ಅಂಕಣಗಳು

ಹೊಸ ತಾಲೂಕು ರಚನೆಗೆ ಅಡ್ಡಿ ಏಕೆ?

ಕಾಂಗ್ರೆಸ್ ಸರ್ಕಾರವು ಹೊಸ ತಾಲೂಕು ರಚನೆ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಹೊಸಕಿ ಹಾಕಲು ಮುಂದಾಗಿರುವುದು ದುರಾದೃಷ್ಟಕರ ಬೆಳವಣಿಗೆ.

ಕಾಂಗ್ರೆಸ್ ಸರ್ಕಾರವು ಹೊಸ ತಾಲೂಕು ರಚನೆ ವಿಚಾರದಲ್ಲಿ  ಹಿಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಹೊಸಕಿ ಹಾಕಲು ಮುಂದಾಗಿರುವುದು ದುರಾದೃಷ್ಟಕರ ಬೆಳವಣಿಗೆ.
ಹೊಸ ಸರ್ಕಾರ ಆಡಳಿತಕ್ಕೆ ಬಂದಾಗ ಹಳೆಯ ಸರ್ಕಾರದ (ಅದರಲ್ಲೂ ಅನ್ಯ ಪಕ್ಷಗಳ) ಯೋಜನೆಗಳಿಗೆ ಕಿಮ್ಮತ್ತು ದೊರಕೋದು ಅಷ್ಟಕ್ಕಷ್ಟೆ. ಹಾಗಂತ ಹಳೆಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಹೊಸಕಿಹಾಕುವುದು ಸಮಂಜಸವಲ್ಲ. ಜನೋಪಯೋಗಿ ನಿರ್ಣಯಗಳನ್ನು ಕೈಗೊಂಡವರು ಯಾವ ಪಕ್ಷದವರಾದರೇನಂತೆ?
ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹೀಗಾಗುತ್ತಿಲ್ಲ. ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ಗಳಿಗೆಯಲ್ಲಿ ಘೋಷಿಸಿರುವ 43 ಹೊಸ ತಾಲೂಕು ರಚನೆ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ, ಅವರ ಸಂಪುಟದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅಪಸ್ವರ ಎತ್ತಿದ್ದಾರೆ.
ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಮೈಸೂರಲ್ಲಿ ಹೊಸ ತಾಲೂಕು ರಚನೆ ಕಾರ್ಯಸಾಧುವಲ್ಲ, ಆರ್ಥಿಕವಾಗಿ ಹೊರೆಯಾಗುವ ಬಿಜೆಪಿ ಸರ್ಕಾರದ ಈ ನಿರ್ಣಯ ಪುನರ್ ಪರಿಶೀಲಿಸಲಾಗುತ್ತದೆ ಎಂದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರೂ ಸಮಿತಿ ವರದಿಗಳನ್ನಾಧರಿಸಿ ಹೊಸ ತಾಲೂಕು ರಚನೆ ಬಗ್ಗೆ ಅಂತಿಮ ನಿರ್ಣಯ ಮಾಡುತ್ತೇವೆ ಎಂದು ಹೇಳುವ ಮೂಲಕ ಹಳೆ ಸರ್ಕಾರದ ಹೊಸ ತಾಲೂಕು ರಚನೆಯ ಪ್ರಸ್ತಾವನೆಗೆ ಸದ್ಯಕ್ಕಂತೂ ಪುರಸ್ಕಾರ ಸಿಗೋದು ಅನಿಶ್ಚಿತ ಎಂಬ ಸಂದೇಶ ರವಾನಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ಹೊಸ 43 ತಾಲೂಕುಗಳ ಪೈಕಿ 34 ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ್ದಾಗಿವೆ. ಈ ಪೈಕಿ 18 ತಾಲೂಕುಗಳು ಆರು ಜಿಲ್ಲೆಗಳ ವ್ಯಾಪ್ತಿಯ ಹೈ- ಕರ್ನಾಟಕ ಭಾಗದಲ್ಲಿವೆ.
ಹಿಂದಿನ ಸರ್ಕಾರದ ತಾಲೂಕು ರಚನೆ ಘೋಷಣೆಯಲ್ಲಿ ಉ- ಕ (ಮುಂಬೈ ಕರ್ನಾಟಕ- ಹೈದ್ರಾಬಾದ್- ಕರ್ನಾಟಕ) ಭಾಗದ್ದೇ ಸಿಂಹಪಾಲು. ಚಿಕ್ಕ ತಾಲೂಕುಗಳಿಂದ ಪ್ರಗತಿಯ ಮನ್ವಂತರದಲ್ಲಿ ಕಾಲಿಡುವ ಉಮೇದು ಉ- ಕದಲ್ಲಿ ಆವರಿಸಿತ್ತು. ಆದರೀಗ ಕಾಂಗ್ರೆಸ್ ಸರ್ಕಾರದ ಅಪಸ್ವರದಿಂದಾಗಿ ಉ- ಕ ಮಂದಿಯ ಕನಸು ಸದ್ಯಕ್ಕಂತೂ ನನಸಾಗುತ್ತಿಲ್ಲ
ತಾಲೂಕು ರಚನೆ ನಾಲ್ಕು ದಶಕಗಳ ಹಿಂದಿನ ಬೇಡಿಕೆ. ತಜ್ಞರ 4 ಸಮಿತಿಗಳು ವರದಿ ನೀಡಿದ್ದರೂ ಇನ್ನೆಷ್ಟು ವರ್ಷಗಳ ಕಾಲ ಈ ಬೇಡಿಕೆಯನ್ನು ಈಡೇರಿಸದೆ ಹಾಗೇ ಹಿಡಿದಿಡಿವುದು? ಯಾಕೆ ಹಿಡಿದಿಡಬೇಕು?
ಹಳೆ ಮೈಸೂರು, ಕರಾವಳಿ ಕರ್ನಾಟಕ ಭಾಗಗಳಿಗಿಂತ ಭೌಗೋಳಿಕವಾಗಿ ಚಿಕ್ಕದಾದಂತಹ ತಾಲೂಕುಗಳ ರಚನೆ ಉ- ಕ ಹಾಗೂ ಹೈ- ಕ ಭಾಗದ ತುರ್ತು ಅಗತ್ಯವಾಗಿದೆ. ನಾಲ್ಕೂ ಸಮಿತಿಗಳು ಇದನ್ನೇ ಪುಷ್ಟೀಕರಿಸಿ ವರದಿ ಸಲ್ಲಿಸಿದ್ದರೂ ನಮ್ಮನ್ನಾಳುವವರು ಯಾಕೆ ಅಡ್ಡಗೋಡೆ ಮೇಲೆ ದೀಪ ಇಡುವ ಮಾತನ್ನಾಡಿದರೋ?
ಹಿಂದಿನ ಸರ್ಕಾರದ ಹೊಸ ತಾಲೂಕುಗಳ ಯಾದಿಯಲ್ಲಿ ಗುಲ್ಬರ್ಗದ ಚಿತ್ತಾಪುರ ವಿಭಜಿಸಿ ಕಾಳಗಿಗೆ ತಾಲೂಕು ಪಟ್ಟ ನೀಡಲಾಗಿತ್ತು. ಇದು ಅತ್ಯಂತ ವೈಜ್ಞಾನಿಕ ನಿರ್ಣಯವಾಗಿ ಎಲ್ಲರಿಂದ ಸ್ವಾಗತಿಸಲ್ಪಟ್ಟಿತ್ತು. ಏಕೆಂದರೆ ಚಿತ್ತಾಪುರದ ಒಂದು ತುದಿ ಅರಣಕಲ್ನಿಂದ ಅದೇ ತಾಲೂಕಿನ ಇನ್ನೊಂದು ತುದಿ ಸನ್ನತಿ ಮಧ್ಯೆ ಬರೋಬ್ಬರಿ 175 ಕಿಮೀ ಅಂತರವಿದೆ ಎಂದರೆ ಬೆಚ್ಚಿ ಬೀಳಲೇಬೇಕು!
ಇಂತಹ ಬೇಕಾಬಿಟ್ಟಿ ಚಾಚಿಕೊಂಡಿರುವ ತಾಲೂಕುಗಳಲ್ಲಿ ಪ್ರಗತಿಯ ಪೈರು ಹುಲುಸಾಗಿ ಬೆಳೆಯುವುದು ಸಾಧ್ಯವೆ? ತಾಲೂಕು ಅಧಿಕಾರಿಗಳು ಹೋಬಳಿ ಮಟ್ಟದ ಸಭೆ ನಡೆಸಲೂ 2 ದಿನ ತಗಲುವಂತಹ ಅಂತರ ಇಲ್ಲಿರುವಾಗ ಅದ್ಯಾವ ಸೀಮೆಯ ಪ್ರಗತಿ ಇಲ್ಲಿನ ಜನತೆ ನಿರೀಕ್ಷಿಸಲು ಸಾಧ್ಯ ಹೇಳಿ ನೋಡೋಣ?
ಯಾದಗಿರಿಯ ಹುಣಸಗಿ, ವಡಗೇರಾ, ಗುರುಮಠಕಲ್ನಲ್ಲಿಯೂ ಇದೇ ಗೋಳು. ತಾಲೂಕು ಕೇಂದ್ರ ಸುರಪುರದಿಂದ ಹುಣಸಗಿ ಒಂದು ದಡವಾದರೆ ಅಲ್ಲಿ ಹೋಗಿ ಬರಲು ಇಡಿ ದಿನವೇ ತಗಲುತ್ತದೆ. ತಾಲೂಕು ಕೇಂದ್ರಗಳಿಗೆ ಹೋಗಿ ಬರಲು ಜನರಿಗೆ ಹೆಚ್ಚೆಂದರೆ 1 ಗಂಟೆ ತಗಲುವಂತಿರಬೇಕಷ್ಟೆ. ಹೋಬಳಿ, ಹಳ್ಳಿಗಳಿಂದ ತಾಲೂಕು ಕೇಂದ್ರಕ್ಕೆ 40 ರಿಂದ 50 ಕಿಮೀ ಅಂತರವಿದ್ದರೆ ಮಾತ್ರ ಇದು ಸಾಧ್ಯ. ಅಂದಾಗ ಮಾತ್ರ ಆಡಳಿತ ಜನತೆಗೆ ಹತ್ತಿರವಾಗಿರುತ್ತದೆ.
ಮುಂಬೈ ಕರ್ನಾಟಕದ ವಿಜಾಪುರ, ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ಹೈ- ಕ ಭಾಗದ ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳದಂತಹ ಜಿಲ್ಲೆಗಳು ಮೊದಲೇ ರಾಜಧಾನಿ ಬೆಂಗಳೂರಿನಿಂದ ಗಾವುದ ಗಾವುದ ದೂರ ಉಳಿದು  ಪ್ರಗತಿ ವಂಚಿತವಾಗಿವೆ. ಇನ್ನು  ಜನತೆ ತಾಲೂಕು ಕೇಂದ್ರಗಳಿಂದಲೂ ದೂರ ಉಳಿದಲ್ಲಿ ಅದ್ಯಾವ ಪ್ರಗತಿ ಈ ಸೀಮೆಯಲ್ಲಿ ನಿರೀಕ್ಷಿಸಲು ಸಾಧ್ಯ ಹೇಳಿ?
ಚಿಕ್ಕ- ಚೊಕ್ಕ ತಾಲೂಕು ಕೇಂದ್ರಗಳಿಗಾಗಿ ಈ ನೆಲದಲ್ಲಿನ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಸಮಿತಿಗಳು ಬಂದಾಗೆಲ್ಲಾ ಈ ಭಾಗದ ನಾಯಕರು, ಚಿಂತಕರೆಲ್ಲರೂ ಒಂದಾಗಿ ಹೋರಾಟ ಮಾಡಿದ್ದಾರೆ. ಪ್ರತಿ ಗ್ರಾಮ ಪಂಚಾಯ್ತಿ ಸುತ್ತಿ ಅಲ್ಲೆಲ್ಲಾ ಠರಾವುಗಳು ಮಂಡನೆಯಾಗುವಂತೆ ನೋಡಿಕೊಂಡು ಸಮಿತಿಗಳ ಗಮನ ಸೆಳೆದಿದ್ದಾರೆ.
ತಾಲೂಕು ಕೇಂದ್ರಕ್ಕಾಗಿ ಪ್ರತಿ ಹಳ್ಳಿ- ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಂತಹ ಹೋರಾಟಗಳನ್ನು ವಾಸುದೇವರಾವ ಸಮಿತಿ ವರದಿ ಸ್ಪಷ್ಟವಾಗಿ ದಾಖಲಿಸಿದ್ದು ಗಮನಾರ್ಹ. 43 ಹೊಸ ತಾಲೂಕು ರಚನೆಯ ಮಾತನ್ನಾಡಿದ್ದ ಹಿಂದಿನ ಬಿಜೆಪಿ ಸರ್ಕಾರದ್ದು ಆತುರದ ನಿಲುವೆಂದು ಉಪೇಕ್ಷಿಸಲಾಗದು. ಇದು ಅತ್ಯಂತ ಜನಪ್ರಿಯ ನಿರ್ಧಾರವಾಗಿ ಹೊರಹೊಮ್ಮಿದ್ದು ವಾಸ್ತವ.
ಹೊಸ ತಾಲೂಕುಗಳ ರಚನೆ ಕಾರ್ಯಸಾಧುವಲ್ಲ ಎಂಬ ತನ್ನ ಹೇಳಿಕೆಗೆ ಕಾಂಗ್ರೆಸ್ ಸರ್ಕಾರ ಹಣದ ಕೊರತೆಯ ಕಾರಣ ಮುಂದೆ ಮಾಡಿದೆ. 100 ಕೋಟಿ ರು ಹಣ ಬೇಕು, ದಿಢೀರನೆ ಎಲ್ಲಿಂದ ಹೊಂದಿಸೋದು ಎಂದು ಅಸಹಾಯಕತೆ ಪ್ರದರ್ಶಿಸಿದೆ. ಜೆಎಚ್  ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ 8 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು, ಆಗ ಅವರೇನು ಹಣದ ಲೆಕ್ಕಹಾಕಿ ಅದನ್ನೆಲ್ಲ ತೆಗೆದಿಟ್ಟೇ ಹೊಸ ಜಿಲ್ಲೆಗಳನ್ನು ಹುಟ್ಟು ಹಾಕಿದರೆ?  2008- 09 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಗುಲ್ಬರ್ಗದಲ್ಲೇ ಕ್ಯಾಬಿನೆಟ್ ಸಭೆ ನಡೆಸಿ ಗುಲ್ಬರ್ಗ ವಿಭಜಿಸಿ ಯಾದಗಿರಿ ಉದಯಕ್ಕೆ ಕಾರಣರಾವಾದಾಗಲೂ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿರಲಿಲ್ಲ.
ಕಾಲಾಂತರದಲ್ಲಿ ಹೊಸ ಜಿಲ್ಲೆಗಳಿಗೆ ಅನುದಾನ ಹರಿದು ಬಂತು. ಅಲ್ಲಿ ಹಲವು ಸವಲತ್ತುಗಳಾಗಿದ್ದು ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಹೊಸ ತಾಲೂಕು ರಚನೆಯ ವಿಚಾರದಲ್ಲಿ ಆರ್ಥಿಕ ವಿಚಾರ ಮುಂದೊಡ್ಡಿರುವ ಸರ್ಕಾರ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಿ.

- ಶೇಷಮೂರ್ತಿ ಅವಧಾನಿ, ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