ್ಯುರಿಟಿ ಗಾರ್ಡ್‌ಗೆ ಮುಖ್ಯದ್ವಾರವನ್ನು ಮುಚ್ಚುವಂತೆ ಕೂಗಿಹೇಳುತ್ತಿದ್ದ. ಅರೆ, ಏಕೆ ಎಲ್ಲವೂ ಕೋಲಾಹಲವಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ತವಕ ಚಿಕ್ಕವಳಾಗಿದ್ದ ನನ್ನ ತಲೆಯಲ್ಲಿ. ಸುಮಾರು ನೂರು ಮಂದಿಯ ಗುಂಪು ಬಹಳ ಸಿಟ್ಟಿನಿಂದ ಕಲ್ಲುಗಳನ್ನು ತೂರುತ್ತಿತ್ತು. 'ಇಂದಿರಾ ಗಾಂಧಿ ಅಮರ್ ರಹೆ, ಖೂನ್ ಕಾ ಬದಲಾ ಖೂನ್ ಸೇ ಲೇಂಗೆ, ಹಿಂದು ಭಾಯ್ ಮುಸಲ್ಮಾನ್ ಭಾಯ್ ಸರ್ದಾರೋಂಕಿ ಕರೆ ಸಫಾಯ್‌' ಎಂಬ ಅರಚಾಟಗಳು ಮುಗಿಲು ಮುಟ್ಟಿದ್ದವು.
ಅದು ಹೇಗೋ ನಾವು ಮನೆಯೊಳಕ್ಕೆ ಸೇರಿಕೊಂಡೆವು. ನನ್ನ ತಾಯಿ ನಮ್ಮೆಲ್ಲರನ್ನೂ ಬಾತ್‌ರೂಮ್‌ನಲ್ಲಿ ಕೂಡಿಟ್ಟು, ಪೊಲೀಸರಿಗೆ ಫೋನ್ ಮಾಡಿದರು. ಕೆಲ ಸಮಯಗಳ ನಂತರ ನಮಗೆ ಪೊಲೀಸರ ಸೈರೆನ್ ಶಬ್ದ ಕೇಳಿಸಿತು. ಆದರೆ ಅದಕ್ಕೂ ಮೊದಲು ಹಲ ಬಗೆಯ ಉನ್ಮಾದಿತ ಶಬ್ದಗಳನ್ನು ಕೇಳಿಸಿಕೊಳ್ಳಬೇಕಾಯಿತು. ಕಿಟಕಿಗಳ ಗಾಜು ಫಳಾರೆಂದ ಸದ್ದು, ಮನೆಯ ಮಾಡು ಅಲುಗಾಡಿದ ಶಬ್ದ ಹಾಗೂ ನನ್ನ ನಾಯಿಮರಿಯ ಅಸಹಾಯಕ ಅರಚಾಟ. ಈ ನಡುವೆ ಟಯರುಗಳನ್ನು ಸುಟ್ಟ ಕೆಟ್ಟ ವಾಸನೆ ಹಾಗೂ ಕೆರೊಸಿನ್ ವಾಸನೆ ನಮ್ಮನ್ನು ತಾಗಿತು. 'ಅಯ್ಯೋ ಅವರು ನಮ್ಮ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ. ಓ ದೇವರೇ ಇದೇನಾಗುತ್ತಿದೆ' ಎಂದು ಆಯಾ ಕಿರುಚಿಕೊಂಡಳು.
ಹೊರಗಿನ ಈ ಭಯಾವಹ ದೃಶ್ಯಗಳು ಎಷ್ಟು ಹೊತ್ತು ಮುಂದುವರಿಯಿತು ಎಂಬುದು ನನಗೆ ನೆನಪಿಲ್ಲ. ಕೊನೆಗೂ ನನ್ನ ಅಮ್ಮ ಬಾಗಿಲು ತೆರೆದಳು. ಮನೆಯ ಸುತ್ತಲೂ ಪೊಲಿಸರೇ ಸುತ್ತುವರಿದಿದ್ದರು. ನನ್ನ ಅಜ್ಜಿಯಂತೂ ಧರ್ಮಗ್ರಂಥದ ಪುಟಗಳನ್ನು ಪಠಿಸುತ್ತ ಕುಳಿತಳು. ಹೊರಗೆ ಹೋಗಿ ಏನಾಗುತ್ತಿದೆ ಎಂಬುದನ್ನು ನೋಡುವ ಆಸೆ ನನಗೆ. 'ನಿಮ್ಮ ಮಗಳನ್ನು ಹಿಡಿದುಕೊಳ್ಳಿ. ನನ್ನ ಮಾತು ಕೇಳ್ತೀರಿ ಅಂತಾದ್ರೆ ನೀವೆಲ್ಲರೂ ಎಲ್ಲಾದರೂ ಹೋಗಿಬಿಡಿ. ಪರಿಸ್ಥಿತಿ ಒಂಚೂರೂ ಸುರಕ್ಷಿತವಾಗಿಲ್ಲ. ಇಂದಿರಾಜಿ ಅವರ ಕೊಲೆ ಆಗಿದೆ ಅಲ್ವಾ' ಎಂದ ಪಾನ್ ಜಗಿಯುತ್ತಿದ್ದ ಪೊಲೀಸ್.
