ಮೂಢನಂಬಿಕೆ ನಿಷೇಧ ಕಾಯಿದೆಯನ್ನು ಕಾಂಗ್ರೆಸ್ಸೇ ವಿರೋಧಿಸಲಿದೆ
ಕುರುಬರಿಗೆ ವೈಷ್ಣವ ದೀಕ್ಷೆ ಎಂಬ ಪ್ರಸ್ತಾವದ ಮೂಲಕ ಚರ್ಚೆಯ ಬಿಂದುವಾಗಿದ್ದ...
ಕುರುಬರಿಗೆ ವೈಷ್ಣವ ದೀಕ್ಷೆ ಎಂಬ ಪ್ರಸ್ತಾವದ ಮೂಲಕ ಚರ್ಚೆಯ ಬಿಂದುವಾಗಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ತಾವು ಪದೇ ಪದೆ ವಿವಾದದ ವಸ್ತುವಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರಗಳನ್ನು ಮುಂದಿರಿಸಿದ್ದಾರೆ.
ಹಿಂದು ಧರ್ಮ ರಕ್ಷಣೆ ಹೊಣೆ ಹೊತ್ತಿರುವವರೇ ವೈಷ್ಣವ, ಶೈವ ದೀಕ್ಷೆ, ಮೇಲು ಕೀಳು ಸಂಘರ್ಷದಲ್ಲಿ ತೊಡಗುವುದು ಸರಿಯೇ?
ಸಂಘರ್ಷ ಹಿಂದಿನಿಂದಲೂ ಇದೆ. ಲಿಂಗಾಯತರು ಲಿಂಗ ದೀಕ್ಷೆ ಕೊಡುತ್ತಲೇ ಇದ್ದಾರೆ, ಶರಣರೂ ಕೊಡುತ್ತಿದ್ದಾರೆ. ಇದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಏಕೆ? ಒಂದೋ ಶೈವ ದೀಕ್ಷೆ ಕೊಡಬೇಕು, ಇದನ್ನು ಲಿಂಗಾಯತರು ಕೊಡುತ್ತಾರೆ. ನಾವು ಶೈವ ದೀಕ್ಷೆ ನೀಡುವುದಿಲ್ಲ, ನಾವು ನೀಡುವುದಿದ್ದರೆ ವೈಷ್ಣವ ದೀಕ್ಷೆ ಮಾತ್ರ. ಇದು ಭಕ್ತಿ ದೀಕ್ಷೆ.
ದೇವರಲ್ಲಿಯೇ ಮೇಲು ಕೀಳು ಭಾವನೆ ಹೊಂದಿದ್ದರೆ ಹಿಂದೂ ಜನರಲ್ಲಿ ಸಮಾನತೆ ಹೇಗೆ ಮೂಡಿಸುತ್ತೀರಿ ?
ಮೇಲು, ಕೀಳು ಹೊಸದಾಗಿ ಮಾಡಿದ್ದಲ್ಲ, ಆದರೆ ಈಗ ಘರ್ಷಣೆ ಇಲ್ಲ. ಅವರವರ ನಂಬಿಕೆ. ಶೈವರು ಶಿವನೇ ದೊಡ್ಡವ ಹೇಳುತ್ತಾರೆ, ಮುಸಲ್ಮಾನರು ಅಲ್ಲಾ ದೊಡ್ಡವ ಎನ್ನುತ್ತಾರೆ. ಕ್ರೈಸ್ತರು ಅವರ ದೇವರೇ ದೊಡ್ಡವರು ಎನ್ನುತ್ತಾರೆ. ನಾವು ಇನ್ನೊಬ್ಬರ ಮೇಲೆ ಅಧಿಕಾರ ಸ್ಥಾಪಿಸಬಾರದು. ಧರ್ಮಗಳ ಪ್ರತ್ಯೇಕತೆ ತೆಗೆಯಲು ಸಾಧ್ಯವೇ ಇಲ್ಲ. ಹೆಚ್ಚು ರಾಜಕೀಯ ಪಕ್ಷಗಳು ಬೇಡ ಒಂದೇ ಇರಲಿ ಎಂದು ಉಳಿದವನ್ನು ಕಿತ್ತು ಹಾಕಿದರೆ ಪ್ರಜಾಪ್ರಭುತ್ವ ಹೋಗುತ್ತದೆ. ಇದೇ ರೀತಿ ಇದು ಧಾರ್ಮಿಕ ಸ್ವಾತಂತ್ರ್ಯ. ಯಾರೂ ಬೇಕಾದರೂ ದೀಕ್ಷೆ ನೀಡಲಿ, ದೀಕ್ಷೆಯಿಂದ ಸಂಸ್ಕಾರ, ಸಮಾನತೆ ಬೆಳೆಯುತ್ತದೆ.
ಹಾಗಾದರೆ ಶಿವ ಮತ್ತು ವಿಷ್ಣು ಎಲ್ಲರೂ ಒಂದೇ?
ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಶಿವನೇ ಸರ್ವೋತ್ತಮ ಎಂದು ಬಸವಣ್ಣ ಹೇಳುತ್ತಾರೆ. ಹರಿಹರರು ಒಂದೇ ಎಂದವರಿಗೆ ನರಕ ಎಂದು ಬಸವಣ್ಣ ಬಾಯಿ ಬಿಟ್ಟು ಹೇಳಿದ್ದಾರೆ.
ವಿಷ್ಣುವನ್ನು ಬಿಟ್ಟು ಬೇರೆ ದೇವರನ್ನು, ಶಿವವನನ್ನು ಉತ್ತಮ ಹೇಳಿದರೆ ನರಕ ಎಂದು ಕನಕದಾಸರು ಹೇಳಿದ್ದಾರೆ!
ಕುರುಬ ಜಾತಿಯ ಸಂಶೋಧಕ ಸುಧಾಕರ ಎಂಬವರೇ ಕನಕದಾಸರ ಬಗ್ಗೆ ಬರೆದ ಸಂಶೋಧನೆ ಕೃತಿಯಲ್ಲಿ ಇದು ದಾಖಲೆ ಸಹಿತ ಸಿದ್ಧವಾಗಿದೆ. ಇದನ್ನು ಸರ್ಕಾರ ಅಂಗೀಕರಿಸಿ ಪ್ರಕಟಿಸಿದೆ. ಮಧ್ವ ದ್ವೇಷಿಗಳಿಗೆ ನರಕ ಖಚಿತ ಎಂದು ಕನಕದಾಸರು ಹೇಳಿದ್ದಾರೆ. ಇದು ಅಧಿಕೃತ ಕೃತಿಯಲ್ಲಿದೆ. ಶಿವ ದ್ವೇಷಿಗಳಿಗೆ ನರಕ ಎಂದು ಬಸವಣ್ಣ ಹೇಳಿದ್ದಾರೆ. ಆ ಕಾಲದಲ್ಲಿ ಎಲ್ಲರೂ ಇದನ್ನು ಒಪ್ಪಿದ್ದಾರೆ.
ಅಂದರೆ ಈ ಕಾಲದಲ್ಲಿ ಹರಿ ಹರ ಭೇದ ಇಲ್ಲವೇ?
ಇಲ್ಲ ಎಂದು ಹೇಳುವುದಿಲ್ಲ, ತಾಳ್ಮೆ, ಘರ್ಷಣೆ ಬೇಡ. ತಮ್ಮ ತಮ್ಮ ನಂಬುಗೆಯಂತೆ ನಡೆಯಲಿ.
ಬೇರೆ ಜಾತಿಯವರಿಗೆ ವೈಷ್ಣವ ದೀಕ್ಷೆ ಕೊಟ್ಟರೆ ಬ್ರಾಹ್ಮಣರಾಗುತ್ತಾರೆಯೇ?
ದೀಕ್ಷೆ ಪಡೆದರೆ ಬ್ರಾಹ್ಮಣರ ಸ್ಥಾನ ನೀಡುತ್ತೇವೆ. ಆದರೆ ಬ್ರಾಹ್ಮಣ ಜಾತಿಗೆ ಸೇರುವುದಿಲ್ಲ. ಉಚ್ಚ, ನೀಚ ಭಾವ ಇಲ್ಲವಾಗುತ್ತದೆ. ಉಚ್ಚ, ನೀಚ ಸಂವಿಧಾನದಲ್ಲಿ ಇಲ್ಲ. ಆಚರಣೆಯಲ್ಲಿ ಇನ್ನೂ ಇದೆ, ಈ ರೀತಿ ದೀಕ್ಷೆ ಮೂಲಕ ನಿವಾರಣೆ ಮಾಡಬೇಕು.
ಸಹಪಂಕ್ತಿ ಭೋಜನಕ್ಕೆ ವಿರೋಧ, ಮೇಲು, ಕೀಳು ವಿವಾದ ಇವೆಲ್ಲ ಮಾಧ್ವರ ವಿರುದ್ಧವೇ ಏಕೆ?
ಎಲ್ಲ ಬ್ರಾಹ್ಮಣರ ಮೇಲೆ ಇದೆ, ಮಾಧ್ವರ ಮೇಲೆ ಹೆಚ್ಚು, ಏಕೆಂದರೆ ಬ್ರಾಹ್ಮಣರಲ್ಲಿಯೂ ಮಾಧ್ವರು ಅಲ್ಪಸಂಖ್ಯಾತರು!
ಕನಕಗೋಪುರ ವಿವಾದದ ವೇಳೆ ಪ್ರತಿಭಟಿಸಿದ ಸಿದ್ದರಾಮಯ್ಯ ವಿರುದ್ಧ ಅಂದು ಶತ್ರು ಸಂಹಾರ ಯಾಗ ಮಾಡಿದ್ದೀರಂತೆ?
ನಾನು ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ಕಳೆದ ಚುನಾವಣೆ ವೇಳೆ ನಮ್ಮ ಬಳಿ ಬಂದಿದ್ದರು. ವಿಜೇತರಾಗಿ ಎಂದು ಅಶೀರ್ವಾದ ನೀಡಿದ್ದೆ. ಮುಖ್ಯಮಂತ್ರಿ ಆದ ತಕ್ಷಣ ಅಭಿನಂದಿಸಿದ್ದೆ. ಆದಷ್ಟು ಬೇಗ ಉಡುಪಿಗೆ ಬಂದು ಭೇಟಿಯಾಗುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಶಿವಮೊಗ್ಗ ಬ್ರಾಹ್ಮಣ ಸಮ್ಮೇಳನದಲ್ಲಿ ಮಾಂಸಾಹಾರಿಗಳ ಜತೆ ಸಂಹಪಂಕ್ತಿ ಭೋಜನ ಸಲ್ಲ ಎಂದು ಹೇಳಿದ್ದೀರಲ್ಲ?
ಮಾಂಸಾಹಾರಿಗಳ ಜತೆ ಸಹಪಂಕ್ತಿ ಭೋಜನಕ್ಕೆ ವಿರೋಧ ಇಲ್ಲ. ಮಾಂಸಾಹಾರ ಸರಬರಾಜಾಗುವ ಪಂಕ್ತಿಯಲ್ಲಿ ಬ್ರಾಹ್ಮಣರು ಭೋಜನ ಮಾಡಬಾರದು. ಬ್ರಾಹ್ಮಣರು ಮಾಂಸಾಹಾರ ಎಷ್ಟು ಮಾತ್ರಕ್ಕೂ ಸ್ವೀಕರಿಸಬಾರದು. ಉಳಿದವರಿಗೆ ಒತ್ತಾಯ ಇಲ್ಲ. ಅಷ್ಟೇ ನಾನು ಹೇಳಿದ್ದು. ವೈಷ್ಣವ ದೀಕ್ಷೆ ಮಾಂಸಾಹಾರಿಗಳಿಗೂ ಕೊಡುತ್ತೇವೆ. ಸರಿಯಾದ ವೈಷ್ಣವ ದೀಕ್ಷೆಗೆ ಮಾಂಸಾಹಾರ ಬಿಟ್ಟರೆ ಒಳ್ಳೆಯದು. ಅದು ಕೂಡಾ ಪ್ರಾಣಿ ಹಿಂಸೆ ಮಾಡಬಾರದು ಎಂಬು ದೃಷ್ಟಿಯಲ್ಲಿ ಮಾತ್ರ.
ದಲಿತರ ಕೇರಿಗೆ ಹೋದ ಬಳಿಕ ಮೂರು ಬಾರಿ ಸ್ನಾನ ಮಾಡುತ್ತೀರಿ, ಸಮಾನತೆ ಬೂಟಾಟಿಕೆ ಎಂಬ ಆರೋಪಗಳಿವೆಯಲ್ಲ?
ಎಲ್ಲ ಸುಳ್ಳು. ದಲಿತರ ಅಪಾರ ಬೆಂಬಲ ಕಂಡು ಹಿಂದು ವಿರೋಧಿ ಬುದ್ಧಿಜೀವಿಗಳು ಈ ರೀತಿ ಹೇಳುತ್ತಾರೆ. ಮಾದರ ಚೆನ್ನಯ್ಯ ಸ್ವಾಮೀಜಿ ಸಹಿತ ಅಸಂಖ್ಯ ದಲಿತರು ನಮ್ಮ ಪರವಾಗಿ ಇದ್ದಾರೆ. ನಮ್ಮ ನಡುವೆ ವಿರೋಧ ಬರಲಿ ಎಂಬದು ವಿರೋಧಿಗಳ ಪ್ರಯತ್ನ.
ನೀವ್ಯಾಕೆ ಪದೇ ಪದೇ ವಿವಾದದಲ್ಲಿ ಸಿಲುಕುತ್ತೀರಿ?
ಎಡಪಂಥೀಯ ಬುದ್ಧಿಜೀವಿಗಳು ವಿವಾದ ಸೃಷ್ಟಿ ಮಾಡುತ್ತಾರೆ ಕುರುಬರಿಗೆ ವೈಷ್ಣವ ದೀಕ್ಷೆ ಕೊಡಲು ಸಿದ್ಧರಿದ್ದೀರಾ ಎಂದು ಪತ್ರಕರ್ತರು ಕೇಳಿದರು. ಕೊಡುವುದಿಲ್ಲ ಹೇಳಿದರೆ ಅಸಮಾನತೆ ಎಂದು ಬೊಬ್ಬೆ ಹೊಡೆಯುತ್ತಿದ್ದರು, ಕೊಡುತ್ತೇವೆ ಅಂದದ್ದಕ್ಕೆ ಈ ಗಲಾಟೆ. ಒಟ್ಟಾರೆ ಬುದ್ಧಿ ಜೀವಿಗಳಿಗೆ ಹಿಂದು ಧರ್ಮದಲ್ಲಿ ಒಡಕು ಬೇಕು. ಕನಕದಾಸರ ನೆಲೆಯಲ್ಲಿ ಕುರುಬರು, ಬ್ರಾಹ್ಮಣರು ಒಂದಾಗುತ್ತಿರುವುದನ್ನು ನೋಡಿದ ಬುದ್ಧಿಜೀವಿಗಳು ವಿವಾದ ಸೃಷ್ಟಿಸುತ್ತಿದ್ದಾರೆ.
1910ರಲ್ಲಿ ಅಂದಿನ ಕೃಷ್ಣಾಪುರ ಸ್ವಾಮೀಜಿ ಕೃಷ್ಣ ಗೋಪುರ ನಿರ್ಮಿಸಿದರು. ಹಳೆ ಗೋಪುರ ಕೆಡವಿ ಹೊಸದು ನಿರ್ಮಿಸುವಾಗ ಕನಕ ಗೋಪುರ ಕೆಡವಿದರು ಎಂದು ಸುಳ್ಳೇ ಸುಳ್ಳು ಅಪಪ್ರಚಾರ ಮಾಡಿ ವಿವಾದ ಸೃಷ್ಟಿಸಿದರು. ಬುದ್ಧಿ ಜೀವಿಗಳ ಪ್ರೇರಣೆ, ಪ್ರಚೋದನೆಯಿಂದ ಈ ಸುಳ್ಳನ್ನು ಈಗಲೂ ಕಾಗಿನೆಲೆ ಸ್ವಾಮೀಜಿ ಹೇಳುತ್ತಾರೆ.
ಜ್ಯೋತಿಷ್ಯ, ವಾಸ್ತು, ದೈವಪ್ರಶ್ನೆ ನಿಷೇಧಕ್ಕೆ ಕಾಯಿದೆ ಸಿದ್ಧಗೊಳ್ಳುತ್ತಿದೆ ಇದು ನಿಮಗೆ ಸಮ್ಮತವೇ?
ಈಗ ಪ್ರತಿಕ್ರಿಯಿಸುವುದಿಲ್ಲ. ವಿಧಾನಸಭೆಯಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡಿ ಪ್ರತಿಕ್ರಿಯಿಸುತ್ತೇನೆ.
ಎಲ್ಲ ಮುಗಿದು ಹೋದಮೇಲೆ ನೋಡಿ ಎನು ಪ್ರಯೋಜನ?
ಕರಡು ಕಾಯಿದೆಯಲ್ಲಿ ಹೇಳಿರುವಂತೆ ಸಿದ್ದರಾಮಯ್ಯ ಮಾಡುವುದಿಲ್ಲ ಎನ್ನುವುದು ಗೊತ್ತಿದೆ. ನಾನು ಈಗ ಏನು ಮಾತನಾಡಿದರೂ ವಿವಾದ ಆಗುತ್ತದೆ ಅದಕ್ಕಾಗಿ ಹೇಳುವುದಿಲ್ಲ.
ಒಂದಂತೂ ನಿಜ. ಕಾಂಗ್ರೆಸ್‌ನಲ್ಲಿ ಹಿಂದು ಧರ್ಮದ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ. ಅವರೆಲ್ಲ ಇರುವ ಕಾಂಗ್ರೆಸ್ ಪಕ್ಷದ ಸಮಿತಿ ಈ ನಿರ್ಣಯ ಮಂಡನೆಗೆ ವಿರೋಧಿಸಲಿದೆ.
ಮಡೆಸ್ನಾನ ಮೊದಲಾದ ಮೂಢನಂಬಿಕೆ ಹೋದರೆ ಒಳ್ಳೆಯದಲ್ಲವೇ?
ಸಮಾಜಕ್ಕೆ ಹಾನಿಕಾರಕ ಮೂಢ ನಂಬಿಕೆ ಬೇಡ. ಮಡೆಸ್ನಾನ ಬೇಡ ಅದನ್ನು ಬದಲಾಯಿಸಲು ನಾನೇ ಸೂಚಿಸಿದ್ದೆ. ಆದರೆ ಮಡೆಸ್ನಾನ ನಿಷೇಧಕ್ಕೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದರು. ಸರ್ಕಾರ ಕೆವಿಯಟ್ ತರಬೇಕಿತ್ತು, ತಂದಿಲ್ಲ, ಇದು ಸರ್ಕಾರದ ಆಡಳಿತ ವೈಫಲ್ಯ. ನಾನು ಇಷ್ಟೆಲ್ಲಾ ಪ್ರಯತ್ನಿಸಿದರೂ ಮಡೆಸ್ನಾನಕ್ಕೆ ನನ್ನದೇ ಕುಮ್ಮಕ್ಕು ಎಂದು ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಾರೆ.
ಬಿಜೆಪಿ ವಿರುದ್ಧವಾಗಿ ಹಿಂದೆ ಅನೇಕ ಪ್ರತಿಭಟನೆ ಮಾಡಿದ್ದೀರಿ, ಕಾಂಗ್ರೆಸ್ ಸರ್ಕಾರ ವಿರುದ್ಧ ಸುಮ್ಮನಿದ್ದೀರಿ, ಪ್ರತಿಭಟಿಸಿದರೆ ಕೃಷ್ಣ ಮಠ ವಶಪಡಿಸಿಕೊಳ್ಳುತ್ತಾರೆ ಎಂಬ ಭಯವೇ?
ಸರ್ಕಾರಕ್ಕೆ ಕೃಷ್ಣ ಮಠ ಸ್ವಾಧೀನ ಸಾಧ್ಯವಿಲ್ಲ. ಕೋರ್ಟ್‌ನಲ್ಲಿ ಶಾಶ್ವತ ತಡೆಯಾಜ್ಞೆ ಇದೆ. ವಶಪಡಿಸಿಕೊಳ್ಳಲು ಹೊರಟರೆ ನಾನು ಹೋರಾಟವನ್ನೇ ಮಾಡುತ್ತೇನೆ. ಆದರೆ, ಕೃಷ್ಣ ಮಠ ಬಗ್ಗೆ ಕೈ ಹಾಕುವ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಸಾರಿ ಹೇಳಿದ್ದಾರೆ.
ಸಿದ್ದರಾಮಯ್ಯ, ವಿಶ್ವನಾಥ್ ಮೊದಲಾದವರ ಕುರುಬ ಮುಖಂಡರ ಜತೆ ಮುಚ್ಚಿದ ಬಾಗಿಲ ಜತೆ ಮಾತುಕತೆ ಏಕೆ?
ವಿಶ್ವನಾಥ್ ಅವರನ್ನು ಭೇಟಿಯಾಗಿ ಕನಕರಿಗೆ ಆಗಲಿ, ಕುರುಬರಿಗೆ ಆಗಲಿ ಅಪಮಾನ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದೇನೆ. ಅವರು ಕೂಡಾ ನಮ್ಮ ಮೇಲೆ ಅಸಮಾಧಾನ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಶೃಂಗೇರಿ ಸಹಿತ ಮೊದಲಾದ ಘನಪೀಠಗಳ ಸ್ವಾಮೀಜಿಗಳು ಏಕೆ ವಿವಾದಕ್ಕೆ ಸಿಲುಕುವುದಿಲ್ಲ?
ಅವರು ಹೇಳಿಕೆ ನೀಡುವುದಿಲ್ಲ. ನಾವು ಹಾಗೆ ಮಾಡಲು ಸಾಧ್ಯವಿಲ್ಲ. ನಾವು ಜನಗಳ ಜತೆ ಸ್ಪಂದಿಸುತ್ತಿದ್ದೇವೆ. ಹಿಂದೂ ಸಮಾಜ ಸಂಘಟನೆಗೆ ಕೆಲಸ ಮಾಡುತ್ತಿದ್ದೇವೆ. 'ಪೇಜಾವರ ಸ್ವಾಮೀಜಿ ವಿರುದ್ಧ ವಿವಾದ ಹುಟ್ಟಿಸುವುದು ಹಣ್ಣಿದ್ದ ಮರಗಳಿಗೆ ಕಲ್ಲು ಹೊಡೆದಂತೆ' ಎಂದು ಮಾದಾರ ಚೆನ್ನಯ್ಯ ಸ್ವಾಮೀಗಳೇ ಹೇಳಿದ್ದಾರೆ.
ಉಳಿದ ಪೀಠಾಧಿಪತಿಗಳು ಜನರಿಗೆ ಸ್ಪಂದನ ಮಾಡುವುದಿಲ್ಲ ಎಂದು ನೀವು ಹೇಳುವುದೇ?
ಹಾಗಲ್ಲ, ಸುಮ್ಮನಿದ್ದರೆ ಸುದ್ದಿಗೆ ಬರುವುದಿಲ್ಲ. ಸಕ್ರಿಯರಾಗಿದ್ದರಿಂದ ಹಿಂದೂ ವಿರೋಧಿಗಳಿಗೆ ಹೆಚ್ಚು ಸಿಟ್ಟು.
ನರೇಂದ್ರ ಮೋದಿ ಅವರ ನಾಯಕತ್ವ ಅಗತ್ಯ ಭಾರತಕ್ಕೆ ಇದೆಯೇ?
ಬೆಂಬಲ ಇದೆ ಅಥವಾ ಇಲ್ಲ ಎಂದು ಹೇಳುವುದಿಲ್ಲ. ನಾನು ರಾಜಕೀಯದಲ್ಲಿ ತಟಸ್ಥ. ರಾಜಕಾರಣಿಗಳ ತಪ್ಪು ಹೇಳುತ್ತೇನೆ. ಹಿಂದುಗಳಿಗೆ ಶಾದಿ ಭಾಗ್ಯ ಏಕೆ ಇಲ್ಲ, ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಿಸಬೇಡಿ ಇಂಥ ವಿಚಾರ ಪ್ರಶ್ನಿಸುತ್ತೇನೆ. ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ಮಾಡಲು ಅವಕಾಶ ನೀಡಿ, ಹಿಂದುಗಳಿಗೆ ಸಮಾನತೆ ನೀಡಿ ಎಂದು ಸಲಹೆ ನೀಡುತ್ತೇನೆ.
ಬಹುಕೋಟಿ ಹಗರಣದಲ್ಲಿ ಸಿಲುಕಿರುವ ನೀರಾ ರಾಡಿಯರಿಂದ ನೀವು ದೇಣಿಗೆ ಪಡೆದದ್ದು ಸರಿಯೇ?
ನೀರಾ ರಾಡಿಯಾ ದೋಷಿ ಎಂದು ತೀರ್ಪು ಬಂದಿಲ್ಲ. ಹಗರಣದಲ್ಲಿರುವ ವ್ಯಕ್ತಿಗಳ ಗುರುತಿಸಲು ರಾಡಿಯಾ ನೆರವು ಕೇಳಿದ್ದಾರೆ ಅಷ್ಟೆ.
ರಾಡಿಯಾ ದೋಷಿ ಎಂದಾದರೆ ದೇಣಿಗೆ ಹಿಂದಿರುಗಿಸುತ್ತೀರಾ?
ಅದು ಆ ಸಮಯಕ್ಕೆ ತೀರ್ಮಾನ ಮಾಡುತ್ತೇನೆ.
ವಿದೇಶ ಪ್ರಯಾಣ ಎಂಬ ವಿಚಾರಕ್ಕೆ ಪುತ್ತಿಗೆ ಶ್ರೀಗಳಿಗೆ ಪರ್ಯಾಯ ಅಧಿಕಾರ ಹಸ್ತಾಂತರ ವಿರೋಧಿಸಿ ನಿರಶನ ಮಾಡಿದ್ದು ಸರಿಯೇ?
ವಿದೇಶಕ್ಕೆ ಹೋದರೆ ಆಚಾರ, ವಿಚಾರ ಕಡಿಮೆಯಾಗುತ್ತದೆ. ಮತ್ತೆ ಹಣ ಸಂಪಾದನೆಗಾಗಿ ವಿದೇಶದಲ್ಲಿಯೇ ಇರುವ ಸಾಧ್ಯತೆ ಇದೆ. ವಿದೇಶ ಪ್ರಯಾಣ ನಿಷೇಧ ಕೇವಲ ಅಷ್ಟಮಠದ ಯತಿಗಳಿಗೆ ಮಾತ್ರ ಅನ್ವಯ.
ಸ್ವದೇಶದಲ್ಲಿಯೇ ಇರುವ ಸ್ವಾಮೀಜಿಗಳೂ ಆಚಾರ ಹೀನರಾಗುತ್ತಿರುವ ವಿಚಾರ ನಿತ್ಯ ಕೇಳಿಬರುತ್ತಿದೆಯಲ್ಲ ?
ಆದರೆ ವಿದೇಶದಲ್ಲಿದ್ದರೆ ಮದಿರೆ, ಮಾಂಸ, ಮಾನಿನಿಯರ ಚಪಲಕ್ಕೆ ಸಿಲುಕುವ ಸಾಧ್ಯತೆ ಇನ್ನೂ ಹೆಚ್ಚು.
- ಜಿತೇಂದ್ರ ಕುಂದೇಶ್ವರ