ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಾನು ಹೊಡೆದ್ಹಾಗೆ ಮಾಡ್ತೀನಿ, ನೀನು ಅತ್ತ ಹಾಗೆ ಮಾಡು!

Vishwanath S
Updated On : 24 May 2013, 12:03 pm

ನಾನು ಹೊಡೆದ್ಹಾಗೆ ಮಾಡ್ತೀನಿ, ನೀನು ಅತ್ತ ಹಾಗೆ ಮಾಡು...ಕಳೆದ 7 ವರ್ಷಗಳಿಂದ ರಾಜ್ಯ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ನಾಟಕವಿದು. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸರ್ಕಾರ ನಯವಂಚನೆ ಮಾಡುತ್ತಿದೆ. ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ ಹಾಗೂ ಸೀಟು ಹಂಚಿಕೆಯ ವಿವಾದ ಜೀವಂತವಾಗಿರಬೇಕು ಎನ್ನುವುದು ರಾಜಕೀಯ ಮುತ್ಸದ್ದಿಗಳ ಹಾಗೂ ಶಿಕ್ಷಣ ಕ್ಷೇತ್ರದ 'ಉದ್ಯಮಿ'ಗಳ ಆಸೆ. ಇವರಿಬ್ಬರ ಹಗ್ಗ ಜಗ್ಗಾಟ ಅಥವಾ ನಾಟಕಗಳಲ್ಲಿ ವಿದ್ಯಾರ್ಥಿಗಳು ಬಡವಾಗುತ್ತಿದ್ದಾರೆ.
2006ರಿಂದಲೂ ಈ ಹೈ ಡ್ರಾಮಾ ನಡೆಯುತ್ತಲೇ ಇದೆ. ಆ ಬಳಿಕ ರಾಜ್ಯದಲ್ಲಿ ನಾಲ್ಕು ಸರ್ಕಾರಗಳು ಬದಲಾಗಿವೆ. ಮೂರು ವಿಧಾನಸಭೆ ಹಾಗೂ ಒಂದು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ.ಆದರೆ ನೆನಪಿರಲಿ, ಯಾವುದೇ ಚುನಾವಣೆಯ ಪ್ರಣಾಳಿಕೆಯಲ್ಲಿ ಈ ವಿಷಯ ಪ್ರಸ್ತಾಪವಾಗಲೇ ಇಲ್ಲ. ಮತದಾರ ಇದನ್ನು ಪ್ರಶ್ನಿಸಲೂ ಇಲ್ಲ.
ಪ್ರವೇಶ ಪ್ರಕ್ರಿಯೆ ಸುಧಾರಣೆಗೆಂದೇ 2006ರಲ್ಲಿ ವಿಧಾನಮಂಡಲದ ಉಭಯ ಸದನಗಳು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ) ಕಾಯಿದೆಯನ್ನು ಅನುಮೋದಿಸಿದೆ. ಕಾಯಿದೆ ಅನುಮೋದನೆಯಾದ ಕೆಲವೇ ತಿಂಗಳಲ್ಲಿ ಅಂದಿನ ರಾಜ್ಯಪಾಲ ಟಿ.ಎನ್. ಚತುರ್ವೇದಿಯವರು ಒಪ್ಪಿಗೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟರು. ಆದರೆ ಅದಾದ ಬಳಿಕ ನಡೆದ ಎಲ್ಲ 7 ಪ್ರವೇಶ ಪ್ರಕ್ರಿಯೆಗಳ ಸಂದರ್ಭದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯಿದೆಯನ್ನು ತಟಸ್ಥವಾಗಿರಿಸಿಕೊಂಡು ಶುಲ್ಕ ನಿಗದಿ ಮಾಡಲಾಯಿತು.
ಮೊದಲ 5 ವರ್ಷಗಳ ಪ್ರವೇಶ ಪ್ರಕ್ರಿಯೆಯಲ್ಲಿ ಕಾಯಿದೆಯನ್ನು ತಟಸ್ಥವಾಗಿರಿಸಲು ಶುಲ್ಕ ನಿಗದಿ ಮಾಡಲು ಆಯೋಗ ರಚಿಸಿಲ್ಲ ಎಂಬ ನೆಪ ಸರ್ಕಾರದ ಮುಂದಿತ್ತು. ಆದರೆ 2009ರಲ್ಲಿ ನ್ಯಾ. ಪದ್ಮರಾಜ್ ಆಯೋಗ ರಚನೆಯಾಗಿ 2010ರಲ್ಲಿ ತನ್ನ ವರದಿಯನ್ನು ನೀಡಿಯಾಯಿತು. ಆಯೋಗವನ್ನು ರಚಿಸಿ ವರದಿ ಪಡೆಯಲು 5 ವರ್ಷ ಪಡೆದಿದ್ದ ಸರ್ಕಾರ, ವರದಿ ಪಡೆದು ಖಜಾನೆಯಲ್ಲಿಯೇ ಭದ್ರವಾಗಿರಿಸಿಕೊಂಡಿದೆ.
ಕಾಯಿದೆಯನ್ನು ಜಾರಿ ಮಾಡದೇ ಇರಲು ಹಾಗೂ ಜನರು ಈ ಬಗ್ಗೆ ಒತ್ತಡ ಹೇರದಿರಲು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ) ಕಾಯಿದೆ ಹಾಗೂ ನ್ಯಾ.ಪದ್ಮರಾಜ್ ಆಯೋಗದ ವರದಿ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ. ವಿಪರೀತವಾಗಿ ಶುಲ್ಕಗಳು ಏರಲಿವೆ, ಸರ್ಕಾರಿ ಕೋಟಾಗಳು ಹೋಗುತ್ತವೆ, ಕಾಲೇಜುಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪುತ್ತದೆ ಎಂಬೆಲ್ಲ ಮಾತುಗಳು ಕೇಳಿಬಂದಿವೆ. ಆದರೆ ಕಾಯಿದೆಯಲ್ಲಿ ಈ ರೀತಿಯ ಯಾವುದೇ ಅಂಶಗಳಿಲ್ಲ. ಇನ್ನು ನ್ಯಾ.ಪದ್ಮರಾಜ್ ಆಯೋಗದ ವರದಿಯಲ್ಲಿ ಯಾವೆಲ್ಲ ಅಂಶಗಳಿವೆ ಎಂಬ ಬಗ್ಗೆ ಸ್ಪಷ್ಟನೆಯಿಲ್ಲ. ಆದರೆ ಮೂಲಗಳ ಪ್ರಕಾರ ಆಯೋಗದ ವರದಿ ವಿದ್ಯಾರ್ಥಿಗಳ ಹಿತಕಾಪಾಡುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣದಿಂದ ಆಯೋಗದ ವರದಿ ಅನುಷ್ಠಾನಕ್ಕೆ ಕಾನೂನು ಹೋರಾಟ ಮಾಡುತ್ತಿದ್ದ ಕಾಮೆಡ್-ಕೆ, ಒಳಸುಳಿ ತಿಳಿದ ಬಳಿಕ ಇದ್ದಕ್ಕಿದ್ದಂತೆ ವರದಿ ಬಹಿರಂಗದ ಬಗ್ಗೆ ಮೌನ ತಾಳಿದೆ.
ಅಷ್ಟಕ್ಕೂ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ) ಕಾಯಿದೆಯಲ್ಲೇನಿದೆ ಎಂದು ಕಣ್ಣು ಹಾಯಿಸೋಣ.
ಎಂಜಿನಿಯರಿಂಗ್, ವೈದ್ಯಕೀಯ ದಂತ ವೈದ್ಯಕೀಯ ಸೇರಿದಂತೆ ರಾಜ್ಯದಲ್ಲಿನ ಎಲ್ಲ ವೃತ್ತಿಪರ ಕೋರ್ಸ್‌ಗಳ ನಿರ್ವಹಣೆಗೆ 2006ರಲ್ಲಿ ಈ ಕಾಯಿದೆ ರೂಪಿಸಲಾಯಿತು. ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಷನ್ ಮತ್ತು ರಾಜ್ಯ ಸರ್ಕಾರದ ನಡುವಿನ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ 2003ರಲ್ಲಿ ಒಂದು ತೀರ್ಪು ನೀಡಿತ್ತು. ಈ ಪ್ರಕಾರ ಪ್ರವೇಶ ಪ್ರಕ್ರಿಯೆ ಹಾಗೂ ಶುಲ್ಕ ನಿಗದಿಗೆ ಸಂಬಂಧಿಸಿ ಪ್ರತ್ಯೇಕ ಎರಡು ಮೇಲುಸ್ತುವಾರಿ ಸಮಿತಿ ರಚಿಸಬೇಕಿತ್ತು. ಇದಲ್ಲದೇ ಪ್ರವೇಶ ಪ್ರಕ್ರಿಯೆಗೆ ಒಂದೇ ಪರೀಕ್ಷೆ ಇರಬೇಕು. ಅದನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಡೆಸಬೇಕು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.66 ವಿದ್ಯಾರ್ಥಿಗಳು ಕರ್ನಾಟಕದಲ್ಲಿನ ಅಲ್ಪಸಂಖ್ಯಾತರೇ ಆಗಿರಬೇಕು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.50ರ ಮೀಸಲು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಕಾಯಿದೆಯಲ್ಲಿ ಏನಿರಬೇಕು ಎನ್ನುವುದನ್ನು ಸುಪ್ರೀಂ ಕೋರ್ಟ್ ಮೋದಲೇ ಸ್ಪಷ್ಟಪಡಿಸಿದ್ದರಿಂದ ರಾಜ್ಯ ಸರ್ಕಾರದ ಕೆಲಸ ಕಡಿಮೆಯಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಲಾಬಿಗೆ ಮಣಿದು ಕಾಯಿದೆಯನ್ನು ಜೊಳ್ಳು ಮಾಡಲು ಸಾಧ್ಯವಿರಲಿಲ್ಲ. ಅದೇ ಕಾರಣದಿಂದ ಕಾಯಿದೆಯನ್ನು ರೂಪಿಸಿ ಪ್ರತಿ ವರ್ಷದ ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಸದನದ ಅನುಮತಿ ಪಡೆದು ಕಾಯಿದೆಯನ್ನು ತಟಸ್ಥವಾಗಿರಿಸಿಕೊಂಡು ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿತ್ತು. ಸುಪ್ರೀಂ ಕೋರ್ಟ್ ತೀರ್ಪನ್ನು ನೇರವಾಗಿ ಕಡೆಗಣಿಸಲು ಸಾಧ್ಯವಾಗದ ಕಾರಣದಿಂದ ವಾಮ ಮಾರ್ಗದ ಮೂಲಕ ಕಡೆಗಣಿಸಲಾಗುತ್ತಿದೆ.
ಕಾಯಿದೆಯಲ್ಲಿ ಪ್ರವೇಶ ಪ್ರಕ್ರಿಯೆ, ಶುಲ್ಕ ನಿಗದಿ, ಶಿಕ್ಷೆ ಹಾಗೂ ಇತರ 25 ಅಂಶಗಳ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಮೇಲ್ನೋಟಕ್ಕೆ ಕೆಲ ಸೀಟುಗಳಿಗೆ ಶುಲ್ಕ ಹೆಚ್ಚಾದಂತೆ ಅನಿಸಬಹುದು, ಆದರೆ ಭಾರತದ ಇತರೇ ರಾಜ್ಯಗಳ ಪ್ರವೇಶ ಶುಲ್ಕ ಅಥವಾ ಸೌಕರ್ಯಗಳನ್ನು ಪರಿಗಣಿಸಿದಾಗ ಇಂತಹ ಸಂಶಯ ನಿಮ್ಮ ಮನದಲ್ಲಿರಲು ಸಾಧ್ಯವಿಲ್ಲ.ಅಷ್ಟಕ್ಕೂ ಕಾಲೇಜುಗಳ ಶುಲ್ಕವು ಆಯಾ ಕಾಲೇಜಿನಲ್ಲಿರುವ ಸೌಕರ್ಯವನ್ನಾದರಿಸಿ ನಿಗದಿಯಾಗುತ್ತದೆ.
ಸುಮ್ಮನೇ ಇದೊಂದು ಲೆಕ್ಕಾಚಾರ ನೋಡಿ. ಕಳೆದ ವರ್ಷ ಲಭ್ಯವಿದ್ದ ಸೀಟುಗಳಲ್ಲಿ 56,665 ಸೀಟುಗಳು ಸರ್ಕಾರಿ ಸೀಟುಗಳಾಗಿದ್ದವು. ಸರ್ಕಾರಿ ಸೀಟುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.18 ಹಾಗೂ ಹಿಂದುಳಿದ ವರ್ಗಕ್ಕೆ ಶೇ.27 ಸೀಟುಗಳು ಮೀಸಲಿರುತ್ತವೆ. ಅಂದರೆ ಸುಮಾರು 10 ಸಾವಿರ ಸೀಟುಗಳು ಎಸ್‌ಸಿ, ಎಸ್‌ಟಿಗೆ ಹಾಗೂ ಓಬಿಸಿಗೆ 15 ಸಾವಿರ ಸೀಟುಗಳು ದೊರಕುತ್ತವೆ. ಇದಾದ ಬಳಿಕ ಸುಮಾರು 3 ಸಾವಿರ ಸೀಟುಗಳು ವಿಶೇಷ ಕೋಟಾದಡಿ ವಿದ್ಯಾರ್ಥಿಗಳಿಗೆ ಸಿಗುತ್ತವೆ.
ಒಂದೊಮ್ಮೆ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ) ಕಾಯಿದೆ ಅನುಷ್ಠಾನಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ದೊರಕುವ ಸೀಟುಗಳ ಪ್ರಮಾಣವನ್ನು ಒಮ್ಮೆ ಗಮನಿಸಿ. ರಾಜ್ಯದಲ್ಲಿ ಸುಮಾರು 90 ಸಾವಿರ ಎಂಜಿನಿಯರ್ ಸೀಟುಗಳು ಇರಬಹುದು. ಇದರಲ್ಲಿ ಶೇ.50 ಸೀಟುಗಳು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಈಗ ದೊರೆಯುವ ಸರ್ಕಾರಿ ಸೀಟುಗಳ ಪ್ರಮಾಣ ಇನ್ಮುಂದೆ ಮೀಸಲು ರೀತಿಯಲ್ಲಿ ಹಿಂದುಳಿದ ವರ್ಗಕ್ಕೆ ಲಭ್ಯವಾಗಲಿವೆ.
ಇನ್ನುಳಿದ 45 ಸಾವಿರ ಸೀಟುಗಳು ಸಾಮಾನ್ಯ ವರ್ಗಕ್ಕೆ ಸಿಗುತ್ತದೆ. ಇದರಲ್ಲಿ ಶೇ.15ರಷ್ಟು ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು. ಈಗಿನ ಸೀಟು ಹಂಚಿಕೆ ಹಾಗೂ ಮೀಸಲು ವ್ಯವಸ್ಥೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ 28 ಸಾವಿರ ಸೀಟುಗಳು ಲಭ್ಯವಿವೆ. 2006ರ ಕಾಯಿದೆ ಅನುಷ್ಠಾನಕ್ಕೆ ಬಂದರೆ ಸುಮಾರು 32 ಸಾವಿರ ಎಂಜಿನಿಯರಿಂಗ್ ಸೀಟುಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪಾಲಾಗುತ್ತದೆ. ಎನ್‌ಆರ್‌ಐ ಕೋಟಾವನ್ನು ಹೊರತುಪಡಿಸಿದರೇ ಸುಮಾರು ಶೇ.35ರಷ್ಟು ಸೀಟುಗಳು ಸಾಮಾನ್ಯ ವರ್ಗಕ್ಕೆ ಸಿಗಲಿವೆ. ಇದಲ್ಲದೇ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಎನ್‌ಆರ್‌ಐ ಕೋಟಾ ಭರ್ತಿಯಾಗದಿದ್ದರೆ ಅದು ಕೂಡ ಸಾಮಾನ್ಯ ವರ್ಗದ ಸೀಟಾಗಿ ಪರಿವರ್ತನೆಯಾಗುತ್ತದೆ. ಇನ್ನು ಅಲ್ಪಸಂಖ್ಯಾತ ಕಾಲೇಜುಗಳ ವಿಷಯಕ್ಕೆ ಬಂದರೆ ಶೇ.66ರಷ್ಟು ಸೀಟುಗಳನ್ನು ಸಂಸ್ಥೆ ಮಾನ್ಯತೆ ಪಡೆದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಬೇಕು. ಈ ವಿದ್ಯಾರ್ಥಿಗಳು ಕರ್ನಾಟಕದವರೇ ಆಗಿರಬೇಕು. ಉಳಿದ ಸೀಟುಗಳು ಸರ್ಕಾರದ ಸೀಟುಗಳಾಗಿರುತ್ತವೆ. ಇವೆರೆಡು ಪ್ರಮೇಯದಲ್ಲಿ ಸೀಟುಗಳು ಅಂತಿಮ ಸುತ್ತಿನ ಬಳಿಕವೂ ಖಾಲಿ ಉಳಿದಿದ್ದರೆ ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಅವರ ಪ್ರವೇಶ ಪರೀಕ್ಷೆಯ ನಂತರ ತುಂಬಿಕೊಳ್ಳಬಹುದು. ಆದರೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೊರಡಿಸಿರುವ ಆದೇಶದನ್ವಯ ದೇಶದಲ್ಲಿನ ವೃತ್ತಿಪರ ಕೋರ್ಸ್‌ಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ ಇರಬೇಕು. ಎಲ್ಲ ಕೋಟಾಗಳ ಪ್ರವೇಶಕ್ಕೂ ಇದೇ ಅನ್ವಯವಾಗಬೇಕು ಎಂದು ಹೇಳಿದೆ.
ಇನ್ನು ನ್ಯಾ.ಪದ್ಮರಾಜ್ ಆಯೋಗದ ವರದಿಯಲ್ಲಿರುವ ವಿಚಾರಗಳನ್ನು ಗಮನಿಸಿ ಶುಲ್ಕವನ್ನು ಪರಿಗಣಿಸಿದರೆ ಕೆಲ ಪ್ರತಿಷ್ಠಿತ ಕಾಲೇಜುಗಳ ಶುಲ್ಕವನ್ನು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳ ಶುಲ್ಕದಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಮೂಲಗಳ ಪ್ರಕಾರ ಸುಮಾರು 15-20 ಕಾಲೇಜುಗಳ ಶುಲ್ಕದಲ್ಲಿ ಸಣ್ಣ ಬದಲಾವಣೆಯಾಗಬಹುದು. ಈ ಶುಲ್ಕವು ಸರ್ಕಾರ ಈಗ ನಿಗದಿ ಮಾಡಿರುವ ಶುಲ್ಕಕ್ಕಿಂತ ಸುಮಾರು 20 ಸಾವಿರದವರೆಗೆ ಹೆಚ್ಚಿರಬಹುದು. ಆದರೆ ಉಳಿದ ಶಿಕ್ಷಣ ಸಂಸ್ಥೆಗಳ ಶುಲ್ಕ ಈಗಿನ ಸರ್ಕಾರಿ ಶುಲ್ಕಕ್ಕೆ ಸಮನಾಗಿಯೇ ಇರಲಿದೆ. ಕೆಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಾಗಬಹುದು. ಆದರೆ ಇನ್ನು ಕೆಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಲ್ಲಿಯೇ ಸೀಟು ಹೆಚ್ಚುವರಿಯಾಗಿ ದೊರೆಯಲಿದೆ ಎಂಬಂಶವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತೆ ಮೇಲೆ ಸೀಟು ದೊರೆತಾಗ ಕೆಲಸವೂ ಅಷ್ಟೇ ಪಕ್ಕಾ ಆಗಿರುತ್ತದೆ.
ಆದ್ದರಿಂದ ಅರ್ಹ ಮತ್ತು ಉತ್ತಮ ಸೌಲಭ್ಯ ನೀಡುತ್ತಿರುವ ಕಾಲೇಜುಗಳಿಗೆ ಹೆಚ್ಚಿನ ಶುಲ್ಕ ಕೊಡುವುದು ವಿದ್ಯಾರ್ಥಿಗಳಿಗೆ ಹೊರೆಯಾಗುವುದಿಲ್ಲ. ಆದರೆ ಯಾವುದೇ ಸೌಕರ್ಯ ನೀಡದೇ ಎಲ್ಲ ಕಾಲೇಜುಗಳಿಗೆ ಸಮಾನವಾಗಿ ಶುಲ್ಕ ನಿಗದಿ ಮಾಡುವುದು ವೈಜ್ಞಾನಿಕವೂ ಅಲ್ಲ, ಸಮಜಂಸವೂ ಆಗುವುದಿಲ್ಲ. ಇವನ್ನೆಲ್ಲ ಪರಿವೀಕ್ಷಿಸಲು ಎರಡು ಪ್ರತ್ಯೇಕ ಸಮಿತಿ ಇರುತ್ತದೆ. ಪ್ರವೇಶ ಪ್ರಕ್ರಿಯೆ ಹಾಗೂ ಶುಲ್ಕಕ್ಕೆ ಸಂಬಂಧಿಸಿ ಇದು ವರ್ಷಾದ್ಯಂತ ವಿಚಾರಣೆ ನಡೆಸುತ್ತಿರುತ್ತದೆ. ಈ ಸಮಿತಿಯ ನೇತೃತ್ವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ವಹಿಸಲಿದ್ದಾರೆ. ಈ ಸಮಿತಿಗಳು ಕಾಯಿದೆ ಉಲ್ಲಂಘಿಸುವ ಕಾಲೇಜುಗಳ ಹಣೆಬರಹ ನಿರ್ಧರಿಸಲಿವೆ.
ಹಿಂದಿನ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ, ಎಸ್.ಎ.ರಾಮದಾಸ್, ಸಿ.ಟಿ.ರವಿ ಅವರು ಈ ಕಾಯಿದೆ ಬಳಸುತ್ತೇವೆ ಎಂದು ಕೇವಲ ಬೆದರಿಕೆಯ ಅಸ್ತ್ರವನ್ನಾಗಿ ಉಪಯೋಗಿಸಿದರು. ಈಗ ಈ ಜವಾಬ್ದಾರಿ ಹುದ್ದೆಗೆ ಬಂದಿರುವ ಆರ್.ವಿ.ದೇಶಪಾಂಡೆ ಹಾಗೂ ಶರಣ ಪ್ರಕಾಶ್ ಪಾಟೀಲ್ ಕೂಡ ಇದೇ ರೀತಿ ವರ್ತಿಸುತ್ತಾರೆಯೇ ಅಥವಾ ಮುಖ್ಯಮಂತ್ರಿಗಳ ಮನವೊಲಿಸಿ ಕಾಯಿದೆ ಜಾರಿಗೆ ಶ್ರಮಿಸುತ್ತಾರೆಯೇ ಕಾದು ನೋಡಬೇಕು.
ಮಾನ್ಯ ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ಹಿತ ಕಾಪಾಡಲೆಂದೇ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರೂಪಿಸಿರುವ ಕಾಯಿದೆಯನ್ನು ಇನ್ನು ಅದೆಷ್ಟು ವರ್ಷಗಳವರೆಗೆ ತಟಸ್ಥವಾಗಿಡುತ್ತೀರಿ. ಇನ್ನು ಅದೆಷ್ಟು ವರ್ಷಗಳ ಕಾಲ ಖಾಸಗಿ ಶಿಕ್ಷಣ ಲಾಬಿಯ ಜತೆ ನಾಲ್ಕು ಗೋಡೆಯೊಳಗೆ ಕುಳಿತು 'ವ್ಯವಹಾರ' ನಡೆಸುತ್ತಿರುತ್ತೀರಿ. ಪ್ರತಿವರ್ಷ ನಾಟಕ ಮಾಡುತ್ತ ವಿದ್ಯಾರ್ಥಿಗಳ ಹಾಗೂ ಪಾಲಕರ ಕಣ್ಣೊರೆಸುವ ಬದಲು, ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ) ಕಾಯಿದೆ ಹಾಗೂ ನ್ಯಾ.ಪದ್ಮರಾಜ್ ಆಯೋಗದ ವರದಿ ಕುರಿತಂತೆ ಸಾರ್ವಜನಿಕ ಚರ್ಚೆ ನಡೆಸಿ. ಈ ಕಾಯಿದೆ ಹಾಗೂ ವರದಿಯನ್ನು ಖಜಾನೆಯಲ್ಲಿ ಭದ್ರವಾಗಿರಿಸಿಕೊಂಡು ಕಾಪಾಡಲು ಅದೇನು ಯಾರಪ್ಪನ ಆಸ್ತಿಯಲ್ಲ. ಈ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪಾಲಕರ ಹಿತ ಅದರಲ್ಲಿ ಅಡಗಿದೆ. ಲಕ್ಷಾಂತರ ಕುಟುಂಬಕ್ಕೆ ಅನ್ವಯವಾಗುವ ವಿಚಾರವನ್ನು ನಾಲ್ಕು ಗೊಡೆಯೊಳಗೆ ಕುಳಿತು ತೀರ್ಮಾನ ಮಾಡಿ ಅದೆಷ್ಟು ವರ್ಷ ಜನರಿಗೆ ಮಕ್ಮಲ್ ಟೋಪಿ ಹಾಕುತ್ತೀರಿ.

- ರಾಜೀವ ಹೆಗಡೆ, ಕನ್ನಡಪ್ರಭ
meet.hegde@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement