ಜನರ ನಂಬಿಕೆಗಳಲ್ಲಿ ಬದಲಾವಣೆ ತರಲಿ
ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯತೆಯ ವಿರುದ್ಧ ಕಾಯ್ದೆ ರೂಪಿಸುವ ಪ್ರಯತ್ನದಲ್ಲಿರುವುದು ಸ್ವಾಗತಾರ್ಹ. ಇದರ ಕರಡುಪ್ರತಿಯನ್ನು ಸಾರ್ವಜನಿಕರಿಗೆ ನೀಡಿ ಬಹಿರಂಗವಾಗಿ ಚರ್ಚೆ ನಡೆಸಿ ಅದನ್ನು ಮಂಡಿಸಿದರೆ ಸೂಕ್ತ.
ಜ್ಯೋತಿಷ್ಯದ ವಿರುದ್ಧ ಕಾಯ್ದೆ ಬರುತ್ತದೆ ಎನ್ನುವ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾದ ಸಂದರ್ಭದಲ್ಲಿ ಜ್ಯೋತಿಷಿಯೊಬ್ಬರು "ನಾನು ಆನ್ಲೈನ್ ಮೂಲಕ ಜ್ಯೋತಿಷ್ಯದ ಸಲಹೆ ನೀಡಿದರೆ ಹೇಗೆ ಅದನ್ನು ತಡೆಯುತ್ತಾರೆ? ಮಾಧ್ಯಮಗಳಾದ ನೀವೇ ಅದನ್ನು ವಿರೋಧಿಸುತ್ತೀರಾ (ಟೀವಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗಾಗಿ)? ಯಾರೂ ಜ್ಯೋತಿಷ್ಯ ಶಾಸ್ತ್ರವನ್ನು ನಿರಾಕರಿಸಲು ಸಾಧ್ಯವಿಲ್ಲ. ಕಟ್ಟಕಡೆಗೆ ಎಂತಹ ನಾಸ್ತಿಕರೂ ವಿವಾಹ ಕೂಡಿಸುವಾಗ ಶುಭ ಮುಹೂರ್ತ ನೋಡಲಾದರೂ ಜ್ಯೋತಿಷಿ ಬೇಕು" ಇತ್ಯಾದಿ ವಾದ ಮಂಡಿಸಿದ್ದರು.
ಭಾರತದಲ್ಲಿ ಮೌಢ್ಯತೆ ಅನಾದಿಕಾಲದಿಂದ ಆಳವಾಗಿ ಬೇರೂರಿರುವ ಮಾರಿ. ಜನ ಜಾಗೃತಿಯೇ ಇದಕ್ಕೆ ಮದ್ದೇ ಹೊರತು ಮಸೂದೆಯಿಂದ ಎಲ್ಲ ಬದಲಾವಣೆ ಅಸಾಧ್ಯ. ಮನುಷ್ಯ ಹುಟ್ಟಿದಾಗಿನಿಂದ ಬಂದಿರುವ ಆಚರಣೆಗಳು ಅಂದು ಮನುಷ್ಯನ ಮನಸ್ಸನ್ನು ಸಂತುಷ್ಠಿಗೊಳಿಸುವ ಸಾಧನಗಳಾಗಿದ್ದವು. ಅಂತಹ ಆಚರಣೆಗಳಿಂದ ಮನುಷ್ಯನಿಗೆ ಆನಂದ ತರುವುದಾದರೆ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಜಾತಿ, ದೇವರು, ಧರ್ಮ, ನಂಬಿಕೆ, ಆಧ್ಯಾತ್ಮ, ಆಚರಣೆಗಳನ್ನು ಪ್ರಶ್ನೆ ಮಾಡುವ ಮೊದಲು ಇವುಗಳ ಹೆಸರಿನಲ್ಲಿ ಶೋಷಣೆ ಮಾಡಿ ಮುಗ್ಧ ಮನುಷ್ಯರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಮಾನಸಿಕ ಅಸ್ವಸ್ಥರನ್ನಾಗಿಸುವ ಮೌಢ್ಯತೆ, ಕಂದಾಚಾರ, ವಾಮಾಚಾರ, ನರಬಲಿ, ಪವಾಡ, ಫಲ ಜ್ಯೋತಿಷ್ಯ. ಇವುಗಳ ಮೇಲೆ ಮೊದಲು ಕಡಿವಾಣ ಹಾಕುವುದು ಒಳಿತು.
ಆಚರಣೆ/ಮೂಢಾಚರಣೆ, ನಂಬಿಕೆ/ಮೂಢನಂಬಿಕೆ, ಧರ್ಮ/ಅಧರ್ಮ, ಸತ್ಯ/ಅಸತ್ಯ, ಆಚಾರ/ಕಂದಾಚಾರ, ಜ್ಞಾನ/ಅಜ್ಞಾನ, ಪವಾಡ/ ವಾಮಾಚಾರ, ಜನ್ಮಾಂತರ, ಪುನರ್ಜನ್ಮ ಇವುಗಳಲ್ಲಿ ಯಾವುದು ಮೂಢನಂಬಿಕೆ ಮತ್ತು ಅಂಧಾಚರಣೆ ಎಂಬುದನ್ನು ವಿಮರ್ಶೆಗೊಳಪಡಿಸಬೇಕು. ಈ ನಿಟ್ಟಿನಲ್ಲಿ ಅವುಗಳ ವಿರುದ್ದ ಹೋರಾಡುತ್ತಿರುವ ವ್ಯಕ್ತಿಗಳ ಸಲಹೆ ಮತ್ತು ಆ ಸ್ಥಳದಲ್ಲಿನ ವಸ್ತುಸ್ಥಿತಿ ಅರಿಯಬೇಕು.
ನಂಬಿಕೆ ಎನ್ನುವುದು ಖಾಸಗಿ ವಿಚಾರ. ಜನರಿಗೆ ಬಿಟ್ಟಿದ್ದು. ಆದರೆ ಆ ನಂಬಿಕೆಯಿಂದ ಮತ್ತೊಬ್ಬರಿಗೆ ನೋವುಂಟಾದಾಗ ಮಾತ್ರ ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಎಲ್ಲಾ ಧರ್ಮಗಳಲ್ಲೂ ನಂಬಿಕೆ/ಮೂಢನಂಬಿಕೆಗಳಿವೆ. ಇವುಗಳ ವಿರುದ್ಧ ಧ್ವನಿ ಎತ್ತುವುದಕ್ಕಿಂತ ಮೊದಲು ಅವುಗಳ ವ್ಯತ್ಯಾಸ ತಿಳಿದುಕೊಳ್ಳಬೇಕು. ಯಾವ ಸ್ಥಳದಲ್ಲಿ ಯಾವ ವ್ಯಕ್ತಿ ಯಾವ ರೀತಿ ಜನರನ್ನು ವಂಚಿಸುತ್ತಿದ್ದಾನೆ ಅಥವಾ ಜನರಿಗೆ ಮಾನಸಿಕ ಯಾತನೆಯುಂಟಾಗುತ್ತದೆನ್ನುವ ವಿಚಾರ ಮಂಥನವಾಗಬೇಕು.
ಕಾನೂನು ತರುವ ಮುನ್ನ ಮನೆ ಮನೆಗಳಲ್ಲಿ, ಹಳ್ಳಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಧಾರ್ಮಿಕ ಚಿಂತಕರು, ವಿಚಾರವಂತರು, ಸಾಹಿತಿಗಳು, ಸಂಘ ಸಂಸ್ಥೆಗಳು, ವಿಜ್ಞಾನಿಗಳು ಮಾಡಬೇಕಿದೆ. ತಳಮಟ್ಟದಿಂದ ವಿಷಯ ಕ್ರೋಢೀಕರಣವಾಗಬೇಕು, ಸಾರ್ವಜನಿಕವಾಗಿ ಚರ್ಚೆಯಾಗಬೇಕು.
ಭಾನಾಮತಿ, ವಾಮಾಚಾರ, ಪವಾಡ, ಮೌಢ್ಯತೆ, ಇವುಗಳ ನೆರಳಿನಲ್ಲಿ ಇಂದಿಗೂ ನರಳುತ್ತಿರುವ ಮುಗ್ಧ ಜೀವಿಗಳಲ್ಲಿ ಅರಿವು ಮೂಡಿಸಿ ಅದರಿಂದ ಹೊರ ಬರುವಂತೆ ಮಾಡಬೇಕು. ಧರ್ಮದ ಹೆಸರಿನಲ್ಲಿ ವಂಚಿಸುತ್ತಿರುವವರ ವಿರುದ್ದ ಧ್ವನಿ ಎತ್ತಿ ಅವರನ್ನು ಬಂಧಿಸುವ ಕೆಲಸವಾಗಬೇಕು. ಯಾವ ಧರ್ಮಗಳಲ್ಲಿ ಯಾವ ರೀತಿ ಮೌಢ್ಯತೆ ಇದೆ ಎನ್ನುವ ಪರಿಕಲ್ಪನೆ ಜನರಲ್ಲಿ ಮೂಡಿಸಬೇಕು.
ನಾನು 25 ವರ್ಷಗಳಿಂದ ಪವಾಡಗಳ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾ ಬಂದಿದ್ದೇನೆ. ಇದರಿಂದ ಅನೇಕ ಪವಾಡ ಪುರುಷರು, ದೇವಮಾನವರು, ಮಂತ್ರವಾದಿಗಳು ಸೆರೆಮನೆ ಸೇರಿದ್ದಾರೆ. ದೇವರು ಮೈಮೇಲೆ ಬರುತ್ತಾನೆಂದು ಮುಗ್ಧ ಜನರನ್ನು ವಂಚಿಸುತ್ತಿದ್ದ ಕೆಲ ವ್ಯಕ್ತಿಗಳು ಇಂದು ತೆಪ್ಪಗಿದ್ದಾರೆ. ಭಾನಾಮತಿ, ಯಂತ್ರ ತಂತ್ರ, ಪವಾಡಗಳ ಹೆಸರಿನಲ್ಲಿ ವಂಚಿಸುತ್ತಿದ್ದ ಕೆಲವರನ್ನು ಮಾಧ್ಯಮಗಳ ಮುಂದೆ ನಿಲ್ಲಿಸಿದ್ದೇನೆ. ಆದರೆ ನಾನು ಇಲ್ಲಿಯವರೆಗೂ ಯಾವುದೇ ನಂಬಿಕೆಯ ವಿರುದ್ಧ ಧ್ವನಿ ಎತ್ತಿಲ್ಲ. ಮನುಷ್ಯನಿಗೆ ಮಾನಸಿಕ ಮತ್ತು ದೈಹಿಕವಾಗಿ ನೋವುಂಟು ಮಾಡುವ ಕಂದಾಚರಣೆಗಳ ವಿರುದ್ಧ ಮೊದಲು ಜಾಗೃತಿ ಮೂಡಿಸುವ ಕೆಲಸವಾಗಬೇಕು.
- ಹುಲಿಕಲ್ ನಟರಾಜ್
ಪವಾಡ ಭಂಜಕರು