ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರೋಮ್ ನಗರ ಹೊತ್ತಿ ಉರಿವಾಗ ನೀರೋ ಪಿಟೀಲು ಬಾರಿಸಿದನಂತೆ!

ನಮ್ಮ ರಾಜಕಾರಣಿಗಳ ನಡೆಯೇ ವಿಚಿತ್ರ. ಅವರ ಪಟ್ಟಿಯಲ್ಲಿ ಸಾಮಾನ್ಯ...

Mainashree
Updated On : 2 Nov 2013, 4:26 am

ನಮ್ಮ ರಾಜಕಾರಣಿಗಳ ನಡೆಯೇ ವಿಚಿತ್ರ. ಅವರ ಪಟ್ಟಿಯಲ್ಲಿ ಸಾಮಾನ್ಯ ಜನರಿಗೇನಿದ್ದರೂ ಕೊನೆಯ ಸ್ಥಾನ. ಸರ್ದಾರ್ ಪಟೇಲರ ವಿಷಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗಲಾಟೆಯನ್ನೇ ಗಮನಿಸಿ. ಪಟೇಲರು ತಮಗೆ ಸಂಬಂಧಿಸಿದವರೆಂದು ಇಬ್ಬರೂ ಹೊಡೆದಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಇವರೆಲ್ಲ ಪಟೇಲರ ಹೆಸರನ್ನು ದಾಳಿ ಮಾಡಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರಷ್ಟೆ.
ನರೇಂದ್ರ ಮೋದಿ ಹೇಳುತ್ತಾರೆ: "ಸರ್ದಾರ್ ಪಟೇಲರು ಭಾರತದ ಪ್ರಧಾನಿಯಾಗಲಿಲ್ಲ ಎನ್ನುವ ನೋವು ಪ್ರತಿ ಭಾರತೀಯರಲ್ಲೂ ಇದೆ. ಒಂದು ವೇಳೆ ಅವರೇ ಪ್ರಧಾನಿಯಾಗಿದ್ದಿದ್ದರೆ ಭಾರತದ ದಿಶೆಯೇ ಬದಲಾಗುತ್ತಿತ್ತು. ದೇಶದ ಏಕೀಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಆ ಏಕತೆ ಮತ್ತು ಸಮಗ್ರತೆ ಇಂದು ಎಲ್ಲಾ ವಲಯಗಳಿಂದಲೂ ಅಪಾಯವೆದುರಿಸುತ್ತಿದೆ. ಉಗ್ರವಾದದಿಂದಲೇ ಆಗಲಿ ಅಥವಾ ಮಾವೋವಾದದಿಂದಲೇ ಇರಲಿ..."
ಮನಮೋಹನ್ ಸಿಂಗ್ ಪ್ರತ್ಯುತ್ತರ: "ಸರ್ದಾರ್ ಪಟೇಲ್ ಕಾಂಗ್ರೆಸ್ಸಿಗರಾಗಿದ್ದರು. ಅವರಿದ್ದ ಪಕ್ಷದಲ್ಲಿ ನಾನಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ. ಅವರು ಜಾತ್ಯತೀತರಾಗಿದ್ದರು. ನೆಹರೂ, ಸರ್ದಾರ್ ಪಟೇಲ್ ಮತ್ತು ಮೌಲಾನಾ ಆಜಾದ್ ಮಧ್ಯೆ ಇದ್ದ ಸಾಮ್ಯತೆ ಎಂದರೆ ಅವರ ಜಾತ್ಯತೀತ ಮತ್ತು ಪ್ರಗತಿಪರ ನಿಲವು. ಇವರೆಲ್ಲರೂ ತಮಗಿಂತ ಭಿನ್ನವಾಗಿದ್ದ ಆಲೋಚನೆಗಳನ್ನು ಗೌರವಿಸುತ್ತಿದ್ದರು. ಈ ಗುಣ ಇತ್ತೀಚಿನ ದಿನಗಳಲ್ಲಿ ಅಪರೂಪ"
ಸಾಮಾನ್ಯ ಜನತೆ ಕಂಗಾಲಾಗಿದ್ದಾರೆ. ನಮ್ಮ ನಾಯಕರೇಕೆ ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುತ್ತಾರೆ ಎಂದು. ಇಂದು ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ರಾಜಕಾರಣಿಗಳು ತಮ್ಮ ಶಕ್ತಿ ಮತ್ತು ಸಮಯವನ್ನು ಕೇಂದ್ರೀಕರಿಸಬೇಕಲ್ಲವೇ? ಪಟೇಲರು ಎಲ್ಲಾ ಭಾರತೀಯರಿಗೂ ಸಂಬಂಧಪಟ್ಟವರು. ಪ್ರತಿಯೊಬ್ಬ ಭಾರತೀಯನೂ ಅವರನ್ನು ಗೌರವಿಸುತ್ತಾನೆ. ಅವರು ಕೇವಲ ತಮ್ಮವರೆಂದು ಹೇಳಲು ಯಾವ ವ್ಯಕ್ತಿ ಅಥವಾ ಗುಂಪಿಗೂ ಹಕ್ಕಿಲ್ಲ. ರಾಜಕಾರಣಿಗಳು ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಲು ಇದು ಸುಸಮಯ.
ಪಟ್ನಾದಲ್ಲಿನಂತೆ ಉಗ್ರವಾದಿಗಳ ದಾಳಿಯೇ ಆಗಿರಲಿ, ಮುಜಫ್ಫರನಗರದಲ್ಲಿನಂತೆ ಕೋಮು ಹಿಂಸಾಚಾರವೇ ಆಗಿರಲಿ, ಅವಕ್ಕೆ ಪ್ರತಿಯಾಗಿ ನಮ್ಮ ರಾಜಕಾರಣಿಗಳು ನಡೆದುಕೊಳ್ಳುವ ರೀತಿ ಅಷ್ಟೇ ಅಸಹ್ಯ ತರಿಸುವಂತಿದೆ. ಆರೋಪ-ಪ್ರತ್ಯಾರೋಪದ ಆಟದಲ್ಲಿ ಅವರು ಕೂಡಲೇ ಧುಮುಕುತ್ತಾರೆ, ಪರಸ್ಪರ ಕೆಸರೆರಚಿಕೊಳ್ಳುತ್ತಾರೆ. ಇಂಥ ಪ್ರತಿಕೂಲ ಸಂದರ್ಭಗಳಲ್ಲಿ ಬೇಕಿರುವುದು ಒಂದೇ ಧ್ವನಿ ಮತ್ತು ಒಗ್ಗಟ್ಟು. ಇಂಥ ಘಟನೆಗಳು ಮತ್ತೊಮ್ಮೆ ನಡೆಯದಂತೆ ನೋಡಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಂದಾಗಬೇಕು. ದುಃಖದ ಸಂಗತಿಯೆಂದರೆ ಅವರು ಹಾಗೆ ಮಾಡುತ್ತಿಲ್ಲ ಎನ್ನುವುದು.
ಬೆಂಗಳೂರಿನಲ್ಲೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಇಂಥ ಕ್ಷುಲ್ಲಕ ಜಗಳದಲ್ಲಿ ತೊಡಗಿವೆ. ಯಾವ ಕಾರಣಕ್ಕೆ ಎಂದುಕೊಂಡಿರಿ? ನಗರದ ಪ್ರಮುಖ ರಸ್ತೆಯೊಂದಕ್ಕೆ ಮರುನಾಮಕರಣ ಮಾಡುವ ವಿಷಯದಲ್ಲಿ! ಕನ್ನಡದ ಖ್ಯಾತ ಲೇಖಕ ಎಸ್.ಕೆ. ಕರೀಮ್ ಖಾನ್‌ರ ಹೆಸರನ್ನು ಆ ರಸ್ತೆಗೆ ಇಡಬೇಕೆಂದು ಕಾಂಗ್ರೆಸ್ ಆಶಿಸುತ್ತಿದ್ದರೆ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಬೇಕೆಂದು ವಾದಿಸುತ್ತಿದೆ ಬಿಜೆಪಿ. ಎರಡೂ ಪಕ್ಷಗಳಿಗೆ ಸೇರಿದ ಕಾರ್ಪೊರೇಟರ್‌ಗಳ ನಡುವೆ ಬಿಬಿಎಂಪಿ ಮಂಡಳಿಯಲ್ಲಿ ದೊಡ್ಡದಾಗಿ ವಾಗ್ಯುದ್ಧ ನಡೆದು, ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಈ ಜಗಳ ಹೋಯಿತು.
ಚಿಂತಿಸಲು ಬೆಂಗಳೂರಿನಲ್ಲಿ ಹಲವಾರು ಸಮಸ್ಯೆಗಳಿವೆ. ಅನೇಕ ರಸ್ತೆಗಳು ರಿಪೇರಿ ಭಾಗ್ಯ ದೊರೆಯದೆ ಗುಂಡಿಗಳ ಸಮೂಹವಾಗಿ ಬದಲಾಗಿವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ರಸ್ತೆಗೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಕಾರ್ಪೊರೇಟರ್‌ಗಳು ಹೊಡೆದಾಡುತ್ತಿರುವುದನ್ನು ನೋಡಿ ಬೆಂಗಳೂರಿಗರು ಹಣೆ ಹಣೆ ಬಡಿದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳು ಬಹಳ ದಿನಗಳಿಂದ ಕೆಟ್ಟ ಪರಿಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ಇನ್ನಷ್ಟು ಕೆಡಿಸುತ್ತಿದೆ ಭಾರೀ ಮಳೆ. ಆದರೆ ಕಾರ್ಪೊರೇಟರ್‌ಗಳಿಗೆ ಈ ಬಗ್ಗೆ ಚಿಂತೆಯಿಲ್ಲ. ರಸ್ತೆಗೆ
ಮರುನಾಮಕರಣ ಮಾಡುವುದೇ ಅವರ ಆದ್ಯತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹೀಗಾದಾಗ ಬೆಂಗಳೂರಿಗರಿಗೆ ಸಿಟ್ಟು ಬರದೇ ಇರುತ್ತದೆಯೇ?
ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಘಟಕ ಹೇಳುವಂತೆ ಈ ವರ್ಷ ನಡೆದ ಕೆಲಸಗಳಲ್ಲಿ ಕೇವಲ ಒಂದು ಪ್ರತಿಶತ ಕೆಲಸ ಮಾತ್ರ ಗುಣಮಟ್ಟದಿಂದ ಕೂಡಿದೆ. 793 ಸ್ಯಾಂಪಲ್‌ಗಳಿಗೆ ನಡೆದ ಗುಣಮಟ್ಟ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಕೇವಲ 117 ಸ್ಯಾಂಪಲ್‌ಗಳು ಮಾತ್ರ! ಡಾಂಬರು, ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಫುಟ್‌ಪಾತ್ ಮತ್ತು ರಸ್ತೆಗಳ ಅಭಿವೃದ್ಧಿಯಂಥ ಹಲವಾರು ಕೆಲಸಗಳ ಗುಣಮಟ್ಟವನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಾಗಿದ್ದರೆ ಯಾವುದಾದರೂ ಕಾರ್ಪೊರೇಟರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಯಿತೇ? ಯಾವುದಾದರೂ ಇಂಜಿನಿಯರ್‌ಗೆ ಶಿಕ್ಷೆಯಾಯಿತೇ? ಖಂಡಿತ ಇಲ್ಲ! ಇಲ್ಲಿ ಉತ್ತರದಾಯಿತ್ವ ಎನ್ನುವ ಪದ ತನ್ನ ಅರ್ಥವನ್ನೇ ಕಳೆದುಕೊಂಡಿದೆ. ರಸ್ತೆಗೆ ಯಾವ ಹೆಸರಿಡಬೇಕೆಂದು ಕಿತ್ತಾಡುತ್ತಿರುವ ಕಾರ್ಪೊರೇಟರ್‌ಗಳನ್ನು ಈ ಬಗ್ಗೆ ಪ್ರಶ್ನಿಸಿ ನೋಡಿ. ಅವರು ಬೇರೆಡೆ ಮುಖ ತಿರುಗಿಸಿ ನಿಲ್ಲದಿದ್ದರೆ ಆವಾಗ ಹೇಳಿ!
ಜನತೆ ಮೂಲಸೌಕರ್ಯಾಭಿವೃದ್ಧಿಗಾಗಿ ಧ್ವನಿಯೆತ್ತಿದಾಗಲೆಲ್ಲ, "ನಮ್ಮ ಬಳಿ ಹಣವಿಲ್ಲ" ಎಂದು ಹೇಳುತ್ತಾರೆ ಬೆಂಗಳೂರಿನ ಮೇಯರ್. ಈಗ 400 ಕೋಟಿ ರುಪಾಯಿ ವೆಚ್ಚದಲ್ಲಿ 20 ಅಂತಸ್ತುಗಳ ಪಾಲಿಕೆ ಭವನವನ್ನು ಬಿಬಿಎಂಪಿ ನಿರ್ಮಿಸಲು ಸಿದ್ಧವಾಗಿದೆ! ಇದಕ್ಕಾಗಿ ಮೇಯರ್‌ಗೆ ಹಣವೆಲ್ಲಿಂದ ಬಂತು? ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸುವುದಕ್ಕಿಂತ ಭವನವೊಂದನ್ನು ನಿರ್ಮಿಸುವುದೇ ಅತ್ಯಂತ ಜರೂರಿ ಕೆಲಸವೇ? ರೋಮ್ ನಗರ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಬೆಂಗಳೂರಿನ ನಿರ್ವಾಹಕರ ಕಥೆಯೂ ಹೀಗೆಯೇ ಇದೆ...
ಸಂಸತ್ ಚುನಾವಣೆ ಇನ್ನೊಂದು ಆರು ತಿಂಗಳಲ್ಲಿ ಎದುರಾಗಲಿದೆ. ಪಕ್ಷಗಳು ಮತ್ತು ಅದರ ಅಭ್ಯರ್ಥಿಗಳು ನಿಸ್ಸಂಶಯವಾಗಿಯೂ ಕೆಸರೆರಚಾಟದಲ್ಲಿ, ಆರೋಪ-ಪ್ರತ್ಯಾರೋಪಗಳಲ್ಲಿ, ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಕೊನೆಗೆ ನಮ್ಮ ಮುಂದೆ ಕೈಯೊಡ್ಡಿ ನಿಲ್ಲಲಿದ್ದಾರೆ. ಮತದಾರರಾಗಿ ನಾವು ಮಾಡಬೇಕಿರುವುದೆಂದರೆ ಅವರಿಗೆ ಕನ್ನಡಿ ತೋರಿಸುವುದು, ಅವರ ತಪ್ಪು ಆದ್ಯತೆಗಳನ್ನು ಪಟ್ಟಿ ಮಾಡಿ ಹಿಡಿದು ಜಾಡಿಸುವುದು ಮತ್ತು ದೇಶವನ್ನು ಮುನ್ನಡೆಸಲು ಯಾರು ಅರ್ಹ ಎನಿಸುತ್ತಾರೋ ಅವರಿಗೆ ಮತ ಹಾಕುವುದು.

ಕೊನೆಯ ಗುಟುಕು:
ಖ್ಯಾತ ಯುವ ಲೇಖಕ ಚೇತನ್ ಭಗತ್ ಅವರು ರಾಹುಲ್ ಗಾಂಧಿಯವರ ವಿಲಕ್ಷಣ ಚಾಳಿಯೊಂದರ ಬಗ್ಗೆ ಹೇಳುತ್ತಾರೆ- "ರಾಹುಲ್ ಗಾಂಧಿ ಭಾಷಣ ಮಾಡುವಾಗ ಪದೇ ಪದೇ ತಮ್ಮ ತೋಳನ್ನು ಏರಿಸುತ್ತಲೇ ಇರುತ್ತಾರೆ. ಅವರು ಅರ್ಧ ತೋಳಿನ ಅಂಗಿ ಧರಿಸಬೇಕೆಂದು ಯಾರೂ ಸಲಹೆ ನೀಡಿಲ್ಲವೇ?

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement