ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತಲೆಮಾರುಗಳಿಗೆ ಸ್ಫೂರ್ತಿ, ನಿಮ್ಮ ಧೀಶಕ್ತಿ!

ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕ ಹುದ್ದೆಗೆ ಇರುವ ಅಸಲಿ ತಾಕತ್ತು ಏನು...

ವಿನೋದ್ ರಾಯ್
Srinivasa Murthy VN
Updated On : 23 May 2013, 12:34 pm

ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು. ಈ ಹುದ್ದೆಗೆ ಇರುವ ಅಸಲಿ ತಾಕತ್ತು ಏನು ಎಂಬುದನ್ನು ಸಾಬೀತುಪಡಿಸಿರುವ ವಿನೋದ್ ರಾಯ್ ಬುಧವಾರ ಸೇವೆಯಿಂದ ನಿವೃತ್ತರಾಗಿದ್ದಾರೆ. ಭ್ರಷ್ಟಾಚಾರವು ದಿನಚರಿ ಎಂಬಂತೆ ಕಾಡುತ್ತಿರುವ ಇಂದಿನ ದಿನಮಾನದಲ್ಲಿ ಅದರ ವಿರುದ್ಧ ಸಾಂಸ್ಥಿಕ ಪರಿಮಿತಿಯಲ್ಲೇ ಜಾಗೃತಿಯ ಕಿಡಿ ಹಚ್ಚಿದ ಅವರ ಸೇವೆ ನೆನಪಿಸಿಕೊಂಡು ಕೃತಜ್ಞರಾಗೋಣ.

ಅವರ ಮೇಲೆ ನಿರಂತರವಾಗಿ ವಾಗ್ದಾಳಿ ಮಾಡಲಾಯಿತು, ಅವರ ಉದ್ದೇಶಗಳನ್ನು ಪ್ರಶ್ನಿಸಲಾಯಿತು, ಅವರನ್ನು ಬಿಜೆಪಿ ಅಸ್ತ್ರ ಎಂದು ಅಣುಕಿಸಲಾಯಿತು, ಪ್ರಚಾರಕ್ಕಾಗಿ ಪರದಾಡುವ ವ್ಯಕ್ತಿ ಎಂಬ ಹುಚ್ಚು ಮಾತುಗಳಿಂತ ಚುಚ್ಚಲಾಯಿತು....ಆದರೂ ವಿನೋದ್ ರಾಯ್ ಎದೆಗುಂದಲಿಲ್ಲ, ಹೆದರಿ ತಮ್ಮ ನಿಲುವನ್ನು ಬದಲಿಸಲಿಲ್ಲ.
ಭಾರತ ಇದುವರೆಗೂ ಕಂಡ 30 ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರಲ್ಲಿ ಭ್ರಷ್ಟರಿಗೆ ಈ ಪರಿ ನಡುಕ ಹುಟ್ಟಿಸಿದ ವ್ಯಕ್ತಿ  ಬೇರೊಬ್ಬರಿಲ್ಲ. ಅದರಲ್ಲೂ 'ದೇಶದ ಸ್ವತ್ತೆಲ್ಲ ತನ್ನದೇ ಸ್ವತ್ತು' ಎಂದು ವರ್ತಿಸುತ್ತ ಬಂದಿದ್ದ ಯುಪಿಎ ಸರ್ಕಾರಕ್ಕೆ ಗುದ್ದು ಕೊಟ್ಟು ಅದರ ಒಡಲಲ್ಲಿರುವ ಕಲ್ಲಿದ್ದಲು ಮತ್ತು 2ಜಿ ಹಳವಂಡಗಳನ್ನೆಲ್ಲ ಹೊರಬರುವಂತೆ ಕಕ್ಕಿಸಿದ್ದು ಸಾಮಾನ್ಯ ಕೆಲಸವೇ?     
ಚಾದರದಡಿಯಲ್ಲಿ ನರಳುತ್ತಾ ಮಲಗಿದ್ದ ಚುನಾವಣಾ ಆಯೋಗಕ್ಕೆ ಹೇಗೆ ಟಿ.ಎನ್. ಶೇಷನ್‌ರಂಥ ನಿಷ್ಠಾವಂತ ವ್ಯಕ್ತಿ ಚುಚ್ಚುಮದ್ದು ಕೊಟ್ಟು ಎದ್ದುನಿಲ್ಲಿಸಿದರೋ, ಅದೇ ರೀತಿ 153 ವರ್ಷಗಳಿಂದ ಉಬ್ಬಸವಿಡುತ್ತಾ ಒದ್ದಾಡುತ್ತಿದ್ದ 'ಸಿಎಜಿ'ಗೆ ಹೊಸ ಉಸಿರು ತುಂಬಿದವರು ರಾಯ್.  
ಹಿಂದಾದರೆ ಸಿಎಜಿ ವರದಿ ಹೊರಬೀಳಲು 2-3 ವರ್ಷಗಳೇ ಹಿಡಿಯುತ್ತಿದ್ದವು. ಆದರೆ ವಿನೋದ್ ರಾಯ್ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಬದಲಾಯಿತು. ವರದಿಗಳು 8- 9 ತಿಂಗಳೊಳಗೇ  ಹೊರಬರತೊಡಗಿದವು. ರಾಯ್ ಅವರ ಯಶಸ್ಸಿನ ಹಿಂದೆಯೂ ಒಂದು ಸುಲಭ ಸೂತ್ರವಿದೆ. ಒಂದು ವರದಿ ಹೊರಬರಲು 2-3 ವರ್ಷ ಹಿಡಿಯುತ್ತದೆಂದರೆ ಆ 'ಸಮಯ' ಎಷ್ಟು ಅಧ್ವಾನಗಳಿಗೆ ವೇದಿಕೆಯಾಗಬಹುದೋ ಯೋಚಿಸಿ?ಕೆಲಸಗಳು ತ್ವರಿತವಾಗಿ ಆದರೆ ಸಂಬಂಧಪಟ್ಟ ಅಧಿಕಾರಿಗಳು ಇನ್ನು ಅವೇ ಡೆಸ್ಕ್‌ನಲ್ಲಿರುತ್ತಾರೆ,  ಹಾಗಾಗೇ ಏನಾದರೂ ಎಡವಟ್ಟಾದರೆ ತಮ್ಮ ಕುತ್ತಿಗೆಗೇ ಬರುತ್ತದೆಂಬ ಭಯದಿಂದ ಅವರು ತಮ್ಮ ಕೈಚಳಕ ತೋರಿಸಲು ಹೋಗುವುದಿಲ್ಲ. ವರದಿ ವಸ್ತುನಿಷ್ಠವಾಗಿರುತ್ತದೆ. ಇಂತಹ ಶಿಸ್ತಿನಿಂದಾಗಿಯೇ ರಾಯ್, ಸಿಎಜಿಗೆ ಒಂದು ಘನತೆಯನ್ನು,  ಅದು ಕೂಡ ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟರು.  
ಇನ್ನು ಅವರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನುವ ಆರೋಪಗಳೂ ಕೇಳಿಬಂದವು. ಆದರೆ ಒಂದಂತೂ ಸತ್ಯ, ಅವರಿಂದ ಬಿಜೆಪಿಗೆ ಬಹಳಷ್ಟು ಲಾಭವಾಗಿದೆ. ಬಿಜೆಪಿಯಿಂದ ಅವರಿಗಲ್ಲ! ಇಂದು ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಎತ್ತರವಾಗಿ ಕಾಂಗ್ರೆಸ್ ವಿರೋಧಿ ಅಲೆ ಎದ್ದು ನಿಂತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಆ ಅಲೆಯ ಹೊಡೆತಕ್ಕೆ ಸಿಲುಕಿ ನಜ್ಜುಗುಜ್ಜಾದರೂ ಆಶ್ಚರ್ಯ ಪಡಬೇಕಿಲ್ಲ. 1 ಲಕ್ಷ 76 ಸಾವಿರ ಕೋಟಿ ರುಪಾಯಿಯ 2ಜಿ ಹಗರಣ ಮತ್ತು ಕಲ್ಲಿದ್ದಲು ಹಗರಣಗಳನ್ನು ವಿನೋದ್ ರಾಯ್ ಹೊರಹಾಕಿದ್ದರಿಂದಲೇ ತಾನೆ ಕಾಂಗ್ರೆಸ್ ಈ ಪರಿ ಕಂಗಾಲಾಗಿರುವುದು?
ಹೀಗಾಗಿಯೇ ವಿನೋದ್ ರಾಯ್ ಅವರನ್ನು ಸಿಎಜಿ ಸ್ಥಾನಕ್ಕೆ ತಂದು ಕೂರಿಸಿ ಪಿ. ಚಿದಂಬರಂ ದೊಡ್ಡ ತಪ್ಪು ಮಾಡಿದರು ಎಂಬ ಹಲುಬು ಹಲವರಲ್ಲಿದೆ. ಆದರೆ ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ನೀಡಿದ ಸಂದರ್ಶನವೊಂದೇ ಸಾಕು, ರಾಯ್ ಅವರದ್ದು ಎಷ್ಟು ಸತ್ಯನಿಷ್ಠ ಮತ್ತು ಯಾರ ಮುಲಾಜಿಗೂ ಒಳಗಾಗದ ವ್ಯಕ್ತಿತ್ವ ಎಂಬುದು ತಿಳಿಯಲು-
'ನಾನು ಚಿದಂಬರಂ ಅವರ ಆಯ್ಕೆ ಎಂದೇಕೆ ಹೇಳುತ್ತೀರಿ? ಈ ಹಿಂದೆ ವಿತ್ತ ಸಚಿವಾಲಯದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ ಎಂಬ ಕಾರಣಕ್ಕಾ? ಒಂದು ವೇಳೆ ಸಿಂಧುಶ್ರೀ ಖುಲ್ಲಾರ್ ಸಿಎಜಿ ಆಗಿ ನೇಮಕವಾದರೆ, ಆಗ ಅವರನ್ನು ಮಾಂಟೆಕ್ ಸಿಂಗ್ ಅಹ್ಲುವಾಲಿಯಾರ ಆಯ್ಕೆ ಎಂದು ಕರೆಯುತ್ತೀರೋ? ಅಥವಾ ಎಸ್.ಕೆ. ಶರ್ಮಾ ನೇಮಕವಾದರೆ, ಮಿ. ಆ್ಯಂಟೋನಿ ಅವರ ಆಯ್ಕೆ ಅನ್ನುತ್ತೀರೋ? ಸಿಎಜಿ ನೇಮಕಾತಿಗೂ ಒಂದು ನಿಯಮವೆಂದು ಇರುತ್ತದೆ. ಕ್ಯಾಬಿನೆಟ್ ಸೆಕ್ರೆಟರಿ ಕೆಲವು ಹೆಸರುಗಳನ್ನು ವಿತ್ತ ಸಚಿವರ ಮುಂದಿಡುತ್ತಾರೆ. ಆಗ ಆ ನಂತರ ಪಿಎಮ್‌ಒ, ವಿತ್ತ ಸಚಿವರು ಮತ್ತು ಈ ಕಾರಣಕ್ಕಾಗಿ ಜಾರಿಯಾದ ಆಯೋಗದ ನಡುವೆ ಈ ಪಟ್ಟಿಯ ಕುರಿತು ಚರ್ಚೆಯಾಗುತ್ತದೆ. ನಂತರ ಇಬ್ಬರು ಅಥವಾ ಮೂವರ ಅಭ್ಯರ್ಥಿಗಳೊಂದಿಗೆ ಮಾತುಕತೆಯಾಗುತ್ತದೆ. ನನ್ನ ಸಂದರ್ಶನ ನಡೆಸಿದ್ದು ಪ್ರಧಾನ ಮಂತ್ರಿಗಳು. ಆನಂತರವೇ ನನ್ನ ಆಯ್ಕೆ ಆಗಿದ್ದು. ಹೌದು, ಹಾಗಿದ್ದರೆ ಪಿ.ಜೆ. ಥಾಮಸ್(ಮಾಜಿ ಸಿವಿಸಿ) ಯಾರ ಆಯ್ಕೆಯಾಗಿದ್ದರು? ಒಂದು ವೇಳೆ ಚಿದಂಬರಂ ವಿನೋದ್ ರಾಯ್‌ನನ್ನು ಈ ವ್ಯವಸ್ಥೆಯಲ್ಲಿ ತಂದುಕೂರಿಸಿದರೆಂದರೆ, ಪಿ.ಜೆ. ಥಾಮಸ್ ಅವರಿಗೆ ಪೀಠ ಹಾಕಿ ಕೂಡಿಸಿದವರ್ಯಾರು?'
 ಒಂದು ಸಂಸ್ಥೆಯ ಪಾತ್ರ ಮೊದಲೇ ಸರಿಯಾಗಿ ವ್ಯಾಖ್ಯಾನಕೊಳಗಾಗಿರುತ್ತದೆ. ಆ ಪಾತ್ರವನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಹಾಗೆ ಕಾರ್ಯರೂಪಕ್ಕೆ ತರುವುದು ಕೇವಲ ಒಬ್ಬನಿಂದ ಸಾಧ್ಯವಿಲ್ಲ. ಅವನದೇ ಗುಣವಿರುವ ಗುಂಪೊಂದು ಆತನ ಸುತ್ತಲೂ ಇರಬೇಕು. ಅವನಂತೆ ಯೋಚಿಸಬೇಕು, ಅವನಂತೆ ವರ್ತಿಸಬೇಕು. ಅಂತಹ ಗುಂಪು ವಿನೋದ್ ಅವರ ಸುತ್ತಲೂ ಇತ್ತು ಎನ್ನುವುದು ಅಷ್ಟೇ ಸತ್ಯ. ಹಾಗಾಗೇ ಕಚೇರಿ ಬಿಡುವ ಮುನ್ನ ವಿನೋದ್ ತಮ್ಮ ಹಿಂದಿರುವ ಆ ಶಕ್ತಿಯನ್ನು ಮರೆಯುವುದಿಲ್ಲ.
'ನನಗೆ ಇಂಥ ಉತ್ತಮ ತಂಡ ದೊರಕಿದ್ದರಿಂದಲೇ ನಾನು ಹೆದರದೆ ಕೆಲಸ ಮಾಡಿದೆ. ಅಲ್ಲದೆ ಮಾಧ್ಯಮಗಳಿಗೂ ಕೂಡ ನಾನು ಆಭಾರಿಯಾಗಿದ್ದೇನೆ. ನಮ್ಮ ವರದಿಯಿಂದ ಕೇವಲ ಗಣನೀಯ ಸಮಸ್ಯೆಗಳನ್ನಷ್ಟೇ ಅವು ಎತ್ತಿಕೊಂಡವು. ಅವಕ್ಕೆ ಯಾವ ವಿಷಯದ ಮೇಲೆ ಹೆಚ್ಚು ಬೆಳಕು ಚೆಲ್ಲಬೇಕು ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ' ಎಂದು ಹೇಳಿ ತಮ್ಮ ಸೌಜನ್ಯವನ್ನೂ ಮೆರೆಯುತ್ತಾರೆ.
'ಕ್ರೀಡಾಸ್ಫೂರ್ತಿಯಿರಲಿ. ಶಾರ್ಟ್ ಕಟ್‌ಗಳ ಸಂಗ ಬೇಡ. ದೀರ್ಘಾವದಿ ನಡಿಗೆಗೆ ಶಾರ್ಟ್‌ಕಟ್‌ಗಳು ಉಪಯೋಗಕ್ಕೆ ಬರುವುದಿಲ್ಲ. ಶಾರ್ಟ್‌ಕಟ್ ಹಿಡಿದರೆ ಹೆಚ್ಚೆಂದರೆ ನಮ್ಮ ಜೀವನದ ಮೂರು ವರ್ಷಗಳು ಸುಖಮಯವಾಗಿರಬಹುದು, ಆದರೆ ಅದರ ಮುಂದಿನ ಮೂವತ್ತು ವರ್ಷಗಳಲ್ಲ' ಎಂದು ಮಾತು ಮುಗಿಸುತ್ತಾರೆ.
------
ಮಾರ್ಚ್ 22 ಕ್ಕೆ ಸಿಎಜಿ ಆಗಿ  ವಿನೋದ್ ರಾಯ್ ಅವರ 5 ವರ್ಷಗಳ ಅಧಿಕಾರಾವಧಿ ಮುಗಿದಿದೆ. ಅಂತೂ ಅವರಿಂದ ಕುತ್ತಿಗೆ ಹಿಚುಕಿಸಿಕೊಂಡವರೆಲ್ಲ ಈಗ ನಿರುಮ್ಮಳರಾಗಿದ್ದಾರೆ!

- ರಾಘವೇಂದ್ರ ಆಚಾರ್ಯ, ಕನ್ನಡಪ್ರಭ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement