ಮೂಢನಂಬಿಕೆ ಪ್ರತಿಬಂಧಿತ ಕಾಯಿದೆ ಬಗ್ಗೆ ಜನಾಭಿಪ್ರಾಯ
ರಾಜ್ಯ ಸರ್ಕಾರದ ಉದ್ದೇಶಿತ 'ಮೂಢನಂಬಿಕೆ ಪ್ರತಿಬಂಧಿತ ಕಾಯಿದೆ' ಬಗ್ಗೆ 'ಕನ್ನಡ ಪ್ರಭ' ಜನಾಭಿಪ್ರಾಯ ಕೇಳಿತ್ತು. ಅತಿ ತುರುಸಿನಲ್ಲಿ ಬಂದು ಅಪ್ಪಳಿಸಿರುವ ಇಲ್ಲಿನ ಪ್ರತಿಕ್ರಿಯೆಗಳಲ್ಲಿ ಸರ್ಕಾರದ ನಡೆಯ ಬಗ್ಗೆ ಆಕ್ರೋಶವೇ ಹೊಯ್ದಾಡಿದೆ.
ಆದ್ಯತೆಗಳೇ ಮುಸುಕಾದವೇ?
ಪ್ರತಾಪ್ ಸಿಂಹರವರು ಸಿದ್ದರಾಮಯ್ಯನವರ ಸರ್ಕಾರದ ಹುಂಬತನದ ನಿರ್ಧಾರಗಳನ್ನು ಸರಿಯಾಗಿಯೇ ಜಾಡಿಸಿದ್ದಾರೆ. ಸರ್ಕಾರ ತಪ್ಪು ಹಾದಿಯಲ್ಲಿ ನಡೆದಾಗ ಈ ರೀತಿಯ ಕಿವಿ ಹಿಂಡುವ ಕೆಲಸವನ್ನು ಮಾಧ್ಯಮಗಳು ಮಾಡಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳುತ್ತದೆ. ಜನರ ನಂಬಿಕೆ, ಮೂಢನಂಬಿಕೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸಲು ಯತ್ನಿಸುವ ಸರ್ಕಾರದ ನಿಲುವು ಖಂಡನೀಯವಷ್ಟೇ ಅಲ್ಲ. ಅನಪೇಕ್ಷಣೀಯ ಕೂಡಾ. ಈ ನಂಬಿಕೆ, ಆಚಾರ ವಿಚಾರಗಳು ಜನರ ಧಾರ್ಮಿಕ ಭಾವನೆಗಳೊಂದಿಗೆ ಮಿಳಿತವಾಗಿರುವಾಗ ಇದರಲ್ಲಿನ ಹಸ್ತಕ್ಷೇಪ ಬೇರೆಯ ಸಂದೇಶವನ್ನು ರವಾನಿಸುತ್ತದೆ. ಕಂದಾಚಾರ, ಮೂಢ, ಜೀವ ವಿರೋಧಿ ಆಚರಣೆಗಳನ್ನು ಎಲ್ಲರೂ ವಿರೋಧಿಸುತ್ತಾರಾದರೂ ಅವುಗಳ ಬಗ್ಗೆ ತಿಳಿ ಹೇಳಿ ಸರಿ ದಾರಿಗೆ ತರುವ ಕೆಲಸ ಸಮಾಜದ ಮಾರ್ಗದರ್ಶಕರಾಗಿರುವ ಗುರುಪೀಠಗಳು, ಶಿಕ್ಷಕರು, ವಿಚಾರವಂತರು, ಹಿರಿಯರು ಮಾಡಬೇಕಾದ ಕೆಲಸವೇ ವಿನಾ ಸರ್ಕಾರದ್ದಲ್ಲ. ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರಕ್ಕೆ ತನ್ನದೇ ಆದ ಪ್ರಾಶಸ್ತ್ಯದ, ಆದ್ಯತೆಯ ಕೆಲಸಗಳು ಬೇಕಾದಷ್ಟಿವೆ. ಅದನ್ನು ಬಿಟ್ಟು ನಿಮ್ಮನ್ನು ಸುತ್ತುವರಿದಿರುವ 'ವಿಚಾರವಾದಿ'ಗಳಿಂದ ನಡೆಯುವ ಇಂತಹ ದುಸ್ಸಾಹಸಗಳ ಅಪಾಯವನ್ನು ಅರಿತುಕೊಳ್ಳುವುದು ಲೇಸು. ತಮ್ಮಿಂದ ಸರ್ಕಾರಕ್ಕೆ ಪ್ರಗತಿಶೀಲ, ಪುರೋಗಾಮಿ, ವಿಚಾರವಂತ ಎಂಬ ಹಣೆಪಟ್ಟಿ ದೊರೆತು ನೀವೊಬ್ಬ ಅಭಿನವ ಕಾರ್ಲ್ಮಾರ್ಕ್ಸ್, ಚೆಗುವೆರ ಆಗುವಿರಿ ಎಂದೆಲ್ಲಾ ಮಾಸ್ಕೋ, ಬೀಜಿಂಗ್, ರೈಲು ಹತ್ತಿಸುವ ಈ ವಂದಿಮಾಗಧರಿಂದ ಅಂತರವನ್ನು ಕಾಯ್ದುಕೊಳ್ಳಿ. ಹಿಂದೆ ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲರ ಬಳಿಯೂ ಇಂತಹ ಶಕ್ತಿಗಳೇ ಸುಳಿದಾಡುತ್ತಿದ್ದವು ಎಂಬುದನ್ನು ಮರೆಯಬೇಡಿ. ಆದರೆ ಅವರು ಪಾದರಕ್ಷೆಗಳಂತೆ ಇಂತಹ ಬೌದ್ಧಿಕ ಪರೋಪಜೀವಿಗಳನ್ನು ಅಂತಃಪುರದ ಹೊರಗೆ ಇಟ್ಟು ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪಕ್ಕೆ ಎಡೆಮಾಡಿಕೊಟ್ಟಿರಲಿಲ್ಲ ಎಂಬುದನ್ನೂ ಮರೆಯದಿರಿ. ಇಂತಹ ಹುಂಬತನದ ಕ್ರಮಗಳು ಸರ್ಕಾರದ ಬಗೆಗಿನ ಜನರ ಅಸಹನೆ, ಅವಿಶ್ವಾಸಗಳನ್ನು ಹೆಚ್ಚಿಸುತ್ತವೆ ಎಂಬುದು ನಿಮಗೆ ತಿಳಿಯದ ವಿಷಯವೇನಲ್ಲ. ಈಗಾಗಲೇ ನಿಮ್ಮ ಸರ್ಕಾರದ 'ಹನಿಮೂನ್' ಅವಧಿ ಮುಗಿದಿದೆ. ಇಂತಹ ತಿಳಿಗೇಡಿ ಕ್ರಮಗಳಿಂದ ಬರುವ ಚುನಾವಣೆಯಲ್ಲಿ ಮುಗ್ಗರಿಸಿ ನೀವು ಹಳ್ಳಕ್ಕೆ ಬಿದ್ದಲ್ಲಿ ಆಳಿಗೊಂದರಂತೆ ಕಲ್ಲು ಹಾಕಲು ಕನಕಪುರದ, ರಾಮನಗರದ, ಬಂಡೆಗಳು ಸಜ್ಜಾಗಿವೆ ಎಂಬುದನ್ನು ಮರೆಯದಿರಿ.
- ಅ.ಸು.ರವೀಂದ್ರ, ಶಿವಮೊಗ್ಗ
ವಿಧೇಯಕ ಹಿಂದೂಧರ್ಮವನ್ನು ಗಟ್ಟಿ ಮಾಡುತ್ತದೆ
ಮಾಟ, ಮಂತ್ರ, ಜ್ಯೊತಿಷ್ಯ, ವಾಸ್ತು..... ಪಂಕ್ತಿಬೇಧ.... ಮಡೆ ಸ್ನಾನ....ಮೈಮೇಲೆ ದೇವರು ಬರೋದು... ಇತ್ಯಾದಿಗಳೆಲ್ಲ ಮೂಢ ನಂಬಿಕೆಗಳೆಂದೂ,ಇವುಗಳ ಬಗ್ಗೆ ಜನರಲ್ಲಿ ಭಯ ಭೀತಿ ಹುಟ್ಟಿಸಿ ಶೋಷಣೆ ಮಾಡುವವರ ವಿರುದ್ಧ ಹಾಗೂ ವ್ಯಾವಹಾರಿಕ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವುದನ್ನೆಲ್ಲ ನಿಷೇಧಿಸುವ ವಿಧೇಯಕವೊಂದನ್ನು ಸರ್ಕಾರ ತರಲಿದೆ. ಅಷ್ಟಾಗಿ ನಮ್ಮ ಹಿಂದೂಧರ್ಮ ಸಾಗುತ್ತಿರುವ ಹಾದಿ ಯಾವುದು? ಈಗಿನ ಯುವ ಜನತೆಯ ವಸ್ತ್ರ-ವಿನ್ಯಾಸಗಳ್ಯಾವುವೂ ಹೆಚ್ಚಿನದಾಗಿ ಸಾಂಪ್ರದಾಯಿಕವಲ್ಲ. ಮೈಬಿಗಿವ ಜೀನ್ಸ್ ಹಾಕಿಯೇ ಮಂದಿರ ಪ್ರವೇಶಿಸುತ್ತಾರಾದರೂ ನಾವದನ್ನು ಒಪ್ಪಿಕೊಂಡಿದ್ದೇವೆ. ಒಪ್ಪಿಕೊಳ್ಳದಿದ್ದರೆ, ಮಗಳು ಕಾಲೇಜಿಗೆ ಹೋಗುವುದೇ ಇಲ್ಲವೆನ್ನುತ್ತಾಳೆ. ಹೆಂಡತಿಯೋ, ಸೊಸೆಯೋ ಕೆಲಸಕ್ಕೆ ಹೋಗಲಾರಳು ಅಲ್ಲವೇ? ಇದೆಲ್ಲವೂ ಪಾಶ್ಚಾತ್ಯರ ಅನುಕರಣೆ. ಇಂಥ ಮುಂದುವರೆದ ಯುವಜನಾಂಗವನ್ನು ಬದಲಿಸಲು ಯಾವ ವಿಧೇಯಕದಿಂದಲೂ ಸಾಧ್ಯವಿಲ್ಲ. ಖೋಟಾ ಜ್ಯೋತಿಷಿಗಳು, ಮಾಟ ಮಂತ್ರ ತಂತ್ರಿಗಳು ಬೀದಿಗೊಬ್ಬರು ಹುಟ್ಟಿಕೊಳ್ಳುತ್ತಿದ್ದಾರೆ. ಉದ್ಯೋಗದಿಂದ ನಿವೃತ್ತರಾಗುತ್ತಿದ್ದಂತೆಯೇ ನಾಲ್ಕಾರು ಜಾತಕಫಲ, ಜೋತಿಷ್ಯ ಪುಸ್ತಕಗಳು, ಮಂತ್ರ ತಂತ್ರ ಪುಸ್ತಕಗಳಿಂದ ಕಲಿತು ಮುಗ್ಧ ಜನರನ್ನು ಮರಳು ಮಾಡಿ ವಂಚಿಸಿ, ಶೋಷಣೆ ಮಾಡುತ್ತಿರುವವರ ಪಡೆ ದೊಡ್ಡದಿದೆ. ದಿನ ಬೆಳಗಾದರೆ ದೃಶ್ಯ ಮಾಧ್ಯಮ ಜಾಹೀರಾತುಗಳಲ್ಲಿ ಜ್ಯೋತಿಷಿಗಳು, ವಾಸ್ತು ತಜ್ಞರು ಇಂಥವರೇ ತುಂಬಿರುತ್ತಾರೆ. ಇವಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರ ಒಂದು ಒಳ್ಳೆಯ ಉದ್ದೇಶದಿಂದ ಮಾಡಲಿರುವ ವಿಧೇಯಕವೊಂದು, ಹಿಂದೂ ಧರ್ಮ ಮತ್ತು ನಂಬಿಕೆಗಳನ್ನು ಗಟ್ಟಿ ಮಾಡಬಲ್ಲುದಲ್ಲದೇ ಒಡೆಯಲು ಸಾಧ್ಯವೇ?
- ಎಚ್.ಶಿವರಾಂ, ಬೆಂಗಳೂರು.
ಪೂರ್ವಾಗ್ರಹದಿಂದ ಅಪಾಯ
ಮನುಷ್ಯನ ಮನಸ್ಸು ಬಹಳ ಸೂಕ್ಸ್ಮ ಹಾಗೂ ಸಂವೇದನಾ ಶೀಲ. ಹೀಗಿರುವಾಗ ನಮಗೆ ಬರುವ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಮನಸ್ಸೇ ಮೂಲ. ಆದ್ದರಿಂದ ಇಂತಹ ಮನಸ್ಸನ್ನು ಕಲಕುವಂತಹ ಹಿಂಸಾತ್ಮಕವಾದ,ಅಸಹ್ಯವಾದ ಆಚರಣೆಗಳಿದ್ದರೆ ಅದಕ್ಕೆ ನಿರ್ಬಂಧ ಸೂಕ್ತವೇ ಆಗಿರುತ್ತದೆ. ಅದೇರೀತಿ, ಮನಸ್ಸನ್ನು ಪರಿಸುದ್ಧವಾಗಿಟ್ಟುಕೊಂಡರೆ ನಮ್ಮ ಸಮಾಜದಲ್ಲಿ ಉಂಟಾಗುವ ಕೆಲವೊಂದು ಸಮಸ್ಯೆಗಳು ತನ್ನಿಂದ ತಾನಾಗಿಯೇ ಪರಿಹಾರವಾಗುವುದರೊಂದಿಗೆ ಕೋರ್ಟ್-ಆಸ್ಪತ್ರೆಗಳಲ್ಲಿನ ಒತ್ತಡ ಕಡಿಮೆಯಾಗುವುದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ನಮ್ಮ ಭಾರತೀಯ ಧರ್ಮ-ಸಂಸ್ಕೃತಿ-ಕಲೆಗಳ ಮೂಲಕ ಕೆಲವೊಂದು ಚಿಕಿತ್ಸಾ ಪದ್ಧತಿಗಳಿದ್ದು, ಅದನ್ನು ಕಾರ್ಯಗತಗೊಳಿಸುವುದರಿಂದ ಸಮಾಜದ ಮೇಲೆ ದುಷ್ಪರಿಣಾಮಗಳು ಬೀರುವುದಿಲ್ಲ ಹಾಗೇ ಇಂದಿನ ಅತ್ಯಾಧುನಿಕ ವೈದ್ಯ ಪದ್ಧತಿಯಲ್ಲೂ ಪರಿಹಾರ ಸಿಗದ ಅದೆಷ್ಟೋ ಕಾಯಿಲೆಗಳು ನೇರವಾಗಿ ಮನಸ್ಸಿಗೇ ಸಂಬಂಧಪಟ್ಟಂತೆ ಇರುವುದರಿಂದ ಈ ರೀತಿಯ ಮಂತ್ರ-ತಂತ್ರಗಳ ಪ್ರಯೋಗಗಳಿಂದ ಪರಿಹಾರ ಸಿಕ್ಕಿರುವುದಕ್ಕೆ ತುಂಬಾ ನಿದರ್ಶನಗಳಿವೆ. ಹೀಗಿರುವಾಗ ಮೌಢ್ಯ ನಿಷೇಧ ಕಾನೂನನ್ನು ಜಾರಿಗೊಳಿಸುವಾಗ ಸಾರಾಸಗಟಾಗಿ ಎಲ್ಲವನ್ನೂ ಪೂರ್ವಾಗ್ರಹ ಭಾವನೆಗಳಿಂದ ನಿರ್ಬಂಧಿಸುವುದು ಪರೋಕ್ಷವಾಗಿ ಸಮಾಜದಲ್ಲಿ ಹುಚ್ಚರ ಸಂಖ್ಯೆ ಅರ್ಥಾತ್ ಮಾನಸಿಕ ಕ್ಷೋಭೆಗೆ ಒಳಗಾಗುವವರ ಹೆಚ್ಚಳಕ್ಕೆ ಇಂಬು ಕೊಟ್ಟಂತೆ. ಆದ್ದರಿಂದ ಅವಸರದಲ್ಲೋ, ಯಾವುದೋ ಪೂರ್ವಾಗ್ರಹಕ್ಕೆ ಒಳಪಟ್ಟೋ ಸರ್ಕಾರ ಈ ಕಾನೂನನ್ನು ಜಾರಿಗೆ ತಂದರೆ ಗುಣಕ್ಕಿಂತ ಅವಗುಣ ಜಾಸ್ತಿಯೆಂಬುದರಲ್ಲಿ ಸಂದೇಹವಿಲ್ಲ.
- ಶಂಭು ಶರ್ಮಾ
ರಾಮಾಯಣ ಓದೋದೂ ಮೌಢ್ಯ ಎಂದಾರು!
ದೇವಸ್ಥಾನಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುವ ಹಕ್ಕನ್ನು ಈ ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದು ನೇರವಾಗಿ ಹಿಂದುಗಳ ಮೇಲೆ ಮಾಡುತ್ತಿರುವ ಒಂದು ರೀತಿಯ ದಬ್ಬಾಳಿಕೆ. ಇದು ಆಂಗ್ಲರ ರೀತಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದು ಧರ್ಮವು ಒಂದು ನಂಬಿಕೆಯ ನೆಲೆಗಟ್ಟಿನಲ್ಲಿ ನಿಂತಿದೆ. ಇನ್ನು ಮುಂದೆ ಹಿಂದುಗಳು ಮಹಾಭಾರತ, ರಾಮಾಯಣವನ್ನು ಓದುವುದು ಮೂಢನಂಬಿಕೆಯಾಗಬಹುದು!
-ಶ್ರೀಧರ ಬಿ.ಆರ್, ಮಾಜಿ ಸೈನಿಕ, ಕೋಲಾರ
ಯಾವುದು ಮೂಢನಂಬಿಕೆ?
ನಂಬಿಕೆ- ಮೂಢನಂಬಿಕೆ ಮಧ್ಯೆ ಅಂತರ ತೀರಾ ತೆಳುವಾದದ್ದು. ಯಾವ ಮಾನದಂಡದಿಂದ ಮೂಢನಂಬಿಕೆ ಗುರುತಿಸುತ್ತಾರೆ? ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆ ಅನಿಸಬಹುದು. ಕಾಯ್ದೆ ನೆಪದಲ್ಲಿ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಿರಲಿ. ಕಾಯ್ದೆ ಜಾರಿಗೂ ಮೊದಲು ಎಲ್ಲಾ ಧರ್ಮದ ಮುಖಂಡರ ಅಭಿಪ್ರಾಯ ಆಲಿಸಲಿ.
-ಸಿದ್ದೇಶ ಮ ಹೊಟ್ಟಿ, ಶಹಾಪೂರ
ಸೋಗಲಾಡಿ ಬುದ್ಧಿಜೀವಿಗಳನ್ನು ದೂರ ತಳ್ಳಿ
ಕರ್ನಾಟಕ ಸರ್ಕಾರದ ಉದ್ದೇಶಿತ ಮೂಢನಂಬಿಕೆ ನಿಷೇಧ ಕಾಯ್ದೆಯು ಮೂಢರ, ಗಾಂಪರ ಒಂದು ಸಂಚು. "ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಯಾಕೆ?". ತಲೆತಲಾಂತರದಿಂದ ಬಂದ ನಂಬಿಕೆಗಳನ್ನು ಈಗ ದಿಢೀರ್ ಕಾಯ್ದೆಯ ಮೂಲಕ ಬದಲಿಸಲು ಹೊರಟ ಸರ್ಕಾರಕ್ಕೆ ಜನಹಿತ, ಸಮಾಜಹಿತ ಕೆಲಸಗಳು ಮರೆತು ಹೋಗಿದೆಯೇ? ಅಲ್ಲ, ಈ ಸಮಿತಿಗೆ ನಂಬಿಕೆಯಾವುದು, ಮೂಢನಂಬಿಕೆಯಾವುದು ಎನ್ನುವುದೂ ತಿಳಿಯದೇ? ಮತದಾರರು ಈ ಸರ್ಕಾರವನ್ನು ಒಳ್ಳೆಯ ಜನಪರ ಕಾರ್ಯಗಳನ್ನು ಮಾಡಲೆಂದು ಆರಿಸಿ ಕಳುಹಿಸಿದ್ದು. "ನಾನೊಬ್ಬ ಕ್ರಾಂತಿವೀರ" ಎಂಬ ಭ್ರಮೆಯಿಂದ ಸಿದ್ಧರಾಮಯ್ಯನವರು ಹೊರಬಂದು, ಸೋಗಲಾಡಿ ವಿಚಾರವಂತರನ್ನು ದೂರತಳ್ಳಬೇಕಿದೆ. ಮುಖ್ಯಮಂತ್ರಿಗಳಿಗೆ ಇತರ ಧರ್ಮಗಳಲ್ಲಿನ ಮೂಢನಂಬಿಕೆಗಳು ಕಾಣಿಸುವುದಿಲ್ಲವೆ? ನಿಜವಾದ ಕಳಕಳಿ ಇದ್ದಲ್ಲಿ ಎಲ್ಲ ಧರ್ಮಗಳಲ್ಲಿನ ಮೌಢ್ಯತೆಯನ್ನು ಕಿತ್ತೊಗೆಯಲು ಕಾಯ್ದೆಯನ್ನು ತರಲಿ.
-ಕೆ.ವಿ.ಸೀತಾರಾಮ್ ಬಿಜೈ, ಮಂಗಳೂರು
ವೈಯಕ್ತಿಕ ಸ್ವಾತಂತ್ರ್ಯದ ಹರಣ
ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂಢನಂಬಿಕೆ ವಿರೋಧಿ ಕಾನೂನು ಭಾರತೀಯರ ನಂಬಿಕೆಗಳಿಗೆ ಕೊಡಲಿ ಏಟಿನಂತಿದೆ. ಗಣಿತಾಧಾರಿತವಾದ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ, ವಾಸ್ತುಶಾಸ್ತ್ರಗಳನ್ನು ಮೂಢನಂಬಿಕೆಯ ಪಟ್ಟಿಗೆ ಸೇರಿಸಿರುವವರ ಬುದ್ಧಿಚಾತುರ್ಯಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ವೈಯಕ್ತಿಕವಾದ ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವಗಳೇ ಮೊದಲಾದ ಆಚರಣೆಗಳ ನಿಷೇಧ ವೈಯಕ್ತಿಕ ಸ್ವಾತಂತ್ರ್ಯವನ್ನೇ ಅಪಹರಿಸಿದಂತೆ. ಸಾವಿರಾರು ವರ್ಷಗಳಿಂದ ಜಗತ್ತು ನಮ್ಮನ್ನು ಗುರುತಿಸಿ, ಗೌರವಿಸಿಕೊಂಡು ಬಂದಿರುವುದಕ್ಕೆ ನಮ್ಮ ಸಂಸ್ಕೃತಿ ನಂಬಿಕೆಗಳೇ ಕಾರಣ.
- ಸುಮುಖ.ಎಸ್., ಉಡುಪಿ
ಭಯ-ಭಕ್ತಿ ಇರಲಿ
ಮೌಢ್ಯ ಅಭಿವೃದ್ಧಿಗೆ ಮಾರಕ. ಆದರೆ ಜನರ ನಂಬಿಕೆಗಳೂ ಪೂರಕ. ಇವುಗಳಲ್ಲಿ ವೈಜ್ಞಾನಿಕ ಅಂಶಗಳಿವೆ. ಇವು ನಮಗೆ ತಿಳಿದಿಲ್ಲ. ಇವುಗಳು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ಭಯ, ಭಕ್ತಿಗಳನ್ನು ಬೆಳೆಸುತ್ತದೆ. ಆದರೆ ನಮ್ಮ ಗುರಿಗೆ ಅಡ್ಡ ಬರುವ ಮೌಢ್ಯಗಳು ಬೇಡ.
-ಪೂರ್ಣಿಮಾ ಎಚ್.
ಇತರೆ ಧರ್ಮ ಪ್ರಶ್ನಿಸಲಾರಿರಾ?
ಸಾವಿರಾರು ವರ್ಷಗಳ, ಆಧಾರ ಸಹಿತ, ಪರಮ ಪವಿತ್ರ ಸನಾತನ ಹಿಂದೂಧರ್ಮದ ಮೂಲ ನಂಬಿಕೆಗಳನ್ನು ಬುಡ ಸಹಿತ ಕಿತ್ತೊಗೆಯುವ ಹುನ್ನಾರವು ಬಹು ಸಂಖ್ಯಾತ ಹಿಂದೂಗಳ ಮೇಲೆ ಪಾಪಿ ಹಿಂದುಗಳಿಂದಲೇ ನಡೆಯುತ್ತಿದೆ. ಇಂತಹ ಕೃತ್ಯಕ್ಕೆ ಮುಂದಾಗುತ್ತಿರುವ ಸರ್ಕಾರದ ವಿರುದ್ಧವಾಗಿ ಎಲ್ಲ ಹಿಂದೂಗಳು ಒಟ್ಟಾಗಿ ನಿಂತು ಗರ್ಜಿಸಲೆಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಪಸಂಖ್ಯಾತರ ಮೇಲೆ ಈ ವಿಧೇಯಕ ಏಕೆ ಜಾರಿಗೊಳ್ಳುವುದಿಲ್ಲ?
-ಲಕ್ಷ್ಮೀನಾರಾಯಣ, ಸಕಲೇಶಪುರ
ಮೌಢ್ಯದ ವ್ಯಾಖ್ಯಾನವೇನು?
ಹಿಂದುಗಳ ನಂಬಿಕೆ ಮೌಢ್ಯವಾಗಿದ್ದರೆ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಿ. ಮಂದಿರ ಮಸೀದಿ ಚರ್ಚ್ಗಳನ್ನು ಮುಚ್ಚಲಿ. ಕಲ್ಯಾಣ ಮಂಟಪಗಳನ್ನು ಮುಚ್ಚಲಿ. ಶಾದಿ ಭಾಗ್ಯವನ್ನು ಹಿಂಪಡೆಯಲಿ.
-ಹರ್ಷ ಡಿ. ಜಿ.
ನಾವೇ ಮೂಢರು
ರಾಜಕಾರಣಿಗಳೇ, ನೀವು ನಮ್ಮ ಹಿತಾಸಕ್ತಿ ಕಾಪಾಡುತ್ತೀರೆಂದು ನಂಬಿ ನಿಮಗೆ ಓಟು ನೀಡುತ್ತೇವಲ್ಲಾ, ಅದೇ ನಮ್ಮ ಮೂಢನಂಬಿಕೆ! ನಾವು ಮೂಢರು ಸಾರ್ ಮೂಢರು
-ಪಿ.ಜೆ.ರಾಘವೇಂದ್ರ, ಮೈಸೂರು
ಧರ್ಮಗ್ರಂಥಗಳ ಬಗ್ಗೆ ನಿಮಗೇನು ಗೊತ್ತು?
ಮಾನ್ಯ ಮುಖ್ಯಮಂತ್ರಿಗಳೇ.. ಪ್ರಜೆಗಳನ್ನೇನು ಮೂರ್ಖರು ಅಂತ ನಿರ್ಧರಿಸಿ ಬಿಟ್ಟಿದ್ದೀರಾ? ಯಾವುದೋ ಜನಾಂಗದ ಓಟಿಗಾಗಿ ಮತ್ತೊಂದು ಜನಾಂಗದ ನಂಬಿಕೆಗಳನ್ನು ಮೂಢ ಎನ್ನುವ, ವಿಧೇಯಕಗಳನ್ನು ತರುವ ನಿಮ್ಮ ಈ ಭಂಡ ಧೈರ್ಯಕ್ಕೆ ಏನನ್ನಬೇಕು? ಸನಾತನ ಧರ್ಮದ ಆಚರಣೆಗಳು ಈಗ ಹುಟ್ಟಿಕೊಂಡಿದ್ದು ಅಲ್ಲ ಸ್ವಾಮಿ ಅನಾದಿಕಾಲದಿಂದಲೂ ಇದೆ. ಅದರ ಬಗ್ಗೆ ಮಾತನಾಡೋಕೆ ನೀವು ಎಷ್ಟು ಧರ್ಮಗ್ರಂಥಗಳನ್ನು ಓದಿದ್ದೀರಿ? ವೇದ, ಉಪನಿಷತ್ಗಳನ್ನು ಅಧ್ಯಯನ ಮಾಡಿದ್ದೀರಿ? ನಮ್ಮ ರಾಜ್ಯದಲ್ಲಿ ಉಳಿದ ಸಮಸ್ಯೆಗಳೇ ಹಾಸಿ ಹೊದೆಯುವಷ್ಟಿವೆ. ದಯವಿಟ್ಟು ಅವುಗಳ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಮುಂದಿನ ಚುನಾವಣೆಗೆ ಈಗಿನಿಂದಲೇ ಇಂತಹ ಸಿದ್ಧತೆಗಳು ಬೇಡ.
- ಮೇದಿನಿ, ಸಾಗರ