ಎರಡು ನಿರ್ಧಾರಗಳು ಬೆಸೆದುಕೊಂಡರೆ....
ಮದ್ಯ ತಯಾರಿಕೆ ಮತ್ತು ಸರಬರಾಜುಗಳನ್ನೇ ಪೂರ್ಣ ನಿಲ್ಲಿಸುವುದು ಒಳ್ಳೆಯದು ಎಂದು ಭಾವಿಸಿದ್ದವರ ಭಾವಚಿತ್ರಕ್ಕೆ ನಮಿಸುತ್ತ, ಇತ್ತ ತಮ್ಮ ಸರ್ಕಾರವು ಬಡವರಿಗೆ ಕಡಿಮೆ ದರದಲ್ಲಿ ಮದ್ಯವನ್ನು ಪೂರೈಸಬಾರದೇಕೆ ಎಂಬ ಚಿಂತನೆಯಲ್ಲಿ ಮುಖ್ಯ ಮಂತ್ರಿಗಳು ತೊಡಗಿರುವುದನ್ನು (ಅದು ಇನ್ನೂ ನಿರ್ಧಾರ ಅಲ್ಲವಂತೆ, ಕೇವಲ ಚಿಂತನೆಯಂತೆ) ನೋಡಲು, ಆ ಭಾವಚಿತ್ರದಲ್ಲಿರುವ ಮಹಾತ್ಮರು ಬದುಕಿದ್ದರೆ 'ಆಹಾ, ಕಾಂಗ್ರೆಸ್ ಸರ್ಕಾರದಿಂದಲೇ ಇಂಥಾ ಒಂದು ಘನ ಕಾರ್ಯ ನೆರವೇರುತ್ತಿದೆಯಲ್ಲಾ!' ಎಂದು ಅವರು ಅದೆಷ್ಟು ಸಂತೋಷಪಡುತ್ತಿದ್ದರೋ? ಇಂಥ ಚಿಂತನೆಯನ್ನು ಸರಿಯೆನ್ನಲಾದೀತೇ? ಇದು ಸರಿಯೆಂದು ಒಪ್ಪುವುದಾದರೆ, ಹೀಗೇ ಒಂದು ದಿನ, 'ನಾಡಿನ ಬಡ ರೈತರ ಕ್ಷೇಮಾಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದಿಂದ ಉಚಿತ ಎಂಡೋ ಸಲ್ಫಾನ್ ಪೂರೈಕೆ' ಎಂಬ ತಲೆಬರಹದಡಿಯಲ್ಲಿ ಸರ್ಕಾರದ ಹೊಸ ಚಿಂತನೆ- ನಿರ್ಧಾರಗಳ ಸುದ್ದಿ, ಪತ್ರಿಕೆಗಳ ಮುಖಪುಟದಲ್ಲೇ ಪ್ರಕಟಗೊಂಡರೆ, ಅದನ್ನೂ ನಾವು ಸಂತೋಷದಿಂದಲೇ ಸ್ವಾಗತಿಸಬೇಕಾಗುತ್ತದೆ.
ಬಡವರಿಗೆ ಒಂದು ರೂಪಾಯಿಗೆ ಒಂದು ಕಿಲೋ ಅಕ್ಕಿಯನ್ನು ಪೂರೈಸುವ ಸರ್ಕಾರದ ನಿರ್ಧಾರ ಕೂಡಾ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಅಷ್ಟೊಂದು ಸೂಕ್ತವೆನ್ನಿಸದ ಆಶ್ವಾಸನೆಯೊಂದನ್ನು ಕಾರ್ಯರೂಪಕ್ಕೆ ತರುವ ಉದ್ದೇಶಕ್ಕಾಗಿ ಕೈಗೊಂಡಿರುವ ಒಂದು ಅನುಚಿತ ನಿರ್ಧಾರವೆಂದೇ ಹೇಳಬಹುದು. ಬಡವರಿಗೆ ಸಾಕಷ್ಟು ದುಡಿಮೆ ಸಿಗುವಂತೆ ನೋಡಿಕೊಂಡು ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕಾಗಿರುವ ಸರ್ಕಾರವು, ಅದರ ಬದಲಿಗೆ ಅವರಿಗಿರುವ ಕೊಳ್ಳುವ ಶಕ್ತಿಯನ್ನೇ ಸರಿಯಾಗಿ ಬಳಕೆ ಮಾಡಿಕೊಳ್ಳದಂತೆ ಮಾಡುವುದು ಹೇಗೆ ಸರಿ? ಹತ್ತು ರೂಪಾಯಿಗಳಿಗೆ ಒಂದು ಕಿಲೋ ಅಕ್ಕಿಯನ್ನು ಕೊಳ್ಳಬಲ್ಲ ಯಾವುದೇ ಬಡ ವ್ಯಕ್ತಿ ಈಗ ಕೇವಲ ಒಂದು ರುಪಾಯಿಗೆ ಅಷ್ಟು ಅಕ್ಕಿಯನ್ನು ಪಡೆಯುವುದು ಸಾಧ್ಯ ಎಂದಾದರೆ, ಆ ವ್ಯಕ್ತಿಯನ್ನು ಈ ಕೆಳಕಂಡ ಪ್ರಶ್ನೆಗಳು ಕಾಡಬಹುದು.
(1)ಉಳಿಯುವ ಒಂಬತ್ತು ರೂಪಾಯಿಗಳನ್ನು ಏನು ಮಾಡಲಿ? (2) ಒಂದು ರುಪಾಯಿಗೆ ಅಕ್ಕಿ ಸಿಗುವಾಗ ಮತ್ತೂ ಒಂಬತ್ತು ರುಪಾಯಿಗಳನ್ನು ಗಳಿಸಲು ಹೆಚ್ಚಿನ ಕೆಲಸವನ್ನು ಯಾಕೆ ಮಾಡಬೇಕು?
ಮೊದಲ ಪ್ರಶ್ನೆಗೆ ಉತ್ತರವೆಂದು ಒಂಬತ್ತು ರುಪಾಯಿಗಳನ್ನು ಹಾಗೇ ಉಳಿಸಿಕೊಂಡರೂ ತಪ್ಪಲ್ಲ. ಒಳ್ಳೆಯ ಉದ್ದೇಶಗಳಿಗಾಗಿ ಬಳಸಿದರೂ ತಪ್ಪಲ್ಲ. ಆದರೆ, ಹೇಗೂ ಅಗ್ಗದ ದರದಲ್ಲಿ ಮದ್ಯ ದೊರೆಯುತ್ತದೆಯಲ್ಲಾ, ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳೋಣ ಎಂದೋ, ಮೊದಲೇ ಅಭ್ಯಾಸವಿದ್ದರೆ ಮತ್ತಷ್ಟು ಕುಡಿಯೋಣ ಎಂದೋ ನಿರ್ಧರಿಸಿದರೆ, ಹಾಗೇ ನಡೆದುಕೊಂಡರೆ, ಅಥವಾ ಜೂಜಾಟ ಮೊದಲಾದ ದುಶ್ಚಟಗಳಿಗೆ ಬಳಸಿಕೊಂಡರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸರ್ಕಾರವು ಬಡವರಿಗೆ ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಕೊಡುವುದರ ಮೂಲಕ ಏನು ಮಾಡಿದಂತಾಯಿತು? ಇನ್ನು ಬಡವರಲ್ಲಿ, ಒಂದು ರುಪಾಯಿಗೆ ಅಕ್ಕಿ ಸಿಗುವಾಗ ಅದಕ್ಕೋಸ್ಕರ ಹೆಚ್ಚಿನ ಶ್ರಮಪಡುವುದರ ಅಗತ್ಯವಾದರೂ ಎಲ್ಲಿದೆ? ಯಾಕೆ ಕಷ್ಟಪಡಬೇಕು ಎಂದು ಭಾವಿಸುವವರ ಮನವನ್ನು ಎರಡನೇ ಪ್ರಶ್ನೆಯು ತೀವ್ರವಾಗಿ ಕಾಡತೊಡಗಿದರೆ ಅವರು ದುಡಿಮೆಯಿಂದ ವಿಮುಖರಾಗಿ ಸೋಮಾರಿಗಳಾಗಲು ಸರ್ಕಾರವೇ ಸೋಪಾನ ಹಾಕಿಕೊಟ್ಟಂತಾಗುತ್ತದೆಯಲ್ಲವೇ?
ದುಡಿಯುವ ಶಕ್ತಿಯೇ ಇಲ್ಲದ, ಅಂಗವಿಕಲ ಅಥವಾ ಅನಾರೋಗ್ಯ ಪೀಡಿತ ಬಡವರಿಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಸರ್ಕಾರವು ಉಚಿತವಾಗಿಯೇ ಪೂರೈಸಲಿ. ಅದು ನಿಜವಾಗಿಯೂ ಒಂದು ಒಳ್ಳೆಯ ಕೆಲಸವೇ.
-ಬೊ. ನಾ. ಕೃಷ್ಣಮೂರ್ತಿ
ಸಾಗರ