ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವೈದ್ಯರನ್ನು ಯಮನಂತೆ ಬಿಂಬಿಸುತ್ತಿರುವುದೇಕೆ?

Mainashree
Updated On : 7 Nov 2013, 11:55 am

ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜು ಪ್ರವೇಶದಲ್ಲಿ ಕೊಂಚ ಕಡಿಮೆ ಪೈಪೋಟಿ ಇದ್ದರೆ, ಅದಕ್ಕೆ ಇತ್ತೀಚೆಗೆ ತಪ್ಪು ಚಿಕಿತ್ಸೆಯಿಂದ ರೋಗಿಯ ಸಾವಿಗೆ ಕಾರಣವಾದ ಆಸ್ಪತ್ರೆಗೆ ಆರು ಕೋಟಿ ಪರಿಹಾರ ಕೊಡುವಂತೆ ನಿರ್ದೇಶಿಸಿದ ನ್ಯಾಯಾಲಯದ ತೀರ್ಪು ಸ್ವಲ್ಪ ಮಟ್ಟಿಗೆ ಕಾರಣವಾಗಬಹುದು. ವೈದ್ಯಕೀಯ ಡಿಗ್ರಿ ಪಡೆಯಲು ತಗಲುವ ವೆಚ್ಚ (ಖಾಸಗಿ ಕಾಲೇಜಿನಲ್ಲಿ) ಕೋಟಿಗೆ ಹತ್ತಿರವಾಗುತ್ತಿರುವುದೂ ಕಾರಣವಾಗಬಹುದು. ವೈದ್ಯಕೀಯ ಕೋರ್ಸ್‌ಗೆ ಸಿಗುವ ಬ್ಯಾಂಕ್ ಸಾಲದ ಗರಿಷ್ಟ ಮಟ್ಟ ಏರದಿರುವುದೂ ಕಾರಣವಾಗಬಹುದು. ಈಗ ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯಲು ಕೇವಲ ಡಿಗ್ರಿ ಸಾಲದು. ಸ್ಪೆಷಲೈಸೇಶನ್(ಪರಿಣತಿ) ಅಥವಾ ಸ್ನಾತಕೋತ್ತರ ಪದವಿ ಇದ್ದರಷ್ಟೇ ಈ ವೃತ್ತಿಯಲ್ಲಿ ಮುನ್ನಡೆ ಸಾಧ್ಯ. ಆದರೆ ದೊರಕುವ ಸ್ನಾತಕೋತ್ತರ ಸೀಟುಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದಕ್ಕೂ ಮಿಗಿಲಾಗಿ ಕಡ್ಡಾಯ ಗ್ರಾಮೀಣ ಸೇವೆಮಾಡಬೇಕು ಅಥವಾ 20 ಲಕ್ಷ ದಂಡ ತೆರಬೇಕು ಎನ್ನುವ ನಿಯಮವನ್ನೂ ಹೇರಲಾಗಿದೆ. ಡಿಗ್ರಿ ಪಡೆದು ಕೋಟ್ಯಂತರ ರುಪಾಯಿ ಚೆಲ್ಲಿ ಆಸ್ಪತ್ರೆ ಆರಂಭಿಸುವದು ಸಾಧ್ಯವಾಗದ ಕೆಲಸ.
ವೈದ್ಯಕೀಯ ಶಿಕ್ಷಣ ಮುಗಿಸಿ ಆಸ್ಪತ್ರೆ ಸೇರಿದರೆ ಪುಡಿಗಾಸಿನ ಸಂಬಳ ಮತ್ತು  ಟಾರ್ಗೆಟ್ ಕೆಲಸವಷ್ಟೇ ಸಿಗುತ್ತದೆ.
ಆದರೆ ವೈದ್ಯರನ್ನು ಕಂಗಾಲುಗೊಳಿಸುತ್ತಿರುವುದು ಇವಷ್ಟೇ ವಿಷಯವಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ರೋಗಿಯ ಮರಣಕ್ಕಾಗಿ ವೈದ್ಯರುಗಳ ಮೇಲೆ ನಡೆಯುವ ಹಲ್ಲೆ, ವೈದ್ಯ ಆಕಾಂಕ್ಷಿಗಳನ್ನು, ವೈದ್ಯಲೋಕವನ್ನು ಮತ್ತು ವೈದ್ಯಕೀಯ ಕಾಲೇಜುಗಳ ಧೃತಿಗೆಡಿಸಿವೆ. ಇಂಥ ವಿಷಯಗಳಲ್ಲಿ ಈವರೆಗೆ ಅಷ್ಟುತಲೆಕೆಡಿಸಿಕೊಳ್ಳದ ಭಾರತೀಯ ವೈದ್ಯಕೀಯ ಸಂಸ್ಥೆ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರ ರಕ್ಷಣೆಗೆ ಮುಂದಾಗಿದೆ. ಆರು ಕೋಟಿ ಪರಿಹಾರ ಮತ್ತು ವೈದ್ಯರ ಮೇಲಿನ ಹಲ್ಲೆ ವೈದ್ಯಕೀಯ ಲೋಕದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿವೆ.
ವೈದ್ಯ ವೃತ್ತಿ  ಇನ್ನಿತರ ವೃತ್ತಿಗಳಿಗಿಂತ ಪವಿತ್ರವಾದದ್ದು. ಮನುಷ್ಯನ ಜೀವನ ಉಳಿಸುವ ಮಹತ್ತರ ಕೆಲಸವನ್ನು ಅವರು ಮಾಡುತ್ತಾರೆ. ಅದಕ್ಕಾಗಿಯೇ "ವೈದ್ಯೋ ನಾರಾಯಣೋ ಹರಿ" ಎಂದು ನಮ್ಮ ಹಿರಿಯರು ಹೇಳಿದ್ದಾರೆ . ಎಲ್ಲಾ ವೈದ್ಯರಿಗೂ ತಮ್ಮ ರೋಗಿ ಗುಣಮುಖನಾಗಲಿ ಎಂಬ ಆಸೆ ಇದ್ದೇ ಇರುತ್ತದೆ.  ಅಚಾನಕ್ಕಾಗಿ ಆತನಿಂದ ತಪ್ಪಾದರೆ ಜನರು "ನಾವೇನು ಹಣ ಬಿಸಾಕಲ್ವ? ಅವರೇನು ಪುಕಟ್ಟೆ ಮಾಡುತ್ತಾರಾ?" ಎಂದು ಉಡಾಫೆಯಿಂದ ಮಾತನಾಡುತ್ತಾರೆ. ವೈದ್ಯರಾಗುವಾಗ ತಾವು ತೆಗೆದುಕೊಳ್ಳುವ ಪ್ರಮಾಣ ಮತ್ತು ದೀಕ್ಷೆಗೆ ಅನುಗುಣವಾಗಿ ಪ್ರತಿಯೊಬ್ಬ ವೈದ್ಯನೂ ತನ್ನ ಬಳಿ ಬಂದ ರೋಗಿಗೆ ಕಾಳಜಿಯಿಂದ ಚಿಕಿತ್ಸೆ ಮಾಡಿ ಆತ ನೆಮ್ಮದಿಯಿಂದ ಮನೆ ಸೇರುವಂತೆ ಮಾಡುತ್ತಾನೆ. ತಾನು ಕೊಟ್ಟ ಚಿಕಿತ್ಸೆಗೆ ಸಿಗುವ ಫೀಸ್‌ಗಿಂತ ರೋಗಮುಕ್ತವಾದ ವ್ಯಕ್ತಿಯ ಮುಖದಲ್ಲಿನ ಸಂತಸದಲ್ಲೇ ಹೆಚ್ಚಿನ ಸಂತೋಷ ಕಾಣುತ್ತಾನೆ. ಪ್ರತಿಯೊಬ್ಬ ವೈದ್ಯನೂ ರೋಗಿಯು ವಾಸಿಯಾಗಲೆಂದೇ
ಚಿಕಿತ್ಸೆ ಕೊಡುತ್ತಾನೆ. ವೈದ್ಯಕೀಯ ವೃತ್ತಿ ಒಂದು ರೀತಿಯಲ್ಲಿ "ಟ್ರೈ  ಆ್ಯಂಡ್ ಎರರ್‌" ಎನ್ನುವಂತೆ ಇರುತ್ತದೆ. ಒಬ್ಬ ರೋಗಿಯಿಂದ ಇನ್ನೊಬ್ಬ ರೋಗಿಯ ದೇಹ ಪ್ರಕೃತಿ ಬೇರೆ ಬೇರೆಯಾಗಿದ್ದು(ಒಂದೇ ರೋಗವಿದ್ದಾಗ್ಯೂ) ಯಾವುದೇ ಒಂದು ರೀತಿಯ ಔಷಧ ಅಥವಾ ಚಿಕಿತ್ಸೆ ಇಬ್ಬರಿಗೂ ಒಂದೇ ರೀತಿಯ ಪರಿಣಾಮ ಉಂಟುಮಾಡುತ್ತದೆ ಎಂದು ಹೇಳುವುದು ಅಸಾಧ್ಯದ ಮಾತು. ಅದಕ್ಕೂ ಮಿಗಿಲಾಗಿ ರೋಗ ವಾಸಿಯಾಗುವುದು ಕೇವಲ ವೈದ್ಯ ಕೊಡುವ ಚಿಕಿತ್ಸೆಯಿಂದಷ್ಟೇ ಅಲ್ಲ, ಅದಕ್ಕಿಂತ ಹೆಚ್ಹಾಗಿ ರೋಗಿ ಕೊಡುವ ಸಹಕಾರದಿಂದ. ವ್ಯಕ್ತಿಯೊಬ್ಬ ತನ್ನ ರೋಗದ ಬಗೆಗೆ ಪೂರ್ಣ ಮಾಹಿತಿ ನೀಡಿದಾಗ ವೈದ್ಯನ ಕೆಲಸ ಹಗುರಾಗುತ್ತದೆ ಮತ್ತು ಸರಿಯಾದ ಚಿಕಿತ್ಸೆ ಕೊಡಲು ಆತನಿಗೆ ಸಾಧ್ಯವಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ, ರೋಗಿಯ ಬಗ್ಗೆ ಪೂರ್ಣ ಮಾಹಿತಿಯೇ ವೈದ್ಯರಿಗೆ ಸಿಗುವುದಿಲ್ಲ. ಕೆಲವು ಸಂದರ್ಭಗಳಲ್ಲಂತೂ ರೋಗಿಯ ರೋಗ ಕೈಮೀರಿದಾಗ, ಎಲ್ಲಾ ಕಡೆ ಪ್ರಯತ್ನಿಸಿ ಅಥವಾ ತಾವೇ ಚಿಕಿತ್ಸೆ ಮಾಡಿ ಕೊನೆಗಳಿಗೆಯಲ್ಲಿ ರೋಗಿಯನ್ನು ಉಳಿಸಿ ಎಂದು ವೈದ್ಯರ ಬಳಿ ಬರುವವರಿದ್ದಾರೆ. ಎಷ್ಟೋ ಆಸ್ಪ್ರತ್ರೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಹೊಸ ಅಸ್ಪತ್ರೆಗಳಲ್ಲಿ  ಅಗತ್ಯವಿರುವ ಉಪಕರಣಗಳಾಗಲೀ, ಸರಿಯಾದ ಔಷಧಗಳಾಗಲೀ ಇರುವುದಿಲ್ಲ. ಗ್ರಾಮಾಂತರ ಆಸ್ಪತ್ರೆಗಳಲ್ಲಿ ಈ ಸಮಸ್ಯೆ ಇನ್ನೂ ಸಂಕೀರ್ಣವಾದುದು.
ಪೊಲೀಸ್ ಪ್ರಕರಣವಾದರೆ ರೋಗಿ ಆಸ್ಪತ್ರೆಗೆ ದಾಖಲಾಗುವಾಗಲೇ ಸಾಕಷ್ಟು ವೇಳೆ ವ್ಯಯವಾಗಿರುತ್ತದೆ. ಕ್ಲಿಷ್ಟ ಮತ್ತು ಗಂಭೀರ ಸಂದರ್ಭಗಳಲ್ಲಿ ಒಮ್ಮೊಮ್ಮೆ ವೈದ್ಯರಿಗೆ ಎರಡನೆಯ ಅಭಿಪ್ರಾಯ ಪಡೆಯುವ ಅವಕಾಶವೂ ಇರುವುದಿಲ್ಲ. ಎಲ್ಲಾ ವೈದ್ಯರು ಅಗದು ಎಂದು ಕೈಬಿಟ್ಟ ಸಂದರ್ಭದಲ್ಲಿ ಕೊನೆಗೆ ಚಿಕಿತ್ಸೆ ನೀಡಿದ ವೈದ್ಯನ ತಲೆಗೇ  ಎಲ್ಲಾ ಆರೋಪಗಳೂ ಬಂದು ಕೂಡುತ್ತವೆ.
ರೋಗಿ ಆಸ್ಪತ್ರೆಯಲ್ಲಿ ಅಸು ನೀಗಿದಾಗ, ವೈದ್ಯರ ತಲೆಗೇ ತಪ್ಪನ್ನು ಹೊರಿಸುವುದು ಬೇಜವಾಬ್ದಾರಿತನದ ಪರಮಾವಧಿ ಎನ್ನಬಹುದು. ತಜ್ಞರು ಈ ನಿಟ್ಟಿನಲ್ಲಿ ಕೂಲಂಕಷವಾಗಿ ವಿಚಾರಿಸಿ ಸಂಬಂಧಪಟ್ಟ ವೈದ್ಯರನ್ನು(ಅವರದ್ದೇ ತಪ್ಪಿದ್ದರೆ) ಹೊಣೆಗಾರರನ್ನಾಗಿ ಮಾಡಿದರೆ ಆ ಮಾತು ಬೇರೆ. ಆದರೆ ಇಂಥ ಸಂದರ್ಭಗಳಲ್ಲಿ ರೋಗಿಯ ಸಂಬಂಧಿಗಳು, ಸ್ನೇಹಿತರು, ಹಾದಿಹೋಕರು, ಪಡ್ಡೆ ಹುಡುಗರು ಕಾನೂನನ್ನು ಕೈಗೆ ತೆಗೆದುಕೊಂಡು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ. ರೋಗಿಗಳ ತೀರಾ ಹತ್ತಿರವಾದವರ ನೋವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ವೈದ್ಯರು ರೋಗಿಯನ್ನು ಉಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು ಎನ್ನುವುದನ್ನೂ ಮರೆತು ಅವರ ಹಲ್ಲೆ ಮಾಡಬೇಕೇ? ಇನ್ನು ಸಂಬಂಧವಿಲ್ಲದವರೂ ಅ ಸಮಯದಲ್ಲಿ ನ್ಯೂಸ್ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಪಾಹಪಿಯಿಂದ ಕೈ ಎತ್ತಿ ಹೀರೋಗಳಂತೆ ಪೋಸು ಕೊಡುವುದು ವಿಷಾದನೀಯ.
ಬ್ಯಾಂಕ್ ಅಧಿಕಾರಿಗಳು ಸಾಲಗಾರನ ಮನೆಗೆ ವಸೂಲಿಗೆ ಹೋದಾಗ ಅವರನ್ನು ಬೆನ್ನಟ್ಟಿ ಹೋಗುವ ನ್ಯೂಸ್ ಚಾನೆಲ್ ಮಂದಿ ಸಾಲಗಾರರನ್ನು ಅಮಾಯಕರನ್ನಾಗಿಯೂ, ಬ್ಯಾಂಕ್ ಅಧಿಕಾರಿಗಳನ್ನು ಖಳನಾಯಕರನ್ನಾಗಿಯೂ ಬಿಂಬಿಸುತ್ತಾರೆ. ಹಾಗೆಯೇ ವೈದ್ಯರುಗಳ ಮೇಲಿನ ಹಲ್ಲೆಯ ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡದೇ ವೈದ್ಯರನ್ನು ಯಮನನ್ನಾಗಿಯೂ ಹಲ್ಲೆ ಮಾಡಿದವರನ್ನು ಮುಗ್ಧರನ್ನಾಗಿಯೂ ತೋರಿಸುತ್ತಾರೆ. ಆಸ್ಪತ್ರೆಗೆ ಸೇರಿದವರೆಲ್ಲಾ ಗುಣಮುಖರಾಗಿ ಬರುವುದಿಲ್ಲ. ಕೆಲವು ಅವಘಡಗಳನ್ನು ದೊಡ್ದದು ಮಾಡಿ ವೈದ್ಯರನ್ನು ಶಿಕ್ಷಿಸುವುದು ಉಚಿತವಲ್ಲ. ವೈದ್ಯ ತಪ್ಪು ಮಾಡಿದ್ದರೆ ಆತನ ಮೇಲೆ ಕ್ರಮ ಜರುಗಿಸಲು ಕಾನೂನಿದೆ.
ದುರ್ದೈವವೆಂದರೆ, ವೈದ್ಯರ ಮೇಲಿನ ಹಲ್ಲೆಗಳನ್ನು ಪ್ರಜ್ಞಾವಂತರೆಂದೆನಿಸಿಕೊಂಡವರೂ ಖಂಡಿಸದಿರುವುದು.
ಇತ್ತೀಚೆಗೆ ಇಂಥ ಪ್ರಕರಣ ಒಂದರಲ್ಲಿ ಜನಪ್ರತಿನಿಧಿಯೊಬ್ಬರು ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ.  ಅವರು ಪಬ್ಲಿಸಿಟಿಗಾಗಿ ಮಾಡಿರಬಹುದು. ಆದರೆ, ಹಲ್ಲೆ, ಹಲ್ಲೆಯೇ! ಈಗ ವೈದ್ಯರ  ಹಿತರಕ್ಷಣೆಗೆ, ಅವರ ಹಕ್ಕನ್ನು ಕಾಪಾಡುವುದರ ಜವಾಬ್ದಾರಿ ಭಾರತೀಯ  ವೈದ್ಯ ಸಂಸ್ಥೆಯ ಮೇಲೆ ಬಿದ್ದಿದೆ.

- ಡಾ.ಅನಿಕೇತ್ ಶರ್ಮಾ
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement