ಕೇಸರಿ ಭಯೋತ್ಪಾದನೆ ಕತೆ ಏನಾಯಿತು?
ಮಾನ್ಯ ಪ್ರಧಾನಮಂತ್ರಿಗಳೆ,
ಹಾಗಿದ್ದರೆ ಇಲ್ಲಿಯವರೆಗೂ ಸಾಧ್ವಿ ಪ್ರಗ್ಯಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮತ್ತು ಸ್ವಾಮಿ ಅಸೀಮಾನಂದರ ವಿರುದ್ಧ ಭಯೋತ್ಪಾದನೆಯ ಸಾಕ್ಷ್ಯಗಳು ಸಿಕ್ಕಿಲ್ಲವೇ? ಇದೇ ಕಾರಣದಿಂದಾಗಿಯೇ ಅಲ್ಲವೇ 2008ರ ಮಾಲೇಗಾಂವ್ ಸ್ಫೋಟದ ಆರೋಪಿಗಳಾದ ಪ್ರಗ್ಯಾಸಿಂಗ್ ಮತ್ತು ಸ್ವಾಮಿ ಅಸೀಮಾನಂದರ ಹೆಸರನ್ನು ಉಲ್ಲೇಖಿಸುವ ವಿಷಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಎಚ್ಚರಿಕೆ ವಹಿಸುತ್ತಿರುವುದು? ಹಾಗಿದ್ದರೆ ನಿಮ್ಮ ಸರ್ಕಾರ ಇದುವರೆಗೂ ವಾದಿಸುತ್ತಾ ಬಂದಿದ್ದ 'ಕೇಸರಿ ಭಯೋತ್ಪಾದನೆಯ' ಕಥೆ ಏನಾಯಿತು?
ಈ ದೇಶದ ಬಹುಸಂಖ್ಯಾತರನ್ನು ಅವಮಾನಿಸುವುದಕ್ಕಾಗಿಯೇ 2010ರಿಂದ ನಿಮ್ಮ ಪಕ್ಷ ಬೃಹತ್ ಮಟ್ಟದಲ್ಲಿ ವ್ಯವಸ್ಥಿತ ಅಭಿಯಾನ ನಡೆಸಿದೆ. ಇನ್ನು ನಮ್ಮ ದೇಶವನ್ನು ಮತ್ತು ರಾಷ್ಟ್ರಭಕ್ತರನ್ನು ಅವಮಾನಿಸುವ ಯಾವೊಂದು ಅವಕಾಶವನ್ನೂ ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್, ಅಬ್ದುಲ್ ರೆಹಮಾನ್ ಅಂತುಳೆ ಅಥವಾ ರಾಹುಲ್ ಗಾಂಧಿ ಕೈ ಚೆಲ್ಲಿಲ್ಲ.
ಚಿದಂಬರಂ ಅವರಂತೂ 'ಭಾರತೀಯರು ಕೇಸರಿ ಭಯೋತ್ಪಾದನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು' ಎಂದು ನಾಚಿಕೆಗೇಡಿನ ಮಾತನ್ನೂ ಆಡಿದರು. ಆ ಮೂಲಕ 'ಕೇಸರಿ ಭಯೋತ್ಪಾದನೆ' ಎನ್ನುವ ಪದವನ್ನು ಸಾರ್ವಜನಿಕ ಜೀವನದಲ್ಲಿ ಚಾಣಾಕ್ಷತನದಿಂದ ಬಿಡಲಾಯಿತು. ಆಗಿನಿಂದ ನಿಮ್ಮ ಪಕ್ಷದ ನಾಯಕರೆಲ್ಲರೂ ಮತದಾರರನ್ನು ಸೆಳೆಯಲು ಕಾಲಕಾಲಕ್ಕೆ ಈ ಪದವನ್ನು ಬಳಸುತ್ತಲೇ ಇದ್ದಾರೆ. ದಿಗ್ವಿಜಯ್ ಸಿಂಗ್ ಅವರು ತಮ್ಮ ನಿಷ್ಠೆಯನ್ನು ರುಜುವಾತು ಮಾಡಲು ಆರ್ಎಸ್ಎಸ್ಗೆ ಉಗ್ರವಾದದ ನಂಟು ಕಲ್ಪಿಸುತ್ತಾರೆ. ರಾಹುಲ್ ಗಾಂಧಿ, ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಆರ್ಎಸ್ಎಸ್ ಅನ್ನು ಹೋಲಿಸುತ್ತಾರೆ. ಇನ್ನು ಈ ಹುಚ್ಚಾಟ ಅತಿರೇಕಕ್ಕೇರಿದ್ದು ರಾಹುಲ್ ಗಾಂಧಿ ಅವರು ಅಮೆರಿಕ ರಾಯಭಾರಿಯೊಂದಿಗೆ ಆಂತರಿಕ ರಕ್ಷಣೆ ವಿಚಾರವಾಗಿ ಮಾತನಾಡಿದಾಗ. 'ರಾಷ್ಟ್ರೀಯ ಭದ್ರತೆಗೆ ಇಸ್ಲಾಮಿಕ್ ಉಗ್ರವಾದಕ್ಕಿಂತ ಹಿಂದೂ ಭಯೋತ್ಪಾದನೆಯಿಂದಲೇ ದೊಡ್ಡ ಅಪಾಯವಿದೆ' ಎಂಬ ಮುತ್ತನ್ನು ಅವರು ಉದುರಿಸಿದ್ದರು. ಇನ್ನು ಪಾಕಿಸ್ತಾನದೊಂದಿಗೆ ಕೈ ಜೋಡಿಸಿರುವ ನಿಮ್ಮ ಕೆಲವು ನಾಯಕರು, 2008ರ ಮುಂಬೈ ದಾಳಿಯಲ್ಲಿ ಮೃತಪಟ್ಟ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವಿಗೆ ಹಿಂದೂ ಸಂಘಟನೆಗಳೇ ಕಾರಣ ಎಂದು ಬಾಯಿ ಬಡಿದುಕೊಂಡರು.
ಈ ದೇಶದ ನಾಗರಿಕನಾಗಿ ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ಇಸ್ಲಾಮಿಕ್ ಉಗ್ರವಾದದ ಬಗ್ಗೆ ಇಷ್ಟೊಂದು ಸಾಕ್ಷ್ಯಗಳಿದ್ದರೂ ನೀವು ಅಥವಾ ನಿಮ್ಮ ಸರ್ಕಾರ ಅದೇಕೆ ಆ ಬಗ್ಗೆ ಇದುವರೆಗೂ ಒಂದು ಮಾತನ್ನೂ ಆಡಿಲ್ಲ? ಇನ್ನೊಂದೆಡೆ ಮುಸ್ಲಿಂ ಮತದಾರರ ಒಲವು ಗಿಟ್ಟಿಸಲು 'ಕೇಸರಿ ಭಯೋತ್ಪಾದನೆ' ಎನ್ನುವ ಅಸ್ತ್ರವನ್ನು ಮಾತ್ರ ಮರೆಯದೇ ಬಳಸುತ್ತಿದ್ದೀರಿ. ಎರಡೂ ಕೋಮಿನ ನಡುವೆ ಅಗಾಧ ಕಂದರ ಉಂಟಾಗಲು ನಿಮ್ಮ ಸರ್ಕಾರವೇ ಕಾರಣ.
ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟದಲ್ಲಿ ಲಷ್ಕರ್- ಏ- ತೋಯ್ಬಾದ ಸದಸ್ಯ ಆರಿಫ್ ಕಸ್ಮಾನಿ ಕೈವಾಡವಿದೆ ಎಂದು ಭಾರತ ಮತ್ತು ಅಮೆರಿಕದ ಗುಪ್ತಚರ ದಳಗಳು ಖಚಿತ ಪಡಿಸಿವೆ ಎನ್ನುವ ಬಗ್ಗೆ ಎಷ್ಟೋ ವರದಿಗಳು ಬಂದವು. ನಿಮಗೆ ನೆನಪಿದೆಯೇ? ಇದೇ ಆಧಾರದ ಮೇಲೆ, ಜುಲೈ 2009ರಂದು ಅಮೆರಿಕ ರಕ್ಷಣಾ ಆಯೋಗದಲ್ಲಿ ಒಂದು ಪ್ರಸ್ತಾವನೆಯನ್ನಿಟ್ಟಿತು. ತತ್ಫಲವಾಗಿ ಲಷ್ಕರ್ ಅನ್ನು ನಿಷೇಧಿತ ಸಂಘಟನೆಯ ಪಟ್ಟಿಯಲ್ಲಿ ಸೇರಿಸಲಾಯಿತು. ಇಷ್ಟೆಲ್ಲಾ ಆದರೂ ನಿಮ್ಮ ಸರ್ಕಾರಕ್ಕೆ ಮಾತ್ರ 'ಇಲ್ಲದ' ಕೇಸರಿ ಭಯೋತ್ಪಾದನೆಯತ್ತಲೇ ಕಣ್ಣು.
ಇಷ್ಟು ಸಾಲಲಿಲ್ಲ ಎನ್ನುವಂತೆ ನಿಮ್ಮ ಸರ್ಕಾರದಿಂದ ಹುಟ್ಟಿದ ಎರಡು ಸಮಿತಿಗಳು(ಜಸ್ಟಿಸ್ ಸಾಚಾರ್ ಸಮಿತಿ ಮತ್ತು ಜಸ್ಟಿಸ್ ರಂಗನಾಥ ಮಿಶ್ರಾ ಸಮಿತಿ) ಮುಸ್ಲಿಮರನ್ನು ತುಳಿತಕ್ಕೊಳಗಾದವರು ಮತ್ತು ನಿರ್ಲಕ್ಷ್ಯಕ್ಕೊಳಗಾದವರು ಎಂದು ಘೋಷಿಸಿದವು. ಬ್ರಿಟೀಷರು ಬರುವವರೆಗೂ ನಮ್ಮ ದೇಶವನ್ನು ಮುಸಲ್ಮಾನರು(ಆಕ್ರಮಣಕಾರರು) ಆಳುತ್ತಿದ್ದರು ಎನ್ನುವ ಸತ್ಯ ಬಹುಶಃ ನಿಮಗೆ ಮರೆತುಹೋಯಿತೇನೋ? ನನ್ನ ಪ್ರಶ್ನೆಯೇನೆಂದರೆ, ಸುಮಾರು 900 ವರ್ಷಗಳ ಕಾಲ ದೇಶವನ್ನು ಆಳಿದ, ಎಲ್ಲಾ ಸೌಲಭ್ಯಗಳನ್ನೂ ಅನುಭವಿಸಿದ ಸಮುದಾಯವೊಂದು ಅದ್ಹೇಗೆ ಹಿಂದುಳಿಯುತ್ತದೆ, ಅದ್ಹೇಗೆ ತುಳಿತಕ್ಕೊಳಗಾಗುತ್ತದೆ?
ಅವರು ತುಳಿತಕ್ಕೋ ಅಥವಾ ನಿರ್ಲಕ್ಷ್ಯಕ್ಕೋ ಒಳಗಾಗಿರುವುದುಸತ್ಯವೇ ಆಗಿದ್ದರೆ, ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗಿನಿಂದ ದೇಶವನ್ನು ಆಳುತ್ತಿರುವ ನಿಮ್ಮ ಪಕ್ಷವೇ ಅವರ ಈ ಸ್ಥಿತಿಗೆ ಕಾರಣವಲ್ಲವೇ?
ಇನ್ನು ಕೇಸರಿ ಭಯೋತ್ಪಾದನೆಯ ವಿಷಯದ ಬಗ್ಗೆ ಮಾತಾಡೋಣ. ಕೆಲವು ಸಮಯದ ಹಿಂದೆ, ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಜಿ ಸಲಹೆಗಾರ ಮತ್ತು ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲ ಎಮ್.ಕೆ. ನಾರಾಯಣ್ ಅವರು ದೇಶದಲ್ಲಿ ಸುಮಾರು 800 ಉಗ್ರ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು. ಅವುಗಳಲ್ಲಿ 'ಕೇಸರಿ' ಗುಂಪುಗಳು ಎಷ್ಟಿವೆ ಎನ್ನುವುದನ್ನು ದಯವಿಟ್ಟು ಹೇಳುತ್ತೀರಾ?
ದುರ್ದೈವವೆಂದರೆ ದೇಶದ ಗೃಹಸಚಿವರಿಗೆ(ಮಾಜಿ) ಕೇಸರಿ ಬಣ್ಣದ ಅರ್ಥ ಮತ್ತು ಮಹತ್ವ ಗೊತ್ತಿಲ್ಲದಿರುವುದು. ಭಾರತೀಯತೆ ಮತ್ತು ಕೇಸರಿ ಪದಗಳನ್ನು ಅವರು ಉಗ್ರವಾದದ ಸಮಾನಾರ್ಥಕ ಪದಗಳೆಂದು ಭಾವಿಸಿರುವುದು ನಿಜಕ್ಕೂ ಅನುಕಂಪ ತರಿಸುವ ಆದರೆ ಮಾಫಿ ಮಾಡಲಾಗದಂತಹ ಸಂಗತಿ. ಕೇಸರಿ ನಮ್ಮ ಸಂಪ್ರದಾಯದಲ್ಲಿನ ಪವಿತ್ರತೆಯ ಸಂಕೇತ ಮತ್ತು ನಮ್ಮ ಧ್ವಜದಲ್ಲಿ ಮೊದಲ ಸ್ಥಾನದಲ್ಲಿರುವ ಬಣ್ಣವೂ ಅದೇ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ ಈ ರೀತಿ ಅಧಿಕಪ್ರಸಂಗದ, ಅಸಂಗತ ಮಾತುಗಳನ್ನಾಡುವುದು ನಿಜಕ್ಕೂ ದೇಶವಾಸಿಗಳಿಗೆ ಮಾಡಿದ ಅಪಮಾನವಲ್ಲವೇ?
ಹಾಗಿದ್ದರೆ ಪಂಜಾಬ್ನಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಡೆದ, ನಡೆಯುತ್ತಿರುವ ಭಯೋತ್ಪಾದನೆಯ ಬಣ್ಣ ಯಾವುದು? ಆಗಿನ ಕಾಂಗ್ರೆಸ್ ನಾಯಕರು 1984ರಲ್ಲಿ ಸುಮಾರು 3000 ಸಿಖ್ಖರ ಹತ್ಯೆಯಲ್ಲಿ ಯಾವ ಪಾತ್ರ ವಹಿಸಿದ್ದರು ಎನ್ನುವುದನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ. ಆಲದ ಮರ ಉರುಳಿದಾಗ ಭೂಮಿ ನಡುಗಲೇಬೇಕು ಎನ್ನುವರ್ಥದಲ್ಲಿ ಮಾತನಾಡಿ ರಾಜೀವ್ ಗಾಂಧಿ ಪರೋಕ್ಷವಾಗಿ ಹೇಳಿದ ಮಾತಿನ ಅರ್ಥವೇನು?
ಕೊಯಂಬತ್ತೂರು ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮದನಿಯನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾಪ ಮಂಡಿಸಲು ಕಾಂಗ್ರೆಸ್ ಸಿಪಿಐಎಮ್ಗೆ ಸಹಾಯ ಮಾಡಿದ್ದು ಸುಳ್ಳೇ? ಅದರಲ್ಲೂ ನಿಮ್ಮ ಸರ್ಕಾರದ ಹಿರಿತಲೆಗಳಲ್ಲೊಂದಾದ ಸಲ್ಮಾನ್ ಖುರ್ಷಿದ್ ಅವರು ಕೋರ್ಟಿನಲ್ಲಿ ಸಿಮಿ ಸಂಘಟನೆಯನ್ನು ಪ್ರತಿನಿಧಿಸಿದ್ದರು! ವೋಟ್ ಬ್ಯಾಂಕ್ ರಾಜಕೀಯದ ಹಿಂದೆ ಬಿದ್ದಿರುವ ನಿಮ್ಮ ಪಕ್ಷ ಈ ದೇಶವನ್ನು ಮತ್ತು ಸಮಾಜವನ್ನು ಅವಮಾನ ಮಾಡುವಷ್ಟು ಹೀನ ಮಟ್ಟಕ್ಕಿಳಿದಿದೆ. ನೀವು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಅಸ್ಸಾಂ ರಾಜ್ಯದ ಹಣೆಬರಹವೇನಾಗಿದೆಯೋ ನೋಡಿದ್ದೀರಾ?
ಪ್ರಪಂಚದ ಯಾವುದೇ ರಾಷ್ಟ್ರದಲ್ಲೂ ಕೂಡ 85 ಪ್ರತಿಶತದಷ್ಟಿರುವ ಬಹುಸಂಖ್ಯಾತರನ್ನು ಕೋಮುವಾದಿಗಳೆಂದು ಕರೆಯಲಾಗುವುದಿಲ್ಲ. ಇಷ್ಟಾಗಿಯೂ ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ನೀವು 'ಕೋಮುವಾದಿ' ಎಂದು ಕರೆಯುತ್ತಿರುವ ನಮ್ಮ ಸನಾತನ ಧರ್ಮ ಮತ್ತು ಹಿಂದೂ ಸಂಪ್ರದಾಯ. ನೀವು ಹಿಂದೂಗಳನ್ನು ಹೀಗಳೆಯುತ್ತಿರುವ ವೇಳೆಯಲ್ಲೇ, ನಮ್ಮ ದೇಶದ ಉನ್ನತ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಆಸೀನರಾಗಿದ್ದಾರೆ ಎನ್ನುವುದನ್ನು ಮರೆಯದಿರಿ. ಸುಪ್ರಿಂಕೋರ್ಟ್ನ ನಿವೃತ್ತನ್ಯಾಯಮೂರ್ತಿ ಹಿದಾಯತುಲ್ಹಾ, ಪ್ರಜಾಪ್ರಭುತ್ವ ಭಾರತದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಈಗಿನ ಉಪರಾಷ್ಟ್ರಪತಿ ಮುಸ್ಲಿಂ ಸಮುದಾಯದವರೇ ಅಲ್ಲವೇ? ಪ್ರಪಂಚದ ಉಳಿದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ (ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ರಷಿಯಾ, ಕೆನಡಾ ಇತ್ಯಾದಿ) ಇದುವರೆಗೆ ಮುಸ್ಲಿಂ ವ್ಯಕ್ತಿಯೊಬ್ಬ ರಾಷ್ಟ್ರಪತಿ/ ಅಧ್ಯಕ್ಷ ಆಗಿದ್ದಾನೆಯೇ?
ವಿವಿಧತೆಯಲ್ಲಿ ಏಕತೆ ಕಾಣುವ ರಾಷ್ಟ್ರದ ಪ್ರಜೆಯಾಗಿ ಇಂದು ನನಗೆ ನಿಜಕ್ಕೂ ಗೊಂದಲವಾಗುತ್ತಿದೆ. ಹಾಗಾಗೆ ನಿಮ್ಮ ಸರ್ಕಾರ ಉಂಟುಮಾಡುತ್ತಿರುವ ಬಿರುಕನ್ನು ಖಂಡಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ.
ನಿಜ ಹೇಳಬೇಕೆಂದರೆ, ನೀವು ಪ್ರಧಾನಿಯಾದರೂ ಇದುವರೆಗೂ ಕಾಂಗ್ರೆಸ್ನ ಅಜೆಂಡಾವನ್ನು ಈಡೇರಿಸಿಕೊಳ್ಳುವ ಅಸ್ತ್ರವಾಗಿ ಉಪಯೋಗವಾಗಿದ್ದೀರಷ್ಟೆ. ನಿಮ್ಮ ಪಕ್ಷದ ಮೇಲಿಟ್ಟಿದ್ದ ಅಲ್ಪಸ್ವಲ್ಪ ನಂಬಿಕೆಯನ್ನೂ ಜನ ಈಗ ಕಳೆದುಕೊಂಡಿದ್ದಾರೆ. ಅಲ್ಲದೆ ನಿಮ್ಮ ನಾಯಕತ್ವದ ಮೇಲಿನ ನಂಬಿಕೆಯನ್ನೂ!
- ಸಂಜಯ್ ಸಿಂಗ್
anisikeprabha@gmail.com