ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜಾದೂಗಾರಿಕೆ ಹೇಗೆ ಮೌಢ್ಯ?

Mainashree
Updated On : 9 Nov 2013, 12:38 pm

ರಾಜ್ಯ ಸರ್ಕಾರದ 'ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ'ಯ ಕರಡಿನಲ್ಲಿ ಪ್ರಸ್ತಾವಿತವಾಗಿರುವ ಅಂಶಗಳ ಕುರಿತು ಚರ್ಚೆಗೆ 'ಕನ್ನಡಪ್ರಭ' ನೀಡಿದ್ದ ಕರೆಗೆ ಪ್ರತಿಕ್ರಿಯೆಗಳ ಪ್ರವಾಹ ಹರಿದುಬರುತ್ತಲೇ ಇದೆ. ಇದು ಮೂಢನಂಬಿಕೆ ಎಂದು ನಿರ್ಧರಿಸುವ ಮಾನದಂಡ ಯಾವುದು, ಹಾಗೆಂದು ನಿರ್ಧರಿಸುತ್ತಿರುವವರು ಯಾರು ಎಂಬೆಲ್ಲ ಪ್ರಶ್ನೆಗಳನ್ನು ಎತ್ತಿರುವ ಕಿರುಲೇಖನ ಹಾಗೂ ಪತ್ರಗಳ ಎರಡನೇ ಕಂತು ಇಲ್ಲಿದೆ.

ವಿಜ್ಞಾನ ಮತ್ತು ಧರ್ಮಗಳೆರಡರ ಗುರಿ ಒಂದೇ. ಅದು ಸತ್ಯಾನ್ವೇಷಣೆ. ಇವುಗಳ ನೆಲೆಗಟ್ಟು ಸಹ ಒಂದೇ-ನಂಬಿಕೆ. ವಿಜ್ಞಾನಕ್ಕೆ ಆಧಾರವಾದ ನಂಬಿಕೆಗಳು ಎರಡು. 1. ಸತ್ಯಾನ್ವೇಷಣೆ ಸಾಧ್ಯ ಮತ್ತು 2. ಪ್ರಪಂಚದ ಯಾವುದೇ ಚಟುವಟಿಕೆಗೆ ದೇವರು ಕಾರಣನಲ್ಲ. ಧರ್ಮಕ್ಕೆ ಆಧಾರವಾದ ನಂಬಿಕೆಗಳು ಸಹ ಎರಡು. 1. ಸತ್ಯಾನ್ವೇಷಣೆ ಸಾಧ್ಯ ಮತ್ತು 2. ಪ್ರಪಂಚದ ಎಲ್ಲ ಚಟುವಟಿಕೆಗಳಿಗೆ ದೇವರೇ ಮೂಲ ಕಾರಣ.
ಯಾವುದಾದರೂ ಒಂದು ವಿಚಾರ ಅಥವಾ ಪದಾರ್ಥವನ್ನು ಅದು ನಿಜವಾಗಿ ಇರುವ ರೀತಿಯಲ್ಲೇ ತಿಳಿಯುವುದು ಸತ್ಯ. (ಯಥಾರ್ಥ ಜ್ಞಾನ). ಅದು ಹೀಗಿರಬಹುದು, ಹಾಗಿರಬಹುದು ಎಂದು ತಿಳಿಯುವುದೇ ನಂಬಿಕೆ. ಯಾವುದಾದರೂ ವಿಚಾರದಲ್ಲಿ ಎಲ್ಲರ ನಂಬಿಕೆಯೂ ಒಂದೇ ರೀತಿ ಇರಬೇಕಾದುದಿಲ್ಲ. ಕೆಲವೇ ಮಂದಿಯ ನಂಬಿಕೆಯನ್ನು ಸಮಾಜದ ಬಹುಪಾಲು ಜನ ಒಪ್ಪದಿದ್ದಾಗ ಕೆಲವು ಜನರ ನಂಬಿಕೆ ಬಹುಪಾಲು ಜನರ ದೃಷ್ಟಿಯಲ್ಲಿ ಮೂಢ ನಂಬಿಕೆಯಾಗುತ್ತದೆ.
ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ ಎನ್ನುವುದು ಒಂದು ಕಾಲದ ಸತ್ಯ. ಇದು ಇಂದು ಮೂಢನಂಬಿಕೆ. ಇದೇ ರೀತಿ ಇಂದಿನ ಅನೇಕ ಸತ್ಯಗಳು ಮುಂದೆ ಸುಳ್ಳು ಎಂದು ಸಾಬೀತಾಗಬಹುದು. ಅಂದರೆ ನಮ್ಮ ಎಲ್ಲ ಸತ್ಯಗಳನ್ನು ತಾತ್ಕಾಲಿಕ ಸತ್ಯಗಳೆಂದೇ ಭಾವಿಸಬಹುದು.  ಮೂಢ ನಂಬಿಕೆಗಳಿಂದ ಮಾತ್ರ ತೊಂದರೆ ವೈಜ್ಞಾನಿಕ ಸತ್ಯಗಳಿಂದ ತೊಂದರೆಯಿಲ್ಲ ಎನ್ನುವುದು ಒಂದು ಭ್ರಮೆ. ವೈಜ್ಞಾನಿಕ ವಿಧಾನಗಳಿಂದಲೇ ತಯಾರಿಸಿದ ಅನೇಕ ಔಷಧಗಳು ಪಿಡುಗಾಗಿ ಪರಿಣಮಿಸಿದೆ.
ನಮ್ಮ ಸಾಮಾಜಿಕ ಜೀವನದಲ್ಲಿ ಅನೇಕ ನಂಬಿಕೆಗಳು ಹಾಸುಹೊಕ್ಕಾಗಿರುತ್ತವೆ. ಕಾಲಕ್ರಮೇಣ ಕೆಲವು ನಂಬಿಕೆಗಳು ಮಾಯವಾಗುತ್ತವೆ ಮತ್ತು ಕೆಲವು ಹೊಸ ನಂಬಿಕೆಗಳು ಸೇರುತ್ತವೆ. ನಂಬಿಕೆಗಳ ಆಧಾರದಿಂದ ರೂಢಿಯಲ್ಲಿ ಬಂದಿರುವ ಕೆಲವು ಆಚರಣೆಗಳು ಇದರಲ್ಲಿ ಭಾಗಿಯಾದವರ ದೈಹಿಕ, ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ ನಷ್ಟವನ್ನುಂಟು ಮಾಡಿದರೆ ಅದು ಶೋಷಣೆ ಎಂದೆನಿಸಿಕೊಳ್ಳುತ್ತದೆ. ಆದರೆ ಅದು ಶೋಷಣೆ ಎಂದು ನಿರ್ಧಾರ ಮಾಡುವವರು ಯಾರು?
ಧರ್ಮದ ಹೆಸರಿನಲ್ಲಿ ಬೆತ್ತಲೆ ಸೇವೆ ನಡೆದರೆ ಅದು ಶೋಷಣೆ. ಆಧುನಿಕತೆಯ ಹೆಸರಿನಲ್ಲಿ ರಂಗದ ಮೇಲೆ ಬೆತ್ತಲೆ ಪ್ರದರ್ಶನ ಮಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಇಂಥ ಚಿಂತನೆ ವೈಚಾರಿಕವೇ? ಎಲ್ಲವನ್ನೂ ಸಮಚಿತ್ತದಿಂದ ನೋಡಿದಾಗ ಮಾತ್ರ ಅದಕ್ಕೆ ಬೆಲೆ ಮತ್ತು ಗೌರವ. ಶತಶತಮಾನಗಳಿಂದ ಜನರಲ್ಲಿ ಹರಿದು ಬಂದಿರುವ ನಂಬಿಕೆಗಳಿಗೆ ಘಾಸಿ ತರುವುದು ಸರ್ಕಾರದ ಕೆಲಸವಲ್ಲ. ಯಾವುದೇ ನಂಬಿಕೆ ಬದಲಾಗಬೇಕೆಂಬ ಒತ್ತಡ ಸಮಾಜದಿಂದಲೇ ಬರಬೇಕು. ಆಗ ಸರ್ಕಾರ ಅದಕ್ಕೆ ಸ್ಪಂದಿಸಿ ಪೂರಕವಾಗಿ ಕಾನೂನು ಮಾಡುವುದು ವಿಹಿತವಾದ ಮಾರ್ಗ. ಇದು ಬಿಟ್ಟು ಆಡಳಿತ ನಡೆಸುವವರ ಮರ್ಜಿಗೆ ಅನುಸಾರ ಕಾನೂನು ಮಾಡಿ ಒಲ್ಲದ ಜನರ ಮೇಲೆ ಹೇರುವುದು ದಬ್ಬಾಳಿಕೆ. ಆದರೆ ನಮ್ಮ ಸರ್ಕಾರ ಹಠಮಾರಿತನಕ್ಕೆ ಬಿದ್ದು ಜನರ ನಂಬಿಕೆಗಳಿಗೆ ಪೆಟ್ಟು ಕೊಡುವ ಕಾರ್ಯಕ್ಕೆ ಮುಂದಾಗಿದೆ. ಈ ಬಗ್ಗೆ ವರದಿ ಕೊಡಲು ಒಂದು ಸಮಿತಿಯನ್ನು ರಚಿಸಿದೆ. ಸರ್ಕಾರಕ್ಕೆ ಬೇಕಾಗಿರುವುದು ನಿಷ್ಪಕ್ಷಪಾತವಾದ ವರದಿಯಲ್ಲ. ತಾನು ಮಾಡಬೇಕೆಂದು ಆಗಲೇ ನಿರ್ಧರಿಸಿರುವುದಕ್ಕೆ ಪೂರಕವಾಗಿರುವ ವರದಿ. ವರದಿ ತಯಾರಿಸಲು ನೇಮಕವಾಗಿರುವ ಸಮಿತಿಯ ಸದಸ್ಯರನ್ನು ನೋಡಿದರೆ ಇದು ಗೊತ್ತಾಗುತ್ತದೆ. ಇವರೆಲ್ಲ ಒಂದೇ ಬಗೆಯ ಚಿಂತನೆ ಉಳ್ಳವರು. ಹಿಂದೂ ವಿರೋಧಿ ಧೋರಣೆ ಮೈಗೂಡಿಸಿಕೊಂಡವರು. ಈ ಸಮಿತಿಯಲ್ಲಿ ವಿಭಿನ್ನ ಚಿಂತನೆಯ ವಿದ್ವಾಂಸರಿಗೆ ಪ್ರಾತಿನಿಧ್ಯವೇ ಇಲ್ಲ. ಹೀಗಿರುವಾಗ ಈ ಸಮಿತಿ ಸರ್ಕಾರಕ್ಕೆ ನೀಡುವ ವರದಿ ಹೇಗೆ ನಿಷ್ಪಕ್ಷಪಾತವಾಗಿರುತ್ತದೆ?
 ಈ ಕಾನೂನುಗಳನ್ನು ಮಾಡುತ್ತಿರುವುದು ಜನರ ಹಿತಕ್ಕಾಗಿ ಎಂದು ಸರ್ಕಾರ ಹೇಳುತ್ತದೆ. ಆದರೆ ಇದರಲ್ಲಿ ನಿಜವಾಗಿ ಜನರ ಹಿತದ ಚಿಂತನೆ ಅಡಗಿದೆಯೇ? ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸರ್ಕಾರಕ್ಕೆ ಗೊತ್ತಿಲ್ಲವೇ? ಇವು ಆರೋಗ್ಯಕ್ಕೆ ಹಾನಿಕರ ಎಂದು ಸರ್ಕಾರವೇ ಪ್ರಚಾರ ಮಾಡುತ್ತಿದೆಯಲ್ಲ? ಹಾಗಾದರೆ ಜನರ ಹಿತದೃಷ್ಟಿಯಿಂದ ಇವುಗಳ ಮೇಲೆ ನಿಷೇಧ ಏಕೆ ಹೇರಿಲ್ಲ? ಭಾರಿ ಮೊತ್ತದ ಆದಾಯದ ಮುಂದೆ ಜನರ ಹಿತ ಗೌಣ ಎನ್ನುವುದು ಸರ್ಕಾರದ ಲೆಕ್ಕಾಚಾರವೇ? ಇದೇ ಲೆಕ್ಕದಲ್ಲಿ ಈಗ ನಿಷೇಧಿಸಬೇಕೆಂದಿರುವ ಆಚರಣೆಗಳನ್ನೂ, "ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರ" ಎಂದು ಸಾರುವ ಫಲಕ ಪ್ರದರ್ಶಿಸಿ ಮುಂದುವರೆಸಲು ಅವಕಾಶ ಕೊಡಬಹುದಲ್ಲ? ಈಗ ಸರ್ಕಾರ ನಿಷೇಧ ಮಾಡಬೇಕೆಂದಿರುವ ಯಾವುದಾದರೂ ಆಚರಣೆಯಿಂದ ಸಾವಿರಾರು ಕೋಟಿ ರುಪಾಯಿಗಳ ವರಮಾನವಿದ್ದಿದ್ದರೆ ಸರ್ಕಾರ ನಿಷೇಧಕ್ಕೆ ಮುಂದಾಗುತ್ತಿತ್ತೆ?
ಒಂದು ವರ್ಗದ ಮಹಿಳೆಯರು ಎದೆಭಾಗವನ್ನು ಮುಚ್ಚಬಾರದು ಎಂಬುದು ಶೋಷಣೆ. ಆದರೆ ಮುಖವನ್ನೆಲ್ಲ ಮುಚ್ಚಿಕೊಂಡು ಓಡಾಡಬೇಕು ಎಂಬುದು ಶೋಷಣೆಯಲ್ಲವೇ? ಸಾಮೂಹಿಕ ಪ್ರಾರ್ಥನೆ ನಡೆಯುವ ಕಡೆ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವುದು ಶೋಷಣೆಯಲ್ಲವೇ? ವರದಿಯನ್ನು ತಯಾರಿಸಿದ ಸಮಿತಿಯ ಸದಸ್ಯರಿಗೆ ಇಡೀ ಸಮಾಜವನ್ನು ಒಂದೇ ರೀತಿ ನೋಡುವ ನಿಷ್ಪಕ್ಷಪಾತ ಬುದ್ಧಿಯೇ ಇಲ್ಲವೇ? ಇಂಥ ಸಮಿತಿಯ ವರದಿಯನ್ನು ಆಧರಿಸಿ ಕಾನೂನು ರಚಿಸಲು ಹೊರಟಿರುವ ಸರ್ಕಾರದ ಮನೋಭಾವ ಏನು ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲವೇ?
ನಿರ್ದಿಷ್ಟ ಧರ್ಮದ ಜನರನ್ನು ಗುರಿಯಾಗಿರಿಸಿಕೊಂಡು ಕಾನೂನುಗಳನ್ನು ಮಾಡುವ ಹುನ್ನಾರಕ್ಕೆ ದಯವಿಟ್ಟು ಕೈ ಹಾಕಬಾರದು. ಇಂಥ ಕೆಲಸಗಳಿಂದ ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ಬೇಡ. ಇಂಥ ನಡೆ ಸದ್ಯಕ್ಕೆ ರಾಜಕೀಯವಾಗಿ ಲಾಭ ಎಂದೆನಿಸಬಹುದು. ಆದರೆ ಇಂಥ ನಡೆಗಳು ಮುಂದೆ ಸಮಾಜವನ್ನು ಒಡೆಯುವುದಕ್ಕೆ ಪ್ರೇರಕವಾಗುತ್ತದೆ. ಸರ್ಕಾರಕ್ಕೆ ಈಗಲಾದರೂ ಸದ್ಬುದ್ಧಿ ಬರಲಿ.

- ಕ.ರಾ. ಮೋಹನ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement