ಆಯುಷ್ ವೈದ್ಯಕೀಯ ವೃತ್ತಿಗೆ ನ್ಯಾಯ ಒದಗಿಸುತ್ತಿಲ್ಲವೇಕೆ?
ಮೇ 18ರ 'ಅನುಭವ ಮಂಟಪ' ಪುಟದಲ್ಲಿ ವೈದ್ಯ ಗೋವಿಂದ ಪೈಯವರ 'ಆಪ್ತ ಸಲಹೆ'ಯ ರೂಪದಲ್ಲಿ ಪ್ರಕಟವಾದ -'ನೀವು ಆಯುರ್ವೇದ ವೈದ್ಯರೇಕೆ ಆಗುತ್ತೀರಾ?" ಲೇಖನ ಅತ್ಯಂತ ಪ್ರಸ್ತುತ. ಆಯುರ್ವೇದ ಇತ್ಯಾದಿ ಆಯುಷ್ ಕೋರ್ಸ್ಗಳಿಗೆ ಧಾವಿಸಿ ಸೇರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಅತ್ಯಂತ ಕಾಳಜಿ ಪೂರಕವಾಗಿ ಬರೆದ ಲೇಖನವಾಗಿದೆ. ಈ ವಿಷಯದ ಅಂತರಂಗವನ್ನು ಇನ್ನೂ ಚೆನ್ನಾಗಿ ಬಿಚ್ಚಿಡುವುದಕ್ಕಾಗಿ ಹಾಗೆಯೇ ಈ ಕೋರ್ಸ್ಗಳ ನೂನ್ಯತೆಗಳ ಪರಿಹಾರಕ್ಕಾಗಿ ಸಹ ಕುರಿತು ವಿಶದೀಕರಿಸುವುದು ಸೂಕ್ತವೇನೋ ಎನ್ನಿಸಿ, ನನ್ನ ಅಭಿಮತವನ್ನು ಬರೆಯುತ್ತಿದ್ದೇನೆ.
ಆಯುಷ್ ಕೋರ್ಸುಗಳುದ್ದಕ್ಕೂ ಸೂಕ್ತ ಶೈಕ್ಷಣಿಕ ಸೌಲಭ್ಯದಿಂದ (Infrastructre) ಹೊರತಾದ ಅಪಕ್ವ ಶಿಕ್ಷಣ ಕ್ರಮವಿದೆ. ಈ ಪದವಿಗಳನ್ನು ಪೂರೈಸಿದ ನಂತರ ಈ ಆಯುಷ್ ಪದವೀಧರರು ತಮ್ಮ ವೈದ್ಯಕೀಯ ವೃತ್ತಿಗೆ ಎಷ್ಟರಮಟ್ಟಿಗೆ ನ್ಯಾಯ (justice) ದೊರಕಿಸಿಕೊಡಲು ಸಾಧ್ಯ ಎಂಬ ಅರಿವು ಇಲ್ಲವೇ ಇಲ್ಲ. ಒಟ್ಟಿನಲ್ಲಿ ತಾವು ವೈದ್ಯರಾಗಬೇಕೆಂಬ "ಹುಚ್ಚು ಹಂಬಲ"ದಿಂದ ಈ ಪದವಿಗಳಿಗೆ ಸೇರುವವರೇ ಹೆಚ್ಚು. ಆಯುರ್ವೇದ ಇತ್ಯಾದಿ ಆಯುಷ್ ಕೋರ್ಸ್ಗಳನ್ನು ನಡೆಸುವುದು ಒಂದು ವ್ಯಾಪಾರೀಕರಣವಾಗಿದ್ದು ದುರಂತದ ಸಂಗತಿ. ನಾಯಿಕೊಡೆಗಳಂತೆ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಆಯುರ್ವೇದ ವಿದ್ಯಾಲಯಗಳು ತಲೆ ಎತ್ತಿ ನಿಂತಿವೆ. ಈ ವಿದ್ಯಾಲಯಗಳ ಕಾರ್ಯವೈಖರಿ ಕುರಿತು ಸರ್ಕಾರದ ಕಡಿವಾಣವೇ ಇಲ್ಲ. ಇವೆಲ್ಲ ಅಜ್ಞಾನಗಳಿಂದಾಗಿ ಈ ಆಯುಷ್ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳ ವೃತ್ತಿ ಜೀವನ ಕರಾಳಮಯ ಎಂಬುದರ ಅರಿವು ಎಲ್ಲಾ ಮುಗಿದ ಮೇಲೆಯೇ ಆಗುತ್ತಿರುವುದು ಸಾಮಾನ್ಯ.
ಯಾವುದೇ ವೈದ್ಯಕೀಯ ಕೋರ್ಸುಗಳನ್ನು ನಡೆಸುವ ಸಂಸ್ಥೆಗಳಲ್ಲಿ ಸುಸಜ್ಜಿತ ವಿದ್ಯಾಲಯ, ಅದಕ್ಕೆ ಹೊಂದಿಕೊಂಡೇ ಅವುಗಳದ್ದೇ ಆದ ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ ಶಾಸ್ತ್ರದ ವಿವಿಧ ವಿಭಾಗಗಳು, ನುರಿತ ಶಿಕ್ಷಕ ವೃಂದದ ಸೌಲಭ್ಯಗಳು ಅತ್ಯವಶ್ಯ. ಸರ್ಕಾರ ಈ ನಿಟ್ಟಿನಲ್ಲಿ ಈ ವಿದ್ಯಾಲಯಗಳಿಗೆ ಮಾನ್ಯತೆ ನೀಡುವಾಗ ಪರಿಶೀಲಿಸುತ್ತದೆಯೇ ಎಂಬುದು ಪ್ರಶ್ನಾರ್ಹ. ಆರೋಗ್ಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಎಂ.ಬಿ.ಬಿ.ಎಸ್. ವಿದ್ಯಾಲಯಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುವಂತೆ, ಇದೇ ಸಚಿವರು, ಈ ಆಯುಷ್ ವಿದ್ಯಾಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ ಉದಾಹರಣೆಗಳೆಷ್ಟು? ಆಯುಷ್ ಮಂಡಳಿಯ ಮೇಲೆ ಇದರ ಜವಾಬ್ದಾರಿ ಹೊರೆಸಿ ಕೈ ತೊಳೆದುಕೊಂಡರೆ ಸಾಲದು. ಬರೀ ಆಯುರ್ವೇದ ಅಥವಾ ಆಯುಷ್ ಪದ್ಧತಿಗಳ ಚಿಕಿತ್ಸೆಯಿಂದ ಈ ವೈದ್ಯಕೀಯ ವೃತ್ತಿ ಕೈಗೊಳ್ಳುವುದು ಅವ್ಯವಹಾರಿಕ ಹಾಗೇ ಮೂರ್ಖತನವೂ ಹೌದು. ಸಾಲದ್ದಕ್ಕೆ ಈ ಆಯುಷ್ ವೈದ್ಯಪದ್ಧತಿಯನ್ನು ಕಾನೂನಾತ್ಮಕವಾಗಿ ಸಹ ಕೈಕಟ್ಟಿ ಕೂಡಿಸಲಾಗಿದೆ. ಇತ್ತ ಆಯುರ್ವೇದ ಚಿಕಿತ್ಸೆ ವೃತ್ತಿಗೆ ಸಾಧುವಲ್ಲ, ಅತ್ತ ಆಧುನಿಕ ವೈದ್ಯ ಪದ್ಧತಿಯ ಗಂಧವೂ ಇವರಿಗೆ ಬರುವುದಿಲ್ಲ. ಹಾಗಾದರೆ ಇವರ ವೃತ್ತಿ ಭವಿಷ್ಯವೇನು ಎಂಬುದಕ್ಕೆ ಸರ್ಕಾರದ ಬಳಿ ಉತ್ತರವಿದೆಯೇ?
ಆದ್ದರಿಂದ ಈ ಬೃಹತ್ ಸಮಸ್ಯೆಗೆ ಒಂದೇ ಪರಿಹಾರವಿದೆ. ಅಂದರೆ ಈಗಿನ ಆಯುಷ್ ಪದವಿ ಪಠ್ಯಕ್ರಮದಲ್ಲೇ, ಅಧಿಕೃತವಾಗಿಯೇ, ಅಲೋಪಥಿಯ ಪ್ರಮುಖ ವಿಷಯಗಳಾದ ಶರೀರ ರಚನಾ ಶಾಸ್ತ್ರ, ಶರೀರ ಪ್ರಕ್ರಿಯಾ ಶಾಸ್ತ್ರ, ನಿದಾನ ಶಾಸ್ತ್ರ ಹಾಗೂ ಔಷಧೀಶಾಸ್ತ್ರಗಳನ್ನು ಪ್ರಥಮ ವರ್ಷದಿಂದಲೇ ಸೂಕ್ತ ಪ್ರಾತ್ಯಕ್ಷಿಕೆಗಳೊಂದಿಗೆ ತರಬೇತಿ ನೀಡಬೇಕು. ಜೊತೆಗೆ ಆಯುರ್ವೇದ ವೃತ್ತಿಗೆ, ಬರೀ ಆಯುರ್ವೇದ ಎಂಬ 'ಮಡಿವಂತಿಕೆ' ಎಂದೂ ಸಲ್ಲದು. ಈ ಪದವಿ ಮುಗಿದ ನಂತರ ಪದವೀಧರರಿಗೂ ಕನಿಷ್ಟ ಜಿಲ್ಲಾ ಮಟ್ಟದ ಅಲೋಪಥಿ ಆಸ್ಪತ್ರೆಗಳಲ್ಲಿ ಇಂಟರ್ನ್ಶಿಪ್ಗಳನ್ನು ಕನಿಷ್ಟ ಒಂದು ವರ್ಷದ ಅವಧಿಗೆ ಕಡ್ಡಾಯ ಮಾಡಬೇಕು. ಈ ಒಂದು ವರ್ಷದ ಅವಧಿಯಲ್ಲಿ ಕನಿಷ್ಟ ಮೂರು ತಿಂಗಳಾದರೂ ಯಾವುದೇ ಗ್ರಾಮೀಣ ಅಲೋಪಥಿ ಕೇಂದ್ರದಲ್ಲಿ ತರಬೇತಿ ನೀಡಬೇಕು. ಹಾಗೆ ನೋಡಿದರೆ ಒಂದು ಇಡೀ ನಮ್ಮ ದೇಶವೇ ಈ ಗ್ರಾಮಾಂತರ ವೈದ್ಯಕೀಯ ಸೇವೆಯಿಂದ ವಂಚಿತವಾಗಿದೆ. ಈ ಹಿಂದೆ ಅಂದರೆ ಮೊನ್ನೆ ಮೊನ್ನೆಯಷ್ಟೇ, ಮಧ್ಯಪ್ರದೇಶ ಸರ್ಕಾರವೂ ಎಂ.ಬಿ.ಬಿ.ಎಸ್. ಪದವೀಧರರಿಗೆ ಗ್ರಾಮಾಂತರ ಸೇವೆಯನ್ನು ಕಡ್ಡಾಯ ಮಾಡಿ ವಿಫಲವಾದಾಗ, ಅಲೋಪಥಿಯಲ್ಲೇ ಅಲ್ಪಾವಧಿಯ ಕೋರ್ಸ್ನ್ನು ಪ್ರಾರಂಭಿಸುವ ಕುರಿತು ಗಂಭೀರವಾಗಿ ಯೋಚಿಸಿದ ಉದಾಹರಣೆಯೂ ಇದೆ. ದೇಶದ ಇನ್ನೂ ಕೆಲ ರಾಜ್ಯಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕಾಗಿ, ಸಮ್ಮಿಶ್ರ ಪದ್ಧತಿಯ (integrated) ವೈದ್ಯಕೀಯ ಕೋರ್ಸುಗಳನ್ನು ಅಳವಡಿಸಿದ್ದೂ ಉಂಟು.
ಈಗ ಸಿದ್ದರಾಮಯ್ಯನವರ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ. ಈ ಹಿಂದಿನ ಯಾವುದೇ ಸರ್ಕಾರಗಳು ಈ ಸಮ್ಮಿಶ್ರ ಪದ್ಧತಿಯ ವೈದ್ಯಕೀಯ ಕೋರ್ಸು, ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗೆ ಪೂರಕವಾಗಬಲ್ಲದು ಎಂಬುದರ ಕುರಿತು ವ್ಯಾವಹಾರಿಕವಾಗಿ ವಿಚಾರವನ್ನೇ ಮಾಡಿಲ್ಲ. ಈಗ ಇಂದಿನ ನೂತನ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಹಾಗೂ ದಿಟ್ಟ ಹೆಜ್ಜೆ ಇಟ್ಟಲ್ಲಿ, ಈ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಿಕೊಟ್ಟಂತಾಗುತ್ತದೆ. ಇವರಿಂದ ಗ್ರಾಮೀಣರೂ ವೈದ್ಯಕೀಯ ಸೇವೆಯನ್ನು ಪಡೆದಂತಾಗುತ್ತದೆ. ಇಷ್ಟೇ, ಈ ಸಮ್ಮಿಶ್ರ ವೈದ್ಯ ಪದ್ಧತಿಯಿಂದ ಪದವೀ ಕೋರ್ಸ್ನ್ನು ಪ್ರಾರಂಭಿಸುವುದೇ ಆದಲ್ಲಿ, ಈಗಿನ ವಿಷಯದ ಪದವಿ ವಿದ್ಯಾಲಯಗಳಲ್ಲಿ, ಈ ಸಮ್ಮಿಶ್ರ ಪದ್ಧತಿಯ ಕೋರ್ಸಿಗೆ ಪೂರಕವಾಗುವ ಸೂಕ್ತ ಅತ್ಯಾಧುನಿಕ ಸೌಲಭ್ಯಗಳಿದ್ದಲ್ಲಿ ಮಾತ್ರ. ಅದೂ ಇವುಗಳು ಒಂದೇ ಇದ್ದಲ್ಲಿ ಅಂಥ ವಿದ್ಯಾಲಯಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿದರೂ ಸರಿ. ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡುವ ವಿದ್ಯಾಲಯಗಳಿಗೆ ಮಾತ್ರ ಸರ್ಕಾರ ಮಾನ್ಯತೆ ನೀಡಲಿ. ರಾಜ್ಯದಲ್ಲಿ 8-10 ಇಂಥ ವಿಶ್ವವಿದ್ಯಾಲಯಗಳು ಇದ್ದರೂ ಸಾಕು. ನೂತನ ಆರೋಗ್ಯ ಶಿಕ್ಷಣ ಸಚಿವರು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವುದೇ ಇಂದಿನ ಅನಿವಾರ್ಯತೆಯಾಗಿದೆ. ಈಗಿರುವ ಆಯುಷ್ ಪದ್ಧತಿಯ ಕೋರ್ಸುಗಳನ್ನು ಸಮ್ಮಿಶ್ರ ಮಾಡದೇ ಹೋದರೆ, ಇವುಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಮೊದಲೇ ಇವುಗಳ ಸಾಧಕ-ಬಾಧಕಗಳನ್ನು ಅರಿತೇ ಸೇರಲಿ. ಇಲ್ಲವಾದರೆ ಅವರ ವೃತ್ತಿ ಜೀವನ ಭ್ರಮನಿರಸನಕ್ಕೆ ಸಿಲುಕುವುದು ನಿಶ್ಚಿತ.
- ಡಾ. ಪಿ.ಬಿ. ಕಲ್ಲಾಪೂರ
ಧಾರವಾಡ