ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಯುಪಿಎಗೆ ಒಂಬತ್ತು, ಇದು ಸೋನಿಯಾ ತಾಕತ್ತು!

Srinivasa Murthy VN
Updated On : 25 May 2013, 11:43 am

ಉತ್ಕೃಷ್ಟ ನಾಯಿಬಿಸ್ಕತ್‌ಗೋಸ್ಕರ ವಾರಗಿತ್ತಿ ಮನೇಕಾ ಗಾಂಧಿ ಜತೆ ಜಗಳವಾಡಿದ್ದರಿಂದ ಹಿಡಿದು ನೂರುಕೋಟಿ ಜನರ ದೇಶವನ್ನು ಮುನ್ನಡೆಸುವವರೆಗೆ ಸೋನಿಯಾ ಗಾಂಧಿ ಕ್ರಮಿಸಿರುವ ದೂರ ವಿಭಿನ್ನವಾದದ್ದು.
ಸೋನಿಯಾ ಗಾಂಧಿ ಅವರ ಬಗೆಗಿರುವ ಕತೆ-ಉಪಕತೆಗಳು ಏನೇ ಇದ್ದಿರಬಹುದಾದರೂ ದಶಕಗಳ ಅವಧಿಯಲ್ಲಿ ಈ ಮಹಿಳೆ ತನ್ನನ್ನು ತಾನು ಪುನರ್ ಅನ್ವೇಷಿಸಿಕೊಂಡ ಬಗೆಯನ್ನು ಮಾತ್ರ ಶ್ಲಾಘಿಸಲೇಬೇಕಿದೆ. ಅದರಲ್ಲೂ ವಿಶೇಷವಾಗಿ 1991ರಲ್ಲಿ ಆಗ ಪ್ರಧಾನಿಯಾಗಿದ್ದ ಅವರ ಪತಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಅವರು ಕ್ರಮಿಸಿದ ಹಾದಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕಾಠಿಣ್ಯದಿಂದ ಕೂಡಿರುವ ಭಾರತೀಯ ರಾಜಕೀಯದ ಮುಖ್ಯವೇದಿಕೆಗೆ ಅವರು ದೂಕಿಸಿಕೊಂಡರು.
ತಮ್ಮ 'ದರ್ಬಾರ್‌' ಕೃತಿಯಲ್ಲಿ ಲೇಖಕಿ ತವ್ಲೀನ್ ಸಿಂಗ್ ಅವರು ಆಮದು ನಾಯಿ ಬಿಸ್ಕತ್‌ನ ಕತೆಯನ್ನು ಸಾದರಪಡಿಸಿದ್ದಾರೆ. ಸಂಜಯ್ ಗಾಂಧಿಯ ಉತ್ತಮ ಸ್ನೇಹಿತ, 'ಡಂಪಿ' ಎಂದೇ ಕರೆಯಲ್ಪಡುತ್ತಿದ್ದ ಅಕ್ಬರ್ ಅಹಮದ್ ಲೇಖಕಿಗೆ ಹೇಳಿದ ಪ್ರಸಂಗವಿದು. ಅದು ತುರ್ತು ಪರಿಸ್ಥಿತಿ ವೇಳೆಯ ಇಂದಿರಾ ಗಾಂಧಿ ಮನೆಯ ಪರಿಸರ. ಆಗ ಮನೇಕಾ ಗಾಂಧಿ ಮತ್ತು 20ರ ಹರೆಯದಲ್ಲಿದ್ದ ಸೋನಿಯಾ ಒಂದೇ ಮನೆಯಲ್ಲಿ ಇದ್ದರು. ತವ್ಲೀನ್ ಬರೆದಂತೆ: ಅಕ್ಬರ್ ಹೇಳಿದ ಕತೆ ಹೀಗಿದೆ. 'ನಾಯಿ ಬಿಸ್ಕತ್ ಅನ್ನು ತನ್ನದಲ್ಲದ ಬೇರೆ ನಾಯಿಯೊಂದು ತಿಂದುಬಿಟ್ಟಿತು ಎಂಬ ಕಾರಣಕ್ಕೆ ಅಪಸೆಟ್ ಆದವರನ್ನು ನೋಡಿದ್ದೀರಾ? ಆಗಿದ್ದೇನೆಂದರೆ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಈ ಬಿಸ್ಕತ್‌ಗಳನ್ನು ನೋಡಿದ್ದೇ ಮನೇಕಾ ತನ್ನ ನಾಯಿಗೆ ತಿನ್ನಿಸಿಬಿಟ್ಟಳು. ಸೋನಿಯಾ ಆಗ ಬೊಬ್ಬೆ ಹಾಕುವುದಕ್ಕೆ ಶುರು ಮಾಡಿದರು. ಜತೆಗೆ ರಾಜೀವ್ ಕೂಡ ಈ ಬೊಬ್ಬೆಯಲ್ಲಿ ಸೇರಿಕೊಂಡು ಮನೆಯಲ್ಲಿ ಅಸಂತೋಷಕರ ವಾತಾವರಣ ನಿರ್ಮಾಣವಾಯಿತು. ಅವು ವಿದೇಶಿ ನಾಯಿ ಬಿಸ್ಕತ್‌ಗಳಾಗಿದ್ದವು ಎಂಬುದೇನೋ ನಿಜ. ಆದರೆ ಎರಡೇ ಎರಡು ನಾಯಿ ಬಿಸ್ಕತ್ ವಿಷಯವಷ್ಟೇ ಯಾರ್...'
ಇನ್ನು ಮೂರು ದಶಕ ಮುಂದಕ್ಕೆ ಓಡಿಸೋಣ ಹಾಗೂ ಇದಕ್ಕೆ ತೀರ ವ್ಯತಿರಿಕ್ತವಾಗಿ ವಿನೋದ್ ಮೆಹ್ತ ಅವರು ತಮ್ಮ ಆತ್ಮಕಥನ 'ಲಕ್ನೋ ಬಾಯ್‌'ನಲ್ಲಿ ಏನು ಬರೆದಿದ್ದಾರೆ ನೋಡೋಣ. ಸೋನಿಯಾ ಗಾಂಧಿ ಅವರೊಂದಿಗೆ ಹಲವು ಬಾರಿ ಸಂವಾದ ನಡೆಸಿರುವ ವಿನೋದ್ ಮೆಹ್ತಾ ಅವರ ಪ್ರಕಾರ ಆಕೆ ಸ್ಮಾರ್ಟ್, ಬುದ್ಧಿವಂತ ಹಾಗೂ ಸಮರ್ಥ ಮಹಿಳೆ. 'ತನ್ನದೇ ಪಕ್ಷ ಹಾಗೂ ಇತರ ಪಕ್ಷಗಳಲ್ಲಿ ಏನು ನಡಿಯುತ್ತಿದೆ ಎಂಬುದರ ಬಗ್ಗೆ ಹಾಗೂ ಉನ್ನತ ಹುದ್ದೆಗಳಿಗೆ ನೇಮಕವಾದವರ ವೈಯಕ್ತಿಕ ವಿವರಗಳನ್ನೂ ಆಳವಾಗಿ ತಿಳಿದುಕೊಂಡಿರುವ ಏಕೈಕ ಮಾಹಿತಿಸಂಪನ್ನ ವ್ಯಕ್ತಿ' ಎಂಬುದಾಗಿ ವಿನೋದ್ ಮೆಹ್ತ ಅವರು ಸೋನಿಯಾರನ್ನು ವರ್ಣಿಸುತ್ತಾರೆ.
ಸೋನಿಯಾ ಅವರು ಮೂಕಬೊಂಬೆ ಎಂಬ ಆರೋಪವನ್ನು ಸಾರಾಸಗಟಾಗಿ ಅಲ್ಲಗೆಳೆಯುವ ವಿನೋದ್ ಮೆಹ್ತ, 'ರಾಷ್ಟ್ರೀಯ ರಾಜಕಾರಣದ ಪ್ರತಿ ಒಳಹೊರಗನ್ನೂ ತಿಳಿದುಕೊಂಡಿರುವ ವ್ಯಕ್ತಿ' ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶಂಸಿಸುತ್ತಾರೆ. ಅವರ ಕಣ್ಣಲ್ಲಿ ಸೋನಿಯಾ ಗಾಂಧಿ ವಾಸ್ತವವಾದಿ ಹಾಗೂ ನಿಷ್ಠುರ ವಸ್ತುನಿಷ್ಠೆ ಹೊಂದಿರುವವರು.
ಮೆಹ್ತಾ ಅವರ ವಿಶ್ಲೇಷಣೆಯಂತೆ ಸೋನಿಯಾ ಕಾರುಣ್ಯವಂತೆ. ಬಹುಶಃ ಈ ವಿಷಯವನ್ನು ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಅವರೂ ಒಪ್ಪಿಕೊಳ್ಳುತ್ತಾರೆ. 'ತಮ್ಮ ಎದುರು ಮನಮೋಹನ್ ಸಿಂಗ್ ಅವರ ಪ್ರಾಮುಖ್ಯ ಕಡಿಮೆಯಾಗಿ ತೋರಬಾರದು ಎಂದು ಅವರು ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳುತ್ತಾರೆ' ಎಂಬುದು ವಿನೋದ್ ಮೆಹ್ತ ಪ್ರತಿಪಾದನೆ. ಯಾವಾಗ ದೃಢ ನಿಲುವು ತಾಳಬೇಕಾಗುತ್ತದೆಯೋ ಆಗ ಮಾತ್ರವೇ ಅವರು ಸರ್ವಾಧಿಕಾರಿ ಧೋರಣೆ ತೋರಿಸುತ್ತಾರೆಯೇ ಹೊರತು ಉಳಿದಂತೆ ಸಮ್ಮತಿಯ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಎಂಬುದು ಮೆಹ್ತಾ ಬಣ್ಣನೆ.
ಯುಪಿಎದ ಒಂಬತ್ತು ವರ್ಷಗಳ ಆಳ್ವಿಕೆಯಲ್ಲಿ ಸೋನಿಯಾ ಗಾಂಧಿ ನಾಯಕತ್ವದ ಪ್ರಮುಖ ಗುರುತಾಗಿ ಕಾಣುವಂಥದ್ದು ರಾಷ್ಟ್ರೀಯ ಸಲಹಾ ಸಮಿತಿ (ಎನ್‌ಎಸಿ) ರೂಪಿಸಿರುವಿಕೆ. ಇದರಿಂದ ನಾಗರಿಕ ಸಮಾಜವೂ ಸರ್ಕಾರದ ನೀತಿ ನಿರೂಪಣೆಯಲ್ಲಿ ಪಾಲ್ಗೊಳ್ಳುವಂತಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಮಾಹಿತಿ ಹಕ್ಕು ಕಾಯ್ದೆಗಳು ಎನ್‌ಎಸಿ ಫಲಿತಾಶವನ್ನು ನೀಡುತ್ತಿದೆ ಎಂಬುದರ ಸೂಚಕಗಳು. ಉಳಿದಂತೆ ಶಿಕ್ಷಣ ಹಕ್ಕು ಕಾಯ್ದೆ, ಆಹಾರ ಭದ್ರತೆ ಕಾಯ್ದೆ, ಆಧಾರ್ ಆಧರಿತ ನಗದು ವರ್ಗಾವಣೆ ಯೋಜನೆ , ಭೂ ಸ್ವಾಧೀನ ಕಾಯ್ದೆ ಇವೆಲ್ಲ ಸುಲಭಕ್ಕೆ ಈಡೇರಿಸಲಾಗದ ಗುರಿಗಳಾಗಿ ತೋರುತ್ತಿರುವುದು ಹೌದಾದರೂ ಸವಾಲನ್ನಂತೂ ಎದುರಿಸುತ್ತ ಸಾಗಿವೆ.
ಅಂತೆಯೇ ಯುಪಿಎ ಖಾತೆಯಲ್ಲಿ ವೈಫಲ್ಯದ ಪಟ್ಟಿ ಇದ್ದೇ ಇದೆ. ಅಣ್ಣಾ ಹಜಾರೆಯವರ ಜನಲೋಕಪಾಲವು ಧೂಳು ಹಿಡಿಯುವಂತೆ ಇದು ನಾಜೂಕಾಗಿ ವಂಚಿಸಿತು. ಆದರೆ ವೈಫಲ್ಯದ ಅರ್ಧಭಾರವನ್ನು ಆಂದೋಲನದ ನಾಯಕತ್ವ ಸಹ ಹೊರಬೇಕಾಗುತ್ತದೆ. ಸಾಲು ಸಾಲು ಹಗರಣಗಳಿಂದ ಸರ್ಕಾರವು ಮುಜುಗರಕ್ಕೆ ಒಳಗಾಗಿದೆ. ಸಂವಿಧಾನಿಕ ಸಂಸ್ಥೆಗಳಾದ ಸಿಎಜಿಯಂಥವು ಸರ್ಕಾರವನ್ನು ಹಲವು ಸಂದರ್ಭಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾಗಿದೆ. ಆದರೆ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ಮಾತ್ರವೇ ಗುರಿಯಾಗಿಸಿಕೊಂಡು ಟೀಕಿಸುವುದು ಬಿಜೆಪಿಗೆ ಹೆಚ್ಚಿನ ಲಾಭವನ್ನೇನೂ ಕೊಡುವುದಿಲ್ಲ. ಏಕೆಂದರೆ ಭ್ರಷ್ಟಾಚಾರ ಎಂಬುದು ಭಾರತದಲ್ಲಿ ಎಲ್ಲ ಕಡೆ ಕಂಡುಬರುವ ಹಾಗೂ ಸಮಾಜದ ಎಲ್ಲ ವರ್ಗಗಳನ್ನು ವ್ಯಾಪಿಸಿಕೊಂಡಿರುವ ಪಿಡುಗಾಗಿದೆ. ಭಾರತದ ಇಡೀ ಸಮಾಜ ವ್ಯವಸ್ಥೆಯೇ ಭ್ರಷ್ಟಾಚಾರವನ್ನು ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂಬ ಧೋರಣೆಗೆ ಶರಣಾದಾಗ ಮಾತ್ರವೇ ಬದಲಾವಣೆ ಶುರುವಾಗುತ್ತದೆ.
ಬಿಜೆಪಿ ತನ್ನ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸಿ ಪರ್ಯಾಯ ಮಾರ್ಗಗಳನ್ನು ಮುಂದಿಡುವಲ್ಲಿ ವಿಫಲವಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಉತ್ತಮ ಆಡಳಿತದ ಮಾದರಿಯಾಗಿ ಬಿಂಬಿಸಿದ್ದನ್ನು ಬಿಟ್ಟರೆ ಅದರಾಚೆ ಆ ಪಕ್ಷ ಏನನ್ನೂ ಮಾಡಿಲ್ಲ. ಆದರೆ ಕೋಮು ಗಲಭೆಯನ್ನು ನಿಯಂತ್ರಿಸಲಾಗದ ಕಳಂಕ ನರೇಂದ್ರ ಮೋದಿಯವರಿಗೆ ಅಂಟಿಕೊಂಡೇ ಇದೆ.
ಭಾರತದ ಅಭಿವೃದ್ಧಿಗಾಥೆ ಎನ್ನುವುದು ಎರಡು ವಿಚಾರಗಳಲ್ಲಿ ಪಂಚಿಕೊಂಡಿದೆ. ಒಬ್ಬರು ವೇಗದ ಆರ್ಥಿಕ ಸುಧಾರಣೆಗಳನ್ನೂ ಆಕ್ರಮಣಕಾರಿ ಬೆಳವಣಿಗೆಯನ್ನೂ ಬಯಸುತ್ತಿದ್ದಾರೆ. ಇನ್ನೊಂದು ಪ್ರತಿಪಾದಕ ವರ್ಗವು ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಹಾಗೂ ಬಡವರಿಗೆ ಆಹಾರ ಭದ್ರತೆಗಳನ್ನು ಒತ್ತಾಯಿಸುತ್ತಿದೆ. ಬಡವರಿಗೆ ಉದ್ಯೋಗ ಹಾಗೂ ಆಹಾರ ಭದ್ರತೆಗಳು ದೊರೆಯದೇ ನಮ್ಮಂಥ ಬಡರಾಷ್ಟ್ರದಲ್ಲಿ ಬರಿದೇ ಅರ್ಥವ್ಯವಸ್ಥೆ ಬೆಳವಣಿಗೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಸೋನಿಯಾ ಗಾಂಧಿ ಅವರಿಗೆ ಈ ಎರಡರ ಮಧ್ಯೆ ಸಮತೋಲನವನ್ನು ತರುವ ಶಕ್ತಿ ಇದೆ.
ಭಾರತದ ಪ್ರಭಾವಿ ಕುಟುಂಬವೊಂದಕ್ಕೆ ವಿವಾಹವಾಗಿ ಬಂದ ವಿದೇಶಿಗಳು ನಮ್ಮ ದೇಶವನ್ನು ಮುನ್ನಡೆಸುತ್ತಿರುವುದು ಐತಿಹಾಸಿಕ ಆಕಸ್ಮಿಕವಷ್ಟೆ. ಇವತ್ತು ಪ್ರಧಾನಿ ಮನಮೋಹನ ಸಿಂಗ್ ಅವರಿಗಿಂತ ಶಕ್ತಿಯುತವಾಗಿರುವವರು ಇದ್ದರೆ ಅದು ಸೋನಿಯಾ ಗಾಂಧಿಯೇ. ಭಾರತೀಯರಿಗೆ ಇದು ವ್ಯಂಗ್ಯವಾಗಿ ಕಾಣಬಹುದಾದರೂ ವಾಸ್ತವದಲ್ಲಿ ಸೋನಿಯಾ ಗಾಂಧಿ ಅವರ ವಿದೇಶಿ ಮೂಲ ಎಂಬುದು ಅವರಿಗೆ ವರವಾಗಿಯೇ ಇರುವ ಅಂಶ. ಏಕೆಂದರೆ ಇಲ್ಲಿನವರಿಗೆ ಇರುವ ಜಾತೀಯ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟುಗಳು ಸೋನಿಯಾ ಗಾಂಧಿ ಅವರಿಗಿಲ್ಲ. ನಾಗರಿಕ ಸಮಾಜದ ಸದಸ್ಯರೊಂದಿಗೆ ನಿಕಟ ಸಂಪರ್ಕ ಇರಿಸಿಕೊಳ್ಳುವ ಮೂಲಕ ಆಕೆ ಭಾರತದ ನೈಜ ಸಮಸ್ಯೆಗಳು ಏನು ಎಂಬುದನ್ನು ಅರಿತುಕೊಂಡಿದ್ದಾರೆ ಹಾಗೂ ಅಲ್ಲಿಂದಲೇ ವ್ಯತ್ಯಾಸ ತರುವ ಭರವಸೆಯನ್ನು ಕಟ್ಟಿಕೊಡುತ್ತಿದ್ದಾರೆ.
ಇಷ್ಟಕ್ಕೂ ತನ್ನ ಸಚಿವಸ್ಥಾನ ಉಳಿಸಿಕೊಳ್ಳುವುದಕ್ಕೆ ಕುರಿಬಲಿ ಕೊಡುವುದಕ್ಕೆ ಮುಂದಾದ ಪವನ್ ಕುಮಾರ್ ಬನ್ಸಲ್ ಅವರನ್ನು ಯಾರು ಸಹಿಸಿಕೊಳ್ಳುತ್ತಾರೆ? ಅಥವಾ ತಾನು ತಲೆಬೋಳಿಸಿಕೊಂಡು ಸಂತಾಪ ಸೂಚಿಸುತ್ತೇನೆ ಎನ್ನುವುದರ ಮೂಲಕ ಜಡ್ಡುಗಟ್ಟಿದ ಹಿಂದು ಸಂಪ್ರಾದಾಯವಾದಿ ಮನಸ್ಥಿತಿಯನ್ನು ಬಿಂಬಿಸಿದ್ದ ಸುಷ್ಮಾ ಸ್ವರಾಜ್ ಯಾರಿಗೆ ಒಪ್ಪಿಗೆಯಾಗುತ್ತಾರೆ?

-ಅಭಯ್ ವೈದ್ಯ
ಫಸ್ಟ್‌ಪೋಸ್ಟ್ ಡಾಟ್ ಕಾಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement