ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗಣನೀಯವಾಗಿ ಕಡಿಮೆಯಾದ ಗ್ರಾಮೀಣ ಸಮಸ್ಯೆಗಳು

Srinivasa Murthy VN
Updated On : 26 May 2013, 9:53 am

ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳ ಸತ್ಯಾಸತ್ಯತೆಯನ್ನು ಅರಿಯಲು ಸ್ಥಳಗಳಿಗೆ ಭೇಟಿ ಕೊಟ್ಟಾಗ, ನಾನೇಕೆ ಹಳ್ಳಿಗಳಿಗೆ ಭೇಟಿ ಕೊಟ್ಟು ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಸ್ವತಃ ಪರಿಶೀಲನೆ ನಡೆಸುವ ಪದ್ಧತಿಯನ್ನು ಜಾರಿಗೆ ತರಬಾರದು ಎಂದು  ನನಗನ್ನಿಸಿತು. ಸಾಮಾನ್ಯವಾಗಿ ಅಧಿಕಾರಿಗಳೆಂದರೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಸಿಬ್ಬಂದಿ ವರ್ಗ ಒದಗಿಸಿದ ಅಂಕಿ ಅಂಶಗಳ ಆಧಾರದ ಮೇಲೆ ಸಭೆಗಳನ್ನು ನಡೆಸುತ್ತಾ ಕಾಗದ ಪತ್ರಗಳನ್ನು ಕಚೇರಿಯಿಂದ ವಿಧಾನಸೌಧಕ್ಕೆ ರವಾನಿಸುತ್ತಿರುವವರು ಎಂಬ ಭಾವನೆ ಇದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಸ್ಥಳಕ್ಕೇ ಭೇಟಿಕೊಟ್ಟು ವಿಷಯ ಅರಿತು, ಮಾಡಬೇಕಾದ ಕೆಲಸಗಳನ್ನು ಅಲ್ಲಿಯೇ ಮಾಡಿದರೆ ಜನರಿಗೂ ಸರ್ಕಾರದ ಮೇಲೆ ವಿಶ್ವಾಸ ಮೂಡುತ್ತದಷ್ಟೇ ಅಲ್ಲದೆ, ನಮ್ಮ ಸಿಬ್ಬಂದಿಗೂ ಸ್ಫೂರ್ತಿ ಸಿಗುತ್ತದೆ. ಕೆಲಸವನ್ನೇ ಮಾಡದೆ ಮಂಡಿಸುವ ವರದಿಗಳು ನಿಲ್ಲುತ್ತವೆ. ನಿಜ ಹೇಳಬೇಕೆಂದರೆ ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಸಹ ಸಾಕಾಗುವುದಿಲ್ಲ. ಇನ್ನು ಗ್ರಾಮಗಳಿಗೆ ಭೇಟಿ ಕೊಡುತ್ತಾ ಹೋದರೆ ಕಷ್ಟವಾಗುತ್ತದೆ ಎಂಬ ಅರಿವಿದ್ದರೂ, ಗ್ರಾಮ ಮಟ್ಟದಲ್ಲಿ ಪ್ರವಾಸ ಮಾಡಿ ರಾತ್ರಿ ಅಲ್ಲೆ ಉಳಿದು ಜನರ ಕುಂದು ಕೊರತೆಗಳ ವಿಚಾರಣಾ ಸಭೆಗಳನ್ನು ನಡೆಸಲಾರಂಭಿಸಿದೆ. ಒಂದೇ ಒಂದು ಸಭೆಯಲ್ಲಿ ಎಷ್ಟೊಂದು ಬೇಡಿಕೆಗಳು ಬರುತ್ತವೆ! ಅವುಗಳಲ್ಲಿ ಕೆಲವು ನಮಗೆ ಮೊದಲೇ ತಿಳಿದಿರುತ್ತವೆ, ಬಾಕಿ ವಿಷಯಗಳು ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ. ನೇರವಾಗಿ ಸಾರ್ವಜನಿಕರನ್ನು ಸಂಪರ್ಕಿಸಿದಾಗ ಎಲ್ಲಾ ವಿಷಯಗಳೂ ಹೊರಗೆ ಬರುತ್ತವೆ. ಮಹಾತ್ಮ ಗಾಂಧಿಯವರ ಕನಸಿನಂತೆ ಪ್ರತಿಯೊಂದು ಗ್ರಾಮದ ಜನರೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸರ್ಕಾರಿ ಯೋಜನೆಗಳು ಫಲಪ್ರದವಾಗಿ ತಲುಪಬೇಕಾದವರಿಗೆ ತಲುಪುತ್ತವೆ. ಆದರೆ ಹಳ್ಳಿ ಜನ ಅಸಹಾಯಕರಾಗಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಜನರ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಅಥವಾ ಹೋದರೆ ಮೇಲಧಿಕಾರಿಗಳು ಸಮನ್ವತೆಯಿಂದ ಸಮಸ್ಯೆಗಳ ಪರಿಹಾರ ಮಾಡುವುದಿಲ್ಲ.
ಈ ಸಂದರ್ಭದಲ್ಲಿ ನನಗೆ ಎಂಬಿಎದಲ್ಲಿ ಓದಿದ್ದ ಒಂದು ವಿಷಯ ನೆನಪಿಗೆ ಬಂತು. ಪ್ರೇರಣೆ ಯಾವಾಗಲೂ ಮೇಲ್ಮಟ್ಟದಿಂದಲೇ ಕೆಳಕ್ಕೆ ಹರಿದು ಬರಬೇಕು. ಮೇಲಿನವರು ನಿಷ್ಠಾವಂತರಾಗಿದ್ದು, ಉತ್ತಮ ಕೆಲಸ ಮಾಡಿದರೆ ಕೆಳಗಿನವರು ಕಡೇ ಪಕ್ಷ ಶೇಕಡ ಐವತ್ತಷ್ಟು ಜನರಾದರೂ ಪ್ರೇರಿತರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಾರೆ. ಮೇಲಿನವರೇ ಸರಿಯಿಲ್ಲದಿದ್ದರೆ ಭ್ರಷ್ಟತೆ ತಾಂಡವಾಡುತ್ತದೆ.
ಎರಡನೇ ಮುಖ್ಯ ವಿಷಯವೆಂದರೆ ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಚೆನ್ನಾಗಿ ಅರಿತಿರಬೇಕು. ತಮ್ಮ ಹಕ್ಕನ್ನು ಚಲಾಯಿಸಬೇಕು. ಸಾರ್ವಜನಿಕರು ಸಮಾಜದ ದೊಡ್ಡ ದನಿಯಾದರೆ ವ್ಯವಸ್ಥೆ ತನ್ನಿಂದ ತಾನೇ ಸರಿಹೋಗುತ್ತದೆ. ಆಗ ಭ್ರಷ್ಟರಿಗೆ ಮೈನಡುಕ ಹುಟ್ಟುತ್ತದೆ. ಜನ ಶಕ್ತಿಯ ಮುಂದೆ ಬೇರಾವ ಶಕ್ತಿಯೂ ನಡೆಯುವುದಿಲ್ಲ.
ಮೂರನೆಯದಾಗಿ, ಮಾಧ್ಯಮದವರು ಕಟ್ಟೆಚ್ಚರದಿಂದ ಕೆಲಸ ಮಾಡಿದರೆ, ಅವರೊಂದಿಗೆ ಸಾರ್ವಜನಿಕರೂ ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಎಲ್ಲರೂ ವಸ್ತುನಿಷ್ಠರಾಗಿ ಕೆಲಸ ಮಾಡಬೇಕಾಗುತ್ತದೆ.
2007ರ ಫೆಬ್ರವರಿ ಹದಿಮೂರರಂದು ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಮಧ್ಯಾಹ್ನ ಮೂರೂವರೆಗೆ ಸಾರ್ವಜನಿಕ ಸಭೆ ನಡೆಸಿದೆ. ಈ ಸಭೆಯಲ್ಲಿ ನನಗೇ ಅಚ್ಚರಿಯಾಗುವಂತೆ ಗ್ರಾಮಸ್ಥರೆಲ್ಲರೂ ಬಂದು ಭಾಗವಹಿಸಿದರು. ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲಾರಂಭಿಸಿದರು. ಅವುಗಳಲ್ಲಿ ಕೆಲವು ಹೀಗಿವೆ:
ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಇದರಿಂದ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ಆಸ್ಪತ್ರೆಯಲ್ಲಿ ತೊಂದರೆ ಉಂಟಾಗುತ್ತಿತ್ತು. ಕುಡಿಯುವ ನೀರಿನ ಸಲುವಾಗಿ ಗ್ರಾಮಪಂಚಾಯತಿಯಲ್ಲಿ ರು. ನಾಲ್ಕು ಲಕ್ಷ ಅನುದಾನ ಲಭ್ಯವಿದ್ದರೂ ಪಂಚಾಯತಿಯವರು ಹಣ ಖರ್ಚು ಮಾಡಿರಲಿಲ್ಲ ಮತ್ತು ಮೇಲಾಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಆದ್ದರಿಂದ, ಸದರಿ ಅನುದಾನದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಾಂತ್ರಿಕ ಸಲಹೆ ಪಡೆದು ಕೊಳವೆ ಬಾವಿಗಳನ್ನು ತೋಡಿ ಇಸ್ಲಾಂಪೂರ ಗ್ರಾಮಕ್ಕೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾ ಪಂಚಾಯತಿ ತಾಂತ್ರಿಕ ಸಿಬ್ಬಂದಿಗೆ ನಿರ್ದೇಶನ ಸ್ಥಳದಲ್ಲಿಯೇ ನೀಡಿದೆ.
ಇಸ್ಲಾಂಪೂರ ಮಾರ್ಗವಾಗಿ ಕರೋಕಟ್ಟಿ ಗ್ರಾಮಕ್ಕೆ ಗ್ರಾಮ ಸಡಕ್ ಯೋಜನೆಯಡಿ ರು. ಹನ್ನೆರಡು ಲಕ್ಷ ಅಂದಾಜು ವೆಚ್ಚದಲ್ಲಿ ಕಾಮಗಾರಿ ಮಂಜೂರಾಗಿತ್ತು. ಆದರೆ ಕೆಲಸ ಮಂದಗತಿಯಲ್ಲಿ ನಡೆದಿದ್ದು ಈ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಗ್ರಾಮಸ್ಥರು ವಿನಂತಿಸಿಕೊಂಡಿದ್ದರಿಂದ, ತಕ್ಷಣವೇ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಿದೆ.
ಇಸ್ಲಾಂಪೂರ ಗ್ರಾಮದಿಂದ ಜಾರಕಿಹೊಳಿ ಗ್ರಾಮಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯರು ಕೈಗೆತ್ತಿಕೊಂಡಿದ್ದರು. ಆದರೆ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿತು. ಅರ್ಧಕ್ಕೆ ಬಿಟ್ಟ ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯವರು ತಕ್ಷಣ ಪ್ರಾರಂಭಿಸಿ ರಸ್ತೆ ನಿರ್ಮಿಸಿಕೊಡುವುದು ಎಂದು ನಿರ್ದೇಶನ ನೀಡಿದೆ.
ಗ್ರಾಮದಲ್ಲಿ ಆಶ್ರಯ ಮನೆಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡುಬಂದಿತ್ತು. ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲು ಇಸ್ಲಾಂಪೂರ ಗ್ರಾಮದ ರಿ.ಸ.ನಂ.124 ರಲ್ಲಿ ಲಭ್ಯವಿರುವ ಹದಿನಾರು ಎಕರೆ ಇಪ್ಪತ್ತು ಗುಂಟೆ ಸರಕಾರಿ ಜಮೀನಿನಲ್ಲಿ ಅವಶ್ಯವಿರುವಷ್ಟು ಜಮೀನನ್ನು ನಿಯಮಾನುಸಾರ ಗ್ರಾಮ ಪಂಚಾಯತಿಗೆ ವರ್ಗಾಯಿಸಿಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಲು ನಿರ್ದೇಶನ ನೀಡಿದೆ.
ಇಸ್ಲಾಂಪೂರ ಗ್ರಾಮದ ರೈತರು ತಮಗೆ ಅವಶ್ಯವಿರುವ ಬಿತ್ತನೆ ಬೀಜವನ್ನು ತರಲು ಸಂಕೇಶ್ವರಕ್ಕೆ/ಯಮಕನಮರಡಿಗೆ ಹೋಗಬೇಕಾಗುತ್ತಿತ್ತು. ಆದ್ದರಿಂದ ಇಸ್ಲಾಂಪೂರ ಗ್ರಾಮದಲ್ಲಿಯೇ ಬೀಜಗಳನ್ನು ಸರಬರಾಜು ಮಾಡುವಂತೆ ಗ್ರಾಮಸ್ಥರ ಬೇಡಿಕೆ ಇತ್ತು. ಮುಂಬರುವ ಮುಂಗಾರಿನ ಹಂಗಾಮಿನಲ್ಲಿ ಅಲ್ಲಿಯೇ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು ಸ್ಥಳದಲ್ಲಿ ಹಾಜರಿದ್ದ ಕೃಷಿ ಅಧಿಕಾರಿ, ಹುಕ್ಕೇರಿ ತಿಳಿಸಿದರು.
ನೀರಾವರಿ ಯೋಜನೆ ಸಲುವಾಗಿ ಜಾರಕಿಹೊಳಿ ಗ್ರಾಮದ ಶೇತ್ಕಿ ಜಮೀನನ್ನು ನೀರಾವರಿ ಇಲಾಖೆಯವರು ವಶಪಡಿಸಿಕೊಂಡಿದ್ದರು. ಆದರೆ ಅದನ್ನು ಉಪಯೋಗಿಸಿರಲಿಲ್ಲ ಮತ್ತು ಅದು ಮುಳುಗಡೆ ಪ್ರದೇಶದಲ್ಲಿಯೂ ಬರುತ್ತಿರಲಿಲ್ಲ. ಇಂತಹದೇ ಜಮೀನನ್ನು ನೀರಾವರಿ ಇಲಾಖೆಯವರು ಬಿರನಹಳ್ಳಿ ಗ್ರಾಮದಲ್ಲಿ ಮಾಲೀಕರುಗಳಿಗೆ ಹಿಂತಿರುಗಿಸಿದ್ದರು. ಅದೇ ರೀತಿ ಜಾರಕಿಹೊಳಿ ಗ್ರಾಮದ ಜಮೀನುಗಳನ್ನು ಸಹ ಸಂಬಂಧಪಟ್ಟವರಿಗೆ ಹಿಂತಿರುಗಿಸುವಂತೆ ಗ್ರಾಮಸ್ಥರು ವಿನಂತಿಸಿಕೊಂಡಿದ್ದರು. ಈ ಬೇಡಿಕೆ ಕುರಿತು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು, ಹಿಡಕಲ್, ಇವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ಅನುಸರಣಾ ವರದಿ ಸಲ್ಲಿಸುವುದು ಎಂದು ನಿರ್ದೇಶಿಸಿದೆ.
ಇಸ್ಲಾಂಪೂರ ಗ್ರಾಮದಲ್ಲಿ ವೃದ್ಯಾಪ್ಯ, ಅಂಗವಿಕಲ ಮತ್ತು ವಿಧವಾ ವೇತನ ಮಂಜೂರಿಗಾಗಿ ಸಾಕಷ್ಟು ಜನರು ಅರ್ಹರಿದ್ದರೂ ವೇತನ ಮಂಜೂರಾತಿ ದೊರೆತಿಲ್ಲ ಎಂಬ ದೂರ ಇತ್ತು. ಆದ್ದರಿಂದ ಸಂಬಂಧಪಟ್ಟವರಿಂದ ವೇತನ ಮಂಜೂರಾತಿ ವಿನಂತಿ ಅರ್ಜಿಗಳನ್ನು ಪಡೆದು, ಮಂಜೂರಾತಿಗಾಗಿ ತಕ್ಷಣ ಕ್ರಮ ಜರುಗಿಸುವಂತೆ, ತಹಶೀಲ್ದಾರರು ಮತ್ತು ಗ್ರಾಮಲೆಕ್ಕಾಧಿಕಾರಿಯು ನೋಡಿಕೊಳ್ಳುವುದು ಎಂದು ನಿರ್ದೇಶಿಸಿದೆ.
ರಾತ್ರಿ ವಾಸ್ತವ್ಯದ ನಂತರ ಬೆಳಗ್ಗೆ ಐದೂವರೆ ಗಂಟೆಗೆ ವಾಯು ವಿಹಾರಕ್ಕಾಗಿ ಹೊರಗೆ ಬಂದಾಗ ಇಬ್ಬರು ವಿದ್ಯಾರ್ಥಿನಿಯರು ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದುದನ್ನು ಕಂಡೆ. ಅವರ ಜೊತೆಗೆ ಮಾತನಾಡಿದಾಗ ಇಸ್ಲಾಂಪೂರ ಗ್ರಾಮದಲ್ಲಿರುವ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಸಮೀಪದ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಬರಲು ಒಂದೇ ಒಂದು ಬಸ್ ಇದ್ದದ್ದು ಗೊತ್ತಾಯಿತು. ವಿದ್ಯಾರ್ಥಿಗಳು ದೂರದ ಊರಿನಲ್ಲಿರುವ ಶಾಲಾ/ಕಾಲೇಜುಗಳನ್ನು ತಲುಪಲು ಮೂರು ಗಂಟೆ ಮುಂಚೆಯೇ ಹೊರಡಬೇಕಿತ್ತು. ಒಬ್ಬೊಬ್ಬರೇ ಹೆಣ್ಣು ಮಕ್ಕಳನ್ನು ಅಷ್ಟು ಬೇಗ ಮನೆಯವರು ಕಳಿಸಲು ಇಷ್ಟ ಪಡುತ್ತಿರಲಿಲ್ಲವಾದ್ದರಿಂದ ಇನ್ನೊಬ್ಬ ಹುಡುಗಿಯನ್ನು ಒಪ್ಪಿಸಿ, ಜೊತೆಯಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಿಕೊಂಡಿದ್ದರು. ಇನ್ನು ಕೆಲವು ಹೆಣ್ಣು ಮಕ್ಕಳು ಮುಂದೆ ಓದಲು ಇಷ್ಟು ಇದ್ದರೂ ಮನೆಯವರು ಒಪ್ಪದೆ ಇದ್ದ ಕಾರಣ ಮದುವೆಯಾಗಿ ಹೋಗಿದ್ದರು. ಮತ್ತಿತರರು ಓದು ಬಿಟ್ಟು ಮನೆಯಲ್ಲಿಯೇ ಕುಳಿತಿದ್ದರು. ಹಾಗಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಿಸಿದೆ.
ಸ್ಥಳದಲ್ಲಿ ನಿರ್ದೇಶನ ನೀಡಿದ ವಿಷಯಗಳೆಲ್ಲವನ್ನೂ ನನ್ನ ದಿನಚರಿ ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿದ್ದೆ. ಹದಿನೈದು ದಿನಗಳೊಳಗಾಗಿ ಸಂಬಂಧ ಪಟ್ಟವರು ನನಗೆ ಅನುಷ್ಠಾನದ ವರದಿಯನ್ನು ಸಲ್ಲಿಸಬೇಕಿತ್ತು. ಹದಿನೈದು ದಿನಗಳಾದ ತಕ್ಷಣ ವರದಿ ನನಗೆ ತಲುಪದಿದ್ದರೆ ಕ್ರಮ ಜರುಗಿಸುತ್ತಿದ್ದೆ. ಹಾಗಾಗಿ ನಿಗದಿತ ಸಮಯಕ್ಕೆ ಮುಂಚೆಯೇ ವರದಿಗಳು ತಲುಪುತ್ತಿದ್ದವು. ಕೆಲಸ ಮಾಡಿದವರನ್ನು ಗುರುತಿಸಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದೆ. ಏಕೆಂದರೆ ಗ್ರಾಮ ಮಟ್ಟದ ಸಭೆಗಳು ಇಂದು ಅತ್ಯಂತ ಅವಶ್ಯಕ.
(ಮುಂದುವರೆಯುವುದು)

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement