ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಡ ಹಿಂದು ಯುವತಿಯರ ಕಷ್ಟ ನಿಮಗೇಕೆ ಕಾಣಿಸುತ್ತಿಲ್ಲ?

Mainashree
Updated On : 10 Nov 2013, 11:39 am

ಈ ತಾರತಮ್ಯ ಏಕೆ ಮುಖ್ಯಮಂತ್ರಿಗಳೇ? ಇಡೀ ಮಹಿಳಾ ಸಮುದಾಯವೇ ಒಂದು ವರ್ಗ. ಅದರಲ್ಲಿ ಭೇದಭಾವ ಮಾಡುವ ಅಧಿಕಾರ ನಿಮಗಿಲ್ಲ. ನೀವು ಮುಖ್ಯಮಂತ್ರಿಯಾಗಿ ಬಂದ ಮೇಲೆ ನಿಮ್ಮ ಸಮಾಧಾನದ ನುಡಿ, ನಡೆ, ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ನಿಮ್ಮ ಕೆಲವು ಕೆಲಸಗಳು, ನಿರ್ಣಯಗಳು, ನಿಮ್ಮನ್ನು ವಿಭಿನ್ನವಾಗಿಸಿತ್ತು. ಆದರೆ, ಈ ಶಾದಿ ಭಾಗ್ಯ ಯೋಜನೆ ಜಾರಿಗೆ ಮಾಡುವುದರ ಮುಖಾಂತರ ಮತ್ತೆ ಕಾಂಗ್ರೆಸ್‌ನ ಒಡೆದು ಆಳುವ ನೀತಿಯನ್ನೇ ನೀವು ನೆನಪಿಸಿಬಿಟ್ಟಿರಿ.
ಮಹಿಳೆಯರೆಲ್ಲರೂ ಒಂದೇ. ಅವರಲ್ಲಿ ಜಾತಿ, ಮತ, ಭೇದ ಹುಡುಕಲೇಬಾರದು. ತಪ್ಪು ನಿಮ್ಮದಷ್ಟೇ ಅಲ್ಲ ಬಿಡಿ. ಕೆಲವು ದಶಕಗಳ ಹಿಂದೆ ಹೆಣ್ಣು ಶಿಶು ಭ್ರೂಣ ಹತ್ಯೆಯ ವಿಷಯದ ಬಗ್ಗೆ ದೊಡ್ಡ ಚರ್ಚೆಗಳಾದಾಗ, ಅಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಅಥವಾ ಯಾವ ಧರ್ಮವನ್ನೂ ನೋಡದೇ ಎಲ್ಲ ಮಹಿಳಾ ಸಂಘಟನೆಗಳೂ ಅದರ ವಿರುದ್ಧ ಹೋರಾಟ ನಡೆಸಿದವು. ಆದರೆ ಈಗ ಯಾವೊಂದು ಮಹಿಳಾ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಅಂದರೆ ಈ ವಿಷಯ ಅಷ್ಟು ದೊಡ್ಡದಲ್ಲವೇ? ಅಥವಾ ಮಾತಾಡುವ ಮನಸ್ಸು ಅವುಗಳಿಗಿಲ್ಲವೇ? ಪತ್ರಿಕೆಗಳಲ್ಲಿ ಪುಟಗಟ್ಟಲೇ ಬರೆಯುವ, ಟಿ.ವಿ.ಗಳಲ್ಲಿ ಗಂಟೆಗಟ್ಟಲೇ ಕುಳಿತು "ಮಹಿಳೆಯರ ಸಮಸ್ಯೆಗಳು ಮತ್ತು ಸ್ವಾತಂತ್ರ್ಯ" ಎಂಬ ವಿಷಯ ಹಿಡಿದುಕೊಂಡು ಮಾತನಾಡುವ ಮಹಿಳಾ ಚಿಂತಕಿಯರು ಈಗ ಎಲ್ಲಿ ಹೋಗಿ ಕುಳಿತಿದ್ದಾರೆ?
ಈ ಮಹಿಳಾಮಣಿಗಳೊಂದಿಗೆ, ನೀವೂ ಸೇರಿ ಒಮ್ಮೆ ಕರ್ನಾಟಕದ ಉತ್ತರ ಭಾಗದ ಹಳ್ಳಿಗಳಿಗೆ ಹೋಗಿ ಬನ್ನಿ. ಅಲ್ಲಿಯ ಮಹಿಳೆಯ ಜೀವನವನ್ನೊಮ್ಮೆ ನೋಡಿ. ಪ್ರತಿಯೊಬ್ಬ ಬಡ ಯುವತಿಯೂ ಮದುವೆಯ ಸಮಯದಲ್ಲಿ ಸಂಕಟ ಅನುಭವಿಸುತ್ತಾಳೆ. ದುಡ್ಡಿಲ್ಲ ಎನ್ನುವ ಕಾರಣಕ್ಕೆ ಮನೆಯವರು ಎಂತಹ ಗಂಡನ್ನು ತೋರಿಸಿದರೂ ತಲೆಬಾಗಿಸಿ ಕೊರಳೊಡ್ಡುತ್ತಾಳೆ. ಅದರ ತಪ್ಪಿಗೆ ಇಡೀ ಜೀವನ ಕಷ್ಟ ಪಡುತ್ತಾಳೆ. ಅನೇಕ ಹಳ್ಳಿಗಳಲ್ಲಿ ಈಗಲೂ ಜಾತ್ರಾ ಸಮಯದಲ್ಲಿ ಗ್ರಾಮದ ಹಿರಿಯರೆಲ್ಲ ಸೇರಿ ದೇವಸ್ಥಾನದಲ್ಲಿ ಸಾಮೂಹಿಕ ಮದುವೆ ಮಾಡುತ್ತಾರೆ.
ಆ ಸಮಯದಲ್ಲೂ ಕೂಡಾ ಹೆಣ್ಣಿನ ಮನೆಯವರು ಐದು ಸಾವಿರ ಕೊಟ್ಟಿರುವ, ಕೊಡುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಈ ರೀತಿ ಮದುವೆಯ ವಿಷಯವಾಗಿ ಅತಿ ಹೆಚ್ಚು ಕಷ್ಟಪಡುತ್ತಿರುವ ಯುವತಿಯರೆಲ್ಲಾ ಯಾರು ಗೊತ್ತೇ? ಹಿಂದುಳಿದ ವರ್ಗದವರು. ಸಹಾಯ ಮಾಡಲೇಬೇಕು ಎಂದು ನಿಮಗೆ ಅನಿಸಿದರೆ ಎಲ್ಲಾ ಬಡ ಮಹಿಳೆಯರಿಗೂ ಸಹಾಯ ಮಾಡಿ. ಅದು ಬಿಟ್ಟು ಕೇವಲ ಮುಸ್ಲಿಂ ಯುವತಿಯರ  ಮದುವೆಗೆ ಹಣ ಕೊಡುತ್ತೇವೆ ಎನ್ನುತ್ತೀರಲ್ಲ. ಇದು ವೋಟ್ ಬ್ಯಾಂಕ್ ರಾಜಕಾರಣವಲ್ಲದೇ ಮತ್ತೇನು? ಮಾತೆತ್ತಿದರೆ ಜಾತ್ಯತೀತತೆಯ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್‌ನ ಈ ಯೋಜನೆ ನಿಜಕ್ಕೂ ಜಾತ್ಯತೀತ ನಿಲವಿನ ಮೇಲೆ ರೂಪ ತಳೆದಿದೆಯೇ? ಖಂಡಿತವಾಗಿಯೂ ಇಲ್ಲ. ಒಂದು ಕೋಮಿನ ಮತಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಭಾರ ನಡೆಸುವುದು ಜಾತ್ಯತೀತ ಪಕ್ಷದ ಲಕ್ಷಣವೇ? ಹಿಂದುಳಿದ ಯುವತಿಯರೇಕೆ ನಿಮ್ಮ ಶಾದಿ ಭಾಗ್ಯದ ಯೋಜನೆಗೆ ಏಕೆ ಒಳಪಡುವುದಿಲ್ಲ? ಯಾಕೆಂದರೆ ಅವರ್ಯಾರೂ ಮುಸಲ್ಮಾನರಲ್ಲ. ಅಲ್ಲವೇ? ಅಥವಾ ನಿಮ್ಮ ಯೋಜನೆಯ ಫಲಾನುಭವಿಗಳಾಬೇಕಾದರೆ ಮತಾಂತರವಾಗಬೇಕೇ?
ಅದು ಯಾವುದೇ ಧರ್ಮವಿರಲಿ, ಎಷ್ಟೋ ಸಮಯದಲ್ಲಿ ಮಹಿಳೆಯರನ್ನು ಅಲ್ಲಿ ಕಾಣುವ ರೀತಿ ಒಂದೇ. ಅಲ್ಲಿ ಆಕೆ ಕೇವಲ ಹೇಳಿದ್ದನ್ನು ಕೇಳುವ ಹೆಣ್ಣಾಗಿರುತ್ತಾಳೆ. ಮನೆಯವರು ಹೇಳಿದಂತೆ ತಲೆಯಾಡಿಸುವ ಮೂಕಪಶು ಅವಳು. ನೀವು ಹಿಂದುಳಿದ ಜಾತಿಯಿಂದ ಬಂದವರು, ನಿಮ್ಮ ಜೊತೆಯಲ್ಲಿ ಅಧಿಕಾರದಲ್ಲಿರುವ ಅನೇಕರು ಅದೇ ವರ್ಗದಿಂದ ಬಂದವರು. ನಿಮಗೆ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟದ ಬಗ್ಗೆ ಅರಿವಿದ್ದೇ ಇರುತ್ತದೆ. ಒಂದು ವೇಳೆ ಇಲ್ಲದಿದ್ದರೆ, ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸುವುದಕ್ಕಿಂತ ಮುಂಚೆ ಇದರ ಬಗ್ಗೆ ಕರ್ನಾಟಕದ ಎಲ್ಲ ಭಾಗಗಳಲ್ಲಿರುವ ಬಡ ಯುವತಿಯರ ಸ್ಥಿತಿಗತಿಗಳ ಬಗ್ಗೆ ಸಂಶೋಧನೆ ನಡೆಸಿ ನೋಡಿ. ಆಗ ನಿಮಗೆ ಅರ್ಥವಾಗುತ್ತದೆ. ಹಣದ ಅವಶ್ಯಕತೆ ಕೇವಲ ಬಡ ಮುಸ್ಲೀಮರಿಗಷ್ಟೇ ಇಲ್ಲ ಎನ್ನುವುದು. ಒಂದು ವಿಷಯ ತಿಳಿದುಕೊಳ್ಳಿ. ನೀವು ಯಾವುದೇ ಜಾತಿ ಅಥವಾ ಮತದ ಮುಖ್ಯಮಂತ್ರಿಯಲ್ಲ. ನೀವು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ. ಎಲ್ಲ ವರ್ಗದವರ ಬಗ್ಗೆಯೂ ನಿಮಗೆ ಕಾಳಜಿಯಿರಬೇಕು. ನಿಮ್ಮನ್ನು ಎಲ್ಲಾ ವರ್ಗಗಳೂ ಸೇರಿ ಆ ಸ್ಥಾನದಲ್ಲಿ ಕೂರಿಸಿವೆ ಎನ್ನುವುದನ್ನು ಮರೆಯಬೇಡಿ.  
ರಾಜ್ಯದಲ್ಲಿ ಈ ಹಿಂದೆ  ನಿಮ್ಮದೇ ಕಾಂಗ್ರೆಸ್ ಸರ್ಕಾರ ಇಂತಹದ್ದೇ ದುಡುಕು ನಿರ್ಣಯವೊಂದನ್ನು ಕೈಗೊಂಡಿತ್ತು, ಮುಸ್ಲಿಂ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಗೆ 500 ರುಪಾಯಿ ಮಾಸಾಶನ ನೀಡುವ ಬಗ್ಗೆ. ಅದು ಮಾತನಾಡಿತ್ತು. ವಿಧವೆಯರು ಅಥವಾ ವಿಚ್ಛೇದಿತರು ಯಾವ ಧರ್ಮದವರೇ ಆಗಿರಲಿ. ಆ ಹೆಣ್ಣು ಅನುಭವಿಸಿವ ಕಷ್ಟಗಳು ಒಂದೇ ಆಗಿರುತ್ತವೆ ಎನ್ನುವುದರ ಬಗ್ಗೆ ಆಗ ಯಾರೂ ಯೋಚಿಸಲಿಲ್ಲ. ಈಗ ಶಾದಿ ಭಾಗ್ಯ ಯೋಜನೆಯ ವಿಷಯದಲ್ಲೂ ನೀವು ಈ ವಿಷಯವನ್ನು ಯೋಚಿಸುತ್ತಿಲ್ಲ. ಎಲ್ಲರನ್ನೂ ಸಮನಾಗಿ ಕಂಡರೆ ಮಾತ್ರ ಜನತೆ ನಿಮ್ಮನ್ನು ಜಾತ್ಯತೀತ ಎನ್ನುತ್ತಾರೆ. ಸರ್ವರಿಗೂ ಸಮಬಾಳು-ಸಮಪಾಲು ಎನ್ನುವ ಮಾತಿಗೆ ಅರ್ಥವೇ ಇಲ್ಲವೇ? ನಿಜವಾಗಲೂ ಇಲ್ಲಿ ದನಿ ಎತ್ತಬೇಕಾದವರೂ, ಮಹಿಳಾ ಪರ ಸಂಘಟನೆಗಳು, ಚಿಂತಕರು ಮತ್ತು ಮುಖ್ಯವಾಗಿ ಸಾಮಾನ್ಯ ಮಹಿಳೆಯರು.
ಮಹಿಳೆಯರೇ, ಸರ್ಕಾರ ಶಾದಿ ಭಾಗ್ಯಕ್ಕೆ ನೀಡುತ್ತಿರುವ ಹಣ ಯಾರದ್ದೋ ಅಲ್ಲ ಅಥವಾ ಅದನ್ನು ಘೋಷಿಸುವ ಯಾವೊಬ್ಬ ಜನನಾಯಕನದ್ದೂ ಅಲ್ಲ. ಎಲ್ಲ ನಮ್ಮದೇ. ಅದು ಪ್ರತಿಯೊಬ್ಬರಿಗೂ ಸೇರಿದ್ದು. ಇದರ ಬಗ್ಗೆ ಮಾತನಾಡುವ, ಕೇಳುವ ಹಕ್ಕು ಎಲ್ಲ ವರ್ಗದ ಮಹಿಳೆಯರಿಗೆ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಎಲ್ಲಿ ಅಡಗಿ ಕುಳಿತಿದ್ದಾರೆ? ಅವರೇಕೆ ಈ ಬಗ್ಗೆ ದನಿ ಎತ್ತುತ್ತಿಲ್ಲ?

- ಶೋಭಾ.ಹೆಚ್.ಜಿ
ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ
shobha_hg@hotmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement