ಕಾಲು ಕೆರೆದುಕೊಂಡು ಕಿರಿಕ್ಕು ಮಾಡುವುದೇಕೆ ಚೀನಾ?
ಭಾನುವಾರದ ಸಂಜೆಯ ಹೊತ್ತಿಗೆ ಆ ಬಿಕ್ಕಟ್ಟು ಮುಗಿದಿತ್ತು. ಎರಡೂ ದೇಶದ ದಳಗಳು ತಾವು ಮೊದಲಿದ್ದ ಸ್ಥಳಕ್ಕೆ ಹಿಂದಿರುಗುವ ಒಪ್ಪಂದ ಮಾಡಿಕೊಂಡ ನಂತರ ಕೆಲವು ದಿನಗಳಿಂದ ಎದ್ದಿದ್ದ ಕೋಲಾಹಲ ಕೊನೆಯಾಗಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹೇಳುವ ಪ್ರಕಾರ, ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ 'ಭಾರತದ ಶಕ್ತಿ ಪ್ರದರ್ಶನ': ಅಂದರೆ ಭಾರತದ ಗಡಿಯ ವಾಯುನೆಲೆಗಳ ವಿಸ್ತರಣೆ, ಹೊಸ ರಕ್ಷಣಾ ತಂತ್ರಗಳೇ ಚೀನಾಕ್ಕೆ ಈ ಹುಚ್ಚಾಟ ನಡೆಸಲು ಪ್ರೇರೇಪಿಸಿದ್ದವು. ಆದರೆ ಚೀನಾದ ಮಿಲಿಟರಿ ಏಳಿಗೆಯಿಂದಾಗಿ ತನ್ನ ಬಳಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ ಎಂದು ಭಾರತೀಯ ಸೇನೆ ಹೇಳುತ್ತಿದೆ.
ಭಾರತದಡಿ ಬರುವ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳುವ ಮೂಲಕ ಚೀನಾದ ಪೀಪಲ್ ಲಿಬರೇಷನ್ ಆರ್ಮಿ ಸರಳ ಸಂದೇಶವೊಂದನ್ನು ನಮಗೆ ಕಳುಹಿಸಿಕೊಟ್ಟಿದೆ: 'ಗಡಿ ಭಾಗ ಶಾಂತವಾಗಿರಬೇಕೆಂದರೆ, ಭಾರತ ಆ ಪ್ರದೇಶಗಳಲ್ಲಿ ತನ್ನ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬೇಕು.' ಮುಂಬರುವ ಭಾರತ-ಚೀನಾ ಮಾತುಕತೆಗಳಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾಗಲಿದೆ ಎನ್ನುವುದರಲ್ಲಿ ಸಂಶಯ ಬೇಡ.
1997ರ ನಂತರ, ನಾಟಕೀಯ ರೀತಿಯಲ್ಲಿ ಚೀನಾದ ಸೇನೆಯ ಆಧುನೀಕರಣ ನಡೆದಿದೆ. ಕಳೆದ ವರ್ಷ ದೆಹಲಿ ಮೂಲದ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಆ್ಯಂಡ್ ಸ್ಟ್ರಾಟಜಿಕ್ ಅನಲೈಸಿಸ್ನ ನಮ್ರತಾ ಗೋಸ್ವಾಮಿಯವರು, 'ಟಿಬೆಟ್ನಲ್ಲಿ ಚೀನೀ ಸೇನೆಯ ನಿಯೋಜನಾ ಸಾಮರ್ಥ್ಯ ಹೆಚ್ಚುತ್ತಲೇ ಇದೆ' ಎಂದು ಕಳವಳ ವ್ಯಕ್ತಪಡಿಸಿದ್ದರು. ಅಲ್ಲಿ ಹೊಸ ವಾಯುನೆಲೆಗಳನ್ನು ಸೃಷ್ಟಿಸುತ್ತಿರುವ ಚೀನಾ ಇದುವರೆಗೂ ರಸ್ತೆಗಳ ಅಭಿವೃದ್ಧಿಗಾಗಿ 325 ಬಿಲಿಯನ್ ಡಾಲರ್ಗಳಷ್ಟು ಹಣವನ್ನು ತೊಡಗಿಸಿದೆ ಎಂದು ಹೇಳಿದ್ದರು.
ಇದು ಚೀನಾದ ಅಭಿವೃದ್ಧಿ ಸಾಮರ್ಥ್ಯದ ಚಿಕ್ಕ ಝಲಕಷ್ಟೆ. 1990ರ ದಶಕದಲ್ಲಿ ಚೀನಾದ ರಕ್ಷಣಾ ಅಭಿವೃದ್ಧಿ ಸಂಸ್ಥೆಗಳಿಂದ ಹೊರಬರುತ್ತಿದ್ದ ತಂತ್ರಜ್ಞಾನಗಳೆಲ್ಲ ಅಂದಿನ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅತಿ ಕಳಪೆ ಮಟ್ಟದಲ್ಲೇ ಇದ್ದವು. ಈಗ ಚೀನಾದ ಮಿಲಿಟರಿ ಉದ್ಯಮಗಳು ಅಮೆರಿಕದ ಅತ್ಯುನ್ನತ ಎಫ್-16 ಯುದ್ಧ ವಿಮಾನಗಳಿಗೆ ಸಡ್ಡು ಹೊಡೆಯುವಂತಹ ಜೆ10 ಯುದ್ಧವಿಮಾನಗಳನ್ನು ತಯಾರಿಸುತ್ತಿವೆ. ಡೀಸೆಲ್ ಚಾಲಿತ ಜಲಾಂತರ್ಗಾಮಿ ನೌಕೆಗಳು, 052ಸಿ ಡೆಸ್ಟ್ರಾಯರ್ಗಳೂ ಕೂಡ ಪಾಶ್ಚಾತ್ಯ ಉಪಕರಣಗಳಿಗೆ ಸಮನಾದ ಸಾಮರ್ಥ್ಯ ಹೊಂದಿವೆ. ಅದರಲ್ಲೂ ಡಾಂಗ್ ಫೆಂಗ್-21ಡಿ ಎಂಬ ಖಂಡಾತರ ನೌಕಾ ನಿಗ್ರಹ ಕ್ಷಿಪಣಿ ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿನ ಅಮೆರಿಕದ ಪಾರುಪತ್ಯವನ್ನು ಕೊನೆಗಾಣಿಸುವ ಸಾಮರ್ಥ್ಯ ಹೊಂದಿದೆ.
ಅಮೆರಿಕಕ್ಕೂ ಕೂಡ ಇವೆಲ್ಲ ಅತಿ ಕ್ಲಿಷ್ಟ ಸವಾಲುಗಳೇ. ಚೀನಾದ ನೌಕಾ ಸಾಮರ್ಥ್ಯದ ಬಗ್ಗೆ ಇತ್ತೀಚೆಗೆ ವರದಿ ಹೊರಡಿಸಿರುವ ಕಾಂಗ್ರೆಷ್ನಲ್ ರಿಸರ್ಚ್ ಸರ್ವಿಸ್, '2014-2043ರ ನಡುವಿನ ಅಮೆರಿಕದ ಮಿಲಿಟರಿ ನೀತಿಯಲ್ಲಿ ಪಶ್ಚಿಮ ಪೆಸಿಫಿಕ್ನಲ್ಲಿ ಸಾರ್ವಭೌಮತ್ವ ಉಳಿಸಿಕೊಳ್ಳುವಂತಹ ಅಂಶಗಳಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ಆ ಭಾಗದಲ್ಲಿ ಸಂಕಷ್ಟಗಳು ಎದುರಾಗಲಿವೆ' ಎಂದು ಹೇಳಿದೆ.
ಇದರಿಂದ ಒಂದಂಶ ಸ್ಪಷ್ಟವಾಗುತ್ತದೆ. ಚೀನಾದ ಮಿಲಿಟರಿ ಅಭಿವೃದ್ಧಿಯ ಮೇಲೆಲ್ಲ ನಾವೆಲ್ಲ ಒಂದು ಕಣ್ಣಿಟ್ಟಿರಬೇಕು. ಆದರೆ ಅಮೆರಿಕ ಹೇಳುವುದೇ ಬೇರೆ. 'ಚೀನಾದ 25 ಪ್ರತಿಶತ ಪಿಎಲ್ಎ ಯುದ್ಧ ವಿಮಾನಗಳು, 25 ಪ್ರತಿಶತ ಸರ್ಫೇಸ್ ಕಾಂಬ್ಯಾಟೆಂಟ್ಸ್ಗಳು, 40 ಪ್ರತಿಶತ ಕ್ಷಿಪಣಿಗಳು, 55 ಪ್ರತಿಶತ ಜಲಾಂತರ್ಗಾಮಿ ನೌಕೆಗಳು ಮಾತ್ರ ಆಧುನಿಕವಾಗಿವೆ. ಜೆ10 ಯುದ್ಧ ವಿಮಾನ ಅಥವಾ ಯುವಾನ್ ಜಲಾಂತರ್ಗಾಮಿ ನೌಕೆಗಳು 1980ರ ದಶಕದ ತಂತ್ರಜ್ಞಾನಗಳನ್ನು ಹೊಂದಿವೆ. ಪಿಎಲ್ಎದ ಭೂಸೇನಾ ಪಡೆಗಳ ಬಳಿಯಿರುವ ಶಸ್ತ್ರಾಸ್ತ್ರಗಳೂ ಕೂಡ ಹಳೆಯ ತಂತ್ರಜ್ಞಾನದೊಂದಿಗೆ ರೂಪಿತವಾದವು. ಅದರ 7,500 ಯುದ್ಧ ಟ್ಯಾಂಕರ್ಗಳಲ್ಲಿ ಕೇವಲ ಟೈಪ್-96 ಮಟ್ಟು ಟೈಪ್ 99 ಟ್ಯಾಂಕರ್ಗಳು ಆಧುನಿಕವಾಗಿವೆ.' ಎನ್ನುತ್ತದದು.
ಅದಾಗ್ಯೂ ಒಟ್ಟಾರೆಯಾಗಿ ನೋಡಿದಾಗ ಇಂದಿಗೂ ಅಮೆರಿಕವೇ ಪ್ರಪಂಚದ ಶಕ್ತಿಶಾಲಿ ಮಿಲಿಟರಿ ಪವರ್ಹೌಸ್ ಆಗಿದೆ. ಈ ಸೂಪರ್ಪವರ್ ದೇಶ ತನ್ನ ಸೇನೆಗಾಗಿ ಖರ್ಚು ಮಾಡುವ ಹಣಕ್ಕೆ ಹೋಲಿಸಿದರೆ, ಚೀನಾ ಲೆಕ್ಕೆಕ್ಕೇ ಬರುವುದಿಲ್ಲ. ಕಳೆದೈದು ವರ್ಷಗಳಲ್ಲಿ ಅಮೆರಿಕ ತನ್ನ ಜಿಡಿಪಿಯಲ್ಲಿನ 4 ಪ್ರತಿಶತದಷ್ಟು ಮೊತ್ತವನ್ನು ಸೇನಾ ಅಭಿವೃದ್ಧಿಗಾಗಿ ಬಳಸಿದೆ. ಇನ್ನು ಈ ವಿಷಯದಲ್ಲಿ ಚೀನಾಕ್ಕೆ ಭಾರತದ ಬಗ್ಗೆಯೂ ಹೆದರಿಕೆಯಿದೆ ಎನ್ನುವ ಮಾತಂತೂ ಉತ್ಪ್ರೇಕ್ಷೆಯಿಂದ ಕೂಡಿರುವಂಥದ್ದು. ಭಾರತ ತನ್ನ ಸೇನೆಯ ಮೇಲೆ ಖರ್ಚು ಮಾಡುತ್ತಿದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಆ ಮೊತ್ತ ಗಣನೀಯ ಮಟ್ಟಕ್ಕೆ ಕುಸಿದಿದೆ. 2011-2012ರಲ್ಲಿ ಭಾರತತನ್ನ ಸೇನೆಯ ಮೇಲೆ 44.28 ಬಿಲಿಯನ್ ಡಾಲರ್ಗಳಷ್ಟು ಹಣ ವ್ಯಯಿಸಿದ್ದರೆ, ಇದೇ ಸಮಯದಲ್ಲಿ ಚೀನಾ ತನ್ನ ಸೇನೆಯ ಅಭಿವೃದ್ಧಿಗಾಗಿ ಮಾಡಿದ ಖರ್ಚು 129. 27 ಬಿಲಿಯನ್ ಡಾಲರ್ಗಳಷ್ಟು! 1999ರಲ್ಲಿ ಭಾರತ
ತನ್ನ ಜಿಡಿಪಿಯಲ್ಲಿನ 3.1ಪ್ರತಿಶತದಷ್ಟು ಅಂಶವನ್ನು ಸೇನೆಗಾಗಿ ವ್ಯಯಿಸಿದ್ದರೆ, 2010ರಲ್ಲಿ ಅದು ವ್ಯಯಿಸಿದ್ದು ತನ್ನ ಜಿಡಿಪಿಯ 2.7 ಪ್ರತಿಶತದಷ್ಟು ಮಾತ್ರ.
ಇದೆಲ್ಲ ಚೀನಾಕ್ಕೆ ಗೊತ್ತಿಲ್ಲದೇ ಇಲ್ಲ. ಆದರೂ ಅದೇಕೆ ಕಾಲು ಕೆರೆದುಕೊಂಡು ಭಾರತದ ಮೇಲೆ ಪಾರುಪತ್ಯ ಮೆರೆಯಲು ಪ್ರಯತ್ನಿಸುತ್ತಿರುವುದು? 'ಚೀನಾಕ್ಕೆ ಹಿಮಾಲಯದ ತಣ್ಣನೆ ಗಾಳಿ ಬಲು ಇಷ್ಟ' ಎನ್ನುವುದು ಇದಕ್ಕೆ ಉತ್ತರವಾಗಲಾರದು. ಚೀನಾದ ತೈಲದ ಮೇಲಿನ ಸ್ವಾವಲಂಬನೆ 1993ರಲ್ಲೇ ಅಂತ್ಯವಾಗಿದೆ. ಹಾಗಾಗೇ ಅದೀಗ ತೈಲಕ್ಕಾಗಿ ಉಳಿದ ದೇಶಗಳ ಮೇಲೆ ಅವಲಂಬಿತವಾಗಿದೆ. ಸದ್ಯಕ್ಕೆ ಚೀನಾದ ತೈಲ ಬೇಡಿಕೆ ಪ್ರಮಾಣ 50 ಪ್ರತಿಶತದಷ್ಟಿದ್ದು, 2015ರ ವೇಳೆಗೆ ಅದು 60-70 ಪ್ರತಿಶತಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.
ಬಲಿಷ್ಠ ರಾಷ್ಟ್ರಗಳು ಇನ್ನುಳಿದ ಶಕ್ತಿವಂತ ರಾಷ್ಟ್ರಗಳನ್ನು ನೋಡಿ ಹೆದರುವುದು ಸಹಜ. ಹಾಗಾಗಿಯೇ ಚೀನಾ ಕೂಡ ಮುಂಬರುವ ದಿನಗಳಲ್ಲಿ ಎಲ್ಲಿ ತನ್ನ ಪಾಲಿಗೆ ಕುತ್ತು ಬರಲಿದೆಯೋ ಎಂದು ಭಯಪಡುತ್ತಿದೆ.
ತೈಲದ ವಿಷಯದಲ್ಲಿ ಭಾರತವನ್ನು ತನ್ನ ಶತ್ರುವೆಂದೇ ಚೀನಾ ಭಾವಿಸುತ್ತದೆ. ಅಲ್ಲದೆ, ಅದರ ಶತ್ರುರಾಷ್ಟ್ರಗಳಾದ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳು ಭಾರತದೊಂದಿಗೆ ಅನ್ಯೋನ್ಯವಾಗಿವೆ ಎನ್ನುವುದೂ ಅದಕ್ಕೆ ಗೊತ್ತು. ಅದಾಗ್ಯೂ ಚೀನಾ ತನ್ನ ಆರ್ಥಿಕ ಆಸಕ್ತಿಯಲ್ಲಿ ಯುದ್ಧಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿಲ್ಲವಾದರೂ, ಬೆಳೆಯುತ್ತಿರುವ ಭಾರತವಂತೂ ಅದಕ್ಕೆ ಕೆಟ್ಟ ಕನಸಾಗಿ ಕಾಡುತ್ತಿರುವುದು ಸುಳ್ಳಲ್ಲ.
ಹಾಗಿದ್ದರೆ ಎರಡೂ ದೇಶಗಳ ನಡುವೆ ಯುದ್ದ ನಡೆದೇ ಹೋಗುತ್ತದೆಯೇ? 'ಇಲ್ಲ' ಎನ್ನುತ್ತಾರೆ ಕಾಂತಿ ಬಾಜಪೇಯಿ. ಭಾರತೀಯ ವಾಯು ನೆಲೆಯನ್ನು ಧ್ವಂಸಗೊಳಿಸ ಹೋದರೆ ಎದುರಾಗುವ ತೊಂದರೆಗಳ
ಬಗ್ಗೆ ಚೀನಾಕ್ಕೆ ಅರಿವಿದೆ ಎನ್ನುವ ಅವರು, 'ತನ್ನ ಆಂತರಿಕ ಬಿಕ್ಕಟ್ಟುಗಳು, ಹಿಮಾಲಯದ ಮೇಲೆ ಭಾರತೀಯ ಸೇನೆಯ ಹಿಡಿತ ಮತ್ತು ಪರಮಾಣು ಯುದ್ಧ ಭೀತಿಗಳೆಲ್ಲವೂ ಆ ದೇಶಕ್ಕೆ ಕಾಡುತ್ತಿದೆ. ಹಾಗಾಗೇ, ಯುದ್ಧ ಚೀನಾದ ಆದ್ಯತೆ ಅಲ್ಲವೇ ಅಲ್ಲ' ಎನ್ನುತ್ತಾರವರು.
ಒಂದು ವೇಳೆ ಯಾವುದಾದರೂ ದೇಶ ಅತಿರೇಕಕ್ಕೆ ಹೋದರೆ ಯುದ್ಧವಾಗಬಹುದು ಎಂದು ಬಾಜಪೇಯಿ ತಮ್ಮ ಮಾತು ಮುಗಿಸುತ್ತಾರೆ. ಯಾವುದಾದರೂ ದೇಶ ಅತಿರೇಕಕ್ಕಿಳಿಯುವುದು ಅಸಂಭವವೇನಲ್ಲ. ಹಾಗೆ ಆಗುತ್ತದೆ ಎನ್ನುವ ಕಾರಣಕ್ಕೇ ಅಲ್ಲವೇ ಈ ಪೃಥ್ವಿಯ ಮೇಲೆ ಸೇನೆಗಳಿರುವುದು?
ಕಳೆದ ವರ್ಷ 'ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್' ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲದು, '2007-2011ರ ನಡುವೆ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿತ್ತು' ಎಂದು ಹೇಳಿದೆ. ಇನ್ನು ನಮ್ಮ ಮಿಲಿಟರಿ ಪರಿಣತರು ಸಂಭಾವ್ಯ ಯುದ್ಧಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ಆದರೆ ಭಾರತದ ಮುಂದೆ ಇಂದು ನಿಜಕ್ಕೂ ಎದುರಾಗಿರುವ ದೊಡ್ಡ ಸವಾಲೆಂದರೆ ಚೀನಾದ ವಿರುದ್ಧ ಹೇಗೆ ಚಾಕಚಕ್ಯತೆಯಿಂದ ತಂತ್ರಗಳನ್ನು ರೂಪಿಸಬೇಕು ಎಂಬುದು. ತಲೆಯಿಲ್ಲದ ಕಲಹಪ್ರಿಯತೆ ಮತ್ತು ಬಾಂಬ್ ಸ್ಫೋಟಗಳಿಂದಷ್ಟೇ ಯುದ್ಧ ಗೆಲ್ಲಬಹುದು ಎನ್ನುವುದು ಮೂರ್ಖತನವೇ ಸರಿ.
- ಪ್ರವೀಣ್ ಸ್ವಾಮಿ
anisikeprabha@gmail.com