ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೇಂದ್ರ ಬಿಜೆಪಿಯಲ್ಲಿ ನಾಯಕತ್ವ ಇದೆಯಾ?

Vishwanath S
Updated On : 14 May 2013, 9:37 am

ಕಲ್ಲಿದ್ದಲು ಹಗರಣ, ಇಬ್ಬರು ಸಚಿವರನ್ನು ಬಿಡಬೇಕಾಗಿ ಬಂದ ಸ್ಥಿತಿ, ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ನಡುವೆ ಆಯಿತೆನ್ನಲಾದ ಬಿರುಕು ಇವೆಲ್ಲದರ ಬಗ್ಗೆ ಬಿಜೆಪಿ ಬೊಬ್ಬೆ ಹೊಡೆದು ತನ್ನ ದೊಡ್ಡಸ್ತಿಕೆ ಕೊಚ್ಚಿಕೊಳ್ಳುತ್ತಿರುವುದು ಹೊಂದಾಣಿಕೆಯೇ ಆಗದ ವಿದ್ಯಮಾನದಂತಿದೆ.
ಮಾಧ್ಯಮಗಳೂ ಈಗ ಪ್ರಧಾನಿ ದೌರ್ಬಲ್ಯದ ಬಗ್ಗೆ ಹಾಗೂ ಕಲ್ಲಿದ್ದಲು ಹಗರಣ ತಡೆಯುವ ನಿಟ್ಟಿನಲ್ಲಿ ಅವರು ಏನೂ ಮಾಡದೇ ಕುಳಿತರೆಂಬ ಬಗ್ಗೆ ಪ್ರಖರವಾಗಿಯೇ ಟೀಕೆ ಮಾಡುತ್ತಿವೆ. ಹೀಗಾಗಿ ತಾನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದು ಸತ್ಯವಾಗಿದೆ ಎಂದು ಬಿಜೆಪಿ ಎದೆ ಉಬ್ಬಿಸಬಹುದಾದರೂ ಅದು ಬೇರೆಯವರ ವೈಫಲ್ಯದಲ್ಲಿ ತಾವು ಮೆರೆಯುವ ಕ್ಷಣಿಕ ಸಂತೋಷವಷ್ಟೇ ಆಗಬಲ್ಲದು. ಮನಮೋಹನ್ ಸಿಂಗ್ ಅವರ ಧೋರಣೆ ಬಯಲಿಗೆ ಬರುತ್ತಿರುವುದು ನಿಜವಾಗಿದ್ದರೂ ಕಾಂಗ್ರೆಸ್‌ನ ವೈಫಲ್ಯಗಳನ್ನು ಪಟ್ಟಿ ಮಾಡುವಾಗಲೆಲ್ಲ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿ ದಯನೀಯವಾಗಿ ಕುಸಿತ ಕಂಡಿರುವುದು ಮನದಟ್ಟಾಗುತ್ತದೆ. ಇದೇ ಕಾರಣಕ್ಕೆ ಬಹುಶಃ ಮುಂದಿನ ಲೋಕಸಭೆ ಚುನಾವಣೆಯನ್ನು ಕೂಡ ಬಿಜೆಪಿ ಸೋಲಬೇಕಾಗಿ ಬರಬಹುದು. ಆಂತರಿಕವಾಗಿ ಪಕ್ಷದ ನಾಯಕತ್ವ ತಿಕ್ಕಾಟಗಳಲ್ಲೇ ಮುಳುಗಿರುವ ಬಿಜೆಪಿ ಕಾರ್ಯತಂತ್ರದ ಆಯಾಮದಲ್ಲಿ ಯೋಚಿಸುವ ದೃಷ್ಟಿಕೋನವನ್ನೇ ಕಳೆದುಕೊಂಡಿದೆ.
ಬಿಜೆಪಿಯ ವರ್ತನೆಯಲ್ಲಿ ಸಪ್ತ ಮಹಾಪಾತಕಗಳನ್ನು ಗುರುತಿಸಬಹುದಾಗಿದೆ. ಈ ದೇಶ ಅವರಿಗೆ ಅವಕಾಶ ಕೊಡಬೇಕು ಎಂದಾದರೆ ಈ ಪಾತಕಗಳನ್ನು ಮೊದಲಿಗೆ ಅವರು ಸರಿಪಡಿಸಿಕೊಳ್ಳಬೇಕು.
1. ಪೊಳ್ಳು ಅಹಮಿಕೆಗಳ ಸಂಘರ್ಷ: ಪಕ್ಷಕ್ಕೆ ಕೇಂದ್ರ ನಾಯಕತ್ವ ಎನ್ನುವುದೇ ಇಲ್ಲವಾಗಿದೆ. ಇದರ ನಾಯಕರಿರುವುದೆಲ್ಲ ರಾಜ್ಯಗಳಲ್ಲೇ. ನರೇಂದ್ರ ಮೋದಿ, ಶಿವರಾಜ್‌ಸಿಂಗ್ ಚೌಹಾಣ್, ಸುಶೀಲ್ ಮೋದಿ, ವಸುಂಧರಾ ರಾಜೆ, ರಮಣ್ ಸಿಂಗ್ ಹಾಗೂ ಮನೋಹರ ಪಾರಿಕ್ಕರ್. ಬಹುಶಃ ಪ್ರಾಮುಖ್ಯದ ವಿಷಯದಲ್ಲೂ ಇವರು ಇದೇ ಅನುಕ್ರಮದಲ್ಲಿ ಬರುತ್ತಾರೆ. ಕೇಂದ್ರ ಕಚೇರಿಯಲ್ಲಿರುವ ನಾಯಕರೆಲ್ಲರೂ ತಮ್ಮ ಪೊಳ್ಳು ಅಹಮಿಕೆಯ ಡೋಲನ್ನು ಬಡಿದುಕೊಂಡಿರುವವರಷ್ಟೇ. ಟಿವಿ ಕ್ಯಾಮೆರಾಗಳ ಎದುರು ಅವರು ಎಷ್ಟೇ ಬೊಬ್ಬೆ ಹೊಡೆದುಕೊಳ್ಳಬಲ್ಲವರಾದರೂ ಸ್ವಂತಬಲದಲ್ಲಿ ಒಂದು ಸೀಟನ್ನು ಗೆದ್ದುಬರುವ ಯೋಗ್ಯತೆಯೂ ಇವರಿಗೆ ಇಲ್ಲ. ಎಲ್. ಕೆ. ಆಡ್ವಾಣಿಯವರಿಂದ ಹಿಡಿದು ಸುಷ್ಮ ಸ್ವರಾಜ್‌ವರೆಗೆ ಹಾಗೂ ಅರುಣ್ ಜೇಟ್ಲಿವರೆಗೂ ಇದು ಸತ್ಯವೇ. ಇಷ್ಟು ಸಾಲದು ಎಂಬಂತೆ ಆರೆಸ್ಸೆಸ್ ತನ್ನ ಅಜೆಂಡಾ ಹಿಡಿದು ಮಧ್ಯ ನಿಂತಿದೆ.
2. ನೀತಿ ನಿರೂಪಣೆ ಗೊಂದಲಮಯ: ಪಕ್ಷಕ್ಕೆ ಯಾವುದೆ ವಿಷಯದ ಬಗ್ಗೆ ಖಚಿತ ನಿಲುವುಗಳಿಲ್ಲ. ವಿದೇಶಿ ನೇರಬಂಡವಾಳ ಹೂಡಿಕೆ, ಆಹಾರ ಭದ್ರತೆ ಹಾಗೂ ಇನ್ನೆಲ್ಲ ವಿಷಯಗಳ ಕುರಿತು ಪ್ರತೀ ನಾಯಕನೂ ತನ್ನದೇ ಆದ ಅಭಿಪ್ರಾಯ ಹೊಂದಿದ್ದಾನೆ. ಬಲಪಂಥೀಯ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯ ನಿಲುವು ಆಹಾರ ಭದ್ರತೆ ಕಾಯ್ದೆ ಸಂಬಂಧ ಹೇಗಿದೆ ಎಂದು ನೋಡಿದರೆ ಮಸೂದೆ ಪ್ರಸ್ತಾಪಿಸಿರುವ ಶೇ. 65ರ ಆಹಾರ ಭದ್ರತೆಗೆ ವಿರುದ್ಧವಾಗಿ ಶೇ. 90ರ ಆಹಾರ ಭದ್ರತೆ ಇರಲಿ ಎಂಬುದು ಅದರ ಪ್ರತಿಪಾದನೆ ಇದ್ದಂತಿದೆ. ಇದೊಂದು ಮೂರ್ಖತನವಷ್ಟೆ. ಮಸೂದೆಯಲ್ಲಿ ಕಾಂಗ್ರೆಸ್ ವ್ಯಕ್ತಪಡಿಸಿದ ಮೂರ್ಖತನಕ್ಕೆ ಪ್ರತಿಯಾಗಿ ಬಿಜೆಪಿ ಇನ್ನಷ್ಟು ಅಸಡ್ಡಾಳತನವನ್ನು ಕೊಡುಗೆಯಾಗಿ ನೀಡುತ್ತಿದೆ.
3. ವಿವೇಚನಾರಹಿತ ನಡೆ: ಸಂಸತ್ತಿನ ಒಳಗೆ ಮತ್ತು ಹೊರಗೆ ಬಿಜೆಪಿಗೆ ಕಾರ್ಯತಂತ್ರಗಳೇ ಇಲ್ಲ. ಕೆಲವೊಮ್ಮೆ ಸಂಸತ್ತಿನ ಕಲಾಪಕ್ಕೆ ಅಡ್ಡಿಯುಂಟು ಮಾಡುವುದು ಅನಿವಾರ್ಯವೆಂದು ಒಪ್ಪೋಣ. ಆದರೆ ಪ್ರತಿಬಾರಿಯೂ ಅದೇ ಹಾಡಾದರೆ ಬಿಜೆಪಿಯ ಮತಗಳಿಗೆ ಖಂಡಿತ ಅದು ಹಾನಿಯನ್ನುಂಟು ಮಾಡಲಿದೆ. ಇವರು ಕಲಾಪದಲ್ಲಿ ಭಾಗವಹಿಸಿ ಚರ್ಚೆಯನ್ನೇ ಮಾಡುವುದಿಲ್ಲ ಅಂದಮೇಲೆ ಆರಿಸಿ ಕಳುಹಿಸುವುದಾದರೂ ಏತಕ್ಕೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ. ಯೋಚನೆಯ ಬಲವೇ ಇಲ್ಲದ ಇವರ ವೃಥಾ ಅಡ್ಡಿ ಸಾಬೀತುಪಡಿಸುತ್ತಿರುವ ಅಂಶ ಎಂದರೆ ಬಿಜೆಪಿಯ ಯಾವ ಕಾರ್ಯಗಳ ಹಿಂದೆಯೂ ಶಿಸ್ತುಬದ್ಧ ಯೋಜನೆ ಎಂಬುದು ಇಲ್ಲವೇ ಇಲ್ಲ ಎಂಬುದು.
4. ತನ್ನದೇ ಹಿತಾಸಕ್ತಿಗಳಿಗೆ ಕುರುಡು: ಅವಕಾಶ ಮತ್ತು ಆತಂಕಗಳ ನಡುವಿನ ವ್ಯತ್ಯಾಸ ಗುರುತಿಸುವುದೇ ಬಿಜೆಪಿಗೆ ದುಸ್ತರವಾದಂತಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಿನಾಮೆ ಕೊಡಬೇಕು ಎಂಬ ಒತ್ತಾಯವನ್ನೇ ಗಮನಿಸೋಣ. ಇದರಿಂದ ಬಿಜೆಪಿ ಸಾಧಿಸುವುದಾದರೂ ಏನನ್ನು? ವಾಸ್ತವದಲ್ಲಿ ಸಿಂಗ್ ಅವರು ಪ್ರಧಾನಿ ಹುದ್ದೆಯಲ್ಲಿದ್ದರೆ ಬಿಜೆಪಿಗೆ 2014ರಲ್ಲಿ ಅವರ ದೌರ್ಬಲ್ಯ ತೋರಿಸಿ ಮತ ಕೇಳುವುದಕ್ಕೆ ಸಾಧ್ಯ. ಸಿಂಗ್ ಅವರಿಗೆ ಪರ್ಯಾಯ ಸೋನಿಯಾ ಗಾಂಧಿ ಬಳಿಯಲ್ಲಿ ಇದ್ದಿಲ್ಲದೇ ಇರಬಹುದು. ಆದರೆ ಆ ವಿಷಯದ ಮೇಲೆ ಬೊಬ್ಬೆ ಹಾಕುವುದರಿಂದ ಬಿಜೆಪಿಗೇನು ಲಾಭ?
5. ಆಡಳಿತ ಲೋಪ: ಬಿಜೆಪಿಯು ಆಡಳಿತಕ್ಕಲ್ಲ, ಆಡಳಿತ ರಹಿತ ಸ್ಥಿತಿಗೆ ಜಾಹೀರಾತಿನ ವಸ್ತುವಾಗಬಲ್ಲದು. ಆಡಳಿತದ ವಿಷಯದಲ್ಲೇ ಮುಂದಿನ ಚುನಾವಣೆ ಎದುರಿಸುವುದಾದರೆ ಬಿಜೆಪಿಯ ಕೇಂದ್ರ ನಾಯಕತ್ವದಲ್ಲಿ ಇದಕ್ಕೆ ಯಾವ ಮಾದರಿಯೂ ಇಲ್ಲ. ನರೇಂದ್ರ ಮೋದಿಯವರನ್ನು ಈ ವಿಷಯದಲ್ಲಿ ಬ್ರಾಂಡ್ ಮಾಡಬಹುದಾದರೂ ಅದರಲ್ಲೂ ಕೇಂದ್ರ ನಾಯಕತ್ವ ರಾಜಕೀಯ ಮಾಡಿಕೊಂಡಿದೆ. ಹೋಗಲಿ ಅವರಿಗೆ ಪರ್ಯಾಯವಾಗಿ ಮತ್ತೊಬ್ಬರನ್ನು ತೋರಿಸುವ ತಾಕತ್ತೂ ಅದಕ್ಕಿಲ್ಲ. ಬಿಜೆಪಿಯ ವರ್ತನೆ ಎಂಥ ಮೂರ್ಖತನದ್ದು ಹಾಗೂ ಅಸಂಘಟಿತವಾದದ್ದು ಎಂದು ಇದರಿಂದಲೇ ತಿಳಿಯುತ್ತದೆ.
6. ಅಸ್ತಿತ್ವದ ಸ್ವಮೌಲ್ಯವಿಲ್ಲ: ಬಿಜೆಪಿ ಇಂದು ಬದುಕಿಕೊಂಡಿರುವುದು (ಪ್ರವರ್ಧಮಾನವಲ್ಲ) ಕಾಂಗ್ರೆಸ್‌ನ ದೌರ್ಬಲ್ಯದ ಮೇಲೆಯೇ ಹೊರತು ತನ್ನ ಸ್ವಂತ ಬಲದಿಂದ ಅಲ್ಲ. ಪ್ರತಿಪಕ್ಷ ಗಟ್ಟಿ ಇದ್ದರೆ ಸರ್ಕಾರವೂ ಗಟ್ಟಿಯಾಗುತ್ತದೆ. ಆದರೆ ಅಂಥ ತಾಕತ್ತು ಬಿಜೆಪಿಯಲ್ಲಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ ಕಾಂಗ್ರೆಸ್‌ನ ದುರಾಡಳಿತ ಅದರದ್ದೇ ಅಹಂಕಾರದ ಫಲ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ಜನತೆಗೆ ತನ್ನ ಹೊರತೂ ಬೇರೆ ಆಯ್ಕೆಗಳಿಲ್ಲ ಎಂದು ಬಿಜೆಪಿ ನಂಬಿಕೊಂಡಿರುವುದೂ ಅಹಂಕಾರದ ಮಾದರಿಯೇ. ಇದರ ಪರಿಣಾಮವಾಗಿ, ಅಷ್ಟು ಸ್ಥಿರವಲ್ಲದಿದ್ದರೂ ಪರವಾಗಿಲ್ಲ ಎಂದು ಜನ ತೃತೀಯರಂಗವನ್ನು ಅಪ್ಪಿಕೊಳ್ಳುವ ಸಾಧ್ಯತೆಯೂ ಇದೆ.
7. ಅಶಿಸ್ತು: ನಾಯಕತ್ವ, ನೀತಿ ಹಾಗೂ ವಿಷಯಗಳ ಕುರಿತ ಪಕ್ಷದೊಳಗಿನ ಭಿನ್ನಧ್ವನಿಗಳನ್ನು ಆಂತರಿಕ ಪ್ರಜಾಪ್ರಭುತ್ವ ಎನ್ನುವ ಮೂಲಕ ಬಿಜೆಪಿ ತನ್ನ ಅಶಿಸ್ತನ್ನು ಮುಚ್ಚಿಕೊಳ್ಳುವುದಕ್ಕೆ ನೋಡುತ್ತಿದೆ. ಗಳಿಗೆಗೊಂದು ಮಾತನಾಡುವ ರಾಮ್ ಜೇಠ್ಮಲಾನಿ ಅಂಥವರ ವಿರುದ್ಧ ಪಕ್ಷಕ್ಕೆ ಕ್ರಮ ಕೈಗೊಳ್ಳಲಾಗದಿರುವುದು ಏಕೆ? ಮೋದಿ ಪ್ರಧಾನಿಯಾಗಲಿ ಎಂದು ಯಶವಂತ್ ಸಿನ್ಹಾ ಹೇಳಿಕೆ ಕೊಡುತ್ತಾರೆ. ನಂತರದಲ್ಲಿ ಆಡ್ವಾಣಿ ಸಹ ಸ್ವೀಕಾರಾರ್ಹ ಎನ್ನುತ್ತಾರೆ. ಇದೇ ಸಿನ್ಹಾ 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಆಡ್ವಾಣಿಯವರನ್ನು ಟೀಕಿಸಿದ್ದರು.
ಹೀಗೆ ಬಿಜೆಪಿಯ ಪ್ರಾರಬ್ಧಗಳನ್ನು ಪಟ್ಟಿ ಮಾಡುತ್ತ ಹೋಗಬಹುದು. ಪಕ್ಷದೊಳಗೆ ಶಿಸ್ತು ಮೈಗೂಡದಿದ್ದರೆ ಸಾಮೂಹಿಕ ನಾಯಕತ್ವಕ್ಕೆ ಅರ್ಥವಿಲ್ಲವಾಗುತ್ತದೆ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ದುರದೃಷ್ಟವಶಾತ್ ಬಿಜೆಪಿಯ ಕೇಂದ್ರಸ್ಥಾನದಲ್ಲಿ ನಾಯಕರಿಲ್ಲ, ಕೇವಲ ಟಿವಿ ನಟನಾಕಾರರಿದ್ದಾರೆ. ಅವರ ಬಾಯಿ ಮುಚ್ಚಿಸಿ ನೈಜ ನಾಯಕನನ್ನು ಕಂಡುಕೊಳ್ಳುವುದು ಬಿಜೆಪಿಯ ತುರ್ತು. 

 -ಆರ್. ಜಗನ್ನಾಥ್
ಫಸ್ಟ್‌ಪೋಸ್ಟ್ ಜಾಲತಾಣದ ಸಂಪಾದಕರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement