ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದೇವರ ಕೋಣೆಗೆ ಬೇಡ ಕಾನೂನು

Mainashree
Updated On : 9 Nov 2013, 12:40 pm

- ರಾಜ್ಯ ಸರ್ಕಾರದ 'ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ'ಯ ಕರಡಿನಲ್ಲಿ ಪ್ರಸ್ತಾವಿತವಾಗಿರುವ ಅಂಶಗಳ ಕುರಿತು ಚರ್ಚೆಗೆ 'ಕನ್ನಡಪ್ರಭ' ನೀಡಿದ್ದ ಕರೆಗೆ ಪ್ರತಿಕ್ರಿಯೆಗಳ ಪ್ರವಾಹ ಹರಿದುಬರುತ್ತಲೇ ಇದೆ. ಇದು ಮೂಢನಂಬಿಕೆ ಎಂದು ನಿರ್ಧರಿಸುವ ಮಾನದಂಡ ಯಾವುದು, ಹಾಗೆಂದು ನಿರ್ಧರಿಸುತ್ತಿರುವವರು ಯಾರು ಎಂಬೆಲ್ಲ ಪ್ರಶ್ನೆಗಳನ್ನು ಎತ್ತಿರುವ ಕಿರುಲೇಖನ ಹಾಗೂ ಪತ್ರಗಳ ಎರಡನೇ ಕಂತು ಇಲ್ಲಿದೆ.

ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಯಾವುದೇ ಕಾನೂನನ್ನು ನಾವು ನಡುಮನೆಗೆ ಬಿಟ್ಟುಕೊಳ್ಳುತ್ತೇವೆಯೇ ಹೊರತು, ದೇವರಕೋಣೆಗಲ್ಲ. ನಮ್ಮ ನಂಬಿಕೆಗಳ ಮೇಲೆ ನಿಮಗೇಕೆ ಸಿಟ್ಟು ಸ್ವಾಮಿ. ನಮ್ಮ ದೇವರು, ನಮ್ಮ ಪೂಜೆ, ಇದರಿಂದ ನಿಮಗೇನು ಕಷ್ಟ ಅಲ್ಲವೇ? ನೀವು ಮೂಢನಂಬಿಕೆಗಳ ನಿಯಂತ್ರಣಕ್ಕೆ ಮುಂದಾಗಿರುವುದು ಸರಿಯೇ. ಆದರೆ ಇದೇ ಆಧಾರವಾಗಿಟ್ಟುಕೊಂಡು ಇಡೀ ನಮ್ಮ ಪೂಜೆ ಪುನಸ್ಕಾರಗಳ ಮೇಲೆಯೇ ಸವಾರಿ ಮಾಡಲು ಹೊರಟಿದ್ದೀರಲ್ಲಾ, ಇದು ಸರಿಯೇ. ದೇವರು ಮತ್ತು ಮನಃಶಾಂತಿ, ಈ ಎರಡಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ ಗೊತ್ತಿದೆಯೋ, ಇಲ್ಲವೋ ಕಾಣೆ. ಆದರೆ ದೇವರಿದ್ದಾನೆ ಅಥವಾ ಇಲ್ಲ ಎಂಬ ವಿಚಾರಗಳ ಸಂಬಂಧ ಜನರಲ್ಲೇ ಗೊಂದಲವಿದೆ. ಆದರೂ ಅವರು ದೇವರನ್ನು ಪೂಜಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣ, ಅವರ ಮೌಢ್ಯವಲ್ಲ. ಅದು ಅವರ ನಂಬಿಕೆ. ಇಂದಿನ ಒತ್ತಡದ ಜೀವನದಲ್ಲಿ ಮನಃಶಾಂತಿ ಬೇಕೇಬೇಕು ಅಥವಾ ಜನರ ನೋವು ನಿವಾರಣೆಗೂ ದೇವರೆಂಬ ಒಂದು ಅತೀತ ಶಕ್ತಿ ಬೇಕೇಬೇಕು. ಅದಿಲ್ಲದಿದ್ದರೇ ಅವರ ಮನಃಶಾಂತಿ ಹೇಗೆ ಬಗೆಹರಿದೀತು ಅಲ್ಲವೇ? ವಿಚಾರವಾದಿಗಳೇನೋ ಮನಃಶಾಂತಿ ಹುಡುಕಿಕೊಂಡು ಕ್ಲಬ್‌ಗಳಿಗೋ, ಬಾರ್‌ಗಳಿಗೋ ಹೋಗಿ ಕುಳಿತುಕೊಳ್ಳುತ್ತಾರೆ. ಹಾಗೆಯೇ ಸಾಮಾನ್ಯ ಜನ ಕೂಡ ಅದೇ ಹಾದಿ ಹಿಡಿಯಬೇಕೇ ಎಂಬುದು ನಮ್ಮ ಪ್ರಶ್ನೆ.
ಇಷ್ಟೆಲ್ಲಾ ಏಕೆ ಎದುರಾಯ್ತು ಎಂದರೆ, ಇಂದು ಬಿ.ಟಿ. ಲಲಿತಾ ನಾಯಕ್ ಅವರ ಹೇಳಿಕೆಯೊಂದನ್ನು ಗಮನಿಸಿದೆ. ನಿಮ್ಮ ಮೂಢನಂಬಿಕೆಗಳ ವಿರೋಧಿ ಕರಡು ಸಿದ್ಧವಾದಂತೆಯೇ ಇವರ ಸೆಕ್ಯುಲರ್ ಬುದ್ಧಿಗೆ ಇನ್ನಷ್ಟು ಶಕ್ತಿ ಬಂದು ಬಿಟ್ಟಿದೆ. ಈ ಕಾರಣದಿಂದಲೇ ಅವರು, ಮಂಗಳಯಾನಕ್ಕಾಗಿ ಉಪಗ್ರಹ ಉಡಾವಣೆಗೆ ಮುನ್ನ ತಿರುಪತಿಗೆ ಹೋದ ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರನ್ನು ಜೈಲಿಗೆ ಅಟ್ಟಬೇಕು ಎಂದಿದ್ದಾರೆ. ಇದು ತೀರಾ ಅತಿರೇಕ ಅನ್ನಿಸಲಿಲ್ಲವೇ ಸಿದ್ದರಾಮಯ್ಯನವರೇ?
ನಂಬಿಕೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಹೀಗಾಗಿ 450 ಕೋಟಿ ವೆಚ್ಚದ ಯೋಜನೆಯೊಂದರ ನೇತೃತ್ವ ವಹಿಸಿಕೊಂಡಿದ್ದ ರಾಧಾಕೃಷ್ಣನ್ ಅವರ ಮೇಲೆ ನಿರೀಕ್ಷೆ ಎಷ್ಟಿತ್ತು, ಇದರ ಒತ್ತಡ ಎಷ್ಟಿತ್ತು ಎಂಬುದು ಯಾರಿಗೂ ಅರಿವಾಗದ ಸಂಗತಿ. ಈ ಭಾರ ಇಳಿಸಿಕೊಳ್ಳಲು ಅವರು ತಿರುಪತಿಯ ಮೊರೆ ಹೋಗಿದ್ದಾರೆ. ಇದರಲ್ಲಿ ತಪ್ಪೇನು? ಇದಷ್ಟೇ ಅಲ್ಲ, ಇನ್ನೂ ಒಂದು ಸಂಗತಿ ಇದೆ. ರೋಗಿಯೊಬ್ಬನ ಹೃದಯಕ್ಕೆ ಆಪರೇಶನ್ ಮಾಡಿದ ವೈದ್ಯನೊಬ್ಬ, ರೋಗಿಯ ಸಂಬಂಧಿಕರಿಗೆ ಹೇಳುವ ಮಾತು, ನನ್ನ ಕೈಲಾದ ಪ್ರಯತ್ನ ನಡೆಸಿದ್ದೇನೆ. ಇನ್ನು ಅವರನ್ನು ಉಳಿಸುವುದು ದೇವರಿಗೆ ಬಿಟ್ಟಿದ್ದು ಎನ್ನುತ್ತಾರೆ. ಹೀಗಂತ ವೈದ್ಯರನ್ನು ಜೈಲಿಗೆ ಹಾಕಲಾದೀತೇ? ಇಂಥವುಗಳನ್ನು ತಪ್ಪು ಎಂದಾದಲ್ಲಿ ಮುಂದಿನ ದಿನಗಳಲ್ಲಿ ನಾವು, ನೀವು ಮಾಡುವ ಪೂಜೆಗಳನ್ನು ತಪ್ಪು ಎನ್ನುತ್ತಾರೆ. ಉತ್ಸವಗಳು, ಜಾತ್ರೆಗಳನ್ನೆಲ್ಲಾ ತಪ್ಪು ಎನ್ನುತ್ತಾರೆ ಅಲ್ಲವೇ.
ಇನ್ನೊಂದು ವಿಷಯ, ನೀವು ಕರಡು ರಚಿಸಿದವರಿಗೆ ಹೇಳಲೇಬೇಕು, ಏಕೆಂದರೆ, ಪ್ರತಿ ಸರ್ಕಾರಗಳು ಧಾರ್ಮಿಕ ವಿಚಾರಗಳಿಗಾಗಿಯೇ ಒಂದು ಇಲಾಖೆಯನ್ನೂ ಹೊಂದಿರುತ್ತದೆ ಎಂಬುದು. ನಮ್ಮಲ್ಲಿಯೂ ಧಾರ್ಮಿಕ ದತ್ತಿ ಇಲಾಖೆ ಅಥವಾ ಮುಜರಾಯಿ ಇಲಾಖೆ ಎಂಬುದಿದೆ. ಇದರ ಕೆಲಸವೇ ದೇವರ ಸುತ್ತಲಿನ ಚಟುವಟಿಕೆಗಳನ್ನು ನೋಡುವುದು. ಇಂದು ನೀವು ದೇವರ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಾರದು ಎಂದು ಹೇಳುತ್ತಾರೆ. ಇದು ತಪ್ಪು ಎಂಬುದು ನಿಮ್ಮ ಅಭಿಪ್ರಾಯವೇ ಆದರೆ, ಈ ದತ್ತಿ ಇಲಾಖೆ ಏಕೆ ಸ್ವಾಮಿ? ಮುಚ್ಚಬೇಕು ಅಲ್ಲವೇ?
ಆದರೆ ಇದು ಸಾಧ್ಯವಾಗದ ಮಾತು. ಏಕೆಂದರೆ ಪ್ರತಿ ಸರ್ಕಾರವೂ ಆಯಾ ಧರ್ಮದ ಜನರ ನಂಬಿಕೆಗಳಿಗೆ ಗೌರವ ಕೊಡಲೇಬೇಕು. ಇದು ಸಂವಿಧಾನವೇ ಹೇಳಿದ ವಿಚಾರ. ಈ ವಿಚಾರದಲ್ಲಿ ನೀವು ಕಮ್ಯೂನಿಸ್ಟ್ ನೇತೃತ್ವದ ಸರ್ಕಾರ ಕೇರಳದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವನ್ನೇ ನೆನಪಿಸಿಕೊಳ್ಳಬೇಕು. ಆಗ ಶಬರಿಮಲೆಯಲ್ಲಿ ಅಯ್ಯಪ್ಪನ ದೇಗುಲಕ್ಕೆ ನಟಿ ಜಯಮಾಲಾ ಅವರಿಗೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಬಳಿಕ ಈ ಸಂಬಂಧ ಆದ ವಿವಾದಗಳನ್ನೂ ಗಮನಿಸಿ. ಅಂಥ ಕಮ್ಯೂನಿಸ್ಟ್ ಸರ್ಕಾರವೇ ಅವರಿಗೆ ಅವಕಾಶ ಕೊಡಲಿಲ್ಲವೆಂದ ಮೇಲೆ ನಂಬಿಕೆಗಳ ಮಹತ್ವ ಅರ್ಥವಾದೀತು.
ಹಿಂದೂಗಳು ಮಾಡುವ ದೇವರ ಪೂಜೆಯನ್ನೇ ಅಪನಂಬಿಕೆಯಿಂದ ನೋಡುವ ಪ್ರಯತ್ನ ನಿಮ್ಮ ಸುತ್ತಲಿನ ಬುದ್ದಿಜೀವಿಗಳಲ್ಲಿದೆ. ಒಂದು ವಿಷಯ ನೆನಪಿರಲಿ, ನಮ್ಮ ಹಿಂದೂ ಧರ್ಮದಲ್ಲಿ ಎಷ್ಟು ಜೀವಂತಿಕೆಯಿದೆ ಎಂದರೆ, ನಾವು ಸತ್ತುಹೋದ ಹಿರಿಯರನ್ನೂ ನಮ್ಮ ದೇವರೆಂದು ಪೂಜೆ ಮಾಡುತ್ತೇವೆ. ಪಿತೃಪಕ್ಷದ ವೇಳೆಯಲ್ಲಿ ನಮ್ಮ ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ ಫೋಟೋ ಇಟ್ಟು, ಅವರಿಗೆ ಇಷ್ಟವಾದ ಅಡುಗೆ ಮಾಡಿ ನೈವೇದ್ಯ ಮಾಡುತ್ತೇವೆ. ನಮಗೆ ದೇವರೆಂದರೆ ರಾಮ, ಶಿವ, ಕೃಷ್ಣನೇ ಆಗಬೇಕಂದಿಲ್ಲ. ನಿಮ್ಮ ಸುತ್ತ ಇರುವ ಬುದ್ಧಿಜೀವಿಗಳು ಹೇಳುವ ಹಾಗೆ ನಾವು ಮೂಢರೂ ಅಲ್ಲ. ಏಕೆಂದರೆ ನಮ್ಮ ಹಿರಿಯರನ್ನು ಪೂಜೆ ಮಾಡುವ ಉದ್ದೇಶ, ಅವರಿಗೆ ಕೊಡುವ ಗೌರವ.
ಹಾಗೆಯೇ ದೇವರ ಹೆಸರಲ್ಲಿ ನಡೆಯುವ ಎಲ್ಲಾ ಆಚರಣೆಗಳು ಮೂಢನಂಬಿಕೆಗೆ ಸಂಬಂಧಿಸಿದವುಗಳಲ್ಲ. ಕೆಲವೊಂದು ಆ ಭಾಗದ ಜನಪದ ಸಂಸ್ಕೃತಿ, ಆಚಾರ - ವಿಚಾರಗಳನ್ನು ಒಳಗೊಂಡಿರುತ್ತವೆ. ಈ ಸತ್ಯ ವಿಚಾರವಂತರು ಎನ್ನಿಸಿಕೊಂಡ 'ಬುದ್ಧಿ'ಜೀವಿಗಳಿಗೆ ಗೊತ್ತಾಗಬೇಕು. ನೀವು ಆಚರಣೆಗಳನ್ನೆಲ್ಲಾ ಮೂಢನಂಬಿಕೆಗಳ ಲಿಸ್ಟ್‌ಗೆ ಸೇರಿಸಿ ಇದು ಮಾಡಿದರೆ ತಪ್ಪು, ಅದು ಮಾಡಿದರೆ ತಪ್ಪು ಎಂದಾದರೆ, ನಮ್ಮ ಹಳ್ಳಿಯ ಜನ ಏನನ್ನು ಮಾಡಬೇಕು? ಹಿರಿಯರು ಒಂದು ಮಾತು ಹೇಳಿದ್ದಾರೆ, ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳು, ಉತ್ಸವಗಳು ಸಮುದಾಯಗಳ ಸೇರ್ಪಡೆಗೆ ಇರುವ ಮಾರ್ಗಗಳು ಅಂಥ. ದೇವರ ಹೆಸರಲ್ಲಿ ಹಳ್ಳಿಗಳಲ್ಲಿ ಆಗುವ ಜಾತ್ರೆಗಳಲ್ಲಿ ಜಾತಿ, ಕುಲವೆನ್ನದೇ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಮೂಲಕ ಒಟ್ಟಾಗಿ ಬೆರೆತು ಕಷ್ಟ, ಸಂಕಟ, ನೋವು ಎಲ್ಲವನ್ನೂ ಮರೆತು ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಾರೆ.
ಇದೆಲ್ಲಾ ಆಯ್ತು ಬಿಡಿ, ಇನ್ನೊಂದು ವಿಷಯವಿದೆ. ಯಾವುದೇ ಒಂದು ಕಾನೂನು ಮಾಡುವಾಗ, ಅದಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ಎಲ್ಲ ವರ್ಗದವರಿಗೂ ಅವಕಾಶ ಕೊಡಬೇಕು ಎಂಬುದು ಗೊತ್ತಿರಲಿಲ್ಲವೇ? ಒಂದು ಕರಡನ್ನು ಒಂದೇ ಸಿದ್ಧಾಂತಕ್ಕೆ ಸಂಬಂಧಿಸಿದವರು ಮಾಡಿದ್ದಾರೆ ಎಂದರೆ ಅದರ ಮೇಲೆ ಅನುಮಾನದ ಎಳೆಗಳು ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತವೆ. ಈಗ ಆಗಿರುವುದು ಅದೇ. ಈ ಕರಡು ರಚನೆ ಸಂಬಂಧದ ಸಮಿತಿಯಲ್ಲಿ ಆಸ್ತಿಕರು ಮತ್ತು ನಾಸ್ತಿಕರು ಇರಬೇಕಿತ್ತು. ಅವರ ಅಭಿಪ್ರಾಯಗಳನ್ನೂ ಕೇಳಬೇಕಿತ್ತು. ಒಂದೇ ಸಿದ್ಧಾಂತಕ್ಕೆ ಅಂಟಿಕೊಂಡವರನ್ನು ಬಿಟ್ಟರೆ ಇಂಥ ಕೆಲಸಗಳೇ ಆಗುವುದು ಅಲ್ಲವೇ ಮುಖ್ಯಮಂತ್ರಿಗಳೇ.

-ಸಿ. ಜೆ. ಸೋಮಶೇಖರ
ಪತ್ರಕರ್ತರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement