ನೀತಿ ಗಟ್ಟಿ ಇದ್ದರೆ ಭ್ರಷ್ಟತೆ ತೊಡೆಯಬಹುದಲ್ಲವೇ?
ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು, ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಅಸಾಧ್ಯವೆಂಬ ಮಾತೊಂದಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು, ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಅಸಾಧ್ಯವೆಂಬ ಮಾತೊಂದಿದೆ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗದ ನೀತಿ ಸಂಹಿತೆ ಸಾಧಿಸಿದ ಒಂದು ಹಂತದ ಯಶಸ್ಸು ಆಶಾದಾಯಕ ಸುಳಿಹು ನೀಡುತ್ತಿದೆ!
ಚುನಾವಣಾ ನೀತಿಸಂಹಿತೆ ಎಂಬ ಹೆರಿಗೆ ನೋವಿನ ದಿನಗಳನ್ನು ದಾಟಿಬಂದ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಈಗ ಹೆರಿಗೆ ನಂತರದ ನಿರಾಳ ಭಾವ. ಕಾಂಗ್ರೆಸ್ ಬಿಟ್ಟು ಇತರೆ ಪಕ್ಷಗಳಿಗೆ ಹೆರಿಗೆಯಲ್ಲಿ ಮಗು ಸತ್ತ್ತ ಸೂತಕದ ಛಾಯೆ ಆವರಿಸಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಪಕ್ಷಕ್ಕೆ ಮಾತ್ರ ಸಹಜ ಪ್ರಸೂತಿ ಆಗಿ ಆರೋಗ್ಯವಂತ ಮಗು (ಸರ್ಕಾರ) ಪಡೆದ ಸಮಾಧಾನ.
ಕಳೆದ ಚುನಾವಣೆಯಲ್ಲಿ ಗಮನಾರ್ಹ ಒಂದು ವಿಚಾರವನ್ನು ಮಾತ್ರ ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು, ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಅಸಾಧ್ಯವೆಂಬ ಮಾತೊಂದಿದೆ. ಆದರೆ ಕರ್ನಾಟಕದಲ್ಲಿ ಮೊನ್ನೆ ನಡೆದ ಚುನಾವಣಾ ವ್ಯವಸ್ಥೆಯಲ್ಲಿ ಕಂಡುಬಂದ ಒಂದು ಸೂಕ್ಷ್ಮತೆ ಮಾತ್ರ ನಮ್ಮ ದೇಶದಲ್ಲಿ ಭ್ರಷ್ಟಾಚಾರವನ್ನು ಖಂಡಿತವಾಗಿಯೂ ಹಿಮ್ಮೆಟ್ಟಿಸಬಹುದೆಂಬ ಆಶಾಕಿರಣವೆನಿಸುವ ಸಂದೇಶವನ್ನು ಸಾರಿದೆ. ಅಂದಿನ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಟಿ.ಎನ್. ಶೇಷನ್ ಅವರು ಸೃಷ್ಟಿಸಿದ ಬ್ರಹ್ಮಾಸ್ತ್ರವು ಇಂದಿನ ಚುನಾವಣಾ ನೀತಿ ಸಂಹಿತೆಯ ಇಪ್ಪತ್ತು ದಿನಗಳಲ್ಲಿ ನಮ್ಮ ರಾಜ್ಯದ ಭ್ರಷ್ಟಾಚಾರದ ಬುಡವನ್ನೇ ಅಲ್ಲಾಡಿಸುವಂತೆ ಇದ್ದಿದ್ದು ಮಾತ್ರ ನಿಜಕ್ಕೂ ಆಶ್ಚರ್ಯಕರವಾದ ವಿಷಯವೇ ಸರಿ. ಚುನಾವಣಾ ನೀತಿಸಂಹಿತೆಯ ದಿನಗಳಲ್ಲಿ ನಮ್ಮ ರಾಜ್ಯ ಹೇಗಿತ್ತು ಎಂಬುದನ್ನು ಅವಲೋಕಿಸೋಣ.
ಯಾವುದೇ ಪುಡಾರಿಯಾಗಲಿ ಕಾರ್ಯಕರ್ತರಾಗಲಿ ಒಂದು ನೋಟನ್ನು ಬಹಿರಂಗವಾಗಿ ಯಾರಿಗೂ ನೀಡುವಂತಿರಲಿಲ್ಲ. ಬ್ಯಾಂಕಿನಿಂದ ದೊಡ್ಡ ಮೊತ್ತವನ್ನು ತೆಗೆಯುವುದಾಗಲಿ, ಇಡುವುದಾಗಲಿ ಸುಲಭ ಸಾಧ್ಯವಾಗಿರಲಿಲ್ಲ. ಕನಿಷ್ಟ ಸಾವಿರ, ಐದು ನೂರರ ನೋಟುಗಳಿಗೆ ಬದಲಿ ಚಿಲ್ಲರೆ ಪಡೆಯುವುದೂ ಅನುಮಾನಕ್ಕೆ ಕಾರಣವಾಗಿ ಬ್ಯಾಂಕ್ನವರು ನಿರಾಕರಿಸುವಂತಾಗಿತ್ತು.
ಹಲವು ಮುಖ್ಯವಾದ ರಸ್ತೆಗಳಲ್ಲಿ ಪೊಲೀಸ್ ಚೆಕ್ಪೋಸ್ಟ್ ಇದ್ದದ್ದರಿಂದ ಕಾಲೇಜು ಯುವಕರ ದಪ್ಪನೆಯ ಬ್ಯಾಗೇ ಆಗಲಿ, ಮುಚ್ಚಿದ ಸರಕಿನ ಗಾಡಿಗಳಾಗಲಿ, ಅವನ್ನು ನಿಲ್ಲಿಸಿ ಪರೀಕ್ಷಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿತ್ತು.
ಯಾವುದೇ ರೀತಿಯ ವಸ್ತುಗಳನ್ನು ಸಗಟು ಪ್ರಮಾಣದಲ್ಲಿ ಖರೀದಿಸುವಂತಿರಲಿಲ್ಲ. ಮಾರುವಂತೆಯೂ ಇರಲಿಲ್ಲ. ಇದರ ಪ್ರಭಾವ ಹೇಗಿತ್ತೆಂದರೆ ಸಾಮಾನ್ಯ ನಾಗರೀಕರೂ ದೊಡ್ಡ ಮೊತ್ತದ ಹಣವನ್ನು ಸಕಾರಣಕ್ಕೂ ಮತ್ತೊಂದೆಡೆಗೆ ಕೊಂಡೊಯ್ಯಲು ಹೆದರಿ ಸುಮ್ಮನಾಗುತ್ತಿದ್ದರು. ಇನ್ನು ಅದ್ದೂರಿ ಸಮಾರಂಭಗಳು, ಪಾರ್ಟಿಗಳೂ, ಗುಂಡು ತುಂಡಿನ ಮೋಜುಗಳೂ ಕನಿಷ್ಟ ಭೀಗರ ಔತಣ ಕೂಟವನ್ನು ನಡೆಸಲೂ ಮುಕ್ತವಾದ ವಾತಾವರಣವಿರಲಿಲ್ಲ.
ಪಟಾಕಿಯ ಚಿಂದಿ ಹಾಳೆಗಳಂತೆ ರಸ್ತೆಯಲ್ಲಿ ಕಸದಂತೆ ಇರುತ್ತಿದ್ದ ಕರಪತ್ರಗಳು, ಚೀಟಿಗಳು ಸಂಪೂರ್ಣ ನಿಯಮಿತವಾಗಿದ್ದವು. ಇನ್ನು ಗಲ್ಲಿಗಲ್ಲಿಗಳಲ್ಲಿ ಕಣ್ಣಿಗೆ ರಾಚುತ್ತಿದ್ದ ಪೋಸ್ಟರ್ಗಳು ಫ್ಲೆಕ್ಸ್ ಬ್ಯಾನರ್ಗಳನ್ನು ಹಾಕಿಸುವುದು ಘೋರ ಅಪರಾಧವೆಂಬಂತಿದ್ದು ಚುನಾವಣೆಯ ತಳುಕುಬಳುಕಿನ ಅಬ್ಬರವನ್ನು ತಗ್ಗಿಸಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಉಪಮುಖ್ಯಮಂತ್ರಿ ಹೆಲಿಕಾಪ್ಟರ್ನಿಂದ ಭೂಮಿಗಿಳಿದ ಕೂಡಲೇ ದಾಳಿಮಾಡಿದ ಅಧಿಕಾರಿಗಳು ಬರೋಬ್ಬರಿ ಅರವತ್ತು ಲಕ್ಷ ಹಣವನ್ನು ಮುಟ್ಟುಗೋಲು ಹಾಕಿದರೆ, ಇದನ್ನು ತಿಳಿದ ಮಾಜಿ ಮುಖ್ಯಮಂತ್ರಿಯೊಬ್ಬರು ಅಧಿಕಾರಿಗಳು ಮುಂದೆ ಬಂದಕೂಡಲೇ 'ನನ್ನ ಜೇಬಿನಲ್ಲಿ ಇರುವುದು ಇಷ್ಟೇ. ಬೇಕಾದರೆ ಮುಟ್ಟಿ ನೋಡಿ..' ಎಂದು ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದ್ದು ಮಾತ್ರ ಚುನಾವಣಾ ಅಧಿಕಾರಿಗಳಿಗಿದ್ದ ಅಧಿಕಾರದ ಶಕ್ತಿ ಏನೆಂಬುದನ್ನು ಪರಿಚಯಿಸಿತ್ತು.
ಇವುಗಳ ಒಟ್ಟು ಫಲಿತಾಂಶ ತಿಳಿಯಬೇಕೆಂದರೆ 2500 ಕ್ಕೂ ಹೆಚ್ಚು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯ ಕೇಸುಗಳು ದಾಖಲಾದವು. ಸರಿಯಾಗಿ 21 ಕೋಟಿ 44 ಲಕ್ಷದಷ್ಟು ಅಕ್ರಮವಾದ, ಅಪ್ಪ-ಅಮ್ಮ ಇರದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. 11 ಲಕ್ಷ ಲೀಟರುಗಳಷ್ಟು ಎಣ್ಣೆಯನ್ನು ಜಪ್ತಿ ಮಾಡಿಕೊಳ್ಳಲಾಯಿತು. ಇದರ ಮೊತ್ತ ಸುಮಾರು 7 ಕೋಟಿ 79 ಲಕ್ಷ ರುಪಾಯಿಗಳು. ಇನ್ನು ಜಾಹೀರಾತಿನ ರೂಪ ಹೊದ್ದಿದ್ದ ಪಾವತಿ ಸುದ್ದಿಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ದೂರುಗಳು ದಾಖಲಾದವು.
ಕೇವಲ ಹತ್ತಾರು ದಿನಗಳ ನೀತಿ ಸಂಹಿತೆಯ ಪರಿಣಾಮದಿಂದಾಗಿ ಇಷ್ಟೊಂದು ಭ್ರಷ್ಟಾಚಾರದ ಅಂಕಿಅಂಶಗಳು ದಕ್ಕಿ ಹೋಗುವುದಾದರೆ, ಐದು ವರ್ಷಗಳ ರಾಜಕೀಯ ವ್ಯವಹಾರಗಳಲ್ಲಿ ಇನ್ನೆಷ್ಟು ಬಿಲಿಯನ್ ಕೋಟಿಗಳು ಕೈಬದಲಾಗಬಹುದೆಂದು ಅಂದಾಜು ಮಾಡಬಹುದಲ್ಲವೆ?
ಇವುಗಳಲ್ಲಿನ ಅತಿ ಮುಖ್ಯ ಅಂಶವೆಂದರೆ ಅಪ್ಪ-ಅಮ್ಮ ಇರದ ಯಾವುದೇ ಹಣವನ್ನು ಯಾವುದೇ ವ್ಯಕ್ತಿಗಳೂ ಕೈಬದಲಿಸುವುದು ಸಾಧ್ಯವಿಲ್ಲದಂತಾಗಿತ್ತು. ಅಂದರೆ ಅಕ್ರಮ ಹಣ ಸರಿದಾಡದಿದ್ದರೆ ಅರ್ಧ ಭ್ರಷ್ಟಾಚಾರವನ್ನು ಕೊಂದಂತೆಯೇ ಅಲ್ಲವೇ? ಇವೆಲ್ಲದರ ಮುಖ್ಯ ದಿಕ್ಸೂಚಿ ಎಂದರೆ ನಮ್ಮ ಸಂವಿಧಾನದಲ್ಲಿರುವ ಕಾಯ್ದೆ, ಅಧಿಕಾರ ನೀತಿ ನಿಯಮಗಳನ್ನೇ ಸಮಯೋಚಿತವಾಗಿ ಕಟ್ಟುನಿಟ್ಟಾಗಿ ಪರಿಣಾಮಕಾರಿಯಾಗಿ ಜಾರಿಗೆ ತಂದು ಯಾವುದೇ ಅಕ್ರಮ ಅಪರಾಧಗಳಿಗೆ ಭಯ ಹುಟ್ಟಿಸುವಂತಹ ವ್ಯವಸ್ಥೆಯನ್ನು ಅಳವಡಿಸಿದರೆ ಖಂಡಿತವಾಗಿಯೂ ಬರೀ ಭ್ರಷ್ಟಾಚಾರ ಮಾತ್ರವಲ್ಲ, ಎಲ್ಲ ತರಹದ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಬಹುದು. ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರವಾಗಲಿ, ಇನ್ನಾವುದೇ ಅನೈತಿಕವಾಗಲಿ ತಡೆಯ ಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಸೂಕ್ತ ಅಧಿಕಾರವನ್ನು ನೀಡಿದರೆ ಯಾವುದೇ ಹೆಣ್ಣನ್ನು ಮುಟ್ಟಲು ವಿಕೃತಿಗಳು ಹೆದರಿ ಸುಮ್ಮನಾಗುತ್ತಾರೆ. ಸಂಚಾರಿ ಪೊಲೀಸರು ಮುಂದೆ ನಿಂತಿರುವುದು ಸ್ಪಷ್ಟವಾದ ಕೂಡಲೆ ಹೆಲ್ಮೆಟ್ ಧರಿಸದವನು ಕೂಡಲೆ ಹೆಲ್ಮೆಟ್ ಧರಿಸುತ್ತಾನೆ. ಇಲ್ಲವಾದರೆ ಹಿಂದೆ ಸರಿದು ದಾರಿ ಬದಲಿಸುತ್ತಾನೆ. ಅಂದರೆ ಅಪರಾಧ, ಅಕ್ರಮ, ಅನೈತಿಕತೆಗಳನ್ನು ಎಸಗಲು ಭಯ ಎಂಬ ಎಚ್ಚರಿಕೆಯನ್ನು ಅಘೋಷಿತವಾಗಿ ಸಮಾಜದಲ್ಲಿ ನಿರಂತರ ಜಾರಿಯಲ್ಲಿಟ್ಟರೆ ನಮ್ಮ ದೇಶ ರಾಮರಾಜ್ಯವಾಗುವುದರಲ್ಲಿ ಯಾವುದೇ ಹಿಂದಡಿಯಿಲ್ಲ. ಭಯವೆಂಬ ಬೆಳಕು ಸದಾ ಉರಿಯುತ್ತಿದ್ದರೆ ಅನ್ಯಾಯವೆಂಬ ಕತ್ತಲು ಮರೆಯಾಗುತ್ತದೆ.
ಕೇವಲ ಹತ್ತಾರು ದಿನಗಳ ಚನಾವಣಾ ನೀತಿಸಂಹಿತೆ ನಮ್ಮ ರಾಜ್ಯವನ್ನು ರಾಜಕಾರಣವನ್ನು ಸುಸ್ಥಿತಿ ಮತ್ತು ಬಹುಮಟ್ಟಿಗೆ ಸ್ವಚ್ಛವಾಗಿಡಬಹುದಾದರೆ, ಇನ್ನು ಗೃಹ ಇಲಾಖೆ, ಲೋಕಾಯುಕ್ತ, ತೆರಿಗೆಗಳ ಇಲಾಖೆಗಳು, ಮಾಹಿತಿ ಹಕ್ಕು ಇಲಾಖೆ, ಅಬಕಾರಿ ಇಲಾಖೆಗಳು ತಮಗಿರುವ ಅಧಿಕಾರದ ಶಕ್ತಿಯನ್ನು ನೀತಿಸಂಹಿತೆ ಯಂತೆ ನೇರವಾಗಿ ಜಾರಿಗೆ ತಂದರೆ ಅಣ್ಣಾ ಹಜಾರೆಯಂತ ಹಿರಿಯ ಜೀವಿಗಳು ತಮ್ಮ ಇಳಿವಯಸ್ಸಿನಲ್ಲಿ ನೆಮ್ಮದಿಯ ದಿನಗಳನ್ನು ಕಳೆಯಬಹುದು. ಈ ಬಾರಿಯ ಚುನಾವಣಾ ದಿನಗಳಲ್ಲಿ ಕಂಡು ಬಂದ ಮತ್ತೊಂದು ಹೆಮ್ಮೆಯ ವಿಷಯವೆಂದರೆ ಹಲವು ಸಂಘ ಸಂಸ್ಥೆಗಳು,ನಾಗರೀಕರು ಅನೇಕ ರೀತಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದ್ದು.
ಸಿನಿಕತೆ- ಹತಾಶೆಗಳ ನಡುವೆಯೇ ಭರವಸೆಯ ದೀಪ ಮಿನುಗುತ್ತಲೇ ಇದೆ ಎಂದುಕೊಳ್ಳೋಣವೇ?
-ದೇ.ವಿ. ಮಹೇಶ್ವರಹಂಪಿ