ಅದರಾಚೆ ನನಗೆ ಅಷ್ಟಾಗಿ ಏನೂ ನೆನಪಿಲ್ಲ. ಒಟ್ಟಿನಲ್ಲಿ ಈ ಇಂದಿರಾ ಎಂಬುವವರು ಬಹಳ ಪ್ರಮುಖ ವ್ಯಕ್ತಿಯಾಗಿದ್ದರು ಎಂಬುದನ್ನಂತೂ ನನ್ನ ಐದು ವರ್ಷದ ಮಿದುಳು ಅರಿತುಕೊಂಡಿತು.
ನಂತರದ ನನ್ನ ನೆನಪುಗಳು ಊಟದ ವೇಳೆಗೆ ಸಂಬಂಧಿಸಿದ್ದು. ಇಡೀ ಕುಟುಂಬವೇ ನನ್ನಜ್ಜಿಯ ಕೋಣೆಯಲ್ಲಿ ನೆರೆದಿತ್ತು. ನನ್ನ ಅಂಕಲ್ ಫೋನ್‌ನಲ್ಲಿದ್ದರು. ನನ್ನ ಅಮ್ಮ ಚಿಕ್ಕ ಕಾಗದದ ಮೇಲೆ ಅದೇನನ್ನೋ ಬರೆಯುವುದರಲ್ಲಿ ಮಗ್ನರಾಗಿದ್ದರು. ನನಗೆ ನನ್ನ ಕೊಠಡಿಗೆ ಹೋಗುವುದಕ್ಕೆ ಬಿಡಲಿಲ್ಲ. 'ನಾವು ಒಂದು ರೂಮಿನಲ್ಲಿ ಮಾತ್ರವೇ ದೀಪ ಬೆಳಗುವುದಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ. ಆ ಮೂಲಕ ನಾವು ಸುಲಭಕ್ಕೆ ದಾಳಿಯ ಗುರಿಯಾಗದಂತೆ ನೋಡಿಕೊಳ್ಳಬಹುದು' ಎಂದು ಆಯಾ ವಿವರಣೆ ಕೊಟ್ಟಳು. ಅದೊಂದು ಬಹು ಸುದೀರ್ಘ ರಾತ್ರಿ. ನನ್ನ ತಂದೆ ನೈನಿತಾಲ್‌ನಲ್ಲಿ ಯಾವುದೋ ವಹಿವಾಟಿಗೆ ಹೋಗಿದ್ದರು. ಅವರು ಬೆಳಗ್ಗೆ ಹಿಂತಿರುಗಬೇಕಿತ್ತು. ಆದರೆ ಅವರ ಸುದ್ದಿಯೇ ಇರಲಿಲ್ಲ. ನೆನೆಸಿಕೊಂಡರೆ ಆ ಆತಂಕದ ಕ್ಷಣಗಳ ಅನುಭವ ಈಗಲೂ ಆಗುತ್ತದೆ.
ಪರಿಸ್ಥಿತಿ ವಿಷಮವಾಗುತ್ತಲೇ ಸಾಗಿತು. ನಮ್ಮ ಫೋನ್ ಲೈನ್‌ಗಳನ್ನು ತುಂಡರಿಸಲಾಯಿತು. ವಿದ್ಯುತ್ ಸಂಪರ್ಕವೂ ಸ್ಥಗಿತಗೊಂಡಿತು. ನಾವು ಮನೆ ಬಿಟ್ಟು ಹೋಗುವಂತೆಯೇ ಇರಲಿಲ್ಲ. ಕೆಟ್ಟ ಸುದ್ದಿಗಳು ಬಂದಪ್ಪಳಿಸುವುದು ನಿಲ್ಲಲೇ ಇಲ್ಲ. ನನ್ನ ತಂದೆಯ ಚಿಕ್ಕಪ್ಪನ ಮನೆಯನ್ನು ಸುಟ್ಟುಹಾಕಲಾಗಿದೆ ಎಂದು ನಮ್ಮ ನೆರೆಯ ಮುಸ್ಲಿಂ ಬಾಂಧವರು ಸುದ್ದಿ ನೀಡಿದರು. ನಮ್ಮ ಕುಟುಂಬಕ್ಕೆ ಪರಿಚಯವಿದ್ದ ಇನ್ನೊಬ್ಬರನ್ನು ಮೀರತ್‌ನಲ್ಲಿ ಸಜೀವವಾಗಿ ಸುಟ್ಟುಹಾಕಿದ ಭಯಾನಕ ವಾರ್ತೆ ನಮ್ಮನ್ನು ಕಲಕಿತು. ಇವೆಲ್ಲದರ ನಡುವೆ ನನ್ನ ತಂದೆಯ ಬಗ್ಗೆ ಯಾವ ವರ್ತಮಾನಗಳೂ ಸಿಗಲಿಲ್ಲ. ಪ್ರತಿದಿನ ಬೆಳಗ್ಗೆ ದೇಹಗಳನ್ನು ಗುರುತಿಸುವುದಕ್ಕೆ ಪೊಲೀಸ್ ಠಾಣೆಗೆ ಹೋಗಿ ಬರುವುದು ನಮ್ಮಮ್ಮನ ದಿನಚರಿಯೇ ಆಗಿಹೋಯಿತು. ಅಪ್ಪ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥನೆ ಮಾಡು ಎಂದು ನನ್ನ ಅಜ್ಜಿ ನಿರ್ದೇಶಿಸಿದರು. ಮಕ್ಕಳು ಪ್ರಾರ್ಥನೆ ಸಲ್ಲಿಸಿದ್ದೇ ಆದರೆ ದೇವರು ಮುಗುಳ್ನಗುತ್ತಾನೆ ಎಂದು ಬಲವಾಗಿ ನಂಬಿದವರು ಅವರು. ಕೊನೆಗೂ ದೇವರು ಪ್ರಾರ್ಥನೆಗೆ ಉತ್ತರಿಸಿದ. ಉತ್ತರಿಸುವುದಕ್ಕೆ ಹತ್ತು ದಿನಗಳನ್ನೇ ತೆಗೆದುಕೊಂಡನಾದರೂ ಉತ್ತರಿಸಿದ ಎಂಬುದು ನಿಜ.
ಆ ದೃಶ್ಯ ತೀರ ನಿನ್ನೆ ನಡಿದಿರುವುದೇನೋ ಎಂಬಂತೆ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಅಂದು ರಾತ್ರಿ 1.30ರ ಸಮಯ. ದೊಡ್ಡ ಗಲಾಟೆ ನನ್ನನ್ನು ನಿದ್ದೆಯಿಂದ ಎಬ್ಬಿಸಿತು. ನನ್ನ ತಾಯಿ ಅದ್ಯಾರೋ ಚಿಕ್ಕ ಕೂದಲಿನ ಅಪರಿಚಿತ ಗಂಡಸನ್ನು ಆಲಂಗಿಸಿಕೊಂಡಿದ್ದರು. ನಾನು ಆ ವ್ಯಕ್ತಿಗೆ 'ಹಲೋ ಅಂಕಲ್‌' ಅಂದೆ. ನನ್ನ ಅಮ್ಮ ಹಾಗೂ ಆ ಅಪರಿಚಿತ ಇಬ್ಬರೂ ಗೋಳೋ ಎಂದು ಅಳತೊಡಗಿದರು. 'ಗುಡಿಯಾ... ಇವರು ನಿನ್ನ ತಂದೆ ಕಣೆ. ಮನೆಗೆ ಮರಳಿದ್ದಾರೆ' ಎಂದಳು ಅಮ್ಮ.
ನನ್ನ ಅಪ್ಪ ಎಂಥ ಹೀರೋ ಎಂಬುದು ಮರುದಿನವಷ್ಟೇ ನನಗೆ ವಿವರವಾಗಿ ತಿಳಿಯಿತು. ನೈನಿತಾಲದ ಉನ್ಮಾದಿತರ ನಡುವೆ ಸಿಕ್ಕಿಹಾಕಿಕೊಂಡಿದ್ದ ನನ್ನ ಅಪ್ಪ ಬಸ್ಸೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಆತನ ಸಿಖ್ ರುಮಾಲನ್ನು ಮುಚ್ಚಿದ ಕಂಬಳಿಯೊಂದು ಆತನ ಜೀವ ಉಳಿಸಿತ್ತು. ಠಾಕೂರ್ ಭೀಮ್ ಸಿಂಗ್ ಎಂಬ ಇನ್ನೊಬ್ಬ ವ್ಯಕ್ತಿಯೂ ಅಪ್ಪನ ಜೀವ ಉಳಿದಿದ್ದಕ್ಕೆ ಕಾರಣರು. ಕಥ್‌ಗೋದಾಮ್‌ನ ಬಸ್ ಒಕ್ಕೂಟದ ಕಾರ್ಯದರ್ಶಿ ಆಗಿದ್ದರು ಸಿಂಗ್. ಆತನ ಮನೆಯಲ್ಲೇ ಆರು ದಿನ ತಂಗಿದ್ದರು ನನ್ನ ತಂದೆ. ಅಲ್ಲಿ ಮಾರಿಯಾ ಮತ್ತು ರೊಕ್ಕೊ ಸ್ಯಾಂಟಿನಿ ಎಂಬ ಇಟಲಿ ದಂಪತಿ ಭೇಟಿಯಾಯಿತು. ಅವರು ನನ್ನ ತಂದೆಗೆ ತಲೆಗೂದಲನ್ನು ಕತ್ತರಿಸಿಕೊಳ್ಳುವ ಮತ್ತು ಗಡ್ಡ ತೆಗೆಯುವ ಸಲಹೆ ಕೊಟ್ಟರು. ಅವರ ಸಲಹೆ ಪಾಲಿಸಿ ಅಲಹಾಬಾದ್‌ಗೆ ಬಂದ ತಂದೆ ಮನೆಗೆ ಕರೆ ಮಾಡಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಎಂಬುವವರ ಜತೆ ತೆರಳಿ ತಂದೆಯನ್ನು ಮನೆಗೆ ಕರೆದುಕೊಂಡು ಬಂದಿದ್ದರು ನನ್ನಮ್ಮ.
ಅಪ್ಪ ಮನೆಗೆ ಬಂದ ಕೆಲದಿನಗಳಲ್ಲೇ ನಾವು ಚಂಡೀಗಢಕ್ಕೆ ತೆರಳುವ ನಿರ್ಧಾರ ಕೈಗೊಂಡೆವು. ನನ್ನ ಅಜ್ಜಿಗಂತೂ ಅದು ಆಘಾತಕಾರಿ ಸನ್ನಿವೇಶವಾಗಿತ್ತು. ತಾತನ ಬಳುವಳಿಯ ಮನೆಯಾಗಿತ್ತದು. ಅಲ್ಲಿನ ಗುರುದ್ವಾರಾ ಪ್ರಬಂಧಕ ಸಮಿತಿಯ ಅಧ್ಯಕ್ಷರಾಗಿದ್ದ ಅವರು, ಸ್ಥಳೀಯ ಆಸ್ಪತ್ರೆಗಳು ಹಾಗೂ ಶಾಲಾ-ಕಾಲೇಜುಗಳ ಸಮಿತಿಯಲ್ಲೂ ಇದ್ದರು. ಕಾಲೇಜಿನಲ್ಲಿ ಯುವತಿಯರಿಗಾಗಿ ಎಂಎ ತರಗತಿ ಆರಂಭಿಸಿದ್ದ ಶ್ರೇಯಸ್ಸು ಅವರದ್ದಿತ್ತು. ಆದರೆ, 'ನಗರವೊಂದರ ಜನರ ಮೇಲೆ ಯಾವತ್ತು ವಿಶ್ವಾಸ ಕಮರುವುದೋ ಆಗ ಆ ನಗರದಲ್ಲಿ ವಾಸಿಸುವುದು ಥರವಲ್ಲ' ಎಂಬುದು ನನ್ನ ತಂದೆಯ ನಿಲುವಾಗಿತ್ತು.
ಅಂದಹಾಗೆ....ನನ್ನ ತಂದೆ ಮತ್ತೆ ಹಿಂದಿನಂತೆಯೇ ಉದ್ದ ಕೂದಲು ಬೆಳಸಿದ್ದಾರೆ ಮತ್ತು ಸಿಖ್ ಪೇಟವನ್ನು ಹೆಮ್ಮೆಯಿಂದ ಧರಿಸುತ್ತಾರೆ.
ಆ ಘೋರ ಹಿಂಸಾಚಾರದ ಘಟನೆ ನಡೆದು ಎರಡು ದಶಕಗಳೇ ಕಳೆದಿದ್ದರೂ ಇವತ್ತಿಗೂ ಆ ಕುರಿತ ದುಃಸ್ವಪ್ನಗಳು ತಪ್ಪುತ್ತಿಲ್ಲ. ಇಂಥ ಕೆಟ್ಟ ಕನಸುಗಳ ಮಡುವಲ್ಲಿ ಬಿದ್ದಿರುವ ಕುಟುಂಬ ನನ್ನದಷ್ಟೇ ಅಲ್ಲ ಎಂಬುದು ನಿಮಗೆ ತಿಳಿದಿರಲಿ.

 ಹರ್‌ನೀತ್ ಸಿಂಗ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement