ದೇಶಪ್ರೇಮ ಶಿಥಿಲವಾಗಿರುವುದು ಇಂಥವರಿಂದಲೇ ತಾನೇ?
ವಂದೇ ಮಾತರಂ..../ ಸುಜಲಾಮ್ ಸುಫಲಾಮ್, ಮಲಯಜ ಶೀತಲಾಮ್/ ಸಸ್ಯ ಶಾಮಲಾಮ್, ಮಾತರಂ...
ವಂದೇ ಮಾತರಂ... ವಂದೇ ಮಾತರಂ...
ಸಹಸ್ರಾರು ಯುವಕರನ್ನು ಬ್ರಿಟಿಷರ ವಿರುದ್ಧ ಸೆಟೆದು ನಿಲ್ಲುವಂತೆ ಮಾಡಿ, ರಾಷ್ಟ್ರಪ್ರೇಮದ ಬೀಜ ಬಿತ್ತಿ ದೇಶಭಕ್ತರಿಗೆಲ್ಲಾ ಅಂದು ಸ್ಫೂರ್ತಿಯಾದದ್ದು ಇದೇ ವಂದೇ ಮಾತರಂ. ಕೈಯಲ್ಲಿ ರಾಷ್ಟ್ರಧ್ವಜ, ಬಾಯಲ್ಲಿ ವಂದೇ ಮಾತರಂನ ಘೋಷ ಝೇಂಕರಿಸುತ್ತಲೇ ಬ್ರಿಟಿಷರ ಗುಂಡಿಗೆ ತನ್ನ ಗುಂಡಿಗೆಯನ್ನು ಕೊಟ್ಟು, ಕೊರಳಿಗೆ ಉರುಳು ಹಾಕಿಸಿಕೊಂಡು ಅಂದು ಸ್ವಾತಂತ್ರ್ಯಕ್ಕಾಗಿ ಮಡಿದ ನಮ್ಮ ವೀರರಿಗೆ ಇದು ಕೇವಲ ಗೀತೆಯಾಗಿರಲಿಲ್ಲ, ಸಂಘರ್ಷ ಗೀತೆಯಾಗಿತ್ತು, ಕ್ರಾಂತಿ ಗೀತೆಯಾಗಿತ್ತು. ಸ್ವತಂತ್ರ ಭಾರತದ ಕನಸನ್ನು ಸಾಕಾರಗೊಳಿಸಬಲ್ಲ ಒಂದು ಅಸ್ತ್ರವೇ ಆಗಿ ಅಂದು ಮಾರ್ಪಟ್ಟಿತ್ತು ವಂದೇ ಮಾತರಂ. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಇಂಪಾದ ಆ ಸಾಲುಗಳನ್ನೊಮ್ಮೆ ಕೇಳಿದಾಗ, ಯಾವ ಭಾರತೀಯನಿಗೂ ರೋಮಾಂಚನವಾಗದೆ ಇರದು. ಎಂತಹ ಸಂದರ್ಭದಲ್ಲೂ ದೇಶಭಕ್ತಿಯ ಕಿಚ್ಚನ್ನು ಹಚ್ಚಬಲ್ಲ ವಂದೇ ಮಾತರಂಗೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ತಗುಲಿದೆ! ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿಯೂ ಇದು ಪ್ರತಿಧ್ವನಿಸುತ್ತಿರುವುದು ಆತಂಕಕಾರಿ.
ಸ್ವಾತಂತ್ರ ಪಡೆದ ಬಳಿಕ, ಭಾರತದ ಪ್ರಥಮ ಲೋಕಸಭೆಯ ಅವಧಿಯಿಂದಲೂ, ದೈನಂದಿನ, ಸಂಸತ್ ಅಧಿವೇಶನ ರಾಷ್ಟ್ರೀಯ ಗೀತೆ ಜನ-ಗಣ-ಮನದೊಂದಿಗೆ ಪ್ರಾರಂಭವಾಗಿ, ವಂದೇ ಮಾತರಂ ಗೀತೆಯೊಂದಿಗೆ ಅಂತ್ಯವಾಗುವುದು ಸಂಪ್ರದಾಯ. ಎಂದಿನಂತೆಯೇ ಕೆಲ ದಿನಗಳ ಹಿಂದೆ ಮೇ 8ರಂದು ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ, ವಿವಿಧ ಚರ್ಚೆಗಳು ಭರದಿಂದ ಸಾಗಿತ್ತು. ದಿನದ ಅಂತ್ಯಕ್ಕೆ ತಲುಪಿದ ಸಂದರ್ಭದಲ್ಲಿ ಸಭಾಧ್ಯಕ್ಷೆ ಮೀರಾ ಕುಮಾರ್, ವಂದೇ ಮಾತರಂ ಗೀತೆಯನ್ನು ಚಾಲನೆ ಮಾಡಲು ಸೂಚಿಸಿದರು. ಉಪಸ್ಥಿತರಿದ್ದ ಸಂಸದರೆಲ್ಲರೂ ಗೌರವಪೂರ್ವಕವಾಗಿ ಎದ್ದು ನಿಂತ ಕೂಡಲೇ ಗೀತೆ ಪ್ರಾರಂಭವಾಯಿತು. ಇದಾದ ಕೆಲವೇ ನಿಮಿಷಗಳಲ್ಲಿ ಬಿಳಿ ಟೊಪ್ಪಿ ತೊಟ್ಟು, ಮಾರುದ್ದ ಗಡ್ಡ ಬಿಟ್ಟ ಸದಸ್ಯನೊಬ್ಬ ಗೀತೆ ಚಾಲನೆಯಲ್ಲಿದ್ದರೂ ಲೆಕ್ಕಿಸದೆ ಅದಕ್ಕೆ ಅಪಮಾನವೆಸಗಿ ಸದನದ ಮಧ್ಯ ಭಾಗದಿಂದ ಎದ್ದು ಹೊರನಡೆಯುತ್ತಾನೆ. ಅಕ್ಕಪಕ್ಕದಲ್ಲಿದ್ದ ಸದಸ್ಯರು ಗೀತೆ ಚಾಲ್ತಿಯಲ್ಲಿದ್ದರಿಂದ, ಗೊಂದಲ ಸೃಷ್ಟಿಸಬಾರದೆಂಬ ಕಾರಣಕ್ಕೆ ಆತನನ್ನು ತಡೆಯಲು ಹೋಗುವುದಿಲ್ಲ.
ಆತ ಬೇರ್ಯಾರು ಅಲ್ಲ. ಉತ್ತರ ಪ್ರದೇಶದ ಶಾಂಭಲ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಸಂಸದ ಶಫೀಕುರ್ ರೆಹಮಾನ್ ಬಾರ್ಕ್. ಅಕಸ್ಮಾತ್ ಅಚಾತುರ್ಯದಿಂದ ಸರ್ಕಾರಿ ಅಧಿಕಾರಿಯೊಬ್ಬರಿಂದ ಈ ತಪ್ಪಾಗಿದಿದ್ದರೆ ಅವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುತ್ತಿದ್ದರೇನೋ. ಆದರೆ, ದೇಶದ ಶಾಸನ, ಕಾನೂನುಗಳನ್ನು ರಚಿಸಬೇಕಾದ ಲೋಕಸಭಾ ಸದಸ್ಯನೊಬ್ಬನಿಂದ ಉದ್ದೇಶಪೂರ್ವಕವಾಗಿ ಇಂತಹ ದುಷ್ಕೃತ್ಯ ನಡೆದರೂ ಅವರಿಗೆ ಕಠಿಣವಾದ ಸಲಹೆಯನ್ನಷ್ಟೇ ಕೊಡ್ತಾರಲ್ಲ ಸ್ವಾಮಿ, ಯಾವ ದಿಕ್ಕಿಗೆ ಸಾಗುತ್ತಿದೆ ನಮ್ಮ ದೇಶ?
ಆತನ ಹುಂಬತನ ಗೀತೆಗೆ ಅಪಮಾನಿಸಿ ಎದ್ದು ಹೋದದ್ದರಲ್ಲಷ್ಟೇ ಮುಗಿಯಲಿಲ್ಲ, ಬದಲಿಗೆ ಮಾಧ್ಯಮಗಳ ಎದುರು ಮತಾಂಧನಂತೆ ಡೈಲಾಗ್ಗಳನ್ನು ಹೊಡೆದಿದ್ದಾನೆ- 'ನಾನು ನೈಜ ಮುಸಲ್ಮಾನ, ವಂದೇ ಮಾತರಂ ಗೀತೆಗೆ ಗೌರವ ಕೊಡುವ ಪ್ರಶ್ನೆಯೇ ಇಲ್ಲ. ನಾನು ಈ ಪದ್ಯಕ್ಕೆ ಹಿಂದೆಯೂ ಗೌರವ ಕೊಟ್ಟಿಲ್ಲ. ಅಲ್ಲಾಕಸಮ್, ಮುಂದೆಯೂ ಕೊಡುವುದಿಲ್ಲ. ಯಾರೋ ಮುಸ್ಲಿಮೇತರರು ರಚಿಸಿರುವ ಪದ್ಯವನ್ನು, ಇನ್ಯಾರೋ ಹಲವರು ರಾಷ್ಟ್ರೀಯ ಗೀತೆ ಎಂದು ಮಾಡಿದಾಕ್ಷಣ ನಾನು ಅದನ್ನು ಒಪ್ಪಬೇಕೆಂದೇನಿಲ್ಲ. ನಾವು ಅಲ್ಲಾಗೆ ಮಾತ್ರ ತಲೆಬಾಗುವವರು, ಅಲ್ಲಾಗೆ ಬಿಟ್ಟು ಭೂಮಿಯ ತುಂಡಿಗೆ ವಂದಿಸುವ ದರ್ದು ನಮಿಗಿನ್ನೂ ಬಂದಿಲ್ಲ. ಇದಕ್ಕೆ ಕುರಾನ್ ಎಂದಿಗೂ ಅವಕಾಶವನ್ನು ಕಲ್ಪಿಸಿಲ್ಲ. ಈ ತಪ್ಪುನ್ನು ಮಾಡಿದರೆ ಇಸ್ಲಾಮಿಕ್ ಕಾನೂನು ಷರಿಯ ಸಹ ಎಂದಿಗೂ ಕ್ಷಮಿಸುವುದಿಲ್ಲ. ನನ್ನ ಇಚ್ಛೆಗನುಸಾರವಾಗಿ ಹೊರ ನಡೆದಿದ್ದೇನೆ. ಈ ಘಟನೆಗೆ ಕ್ಷಮೆ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆಯುವ ಅಗತ್ಯವೇ ಇಲ್ಲ. ಸದನದಲ್ಲಿ ಮುಂದೇನಾದರು ಈ ಪದ್ಯ ಮತ್ತೊಮ್ಮೆ ಕೇಳುವಂತಹ ಸಂದರ್ಭ ಎದುರಾದರೆ ನಾನು ಅನುಪಸ್ಥಿತನಾಗಿರುತ್ತೇನೆ. ಇಲ್ಲವಾದರೆ ಮತ್ತೊಮ್ಮೆ ಹೊರನಡೆಯುತ್ತೇನೆ, ಬೇರೆ ಪ್ರಶ್ನೆಯೇ ಉದ್ಭವಿಸದು.' ಹೇಗಿದೆ ನೋಡಿ ವರಸೆ!
ಮುಲಾಯಂ ಸಿಂಗ್ ಹಾಗೂ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದಲ್ಲಿ ಮೈತ್ರಿಯಾಗುವವರೆಗೂ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡು, ನಾಲ್ಕು ಬಾರಿ ಶಾಸಕ ಹಾಗೂ ಮೂರು ಬಾರಿ ಸಂಸತ್ತಿಗೆ ಚುನಾಯಿತನಾದ ಶಫೀಕೂರ್ ರೆಹಮಾನ್ 2009ರ ನಂತರ ಸಮಾಜವಾದಿ ಪಕ್ಷ ಮುಸ್ಲಿಂ ವಿರೋಧಿ ಎಂದು, ಮುಲಾಯಂರೊಂದಿಗೆ ಖ್ಯಾತೆ ತೆಗೆದು ಪಕ್ಷ ಬಿಟ್ಟು ಹೊರಬಂದವರು. ಉತ್ತರ ಪ್ರದೇಶದಲ್ಲಿರುವ ಶೇ.30 ಮುಸಲ್ಮಾನರ ವೋಟು ಪಡೆಯಲು ಬಕಪಕ್ಷಿಯಂತೆ ಕಾದು ಕುಳಿತಿದ್ದ ಮಾಯಾವತಿಯ ಬಹುಜನ ಸಮಾಜ ಪಕ್ಷಕ್ಕೆ ಆಗ ಸುಲಭವಾಗಿ ದಕ್ಕಿದ ವ್ಯಕ್ತಿ. ಇಡೀ ಉತ್ತರ ಪ್ರದೇಶದ ಮುಸ್ಲಿಮರ ಕಲ್ಯಾಣಕಿಂಕರ ತಾನು ಎಂಬ ಗುಂಗಿನಲ್ಲಿದ್ದ ಶಫಿಕೂರ್ಗೆ ಹೊಸ ಪಕ್ಷದಲ್ಲೂ ಮುಸ್ಲಿಂ ನಾಯಕನೆಂಬ ಬಿರುದನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅದರ ಸಲುವಾಗಿ, ಪಕ್ಷಕ್ಕೆ ಬಂದೊಡನೆ ಅಲ್ಲಿಯೂ ಮುಸ್ಲಿಂ ವಿರೋಧದ ವಾಸನೆ ಹುಡುಕತೊಡಗಿದ. ವಿವಿಧ ರಾಜಕೀಯ ಪಕ್ಷಗಳಲ್ಲಿ ತಮ್ಮದೇ ಆದ ಘೋಷವಾಕ್ಯಗಳಿರುತ್ತವೆ. ಪಕ್ಷದ ಸಭೆ ಸಮಾರಂಭಗಳಲ್ಲಿ, ಪ್ರತಿಭಟನೆಗಳಲ್ಲಿ ಕಾರ್ಯಕರ್ತರು ಅವುಗಳನ್ನು ಕೂಗುತ್ತಿರುತ್ತಾರೆ. ಕಾಂಗ್ರೆಸ್ನವರು ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದರೆ ಭಾಜಪದ ಕಾರ್ಯಕರ್ತರು ಬೋಲೊ ಭಾರತ್ ಮಾತಾ ಕೀ ಜೈ ಎಂದು ಘೋಷಿಸುವುದು ರೂಢಿ. ಅದರಂತೆಯೇ ದಲಿತಪರ ಚಿಂತನೆ, ಚಳವಳಿಗಳಿಂದ ತಲೆ ಎತ್ತಿದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಘೋಷ ಜೈ ಭೀಮ್. ಈ ಘೋಷ ಮುಸಲ್ಮಾನರ ಪರವಿಲ್ಲವೆಂದು ಬಡಬಡಾಯಿಸಿ ಬಿಎಸ್ಪಿಯ ಇತರೆ ಮುಸ್ಲಿಂ ಶಾಸಕರನ್ನು, ಸಂಸದರನ್ನು ಹಾಗೂ ಕಾರ್ಯಕರ್ತರನ್ನು ಸೇರಿಸಿ ಸಭೆಗಳನ್ನು ಮಾಡಿ, ಒಂದಿಷ್ಟು ದಿನ ಇದರ ವಿರುದ್ಧ ಬೊಬ್ಬೆಹೊಡೆದು ತನ್ನ ಮುಸ್ಲಿಂ ನಾಯಕನೆಂಬ ಬಿರುದನ್ನು ಕಾಪಾಡಿಕೊಂಡಿದ್ದ. ಮುಸಲ್ಮಾನರ ಹೊರತು ಪಡಿಸಿ ಇನ್ಯಾವುದೇ ಕೋಮಿಗೆ ಸೇರಿದವರು ದಲಿತ ಘೋಷ ಜೈ ಭೀಮ್ ವಿರುದ್ಧ ನಿಂತಿದ್ದರೆ ಏನಾಗುತಿತ್ತು ಎಂಬುದು ಯೋಚಿಸುವಂತಹದ್ದು! ಮಾಯಾವತಿಯಂಥ ದಲಿತ ನಾಯಕರು ಕೂಡ ಅಂದು ತುಟಿ ಬಿಚ್ಚದೆ ಮೌನವ್ರತ ವಹಿಸಿದ್ದರು ಎಂದರೆ ಬಹುಜನ ಸಮಾಜ ಪಕ್ಷದ ದಲಿತ ನಿಲುವುಗಳ ಬಗ್ಗೆ ಸಂಶಯಗಳು ಮೂಡುವುದಿಲ್ಲವೇ?
ಡಿಸೆಂಬರ್ 6 2012ರಂದು ಲೋಕಸಭಾ ಅಧಿವೇಶನ ನಡೆಯುತ್ತಿದ್ದ ಸಂದರ್ಭ. ಪಾಕಿಸ್ತಾನದ ಸೆನೆಟ್ ಅಧ್ಯಕ್ಷರಾಗಿದ್ದ ಸಯ್ಯದ್ ನಾಸಿರ್ ಹುಸೇನ್ ಬುಖಾರಿ ಹಾಗೂ ಪಾಕಿಸ್ತಾನದ ಸಂಸದೀಯ ನಿಯೋಗದ ಉಪಸ್ಥಿತಿ ಸದನದಲ್ಲಿತ್ತು. ಬಾಬ್ರಿ ಮಸೀದಿ ಕೆಡವಿ 20 ವರ್ಷಗಳ ಕಾಲ ಸದನದಲ್ಲಿ ಚಕಾರವೆತ್ತದ ಇದೇ ಶಫಿಕೂರ್, ಪಾಕಿಸ್ತಾನದ ನಾಯಕರು ಸದನದಲ್ಲಿದ್ದಾರೆ ಎಂಬ ಒಂದೇ ಕಾರಣಕ್ಕೆ ಬಾಬ್ರಿ ಮಸೀದಿಯನ್ನು ಕೆಡವಿ ಇಂದಿಗೆ 20 ವರ್ಷಗಳಾಗಿದೆ ಎಂದು ಕಪ್ಪು ಧ್ವಜದೊಂದಿಗೆ ಸದನದ ಬಾವಿಯಲ್ಲಿ ಪ್ರತಿಭಟನೆಯಲ್ಲಿ ನಿರತ! ಶಫಿಕೂರ್ನ ಇಂತಹ ಡೋಂಗಿ ಪ್ರದರ್ಶನಗಳ ಉದಾಹರಣೆಗಳು ಇನ್ನೂ ಬಹಳಷ್ಟಿವೆ.
ವಂದೇ ಮಾತರಂ ಗೀತೆಯನ್ನು ಪರಮಪೂಜನೀಯ ಭಾವನೆಯಿಂದ ಪುರಸ್ಕರಿಸುವ ಮುಸಲ್ಮಾನರು ಭಾರತದಲ್ಲಿ ಸಾಕಷ್ಟು ಜನ ಇದ್ದಾರೆ. ಇಷ್ಟಕ್ಕೂ ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧರ್ಮವನ್ನು ನಿಂದನೆ ಮಾಡಿಲ್ಲ. ಅದರಲ್ಲಿ ಹಿಂದೂ ದೇವತೆಗಳ ಪೂಜೆ ಇಲ್ಲ. ಭಾರತವನ್ನು ತಾಯಿಯ ಸ್ಥಾನದಲ್ಲಿ ಇರಿಸಿ ನಮಸ್ಕರಿಸಿ, ವಂದಿಸುವ ಆಶಯ ಅಲ್ಲಿದೆ. ಅಂಥ ಗೀತೆಯ ಬಗ್ಗೆ ಕೊಂಕು ತೆಗೆಯುವವರು ತಮ್ಮ ಹೆತ್ತ ತಾಯಿ ಮತ್ತು ನೆಲೆಕೊಟ್ಟ ದೇಶಕ್ಕೆ ಗೌರವ ಕೊಟ್ಟಾರೆಯೇ? ಸೆಕ್ಯುಲರ್ ಎಂದು ಕರೆಸಿಕೊಳ್ಳಲು ಇಚ್ಛೆಪಡುವ ಪಕ್ಷಗಳು ಇದ್ಯಾವುದಕ್ಕೂ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿಲ್ಲ ಎಂಬುದೇ ಚಿಂತೆಯ ವಿಷಯ.
-ವಿಕಾಸ ಪುತ್ತೂರು
mails4vikas@gmail.com